nagesh hegde articale-ಮಿಡತೆ ದಾಳಿಯ ಪೂರ್ವಾಪರ: ಅದೂ ಯಾಕೊ ಕೊರೊನಾ ಥರಾ!

ಅತ್ತ ಪೂರ್ವಭಾರತದಲ್ಲಿ ಅಂಫನ್ ದಾಳಿ, ಇತ್ತ ದಿಲ್ಲಿಯ ಸುತ್ತ ಬಿಸಿಗಾಳಿಯ ದಾಳಿ, ಈಕಡೆ ಪಶ್ಚಿಮ ಭಾರತದಲ್ಲಿ ಮಿಡತೆ ದಾಳಿ. ಕೊರೊನಾ ಸಂದರ್ಭದಲ್ಲೇ ಬಂದೊದಗಿದ ಮಿಡತೆ ದಾಳಿ ಅದೆಷ್ಟು ರೀತಿಯಲ್ಲಿ ಕೊರೊನಾವನ್ನೇ ಹೋಲುತ್ತಿದೆ! ಯೋಗಾಸನದಲ್ಲಿ ಮಿಡತೆಯನ್ನು ಹೋಲುವ ‘ಶಲಭಾಸನ’ವೂ ಅದೇನನ್ನೋ ಸಂಕೇತಿಸುತ್ತಿದೆಯಲ್ಲ?ಮಿಡತೆ (Locust) ದಾಳಿ ಹೇಗಿರುತ್ತದೆ ಎಂಬುದನ್ನು ಅಕ್ಷರಗಳಲ್ಲಿ ಹಿಡಿಯೋಣ ಬನ್ನಿ.ಮೋಡದ ವಿಶಾಲ ಚಾಪೆಯೊಂದು ಆಕಾಶದಲ್ಲಿ ತೇಲಿ ಬಂದಂತೆ ಕಾಣುತ್ತದೆ. ಅದೆಷ್ಟೊ ಕೋಟಿ ಮಿಡತೆಗಳು ಗಾಳಿಯಲ್ಲಿ ತೇಲಿ ಬರುವಾಗ ನೆಲಕ್ಕೆ ಕತ್ತಲು ಕವಿಯುತ್ತದೆ. ಹಾರಿ ಸುಸ್ತಾದ ಮರಿಮಿಡತೆ, ಮುದಿಮಿಡತೆಗಳು ನೆಲಕ್ಕಿಳಿಯುವಾಗ ಜಡಿಮಳೆ ಸುರಿದಂತಾಗುತ್ತದೆ. ಅವು ಪೈರು, ಪೊದೆ, ಗಿಡಮರಗಳ ಮೇಲೆ ಕೂರಲು ತೊಡಗಿದರೆ ಹಸುರೆಲ್ಲ ಮುಚ್ಚಿಹೋಗಿ ಇಡೀ ಬೆಟ್ಟ ಕಂದುಬಣ್ಣಕ್ಕೆ ತಿರುಗುತ್ತದೆ.

ಮಿಡತೆಗಳ ಭಾರಕ್ಕೆ ಗಿಡಗಳು ನೆಲಕ್ಕೆ ಬಾಗುತ್ತವೆ. ದೊಡ್ಡ ಮರಗಳ ಕೊಂಬೆಗಳೂ ಮುರಿದು ಬೀಳುತ್ತವೆ. ಅಷ್ಟೇಕೆ ಸಡಿಲ ಬೇರುಗಳ ಇಡೀ ಮರವೇ ನೆಲಕ್ಕೊರಗುತ್ತದೆ. ಬಿರುಗಾಳಿ ಹೆಪ್ಪುಗಟ್ಟಿದಂತೆ ಕಾಣುತ್ತದೆ. ನೋಡನೋಡುತ್ತ ಗಿಡಗಳ ಮೇಲೆ ಕೂತು ಅವು ಮೂತಿಯನ್ನು ಒತ್ತಿ ಹಸುರನ್ನೂ ಕೆರೆಯತೊಡಗಿದರೆ ಮತ್ತೆ ಜಡಿಮಳೆಯ ಜರಜರ ಸದ್ದೇ ಬರುತ್ತಿರುತ್ತದೆ. ಎಲೆ, ಹೂವು, ಕಾಯಿ ಕೊನೆಗೆ ಹಸುರು ತೊಗಟೆಯನ್ನೂ ಮುಕ್ಕಿ ಅವು ಮೇಲಕ್ಕೆ ನೆಗೆದರೆ ನೆಲದ ಚಿತ್ರಣ ಬದಲಾಗುತ್ತದೆ. ಪೈರು-ಪೊದೆ-ಗಿಡ-ಮರಗಳೆಲ್ಲ ಒಣ ಪೊರಕೆಗಳಾಗುತ್ತವೆ. ಹಸುರನ್ನು ಆಧರಿಸಿದ ಇತರ ಜೀವಿಗಳ ಪರಿಸ್ಥಿತಿಯನ್ನು ಕೇಳುವುದೇ ಬೇಡ. ಮಿಡತೆ ದಾಳಿಯ ಭಯಾನಕತೆ ಹೇಗಿರುತ್ತದೆ ಎಂಬುದು ಮಹಾತ್ಮಾ ಗಾಂಧಿಯವರಿಗೂ ಗೊತ್ತಿತ್ತು: ‘”ಭಾರತದ 30 ಕೋಟಿ ಪ್ರಜೆಗಳು ಬ್ರಿಟಿಷರ ಹಾಗೆ ಐಷಾರಾಮಿ ಜೀವನವನ್ನು ಬಯಸಿದರೆ ಇಡೀ ಪ್ರಪಂಚವೇ ಮಿಡತೆ ದಾಳಿಗೆ ತುತ್ತಾದಂತೆ ಬೋಳು ಬಯಲಾದೀತು” ಎಂದು ಅವರು ಎಚ್ಚರಿಸಿದ್ದರು.

ಮಿಡತೆಗಳ ಈ ದುರ್ದಾಳಿಯ ವಿವರಗಳು ವೇದದಲ್ಲೂ ಇವೆ, ಬೈಬಲ್ಲಿನಲ್ಲೂ ಇವೆ, ಕುರಾನ್ನಲ್ಲೂ ಇವೆ. ಅದನ್ನು ಆಮೇಲೆ ನೋಡೋಣ. ಈಗ ವಿಜ್ಞಾನಿಗಳು ಕಂಡ ಕೆಲವು ಸ್ವಾರಸ್ಯ ಇಲ್ಲಿದೆ:ಸಾಮಾನ್ಯ ದಿನಗಳಲ್ಲಿ ಮರುಭೂಮಿಯ ಕುರುಚಲು ಪೊದೆಗಳಲ್ಲಿ ಅಲ್ಲೊಂದು ಇಲ್ಲೊಂದು ಮಿಡತೆ ತನ್ನ ಪಾಡಿಗೆ ತಾನಿರುತ್ತದೆ. ಆದರೆ ಒಣಹವೆ, ಸೆಕೆದಿನಗಳು ಹೆಚ್ಚಾದ ಹಾಗೆ, ತಿನ್ನಲು ಏನೂ ಇಲ್ಲದ ಪರಿಸ್ಥಿತಿ ಬಂತೆಂದರೆ ನೋಡಿ. ಬದುಕುಳಿಯುವ ಒಂದು ವಿಲಕ್ಷಣ ವಿಕಾಸ ಸೂತ್ರ ಆಗ ಜಾರಿಗೆ ಬರುತ್ತದೆ.ಬದುಕಿಗೆ ಸಂಕಷ್ಟ ಬಂದಾಗ ಒಂಟೊಂಟಿ ಮಿಡತೆಗಳ ಮಿದುಳಿನಲ್ಲಿ ಸೆರೊಟೊನಿನ್ ಎಂಬ ರಸ ಉಕ್ಕುತ್ತದೆ. ಅದುವರೆಗೆ ಒಂಟಿಯಾಗಿ ಬದುಕುತ್ತಿದ್ದ ನೂರಾರು ಮಿಡತೆಗಳು ಗುಂಪಾಗಿ ಸೇರತೊಡಗುತ್ತವೆ. ಏನೋ ಸಿಗ್ನಲ್ ಸಿಕ್ಕಂತೆ ಒಟ್ಟಿಗೆ ನೆಗೆಯುತ್ತವೆ. ಆಗಸ್ಟ್ 15ರ ಬೆಳಿಗ್ಗೆ ಎಲ್ಲ ಮನೆಗಳ ಒಂಟೊಂಟಿ ಮಕ್ಕಳೂ ಶಾಲೆಗೆ ಜಮಾಯಿಸಿ ಜನಗಣ ಮನ ಹಾಡುತ್ತ ಪ್ರಭಾತಫೇರಿಗೆ ಹೊರಡುವ ಹಾಗೆ. ಅಥವಾ ಯಾರೋ ಕಿಂದರಜೋಗಿಯೊಬ್ಬ ತುತ್ತೂರಿ ಊದಿ ಎಲ್ಲ ಮಿಡತೆಗಳನ್ನೂ ಎಬ್ಬಿಸಿ ಹೊರಡಿಸಿದ ಹಾಗೆ. [ಗೆದ್ದಲುಗಳಲ್ಲೂ ಇಂಥ ವೈಚಿತ್ರ್ಯ ಸಂಭವಿಸುತ್ತದೆ. ಚುನಾವಣೆಯಲ್ಲಿ ಟಿಕೆಟ್ ಸಿಗದ ನಾಯಕನ ಹಾಗೆ ಒಂಟಿ ಗೆದ್ದಲುಗಳು ಮುಖಮುಚ್ಚಿಕೊಂಡು ಅಲ್ಲಿ ಇಲ್ಲಿ ಗೊತ್ತುಗುರಿ ಇಲ್ಲದೆ ಅಂಡಲೆಯುತ್ತವೆ; ಇಲ್ಲವೆ ಮೂಲೆ ಹಿಡಿದು ಕೂತಿರುತ್ತವೆ. ಅದೇನು ಹೈಕಮಾಂಡ್ ನಿರ್ದೇಶನ ಬಂದರೆ ತಗಾ, ಸಖತ್ ಸಂಘಟನೆಯಾಗಿ, ಚಕಚಕನೆ ಹುತ್ತ ಕಟ್ಟುವುದೇನು, ಆಹಾರಕ್ಕೆ ಧಾವಿಸುವುದೇನು, ರಾಜರಾಣಿಯರಿಗೆ ಪಟ್ಟ ಕಟ್ಟುವುದೇನು, ಮೊಟ್ಟೆ ಮರಿಗಳ ಪೋಷಣೆ ಮಾಡುವುದೇನು….]

ಮಿಡತೆಗಳು ದಾಳಿ ಮಾಡಿದಲ್ಲಿ ಬರಗಾಲ ಬರುತ್ತದೊ ಅಥವಾ ಬರಗಾಲ ಬರುವಂಥ ಸ್ಥಿತಿಗಾಗಿ ಅವು ಕಾದು ಕೂತಿರುತ್ತವೊ -ಅಂತೂ ಆಫ್ರಿಕ, ಮೊಂಗೋಲಿಯಾ, ಆಸ್ಟ್ರೇಲಿಯಾ ಮತ್ತು ಮಧ್ಯಪ್ರಾಚ್ಯಗಳ ಬರಗೆಟ್ಟ ಭೂಮಿಗಳ ಅಂಚಿನ ಹೊಲಗಳಿಗೆ ಮಿಡತೆದಾಳಿ ಆಗಾಗ ಆಗುತ್ತಿರುತ್ತದೆ. ಇರಾನ್, ಇರಾಕ್ ಅಫ್ಘಾನಿಸ್ತಾನ್, ಕಿರ್ಗಿಸ್ತಾನ, ಪಾಕಿಸ್ತಾನ ದಾಟಿ ಅವು ನಮ್ಮಲ್ಲೂ ರಾಜಸ್ತಾನ್, ಗುಜರಾತಿನ ಕಚ್ಛದ ಮರುಭೂಮಿಗಳಲ್ಲಿ ಚಿಕ್ಕಪುಟ್ಟ ತುಕಡಿ ಕಟ್ಟಿಕೊಂಡು ಪ್ರತಿವರ್ಷ ಅಲ್ಲಿಷ್ಟು ಇಲ್ಲಿಷ್ಟು ಹಾವಳಿ ಎಬ್ಬಿಸುತ್ತವೆ. ಎಲ್ಲೋ ಕೆಲವು ದಶಕಗಳಿಗೊಮ್ಮೆ ಅವು ಪ್ಲೇಗ್, ಸಿಡುಬು, ಕೊರೊನಾ ಥರಾ ವ್ಯಾಪಕ ದಾಳಿಗೆ ಹೊರಡುತ್ತವೆ.

ಆಫ್ರಿಕದಲ್ಲಿ ಇದರ ಹಾವಳಿ ತುಸು ಪದೇ ಪದೇ ಕಂಡು ಬರುತ್ತಿರುತ್ತದೆ. ನೈಜೀರಿಯಾದ ಸಾಹಿತಿ ಚಿನುವಾ ಅಚಿಬೆ ಬರೆದ “ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯಲ್ಲಿ ಇದರ ಪ್ರಸ್ತಾಪ ಬರುತ್ತದೆ. ಐರೋಪ್ಯ ಕ್ರಿಶ್ಚಿಯನ್ ಮಿಶನರಿಗಳು ಆಫ್ರಿಕದ ಹಳ್ಳಿಗಳನ್ನು ಹೇಗೆ ಆಕ್ರಮಿಸಿದರು ಎಂಬುದನ್ನು ವರ್ಣಿಸಲು ಆತ ಈ ಕೀಟಗಳ ರೂಪಕವನ್ನು ಬಳಸಿಕೊಳ್ಳುತ್ತಾನೆ. ಮಿಡತೆಗಳ ಸೈನ್ಯ ಬಂತೆಂದರೆ ಹಳ್ಳಿಯ ಪ್ರತಿ ಗಿಡ, ಪೊದೆ, ಹುಲ್ಲೆಸಳ ಮೇಲೂ ಅವು ಕೂರುತ್ತವೆ. ಅವನ್ನು ಹೇಗೆ ಎದುರಿಸಬೇಕು ಎಂಬುದು ಹಳ್ಳಿಯ ಮುಗ್ಧರಿಗೆ ಗೊತ್ತಾಗುವುದಿಲ್ಲ. ಎದುರಿಸಬೇಕೆ ಬೇಡವೆ ಎಂಬುದೂ ಅವರಿಗೆ ಸ್ಪಷ್ಟವಿರುವುದಿಲ್ಲ. ಏಕೆಂದರೆ ಅವು ಹಸಿವೆಗೆ ಕಾರಣವೂ ಹೌದು, ಹಸಿವೆಗೆ ಪರಿಹಾರವೂ ಹೌದು (ಏಕೆಂದರೆ ಅಲ್ಲಿಯ ಜನರು ಮಿಡತೆಗಳನ್ನು ಹುರಿದು ತಿನ್ನುತ್ತಾರೆ.).ಬೈಬಲ್ಲಿನಲ್ಲಿ ಮಿಡತೆದಾಳಿಯ ಪ್ರಸ್ತಾಪ ಪದೇ ಪದೇ ಬರುತ್ತದೆ. ಒಮ್ಮೆಯಂತೂ ಈಚಿಪ್ತಿನ ದೊರೆಗಳು ಯಹೂದ್ಯರನ್ನು ಬಂಧನದಲ್ಲಿ ಇಟ್ಟಿದ್ದರೆಂಬ ಕಾರಣಕ್ಕೆ ದೇವನಿಗೆ ಕೋಪ ಬರುತ್ತದೆ. ಆತ ಮೋಸೆಸ್ ಎಂಬ ಅನುಯಾಯಿಯನ್ನು ಕರೆದು ಮಿಡತೆ ದಾಳಿಗೆ ಆದೇಶ ನೀಡುತ್ತಾನೆ.

ಸರ್ವನಾಶ ಆಗಿ ಹೋಗಲಿ ಎಂದು. ಕುರಾನಿನಲ್ಲಿ ಎರಡೇ ಬಾರಿ ನಾವು ಮಿಡತೆಗಳ ಹೆಸರನ್ನು ನೋಡುತ್ತೇವೆ. ದುಷ್ಟ ಮನುಷ್ಯನೊಬ್ಬನ ಮೇಲೆ ಏನೆಲ್ಲ ಸಂಕಟಗಳ ಸುರಿಮಳೆ ಮಾಡಿದರೂ ಆತ ತನ್ನ ದುಷ್ಟಬುದ್ಧಿಯನ್ನು ಬಿಡುವುದಿಲ್ಲ ಎನ್ನುವಾಗ ಮಿಡತೆಗಳ ಸುರಿಮಳೆಯ ಪ್ರಸ್ತಾಪ ಬರುತ್ತದೆ. ಸಂಸ್ಕೃತದಲ್ಲಿ ಮಿಡತೆಗೆ ‘ಶಲಭ’ ಅನ್ನುತ್ತಾರೆ. ಮೊಟ್ಟೆಗಳಿಂದ ಜನಿಸುವ ಜೀವಿಗಳನ್ನು ‘ಅಂಡಜ’ ಅನ್ನುವ ಹಾಗೆ, ತೇವ ಮತ್ತು ಉಷ್ಣ ಪರಿಸರದಿಂದ ಹೊಮ್ಮುವ ಸೊಳ್ಳೆ, ನೊಣ, ತಿಗಣೆ, ಮಿಡತೆಗಳನ್ನು ‘ಶ್ವೇದಜ’ ಎಂದು ನಮ್ಮ ಹಿಂದಿನವರು ವರ್ಗೀಕರಿಸಿದ್ದಾರೆ. ಅವುಗಳ ಕಾಟ ತಗ್ಗಿಸಲೆಂದು ಪ್ರಾರ್ಥನೆಯೂ ಅಥರ್ವಣವೇದದಲ್ಲಿದೆ (6.50.2).

‘ನಮ್ಮ ಆಹಾರಗಳನ್ನು ಧ್ವಂಸ ಮಾಡಲೆಂದು ಬರುವ ಎಲೈ ಮಿಡತೆ ಪತಂಗಗಳೇ, ದೂರ ಹೋಗಿ! ಅಶುದ್ಧ ನೈವೇದ್ಯವನ್ನು ದೇವರು ತಿರಸ್ಕರಿಸುವ ಹಾಗೆ ನೀವೂ ನಮ್ಮ ಆಹಾರವನ್ನು ತಿನ್ನದೆ, ಧ್ವಂಸ ಮಾಡದೇ ಹೊರಟು ಹೋಗಿ ಎಂಬ ಪ್ರಾರ್ಥನೆ ಅದರಲ್ಲಿದೆ. ಶಲಭ ಎಂಬ ಪದವನ್ನು ನೆನಪಿನಲ್ಲಿ ಇಡುವುದು ಸುಲಭ. ಯೋಗಾಭ್ಯಾಸ ಮಾಡುವವರು ಶಲಭಾಸನ ಹಾಕಿದರೆ ತುಸುಮಟ್ಟಿಗೆ ಮಿಡತೆಯಂತೆಯೇ ಕಾಣುತ್ತಾರೆ. ಶಲಭಾಸನದಲ್ಲಿ ಹೊಟ್ಟೆಯ ಮೇಲೆ ಜಾಸ್ತಿ ಭಾರ ಬೀಳುತ್ತದೆ. ಮಿಡತೆ ದಾಳಿಯಲ್ಲೂ ಹೊಟ್ಟೆಗೇ ತಾಪತ್ರಯ ಆಗುತ್ತದೆ. ಉದ್ದುದ್ದ ಹಿಂಗಾಲುಗಳ ಮಿಡತೆಗಳು ರೆಕ್ಕೆ ಬೀಸದೆಯೂ ಐದಾರು ಮೀಟರ್ ದೂರ ಚಿಮ್ಮುತ್ತವೆ. ಆಮೇಲೆ ರೆಕ್ಕೆ ಬೀಸುತ್ತ ಗಾಳಿ ಬೀಸಿದ ದಿಕ್ಕಿಗೆ ಅವು 20-30 ಕಿ.ಮೀ. ದೂರಕ್ಕೂ ಹಾರುತ್ತವೆ. ಆ ಪುಟ್ಟ ಕೀಟದ ಅಪಾರ ನೆಗೆತವನ್ನು ನೋಡಿ ಕನ್ನಡದ ಹಳ್ಳಿಯ ಜನರು ‘ಸೂರ್ಯನ ಕುದುರೆ’ ಎಂದು ಹೆಸರಿಟ್ಟು ಅದೆಂಥ ಸೃಜನಶೀಲತೆಯನ್ನು ಮೆರೆದಿದ್ದಾರೆ ಎಂದು ಹೇಳಿ ಡಾ. ಯು.ಆರ್. ಅನಂತಮೂರ್ತಿಯವರು ತಮ್ಮ ಕೃತಿಯೊಂದಕ್ಕೆ ಅದೇ ಹೆಸರನ್ನಿಟ್ಟಿದ್ದಾರೆ.

ಮುಂಗಾರಿನ ಈ ಸಮಯದಲ್ಲಿ ನಮ್ಮಲ್ಲಿ ಬಹುತೇಕ ಎಕ್ಕದ ಗಿಡಗಳ ಮೇಲೆ ಈ ಕುದುರೆಗಳು ಸಾಲಾಗಿ ಕೂತಿರುತ್ತವೆ. ಆದರೆ ನಾವು ದಕ್ಷಿಣ ಭಾರತದವರು ಸುರಕ್ಷಿತ. ಇಲ್ಲಿನ ಹಸುರು ಮಿಡತೆಗಳು ದಂಡು ಕಟ್ಟಿಕೊಂಡು ದಾಳಿಗೆ ಹೋಗುವುದಿಲ್ಲ. ಬರದೇಶಗಳ ದಂಡುಕೋರ ಮಿಡತೆಗಳೂ ಇತ್ತ ಬರುವುದಿಲ್ಲ.ಅದು ಸರಿ, ಕಳೆದ 26 ವರ್ಷಗಳಲ್ಲಿ ಕಾಣದ ಮಿಡತೆ ಪ್ಲೇಗ್ ಈ ವರ್ಷ ಯಾಕೆ ಇಷ್ಟು ಉಗ್ರ? ಏಕೆಂದರೆ ಕಳೆದ ಎರಡು ವರ್ಷಗಳಲ್ಲಿ ಅರಬ್ ಪ್ರಾಂತ್ಯಗಳಲ್ಲಿ ಕೆಲವೆಡೆ ಭಾರೀ ಚಂಡಮಾರುತ ಬೀಸಿ, ಮರುಭೂಮಿಯಲ್ಲಿ ಅಲ್ಲಲ್ಲಲ್ಲಿ ಓಯಸಿಸ್ ರೂಪದ ಕೆರೆಗಳು ಉಂಟಾಗಿದ್ದವು. ಅಲ್ಲಿ ನಾಲ್ಕಾರು ತಿಂಗಳು ತೇವಾಂಶ ಜಾಸ್ತಿ ಇತ್ತು. ಅಲ್ಲೆಲ್ಲ ಹುಟ್ಟಿಕೊಂಡ ಮಿಡತೆಗಳು ಚಂಡಮಾರುತದಂತೆ ಬೀಸಿ ಬರುತ್ತಿವೆ.ಗಡಿ ದಾಟುತ್ತ ದಾಟುತ್ತ ಪಾಕಿಸ್ತಾನ ದಾಟಿ ರಾಜಸ್ತಾನ, ಗುಜರಾತ, ಮಧ್ಯಪ್ರದೇಶಗಳಲ್ಲಿ ಹಾವಳಿ ಎಬ್ಬಿಸಿವೆ. ಪಾಕಿಸ್ತಾನದಲ್ಲಿ ಮೂರು ತಿಂಗಳು ಹಿಂದೆ ರೈತರು ಭಾರೀ ನಷ್ಟ ಅನುಭವಿಸಿದ್ದರು. ನಮ್ಮ ರೈತರಿಗೆ ಹಾನಿ ಅಷ್ಟಾಗಿಲ್ಲ ಏಕೆಂದರೆ ಅವು ದಂಡೆತ್ತಿ ಬರುವಷ್ಟರಲ್ಲಿ ಇಲ್ಲಿ ಕಟಾವು ಮುಗಿದಿತ್ತು.ಹಳ್ಳಿಗಳನ್ನು ಬಿಟ್ಟು ಅವು ಈಗ ನಗರಗಳಿಗೇ ದಾಳಿ ಇಡುತ್ತಿವೆ. ಏನು ಕಾರಣ?

ಸೀರಿಯಸ್ ಜೋಕ್ ಏನೆಂದರೆ- ಅವು ಉತ್ತರ ಭಾರತದ ಹಳ್ಳಿಗಳ ದಾರಿದ್ರ್ಯದ ಕತೆಯನ್ನು ವರದಿ ಮಾಡಲೆಂದು ಅವು ನಗರಗಳಿಗೆ ಬರುತ್ತಿವೆ. ಅಲ್ಲಿನ ಹಳ್ಳಿಗಳಲ್ಲಿ ಎಲ್ಲೆಲ್ಲೂ ಹೊಲಗಳೇ ಹೊರತೂ ನೈಸರ್ಗಿಕ ಗಿಡಮರಗಳ ಸಾಂದ್ರತೆ ತೀರ ಕಡಿಮೆ. ಅರಣ್ಯಗಳಂತೂ ಇಲ್ಲವೇ ಇಲ್ಲ. ಪೈರು ಕಟಾವಾದ ಮೇಲೆ ನೀವು ಅಷ್ಟಿಷ್ಟು ಹಸುರನ್ನು ನೋಡಬೇಕೆಂದರೆ ನಗರದ ಉದ್ಯಾನಗಳಿಗೇ ಬರಬೇಕು. ಅವು ಬರುತ್ತಿವೆ. ಈಗಾಗಲೇ ಜಯಪುರ, ಝಾಂಸಿಯಂಥ ನಗರಗಳು ಕಂಗಾಲಾಗಿವೆ. ತಮಾಷೆ ಏನೆಂದರೆ ಕೊರೊನಾ ಮಾದರಿಯ ಸರಕಾರಿ ನಿಯಂತ್ರಣ ಕ್ರಮಗಳೇ ಅಲ್ಲೂ ಜಾರಿಗೆ ಬಂದಿವೆ! ಶಂಖ- ಜಾಗಟೆ ಬಾರಿಸಿ ಡಾಂ ಡೂಮ್ ಮಾಡುತ್ತಿದ್ದಾರೆ. ಕೀಟನಾಶಕ ದ್ರವಗಳನ್ನು ತುಂಬಿಕೊಂಡ ಸಾವಿರಾರು ಟ್ಯಾಂಕರ್ಗಳು ಜಾಥಾ ಹೊರಟಿವೆ. (ವಲಸೆ ಕಾರ್ಮಿಕರನ್ನು ಸಾಲಾಗಿ ನಿಲ್ಲಿಸಿ ಅವರ ಮೈಗೆ ಬ್ಲೀಚಿಂಗ್ ದ್ರಾವಣವನ್ನು ಎರಚಿದ ಹಾಗೆ) ಮಿಡತೆಗಳು ಆಶ್ರಯಿಸಿದ ಮರಗಳ ಮೇಲೆ ಭರ್ಜರಿ ಸಿಂಚನ ಮಾಡಲಾಗುತ್ತಿದೆ. ಈಗಂತೂ ಡ್ರೋನ್‌ಗಳ ಮೂಲಕವೂ ಸಿಂಚನ ಮಾಡಲು ಸಿದ್ಧತೆ ನಡೆದಿದೆ.ವಲಸೆ ಕಾರ್ಮಿಕರು ಪಾಪ, ಈ ಮಿಡತೆಗಳಂತೆ ಹಳ್ಳಿಗಳನ್ನು ಬಿಟ್ಟು ಹೊಸ ಕನಸನ್ನು ಹುಡುಕುತ್ತ ನಗರಗಳಿಗೆ ಬಂದಿದ್ದಾರೆ, ಅವರ ಅವಸ್ಥೆ ನೋಡಿ. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ ಎಂಬಂಥ ಪರಿಸ್ಥಿತಿ ಮಿಡತೆಗಳಿಗೂ ಬಂದಿದೆ.

ಅಂತೂ ಸ್ಯಾನಿಟೈಸರ್ ಮತ್ತು ಕೀಟನಾಶಕ ವಿಷಗಳ ಉತ್ಪಾದನೆ ಮಾಡುವ ಕಂಪನಿಗಳಿಗೆ ಕೊರೊನಾ ಕಾಲದಲ್ಲೂ ಹಬ್ಬ, ಮಿಡತೆಕಾಲದಲ್ಲೂ ಹಬ್ಬ. ‘ಬರ ಎಂದರೆ ಎಲ್ಲರಿಗೂ ಇಷ್ಟ’ ಎಂಬ ಸಾಯಿನಾಥ್ ಗ್ರಂಥದ ಹೆಸರು ನೆನಪಿಗೆ ಬಂತೆ? ಆಫ್ರಿಕದಲ್ಲಿ ಮಿಡತೆಗಳು ಹಸಿವೆಗೆ ಕಾರಣವೂ ಹೌದು, ಪರಿಹಾರವೂ ಹೌದು ಎಂದೆನಲ್ಲ? ಭಾರತದಲ್ಲೂ ಪರಿಸ್ಥಿತಿ ತುಸು ಅದೇನೇ ಇದೆ. ವ್ಯತ್ಯಾಸ ಏನೆಂದರೆ, ಹಳ್ಳಿಗಳಲ್ಲಿ ಹಸಿವೆ ಸಂಕಷ್ಟ ಹೆಚ್ಚುತ್ತದೆ. ನಗರಗಳಲ್ಲಿನ ದಲ್ಲಾಳಿಗಳ ಹಸಿವೆಗೆ ಪರಿಹಾರ ಸಿಗುತ್ತದೆ. ಮಿಡತೆಗೂ ಕೊರೊನಾಕ್ಕೂ ಇರುವ ಕೊನೆಯ ಇನ್ನೊಂದು ಸಾಮ್ಯವನ್ನು ಇಲ್ಲಿ ಹೇಳಿಬಿಡಬೇಕು: ನೆರೆಯ ದೇಶಗಳಲ್ಲಿ ಅದು ಹಾವಳಿ ಎಬ್ಬಿಸುತ್ತಿದೆ ಎಂದು ನಾಲ್ಕು ತಿಂಗಳು ಮೊದಲೇ ಸೂಚನೆ ಸಿಕ್ಕಿತ್ತು. ಟಾಂ ಟಾಂ ಆಗಿತ್ತು. ಆಗಲೇ ಗಡಿಯನ್ನು ಭದ್ರ ಮಾಡುವಂತೆ ಸರಹದ್ದಿನಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದಿದ್ದರೆ ಮಿಡತೆ ಹಾವಳಿ ಇಷ್ಟು ವ್ಯಾಪಕ ಆಗುತ್ತಿರಲಿಲ್ಲ. ಮಿಡತೆ ದಾಳಿಯಿಂದ ಜರ್ಝರಿತಗೊಂಡ ಜೀವಲೋಕ ಈಗ ಇವರು ಎರಚುವ ವಿಷಧಾರೆಗೆ ತತ್ತರಿಸುತ್ತಿದೆ. ನಮ್ಮಲ್ಲಿರುವ ವಿಷಗಳು ಸಾಲದೆಂದು ಅವಸರದಲ್ಲಿ ಇಂಗ್ಲಂಡಿನಿಂದ ಘೋರ ವಿಷಗಳನ್ನು ತರಿಸುತ್ತಿದ್ದಾರಂತೆ. ಅವುಗಳ ಸಿಂಚನದಿಂದಾಗಿ ಜೇಡ, ಜೇನ್ನೊಣ, ಎರೆಹುಳ, ಇರುವೆ, ಕಪ್ಪೆ, ಚಿಟ್ಟೆ, ಓತಿಕ್ಯಾತ, ಗುಬ್ಬಚ್ಚಿ, ಗೀಜಗ, ಸೂರಕ್ಕಿ ಹೀಗೆ ಎಲ್ಲ ನೆಲಮೂಲದ ಜೀವಲೋಕದ ಮಾರಣ ಹೋಮ ಆಗುತ್ತಿದೆ.[ಇಂಗ್ಲಂಡಿನ ಬದುಕಿನ ಅನುಕರಣೆಯ ಬಗ್ಗೆ ಗಾಂಧೀಜಿ ಏನು ಹೇಳಿದ್ದರೆಂಬುದೂ ನಮಗಿಲ್ಲಿ ನೆನಪಾಗಬೇಕು. ಅವರು ಅದನ್ನು ಹೇಳುವಾಗ ಇಡೀ ದೇಶದ ಜನಸಂಖ್ಯೆ 30 ಕೋಟಿ ಇತ್ತು. ಇಂದು ಸುಮಾರು 30 ಕೋಟಿ ಜನರಿಗೆ ಐಷಾರಾಮಿ ಜೀವನ ಕೈಗೆಟುಕಿದೆ. ಮಿಡತೆ ದಾಳಿಯ ಪರಿಣಾಮ ಇತರ ನೂರು ಕೋಟಿ ಜನರ ಮೇಲೆ ಕಾಣತೊಡಗಿದೆ.]

ಮೊನ್ನೆ ಮೇ 22ರಂದು ಜೀವಿವೈವಿಧ್ಯ ರಕ್ಷಣೆಯ ದಿನವಾಗಿತ್ತು; ಬರಲಿರುವ ಜೂನ್ 5ರ ವಿಶ್ವಪರಿಸರ ದಿನಕ್ಕೂ ಜೀವಿವೈವಿಧ್ಯ ರಕ್ಷಣೆಯೇ ಘೋಷವಾಕ್ಯವಾಗಿದೆ. ಕೋವಿಡ್‌ ಅನ್ನಿ, ಆಂಫನ್‌ ಅನ್ನಿ, ಮಿಡತೆ ಅನ್ನಿ, ಇಡೀ ದೇಶವೇ ವಿಷಸಿಂಚನದ ಭರಾಟೆಯಲ್ಲಿದೆ.ಚಿಂತಿಸಬೇಕಿಲ್ಲ. ಜೂನ್ 5ರ ಸರಕಾರಿ ಜಾಹೀರಾತುಗಳಲ್ಲಿ ಜೀವಿವೈವಿಧ್ಯ ರಕ್ಷಣೆಯ ಘೋಷಣೆ ಅದ್ಧೂರಿಯಾಗಿ ನಡೆಯಲಿದೆ. ನಾಗೇಶ್ ಹೆಗಡೆ, ಬಕ್ಕೇಮನೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *