ಹಿರಿಯ ಪತ್ರಕರ್ತ ದಿನೇಶ್ ಅಮ್ಮಿನಮಟ್ಟು ಬರೆದ ಉತ್ತರಪ್ರದೇಶದ ದುಬೆ ಕತೆ!

ವಿಕಾಸ್ ದುಬೆ ಎಂಬ ಪಾತಕಿಯ ಕಾರಣದಿಂದ ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದ ಅಪರಾಧ ಜಗತ್ತು ಸುದ್ದಿಯಲ್ಲಿದೆ. ಪತ್ರಕರ್ತನಾಗಿ ಆ ರಾಜ್ಯದ ಅಪರಾಧ ಜಗತ್ತನ್ನು ಸ್ವಲ್ಪ ಹತ್ತಿರ, ಸ್ವಲ್ಪ ದೂರದಿಂದ ನಾನು ನೋಡಿದ್ದೇನೆ.2002ರಿಂದ 2012ರ ವರೆಗಿನ ಹತ್ತು ವರ್ಷಗಳಲ್ಲಿ ಉತ್ತರಪ್ರದೇಶದ ಮೂರು ವಿಧಾನಸಭಾ ಚುನಾವಣೆ ಮತ್ತು ಒಂದು ಲೋಕಸಭಾ ಚುನಾವಣೆಯ ಸಮೀಕ್ಷೆಗಾಗಿ ಆ ರಾಜ್ಯದ ಯೋಗಿಯ ಗೋರಖ್ ಪುರದಿಂದ ಹಿಡಿದು, ಪೂಲನ್ ದೇವಿಯ ಚಂಬಲ್ ಕಣಿವೆ ವರೆಗೆಗೆ ಮೂರು ಮೂರು ಸುತ್ತು ಹೊಡೆದಿದ್ದೇನೆ. 2002ರಲ್ಲಿ ಮೊದಲ ಬಾರಿ ಆ ರಾಜ್ಯಕ್ಕೆ ಹೋಗಿದ್ದಾಗ ಮುಖ್ಯವಾಗಿ ಪೂರ್ವ ಉತ್ತರ ಪ್ರದೇಶದ ಅಪರಾಧ ಜಗತ್ತು ನನ್ನನ್ನು ಬೆಚ್ಚಿ ಬೀಳಿಸಿತ್ತು. ಈ ರಾಜ್ಯವನ್ನು ಯಾರೂ ಸುಧಾರಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆಯಾಗಿತ್ತು. ಆಗ ಅಲ್ಲಿ ಅಧಿಕಾರದಲ್ಲಿದ್ದದ್ದು ಬಿಜೆಪಿ. ರಾಜನಾಥ್ ಸಿಂಗ್ ಮುಖ್ಯಮಂತ್ರಿಯಾಗಿದ್ದ ಆ ಕಾಲದಲ್ಲಿಯೇ ವಿಕಾಸ್ ದುಬೆ ಎಂಬ ಈ ಪಾತಕಿ ಬಿಜೆಪಿ ಶಾಸಕನನ್ನು ಅಟ್ಟಿಸಿಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿಯೇ ಸಾಯಿಸಿದ್ದು. ಆದರೆ 2012ರ ಚುನಾವಣೆ ಕಾಲದ ಉತ್ತರಪ್ರದೇಶ ನನ್ನ ಅಭಿಪ್ರಾಯವನ್ನು ಬದಲಾಯಿಸಿತ್ತು.

2007ರಿಂದ 2012ರ ವರೆಗೆ ಅಲ್ಲಿ ಅಧಿಕಾರದಲ್ಲಿದದ್ದು ಬಿಎಸ್ ಪಿ. ಮಾಯಾವತಿ ಅವರ ವಿರುದ್ಧ ಭ್ರಷ್ಟಾಚಾರ, ಸ್ವಜನಪಕ್ಷ ಪಾತ, ಸರ್ವಾಧಿಕಾರಿ ಧೋರಣೆ,ಅಭಿವೃದ್ಧಿಯ ಯೋಜನೆಗಳ ಬಗೆಗಿನ ನಿರ್ಲಕ್ಷ್ಯ ಮೊದಲಾದ ಆರೋಪಗಳೇನೇ ಇದ್ದರೂ, ಉತ್ತರಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿದ್ದದ್ದು ಮಾತ್ರ ಮಾಯಾವತಿ ಕಾಲದಲ್ಲಿ. ಕುಂಡಾದ ಗೂಂಡಾನೆಂದೇ ಕುಖ್ಯಾತಿ ಪಡೆದಿದ್ದ ರಾಜು ಭಯ್ಯನ ಕೈಗೆ ಬೇಡಿ ಹಾಕಿ ಮೆರವಣಿಗೆ ಮಾಡಿದ್ದರು ಬೆಹನ್ ಜಿ. ಬಿಜೆಪಿ-ಎಸ್ ಪಿಯವರೆಲ್ಲರೂ ಅವನ ಮುಂದೆ ನಡು ಬಗ್ಗಿಸಿ ನಿಂತವರೇ ಆಗಿದ್ದರು. 2002ರ ಬಿಜೆಪಿ ಸಂಪುಟದಲ್ಲಿ ರಾಜು ಭಯ್ಯಾ ಸಚಿವನಾಗಿದ್ದ.2002ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ಉತ್ತರಪ್ರದೇಶದ ಚುನಾವಣಾ ಸಮೀಕ್ಷೆಯ ನನ್ನ ಮೊದಲ ವರದಿಯ ಮೊದಲ ಸಾಲುಗಳು ಹೀಗಿತ್ತು:

“… ದೇಶಕ್ಕೆಲ್ಲ ಒಂದು ಕಾನೂನು, ಉತ್ತರ ಪ್ರದೇಶದಲ್ಲಿ ಮಾತ್ರ ಇನ್ನೊಂದು. ಕೊಲೆ, ಸುಲಿಗೆ, ಅಪಹರಣ,ಡಕಾಯಿತಿ ಇಲ್ಲಿ ಅಪರಾಧಗಳಲ್ಲ, ಅದು ನ್ಯಾಯದಾನ.. ಅದನ್ನು ನಡೆಸುವವರು ಅಪರಾಧಿಗಳಲ್ಲ, ‘ಭಯ್ಯಾ ಭಾಯಿ’ಗಳು. ಇಲ್ಲಿನ ಅಪರಾಧ ಜಗತ್ತು ರಾಜಕೀಯ ಭಾಷೆಯಲ್ಲಿ ಮಾತನಾಡುತ್ತದೆ, ರಾಜಕೀಯಕ್ಕೆ ಅಪರಾಧ ಜಗತ್ತಿನ ಭಾಷೆ ಅರ್ಥವಾಗುತ್ತದೆ. ಈ ಅನೈತಿಕ ಸಂಬಂಧ ಪ್ರಜಾಪ್ರಭುತ್ವವನ್ನು ಅಪಹಾಸ್ಯದ ಮಟ್ಟಕ್ಕೆ ತಂದು ನಿಲ್ಲಿಸಿದೆ.ಪೂರ್ವ ಉತ್ತರಪ್ರದೇಶವೇ ಒಂದು ದೊಡ್ಡ ಭೂಗತ ಜಗತ್ತು. ಕಾಶಿ ವಿಶ್ವನಾಥ ಇಲ್ಲಿ ಮೂಕಪ್ರೇಕ್ಷಕ, ಈಗಾಗಲೇ ಮಲಿನಗೊಂಡಿರುವ ಗಂಗೆ ಇನ್ನಷ್ಟು ಪಾಪ ತೊಳೆಯುವ ಸ್ಥಿತಿಯಲ್ಲಿ ಇಲ್ಲ. ಅಜಮಘಡ, ಗಾಜಿಪುರ, ಮವು, ಅಂಬೇಡ್ಕರ್ ನಗರದಂತಹ ಕುಖ್ಯಾತ ಜಿಲ್ಲೆಗಳ ಈ ಪ್ರದೇಶದ 30 ವಿಧಾನಸಭಾ ಕ್ಷೇತ್ರಗಳಲ್ಲಿ ವಾಜಪೇಯಿ-ಸೋನಿಯಾ ಹೆಸರು ಬಿಡಿ, ಮುಲಾಯಂ,ಮಾಯಾವತಿ ಹೆಸರಿನ ಚೆಕ್ ಗಳೂ ಬೌನ್ಸ್ ಆಗುತ್ತದೆ. ಇಲ್ಲಿ ಏನಿದ್ದರೂ ರಾಜು ಬಯ್ಯಾ, ಮುಕ್ತರ್ ಭಾಯಿ, ಬೃಜೇಶ್ ಸಿಂಗ್, ರಮಾಕಾಂತ್ ಯಾದವ್ ಮೊದಲಾದ ರಾಬಿನ್ ಹುಡಗಳೇ ಜನನಾಯಕರು.ಕೆಲವು ಮೈಲುಗಳಾಚೆ ನೇಪಾಳ ಗಡಿ, ಗಂಡಕ್ ನದಿ ದಾಟಿದರೆ ಬಿಹಾರ. ಇಂತಹ ನೆರೆಮನೆಗಳನ್ನು ಹೊಂದಿದ ಮೇಲೆ ರಕ್ಷಣೆಗೆ ಕೋಟೆ ಯಾಕೆ ಕಟ್ಟಿಕೊಳ್ಳಬೇಕು? ಮತಗಟ್ಟೆ ವಶಕ್ಕೆ ಕುಖ್ಯಾತಿ ಪಡೆದಿರುವ ಗಾಜಿಪುರ ಕ್ಷೇತ್ರದಲ್ಲಿ 1993 ಲೋಕಸಭಾ ಚುನಾವಣೆ ಹೊರತುಪಡಿಸಿ ಉಳಿದ ಚುನಾವಣೆಗಳಲ್ಲಿ ಹೆಚ್ಚಿನ ಮತದಾರರು ಮತಗಟ್ಟೆಗೆ ಹೋಗಿಲ್ಲ. 1993ರ ಚುನಾವಣೆಯಲ್ಲಿ ತಾವು ಮತದಾನ ಮಾಡಿದ್ದನ್ನು ಅಲ್ಲಿನ ಚುನಾವಣಾ ಅಧಿಕಾರಿಗಳು ಈಗಲೂ ನೆನಪು ಮಾಡಿಕೊಳ್ಳುತ್ತಾರೆ….”

ಆ ಸುತ್ತಾಟದಲ್ಲಿ ನನಗೆ ಮತದಾನದ ಹಿಂದಿನ ದಿನ ಸಿಕ್ಕಿದ್ದ ಹಿರಿಯ ಪತ್ರಕರ್ತ ಅನಿಲ್ ಯಾದವ್ ವಾರಣಾಸಿಯ ಹೊಟೇಲ್ ರೂಮಲ್ಲಿ ಕೂತು ವಿಸ್ಕಿಯ ಗ್ಲಾಸ್ ಎತ್ತಿ ‘ಚಿಯರ್ಸ್ ಎಂದವನೇ ‘’ ಆಜ್ ಕತಲ್ ಕಾ ರಾತ್’’ ಎಂದು ಮೊದಲ ಗುಟುಕು ಚಪ್ಪರಿಸಿದ್ದ. ….ಮತದಾನದ ಹಿಂದಿನ ದಿನವನ್ನು ಉತ್ತರಪ್ರದೇಶದ ಜನ ‘ಕತಲ್ ಕಾ ರಾತ್’ ಎನ್ನುತ್ತಾರೆ. ಆ ರಾತ್ರಿ ಬಾಹುಬಲ ಹೊಂದಿರುವ ಅಭ್ಯರ್ಥಿಗಳು ತಾವೆ ಮತಗಟ್ಟೆಗೆ ಹೋಗಿ ತಮ್ಮ ಪರವಾಗಿ ತಾವೇ ಹಾಕಿದ ಮತಗಳನ್ನು ಮತಪೆಟ್ಟಿಗೆಗಳಲ್ಲಿ ತುಂಬುತ್ತಿದ್ದರಂತೆ. ಮರುದಿನ ಮತದಾರರು ಮತಗಟ್ಟೆಗೆ ಹೋಗಿದ್ದಾಗ ಅವರ ಮತಗಳು ಚಲಾವಣೆಯಾಗಿರುತ್ತಿತ್ತು…. ಆ ವಿಧಾನಸಭಾ ಚುನಾವಣೆಯ ಕಾಲದಲ್ಲಿ ನಾನು ಪೂರ್ವ ಉತ್ತರಪ್ರದೇಶದ ಮವು ಮತ್ತು ಪ್ರತಾಪ್ ಘಡ್ ಎಂಬ ಎರಡು ಕುಖ್ಯಾತ ಕ್ಷೇತ್ರಗಳಿಗೆ ಹೋಗಿದ್ದೆ. ಮವು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಮುಕ್ತರ್ ಅನ್ಸಾರಿ ಮನೆ ಮುಂದೆ ಹೋದರೆ ಅಲ್ಲಿ ಜನರ ಉದ್ದನೆಯ ಸಾಲು. ಅವರೆಲ್ಲರ ಕೈಯಲ್ಲಿ ಮೆಡಿಕಲ್ ಬಿಲ್ ಗಳು. ಆ ಬಿಲ್ ಗಳನ್ನು ತೋರಿಸಿದರೆ ಅನ್ಸಾರಿ ಚೇಲಾಗಳು ಅವರಿಗೆ ನೂರು ರೂಪಾಯಿ ಕೊಡುತ್ತಿದ್ದರು. ಅನ್ಸಾರಿ ಮನೆಯೊಳಗೆ ಹೋದರೆ ಅಲ್ಲಿದ್ದವರನ್ನು ತೋರಿಸಿ ಅವರೆಲ್ಲ ಯಾರು ಎಂದು ನನ್ನ ಜೊತೆಯಲ್ಲಿದ್ದವನನ್ನು ಕೇಳಿದರೆ, ಅವರೆಲ್ಲರೂ ಅನ್ಸಾರಿ ಬೆಂಬಲ ಕೇಳಲು ಬಂದಿರುವ ಸುತ್ತಲಿನ ಕ್ಷೇತ್ರಗಳ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಎಂದಿದ್ದಅಲ್ಲಿಂದ ನನ್ನ ಪ್ರಯಾಣ ಕುಂಡಾ (ಪ್ರತಾಪಘಡ)ಕ್ಕೆ. ಅಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದವ ಆಗಿನ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿದ್ದ ಇನ್ನೊಬ್ಬ ಭೂಗತ ಪಾತಕಿ ರಘುನಾಥ್ ಪ್ರತಾಪ್ ಸಿಂಗ್ ಯಾನೆ ರಾಜು ಭಯ್ಯಾ. ತನ್ನ ವಿರೋಧಿಗಳನ್ನು ಮನೆ ಎದುರಿಗಿರುವ ಕೊಳದಲ್ಲಿನ ಮೊಸಳೆಗಳಿಗೆ ಎಸೆಯುತ್ತಿದ್ದ ಎಂಬ ಕತೆಯೂ ಸೇರಿದಂತೆ ಆತನ ಕ್ರೌರ್ಯದ ಬಗ್ಗೆ ರೋಚಕ ದಂತಕತೆಗಳಿದ್ದವು.ಆತನ ಚುನಾವವಣಾ ಪ್ರಚಾರದ ಸಭೆಗಳು ಬೆಂಬಲಿಗರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪ್ರಾರಂಭವಾಗುತ್ತಿದ್ದವು. ಆತನ ಕಪ್ಪು ಬೊಲೇರಾ ಹೋಗುತ್ತಿದ್ದಾಗ ಬೀದಿ ಬದಿಯಲ್ಲಿದ್ದ ಜನ “ಭಯ-ಭಕ್ತಿ’ಯಿಂದ ತಲೆ ಬಾಗುತ್ತಿದ್ದರು..

ಇಡೀ ಕ್ಷೇತ್ರದಲ್ಲಿ ಎಲ್ಲಿಯೂ ಬೇರೆ ಪಕ್ಷಗಳ ಅಭ್ಯರ್ಥಿಗಳ ಬ್ಯಾನರ್-ಪೋಸ್ಟರ್ ಗಳಿರಲಿಲ್ಲ. ಎಲ್ಲಿ ನೋಡಿದರೂ ಆತನ ಚಿಹ್ನೆಯಾಗಿದ್ದ ‘ಕುರ್ಚಿ’ ಮಾತ್ರ ನೇತಾಡುತ್ತಿತ್ತು. ಆತ ಒಂದು ಸಭೆಯಲ್ಲಿ ಮಾತನಾಡುತ್ತಾ ‘’ ಮತದಾನದ ದಿನ ಯಾರಾದರೂ ಬಾಲ ಬಿಚ್ಚಿದರೆ ಕೈಕಾಲು ಮುರಿದು ಹಾಕುತ್ತೇನೆ’’ ಎಂದು ಬೆದರಿಕೆಯೊಡ್ಡಿದ್ದಾಗ ಜನ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದ್ದನ್ನು ನಾನೇ ಕಂಡಿದ್ದೆ.ಇವೆಲ್ಲ 2002ರ ವಿಧಾನಸಭಾ ಚುನಾವಣೆಯ ದಿನಗಳು. 2012ರ ವಿಧಾನಸಭಾ ಚುನಾವಣೆಗೆ ಹೋಗಿದ್ದಾಗ ನಾನು ಮವು ಮತ್ತು ಪ್ರತಾಪ್ ಘಡಕ್ಕೆ ಹೋಗಿರಲಿಲ್ಲ. ರಾತ್ರಿ ಹೊಟೇಲ್ ರೂಮಿನಲ್ಲಿ ಕೂತು ಪ್ರತಾಪ್ ಘಡದಲ್ಲಿ ಮಾಯಾವತಿಯವರು ಮಾಡಿದ್ದ ಭಾಷಣಗಳನ್ನು ಕೇಳುತ್ತಿದ್ದೆ.ಅಪರೂಪಕ್ಕೆ ಲಿಖಿತ ಭಾಷಣವನ್ನು ಪಕ್ಕಕ್ಕಿಟ್ಟು ಮಾತನಾಡಿದ್ದ ಮಾಯಾವತಿ ‘’ ಮತದಾನ್ ಕಾ ದಿನ ಯಹಾಂ ಕೋಯಿ ಬಿ ಗೂಂಡಾ ಗರ್ದಿ ಕಿಯಾ ತೋ ಉಸ್ ಕೋ ಉಲ್ಟಾ ಲಟಕಾ ದೂಂಗಾ “’ ಎಂದು ತೋರು ಬೆರಳೆತ್ತಿ ಎಚ್ಚರಿಕೆ ಕೊಟ್ಟಾಗ ಜನ ಚಪ್ಪಾಳೆ ತಟ್ಟುತ್ತಿದ್ದರು.

ಇದು ಹತ್ತು ವರ್ಷಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಆಗಿದ್ದ ಬದಲಾವಣೆ. 2012ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಿಯೂ ಮತಗಟ್ಟೆಗಳ ಮೇಲೆ ದಾಳಿ ಇಲ್ಲವೇ ಅಕ್ರಮಮತದಾನದ ದೂರುಗಳಾಗಲಿ ಹಣ-ಹೆಂಡ ಹಂಚಿದ ಆರೋಪಗಳು ಕೇಳಿ ಬಂದಿರಲಿಲ್ಲ. ಮತದಾನದ ಪ್ರಮಾಣ ಶೇಕಡಾ ಹನ್ನೆರಡರಷ್ಟು ಹೆಚ್ಚಿತ್ತು.2012ರ ಚುನಾವಣೆಯಲ್ಲಿ ಮಾಯಾವತಿ ಸೋತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂತು. ಈ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಯುಪಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಾ ಬಂದಿದೆ. ಅಖಿಲೇಶ್ ಯಾದವ್ ತಮ್ಮ ಪಕ್ಷವನ್ನು ಹೊಸದಾರಿಯಲ್ಲಿ ಮುನ್ನಡೆಸುವ ಪ್ರಯತ್ನ ಮಾಡಿದ್ದರೂ ಕೊನೆಗೆ ಸೋಲುಣ್ಣಬೇಕಾಯಿತು. ಅದರ ನಂತರ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ಯೋಗಿ ಅದಿತ್ಯನಾಥ್ ಮುಖ್ಯಮಂತ್ರಿಯಾಗಿ ಬಿಟ್ಟರು. ಈಗ ಮತ್ತೆ ಅಲ್ಲಿ ಗೂಂಡಾ ರಾಜ್ಯ ಶುರುವಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *