ಕೋವಿಡ್19 ಅಥವಾ ಕರೋನಾ ಎಷ್ಟೆಲ್ಲಾ ಸಾವು-ನೋವುಗಳಿಗೆ ಕಾರಣವಾಯಿತೆಂದರೆ…. ಈ ಶತಮಾನ ನೆನಪಿಡುವಂಥ ಹೊಡೆತ ಪಡೆದ ಮನುಕುಲದ ಚರಿತ್ರೆಯಲ್ಲಿ ಕರೋನಾ ಚಿರಸ್ಥಾಯಿ.
ಇದರೊಂದಿಗೆ ಕರೋನಾ ಎಷ್ಟೆಲ್ಲಾ ಸಾಧ್ಯತೆಗಳಿಗೆ ಮುನ್ನುಡಿ ಬರೆದಿದೆಯೆಂದರೆ…. ಅದೂ ಕೂಡಾ ಈ ಶತಮಾನ ದಾಖಲಿಸಿಡಬೇಕು. ಕರೋನಾ ಅವಧಿಯಲ್ಲಿ, ಲಾಕ್ ಡೌನ್ ಕಾಲದಲ್ಲಿ, ಕರೋನಾ ಕಾರಣಕ್ಕೆ ಹೆದರಿ ಮುದುರಿಕುಳಿತ ಅವಧಿಯಲ್ಲಿ ಹೊಳೆದ ಯೋಚನೆ, ಯೋಜನೆಗಳು ಲಕ್ಷಾಂತರ.
ಅಂಥ ಯೋಚನೆ, ಯೋಜನೆ ಸಾಕಾರ ಮಾಡಿದವರು ಕೆಲವರು ಮಾತ್ರ. ಎಂಥವರಲ್ಲಿ ಮಾರುತಿ ಉಪ್ಪಾರ ಒಬ್ಬರು. ಮಾರುತಿ ಉಪ್ಪಾರ ಕ್ರೀಯಾಶೀಲ, ಕಾಳಜಿಯ ಶಿಕ್ಷಕ ಎನ್ನುವುದು ಬಲ್ಲವರಿಗಷ್ಟೇ ತಿಳಿದ ವಿಷಯ. ಆದರೆ ನಾವು ಮಾರುತಿ ಉಪ್ಪಾರರನ್ನು ಭೇಟಿ ಮಾಡಲು ಹೋದರೆ ಅವರು ಸಿಗುವುದು ಮಕ್ಕಳೊಂದಿಗೆ. ಶಾಲೆ-ಗ್ರಾಮದಲ್ಲಿ ಅರಣ್ಯೀಕರಣ, ಬೀಜದುಂಡೆ ಬಿತ್ತುವ ಕಾರ್ಯಕ್ರಮ, ಚಿಂದಿ ಆಯುವ ಮಕ್ಕಳಿಗೆ ಶಿಕ್ಷಣ, ಟೆಂಟ್ ಸ್ಕೂಲ್ ಹೀಗೆ ಅನೇಕ ಪ್ರಯೋಗಗಳಿಂದ ಯಶಸ್ವಿಯಾದ ಮಾರುತಿ ಉಪ್ಪಾರ್ ಈ ಕರೋನಾ ಕಾಲದಲ್ಲಿ ಮೊಬೈಲ್ ಇಲ್ಲದ, ನೆಟ್ವರ್ಕ್ ಲಭ್ಯವಿಲ್ಲದ ಬಡ, ಉಪೇಕ್ಷಿತ ಮಕ್ಕಳ ಶಿಕ್ಷಣಕ್ಕೆ ಏನಾದರೂ ಮಾಡಬೇಕೆಂದುಕೊಂಡಾಗ ಅವರಿಗೆ ಹೊಳೆದದ್ದು ಈ ಸಂಚಾರಿ ಶಾಲೆ.
ತನ್ನ ದ್ವಿಚಕ್ರವಾಹನದೊಂದಿಗೆ ಪಠ್ಯ-ಪ್ರಾತ್ಯಕ್ಷಿತೆಗಳ ಪೆಟ್ಟಿಗೆ ಹೊತ್ತು ಹೊರಟ ಮಾರುತಿ ಮಾಸ್ತರ್ ಗೆ ಮೊದಲೆರಡು ದಿನ ಅನುಮಾನದ ಆತಿಥ್ಯ, ಸ್ವಾಗತವೇ ಸಿಕ್ಕಿದ್ದು. ಈಗ ಮಕ್ಕಳೊಂದಿಗೆ ಹಿರಿಯರೂ ಇವರ ಪಾಠ ಕೇಳುತ್ತಾರೆ. ಕರೋನಾ ಬಗ್ಗೆ ದೇಶದ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಾರೆ. ಇವುಗಳೆಲ್ಲಾ ಸಾಧ್ಯವಾಗಿದ್ದು ಹೇಗೆಂದರೆ….. ಶಿರಸಿ ತಾಲೂಕಿನ ಗಡಿಗ್ರಾಮದ ಶಾಲೆ ತಿಗಣಿಯ ಶಿಕ್ಷಕರಾಗಿರುವ ಮಾರುತಿ ಉಪ್ಪಾರ್ ಕರೋನಾ ಕಾರಣಕ್ಕೆ ಮಕ್ಕಳ ಕಲಿಕೆ, ಶಿಕ್ಷಣ ನಿಲ್ಲಬಾರದೆಂದು ಸ್ವಯಂಪ್ರೇರಿತರಾಗಿ ಈ ಸಂಚಾರಿ ಶಾಲೆಯ ಪ್ರಯೋಗಕ್ಕಿಳಿದರು. ಇದರಿಂದ ಕರೋನಾ ರಜೆಯ ಅವಧಿಯಲ್ಲೂ ತಿಗಣಿಶಾಲೆಯ ಮಕ್ಕಳು ಅವರ ಮನೆ,ಗ್ರಾಮದಲ್ಲೇ ಕಲಿತರು, ಸಂಚಾರಿ ಶಿಕ್ಷಕ ಆರೋಗ್ಯ, ಶಿಕ್ಷಣ, ಭವಿಷ್ಯದ ಬಗ್ಗೆ ಮಕ್ಕಳ ಪಾಲಕರೊಂದಿಗೆ ಚರ್ಚಿಸಿದರು. ಜನ ಮತ್ತು ವಿದ್ಯಾರ್ಥಿಗಳ ಅನುಭವದಲ್ಲಿ ಶಾಲೆಯ ಶಿಕ್ಷಣಕ್ಕಿಂತ ಈ ಸಂಚಾರಿ ಶಾಲೆಯ ಶಿಕ್ಷಣ ಪರಿಣಾಮಕಾರಿ. ವೇತನ-ಅನುಕೂಲ ಪಡೆದು ರಜಾಮಜಾದಲ್ಲಿರುವ ಅಸಂಖ್ಯ ಶಿಕ್ಷಕರು, ಉಪನ್ಯಾಸಕರ ಮಧ್ಯೆ ಈ ಶಿಕ್ಷಕ ಮಾದರಿ ಎನಿಸುತ್ತಾರಲ್ಲವೆ? ಮಕ್ಕಳ ಶಿಕ್ಷಣ ಮನೇಲಲ್ವೆ ಎನ್ನೋಣವೆ?
ಕರೋನಾ, ಲಾಕ್ಡೌನ್ ಅವಧಿಯಲ್ಲಿ ಮಕ್ಕಳು ಕೂಲಿ ಕೆಲಸ, ಆಟ ಇತ್ಯಾದಿ ಚಟುವಟಿಕೆಗಳಿಂದ ಕಲಿಕೆ,ಶಿಕ್ಷಣ ಮರೆತದ್ದು ನಮ್ಮ ಗಮನಕ್ಕೆ ಬಂತು.ಆನ್ ಲೈನ್ ಶಿಕ್ಷಣದ ಮಿತಿ,ಬಡ ಪಾಲಕರ ದುಸ್ಥಿತಿ ಇವುಗಳ ಕಾರಣಕ್ಕೆ ಸಂಚಾರಿ ಶಾಲೆಯ ಯೋಚನೆ ಬಂತು. ಇಲಾಖೆಯ ಸೇತುಬಂಧ, ಜೀವನಶಿಕ್ಷಣ ಇವುಗಳ ರೀತಿ ಸಂಚಾರಿಶಾಲೆಯಿಂದಾಗಿ ನೂರಾರು ವಿದ್ಯಾರ್ಥಿಗಳಲ್ಲಿ ಬಹುತೇಕರಿಗೆ ಮಾರ್ಗದರ್ಶನ ಮಾಡಿ ಪರಿಣಾಮ ಪಡೆಯುತಿದ್ದೇವೆ. -ಮಾರುತಿ ಉಪ್ಪಾರ, ತಿಗಣಿ ಶಾಲೆ ಶಿಕ್ಷಕ