nagesh hegde,s prajavani colume- ಸೋಂಕುಮಾರಿಯತ್ತ ಸಾವಿರ ಬಾಣಗಳು

ಕೊರೊನಾಕ್ಕೆ ಔಷಧ ಹುಡುಕುವ ಪೈಪೋಟಿಯಲ್ಲಿ ಇತಿಹಾಸ, ಭೂಗೋಲ, ಗಣಿತ, ಸಮಾಜವಿಜ್ಞಾನ, ಸಂಖ್ಯಾವಿಜ್ಞಾನ ಎಲ್ಲ ಜ್ಞಾನಶಾಖೆಗಳನ್ನೂ ತಡಕುತ್ತ ರಣರಂಗಕ್ಕೆ ಧುಮುಕಿದವರ ಬಗ್ಗೆ ಇಂದಿನ ‘ಪ್ರಜಾವಾಣಿ’ಯಲ್ಲಿ ಬಂದ ನನ್ನ ಬರಹ ಇಲ್ಲಿದೆ: [ಕೆಳಗಿನ ಚಿತ್ರದಲ್ಲಿ ‘ಕುದುರೆಲಾಳದ ಏಡಿ’ಯಿಂದ ನೀಲಿರಕ್ತವನ್ನು ಬಸಿಯುತ್ತಿರುವ ದೃಶ್ಯವಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಕೊನೆಯಲ್ಲಿ ಕೊಟ್ಟಿದ್ದೇನೆ].

ಜೂಜಿನ ಕುದುರೆಗಳಂತೆ ಜಗತ್ತಿನ ಸುಮಾರು 150 ಔಷಧ ಸಂಸ್ಥೆಗಳು ಕೊವಿಡ್ ಲಸಿಕೆಯನ್ನು ಶೋಧಿಸುವ ಸ್ಪರ್ಧೆಯಲ್ಲಿ ಮೂರನೆಯ ಸುತ್ತಿಗೆ ಬರುತ್ತಿವೆ. ಈ ಪೈಪೋಟಿಯಲ್ಲಿ ‘ಕುದುರೆಲಾಳದ ಏಡಿ’ ಎಂಬ ನಿಷ್ಪಾಪಿ ಜೀವಿಯೊಂದು ನಜ್ಜುಗುಜ್ಜಾಗುತ್ತಿರುವ ಕಿರುಕಥನ ಹೀಗಿದೆ:ಅಟ್ಲಾಂಟಿಕ್ ಮಹಾಸಾಗರದಲ್ಲಿ ‘ಕುದುರೆಲಾಳದ ಏಡಿ’ (horse shoe crab) ಎಂಬ ವಿಲಕ್ಷಣ ಜೀವಿಗಳು ವಾಸಿಸುತ್ತವೆ. ಬುಟ್ಟಿಗಾತ್ರದ ಕಡಲಾಮೆಯಂತೆ ಕಾಣುವ, ಒಂಬತ್ತು ಕಣ್ಣುಗಳಿರುವ, ಉದ್ದಬಾಲದ, ಲಾಳಾಕಾರದ ಈ ಪ್ರಾಣಿಗಳು ಹುಣ್ಣಿಮೆಯಂದು ಮೊಟ್ಟೆ ಇಡಲೆಂದು ಕಡಲತೀರಕ್ಕೆ ಬರುತ್ತವೆ. ಔಷಧ ಕಂಪನಿಗಳ ದಲ್ಲಾಳಿಗಳು ಅವನ್ನು ಹಿಡಿದು ತಂದು ಸಾಲಾಗಿ ಗೂಟಕ್ಕೆ ತೂಗು ಹಾಕಿ, ಹಾಲು ಕರೆಯುವಂತೆ ಅವುಗಳ ರಕ್ತನಾಳಕ್ಕೆ ಸೂಜಿ ಚುಚ್ಚಿ ನೀಲಿ ರಕ್ತವನ್ನು ಬಸಿದುಕೊಳ್ಳುತ್ತಾರೆ. ಒಂದೊಂದರಿಂದ ನೂರಿನ್ನೂರು ಮಿಲಿ ಲೀಟರ್ ತಿಳಿನೀಲ ರಕ್ತವನ್ನು ಬಸಿದುಕೊಂಡು ಮತ್ತೆ ಸಮುದ್ರಕ್ಕೆ ಬಿಡುತ್ತಾರೆ. ಸುಸ್ತಾದ ಅರ್ಧಕ್ಕರ್ದ ಏಡಿಗಳು ಈಜಲಾಗದೆ ಸಾಯುತ್ತವೆ.ಆ ತಿಳಿನೀಲ ರಕ್ತಕ್ಕೆ ಈಗ ಬೇಡಿಕೆ ಹೆಚ್ಚಿದೆ. ಏಕೆಂದರೆ ಕೋವಿಡ್-19ಕ್ಕೆ ಲಸಿಕೆ (ವ್ಯಾಕ್ಸೀನ್) ತಯಾರಿಸಿದಾಗ ಅದು ಅಪ್ಪಟ ಶುದ್ಧ ಇದೆಯೊ ಇಲ್ಲವೊ ನೋಡಲೆಂದು ಏಡಿಯ ರಕ್ತದ ಒಂದು ಹನಿ ಹಾಕಿದರೆ ಸಾಕು. ಲಸಿಕೆ ಅಶುದ್ಧವಾಗಿದ್ದರೆ, ಈ ನೀಲ ಹನಿ ತಕ್ಷಣ ಗರಣೆಗಟ್ಟುತ್ತದೆ. ಅಂಥ ಅಶುದ್ಧ ಲಸಿಕೆಯನ್ನು ಬಿಸಾಕಿ ಬೇರೆ ಲಸಿಕೆಯನ್ನು ತಯಾರಿಸಬೇಕು.ಕುದುರೆಲಾಳದ ಏಡಿಗಳ ಬದಲು ಲಸಿಕೆಶುದ್ಧಿಯ ಪರೀಕ್ಷೆಗೆ ಬದಲೀ ಕೆಮಿಕಲ್ ದ್ರಾವಣವನ್ನು ಬಳಸಿರೆಂಬ ಜೀವಿಪ್ರೇಮಿಗಳ ಕೂಗು ಯಾರ ಕಿವಿಗೂ ಬೀಳುತ್ತಿಲ್ಲ. ‘ಲಸಿಕೆ ತುರ್ತಾಗಿ ಬೇಕಾಗಿದೆ, ಈ ಸಮಯದಲ್ಲಿ ಅಡ್ಡಗಾಲು ಹಾಕಬೇಡಿ’ ಎಂದು ಅಮೆರಿಕ ಸರಕಾರವೇ ಹೇಳಿದೆ.

ಬಣವೆಗೆ ಬೆಂಕಿ ಬಿದ್ದಾಗ ನೀರು ದೂರದಲ್ಲಿದ್ದರೆ ಕೈಗೆ ಸಿಕ್ಕ ಮಣ್ಣು, ಸೊಪ್ಪು, ಸೆಗಣಿ, ಗಂಜಳ, ಬುಟ್ಟಿ, ಗೋಣಿ, ಬೋಗುಣಿ ಹೀಗೆ ಕಂಡಿದ್ದನ್ನೆಲ್ಲ ಎರಚುವಂತೆ ಕೊರೊನಾ ಜ್ವಾಲೆಯನ್ನು ತಗ್ಗಿಸಲು ಎರಚಾಟ ನಡೆದಿದೆ. ಔಷಧ ಶೋಧಕ್ಕೆಂದು ಭೂಗೋಲ, ಇತಿಹಾಸ, ಗಣಿತ, ಸಮಾಜವಿಜ್ಞಾನ, ಶರೀರವಿಜ್ಞಾನ ಎಲ್ಲ ವಿಭಾಗಗಳಿಗೂ ಲಗ್ಗೆ ಬಿದ್ದಿದೆ. ವೈದ್ಯವಿಜ್ಞಾನಿಗಳು ಇತಿಹಾಸವನ್ನು ಕೆದಕಿ ಹಿಂದಿನ ಎಲ್ಲ ಸಾಂಕ್ರಾಮಿಕಗಳಿಗೆ ಬಳಸಿದ ಲಸಿಕೆಗಳನ್ನು ಕೊರೊನಾ ಮೇಲೂ ಪ್ರಯೋಗಿಸಿದರು. ಏಡ್ಸ್‌ಗೆ ಬಳಸಿ ಕೈಬಿಡಲಾಗಿದ್ದ ಲೋಪಿನವಿರ್, ರಿಟೊನವಿರ್, ಎಬೊಲಾಕ್ಕೆ ಬಳಸಿದ ರೆಮೆಡಿಸಿವಿರ್, ಫಾವಿಲವಿರ್, ಫಾವಿಪಿರವಿರ್, ಕ್ಷಯರೋಗಕ್ಕೆ ಬಳಸಿದ ಬಿಸಿಜಿಯನ್ನೂ ಬಳಸಿ ನೋಡಿದರು. ಜೊತೆಗೆ ಬ್ಯಾಕ್ಟೀರಿಯಾ ವಿರುದ್ಧ ಬಳಸುತ್ತಿರುವ ಆಂಟಿಬಯಾಟಿಕ್‌ಗಳನ್ನೂ ಬಳಕೆಗೆ ತಂದರು (ನಿನ್ನೆಯಷ್ಟೆ ಕೋವಿಡ್ ಕಾಯಿಲೆಯಿಂದ ಮಲಗಿದ ಬ್ರಝಿಲ್ ರಾಷ್ಟ್ರಪತಿ ಬೊಲ್ಸೊನಾರೊ, ‘ನಾನಂತೂ ಮಾಜಿ ಕ್ರೀಡಾಪಟು; ಅಝಿತ್ರೊಮೈಸಿನ್ ಬಳಸಿಯೇ ವಾಸಿಯಾಗುತ್ತೇನೆ’ ಎಂದಿದ್ದಾರೆ.)

ಕೊರೊನಾಕುಸ್ತಿಯಲ್ಲಿ ಗೆದ್ದ ಮಾಜಿ ರೋಗಿಗಳ ಶರೀರಕ್ಕೇ ಕೆಲವು ವಿಜ್ಞಾನಿಗಳು ಲಗ್ಗೆ ಹಾಕಿ ಅವರ ರಕ್ತದ ಪ್ಲಾಸ್ಮಾದಲ್ಲಿರುವ ಪ್ರತಿರೋಧಕ ಕಣಗಳ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಅತ್ತ, ಸಾವು ಶತಃ ಸಿದ್ಧ ಎನ್ನಿಸುವ ಹಂತದಲ್ಲಿರುವ ಅತಿಶ್ರೀಮಂತರನ್ನು ಜೀವಂತವಾಗಿ ಹಿಮಪೆಟ್ಟಿಗೆಯಲ್ಲಿ ಹೂಳುವ ವ್ಯವಸ್ಥೆ ಮಾಡಿರುವುದಾಗಿ ಅಮೆರಿಕದ ಅಲ್ಕೊರ್ ಕಂಪನಿ (alcor.org) ಘೋಷಿಸಿದೆ. ಮುಂದೆಂದಾದರೂ ಕೊರೊನಾಕ್ಕೆ ಪಕ್ಕಾ ಔಷಧ ಬಂದನಂತರ ಅವರನ್ನು ಹೊರಗೆತ್ತಿ ಬದುಕಿಸುವ ಆಶಾಭಾವನೆ ಅದರದ್ದು.ಅಂಥ ಮುಮ್ಮೊಗ ವ್ಯವಸ್ಥೆಗೆ ತದ್ವಿರುದ್ಧವಾಗಿ ಕೊರೊನಾದ ಹಿಮ್ಮೊಗ ಅಧ್ಯಯನವೂ ಜೋರಾಗಿ ನಡೆದಿದೆ. ಸಮಾಜವಿಜ್ಞಾನಿಗಳು ರೋಗ ಪ್ರಸರಣದ ವೀಕ್ಷಣೆ ಮಾಡಿ, ಯಾವ ಸಮುದಾಯದಲ್ಲಿ ಕೊರೊನಾ ಪ್ರಭಾವ ಹೇಗಿದೆ ಎಂದು ನೋಡಿ ತಂತಮ್ಮ ದೇಶದ ನೀತಿ ನಿರೂಪಣೆ ಮಾಡುತ್ತಿದ್ದಾರೆ.ಸ್ವೀಡನ್ ತನ್ನ ಪ್ರಜೆಗಳ ಮೇಲೆ ಯಾವ ನಿರ್ಬಂಧವನ್ನೂ ಹೇರದೇ ‘ಆದದ್ದಾಗಲಿ’ ಎಂದು ಅವಡುಗಚ್ಚಿ ನಿಂತಿದ್ದರೆ, ಅಲ್ಲೇ ಪಕ್ಕದ ಎಸ್ತೊನಿಯಾ ದೇಶ ಗಣಿತ ಸೂತ್ರಗಳ ಅಲ್ಗೊರಿದಮ್ ಬಳಸಿ ತನ್ನ ಡೇಟಾಬ್ಯಾಂಕಿನ ಗಣಿಗಾರಿಕೆ ನಡೆಸಿ ಪ್ರಜೆಗಳ ನಡವಳಿಕೆಯನ್ನು ನಿಯಂತ್ರಿಸುವ ಸೂತ್ರಗಳನ್ನು ಜಾರಿಗೆ ತಂದಿದೆ. ಅದರ ಯಶಸ್ಸನ್ನು ಆಧರಿಸಿ ಇಂದು ಪ್ರಪಂಚದಲ್ಲಿ ನೂರಾರು ಹ್ಯಾಕಥಾನ್ ಸ್ಪರ್ಧೆಗಳು ನಡೆಯುತ್ತಿವೆ. ನಮ್ಮಲ್ಲೂ ಮಾನವ ಸಂಪನ್ಮೂಲ ಇಲಾಖೆ ತೀರ ತಡವಾಗಿ ಎಚ್ಚೆತ್ತು ಯುವ ಹ್ಯಾಕರ್‌ಗಳಿಗೆ ಬಹುಮಾನದ ಆಮಿಷ ಒಡ್ಡಿ “ದೇಶದ ಅತಿಶಕ್ತಿಶಾಲಿ ಕಂಪ್ಯೂಟರ್ ಮೂಲಕ ಜಗತ್ತಿನ ಅತಿದೊಡ್ಡ ಡ್ರಗ್ ಹ್ಯಾಕಥಾನ್’’ ಸ್ಪರ್ಧೆಯನ್ನು ತಾನು ನಡೆಸುತ್ತಿರುವುದಾಗಿ ಘೋಷಿಸಿದೆ.

ಅತ್ತ ಇವೆಲ್ಲ ಆಗುತ್ತಿರುವಾಗ ಎಂಜಿನಿಯರ್‌ಗಳೇನು ಕೈಕಟ್ಟಿ ಕೂತಿರಬೇಕೆ? ರಷ್ಯದ ಅಧ್ಯಕ್ಷ ಪುತಿನ್ ನಿವಾಸದಲ್ಲಿ ಅವರೊಂದು ಸುರಸುಂದರ ಹಬೆಗೂಡನ್ನೇ ಸ್ಥಾಪಿಸಿದ್ದಾರೆ. ಅಧ್ಯಕ್ಷರ ಭೇಟಿಗೆ ಬರುವವರೆಲ್ಲ ಕಡ್ಡಾಯ ಈ ಸುರಂಗವನ್ನು ಹೊಕ್ಕು ಸೂಟ್‌ ಬೂಟ್ ಸಮೇತ ಹಬೆಸ್ನಾನ ಮಾಡಿ ಬರಬೇಕು.ಅವೆಲ್ಲ ಹೈಟೆಕ್ ವಿಧಾನಗಳಾದವು. ನಮ್ಮ ಗ್ರಾಮೀಣ ನಾಟಿ ಪಂಡಿತರು, ಹಕೀಮರು, ಸಿದ್ಧರು, ಮೂಲಿಕೆತಜ್ಞರೂ ಕೋವಿಡ್ ಕಡೆ ಕೋವಿ ತಿರುಗಿಸಿ ತಂತಮ್ಮ ಬುಲೆಟ್‌ಗಳನ್ನು ‘ವೈಜ್ಞಾನಿಕ ವಿಧಾನ’ದಲ್ಲಿ ರೋಗಿಗಳ ಮೇಲೆ ಪ್ರಯೋಗಿಸಲು ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ. ಬಲವಿದ್ದವರು ಮಾಧ್ಯಮಗಳಿಗೆ ಬಲ ತಾಕಿಸುತ್ತಿದ್ದಾರೆ. ಬಾಬಾ ರಾಮದೇವ್ ವಿರಚಿತ ‘ಕೊರೊನಿಲ್’ ನಾಟಕ ನಮಗೆಲ್ಲ ಗೊತ್ತೇ ಇದೆ. ಕೋವಿಡ್ ವಿರುದ್ಧ ತಮ್ಮದು ‘ಹಂಡ್ರೆಡ್ ಪರ್ಸೆಂಟ್ ವಾಸಿ ರಾಮಬಾಣ’ ಎಂದು ರಾಷ್ಟ್ರೀಯ ವೇದಿಕೆಯಲ್ಲಿ, ಅಂದರೆ ಅಸಂಖ್ಯ ಚಾನೆಲ್‌ಗಳಲ್ಲಿ ಏಕಕಾಲಕ್ಕೆ ಘಂಟಾಘೋಷ ಮಾಡಿ, ಕೊರೊನಿಲ್ ಉಡುಗೊರೆಯನ್ನು ಗಣ್ಯರಿಗೆ ವಿತರಿಸಿದರು. ಎಲ್ಲೆಡೆಯಿಂದ ಆಕ್ಷೇಪ ಬಂದಾಗ, ತಾನು ‘ಹಾಗೆ 100% ಹೇಳಲೇ ಇಲ್ಲ ’ ಎಂದು ಪಿಸುನುಡಿದರು.

ತಮಿಳುನಾಡಿನ ಸಿದ್ಧವೈದ್ಯರು ‘ಕಾಬಾಸುರ ಕುಡಿನೀರ್’ ಹೆಸರಿನ ಕಷಾಯವನ್ನು ಎರಡು ಆಸ್ಪತ್ರೆಗಳ ರೋಗಿಗಳ ಮೇಲೆ ಪ್ರಯೋಗಿಸಿ ನೋಡಿ ತಮ್ಮ ಸಿದ್ಧೌಷಧಕ್ಕೆ ಪ್ರಚಾರ ಪಡೆದರು. ಟಿಬೆಟನ್ ಔಷಧ ಪದ್ಧತಿ ‘ಸೋವಾ ರಿಗ್ಪಾ’ ಕೂಡ ವೇದಿಕೆ ಏರಿ ಸ್ವಯಂಗುಣಗಾನ ಮಾಡಿತು.ಇವೆಲ್ಲ ಖಾಸಗಿ ಪ್ರಯತ್ನವಾದರೆ ರಾಷ್ಟ್ರೀಯ ವೈದ್ಯಸಂಶೋಧನ ಮಂಡಳಿಯ (ICMR) ತ್ವರಿತಾಸ್ತ್ರವನ್ನೂ ಇಲ್ಲಿ ದಾಖಲಿಸಬೇಕು. ಈ ಮಂಡಳಿಯ ನೇತೃತ್ವದಲ್ಲಿ ಸುಮಾರು 12 ಸಂಸ್ಥೆಗಳು ವ್ಯಾಕ್ಸೀನ್ ತಯಾರಿಕೆಯಲ್ಲಿ ಜಾಗತಿಕ ಪೈಪೋಟಿಗೆ ಇಳಿದಿವೆ. ಮಂಡಳಿಯ ಮುಖ್ಯಸ್ಥರು ಕಳೆದ ವಾರ ಒಂದು ಸುತ್ತೋಲೆಯನ್ನು ಹೊರಡಿಸಿ, ಆಗಸ್ಟ್ 15ರ ವೇಳೆಗೆ ಲಸಿಕೆ ಸಿದ್ಧವಾಗಬೇಕೆಂದೂ ಯಾವ ಅಡೆತಡೆಗಳನ್ನೂ ಲೆಕ್ಕಿಸದೆ ಕೆಲಸ ಮಾಡಬೇಕೆಂದೂ ಸೂಚನೆ ನೀಡಿದರು.ಈ ಸುತ್ತೋಲೆ ಸೋರಿಕೆಯಾಗಿ ಕೆಲವರಿಗೆ ಅದು ಕೆಟ್ಟ ಕೀವಿನಂತೆ ಕಂಡಿತು. ವಿಜ್ಞಾನಿಗಳ ವಲಯದಲ್ಲಿ ರಾಷ್ಟ್ರವ್ಯಾಪಿ ಟೀಕೆ ಮತ್ತು ಪ್ರತಿಭಟನೆಗಳೆದ್ದವು. ಹೀಗೆ ಡೆಡ್ಲೈನ್ ಹಾಕುವುದೇ ಔಷಧ ಸಂಹಿತೆಗೆ ವಿರುದ್ಧವೆಂದೂ ಅವಸರದಲ್ಲಿ ಲಸಿಕೆ ಬಿಡುಗಡೆ ಅಪಾಯವೆಂದೂ ಎಚ್ಚರಿಕೆ ಕೊಟ್ಟರು.

ರಹಸ್ಯದಲ್ಲಿ ಉತ್ಪಾದಿಸಿ, ಅವಸರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ದಾರುಣ ಘಟನೆಗಳಿಗೆ ಕಾರಣವಾದ ಔಷಧ, ವ್ಯಾಕ್ಸೀನ್‌ಗಳ ಉದ್ದ ಇತಿಹಾಸವೇ ಇದೆ. ನಮ್ಮಲ್ಲಂತೂ ಜನಸಂಖ್ಯಾ ನಿಯಂತ್ರಣಕ್ಕೆಂದು ಕ್ವಿನಾಕ್ರೈನ್, ಡೆಪೊ ಪ್ರೊವೆರಾ, ಗರ್ಭದ ಕೊರಳಿನ ಕ್ಯಾನ್ಸರಿಗೆ HPV ವ್ಯಾಕ್ಸಿನ್ (ಗರ್ಡಾಸಿಲ್) ಮುಂತಾದ ಸಾಲುಸಾಲು ಉದಾಹರಣೆಗಳಿವೆ.ಔಷಧ ಹುಡುಕುವ ಕುದುರೆ ರೇಸಿನಲ್ಲಿ ಆ ಬಡಪಾಯಿ ಕುದುರೆಲಾಳದ ಏಡಿ ಮತ್ತೆ ನಮಗೆ ನೆನಪಾಗಬೇಕು. ಲಸಿಕೆ ಪರೀಕ್ಷೆಗೆಂದು ಸಾಕಷ್ಟು ಹಣದ ಆಮಿಷ ಒಡ್ಡಿ ಬಡಜನರನ್ನೇ ಪ್ರಯೋಗಪಶುಗಳನ್ನಾಗಿ ಮಾಡಲಾಗುತ್ತದೆ. ಅವರೆಲ್ಲ ಸುರಕ್ಷಿತವಾಗಿ ಬದುಕಿ ಬಾಳುವಂತೆ ಹುಷಾರಾಗಿ ಪ್ರಯೋಗ ಮಾಡಬೇಕು ತಾನೆ?ಈಗ ಹೇಳಿ: ಲಸಿಕೆ ಶೋಧಕ್ಕೆ ಅವಸರ ಬೇಡವೆಂದು ವಿಜ್ಞಾನಿಗಳು ದನಿ ಎತ್ತಿದ್ದರಿಂದಾಗಿ ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ಪ್ರಧಾನಿಯವರಿಂದ ಘೋಷಣೆ ಹೊರಡಿಸಬೇಕೆಂದಿದ್ದವರ ಕನಸು ಭಂಗವಾಯಿತೊ ಅಥವಾ ಮುಂದೆಂದೊ ಅವರ ಮುಖಭಂಗವಾಗುವುದನ್ನು ತಪ್ಪಿಸಿದಂತಾಯಿತೊ?

[ಚಿತ್ರದ ವಿವರ: ಕುದುರೆಲಾಳದ ಏಡಿಯಿಂದ ನೀಲಿರಕ್ತದ ಸಂಗ್ರಹ. ‘ಏಡಿ’ ಎಂಬ ಹೆಸರು ಇದಕ್ಕಿದೆಯಾದರೂ ಈ ಪ್ರಾಣಿ ನಿಜಕ್ಕೂ ಚೇಳು ಅಥವಾ ಜೇಡರ ಗುಂಪಿಗೆ ಸೇರಿದ್ದಾಗಿದೆ. ಪ್ರತಿ ವರ್ಷ ಸುಮಾರು 5 ಲಕ್ಷ ಮುಗ್ಧಜೀವಿಗಳಿಂದ ರಕ್ತಸಂಗ್ರಹ ಮಾಡಲಾಗುತ್ತದೆ. ಕಪ್ಪು ಬಿಳುಪು ಚಿತ್ರದಲ್ಲಿರುವ ಏಡಿಯ ಕವಚದ ಗುಡ್ಡಗಳ ಚಿತ್ರವನ್ನು ‘ದಿ ಅಟ್ಲಾಂಟಿಕ್’ ಪತ್ರಿಕೆಯಿಂದ ಪಡೆದಿದ್ದೇನೆ. ಹಿಂದಿನ ವರ್ಷಗಳಲ್ಲಿ ರಕ್ತಹಿಂಡಲು ತಂದ ಏಡಿಗಳಲ್ಲಿ ಸುಮಾರು 30%ರಷ್ಟು ಸಾಯುತ್ತಿದ್ದವು. ಈಗ ಕೊರೊನಾ ಲಸಿಕೆಯ ಪೈಪೋಟಿಯಲ್ಲಿ ಸೆರೆಸಿಗುವ ಏಡಿಗಳ ಸಂಖ್ಯೆಯೂ ಹೆಚ್ಚಾಗಿದೆ. ಅರ್ಧಕ್ಕಿಂತ ಹೆಚ್ಚು ಏಡಿಗಳು ಸಾಯುತ್ತಿವೆ. ಹೆಚ್ಚಿನ ಮಾಹಿತಿಗೆ horse shoe crab ಎಂದು ಗೂಗಲ್‌ ಮಾಡಬಹುದು.]

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *