
(ಭತ್ತ ಬೆಳೆಯೋ ರೈತರ ಬೇಸರದ ಪ್ರಸಂಗ)
ಮಳೆ ಮುಂಚಿತವಾಗಿ ಪ್ರಾರಂಭವಾದ ಖುಷಿಯ ತಾಪಕ್ಕೆ ಚುರುಕಾಗಿದ್ದ ಧರ್ಮಣ್ಣ ಗೊಬ್ಬರ ಬೀರ್ಬಕು,ಹೂಟಿ ಮಾಡ್ಬಕು,ಈ ವರ್ಷದಂಗೆ ಹದ ಬಿದ್ರೆ ಮತ್ತೊಂದ್ ಹತ್ತ್ ವರ್ಷ ಆದ್ರೂ ಗದ್ದೆ ಕೆಲಸ ಮಾಡಬಹುದು ಎಂದು ಯೋಚಿಸುತ್ತಾ ಸಾಗುತಿದ್ದಂತೆ ಬಾಲಕೃಷ್ಣ ಎದುರಾದ
‘ಧರ್ಮಣ್ಣ ಎತಲಗ್ ಹೊಂಟಿದೋ ಸುರು ಆತಲ ನಿನ್ನ್ ಕೆಲ್ಸ, ಈವರ್ಸನೂ ಇದ್ದಬದ್ದರದಲ ಗದ್ದೆ ಮಾಡತಿಯನ ಎಂದು ಪ್ರಶ್ನೆ ಎಸೆದ.
ಥೂ ಕಾಮಿಡಿ ಮಾಡಬಡ ಬಾಲು, ಗದ್ದೆಮಾಡದ ಅಷ್ಟ ಸಸಾರ ಅಂತ್ಕುಂದಿಯಾ? ನಾಕೈದ ಜನ ನನ್ನಥ್ರನೇ ಗದ್ದೆಮಾಡು, ಗದ್ದೆಮಾಡು ಅನ್ನಕಿಡ್ದರೆ,ಯಾರ್ದ್ನ ಯಾರ ಮಾಡದ, ನಿನ್ ದೋಸ್ತ್ ಶಾಂತುನತ್ರ ನೀನ್ಯಾರದರು ಮಾಡತಿಯನ ಅಂದ್ರೆ ನೀನು ಮದ್ದಹೊಡಿಯಕಬತಿಯ, ನನ್ ಕೆಲ್ಸನೇ ನಂಗಾಗದಿಲ್ಲ ನಿಂಗೆನ್ತಕ ಬೇಕ ಊರುಸಾಪರಿ ಅಂತ ನಕಲಿ ಮಾಡದ್ಯ ,ಒಟ್ಟೂ ಈ ವರ್ಸ ಗದ್ದೆ ಮಾಡ ಪಜಿತಿ ಐತಿ, ಹದ ಬಿದ್ದಿದಕೆ ಎಲ್ಲರೂ ನನ್ದ್ ಮಾಡತಿಯಾ ತಂದ ಮಾಡತಿಯಾ? ಅಂತ ಕೇಳರೆ, ಪ್ಯಾಟೆ ಬದಿಗೆ ಜನ ಗದ್ದೆನೂ ಬ್ಯಾಡ, ತ್ವಾಟನೂ ಬ್ಯಾಡ ಅಂತ ಸೈಟ್ ಮಾಡಕಿಡ್ದರೆ ನಮ್ಮೂರರ ಮತ ಈಗಲೂ ಗದ್ದೆ ಮಾಡದು, ತ್ವಾಟ ಮಾಡದನೇ ಮಾತಾಡತರಪ ಇದು ಎಲ್ಲಿಗೆ ಹೋಗಿ ಮುಟ್ ತೈತೋ ಜನ ತ್ವಾಟ-ಮನೆ ಬಿಟ್ಟರೆ ಅಂದ್ರೆ, ಈ ವರ್ಸ್ ದೇಶಾಂತರ ಹೋದರೆಲ್ಲಾ ಬಂದು ಜಾಗ, ಜಮೀನು ಮಾಡಕಿಡ್ದರೆ, ಗದ್ದೆ ವಿಷ್ಯ ಮಾತ್ರ ಯಾರಿಗೂ ಬ್ಯಾಡ ದುಡ್ ಹಿಡಕುಂದು ಜನ ಮಣ್ಣ ತಿಂತರ ಎಂದು ಧರ್ಮಣ್ಣ ಬೇಸರಿಸಿದ.
ಕೋಲ್ಸೆ ಕ್ರಾಸ್ ನಲ್ಲಿ ನಡೆಯುತಿದ್ದ ಈ ಇಬ್ಬರ ಉಭಯ ಕುಷಲೋಪರಿ ಕೇಳುತ್ತಲೇ ತುಸು ನಿಂತ ಟೀಲಪ್ಪ ಅಲ್ರಾ ಬೆಳಬೆಳಗನೇ ಎನೋ ಜೋರ್ ಮಾತ್ ಹಚ್ಚಿರಿ ಎಂಥದ್ದರಾ… ನಿಮ್ಮ ಕತೆ ಎಂದ.
ಟೀಲಪ್ಪ ನಿನ್ನಂಗೆ ಮೂರು ತಿಂಗಳ ಬ್ಯಾಸಾಯ, ಮೂರು ತಿಂಗಳು ಊರಾಂತ್ರ ಇದ್ರೆ ಯಾರೂ ಕೇಳದಿಲ್ಲ, ನಮಗೆ ಹಂಗನ ಜನ ಓಡಾಡ ದಾರ್ಯಗೆ ನಾವು ಸಿಗ್ತುವಾ, ಜನ ನಮಗೆ ಕೇಳದು, ಹೇಳದು. ನಿಮ್ಮ ಹಂತ್ರ ಮಾಡದ್ರೆ ನಿಮಗೂ ಗೊತ್ತಾಕುತು, ನಿಮ್ಮ ಗದ್ದೆ ಯಾರು ಮಾಡ್ತರೋ ಎಂದು ಟೀಲಪ್ಪನನ್ನು ಧರ್ಮಣ್ಣ ಪ್ರಶ್ನಿಸಿದ.
ಸದ್ಯ ನಮ್ಮಣ್ಣರೇ ಕೂಡಕಿಂದ್ ಮಾಡ್ತರೆ ಕಂಡೀಷನ್ ಏನೂ ಇಲ್ಲ, ಅವರು ಕೊಟ್ಟಿದ್ದು, ಬಿಟ್ಟಿದ್ದು ನಮಗೂ ಅಷ್ಟೆ ಗದ್ದೆ ಮಾಡಿ ಒಂದ್ ನಾಕ್ ಚೀಲ ಅಕ್ಕಿ ಮಾಡಿ ಕೊಟ್ಟರೆ ಸಾಕು, ಪಾಪ ಅವರೂ ದುಡದಿದ್ದಕೆ ಭತ್ತ- ಹುಲ್ಲು ಅಂತ ಗೀಟ್ಸ್ ಕಿಬಕು ಈ ಗದ್ದೆ ಮಾಡದ್ರಕೂ ಎಂಥದೂ ಲಾಭ ಇಲ್ಲ, ಇನ್ನೆಲ್ಡ್ ವರ್ಸ ಅಷ್ಟೆ ನಾವೂ ತ್ವಾಟ ತುಂಬ್ಸದ್ರೆ ಈ ಗದ್ದೆ ಉಸಾಪರಿ ಇರದಿಲ್ಲ ಎಂದ.
ಅಷ್ಟೊತ್ತಿಗೆ ಕಾರಿನಲ್ಲಿ ಬಂದ ನಾಗೇಂದ್ರ ಎಲ್ ನೊಡದ್ರೂ ಇದೇ ಗದ್ದೆ ಕೆಲ್ಸದೇ ಮಾತು, ನಮ್ ಹಂಚಿನಚಪ್ರ ಅಣ್ಣ ಗದ್ದಿಗೆಲ್ಲಾ ಪಚೋಲಿ, ಶುಂಠಿ,ಅಡಕೆ ಅಂತ ಹಾಕಿ ಹೆಂಗೆ ಮಾಡ್ಯನೇ ನೋಡು, ನೀವು ಗದ್ದೆ-ಗದ್ದೆ ಅಂಥ ಗೋಳಾಡ್ ತುರಿ ಗದ್ದೆ ಮಾಡ ಕಸಬನ ಶುಂಠಿ-ಅರಸ್ನ,ಪಚೋಲಿ,ತೆಂಗು-ಬಾಳೆ, ಅಡಕೆ ಅಂಥ ನಾಕ್ ಕಾಸ್ ಹಾಕದ್ರೆ ತನ್ನಿಂತಾನೇ ಕೆಲ್ಸನೂ ಕಡಮೆ ಅಕೈತಿ,ನಾಕ್ ಕಾಸೂ ದುಡಿಬೌದು ಅಂದ.
ಹೌದ್ರಾ ಈ ಬ್ಯಾಸಾಯ, ಗದ್ದೆ ಮಾಡದಕಿಂತ ಬೇರೆ ಬೆಳೆ ಬೆಳಕುನದೆ ಒಳ್ಳೆದು. ನಮ್ ಜನ ಇನ್ನೂ ಸುಧಾರ್ಸದಿಲ್ಲ. ಆ ಗೋಳಗೋಡಗಲ್ಲ ನೋಡ್ರ ತರಕಾರಿ ಬೆಳದೇ ಜನ ಸುಧಾರ್ಸ್ಯರೆ,ನಾವು ಇನ್ನೂ ಹಳೆ ಕಾಲದರಂಗೆ ಮಾಡತಾ ಹೋದ್ರೆ ಮತ್ತೆಂಥ ಆಕೈತಿ, ಈಗ ಹುಷಾರ್ ಆಗಬಕಪ, ಕರೋನಾ ಅಂತ, ಲಾಕ್ ಔಟ್ ಮಾಡಿದಮ್ಯಾಲೆ ಎಷ್ಟು ಜನ ದುಡಕುಂದ್ರು ಗೊತ್ತಾ? ಕೆಲವು ಪಂಚಾಯತ್ನ್ಯರು ಬೇನಾಮಿ ಕಂಟ್ರಾಕ್ಟ್ ಮಾಡಹಂಗೇ ಈ ವರ್ಸ ತರಕಾರಿ ಮಾರಿ ಲಕ್ಷಾಂತರ ದುಡದರೆ, ನಮ್ ರೈತರಿಗೆ ಮಾತ್ರ ಯಾವಾಗ್ಲೂ ಚಂಬೆ, ಆ ಸೊರಬ, ಸಾಗರ ಬದಿ ಜನ ಅನಾನಸ್ ಹಾಕಿ ಕೊಯ್ದ ಮಾರದ್ರೂ ಲಾಭ ಇಲ್ಲ ಅಂತ ಅನಾನಸ್ ಪ್ಲಾಟ್ನೇ ಹೂಡ್ಸಿ ಹಾಕ್ಯರಂತೆ. ಇಲ್ಲಿ ಪ್ಯಾಟ್ಯಗೆ ಅನಾನಸ್, ಪಪ್ಪಳೆ ಮಾರ ಯಾಪಾರಿಗಳು ಒಂದೊಂದು ಹಣ್ಣಿಗೇ 50 ರೂಪಾಯಿ ಅಂತರೆ, ಅಂತದ್ರಕೆ ಭತ್ತ ಬಿಟ್ ಬ್ಯಾರೆ ಬೆಳ್ದ ವರ್ಸದನ್ನ ಹರಸದಗೋತು ಅನ್ನಹಂಗಾಗದಿದ್ರೆ ಸಾಕು ಎಂದು ಟೀಲಪ್ಪ ಬೇಸರಿಸಿದ.
ಅಷ್ಟೊತ್ತಿಗೆ ಈ ವಿಚಾರ ಕೇಳಿಸಿಕೊಳ್ಳುತಿದ್ದ ಆಯ್.ಕೆ. ಅಲ್ರ ಎಷ್ಟವಸ್ ಆತ್ರಾ ಗದ್ದೆ ಬಿಟ್ಟು ಬ್ಯಾರೆದ ಬೆಳಿರಿ ಅಂದ್ರೆ ಉಣ್ಣಕೆ ಅನ್ನ ಬ್ಯಾಡೆ? ಅಂತುರಿ. ಅಡಕೆ, ತೆಂಗು, ಹೊಸ ಅಗರ್ ವುಡ್ ಬೆಳಿಯರ್ಯಲ್ಲಾ ಅನ್ನ ತಿನ್ದೆ ಮಣ್ಣ್ ತಿಂತರೆ..ಹೊಟ್ಟಿಗೆ? ಹತ್ತು ಗುಂಟೆ ಅಡಕೆ,ಅಗರ್ ವುಡ್, ತೆಂಗು, ಕಾಫಿ ಬೆಳಿಯರು ಕಾಲು ಭಾಗದಗೆ ಅಕ್ಕಿ ಕೊಂಡು ವರ್ಸ ಇಡೀ ಉಣ್ತರೆ.. ನಿಮಗೆ, ಒಕ್ಕಲಿಗರಿಗೆ ಭತ್ತ,ಶೇಂಗಾ ಬೆಳೆಯದ ಬಿಟ್ಟರೆ ಮತ್ತೆಂತ ಗೊತ್ತೈತ್ರಾ… ಭತ್ತ ಬೆಳಿಯಾ ಸೊರಬಾ, ಸಾಗರ, ಬನವಾಸಿ ಭಾಗದ ಜನ ಶುಂಠಿ, ಅಡಕೆ, ಪಪ್ಳೆ, ಅನಾನಸ ಬೆಳದ್ ಉದ್ದಾರಾಗ್ಯರೆ ನಾವ್ ಮಾತ್ರ ಭತ್ತ ಬೆಳದು ಹಂಗೆ ಐದಿವಿ ಅಂದರು.
ಹೌದು ಅವರು ದುಡಿತರೆ ಹಂಗೇ ತುಕಡಿ ತಿಂದು ಹಬ್ಬ-ಜಾತ್ರಿ ಮಾಡ್ತರೆ ನಾವು ಭತ್ತ ಬೆಳದ್ ಐದು-ಹತ್ತವರ್ಸುಕೊಂದು ಮಾರಿಜಾತ್ರೆ ಹಬ್ಬ ಮಾಡಕೂ ಹೆದರುತುವು, ಆಯ್ಕೆ ಸಾಯಬ್ರು ಹೇಳದಂಗೇ ನಾವ್ ಕೇಳಿರೆ ಇಷ್ಟಹೊತ್ತಿಗೆ ನಮ್ಮೂರು ತೆಂಗು-ಕಂಗು ಅಂತ ಹಸರಾಡುತುತು ಈ ಗದ್ದೆ ಮಾಡ್ಸ ಜನನೂ ಇಂಥ ಬೆಳೆ ಬೆಳದ್ರೆ ನಮ್ಮ ಟೆನ್ಸನ್ ಆದ್ರೂ ಕಡಿಮೆ ಆಕುತು ಮಾರಾಯ ಎಂದು ಸ್ವಗತದಲ್ಲೆ ಗೊಣಗುತ್ತಾ ಧರ್ಮಣ್ಣ ತಂಬಾಕು-ಅಡಿಕೆ ಚೀಟಿ ಪುಡಿ ತೀಡುತ್ತಾ ಪಾದ ಬೆಳೆಸಿದ.
