

ಮಲೆನಾಡಿನ ಕಿರಿಗೌರಿ ಚೌತಿ,
ಅಣ್ಣ ಚೌತಿ ಹಬ್ಬಕ್ಕೆ ಕರೆಯಲು ಬಂದ ದಿನದಿಂದ ಮನಸ್ಸಿಲ್ಲೇನೋ ಸಂಭ್ರಮ,, ಹೊರಡಲು ಅಣಿ, ಡೇರೆ ಹೂವನ್ನು ಅಣ್ಣ ಅಪ್ಪ ಕರೆದುಕೊಂಡು ಹೋಗಲು ಬಂದ ಸಮಯದಲ್ಲೇ ಕೊಯ್ಯೋಣವೆಂದು ಕಾಯುವುದು, ಒಂದು ಹೂವನ್ನು ಹಾಳಾಗದಂತೆ ಜೋಪಾನ ಮಾಡುವುದು,,,,ಆಗಲೇ ಮನೆಯನ್ನೆಲ್ಲ ಚೊಕ್ಕ ಒಪ್ಪವಾಗಿ ಮಾಡಿ ಅತ್ತೆಯ ಬಾಯಿಂದ ಆಗಲೇ ಹಬ್ಬಕ್ಕೆ ಹೊರಟಳೇನೋ ಎನ್ನುವ ಒಂದು ಮಾತು ಬರಲು ಮನಸಿನ ಮೂಲೆಯಲ್ಲಿ ಒಂದು ಖುಷಿ, ಅಣ್ಣ ಹೊಯ್ಯುವ ಮಳೆಯಲ್ಲಿ ಕರೆದುಕೊಂಡು ಹೋಗಲು ಬಂದೇ ಬಿಟ್ಟ, ಬರುವ ಅತ್ತಿಗೆಮ್ಮನಿಗೊಂದಿಷ್ಟು ಬಿಟ್ಟು ಉಳಿದೆಲ್ಲಾ ತುಸು ಹೆಚ್ಚೇ ಡೇರೆ ಹೂವು ( ಕುತ್ರಿ,ಗಂಧದ ಕಡ್ಡಿ, ಗ್ವಾಟೆ ತಾವರೆ, ಕೆಂಪುಕಡ್ಡಿ,ಬೆಕ್ಕಿನ ಕಣ್ಣು, ) ಚೀಲ ಸೇರಿತು. ಗಂಡ ಬಾಯಿಮಾತಿಗೆ ನಾನೇ ಹೋಗಿ ಬಿಟ್ಟು ಬರುತ್ತೇನೆಂದರೂ ಅಣ್ಣನ ಬೈಕಿನಲ್ಲೇ ಜಿಟಿ ಜಿಟಿ ಮಳೆಯಲ್ಲಿ ಹಿಂಬದಿ ಛತ್ರಿ ಹಿಡಿದು ಹೋಗಬೇಕೆಂಬ ಹಂಬಲ, ಬರುವ ಅಣ್ಣನೂ ಅಷ್ಟೆ ಅತ್ತಿಗೆ ನನ್ನನ್ನು ತವರು ಮನೆಗೆ ಬಿಟ್ಟು ಬನ್ನಿ ಎಂದರೆ ಸಾಧ್ಯವೇ ಇಲ್ಲವೆಂದು ದರ್ಪ ತೋರಿ ಬಂದವನು ತಂಗಿಯನ್ನು ಮನೆಗೆ ಕರೆದುಕೊಂಡು ಹೋಗುವ ತವಕದಲ್ಲಿ ಅತಿಯಾಗಿ ಸಂಭ್ರಮಿಸುತ್ತಾನೆ.
ತಂಗಿ ತವರು ಮನೆಗೆ ಬಂದಾಕ್ಷಣ ಚೌತಿ ಹಬ್ಬದಲ್ಲಿ ಇಡೀ ಮನೆಯ ಆಧಿಪತ್ಯ ಅವಳದೆ.. ಮಗನಿಗೆ ಇಪ್ಪತ್ತು ರೂಪಾಯಿ ಗನ್ ಕೊಡಿಸಿ ಕಳುಹಿಸಿದ್ದ ಅಪ್ಪ ಮಾವನಾಗಿ ಅಳಿಯ ಸೊಸೆಗೆ ಇನ್ನೂರು ರೂಪಾಯಿ ಪಟಾಕಿ ಬಾಕ್ಸ್ ತರುತ್ತಾನೆ. ಅಳಿಯ ಸೊಸೆಯನ್ನು ತಾನು ಹೋಗುವ ಕಡೆಯಲ್ಲ ಬೈಕಿನ ಮುಂದೆ ಹಿಂದೆ ಕೂರಿಸಿ ಸುತ್ತಾಡಿಸುತ್ತಾನೆ.. ಗೌರಮ್ಮನ ಚಂಡು ಕಟ್ಟಲು ಅಣಿ ಮಾಡುತ್ತಾ, ಅಣ್ಣ ಹೂವು ತಾ, ಸೇವಂತಿ ಹೂ ತಾ , ಉದ್ದ ತೊಟ್ಟಿನಹೂ ತಾ,, ಈ ಸಾತಿ ಹೊಸ ಗೌರಮ್ಮನ ಸೀರೆ ತಾ, ಐದು ರೀತಿ ಹಣ್ಣು ತಾ, ಬಾಳೆ ಕಂಬ ತಾ, ಪಳಿಯುವಿಕೆ ಯಾರು ತರ್ತಾರೆ, ಕಾಯಿ ಸುಲಿ, ಹೊಸ ಬೀಸಣಿಕೆ ತಾ, ಸಿಬುಲ ತಾ, ಲೈಟಿನ ಸರ ತಾ, ಗೌರಮ್ಮನ ಮಂಟಪ ಕಟ್ಟು,ಮನೆಯಲ್ಲಿ ಎಂದೂ ಮಾತು ಕೇಳದಿದ್ದ ಅಣ್ಣ ಒಂದು ಹೆಚ್ಚು ಅನ್ನುವಂತೆ ಚಾಚೂ ತಪ್ಪದೇ ಹೇಳಿದ್ದೆಲ್ಲವ ಮಾಡಿ ತಂಗಿಯ ಹತ್ತಿರ ಶಹಬಾಸ್ ಎನಿಸಿಕೊಳ್ಳುತ್ತಾನೆ.
ಸೊಸೆಯ ಮೇಲೆತ್ತಿ ಹಾರಿಸುತ್ತಾ ತೊದಲಿನಲ್ಲಿ ಮಾಮ ಎನಿಸಿಕೊಳ್ಳುತ್ತಾ ಪಪ್ಪನನ್ನೇ ಮರೆಸುತ್ತಾನೆ. ಮುಂದಿನ ಮೂರು ದಿನ ಕಿರಿಗೌರಿಗೆ ತರೇಹವಾರಿ ಎಡೆ ಇಡುವುದು, ಹೆಸರುಕಾಳು ಉಂಡೆ, ಅತರಾಸ, ಶಂಕರ ಪೋಳ್ಯ ಬೇಸನ್ ಉಂಡೆ ,ಹೋಳಿಗೆ , ಬಳೆಕಜ್ಜಾಯ, ಹೊತ್ತು ಹೊತ್ತಿಗೆ ಎಲ್ಲ ಅಡಿಗೆ ಮುಗಿದಾಕ್ಷಣ ಕೊನೆಯಲ್ಲಿ ಎಡೆಗೆ ಏನೂ ಏನೂ ಇಲ್ಲವೆಂದು ಬಾಳೆಹಣ್ಣು ಹಾಲು, ಮನೆಮಗಳು ತನಗೆ ಬೇಕಾದ ಅಡಿಗೆ ಮಾಡಿ ಅಣ್ಣ ಅವ್ವ ಅಪ್ಪ ಮಗ ಮಗಳಿಗೆ ಬಡಿಸುತ್ತಾ ಆ ಚೌತಿಯ ಸಂಭ್ರಮ ವನ್ನು ಇಮ್ಮಡಿಗೊಳಿಸುತ್ತಾಳೆ. ಎಡೆ ಇಟ್ಟಾಗಲೆಲ್ಲಾ ಮಗನ ಚಟಕೋವಿಯಿಂದ ಬಾಂಬು ಸಿಡಿದಿರುತ್ತದೆ… ತನ್ನ ಮನೆಯವರಿಗೆ ಹಬ್ಬಕ್ಕೆ ತವರುಮನೆಗೆ ಕರೆಯುವ ತಂಗಿ, ಅಣ್ಣ ಅತ್ತಿಗೆಯ ಮನೆಗೆ ಹೊರಟಾಗ ಹುಸಿಕೋಪ ತೋರಿ ಮತ್ತೆ ಕಳಿಸಿಕೊಡುತ್ತಾಳೆ, ಗೌರಿಯ ಬಿಡುವ ದಿನ ಬಂತೆಂದರೆ ಬಂದ ತನ್ನೆಲ್ಲ ಸ್ನೇಹಿತೆಯರನ್ನು ಮಾತನಾಡಿಸುತ್ತಾ, ಈ ಗೌರಮ್ಮನ ಚಂಡು ಕಟ್ಟಿದ್ದು ಯಾರು? ಈ ಗೌರಮ್ಮನಸೀರೆ ಎಲ್ಲಿ ತಂದೆ,?ಬೀಸಣಿಕೆ ಬಾಳ ಚೆನ್ನಾಗಿದೆ?,ನಿನ್ನ ಸೀರೆ ಚೆನ್ನಾಗಿದೆ ಎಲ್ಲಿ ತಂದೆ ,?ಎನ್ನುತ್ತಲೇ ಕೆರೆಯವರೆಗಿನ ಹೆಜ್ಜೆ ಗೌರಮ್ಮನ ಚೆಂಡು ಹಿಡಿದು ಹುಷಾರಾಗಿ ಸಾಗುತ್ತದೆ, ಅಣ್ಣಂದಿರ ಸಾಲು ಪಟ್ಟೆ ಪಟ್ಟೆ ಲುಂಗಿ ಉಟ್ಟು ಪಳಿಯುವಿಕೆ ಕೈ ಚೀಲ ಹಿಡಿದು ಸಾಗುತ್ತದೆ. ಗೌರಮ್ಮನ ಬಿಟ್ಟು ಎಲ್ಲರೊಂದಿಗೆ ನಗುತ್ತಾ ಮನೆಯವರೆಗೆ ಭಾರದ ಹೆಜ್ಜೆ ಸಾಗುತ್ತದೆ. ಮನೆಗೆ ಬಂದ ತಕ್ಷಣ ಅವ್ವನ ಹತ್ತಿರ ಆ ಗಿಳಿ ಹಸಿರು ಸೀರೆ ಉಟ್ಟವಳಾರು? ಓ ಅವಳು ಇವಳೇನಾ ಎಂದು ಅವ್ವನ ಹತ್ತಿರ ಅವರಿವರ ಹರಸುತ್ತಾ, ಸುದ್ದಿಮನೆಯ ಎಲ್ಲ ಸುದ್ದಿಯ ತಿಳಿದು ಮನಸೆಂಬುದೊಮ್ಮೆ ನಿರಾಳವಾಗಿರುತ್ತದೆ.
ಮಾರನೆಯ ದಿನ ಬೆಳಗ್ಗೆ ಗಂಗಮ್ಮನ ಬಿಡುವವರೆಗೂ ಅಳಿಯ ಸೊಸೆಗೆ ಹಬ್ಬದ ಸಂಭ್ರಮ ಇಳಿದಿರುವುದಿಲ್ಲ.. ಹಬ್ಬದಲ್ಲಿ ಚಟಪಟ ಕೆಲಸ ಮಾಡುತ್ತಲೇ ಮನೆ ಮಗಳು ಒಂದು ವಿಶ್ರಾಂತಿ ಪಡೆದಿರುತ್ತಾಳೆ,,,ಒಂದೆರಡು ದಿನವಷ್ಟೇ ಆ ಕಡೆಯಿಂದ ಅತ್ತೆಗೆ ಹುಷಾರಿಲ್ಲ ಬೇಗ ಬಾ ಎಂದು ಮನೆಯಿಂದ ಕರೆ ಬಂದಿರುತ್ತದೆ. ಅತ್ತೆಯ ಮೇಲಿನ ಕಕ್ಕುಲತೆ ಮತ್ತೆ ಇಮ್ಮಡಿಯಾಗಿರುತ್ತದೆ,,ಅವ್ವ ಕೋಳಿ ಕಜ್ಜಾಯ ಮಾಡಿ ಚೌತಿ ಹಬ್ಬದಿಂದ ಗಂಡನ ಮನೆಗೆ ಬರಿ ಗೈಲಿ ಹೋಗಬೇಡ ಎಂದು ಮೂರು ಸೇರು ಚಕ್ಕಲಿ ಮಾಡಿ ಅದನ್ನು ಸುರಿದು ಚೀಲ ತುಂಬಿಯಾಗಿರುತ್ತದೆ….ಅಣ್ಣನ ಬೈಕು ಸಾವಧಾನದಿಂದ ಬಾವನ ಮನೆಗೆ ಮತ್ತೆ ಪ್ರಯಾಣ ಬೆಳೆಸುತ್ತದೆ.. ಅದಕ್ಕೆ ಹೇಳುವುದು ಚೌತಿ ಹಬ್ಬ ಹೆಣ್ಣು ಮಕ್ಕಳ ಹಬ್ಬ….
…….ನಾ ಹೇಳ ಹೊರಟಿರುವುದಿಷ್ಟೆ , ತಂಗಿ, ಅಣ್ಣ,ತವರು ಮನೆ,ಎಂದರೆ ಅದೊಂದು ಬಿಡಿಸಲಾರದ ಬಂಧ. ಆಸ್ತಿ , ನೌಕರಿ, ಸ್ವತ್ತು, ಇದಾವುದೂ ಈ ಬಂಧನದ ಮಧ್ಯ ಬರಬಾರದೆಂಬುದಷ್ಟೆ…ಸುಭಾಷ್ ಎಂ ಕೆಳದಿ.
* .( ಮಲೆನಾಡಿನ ವಿಶೇಷತೆ ಬಗ್ಗೆ ಅಧ್ಯಯನ ಮಾಡಿದವರು ಇನ್ನೂ ಹೆಚ್ಚು ಅಂದಗೊಳಿಸಬಹುದು. ಎಲ್ಲೂ ಇಲ್ಲದ ಕಿರಿಗೌರಿ ಚೌತಿ ನಮ್ಮ ಭಾಗದಲ್ಲೇ ಇರುವುದು,, ನನಗೆ ಸಾಧ್ಯವಾದಷ್ಟು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ, ಒಮ್ಮೆ ಓದಿ ಅಭಿಪ್ರಾಯ ತಿಳಿಸಿ)
