samajamukhi week end reading- ನಾಯಕತ್ವ ದಿವಾಳಿಯಾದ ಸಂಕೇತ! ದೇಶಕ್ಕೆ ವಕ್ಕರಿಸಿದ ರಾಸ್ಪುಟಿನ್ ಎಂಬ ಪಂಡಿತ – [ಡಿ. ರಾಮಪ್ಪ ಸಿರಿವಂತೆ, ಅಂಕೋಲಾ]

ಸಾಮ್ರಾಜ್ಯಗಳು ಬೀಳುವುದಕ್ಕೆ ವೈರಿಯ ಶಕ್ತಿ-ಸಾಮಥ್ರ್ಯ ಮುಂತಾದ ಹೊರಗಿನ ಕಾರಣಗಳು ಏಷ್ಟೇ ಇದ್ದರೂ, ಆಳುವವರ ಸಾಮಾನ್ಯ ಜ್ಞಾನವೂ ಇಲ್ಲದ ಮೌಢ್ಯದಂತಹ ಒಳಗಿನ ಕಾರಣಗಳೇ ಪ್ರಮುಖ ಪಾತ್ರವಹಿಸುತ್ತವೆ. ಇದನ್ನೇ ಆಂತರ್ಯದ ದ್ವಂದ್ವ ಎನ್ನುತ್ತಾರೆ ಡಾ. ರಾಮಮನೋಹರ್ ಲೋಹಿಯಾ.

ಬ್ರಿಟಿಷ್ ಮತ್ತು ಮಂಗೋಲರ ಸಾಮ್ರಾಜ್ಯಗಳನ್ನು ಹೊರತುಪಡಿಸಿದರೆ, 1721ರಿಂದ 1917ರ ಅಕ್ಟೋಬರ್ ಕ್ರಾಂತಿಯವರೆಗೆ ಆಳಿದ ತ್ಸಾರ್ ದೊರೆಗಳ ರಷಿಯನ್ ಸಾಮ್ರಾಜ್ಯ, ಒಂದು ಹಂತದಲ್ಲಿ ಏಷಿಯಾ, ಯುರೋಪ್ ಮತ್ತು ಉತ್ತರ ಅಮೇರಿಕಾ ಖಂಡಗಳನ್ನೊಳಗೊಂಡ ಮೂರನೇ ಅತೀ ದೊಡ್ಡ ಸಾಮ್ರಾಜ್ಯವಾಗಿತ್ತು!

ಉತ್ತರದ ಆಕ್ರ್ಟಿಕ್ ಮಹಾಸಮುದ್ರದಿಂದ ಹಿಡಿದು ದಕ್ಷಿಣದ ಕಪ್ಪು ಸಮುದ್ರದವರೆಗೆ, ಪಶ್ಚಿಮದ ಬಾಲ್ಟಿಕ್ ಸಮುದ್ರದಿಂದ ಹಿಡಿದು ಪೂರ್ವದ ಅಮೇರಿಕಾದ ಅಲಾಸ್ಕಾ ಮತ್ತು ಉತ್ತರ ಕ್ಯಾಲಿಫೋರ್ನಿಯಾವರೆಗೆ ರಷಿಯನ್ ವಸಾಹತು ಹಬ್ಬಿತ್ತು. 19ನೇ ಶತಮಾನದ ಅಂತ್ಯದ ಹೊತ್ತಿಗೆ, 228 ಲಕ್ಷ ಚ.ಕಿ.ಮಿ ವಿಸ್ತಿರ್ಣ ಅಂದರೆ, ಭೂಮಿಯ 1/6 ಭಾಗವನ್ನು ರಷ್ಯಾ ಆವರಿಸಿತ್ತು. ಭಾರತ ಮತ್ತು ಚೀನಾ ಬಿಟ್ಟರೆ ಮೂರನೇ ಅತಿ ಹೆಚ್ಚು ಜನಸಂಖ್ಯೆ ಇದ್ದ ಪ್ರಭುತ್ವ ಇದಾಗಿತ್ತು!

ಮೂರನೇ ಇವಾನ್‍ನಿಂದ(1462-1505) ಪ್ರಾರಂಭವಾದ ತ್ಸಾರ್ ಸಾಮ್ರಾಜ್ಯ ಈ ಮಟ್ಟಿಗೆ ಬೆಳೆಯಲು, ತ್ಸಾರ್‍ಗಳಾದ ಪೀಟರ್, ಎರಡನೇ ಅಲೆಕ್ಷಾಂಡರ್ ಮತ್ತು ತ್ಸಾರಿಣಿ ಕ್ಯಾತರೀನ್ ಕಾರಣರು. ಯುರೋಪ್ ಖಂಡದ ಎಲ್ಲಾ ದೇಶಗಳನ್ನೂ ತನ್ನ ಕ್ರೂರ ಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ ನೆಪೋಲಿಯನ್ನನ ಕನಸನ್ನು 1812-14ರ ಯುದ್ಧದಲ್ಲಿ ಛಿದ್ರಗೊಳಿಸಿದ್ದು ತ್ಸಾರ್ ಆಡಳಿತದ ರಷಿಯಾ!

ಇಷ್ಟು ಭಲಿಷ್ಠ ತ್ಸಾರ್ ಚಕ್ರಾಧಿಪತ್ಯ ನೆಲಕಚ್ಚಲು ಅನೇಕ ಕಾರಣಗಳೂ-ಕಾರಣಕರ್ತರೂ ಇದ್ದರೂ, ಮೂಢ ರೈತ ಸಮೂದಾಯಕ್ಕೆ ಮತ್ತು ಬೌದ್ಧಿಕವಾಗಿ ದಿವಾಳಿಯಾಗಿದ್ದ ರಾಜಮನೆತನಕ್ಕೆ ಅತೀಂದ್ರಿಯ ಶಕ್ತಿಯ, ದೂರದೃಷ್ಟಿಯ ಪ್ರವಾದಿಯಂತೆ ಕಂಡ ಅಳಲೇಕಾಯಿ ಪಂಡಿತ ಮುಖ್ಯ ಕಾರಣಗಳಲ್ಲಿ ಒಬ್ಬ; ಆತನೇ ಗ್ರಿಗೊರಿ ರಾಸ್ಪುಟಿನ್!

1869ರ ಜನವರಿ 9ರಂದು ಸೈಬೀರಿಯಾ ಪ್ರಾಂತ್ಯದ ಪೊಕ್ರೊವ್ಸ್ಕೊಯ್ ಎಂಬ ಹಳ್ಳಿಯ ಬಡ ಕುಟುಂಬವೊಂದರಲ್ಲಿ ಗ್ರಿಗೊರಿ ರಾಸ್ಪುಟಿನ್ ಹುಟ್ಟಿದ. ಆತನ ತಂದೆ ಯೆಫಿಮ್ ಮತ್ತು ತಾಯಿ ಅನ್ನಾ ಪಾರ್ಶುಕೋವಾ. ಯೆಫಿಮ್ ಒಬ್ಬ ರೈತ. ಇವರಿಗೆ 9 ಜನ ಮಕ್ಕಳು. 7 ಜನ ಚಿಕ್ಕಂದಿನಲ್ಲೇ ಮೃತರಾದರು. 9ನೇ ಮಗು ಫಿಯೋಡೋಸಿಯಾ ಮತ್ತು ರಾಸ್ಪುಟಿನ್ ಮಾತ್ರ ಬದುಕುಳಿದವರು.

ತನ್ನ ತಂದೆ-ತಾಯಿಯಂತೆ ರಾಸ್ಪುಟಿನ್ ಕೂಡ ಸಾಂಪ್ರದಾಯಿಕ ಶಿಕ್ಷಣ ಪಡೆದವನಲ್ಲ. ಆತ ತುಂಬಾ ಅಶಿಸ್ತಿನಿಂದ ಬೆಳೆದ. ಆಗಲೇ ಕುಡಿಯುವುದನ್ನು ಕಲಿತಿದ್ದ್ದ; ಚಿಕ್ಕ ಪುಟ್ಟ ಕಳ್ಳತನ ಮಾಡುತ್ತಿದ್ದ; ಒರಟನಾಗಿದ್ದ; ಯಾರನ್ನೂ ಗೌರವಿಸುತ್ತಿರಲಿಲ್ಲ; ಸ್ಥಳೀಯ ಆಡಳಿತವನ್ನು ತೀರಾ ನಿಕೃಷ್ಟವಾಗಿ ಕಾಣುತ್ತಿದ್ದ. ತೀವ್ರ ಚಟುವಟಿಕೆಯ ವಿಕ್ಷಿಪ್ತ ಮನಸ್ಸಿನವನಾಗಿದ್ದ. 18 ವರ್ಷಕ್ಕೇ ಅಂದರೆ, 1887ರಲ್ಲಿಯೇ ಆತ ತನ್ನ ಊರು ಬಿಟ್ಟು ಊರೂರು ಅಲೆಯತೊಡಗಿದ. ಹೀಗೆ ಅಲೆಯುತ್ತಾ, ತನ್ನ ಹಳ್ಳಿಯಿಂದ 250 ಕಿಮಿ ದೂರದ ಅಬಾಲಕ್ ಎಂಬ ಹಳ್ಳಿಗೆ ಹೋದಾಗ ಅಲ್ಲಿ, ಪ್ರಸ್ಕೋವ್ಯಾ ಡುಬ್ರೊವಿನಾ ಎಂಬ ಹುಡುಗಿಯನ್ನು ಪರಿಚಯ ಮಾಡಿಕೊಂಡು ಅವಳೊಟ್ಟಿಗೆ ತುಂಬಾ ದಿನ ಓಡಾಡಿದ; ನಂತರ ಮದುವೆಯಾದ. ಅವನಿಗೆ 7 ಜನ ಮಕ್ಕಳು ಆದರೆ, ಬದುಕುಳಿದವರು ಮೂವರು ಮಾತ್ರ!

10 ವರ್ಷಗಳ ದಾಂಪತ್ಯದ ನಂತರ ರಾಸ್ಪುಟಿನ್ ಹೆಂಡತಿಯನ್ನು ಬಿಟ್ಟು ಊರು ಸುತ್ತುವುದನ್ನು ಮತ್ತೆ ಪ್ರಾರಂಭಿಸಿದ! ಆದರೆ ಈ ಬಾರಿ ವಾಪಸ್ಸು ಬಂದಾಗ ಆತ ಬದಲಾದ ಮನುಷ್ಯನಾಗಿದ್ದ. ಅಕ್ಷರ ಕಲಿತಿದ್ದ; ಕುಡಿಯುವುದನ್ನು ಬಿಟ್ಟಿದ್ದ; ಪ್ರಾರ್ಥನೆ ಮತ್ತು ಭಜನೆ ಮಾಡುತ್ತಿದ್ದ; ತೀರಾ ಒಳ್ಳೆಯವನಂತೆ, ಸನ್ಯಾಸಿಯಂತೆ ವರ್ತಿಸುತ್ತಿದ್ದ; ಒಂದು ಕಡೆ ನಿಲ್ಲದೆ ತಿಂಗಳುಗಟ್ಟಲೆ, ಕೆಲವೊಮ್ಮೆ ವರ್ಷಪೂರ್ತಿ ಮನೆಗೆ ಬರದೆ, ಊರೂರು ಅಲೆಯುತ್ತಿದ್ದ. ಹೇಗೋ ಕೈಚಳಕ, ಸಮ್ಮೋಹನ ಮತ್ತು ವಶೀಕರಣ ವಿದ್ಯೆ ಕಲಿತಿದ್ದ. ಆದ್ದರಿಂದ, ಜನರು ವಿಶೇಷವಾಗಿ, ಹುಡುಗರು, ಹುಡುಗಿಯರು ಆತನ ವಶೀಕರಣಕ್ಕೆ ಒಳಗಾಗತೊಡಗಿದರು.

ಮನೆಯಲ್ಲಿಯೇ ಇದ್ದಾಗ, ಸಹಾಯಕರ ಗುಂಪು ಕಟ್ಟಿಕೊಂಡು, ಭಾನುವಾರ ಮತ್ತು ವಿಶೇಷದಿನಗಳಂದು ಪೂಜೆ, ಭಜನೆ ಮಾಡತೊಡಗಿದ. ವಿಚಿತ್ರವಾದ, ಕೇಳರಿಯದ ಹಾಡುಗಳನ್ನು ಈ ಗುಂಪಿಗೆ ಕಲಿಸಿ ಹಾಡಿಸುತ್ತಿದ್ದ; ಇಂತಹ ಪೂಜಾ ಸಂದರ್ಭಗಳಲ್ಲಿ ಹರಯದ ಹೆಂಗೆಳೆಯರಿಂದ ತನ್ನ ಪೂರ್ತಿ ದೇಹವನ್ನು ವಿದ್ಯುಕ್ತವಾಗಿ ತೊಳೆಸಿಕೊಳ್ಳುತ್ತಿದ್ದ; ಅಲ್ಲಿ, ರತಿಕ್ರೀಡೆಗಳು ಕೂಡ ನಡೆಯುತ್ತಿದ್ದವು ಎಂದೂ ಹೇಳುತ್ತಾರೆ!

1900ರ ಹೊತ್ತಿಗೆ, ರಾಸ್ಪುಟಿನ್ ವರ್ಚಸ್ಸು ಸೈಬೀರಿಯಾದಲ್ಲಿ ಹರಡಲು ಪ್ರಾರಂಭವಾಯ್ತು. 1902-04ರ ಮಧ್ಯೆ ಆತ ಅನೇಕ ಸ್ಥಳಗಳನ್ನು ತಿರುಗಿದ. ಜನರಿಗೆ ಖಾಯಿಲೆ ಗುಣಪಡಿಸುವ ಪಂಡಿತನಾಗಿ, ಆಧ್ಯಾತ್ಮಿಕ ತೊಂದರೆಗಳು ಮತ್ತು ಆತಂಕಗಳನ್ನು ದೂರ ಮಾಡುವ ಹಿರಿಯ ಆಧ್ಯಾತ್ಮಿಕ ಗುರುವಾಗಿ ಆತ ಕಾಣಿಸಿಕೊಂಡ. ಸಮ್ಮೋಹಿನಿ ಮತ್ತು ವಶೀಕರಣದಿಂದ ಮಹಿಳೆಯರನ್ನು ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದಾನೆಂಬ ಆರೋಪ ಬಂದರೂ, ಚರ್ಚುಗಳ ಹಿರಿಯರು ಅದು ಸುಳ್ಳೆಂದು ಹೇಳುವಷ್ಟು ಅವರನ್ನು ಮೆಚ್ಚಿಸುತ್ತಿದ್ದ!

ರಷಿಯಾದ ರುಮನೊವ್ ರಾಜವಂಶದ ಕೊನೆಯ ತ್ಸಾರ್ ದೊರೆ ಎರಡನೆ ನಿಕೊಲಸ್‍ನ ಮಗ ರಾಜಕುಮಾರ ಅಲೆಕ್ಷಿ, ಹಿಮೊಫಿಲಿಯ ಖಾಯಿಲೆಯಿಂದ ನರಳುತ್ತಿದ್ದ. ಅದೊಂದು ಅನುವಂಶಿಕ ಖಾಯಿಲೆ. ಗಾಯಗಳಾದರೆ ರಕ್ತ ಹೆಪ್ಪುಗಟ್ಟುವುದಿಲ್ಲ. ಇದಕ್ಕೆ ವೈದ್ಯಕೀಯದಲ್ಲಿ ದೀರ್ಘಕಾಲೀನ ಔಷಧಿ ಇಲ್ಲ. ಆದರೆ, ರಾಸ್ಪುಟಿನ್ ಅದನ್ನು ಗುಣಪಡಿಸುವುದಾಗಿ ಹೇಳಿ ರಾಜಕುಟುಂಬಕ್ಕೆ ಹತ್ತಿರನಾದ. ಈ ಅಳಲೇಕಾಯಿ ಪಂಡಿತ ಅದೇನು ಮಾಡುತ್ತಿದ್ದನೋ, ರಾಜಕುಮಾರ ಅಲೆಕ್ಷಿಯ ಖಾಯಿಲೆ ಗುಣಪಡಿಸುವ ಅತೀಂದ್ರಿಯ ಶಕ್ತಿ ಇದೆಯೆಂದು, ಆತನೊಬ್ಬ ದೇವಮಾನವನೆಂದೂ ತ್ಸಾರ್ ಕುಟುಂಬ – ವಿಶೇಷವಾಗಿ ತ್ಸಾರಿಣಿ ಅಲೆಕ್ಷಾಂಡ್ರಾ – ನಂಬಿಬಿಟ್ಟರು. ಅಲ್ಲಿಂದ ತ್ಸಾರ್ ಕುಟುಂಬಕ್ಕೆ ತೀರಾ ಬೇಕಾದವನಾಗಿ, ಹತ್ತಿರದವನಾಗಿ ರಾಸ್ಪುಟಿನ್ ಬೆಳೆದ. ಈ ಮಧ್ಯೆ ತ್ಸಾರ್ ವಿರದ್ಧದ ರಾಜಕೀಯ ಕ್ಷೋಭೆ ತಾರಕಕ್ಕೇರಿತ್ತು. ಹೀಗಾಗಿ, ದೊರೆಗಳ ರಾಜಕೀಯ ನಿರ್ಣಯಗಳಲ್ಲೂ ಅವನ ಪ್ರಭಾವ ಕಾಣಿಸಿಕೊಳ್ಳತೊಡಗಿತು.

1912ರಲ್ಲಿ ರಾಜಕುಮಾರ ಅಲೆಕ್ಷಿ, ಚಲಿಸುವ ಗಾಡಿಯಿಂದ ಬಿದ್ದು ತೊಡೆ ಮುರಿದುಕೊಂಡು ತೀವ್ರ ರಕ್ತಸ್ರಾವಕ್ಕೆ ಒಳಗಾದ; ಹಿಮೋಫಿಲಿಯಾ ಖಾಯಿಲೆ ಇದ್ದುದರಿಂದ ನೋವು ಮತ್ತು ಜ್ವರದಿಂದ ಸಾವಿನ ದವಡೆಗೆ ಜಾರತೊಡಗಿದ. ಸೈಬೀರಿಯಾದಲ್ಲಿದ್ದ ರಾಸ್ಪುಟಿನ್‍ಗೆ ವಿಷಯ ತಿಳಿಸಿ ಬೇಗ ಬಂದು ಮಗನನ್ನು ಉಪಚರಿಸಲು ತ್ಸಾರಿಣಿ ಟೆಲಿಗ್ರಾಂ ಕಳಿಸುತ್ತಾಳೆ. “ರಾಜಕುಮಾರನಿಗೆ ಏನೂ ಆಗುವುದಿಲ್ಲ; ಅವನು ಗುಣಮುಖನಾಗುತ್ತಾನೆ; ಡಾಕ್ಟರ್ ಕರೆಸಿ ಅವನಿಗೆ ತೊಂದರೆ ಕೊಡುವುದು ಬೇಡ,” ಎಂದು ರಾಸ್ಪುಟಿನ್ ತಕ್ಷಣ ಉತ್ತರಿಸುತ್ತಾನೆ. ಮೂರನೆ ದಿನ ಆತನ ರಕ್ತಸ್ರಾವ ತನ್ನಷ್ಟಕ್ಕೇ ನಿಲ್ಲುತ್ತದೆ. ಇದು ರಾಸ್ಪುಟಿನ್ ಮಾಡಿದ ಪವಾಡ; ಇದರಿಂದ, ಮಗನ ಉಳಿವಿಗೆ ಆತ ಅನಿವಾರ್ಯ ಎಂದು ದೊರೆ ಮತ್ತು ರಾಣಿ ನಂಬುತ್ತಾರೆ!

ರಾಜಮನೆತನದ ಈ ನಂಬಿಕೆಯೇ ಅವರಿಗೆ, ರಾಸ್ಪುಟಿನ್ ತೀರಾ ಹತ್ತಿರವಾಗುವಂತೆ ಮಾಡಿತಲ್ಲದೆ ಆತನಿಗೆ ಸಾಕಷ್ಟು ಹೆಸರು ಮತ್ತು ಪ್ರಭಾವ ತಂದುಕೊಟ್ಟಿತು. ರಾಸ್ಪುಟಿನನ್ನು ತನ್ನ ಹತ್ತಿರದಲ್ಲಿಯೇ ಇಟ್ಟುಕೊಳ್ಳುವ ಉದ್ಧೇಶದಿಂದ, ದೊರೆ ಆತನನ್ನು ಅರಮನೆಯ ಧರ್ಮಪ್ರತಿಮೆಗಳಿಗೆ ದೀಪ ಹಚ್ಚುವ ಕೆಲಸಕ್ಕೆ ನೇಮಿಸಿಕೊಳ್ಳುತ್ತಾನೆ. ಇದರಿಂದ ಆತ ರಾಜನ ಹತ್ತಿರದವನೆನಿಸಿಕೊಂಡು ಕಾಲಕ್ರಮೇಣ ಲಂಚ ಪಡೆಯುವ ಮತ್ತು ರತಿಕ್ರೀಡೆಗೆ ವ್ಯವಸ್ಥೆ ಮಾಡಿಕೊಳ್ಳುವ ಮಟ್ಟಕ್ಕೆ ಹೋಗುತ್ತಾನೆ. ತ್ಸಾರಣಿಯೊಟ್ಟಿಗೆ ಕೂಡ ಲೈಂಗಿಕ ಸಂಪರ್ಕ ಇರುವವ ಎಂದು ಜನರು ಆಡಿಕೊಳ್ಳತೊಡಗುತ್ತಾರೆ!

1915ರಲ್ಲಿ ಎರಡನೆ ದೊರೆ ನಿಕೊಲಸ್ ಯುದ್ಧ ರಂಗಕ್ಕೆ ಹೋಗುವ ಮೂಲಕ ರಾಜ್ಯದ ರಾಜಕೀಯ ನಿರ್ಧಾರಗಳು ನಿಕೊಲಸ್‍ನ ಹೆಂಡತಿ ಅಲೆಕ್ಷಾಂಡ್ರಾ ಕೈಗೆ ಬಿತ್ತು. ಆ ಮೂಲಕ, ರಾಣಿಗೆ ಹತ್ತಿರದವನಾಗಿದ್ದ ರಾಸ್ಪುಟಿನ್ ಪ್ರಭಾವ ರಷಿಯನ್ನರ ರಾಜಕೀಯ ಜೀವನದಲ್ಲಿ ಹೆಚ್ಚಾಯಿತು. ಮಂತ್ರ-ತಂತ್ರಗಳ ರಾಸ್ಪುಟಿನ್ ಎಂಬ ಬೂದಿಬಸವನನ್ನು ನಂಬಿದ ಅಲೆಕ್ಷಾಂಡ್ರಾಳ ರಾಜಕೀಯ ನಿರ್ಧಾರಗಳು ಜನರಲ್ಲಿ ಹೆಚ್ಚೆಚ್ಚು ಅಪ್ರಿಯವಾಗತೊಡಗಿದವು.

ಎಂತಹಾ ಶಸಕ್ತ ಚಕ್ರಾಧಿಪತಿಯಾದರೂ, ಸಮಯ ಹಕ್ಕಿಯಂತೆ ಆತನ ನೆತ್ತಿಯ ಕುಕ್ಕಿ ಹಾರುತ್ತದೆ! ಇದನ್ನೇ ಬೇಂದ್ರೆಯವರು, ಹಕ್ಕಿ ಹಾರುತಿದೆ, ನೋಡಿದಿರಾ ಎಂಬ ಕವನದಲ್ಲಿ ಚಿತ್ರಿಸಿದ್ದಾರೆ. ಸಾಮ್ರಾಜ್ಯಗಳು ಬೀಳುವುದಕ್ಕೆ ವೈರಿಯ ಶಕ್ತಿ-ಸಾಮಥ್ರ್ಯ ಮುಂತಾದ ಹೊರಗಿನ ಕಾರಣಗಳು ಏಷ್ಟೇ ಇದ್ದರೂ, ಆಳುವವರ ಸಾಮಾನ್ಯ ಜ್ಞಾನವೂ ಇಲ್ಲದ ಮೌಢ್ಯದಂತಹ ಒಳಗಿನ ಕಾರಣಗಳೇ ಪ್ರಮುಖ ಪಾತ್ರವಹಿಸುತ್ತವೆ. ಇದನ್ನೇ ಆಂತರ್ಯದ ದ್ವಂದ್ವ ಎನ್ನುತ್ತಾರೆ ಡಾ. ರಾಮಮನೋಹರ್ ಲೋಹಿಯಾ.

ಮೊದಲ ಮಹಾಯುದ್ಧದಿಂದ ನಿಶಕ್ತವಾದ ಊಳಿಗಮಾನ್ಯ ರಾಜಾಡಳಿತ ಹಾಗೂ, ಅಧಿಕಾರಶಾಹಿಯ ಅಂಕೆಯಿಲ್ಲದ ಕಟ್ಟುಪಾಡುಗಳಿಂದ ರಷಿಯಾದ ಆರ್ಥಿಕ ಸ್ಥಿತಿ ಕುಸಿಯಿತು. ಇದಕ್ಕೆ ರಾಸ್ಪುಟಿನ್ ಮಾತ್ತು ತ್ಸಾರಿಣಿಯ ವರ್ತನೆಗಳು ಉರಿಯುವ ಬೆಂಕಿಗೆ ಎಣ್ಣೆಯಾಯ್ತು. “ದೊರೆಯ ಮಂತ್ರಿಗಳೆಲ್ಲರೂ, ರಾಸ್ಪುಟಿನ್ ಮತ್ತು ತ್ಸಾರಿಣಿ ಆಡಿಸುತ್ತಿರುವ ಸೂತ್ರದ ಗೊಂಬೆಗಳು; ಈ ರಾಸ್ಪುಟಿನ್ ರಷಿಯಾದಲ್ಲಿ ಹುಟ್ಟಿದ ದುಷ್ಟ; ದೇಶಕ್ಕೆ ಮತ್ತು, ಜನರಿಗೆ ಹೊರಗಿನವಳಾಗಿಯೇ ಉಳಿದ ರಷಿಯಾದ ತ್ಸಾರಿಣಿ ವಾತ್ಸವದಲ್ಲಿ ಜರ್ಮನ್,” ಎಂದು ರಷಿಯಾ ಶಾಸನ ಸಭೆ ಸದಸ್ಯ ವ್ಲಾಡಿಮಿರ್ ಪುರಿಷ್ಕೆವಿಚ್, ನೇರವಾಗಿ ಆಪಾದಿಸಿದ.

ದುಷ್ಟ ರಾಸ್ಪುಟಿನ್ ಪ್ರಭಾವ ಮತ್ತು ಆತನ ಮಂತ್ರ-ತಂತ್ರಗಳು ಜನರ ಮೇಲೂ ದುಶ್ಪರಿಣಾಮ ಬೀರುತ್ತವೆ. 1914ರಲ್ಲಿ, ಚಿಯೋನ್ಯ ಗುಸೆವಾ ಎಂಬ 33 ವರ್ಷದ ಮಹಿಳೆ ರಾಸ್ಪುಟಿನ್‍ನನ್ನು ಇರಿದು ಕೊಲ್ಲಲು ಪ್ರಯತ್ನಿಸುತ್ತಾಳೆ. ಆದರೆ ಆತ ಶಸ್ರಚಿಕಿತ್ಸೆಯಿಂದ ಬದುಕುಳಿಯುತ್ತಾನೆ. ನಂತರ, ರಾಜಕುಮಾರ ಫೆಲಿಕ್ಸ್ ಯುಸುಪೋವ್ ನೇತ್ರತ್ವದಲ್ಲಿ 30 ಡಿಸೆಂಬರ್ 1916ರಂದು ರಾಸ್ಪುಟಿನ್ ಕೊಲೆಯಾಗುತ್ತಾನೆ. 3 ಗುಂಡುಗಳು ಆತನ ದೇಹ ಹೊಕ್ಕಿರುತ್ತವೆ, ಆತನ ದೇಹವನ್ನು ಮಲಯ ನೆವ್ಕಾ ನದಿಯಲ್ಲಿ ಎಸೆಯುತ್ತಾರೆ. ಇಷ್ಟೆಲ್ಲಾ ಕುಖ್ಯಾತಿಯ ರಾಸ್ಪುಟಿನ್ ಹೆಣವನ್ನು ಹೂಳುವಾಗ ರಾಜಮನೆತನ ಪಾಲ್ಗೊಳ್ಳುತ್ತದೆ! ಅಕ್ಟೊಬರ್ ಕ್ರಾಂತಿಯಲ್ಲಿ ಕಮ್ಯುನಿಷ್ಟರು, ದೊರೆ ಮತ್ತು ಅಲೆಕ್ಷಾಂಡ್ರಾ ಜೊತೆಗೆ ಮುಗ್ಧರಾದ ಅವರ ಮಕ್ಕಳನ್ನೂ ಕಗ್ಗೊಲೆ ಮಾಡುತ್ತಾರೆ.

ಕೊನೆಯ ಮಾತು:
ಯಾತನೆಯ ವಿಷಯ ಎಂದರೆ, ರಾಸ್ಪುಟಿನ್‍ನ ಅಮಾಯಕ ಮಗಳು ಮಾರಿಯಾ ರಾಸ್ಪುಟಿನ್ (1898 – 1977) ಅಕ್ಟೋಬರ್ ಕ್ರಾಂತಿಯ ಸಂದರ್ಭದಲ್ಲಿ, ಮೊದಲು ಫ್ರಾನ್ಸ್, ನಂತರ ಅಮೇರಿಕಾಕ್ಕೆ ಹೋಗಿ ಅಲ್ಲಿ ಡ್ಯಾನ್ಸರ್ ಆಗಿ ನಂತರ ಸರ್ಕಸ್ ನಲ್ಲಿ ಪ್ರಾಣಿ ಆಡಿಸುವವಳಾಗಿ ಕೆಲಸ ಮಾಡಿ ಕಷ್ಟದಲ್ಲೇ ಬದುಕಿ ಕಷ್ಟದಲ್ಲೇ ಸತ್ತಳು ಎಂಬುದು!

-ಲೇಖಕರು ಸಾಗರ ಸಿರಿವಂತೆಯ ಮೂಲದವರಾಗಿದ್ದು ಸಿಂಡಿಕೇಟ್ ಬ್ಯಾಂಕ್ ನಲ್ಲಿ ವ್ಯವಸ್ಥಾಪಕರಾಗಿ ಸ್ವಯಂ ನಿವೃತ್ತಿ ಪಡೆದು ಈಗ ಯಲ್ಲಾಪುರದಲ್ಲಿ ಕೃಷಿಕರಾಗಿದ್ದಾರೆ. ಕೃಷಿ-ಬ್ಯಾಕಿಂಗ್, ಸಮಾಜವಾದ, ಲೋಹಿಯಾವಾದ,ಸಮಕಾಲೀನ ರಾಜಕೀಯ, ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಻ಅಷ್ಟೇ ಅದ್ಬುತವಾಗಿ ಬರೆಯಬಲ್ಲವರಾಗಿದ್ದಾರೆ. ಸದ್ಯ ಻಻ಅಂಕೋಲಾದಲ್ಲಿ ನೆಲೆಸಿರುವ ಇವರು ಸಮಾಜಮುಖಿ ಬಳಗದ ಹಿತೈಶಿಗಳು, ಇವರ ಲೇಖನಗಳು ಕಳೆದ ವರ್ಷದಿಂದ ಸಮಾಜಮುಖಿ ಪತ್ರಿಕೆ ಮತ್ತು ನ್ಯೂಸ್ ಪೋರ್ಟಲ್ ಗಳಲ್ಲಿ ಪ್ರಕಟವಾಗುತ್ತಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *