

ಸೈಕ್ಲೋನ್ ಹೆಚ್ಚುತ್ತಿದ್ದಂತೆ ಸೈಕಲ್ಲಿಗೆ ಸೋಲು ಯಾಕೆ?
[ಒಂದು ವಿಲಕ್ಷಣ ವಿಷಚಕ್ರದ ವಿಶ್ಲೇಷಣೆ]
ಇಂದು ವಿಶ್ವ ಸೈಕಲ್ ದಿನ.(ಜೂನ್-04) ಮಾಧ್ಯಮಗಳಿಗೆ ‘ಸೈಕ್ಲೋನ್’ ದಿನ. ಅವು ‘ನಿಸರ್ಗ’ ಸೈಕ್ಲೋನ್ ಬಗ್ಗೆಯೇ ದಿನವಿಡೀ ಮಾಹಿತಿ ನೀಡುತ್ತಿದ್ದವು.




ಒಂದು ಚಾನೆಲ್ ಮಾತ್ರ (ನನ್ನ ಫೇವರಿಟ್ ರವೀಶ್ ಕುಮಾರ್ ಅವರ NDTV ಇಂಡಿಯಾ) ವಿಭಿನ್ನ ಸುದ್ದಿಯನ್ನು ಬಿತ್ತರಿಸಿತು. ಅದೇನೆಂದರೆ, ನಮ್ಮೆಲ್ಲರ ಚಿರಪರಿಚಿತ “ಅಟ್ಲಾಸ್“ ಸೈಕಲ್ ಕಂಪನಿ ತನ್ನ ಒಂದು ಫ್ಯಾಕ್ಟರಿಯನ್ನು ಮುಚ್ಚುವುದಾಗಿ ಇಂದು ಘೋಷಿಸಿತು.
ಸೈಕಲ್-ಸೈಕ್ಲೋನ್-ಅಟ್ಲಾಸ್ ಈ ಮೂರಕ್ಕೂ ಸಂಬಂಧವಿದೆ. ಸೈಕಲ್ ಕಂಪನಿ ಮುಚ್ಚುತ್ತಿರುವುದು ಏಕೆಂದರೆ ಸೈಕಲ್ಲಿಗೆ ಬೇಡಿಕೆ ಕುಗ್ಗುತ್ತಿದೆ; ಏಕೆಂದರೆ ಟೂವ್ಹೀಲರ್ ಮೇಲೆ ಸಾಗುವುದರಲ್ಲೇ ಜಾಸ್ತಿ ಮಜಾ ಇದೆ. ಏಕೆಂದರೆ ಪೆಟ್ರೋಲ್ ತುಂಬಿಸಿಕೊಂಡರೆ ತುಸುವೂ ಶ್ರಮವಿಲ್ಲದೆ, ಬೆವರು ಹರಿಸದೇ ಎಲ್ಲಿಂದೆಲ್ಲಿಗೂ ಹೋಗಬಹುದು. (ವೋಟ್ ಹಾಕಲು ಮತಗಟ್ಟೆಗೆ ಹೋಗುವುದು ತುಸು ಕಷ್ಟ, ಅದು ಬಿಡಿ.)
ಪೆಟ್ರೋಲ್, ಡೀಸೆಲ್ ಮತ್ತು ಕಲ್ಲಿದ್ದಲ ಬಳಕೆ ಇಡೀ ಜಗತ್ತಿನಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ವಾತಾವರಣದಲ್ಲಿ ಸಿಓಟು ಹೆಚ್ಚುತ್ತ ಹೋಗಿ, ಪೃಥ್ವಿಯ ತಾಪಮಾನ ಹೆಚ್ಚುತ್ತಿದೆ. ನಿಸರ್ಗದ ಎಲ್ಲ ಸೈಕಲ್‌ಗಳೂ (Water Cycle, Nitrogen Cycle, Carbon Cycle ಇತ್ಯಾದಿ) ವೇಗವಾಗಿ ಸುತ್ತತೊಡಗಿವೆ. ಇದರಿಂದಾಗಿ ನೈಸರ್ಗಿಕ ಪ್ರಕೋಪಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಸೈಕ್ಲೋನ್‌ಗಳು, ಯಾನೆ ಚಂಡಮಾರುತಗಳು ಹೆಚ್ಚುತ್ತಿವೆ.
ಕೀಟಗಳ ಹಾವಳಿ, ರೋಗಾಣುಗಳ ಹಾವಳಿಯ ಹೆಚ್ಚಳಕ್ಕೂ ಭೂಜ್ವರಕ್ಕೂ ನೇರ ಸಂಬಂಧ ಇದೆಯೆಂದು ಹೇಳಲಾಗುತ್ತಿದೆ. ಅಂದರೆ ಕೊರೊನಾ ದಾಳಿ, ಮಿಡತೆ ದಾಳಿ, ಆಂಫನ್ ದಾಳಿ ಎಲ್ಲದಕ್ಕೂ ನಾವು ಗಾಳಿಗೆ ಬಿಡುತ್ತಿರುವ ಕಾರ್ಬನ್ ಡೈಆಕ್ಸೈಡ್ ಮತ್ತು ಮೀಥೇನ್ ಅನಿಲಗಳೇ ಕಾರಣ ಎನ್ನುವ ವಾದವೂ ಇದೆ.
ಕೊರೊನಾ ದಾಳಿಯಿಂದ ತತ್ತರಿಸಿ ಭಾರತದ ಆರ್ಥಿಕತೆ ಕುಸಿದಿದೆ. ಅದನ್ನು ಹೇಗಾದರೂ ಮೇಲಕ್ಕೆ ಎತ್ತಲೆಂದು ಸರಕಾರ ಹೆಚ್ಚುಹೆಚ್ಚು ವಿಮಾನಗಳನ್ನು, ಬಾಹ್ಯಾಕಾಶ ನೌಕೆಗಳನ್ನು ಹಾರಿಸುವ ಸಿದ್ಧತೆ ನಡೆಸಿದೆ. ಅದಕ್ಕೆ ಭಾರೀ ಹಣ ಬೇಕಲ್ಲ? ಅದಕ್ಕೇ ಅದು ದಟ್ಟ ಅರಣ್ಯದಲ್ಲಿ ಅವಿತಿರುವ ಕಲ್ಲಿದ್ದಲ ನಿಕ್ಷೇಪಗಳನ್ನೂ ಹೊರತೆಗೆಯಲು ಅವಸರದಲ್ಲಿ ಗುತ್ತಿಗೆ ನೀಡಲು ಮುಂದಾಗಿದೆ. ಸಾರ್ವಜನಿಕರು ಆಕ್ಷೇಪಣೆ ಎತ್ತುವುದನ್ನೂ ನಿರ್ಬಂಧಿಸಲಾಗುತ್ತಿದೆ.
ಜಾಸ್ತಿ ಅರಣ್ಯಗಳನ್ನು ಧ್ವಂಸ ಮಾಡಿ ಜಾಸ್ತಿ ಕಲ್ಲಿದ್ದಲನ್ನು ಸುಡುತ್ತ ಹೋದರೆ ಜಾಸ್ತಿ ಸಿಓಟು ಹೊಮ್ಮುತ್ತದೆ. ಭೂಮಿ ಜಾಸ್ತಿ ಬಿಸಿಯಾಗುತ್ತದೆ. ಜಾಸ್ತಿ ಸೈಕ್ಲೋನ್‌ಗಳು ಬರುತ್ತವೆ.
ಹಾಗಿದ್ದರೆ ಸೈಕಲ್ಲಿನ ಕತೆ?
ಎಲ್ಲ ಸುಧಾರಿತ ದೇಶಗಳಲ್ಲಿ ಸೈಕಲ್ ಸವಾರಿಗೆ ಭಾರೀ ಆದ್ಯತೆ ಸಿಗುತ್ತಿದೆ. ಸೈಕಲ್ ಸವಾರರಿಗೆಂದೇ ಸುರಕ್ಷಿತ ರಸ್ತೆಗಳೂ ನಿರ್ಮಾಣವಾಗುತ್ತಿವೆ. ಬಗೆಬಗೆಯ ಸುಲಭ ಸವಾರಿಯ, ಸುರಕ್ಷಿತ ಸೈಕಲ್ಲುಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ (ನೋಡಿ https://www.youtube.com/watch?v=lNVXSS81APg) ಅನೇಕ ದೇಶಗಳ ಅಧ್ಯಕ್ಷರು/ಪ್ರಧಾನಿಗಳು, ಪ್ರತಿಪಕ್ಷದ ಮುಖಂಡರು, ಪ್ರೊಫೆಸರ್‌ಗಳು ಸೈಕಲ್ ಸವಾರಿ ಮಾಡುತ್ತಾರೆ. ನಮ್ಮಲ್ಲಿ ಯಾಕೆ, ಸುರಕ್ಷಿತ ಸೈಕಲ್ ರಸ್ತೆಗಳು ನಿರ್ಮಾಣವಾಗುತ್ತಿಲ್ಲ? ಯಾಕೆ ಹೈಸ್ಕೂಲ್ ಟೀಚರ್ ಕೂಡ ಸೈಕಲ್ ಮೇಲೆ ಬರುವುದು ಅಪಮಾನವೆಂದು ಭಾವಿಸುತ್ತಾರೆ? ಯಾಕೆ ರಸ್ತೆಗಳಲ್ಲಿ ಸೈಕಲ್ ಸವಾರರ ಸಂಖ್ಯೆ ಕಮ್ಮಿ ಆಗುತ್ತಿದೆ?
ಯಾಕೆಂದರೆ….
ಸೈಕಲ್ ಸವಾರಿ ಡೇಂಜರ್ರು! ವಾಯು ಮಾಲಿನ್ಯ ತೀರ ಜಾಸ್ತಿಯಾಗಿದೆ. ಭೂಜ್ವರದಿಂದಾಗಿ ಮಳೆ ಜಾಸ್ತಿ, ಗಾಳಿ ಜಾಸ್ತಿ, ಬಿಸಿಲು ಜಾಸ್ತಿ, ರಸ್ತೆಗಳಲ್ಲಿ ಗುಂಡಿ ಜಾಸ್ತಿ. ಗಿಡಮರಗಳ ಕೊಂಬೆಗಳು ಮುರಿದು ಬೀಳುವ ಸಂಭವ ಜಾಸ್ತಿ. ಮೇಲಾಗಿ ಅಡ್ಡಾದಿಡ್ಡಿ ಚಲಿಸುವ ವಾಹನಗಳ ಸಂಖ್ಯೆ ಜಾಸ್ತಿ.
ನಿಸರ್ಗ ಮುನಿದಿದ್ದರೆ ಸೈಕಲ್ಲೇ ಅತ್ಯಂತ ಅಪಾಯಕಾರಿ ವಾಹನ. ಹಾಗಾಗಿ ಸುರಕ್ಷೆಯ ದೃಷ್ಟಿಯಿಂದ ಪೆಟ್ರೋಲ್ ಚಾಲಿತ ಸುರಕ್ಷಿತ ವಾಹನಗಳಲ್ಲೇ ಹೋಗಬೇಕು.
ಅದಕ್ಕೇ ಅಟ್ಲಾಸ್ ಸೈಕಲ್ ಕಂಪನಿ ತನ್ನ ಸಾಹಿಬಾಬಾದ್ ಕಾರ್ಖಾನೆಗೆ ಇಂದು ಬೀಗ ಹಾಕಿದೆ. ಸುಮಾರು ಏಳುನೂರು ಕಾರ್ಮಿಕರು ಕೆಲಸ ಕಳೆದುಕೊಂಡು ಇಂದು ಪ್ರತಿಭಟನೆ ನಡೆಸಿದ್ದಾರೆ. 2014ರಲ್ಲಿ ಕಂಪನಿ ತನ್ನ ಮಧ್ಯಪ್ರದೇಶದ ಮಾಲನ್‌ಪುರದ ಫ್ಯಾಕ್ಟರಿಯನ್ನು ಮುಚ್ಚಿತ್ತು. 2018ರಲ್ಲಿ ಹರ್ಯಾಣದ ಸೋನಿಪತ್ ಘಟಕವನ್ನು ಮುಚ್ಚಿದ್ದ ಸುದ್ದಿ ಬಂದಿತ್ತು. ಈಗ ಉತ್ತರಪ್ರದೇಶದ ಸಾಹಿಬಾಬಾದ್ ಘಟಕವನ್ನು ಮುಚ್ಚಲಾಗುತ್ತಿದೆ.
ಭೂಮಿಯ ತಾಪಮಾನ ಹೆಚ್ಚುತ್ತ ಹೋದಂತೆ ಅರಬ್ಬೀ ಸಮುದ್ರದಲ್ಲೂ ಸೈಕ್ಲೋನ್ (ಚಂಡಮಾರುತಗಳ) ಸಂಖ್ಯೆ ಮತ್ತು ತೀವ್ರತೆ ಹೆಚ್ಚಲಿದೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಅಂಥ ವಿಪತ್ತುಗಳನ್ನು ಕಡಿಮೆ ಮಾಡಬೇಕೆಂದರೆ ಪೆಟ್ರೋಲ್ ಸುಡುವುದನ್ನು ಕಡಿಮೆ ಮಾಡಬೇಕು. ಸೈಕಲ್ ಬಳಕೆಯನ್ನು ಹೆಚ್ಚು ಜನಪ್ರಿಯಗೊಳಿಸಬೇಕು.
ಆದರೆ ಸೈಕಲ್ ಸೋಲುತ್ತಿದೆ. ಸೈಕ್ಲೋನ್ ಅಬ್ಬರ ಹೆಚ್ಚುತ್ತಿದೆ.
