ಶುಗರ್ ಅಥವಾ ಮಧುಮೇಹಿಗಳು ಈ ಗಣಪತಿಗೆ ಜೇನುತುಪ್ಪದಲ್ಲಿ ಅಭಿಷೇಕ ಮಾಡಿಸಿದರೆ ಅವರ ಶುಗರ್ ಕಡಿಮೆಯಾಗುತ್ತದಂತೆ.
ಸಂತಾನ ಭಾಗ್ಯ, ವ್ಯಾಪಾರದಲ್ಲಿ ಲಾಭ, ಕೌಟುಂಬಿಕ ಕ್ಷೇಮ ಇವಗಳನ್ನೆಲ್ಲಾ ಬೇಡಿಕೊಂಡವರು ಇಲ್ಲಿ ಪ್ರಸಾದ ಪಡೆಯುತ್ತಾರೆ. ಹೀಗೆ ಕ್ಷಿಪ್ರ ಫಲ ನೀಡುವ ಈ ಗಣಪತಿಯನ್ನು ಕ್ಷಿಪ್ರಫಲವಿನಾಯಕ ಎಂದು ಕರೆಯುತ್ತೇವೆ.
ಕನ್ನೇಶ್ ಅದೇನಾಯ್ತೆಂದರೆ…. ಇದೇ ನಮ್ಮ ಇಟಗಿ ಹೊಳೆಯಲ್ಲಿ ಕೆಲವು ವರ್ಷ ಗಳ ಹಿಂದೆ ಒಂದು ಕಲ್ಲಿನ ಮೂರ್ತಿ ಸಿಕ್ತು. ಆ ಭಿನ್ನ ಗಣಪತಿಯನ್ನು ಪ್ರತಿಷ್ಠಾಪಿಸಬೇಕೆಂದು ಕಾರ್ಯಕ್ರಮಗಳನ್ನೆಲ್ಲಾ ನಡೆಸಿದೆವು. ನಂತರ ಶಾಸ್ತ್ರ ಕೇಳಲಾಗಿ ಕ್ಷಿಪ್ರ ಗಣಪತಿಯನ್ನು ಪ್ರತಿಷ್ಠಾಪಿಸಬೇಕೆಂಬ ಅಭಿಪ್ರಾಯ ಸಂಕಲ್ಪದ ಹಿನ್ನೆಲೆಯಲ್ಲಿ ಈ ದೇವಸ್ಥಾನ ಸ್ಥಾಪನೆಯಾಯಿತು. ಗುಡಿ ನಿರ್ಮಾಣವಾಯಿತು. ಮೂರ್ತಿ, ಉತ್ಸವ ಮೂರ್ತಿ, ಪ್ರತಿ ಸಂಕಷ್ಠಿಯಂದು ಎಳೆಯುವ ರಥ ಇವೆಲ್ಲಾ ಕ್ಷಿಪ್ರವಾಗಿ ನಡೆದಮೇಲೂ ನಾವು ಈ ಕ್ಷಿಪ್ರ ಗಣಪತಿಯ ಮಹಿಮೆಯನ್ನು ಮೆಚ್ಚದಿದ್ದರೆ ಹ್ಯಾಗೆ? ಎನ್ನುವಂತೆ ಕಲಗದ್ದೆ ವಿನಾಯಕ ಹೆಗಡೆ ನಮ್ಮನ್ನೇ ಪ್ರಶ್ನಿಸಿದರು.
ಜ್ಞಾನ,ನಂಬಿಕೆ, ಶೃದ್ಧೆ ಅವರವರ ವೈಯಕ್ತಿಕ ಆದರೆ ಬದ್ಧತೆ ವಿಷಯದಲ್ಲಿ ವಿನಾಯಕ ಹೆಗಡೆಯವರನ್ನು ಕಡೆಗಣಿಸುವಂತಿಲ್ಲ. ಬಂಗಾರಮಕ್ಕಿಯ ಮಾರುತಿ ಗುರೂಜಿಯವರಂತೆ ಈ ವಿನಾಯಕಣ್ಣ ನಮ್ಮೊಂದಿಗೆ ಆಪ್ತರಿಂದ ಸನ್ಮಾನಿಸಿಕೊಂಡವರು. ಅದಕ್ಕೂ ಮೊದಲೇ ಅವರು ಯಕ್ಷಗಾನದಲ್ಲಿ ಹೆಸರು ಮಾಡಿ ದೇಶ,ವಿದೇಶ ಸುತ್ತಿದವರು. ಯಕ್ಷಕನ್ಯೆ ಅಂಬೆ,ಕೃಷ್ಣ ಸೇರಿದಂತೆ ಯಾವುದೇ ಪಾತ್ರದಲ್ಲೂ ಲೀಲಾಜಾಲ ಅಭಿನಯ. ಚಿಟ್ಟಾಣಿ,ಡಾ.ಗುಂದಿ ಸೇರಿದಂತೆ ಅನೇಕ ಯಕ್ಷದಿಗ್ಗಜರೊಂದಿಗೆ ಹಾಡಿ ಕುಣಿದು ಜನರನ್ನು ಕುಣಿಯುವಂತೆ ಮಾಡಿದವರು.
ಹಾಗೆಂದು ಕಲಿತದ್ದು ಮೆಟ್ರಿಕ್ ವರೆಗೆ ಮಾತ್ರ, ನಂತರದ್ದು ಗಳಿಕೆಯ ಕಲಿಕೆ ಅಥವಾ ಕಲಿಯುತ್ತಾ ಗಳಿಕೆ!
ಇವರು ಸಿದ್ಧಾಪುರದ ಪ್ರಸಿದ್ಧ ಯಕ್ಷಗಾನ ಕಲಾವಿದ, ಸಂಘಟಕ ವಿನಾಯಕ ಹೆಗಡೆ ಕಲಗದ್ದೆ.
ಇಡಗುಂಜಿಯ ಶಂಭು ಹೆಗಡೆಯವರ ಮೇಳದಿಂದ ಕಲಿಕಾರ್ಥಿಯಾಗಿ ಪ್ರಾರಂಭಿಸಿ ಯಕ್ಷಲೋಕದ ಅಂಬೆ-ಕೃಷ್ಣನಾಗಿ ಮೆರೆದು ಸ್ವಂತ: ಶಂಭುಶಿಷ್ಯ ಯಕ್ಷಗಾನ ಮೇಳ ಕಟ್ಟಿದ ಇವರು ಜಗತ್ತಿನಲ್ಲೆಲ್ಲೂ ಕಾಣಸಿಗದ ಕ್ಷಿಪ್ರಫಲದಾಯಕ ವಿನಾಯಕನನ್ನು ಪ್ರತಿಷ್ಠಾಪಿಸಿ ಕ್ಷಿಪ್ರಪ್ರಸಾದಿತ ಯಕ್ಷನಾಟ್ಯ ಗಣಪತಿ ಎಂದು ಪ್ರಸಿದ್ಧಿಗೆ ತಂದವರು.
ಫಲನೀಡುವುದು, ಕೆಲಸಕೈಗೂಡುವುದು ತೀರಾ ವೈಯಕ್ತಿಕ ನಂಬಿಕೆಯ ವಿಚಾರ ಆದರೆ ಧರ್ಮ, ಧಾರ್ಮಿಕತೆ ಕಾರಣಕ್ಕೆ ಬ್ರಾಹ್ಮೀ ಮುಹೂರ್ತಕ್ಕೇ ಎದ್ದು ಅನುಷ್ಠಾನಾಧಿಗಳನ್ನು ಮಾಡಿ ನಂತರ ಕೆಲಸ, ಹವ್ಯಾಸ, ಅಭ್ಯಾಸಗಳಿಗೆ ಸಮಯಹೊಂದಿಸಿಕೊಳ್ಳುವುದಿದೆಯಲ್ಲ ಅದು ನಿಜಕ್ಕೂ ಸಾಧನೆ.ಇಂಥ ಸಾಧನೆಗಾಗಿ ಶ್ರಮಿಸುತ್ತಿರುವ ವಿನಾಯಕ ಹೆಗಡೆಯವರನ್ನು ನಾವು ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಭೇಟಿಯಾದದ್ದು ಆಕಸ್ಮಿಕ ಮತ್ತು ಕಾಕತಾಳೀಯ. ಆದರೆ ಹಲವು ಆಹ್ವಾನ,ಆಮಂತ್ರಣಗಳ ನಂತರ ಅದ್ಯಾಕೋ ಕ್ಷಿಪ್ರ ಗಣಪತಿಯನ್ನು ನೋಡಿ ಬರುವ ಹಂಬಲ ನನ್ನನ್ನು ಕಾಡಿದ್ದು ಭಕ್ತಿ, ದೇವರು, ನಂಬಿಕೆ ಇಂಥ ಲೌಕಿಕ ಕಾರಣಗಳಿಗಂತೂ ಅಲ್ಲ ಆದರೆ ತೀರಾ ಅಲೌಕಿಕ ಎನ್ನಬಹುದಾದಂಥ ಪರಿಚಯ, ಸ್ನೇಹ, ಕುತೂಹಲಗಳ ಕಾರಣಕ್ಕೆ ನನ್ನಂಥವನನ್ನೂ ಕರೆಸಿಕೊಂಡ ಗಣಪತಿ ವಿನಾಯಕಣ್ಣನ ಆತಿಥ್ಯ, ಸಹೃದಯತೆ ಪರಿಚಯಿಸಿದ.
ಸ್ನೇಹ- ಪ್ರೀತಿಗೂ ಕಾರಣವಾದ ಕ್ಷಿಪ್ರ ಗಣಪತಿ ವಿನಾಯಕಣ್ಣನ ವಿವರಣೆಯಂತೆ ಕ್ಷಿಪ್ರಫಲದಾಯಕನಾದರೆ ಅವನು ಲೋಕವಂದಿತನಾಗುವುದರಲ್ಲಿ ತಪ್ಪೇನಿದೆ. ಕೃಷಿಕ, ಯಕ್ಷಗಾನ ಕಲಾವಿದ, ಧಾರ್ಮಿಕ ವ್ಯಕ್ತಿ ವಿನಾಯಕ ಹೆಗಡೆ ಕಲಗದ್ದೆ ಕೃಷಿ, ಯಕ್ಷಗಾನ,ಧಾರ್ಮಿಕ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ಮಾಡುತ್ತಿರುವುದು ಪವಾಡವೂ ಅಲ್ಲ, ಪವಾಡ ಸದೃಶವೂ ಅಲ್ಲ ಆದರೆ ಅವರ ಶ್ರಮದ ನಾಟ್ಯ ವಿನಾಯಕ ಕ್ಷಿಪ್ರ ಪ್ರಸಾದಿತ ಗಣಪತಿಯ ಮಹಿಮೆ, ಕ್ಷೇತ್ರಪ್ರಸಿದ್ಧಿ ಕ್ಷಿಪ್ರಪ್ರಸಾದದ ರೀತಿ ಎನ್ನುವುದರಲ್ಲಿ ಅನುಮಾನಗಳಿಲ್ಲ. ಎಲ್ಲಾ ಕಲೆ,ಶ್ರಮ,ಪ್ರಯತ್ನಗಳ ಹಿಂದೆ ಮನುಷ್ಯನ ಸುಖ,ಶಾಂತಿ,ಸಂತೃಪ್ತಿ,ಸಂಮೃದ್ಧಿಯ ಸಕಾರಣ ಮುಖ್ಯ ಎನ್ನುವ ವಿನಾಯಕ ಹೆಗಡೆಯವರ ತತ್ವಜ್ಞಾನ ನಮ್ಮ ನೆಲದ ವೈಶಿಷ್ಟ್ಯದ ಪ್ರತಿಬಿಂಬ. ಇಂಥ ಸರಳ,ಕಲಾಸಾಧಕ ಈಗ ಕ್ಷಿಪ್ರಗಣಪತಿಯ ಮೂಲಕ ಲೋಕಕಂಟಕ ನಿವಾರಣೆಗೆ ಅಣಿಯಾಗಿದ್ದು ಅವರ ಯಕ್ಷಗಾನದ ಪಾತ್ರದಂಥ ಬರೀ ವೈವಿಧ್ಯತೆಯಂತೂ ಅಲ್ಲ. ಪ್ರತಿಸಂಕಷ್ಠಿಯ ದಿನ ನೂರಾರು ಜನ ಆಸ್ತಕರಿಗೆ ಊಟ, ಉಪಹಾರ ನೀಡುವ ವಿನಾಯಕ ಹೆಗಡೆ ತನ್ನದೇನಿಲ್ಲ ಎಲ್ಲವೂ ಅವನದೇ ಎನ್ನುವಲ್ಲಿಯೂ ಸಮರ್ಪಣಾ ಭಾವ ಕಾಣುತ್ತದೆ. ನನ್ನಂಥ ನಾಸ್ತಿಕನಿಗೆ ವಿನಾಯಕಣ್ಣ, ಕ್ಷಿಪ್ರ ಪ್ರಸಾದಿತ ವಿನಾಯಕ ಇಂಥ ಅನೇಕರು ಲೋಕವಂದಿತರಂತೆ ಕಾಣುವುದು ನನ್ನ ಧಾರ್ಮಿಕ ಪ್ರವೇಶಿಕತೆಯ ಪ್ರಯತ್ನವಂತೂ ಅಲ್ಲ. ಅವರ ದೇವರು ನಮ್ಮಂಥ ನಾಸ್ತಿಕರಿಗೂ ಒಳ್ಳೆಯದನ್ನು ಮಾಡುವಂತಾಗಲಿ!
for reading……..ಮಾಲ್ಗುಡಿ ದಿನಗಳ ಪ್ರಸ್ತುತತೆ
ಆರ್.ಕೆ.ನಾರಾಯಣ್ ರ ಮಾಲ್ಗುಡಿ ದಿನಗಳು ನನ್ನ ನೆಚ್ಚಿನ ಪುಸ್ತಕಗಳಲ್ಲೊಂದು ಅದರ ಒಂದು ಅಧ್ಯಾಯದಲ್ಲಿ ಸ್ವಾಮಿನಾಥನ್ ಎನ್ನುವ ವಿದ್ಯಾರ್ಥಿ ಶಾಲೆ ತಪ್ಪಿಸಿಕೊಳ್ಳಲು ತಲೆನೋವಿನ ಕಾರಣ ಕೊಟ್ಟು ಪ್ರಹಸನವೊಂದಕ್ಕೆ ಕಾರಣನಾಗುತ್ತಾನೆ.
ವಾಸ್ತವದಲ್ಲಿ ಆತನ ತಲೆನೋವಿನ ಕಾರಣ, ಅವರ ಶಿಕ್ಷಕಸಾಮ್ಯುಯೆಲ್ ಹೊಡೆಯುತ್ತಾರೆನ್ನುವ ದಂತಕತೆ ಇದರ ಸುತ್ತ ತಿರುಗಿ, ಮಗನ ಮಾತು, ಆರೋಪದಿಂದ ಕ್ಷುದ್ರನಾಗುವ ಅಪ್ಪ ಸ್ವಾಮಿಯ ಶಿಕ್ಷಕರ ವಿರುದ್ಧ ದೂರು ಬರೆಯುವುದು, ಅದನ್ನು ತೆಗೆದುಕೊಂಡು ಹೋದಾತ ಸ್ವಾಮಿ ತನ್ನ ಶಿಕ್ಷಕರನ್ನು ತನಗೆ ಹೊಡೆಯುವಂತೆ ಪ್ರೇರೇಪಿಸುವುದು ನಂತರ ಸಾಮ್ಯುಯೆಲ್ ಈ ಸ್ವಾಮಿಯ ಕೀಟಲೆಗಳಿಂದ ಬೇಸತ್ತು ಹೊಡೆಯುವುದು, ನಂತರ ಸ್ವಾಮಿ ಅಪ್ಪ ಬರೆದುಕೊಟ್ಟ ದೂರನ್ನು ಪ್ರಾಂಶುಪಾಲರಿಗೆ ನೀಡಲು ಹೋಗುವುದು. ಈ ಪ್ರಹಸನದುದ್ದಕ್ಕೂ ಅಪ್ಪ ಮಗ ಶಿಕ್ಷಕ ಸಾಮ್ಯುಯೆಲ್ ಪಡಬಹುದಾದ ಯಾತನೆ, ತೊಂದರೆಗಳ ಬಗ್ಗೆ ನಿರೀಕ್ಷಿಸುವುದು. ಕೊನೆಯಲ್ಲಿ ಪ್ರಾಂಶುಪಾಲರ ರಜೆಯಿಂದಾಗಿ ದೂರುಪತ್ರ ಕೊಡದ ಸ್ವಾಮಿ ಹೇಡಿಯೆನಿಸಿಕೊಂಡು ಆ ಪತ್ರವನ್ನು ಅಪ್ಪನೇ ಹರಿದು ಹಾಕುವ ಸಿಟ್ಟಿನ ಪ್ರಸಂಗ ಮಕ್ಕಳಿಗೆ, ಹಿರಿಯರಿಗೆ ವಿದ್ಯಾರ್ಥಿ ಶಿಕ್ಷಕರಿಗೆ ಪಾಠ, ಮಾರ್ಗದರ್ಶನದಂತಿದೆ. ವಿನೋದಕ್ಕೆಂದು ಮಾಲ್ಗುಡಿ ದಿನಗಳನ್ನು ಓದಿದರೂ ಈ ಕತೆಯ ನೀತಿ ನಮ್ಮನ್ನು ಮುಟ್ಟುತ್ತದೆ, ತಟ್ಟುತ್ತದೆ.
ಈ ಕತೆಯ್ಯಾಕೋ ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ವಿರೋಧ ಹುಟ್ಟಿಸಲು ಪ್ರಯತ್ನಿಸಿ, ಕೊನೆಗೆ ಮುಸ್ಲೀಂರು ಸಿಟ್ಟಾಗಬೇಕೆಂದು ನಿರೂಪಿಸುವ ಮತೀಯವಾದಿಗಳ ನಿರೀಕ್ಷೆಯಂತೆ ಹೋಲಿಕೆಯಾಗುವಂತೆನಿಸಿತು. ಸ್ವಾಮಿ ತನ್ನ ಶಿಕ್ಷಕರು ತನಗೆ ಹೊಡೆಯುವಂತೆ ಉದ್ಧೀಪಿಸುವ, ಉತ್ತೇಜಿಸುವ ಕೆಲಸಕ್ಕೂ ಈಗಿನ ಆಡಳಿತ ಮುಸ್ಲಿಂರನ್ನು ಉತ್ತೇಜಿಸಿ, ಉದ್ದೀಪಿಸಿ ಸಿಡಿದೇಳುವಂತೆ, ಉತ್ತೇಜಿಸುವಂತೆ ಮಾಡುವ ಪ್ರಯತ್ನಗಳನ್ನು ನೆನಪಿಸಿತು. ತಂದೆಯವರ ಸಹಾಯ ಎನ್ನುವ ಈ ಮಾಲ್ಗುಡಿ ದಿನಗಳ ಅಧ್ಯಾಯ ಕೆಲವು ಕೆಡುಕರನ್ನಾದರೂ ಬದಲಿಸಬಹುದೇನೋ ಎನಿಸಿತು. ಸಾಹಿತ್ಯ ಇಷ್ಟನ್ನಾದರೂ ಮಾಡಬೇಕಲ್ಲವೆ?
-ಕನ್ನೇಶ್