
ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ರಾಜ್ಯ ಸರ್ಕಾರ.
ಬೆಂಗಳೂರು.
ಮಾನ್ಯ ಜಿಲ್ಲಾಧಿಕಾರಿಯವರು, ಉತ್ತರ ಕನ್ನಡ ಜಿಲ್ಲೆ ಇವರ ಮೂಲಕ.
ಮಾನ್ಯರೇ,
ವಿಷಯ :- ಸ್ತ್ರೀಶಕ್ತಿ, ಸ್ವ-ಸಹಾಯ ಸಂಘಗಳು ರಾಷ್ಟ್ರೀಕೃತ/ಸಹಕಾರ ಬ್ಯಾಂಕುಗಳು, ಸಹಕಾರ ಸಂಘಗಳು, ಧರ್ಮಸ್ಥಳ, ಕಿರುಸಾಲ ಸಂಸ್ಥೆಗಳು ಮುಂತಾದವುಗಳಿಂದ ಪಡೆದ ಸಾಲಗಳಿಗೆ ಬಡ್ಡಿ ಸಹಿತ ಮನ್ನಾ ಮಾಡಲು ಒತ್ತಾಯಿಸಿ ಸಿ.ಐ.ಟಿ.ಯು. ಮತ್ತು ಜೆ.ಎಮ್.ಎಸ್. ಜಂಟಿ ಮನವಿ.
ನಮ್ಮ ರಾಜ್ಯದಲ್ಲಿ ಸರ್ಕಾರ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಧರ್ಮಸ್ಥಳ ಸಂಘಗಳ ಅಡಿಯಲ್ಲಿ ಉಳಿತಾಯ ಯೋಜನೆಯಲ್ಲಿ ತೊಡಗಿರುವ ಲಕ್ಷಾಂತರ ಸ್ತ್ರೀಶಕ್ತಿ, ಸ್ವ-ಸಹಾಯ ಸಂಘಗಳಿವೆ. ಸುಮಾರು 35 ರಿಂದ 40 ಲಕ್ಷ ಮಹಿಳೆಯರು ಈ ಸಂಘಗಳ ಸದಸ್ಯರಾಗಿ ಗುಂಪುಗಳ ಮೂಲಕ ಸ್ವಯಂ-ಉದ್ಯೋಗ, ಕೃಷಿ ಚಟುವಟಿಕೆ, ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ಆರೋಗ್ಯ, ಕುಟುಂಬ ನಿರ್ವಹಣೆಯೂ ಸೇರಿದಂತೆ ತಮ್ಮ ಖರ್ಚು ವೆಚ್ಚಗಳಿಗೆ ಸಾಲ ಪಡೆಯುತ್ತಿದ್ದಾರೆ. ನಿಗದಿತ ಅವಧಿಯ ಕಂತು ಮತ್ತು ಬಡ್ಡಿಗಳನ್ನು ಚಟುವಟಿಕೆಗಳಿಂದ ಬರುವ ಆದಾಯದ ಮೂಲಕವೋ, ಇನ್ನಿತರ ಮಾರ್ಗದಲ್ಲಿ ಬರುವ ಅಲ್ಪ ಸ್ವಲ್ಪ ಆದಾಯದಿಂದಲೋ ಕಟ್ಟುತ್ತಾರೆ. ಬ್ಯಾಂಕುಗಳಿಂದ ಪಡೆದ ಸಾಲಗಳ ಕರಾರುವಾಕ್ ವಾಪಸಾತಿ ಈ ವಲಯದಿಂದ ಬರುತ್ತಿದೆ ಎಂಬುದು ಗಮನಿಸಬೇಕಾದ ಅಂಶ.
ಯಾರೂ ನಿರೀಕ್ಷಿಸದ ಸೂಕ್ಷ್ಮ ವೈರಾಣು ಕೊರೊನಾದಿಂದಾಗಿ ಯಾವ ಮುನ್ಸೂಚನೆಯೂ ಇಲ್ಲದೇ ಹೇರಿದ ಲಾಕ್ ಡೌನ್‍ನಿಂದಾಗಿ ಎಲ್ಲ ಕ್ಷೇತ್ರಗಳಂತೆಯೇ ಈ ವಿಭಾಗವೂ ನೆಲಕಚ್ಚಿದೆ. ಬಹುಪಾಲು ದುಡಿದು ತಿನ್ನುವ ಬಡ ಕೂಲಿಕಾರರೇ ಇರುವ ಸಂಘಗಳ ಸದಸ್ಯರು ದೈನಂದಿನ ದುಡಿಮೆಯನ್ನು ಕಳೆದುಕೊಂಡಿದ್ದಾರೆ. ಪ್ರತಿನಿತ್ಯದ ಒಂದು ಹೊತ್ತಿನ ಕೂಳಿಗೂ ಪರದಾಡುವ ಸ್ಥಿತಿಗೆ ಎಷ್ಟೋ ಕುಟುಂಬಗಳು ತಲುಪಿವೆ. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಇವರು ಪಡೆದ ಸಾಲಕ್ಕೆ 18 ರಿಂದ 24 % ವರೆಗೆ ಚಕ್ರಬಡ್ಡಿ ಹಾಕುತ್ತಾರೆ. ಇದು ಶೋಷಣೆಯ ಪರಮಾವಧಿ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆ.ಎಮ್.ಎಸ್.) ಮತ್ತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿ.ಐ.ಟಿ.ಯು.) ಪರವಾಗಿ ಹೇಳುತ್ತಿದ್ದೇವೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಾಲ ವಸೂಲಾತಿಗೆ ಒತ್ತಡ ಹಾಕದಂತೆ ಭಾರತೀಯ ರಿಜರ್ವ ಬ್ಯಾಂಕ್ ಈಗಾಗಲೇ ತನ್ನ ಆದೇಶ ನೀಡಿದೆಯಾದರೂ ಅದರ ಉಲ್ಲಂಘನೆಯಾಗುತ್ತಿರುವುದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಸಿ.ಐ.ಟಿ.ಯು. ನ ಗಮನದಲ್ಲಿದೆ. ಇದರ ಜೊತೆಯೇ ಕೇಂದ್ರ ಸರಕಾರ ಮತ್ತು ಭಾರತೀಯ ರಿಜರ್ವ್ ಬ್ಯಾಂಕ್‍ಗಳು ಬಾಹ್ಯೋಪಚಾರದ ಹೇಳಿಕೆಯನ್ನು ಕೊಟ್ಟಂತಿರುವುದು ಸರ್ವೋಚ್ಛ ನ್ಯಾಯಾಲಯದ ಮುಂದೆ ಇರುವ ಪ್ರಕರಣವೊಂದರಲ್ಲಿ ಸಾಲಿಸಿಟರ್ ಜನರಲ್‍ರವರ ಹೇಳಿಕೆಯ ಮೂಲಕ ಸಾಬೀತಾಗಿದೆ. ಸಾಲದ ಮರುಪಾವತಿ ಮುಂದೂಡಲು ಕೋರುವ ಸಾಲಗಾರರೇ ಅದಕ್ಕೆ ಸೂಕ್ತ ಬಡ್ಡಿ ತೆರಬೇಕಾಗುತ್ತದೆ ಎಂಬರ್ಥದ ಮಾತುಗಳನ್ನು ಸನ್ಮಾನ್ಯ ಶ್ರೀ ತುಷಾರ್ ಮೆಹ್ತಾ ಸಾಲಿಸಿಟರ್ ಜನರಲ್ ರವರು ಸುಪ್ರಿಂಕೋರ್ಟಿನ ಮುಂದೆ ಹೇಳಿದ್ದಾರೆ. ಇದೊಂದು ಗಂಭೀರ ವಿಷಯವಾಗಿದ್ದು ಸರಕಾರ ಇದರಲ್ಲಿ ತಕ್ಷಣ ಮಧ್ಯ ಪ್ರವೇಶ ಮಾಡಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಸಿ.ಐ.ಟಿ.ಯು. ಒತ್ತಾಯಿಸುತ್ತವೆ. ಇಲ್ಲವಾದಲ್ಲಿ ಈ ಕಂತು ಮುಂದೂಡಿಕೆಯ ಅವಕಾಶದಿಂದ ಯಾವ ಪ್ರಯೋಜನವೂ ಆಗದೇ ಬಾಣಲೆಯಿಂದ ಬೆಂಕಿಗೆ ದೂಡಿದಂತಾಗುತ್ತದೆ.
ದೊಡ್ಡ ಉದ್ದಿಮೆದಾರರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವ ಸರಕಾರವು ಬಡ ಕೂಲಿಕಾರ, ದುಡಿದು ತಿನ್ನುವ ಮಹಿಳೆಯರ ನೆರವಿಗೆ ಧಾವಿಸುವ ಅಗತ್ಯವಿದೆ. ಇದು ಯಾವುದೇ ಸರಕಾರ ಮಾನವೀಯ ನೆಲೆಯಲ್ಲಿ ನಿಭಾಯಿಸಬೇಕಾದ ಕನಿಷ್ಟ ಹೊಣೆಗಾರಿಕೆ ಎಂದು ಸರಕಾರಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಸಿ.ಐ.ಟಿ.ಯು. ಹೇಳಬಯಸುತ್ತವೆ.
ಕೊವಿಡ್ ಪರಿಹಾರವೆಂದು ಮಾನ್ಯ ಹಣಕಾಸು ಮಂತ್ರಿಗಳು ಘೋಷಿಸಿದ ಇಪ್ಪತ್ತು ಲಕ್ಷ ಕೋಟಿಯ ಪ್ಯಾಕೇಜ್ ನಲ್ಲಿ ನೈಜ ಪರಿಹಾರದ ಪಾಲು ಕನಿಷ್ಟವಾಗಿದೆ. ಸ್ವ ಸಹಾಯ ಸ್ತ್ರೀ ಶಕ್ತಿ ಸಂಘಟನೆಗಳ ಮಹಿಳೆಯರ ಸಾಲ ಮತ್ತು ಬಡ್ಡಿ ಮನ್ನಾ ಮಾಡಲು ಅಗತ್ಯವಾದ ಹಣಕಾಸಿನ ನೆರವನ್ನು ಸರಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತೇವೆ.
ಬೇಡಿಕೆಗಳು.
- ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಮಹಿಳೆಯರು, ಬ್ಯಾಂಕುಗಳು, ಮೈಕ್ರೋ ಫೈನಾನ್ಸ್ ಮತ್ತಿತರ ಕಿರುಸಾಲ ಸಂಸ್ಥೆಯಲ್ಲಿ ಪಡೆದಿರುವ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಬೇಕು.
- ಮಹಿಳೆಯರನ್ನು ಸಾಲದ ಕಂತು ಕಟ್ಟಲು ಹಿಂಸಿಸುತ್ತಿರುವ ಬ್ಯಾಂಕ್ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಬೇಕು.
- ಸಾಲಗಳ ಮೇಲಿನ ಬಡ್ಡಿಯನ್ನು 75% ಕೇಂದ್ರ ಸರ್ಕಾರ ಹಾಗೂ 25% ರಾಜ್ಯ ಸರ್ಕಾರಗಳು ಭರಿಸಬೇಕು. ಇದಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲವನ್ನು ಕೇಂದ್ರ ಸರ್ಕಾರವು ಕೂಡಲೇ ಬಿಡುಗಡೆ ಮಾಡಬೇಕು.
- ಸರಕಾರವು ತಕ್ಷಣ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಹೊಸ ಸಾಲವನ್ನು ಮಂಜೂರು ಮಾಡಲು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಆದೇಶ ನೀಡಬೇಕು.
- ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ತರಬೇತಿ, ಕಚ್ಚಾ ಪದಾರ್ಥಗಳು ಹಾಗೂ ಮಾರಾಟದ ವ್ಯವಸ್ಥೆ ಮಾಡಬೇಕು.
ವಿಶ್ವಾಸದೊಂದಿಗೆ,
ಯಮುನಾ ಗಾಂವ್ಕರ ರತ್ನದೀಪಾ ಮೊಕಾಶಿ
ಮಂಜುಳಾ ಕಾಣಕೋಣಕರ ತಾರಾ ನಾಯ್ಕ ಮಾಯಾ ಕಾಣೇಕರ
