

ಶಂಕರ್ ಸಿ.ಎ. 30 ವರ್ಷಗಳ ಹಿಂದಿನ ದೊಡ್ಡ ಹೆಸರು.
ಸಿದ್ಧಾಪುರದಂಥ ಸಾಂಪ್ರದಾಯಿಕ ಹಳ್ಳಿಯಂಥ ತಾಲೂಕಿನಲ್ಲಿ ಆ ಕಾಲದಲ್ಲೇ ಡಿ.ಎಸ್.ಎಸ್. ನ ಪ್ರತಿಭಟನೆಗಳು ನಡೆಯುತಿದ್ದವು. ಚಳವಳಿ ಕಾವೇರುತಿದ್ದ ಕಾಲದಲ್ಲಿ ಹೋರಾಟವನ್ನು ಹತ್ತಿಕ್ಕಿದ ರಾಮಕೃಷ್ಣ ಹೆಗಡೆಯಂಥ ಮುಖ್ಯಮಂತ್ರಿಯವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟಿಸಿದ್ದ ಯುವಕ ಸಿ.ಎ.ಶಂಕರ್ ಈ ಹೋರಾಟ, ಚಳವಳಿಗಳಿಂದ ಹಿಂದೆ ಸರಿದು ಶಿಕ್ಷಕರಾಗಿಬಿಟ್ಟಿದ್ದರು.
ಶಿಕ್ಷಕರಾಗುವ ಮೊದಲು ಪ್ರಗತಿಪರರ ವೇದಿಕೆ ಕಟ್ಟಿಕೊಂಡು ಪಟ್ಟಭದ್ರರಿಗೆ ಸಿಂಹಸ್ವಪ್ನವಾಗಿರುತಿದ್ದ ಕಾವಂಚೂರು ಹಿತ್ತಲಕೊಪ್ಪದ ಶಂಕರ್ ನೀನಾಸಂಗೆ ನಡೆದರು. ನೀನಾಸಂ ನಲ್ಲಿ ಕೂಡಾ ಬಂಡಾಯದಿಂದಲೇ ಹೆಸರಾಗಿದ್ದ ಶಂಕರ್ ಸಿದ್ಧಾಪುರದಲ್ಲಿ ಮುನಿವೆಂಕಟಪ್ಪನವರ ನೇತೃತ್ವದಲ್ಲಿ ನಡೆದ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನಕ್ಕೂ ದುಡಿದಿದ್ದರು.
ಡಿ.ಎಸ್.ಎಸ್. ನ ಹಾಡು, ರೈತ ಸಂಘ, ಪ್ರಗತಿಪರ ಸಂಘಟನೆಗಳ ಹೋರಾಟ, ಚಳವಳಿಯ ಎಳೆಯ ಹುಡುಗನಾಗಿದ್ದ ಶಂಕರ್ ಸರಳವಿವಾಹದ ಮೂಲಕ 30 ವರ್ಷಗಳ ಹಿಂದೇ ಸುದ್ದಿಮಾಡಿದ್ದರು. ಹೀಗೆ ಬಂಡಾಯ, ಹೋರಾಟಗಳ ಮೂಲಕ ಜನಪರವಾಗಿ, ಜನಸಾಮಾನ್ಯನ ಪರವಾಗಿ ಧ್ವನಿ ಮಾಡುತಿದ್ದ ಶಂಕರ್ ಶಿಕ್ಷಕರಾಗಿ ತೆರೆಯಿಂದ ಮರೆಯಾಗಿದ್ದರು.
ಮೊನ್ನೆ ಜುಲೈ ಕೊನೆಗೆ ಶಂಕರ್ ಸಾಗರದಲ್ಲಿ ನಿವೃತ್ತರಾದರು. ಸಾಗರದಿಂದ ಸೇವೆಪ್ರಾರಂಭವಾಗಿ ಸಾಗರದಲ್ಲಿ ನಿವೃತ್ತರಾಗುವ ನಡುವಿನ ಅವಧಿಯಲ್ಲಿ ಶಂಕರ್ ಸಿ.ಎ. ದಾಂಡೇಲಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಸೇವೆಯಲ್ಲಿನ ಕಟ್ಟುಪಾಡುಗಳ ನಡುವೆ ದೀನ, ದಲಿತರು,ದುರ್ಬಲವರ್ಗದವರು, ಅಸಹಾಯಕರ ನೆರವಿಗೆ ಧಾವಿಸುತಿದ್ದ ಶಂಕರ್ ಈಗ ತಮ್ಮ ಸೇವೆಯಿಂದ ನಿವೃತ್ತರಾಗಿದ್ದು ಮತ್ತೆ ಸಿದ್ಧಾಪುರ, ಉತ್ತರ ಕನ್ನಡದಲ್ಲಿ ದಲಿತಸಂಘರ್ಷ ಸಮೀತಿ,ಪ್ರಗತಿಪರರ ಒಕ್ಕೂಟ ಕಟ್ಟುವ ಉತ್ಸಾಹದಲ್ಲಿದ್ದಾರೆ.
ಕಲೆ,ಸಂಸ್ಕೃತಿ, ಸಾಹಿತ್ಯ,ಸಾಮಾಜಿಕ ಬದುಕಿನ ನಿರಂತರ ಹೋರಾಟಗಾರರಾಗಿರುವ ಶಂಕರ್ ಅವರಿಗೆ ಈಗ ಸರ್ಕಾರ, ವ್ಯವಸ್ಥೆಯ ಬಂಧನ ಕಳಚಿಕೊಂಡ ಅನುಭವ. ಅವರ ಆಗಮನ,ಅಭಿಲಾಷೆ, ಹೋರಾಟದ ಬದ್ಧತೆಗಳನ್ನು ಕಂಡಿರುವ ಅವರ ಅನೇಕ ಸ್ನೇಹಿತರು ಅವರ ಸೇವಾ ನಿವೃತ್ತಿಗೆ ಶುಭಕೋರಿ ಕಾಲುಶತಮಾನದ ನಂತರದ ಹೋರಾಟದ ಬದುಕಿಗೆ ಶುಭ ಹಾರೈಸಿದ್ದಾರೆ.

