nagesh hegde on kannada news channels- ಸುದ್ದಿ ಚಾನೆಲ್‌ಗಳು ಏಡಿಗಳಂತೆ ಅಡ್ಡಡ್ಡ ಚಲಿಸುವುದೇಕೆ?

ನಿನ್ನೆ ಟಿವಿಯಲ್ಲಿ ಬಂದ ಒಂದು ಭೀಕರ ತಮಾಷೆಯ ಬಗ್ಗೆ ಕುಟುಕಿನ ಅವಲೋಕನ ಇದು.

‘ಪ್ರಜಾವಾಣಿ’ಯ ನಿನ್ನೆಯ ನನ್ನ ಅಂಕಣದ ಆರಂಭದಲ್ಲಿ ‘ಕುದುರೆಲಾಳದ ಏಡಿ’ಯ ಪ್ರಸ್ತಾಪ ಬಂದಿತ್ತು. ನಾಲ್ಕು ವಾಕ್ಯಗಳ ಪುಟ್ಟ ಕಥನ. ಕನ್ನಡದ ಸುದ್ದಿ ವಾಹಿನಿಯೊಂದು ಅದೇ ನಾಲ್ಕು ವಾಕ್ಯಗಳನ್ನೇ ಪದೇಪದೇ ಹೇಳುತ್ತ ಅರ್ಧ ಗಂಟೆಯ ರೋಚಕ ಕತೆಯೊಂದನ್ನು ಸಿದ್ಧಪಡಿಸಿತು. ಸಂಜೆಯಿಂದ ಅದರ ಭಯಂಕರ ಪ್ರೊಮೋವನ್ನು (ಕೆಳಗಿನ ಚಿತ್ರ) ನೋಡಿದವರೊಬ್ಬರು ನನಗೆ ಸೂಚನೆ ಕೊಟ್ಟರು.ಸಾಮಾನ್ಯವಾಗಿ, ರಾತ್ರಿ ಒಂಭತ್ತರ ಪ್ರೈಮ್ ಟೈಮ್ ಸುದ್ದಿಗೆಂದು ಮಾತ್ರ ಟಿವಿ ಹಚ್ಚುವ ನಾನು ಕುತೂಹಲಕ್ಕೆ ನಿನ್ನೆ ಎಂಟೂವರೆಗೇ ಈ ಚಾನೆಲ್ ನೋಡಿದೆ.ಅದು ನಿಜಕ್ಕೂ ಅವಿಸ್ಮರಣೀಯ ಅನುಭವವಾಗಿತ್ತು. ಅರ್ಧ ಗಂಟೆಯ ಆ ಕಾರ್ಯಕ್ರಮದಲ್ಲಿ ಮತ್ತೆ ಮತ್ತೆ ಹೇಳಿದ್ದು ಅವೇ ನಾಲ್ಕು ವಾಕ್ಯಗಳು:

“ಒಂಬತ್ತು ಕಣ್ಣುಗಳ, ನೀಲಿರಕ್ತದ ಏಡಿ ಅಟ್ಲಾಂಟಿಕ್ ಸಾಗರದ ಕಡಲಂಚಿಗೆ ಹುಣ್ಣಿಮೆಯಂದು ಬರುತ್ತದೆ. ಅದನ್ನು ಹಿಡಿದು ವೈದ್ಯವಿಜ್ಞಾನಿಗಳು ರಕ್ತವನ್ನು ಹೀರಿ ಔಷಧ ಪರೀಕ್ಷೆಗೆ ಬಳಿಸುತ್ತಾರೆ” ಇಷ್ಟೆ. ಅದನ್ನೇ ತಲೆ ಗಿಮ್ಮೆನ್ನುವಂಥ ರೋಷಾವೇಶದ ಧ್ವನಿಯಲ್ಲಿ ತಿರುಚಿ ಕಿರುಚಿ ಹೇಳುತ್ತ, ಕೆಲವು ತಪ್ಪು ಮಾಹಿತಿಗಳನ್ನೂ ತೂರಿಸುತ್ತ ವಿಷಯವನ್ನು ಜಾತ್ರೆಯ ತೇರಿನಂತೆ ಎಳೆಯುತ್ತ ಹೋದರು.ಮೂಲತಃ ಆ ಬಡಪಾಯಿ ಜೀವಿ ‘ಏಡಿ’ಯೇ ಅಲ್ಲ. ಅದು ಚೇಳು ಅಥವಾ ಜೇಡರ ವಂಶಕ್ಕೆ ಸೇರಿದ್ದು. ಅದಕ್ಕೆ ಬೇರೆ ಹೆಸರಿಲ್ಲ. ಹಾಗಾಗಿ ಅದನ್ನು ಏಡಿ ಎನ್ನಲಿ, ತಪ್ಪೇನಿಲ್ಲ. ಆದರೆ ಅಟ್ಲಾಂಟಿಕ್ ಸಾಗರದಲ್ಲಿ ಕಾಣದೇ ಇರುವ (ಹಿಂದೂ ಮಹಾಸಾಗರದ ಕ್ರಿಸ್ಮಸ್ ದ್ವೀಪದಲ್ಲಿನ ಕಡುಗೆಂಪು ಬಣ್ಣದ) ಅಸಲೀ ಏಡಿಗಳನ್ನು ಪದೇ ಪದೇ ತೋರಿಸಿದರು. ಮೂಲದಲ್ಲಿ ‘ಅಟ್ಲಾಂಟಿಕ್’ ಎಂಬ ಪದ ಇತ್ತಲ್ಲ? ಅದಕ್ಕೆಂದು ಟೈಟಾನಿಕ್ ಹಡಗಿನ ದುರಂತ ದೃಶ್ಯಗಳ ತುಣುಕನ್ನು ಅದಕ್ಕೆ ಸೇರಿಸಿದರು. ಏಕೆಂದರೆ ದುರಂತ ಸಂಭವಿಸಿದ್ದು ಅಟ್ಲಾಂಟಿಕ್ ಸಾಗರದಲ್ಲಿ. -ಎಲ್ಲಿಂದೆಲ್ಲಿಯ ಸಂಬಂಧ!

ಉದ್ದಕ್ಕೂ ಕಮೆಂಟರಿ ಅಂದರೆ ಅವೇ ಒಂಬತ್ತು ಪದಗಳು: ಒಂಬತ್ತು ಕಣ್ಣುಗಳ ಏಡಿ, ನೀಲಿ ರಕ್ತ, ಅಟ್ಲಾಂಟಿಕ್ ಸಾಗರ, ಹುಣ್ಣಿಮೆ ರಾತ್ರಿ.ಪೊದೆಗಳಿಂದ ಮೆಲ್ಲಗೆ ಕೊಂಬುಗಳನ್ನೆತ್ತಿ ಬರುತ್ತಿರುವ ನೂರಾರು ಕೆಂಪು ಏಡಿಗಳ ಅಸಂಬದ್ಧ ವಿಡಿಯೊ ತುಣುಕಿನ ಪದೇಪದೇ ಪ್ರದರ್ಶನ. ಜೊತೆಗೆ, ‘ಔಷಧ ತಯಾರಿಕೆಗೆ’ ಎಂಬ ತಪ್ಪು ಮಾಹಿತಿ. (ನೀಲಿರಕ್ತದಿಂದ ಔಷಧವನ್ನು ತಯಾರಿಸುವುದಿಲ್ಲ; ಬದಲಿಗೆ ರಕ್ತವನ್ನು ಔಷಧ ಪರೀಕ್ಷೆಗೆ ಬಳಸಲಾಗುತ್ತದೆ.) ಮತ್ತಷ್ಟು ಏರು ದನಿಯಲ್ಲಿ – ಒಂದು ಲೀಟರ್ ನೀಲಿರಕ್ತದ ಬೆಲೆ ‘ಬರೋಬ್ಬರಿ’ ಒಂಬತ್ತು ಸೊನ್ನೆಗಳಿರುವ (ಯಾವುದೋ) ಸಂಖ್ಯೆ…ಎದೆ ಝಲ್ಲೆನಿಸುವ ಸಂಗೀತ.

ಚಾನೆಲ್ಲಿನವರ ಅದೃಷ್ಟಕ್ಕೆ, ಲಾಳದ ಏಡಿಗಳ ನೀಲಿರಕ್ತವನ್ನು ನಳಿಕೆಯಲ್ಲಿ ಬಸಿಯುತ್ತಿರುವ ಕೆಲವು ನೈಜ ವಿಡಿಯೊ ತುಣುಕುಗಳು ಸಿಕ್ಕಿದ್ದವು. ಜೊತೆಗೆ ಬೀಚಿನ ಮರಳಲ್ಲಿ ತೆವಳುವ ಲಾಳಾಕಾರದ ಏಡಿಗಳ ದೃಶ್ಯ, ಪ್ರವಾಸಿಗರು ಅವನ್ನು ಬೊಗಸೆಯಲ್ಲಿ ಹಿಡಿದೆತ್ತಿರುವ ದೃಶ್ಯಗಳೂ ಇದ್ದುವೆನ್ನಿ. ಎಲ್ಲ ಸೇರಿ ಹೆಚ್ಚೆಂದರೆ ಆರೇಳು ಸೆಕೆಂಡ್ ದೃಶ್ಯ ಇರಬಹುದು. ಅಷ್ಟು ಸಾಲದೆಂದು, ಮಾಮೂಲು ಕೊರೊನಾ ವೈದ್ಯಕೀಯದ ದೃಶ್ಯಗಳನ್ನು (ಸಿರಿಂಜು, ಮುಖವಾಡ, ಪಿಪೆಟ್, ನಳಿಕೆ, ನಖಶಿಖಾಂತ ಪಿಪಿಇ ಧರಿಸಿದ ವ್ಯಕ್ತಿಗಳು, ಲ್ಯಾಬಿನ ಸಲಕರಣೆಗಳು ಇತ್ಯಾದಿ) ದಂಡಿಯಾಗಿ ಸೇರಿಸಲಾಗಿತ್ತು. ಅವನ್ನೇ ಮತ್ತೆ ಮತ್ತೆ ತೋರಿಸುತ್ತ ಅದೇ… ಒಂಬತ್ತು ಕಣ್ಣುಗಳ, ನೀಲಿರಕ್ತದ, ಅಟ್ಲಾಂಟಿಕ್… ಹುಣ್ಣಿಮೆ ರಾತ್ರಿ….ಔಷಧ… ಎಂಬ ಪದಗಳನ್ನು ಚೀರುವ ಬಡಪಾಯಿ ಲತಾಂಗಿ.[ನನ್ನ ಹಿಂದೆ, ದೂರದಲ್ಲಿ ಅಡುಗೆ ಕಟ್ಟೆಯ ಬಳಿ ನಿಂತು ಕೆಸುವಿನ ದಂಟಿನ ಪಳಿದ್ಯ ಮಾಡುತ್ತಿದ್ದ ನನ್ನ ಪತ್ನಿ ಆ ‘ಒಂಬತ್ತು ಕಣ್ಣುಗಳ’ ಎಂಬ ಏಕೈಕ ಪದಪುಂಜ ಎಷ್ಟು ಬಾರಿ ಬಂತು ಎಂದು 9-10-11 ಎಂದು ಲೆಕ್ಕ ಮಾಡುತ್ತಿದ್ದಳು.]

ಹದಿನೈದು ನಿಮಿಷಗಳ ಆರ್ಭಟವನ್ನು ಕಿವಿಮುಚ್ಚಿಕೊಂಡು ಕೇಳುತ್ತಿದ್ದಾಗ ನನ್ನ ಅದೃಷ್ಟಕ್ಕೆ ಬ್ರೆಕ್ (ಟೀವಿಯವರ ತಪ್ಪು ಭಾಷೆಯಲ್ಲಿ ‘ಬ್ರೇಕ್’) ಬಂತು. ‘ಇದರ ರಹಸ್ಯವನ್ನು ಇದೊಂದು ಪುಟ್ಟ ಬ್ರೇಕಿನ ನಂತರ ಹೇಳುತ್ತೇವೆ ಕೇಳಿ… ಕಣ್ ಮುಚ್ಚಿ, ಕಣ್ಣು ತೆರೆಯುವುದರಲ್ಲಿ ಬಂದು ಬಿಡುತ್ತೇವೆ” ಎಂಬ ಘೋಷಣೆಯನ್ನು ಕೇಳಿದ ನಂತರ ಸಾಕಪ್ಪ ಸಾಕು ಎಂದು ನಾನು ಕಣ್ ಮುಚ್ಚಿ ಸ್ವಿಚಾಫ್ ಮಾಡಿದೆ.

ನನಗೆ ಟಿವಿ ಸುದ್ದಿಗಾರರ ಬಗ್ಗೆ, ಉದ್ ಘೋಷಕಿಯರ ಬಗ್ಗೆ ಕೋಪವಿಲ್ಲ, ಸಹಾನುಭೂತಿ ಇದೆ. ಪಾಪ, ಏನೋ ಥ್ರಿಲ್ಲಿಂಗ್ ವಿಷಯವನ್ನು ರಂಗುರಂಗಾಗಿ ಹಸಿಹಸಿಯಾಗಿ ಹೊಸೆದು ವೀಕ್ಷಕರ ಮುಂದಿಡಬೇಕು. ಕಷ್ಟದ ಕೆಲಸ!ಅವರ ಕೈಬೆರಳು ಕೀಲಿಮಣೆಯ ಮೇಲೆ ಫಾಸ್ಟಾಗಿ ಓಡುತ್ತದೆ ಹಾಗಾಗಿ ಎಲ್ಲೆಲ್ಲೊ ಜಾಲಾಡಿ ಒಂದಿಷ್ಟು ವಿಶುವಲ್ ಗಳನ್ನು ಸಂಗ್ರಹ ಮಾಡುತ್ತಾರೆ. ಚಕಚಕ ಎಡಿಟಿಂಗ್ ಮಾಡಿ ಏನೋ ಒಂದಿಷ್ಟು ಕೊಲಾಜ್ ಮಾಡಿ, ರಾಶಿ ಒಟ್ಟುತ್ತಾರೆ. ಕಡ್ಡಿಗೀರಲು ರೆಡಿ ಮಾಡುತ್ತಾರೆ.ದೃಶ್ಯಗಳಿಗೆ ಪೂರಕವಾದ ಮಾಹಿತಿಯನ್ನು ಸಂಗ್ರಹಿಸುವ ವ್ಯವಧಾನ ಅಥವಾ ಪರಿಣತಿಯೂ ಇಲ್ಲ. ಆ ನಾಲ್ಕಾರು ಪದಗಳಿಗಾಗಿ ಹುಣ್ಣಿಮೆ ರಾತ್ರಿಯ ದೃಶ್ಯ, ಕಡಲಿನ ತೆರೆಗಳ ದೃಶ್ಯ, ತೆವಳುವ ಏಡಿಯ ದೃಶ್ಯವನ್ನು ಜೋಡಿಸುತ್ತಾರೆ. ಈಗಂತೂ ಮನೆಯಲ್ಲಿ ಕೂತೇ ಎಲ್ಲವನ್ನೂ ಡೌನ್ ಲೋಡ್ ಮಾಡಿ ಪ್ಯಾಕೇಜ್ ಮಾಡಿ ಸ್ಟೂಡಿಯೊಕ್ಕೆ ರವಾನಿಸಬೇಕು. ಒತ್ತಡ, ಒತ್ತಡ.ಲಾಳದ ಏಡಿಯ ಬಗ್ಗೆ ಬೆಂಗಳೂರಿನಲ್ಲಿರುವ ಯಾವುದೇ ವಿಜ್ಞಾನ ಲೇಖಕರನ್ನು (ಜಾಸ್ತಿ ಜನರಿಲ್ಲ ಖರೆ; ನಮ್ಮನ್ನು ನಾವೇ ‘ಅಳಿವಿನಂಚಿನಲ್ಲಿನ ಜೀವಿಗಳು’ ಎಂದು ಕರೆದುಕೊಳ್ಳುತ್ತೇವೆ) ಕೇಳಿದ್ದಿದ್ದರೆ, ಸೊಗಸಾದ, ಬಹುಪಾಲು ಸರಿಯಾದ, ನಿಜಕ್ಕೂ ರೋಚಕ ಮಾಹಿತಿಗಳಿರುವ 300-400 ಪದಗಳ ವಿವರಗಳನ್ನು (script) ಬರೆದು, ಒಂದರ್ಧ ಗಂಟೆಗಳಲ್ಲೇ ಒದಗಿಸಲು ಸಾಧ್ಯವಿತ್ತು. (ಪತ್ರಿಕೆಗಳಿಗೆ ನಾವು ಆಗಾಗ ಈ ಬಗೆಯ ಅನಾಮಿಕ ನೆರವನ್ನು ನೀಡುತ್ತಿರುತ್ತೇವೆ, ಟಿವಿಯವರು ಇದುವರೆಗೆ ನಮ್ಮನ್ನು ಕೇಳಿಲ್ಲ. ಹೆಚ್ಚೆಂದರೆ ‘ಮಂಗಳಗ್ರಹದಲ್ಲಿ ಅದ್ಯಾವುದೊ ನಾರಿಯ ಬಿಂಬ ಕಂಡಿದೆ, ಚರ್ಚೆ ಮಾಡಲು ಬನ್ನಿ’ ಎಂದು ಸ್ಟೂಡಿಯೋಕ್ಕೇ ಕರೆಸಿಕೊಳ್ಳುತ್ತಾರೆ. ಅಲ್ಲಿ ಹೋದರೆ ಯಾವನೋ ಸಾಮುದ್ರಿಕ ಶಾಸ್ತ್ರಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವನ ಮಾತಿಗೇ ಆದ್ಯತೆ ಕೊಡುತ್ತಿರುತ್ತಾರೆ.

ಕಮಟು ಚಾ ಮತ್ತು ಬಿಸ್ಕಿಟನ್ನು ಕೊಟ್ಟು ಮನೆಗೆ ಕಳಿಸುತ್ತಾರೆ. ಹಾಗಾಗಿ ನಾವು ಯಾರೂ ಅತ್ತ ಹೋಗುವುದು ತೀರ ಕಮ್ಮಿ. ಈಚಿನ ವರ್ಷಗಳಲ್ಲಿ ತಾಜಾ ಚಾ/ಕಾಫಿ ಮತ್ತು ಸ್ಯಾಂಡ್ವಿಚ್ ಕೊಡುತ್ತಾರೇನೊ. ಪ್ರಾಯಶಃ ತುಸು ಸಂಭಾವನೆಯನ್ನೂ ಕೊಡಬಹುದು, ಗೊತ್ತಿಲ್ಲ).ಮನೆಯಲ್ಲೇ ಕೂತು script ಬರೆದು ರವಾನಿಸುವುದು ಸುಲಭ. ಬುಲೆಟ್ ಪಾಯಿಂಟ್ ಗಳಲ್ಲಿ ಮುಖ್ಯಾಂಶವನ್ನು ಕಳಿಸಿದರೂ ಆದೀತು. ಅವನ್ನು ಉದ್ ಘೋಷಕಿ ಟೆಲಿ ಪ್ರಾಮ್ಟರ್ ಮೂಲಕ ಓದಿದರೂ ಸಾಕು; ಬುಲೆಟ್ ಪಾಯಿಂಟ್ ಆಗಿದ್ದರೆ ಬಿಟ್ಟು ಬಿಟ್ಟು ಓದುವುದು ಸುಲಭ.ಅಥವಾ ಮತ್ತೇನೂ ಬೇಡ. ವಿಕಿಪೀಡಿಯಾದಲ್ಲಿ ಅಥವಾ ಬೇರೆ ವೆಬ್‌ಸೈಟ್‌ ಗಳಲ್ಲಿ ದಂಡಿಯಾಗಿ ಸಿಗುವ ಮಾಹಿತಿಯನ್ನು ಕ್ಷಿಪ್ರದಲ್ಲಿ ಸಂಗ್ರಹಿಸಬಹುದು.ಇದೇ ಕುದುರೆಲಾಳದ ಏಡಿಯ ವಿಚಿತ್ರ ಜೀವನಚಕ್ರದ ಬಗ್ಗೆ ಎಷ್ಟೊಂದು ಮಾಹಿತಿ ವಿಕಿಪೀಡಿಯಾದಲ್ಲೇ ಇದೆ. ಗಂಡಿಗಿಂತ ಹೆಣ್ಣೇ ದೊಡ್ಡದು, ಒಂದು ಹೆಣ್ಣೇಡಿಗೆ ಅದೆಷ್ಟು ಗಂಡೇಡಿಗಳು ಮುತ್ತಿ, ಮುತ್ತಿಕ್ಕುತ್ತಿರುತ್ತವೆ. ಅವಳು ಮರಳಿನಲ್ಲಿ ಮೊಟ್ಟೆ ಇಟ್ಟನಂತರ ಅದನ್ನೇ ಕೆದಕಿ ತಮ್ಮ ವೀರ್ಯವನ್ನು ಸುರಿಸಿ ಹೋಗುತ್ತವೆ ಇತ್ಯಾದಿ ಇತ್ಯಾದಿ.

ಇವನ್ನೆಲ್ಲ ಕನ್ನಡದಲ್ಲಿ ತಾವೇ ಬರೆದುಕೊಂಡು ಹೇಳಿದರೂ ಸಾಕು. ಆದರೆ ಅದಕ್ಕೆ ಇಂಗ್ಲಿಷ್ ಚೆನ್ನಾ6ಗಿ ಗೊತ್ತಿರಬೇಕು, ಅದು ಬೇರೆ ಮಾತು.ಏರುದನಿಯಲ್ಲಿ ಕೂಗುವುದು, ಹೇಳಿದ್ದನ್ನೇ ಹೇಳುವುದು, ಥಕಥೈ ಕುಣಿಯುವ ಅಕ್ಷರವಿನ್ಯಾಸ, ಭಯಾನಕ ಹಿನ್ನೆಲೆ ಸಂಗೀತದೊಂದಿಗೆ ಟೈಟ್ ಪ್ಯಾಂಟ್, ವಿಲಕ್ಷಣ ಟಾಪ್, ಅಸಹಜ ಹಾವಭಾವದೊಂದಿಗೆ ಏಡಿಗಳಂತೆ ಅಡ್ಡಡ್ಡ ಚಲಿಸುತ್ತ ಅರಚುವ ಹೆಣ್ಣುಮಕ್ಕಳನ್ನು ನೋಡಿದರೆ ರೇಜಿಗೆ, ಅನುಕಂಪ ಎಲ್ಲ ಒಟ್ಟೊಟ್ಟಿಗೇ ಆಗುತ್ತಿರುತ್ತದೆ.ಸಾಲದ್ದಕ್ಕೆ ಮಾತು ಮಾತಿಗೆ ‘..ತಕ್ಕಂಥದ್ದು…ವಂಥದ್ದು… ಈವಂದು….ಗಳ ಕಾಟ.ಈ ಯುವಜನರು ಎಲ್ಲಿಂದ ಕಲಿಯುತ್ತಿದ್ದಾರೆ ಇವನ್ನೆಲ್ಲ? ಚೀರಾಟಕ್ಕೆ ಯಾವ ತಮಿಳು, ತೆಲುಗು ಚಾನೆಲ್ಲನ್ನು ನಕಲು ಮಾಡುತ್ತಿರುತ್ತಾರೆ? ಟಿವಿ ಎದುರು ಕೂತವರೆಲ್ಲ ಕಿವುಡರು, ದೃಷ್ಟಿಮಾಂದ್ಯವುಳ್ಳವರು, ಮಂದಮತಿಗಳು ಅಥವಾ ಹಸಿಹಸಿ ತುಣುಕಿಗೆ ಹಸಿದು ಕೂತವರು ಎಂಬ ಭಾವನೆಯಲ್ಲೇ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ ಯಾಕೆ?

ಇವರಿಗೆಲ್ಲ ತರಬೇತಿ ಕೊಡುವವರು ಎಂದೂ ಬಿಬಿಸಿ, ಸಿಎನ್ಎನ್, ಸಿಎನ್‌ಬಿಸಿ ಮುಂತಾದ ಚಾನೆಲ್‌ಗಳನ್ನು ನೋಡುವುದೇ ಇಲ್ಲವೆ?ನಿಜಕ್ಕೂ ಆಸಕ್ತಿಯ ವಿಷಯಗಳಿದ್ದರೆ ನಿರ್ವಿಕಾರ, ನಿರಾವೇಶ, ನಿರಾಡಂಬರ ಶೈಲಿಯಲ್ಲಿ ಅದನ್ನು ಪ್ರಸ್ತುತಪಡಿಸುವುದರಲ್ಲೇ ಹೆಚ್ಚಿನ ವೀಕ್ಷಕರನ್ನು ತಲುಪಬಹುದು ಎಂಬ ಯೋಚನೆಯೂ ಇವರಿಗೆ ಬರುವುದಿಲ್ಲವೆ?ಅಂದಹಾಗೆ, ನೀಲಿರಕ್ತದ ಏಡಿಯ ಕಾರ್ಯಕ್ರಮ ಈ ಚಾನೆಲ್ಲಿನಲ್ಲಿ ಬರುತ್ತಿದ್ದಾಗಲೇ ಅತ್ತ ಇನ್ನೊಂದು ಕನ್ನಡ ಚಾನೆಲ್ಲಿನಲ್ಲಿ ‘ಏರ್ ಫಿಲ್ಟರ್’ಗಳ ಬಗ್ಗೆ ಅಷ್ಟೇ ವಿಕೃತ, ಅಷ್ಟೇ ವಿಕಾರದ, ಅಷ್ಟೇ ಅಸಹಜ ರೋಚಕತೆಯ, ಅಷ್ಟೇ ತಪ್ಪುಗಳುಳ್ಳ, ಅಷ್ಟೇ ಉತ್ಪ್ರೇಕ್ಷೆಯ ಕಾರ್ಯಕ್ರಮ ಬರುತ್ತಿತ್ತು.ಇಂಥ ಅಸಹನೀಯ ಕಾರ್ಯಕ್ರಮಗಳಿಗೆ ಫಿಲ್ಟರ್ ಹಾಕುವವರು ಯಾರೂ ಇಲ್ಲವೆ? ಅಡ್ಡಡ್ಡ ಚಲಿಸುವ ಈ ಚಾನೆಲ್ ಸಂಸ್ಕೃತಿಯ ಮೇಲೆ ಒಂಬತ್ತು ಕಣ್ಣುಗಳಲ್ಲ, ಕನಿಷ್ಟ ಎರಡು ಕಣ್ಣುಗಳನ್ನಿಡುವವರು ಯಾರೂ ಇಲ್ಲವೆ?

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *