

ನಮ್ಮ ಯೂಟೂಬ್ ಚಾನಲ್ ನಲ್ಲಿ ರೆಸಿಪಿಯೊಂದನ್ನು ಮಾಡುವ ಬಗ್ಗೆ ಯೋಚಿಸಿದ್ದೆ. ಅದು ನನ್ನದೇ ಸಂಶೋಧನೆ ಎನ್ನುವ ರೀತಿ ಬೀಗಿದ್ದೆ ಕೂಡಾ. ಯೂಟ್ಯೂಬ್ ಇರಲಿ ಇತರೆಡೆ ಇರಲಿ ಹೊಸರುಚಿ, ಹೊಸ ವಿಷಯ ತಿಳಿಸಬೇಕಾದರೆ ಅದು ನಮಗೆ ಮಾತ್ರ ಹೊಸತಾದರೆ ಅದು ವಾಸ್ತವದಲ್ಲಿ ಹೊಸತಲ್ಲ. ಹೊಸತು ಬ್ರೆಕ್ಕಿಂಗ್ ಎಂದರೆ ನಮ್ಮಿಂದಲೇ ಅದು ಪ್ರಾರಂಭವಾಗಬೇಕು.
ರೆಸಿಪಿಯೆಂದರೆ….. ಖಾದ್ಯದ ಒಂದು ಬಗೆ, ಮಲೆನಾಡಿನ ಬಡವರ ಪಾಲಕ್ ಎನ್ನುವ ಕೆಸದ ಬಗ್ಗೆ ನೀವೂ ಕೇಳಿದ್ದೀರಿ. ಈ ಕೆಸ,ಕಳಲೆ, ಮರಕೆಸ, ಕಾರೇಡಿ,ಅಣಬೆ ಸೇರಿದಂತೆ ಅನೇಕ ಮಳೆಗಾಲದ ಮಲೆನಾಡಿನ ಆಹಾರ ವೈವಿಧ್ಯಗಳಿವೆಯಲ್ಲ ಅವೆಲ್ಲಾ ಮನುಷ್ಯನ ಉಷ್ಣತೆ ವೃದ್ಧಿಸಿ ಶೀತದಿಂದ ಬಾಹ್ಯ ವೈರಸ್ ಗಳು ಬಾಧಿಸಬಾರದೆಂದು ನಮ್ಮ ಹಳೆಯ ಜನ ಕಂಡುಕೊಂಡ ಜ್ಞಾನ. ಇಂಥ ಮಳೆಗಾಲದ ವಿಶೇಷ ಆಹಾರ ಖಾದ್ಯಗಳ ಬಗ್ಗೆ ಆಸಕ್ತಿಯಿದ್ದ ನನಗೆ ಅದೊಂದು ದಿನ ಕೆಸದೊಂದಿಗೆ ಕಾರೇಡಿ ಸೇರಿಸಿ ಪಲ್ಯ ತಯಾರಿಸಬೇಕೆಂಬ ಆಸೆ ಹೊಟ್ಟೆಯಾಳದಿಂದಲೇ ಹುಟ್ಟಿಕೊಂಡಿತ್ತು.
ಕೊನೆಗೂ ಕೆಸ ತಂದು, ಕಾರೇಡಿ ತರಿಸಿ ಯಥಾ ಪ್ರಕಾರ ಚುಮ್ಮೆಣಸು, ಬೆಳ್ಳುಳ್ಳಿ, ಮುರಗಲ ಹುಳಿಗಳೊಂದಿಗೆ ಕಾಳು ಮೆಣಸನ್ನೂ ಸೇರಿಸಿ ಅವ್ವ ಕಾರೇಡಿ ಪಲ್ಯ ಮಾಡಿದಾಗ ಹೊಸ ರುಚಿ ಸಂಶೋಧಿಸಿದ ಖುಷಿಯೊಂದಿಗೆ ಸಂಬ್ರಮಿಸಿದ್ದೆ.
ನಂತರ ಮೂಲವ್ಯಾಧಿಗೆ ಬೆಳಿಗ್ಗೆ ಹಾಳು ಹೊಟ್ಟೆಯಲ್ಲಿ ಒಗ್ಗರಣೆ ಬೇವಿನೊಂದಿಗೆ ಜೇನುತುಪ್ಪ ಸೇರಿಸಿ ಸೇವಿಸಬೇಕೆಂಬ ಮಳವಳ್ಳಿ ಗೋಪಾಲನಾಯ್ಕರ ಸಲಹೆಯನ್ನು ಅನೇಕರಿಗೆ ಹೇಳಿದಂತೆ ಈ ಕೆಸಪ್ಪು-ಕಾರೇಡಿ ಪದಾರ್ಥದ ಬಗ್ಗೆ ಪುಕ್ಕಟ್ಟೆ ಪ್ರಚಾರ, ಸಲಹೆ ನೀಡಿದ್ದೆ. ಈ ಸವಿರುಚಿಯನ್ನು ಜಗತ್ಪ್ರಸಿದ್ಧ ಮಾಡಬೇಕೆಂಬ ನನ್ನ ಆಸೆ ಈಗಲೂ ಜೀವಂತ!
ಆದರೆ, ಅದೇನಾಯಿತೆಂದರೆ……… ಸ್ನೇಹಿತ ಕಾನಗೋಡಿನ ಗಣಪತಿ ಬೆಂಗಳೂರಿನಲ್ಲಿ ವಕೀಲಕೆ ಮಾಡುತ್ತಾ ಕೆಲವು ಸ್ಥಳಿಯ ವಿಶೇಶಗಳನ್ನು ಪರಿಚಯಿಸುತ್ತಾರೆ. ಹೀಗೆ ಅವರ ವಾಲ್ ನಲ್ಲಿ ಇತ್ತೀಚೆಗೆ ಸ್ವಾಣೆ ಹಬ್ಬ ಅಥವಾ ಶ್ರಾವಣ ಅಜ್ಜಿ ಹಬ್ಬ ಎನ್ನುವ ನಮ್ಮ ನೆಲದ ಆಚರಣೆಯೊಂದನ್ನು ಅವರು ಪರಿಚಯಿಸಿದರು. ಅದರ ಬಗ್ಗೆ ಕಾಮೆಂಟು, ಚರ್ಚೆಗಳಾಗಿ ಕೊನೆಗೆ ವೀರ ಆರ್ಯನ್ ಅಥವಾ ವೀರಸೂರ ಎನ್ನುವ ಸಾಗರದ ನಮ್ಮ ಸ್ನೇಹಿತರೊಬ್ಬರು ಈ ಸ್ವಾಣೆ ಹಬ್ಬದ ವಿಶೇಶವೊಂದನ್ನು ಹಿರಿಯರ ಬಾಯಲ್ಲಿ ಹೇಳಿಸಿದರು.
ಆ ಅಜ್ಜಿ ಈ ಸ್ವಾಣೆ ಹಬ್ಬ, ಶ್ರವಣ ಅಜ್ಜಿ ಹಬ್ಬದ ಆಚರಣೆ ಬಗ್ಗೆ ಹೇಳುತ್ತಾ ಕೆಸದ ಕೊಡೆ, ಕಾರೇಡಿ, ಬೆಳ್ಳೇಡಿ ಸುಟ್ಟು ಶ್ರವಣ ಅಜ್ಜಿಗೆ ಎಡೆ ಮಾಡುವುದು, ಕೆಸದೊಂದಿಗೆ ಕಾರೇಡಿ, ಬೆಳ್ಳೇಡಿ ಬೆರಕೆ ಹಾಕುವ ರೀತಿ ಶ್ರವಣ ಅಜ್ಜಿ ಖಾದ್ಯ ಪ್ರೀತಿಯನ್ನು ವಿವರಿಸಿದರು. ಇದನ್ನು ಕೇಳುತ್ತಾ ಸ್ವಾಣೆ ಹಬ್ಬ, ಕೆಸದ ಕೊಡೆ, ಗದ್ದೆನಾಟಿಯ ಬೆಳ್ಳೇಡಿಕಾರ ಎಲ್ಲಾ ನೆನಪಾದವು.
ಈ ಸವಿರುಚಿ ಚರ್ಚೆ, ಸಂಶೋಧನೆ, ಪೇಟೆಂಟ್, ಪೇಮೆಂಟ್ ಗಳ ಸವಿಸ್ತಾರ ಹುಡುಗಾಟ, ಹುಡುಕಾಟದಲ್ಲಿ ಕೆಸ ಕಾರೇಡಿ ಅಥವಾ ಬೆಳ್ಳೇಡಿ ಕೆಸಿನ ಪಲ್ಲೆ ವೈಯಕ್ತಿಕವಾಗಿ ನಮ್ಮ ಪೇಟೆಂಟ್ ವಿಷಯವಸ್ತು ಅಲ್ಲದಿದ್ದರೂ ನಮ್ಮ ಸಮೂದಾಯದ್ದಂತೂ ಖಾತ್ರಿ ಎನ್ನುವುದು ಸ್ಪಷ್ಟವಾಯಿತು.
ಅಂದಹಾಗೆ ನಮ್ಮ ಮೂಲನಿವಾಸಿ ಬುಡಕಟ್ಟುಗಳ ವಾರ, ಶ್ರಾವಣ, ಮದ್ಯ-ಮಾಂಸ ವರ್ಜದ ರೀತಿ-ರಿವಾಜುಗಳ ಹಿಂದೆ, ನಮ್ಮ ಋತುಮಾನಾಧಾರಿತ ಆಹಾರಾಭ್ಯಾಸಗಳ ಹಿಂದೆ ಹುದುಗಿರುವ ವಿಜ್ಞಾನದ ಮುಖವೂ ಅಸ್ಪಸ್ಟವಾಗಿ ಕಂಡಿತು. ನೆಲಮೂಲದ ಜ್ಞಾನ, ಬದುಕು ಎಷ್ಟು ಆರೋಗ್ಯವರ್ಧಕ, ಸಮಾಜಮುಖಿ ಎನ್ನುವುದೂ ಸ್ಫಸ್ಟವಾಯಿತು. ಹಿಂದೆ ಕಾರೇಡಿ ಬಗ್ಗೆ ಬರೆದಾಗ ಭರವಸೆ ಕೊಟ್ಟಂತೆ ನಮ್ಮ ಯೂಟ್ಯೂಬ್ ನಲ್ಲಿ ನೀವು ಕೆಸ ಕಾರೇಡಿ ರಸಾಯನದ ತಯಾರಿಯ ಬಗ್ಗೆ ತಿಳಿಯಬಹುದು.
samajamukhi.net ಮತ್ತು samaajamukhi youtube ಚಾನೆಲ್ ಗಳಿಗೆ subscribe ಆಗುವ ಮೂಲಕ ನಮ್ಮ ನೆಲಮೂಲದ ಜ್ಞಾನಪ್ರಸಾರಕ್ಕೆ ಸಹಕರಿಸಿ.


