

ಕಳೆದ 5–6 ತಿಂಗಳುಗಳಲ್ಲಿ ಕೊರೊನಾದಿಂದ ಮರಣ ಹೊಂದಿದ ವ್ಯಕ್ತಿಯ ಶವವನ್ನು ಪಡೆಯಲು ಕುಟುಂಬದವರು, ಸಂಬಂಧಿಕರ ನಿರಾಕರಣೆ, ಇದಕ್ಕೆ ಕಾರಣ ಊರಿನವರ ವಿರೋಧ…ನಿಜಕ್ಕೂ ನಮ್ಮೆಲ್ಲರನ್ನು ಮತ್ತೊಮ್ಮೆ ಚಿಂತಿತರನ್ನಾಗಿ ಮಾಡಿತು.

ಯಾಕೆ ಹೀಗೆ? ನಾವು ಗಟ್ಟಿಮುಟ್ಟಾಗಿರುವಾಗ, ಹಣ ಇರುವಾಗ, ಜ್ಞಾನ ಚೈತನ್ಯಗಳಿರುವಾಗ ನಮ್ಮವನು, ನಮ್ಮೂರಿನವರು ಎಂದು ಹೆಮ್ಮೆಪಡುವ ಕುಟುಂಬದವರು, ಸಂಬಂಧಿಗಳು, ಊರಿನವರಿಗೆ ಮರಣ ಹೊಂದಿದ ತಕ್ಷಣ ಬೇಡವಾಗುವುದು ಅಪರಿಚಿತನಾಗುವುದು, ಅವನ ಬಗ್ಗೆ ಅಸಹ್ಯ ಎನ್ನಿಸುವುದು ಏತಕ್ಕಾಗಿ?
ತಾವು ಬದುಕಿ ಉಳಿಯುವ ಆಸೆಯ ಎದುರು ಉಳಿದ ಕುಟುಂಬ, ಗೆಳೆತನ, ಸಂಬಂಧ, ಜಾತಿಗಳು ನಗಣ್ಯವಾಗುವುದು ನಮ್ಮ ಸಮಾಜ ಸಾಗುತ್ತಿರುವ ಆತ್ಮಹತ್ಯಾತ್ಮಕ ಸ್ಥಿತಿಯನ್ನು ತೋರಿಸುತ್ತದೆ. ಪ್ರತಿಯೊಬ್ಬನೂ ತನ್ನ ಬದುಕು, ತನ್ನ ಮತ್ತು ಇತರ ಸಂಬಂಧಿಗಳಲ್ಲಿ ನನಗೆಷ್ಟು ಲಾಭ ಎನ್ನುವುದರ ಕುರಿತೇ ಯೋಚಿಸುತ್ತಿರುತ್ತಾನೆ ಎನ್ನುವುದಕ್ಕೆ ಮೇಲಿನ ಘಟನೆಗಳಿಗೆ ಸಾಕ್ಷಿ.
ಜೀವನ ಕ್ಷಣಿಕತೆ, ನಾಳೆ ಸಾಯುವ ಇವನಿಂದ ಏನು ಉಪಯೋಗ ಎನ್ನುವ ಯೂಸ್ ಆ್ಯಂಡ್ ಥ್ರೋ ಸಂಸ್ಕೃತಿಗೆ ನಮ್ಮೆಲ್ಲರ ಮನಸ್ಸು ವಾಲುತ್ತಿರುವುದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಅದೇ ರೀತಿ ಮನುಷ್ಯ ಅತ್ಯಂತ ಅಮೂಲ್ಯ ಗಳಿಗೆಯಲ್ಲಿ ಹೇಗೆ ವರ್ತಿಸುತ್ತಾನೆ, ಹೇಗೆ ವರ್ತಿಸಬೇಕು ಎನ್ನುವುದಕ್ಕೆ ಮಾದರಿಯಾಗಿದೆ. ಬಡತನ, ಶೋಷಣೆ ತುಂಬಿದ ಸಮಾಜದಲ್ಲಿ ಮನುಷ್ಯನ ಸಂಬಂಧಗಳು ಸವಕಳಿಯಾಗಿದ್ದು, ಅದು ಮನುಷ್ಯನ ವ್ಯಕ್ತಿತ್ವವನ್ನು ನಾಶ ಮಾಡುತ್ತಿರುವುದು ದಿಟವಾಗಿದೆ.
ಒಂದು ಹಳ್ಳಿಯಲ್ಲಿ ವೈದ್ಯ ಮರಣ ಹೊಂದುತ್ತಾನೆ. ಆ ವೈದ್ಯನಿಗೂ ಹಳ್ಳಿಯವರಿಗೂ ಹಲವು ಕಾರಣಗಳಿಂದ ಮನಸ್ತಾಪಗಳಿದ್ದವು. ಹಾಗಾಗಿ ಅವನ ಶವ ಸಂಸ್ಕಾರಕ್ಕೆ ಯಾರೂ ಮುಂದೆ ಬಂದಿಲ್ಲ. ಕೊನೆಯಲ್ಲಿ ಆ ಊರಿನ ನಿವೃತ್ತ ಕರ್ನಲ್ ತನ್ನ ಮಗಳು ಮತ್ತು ಮೊಮ್ಮಗನೊಂದಿಗೆ ಶವ ಸಂಸ್ಕಾರಕ್ಕೆ ಮುಂದೆ ಬರುತ್ತಾರೆ. ಇದು ಊರಿನವರಿಗೆ ಸಿಟ್ಟು ತರಿಸುತ್ತದೆ. ಆ ವೈದ್ಯನಿಂದ ಊರಿಗೆ ಏನೂ ಲಾಭವಿಲ್ಲ. ಊರಿನ ಕೆಲಸಗಳಿಗೆ ಸಹಕಾರ ನೀಡುತ್ತಿರಲಿಲ್ಲ ಎಂದು ಸಾಮೂಹಿಕವಾಗಿ ಹೇಳುತ್ತಾರೆ. ತನ್ನ ಜೀವ ಉಳಿಸಿದ ವೈದ್ಯನಿಗೆ ಶವ ಸಂಸ್ಕಾರ ಮಾಡಿ, ಅಂತಿಮ ಕೃತಜ್ಞತೆ ಸಲ್ಲಿಸಬೇಕೆಂಬುದು ಕರ್ನಲ್ ಮನದಾಸೆ. ಇಲ್ಲಿ ಊರಿನವರ ಸಾಮೂಹಿಕ ಮತ್ತು ಕರ್ನಲ್ ವೈಯಕ್ತಿಕ ನಿರ್ಧಾರಗಳು ಸಂಘರ್ಷಕ್ಕೆ ಒಳಗಾಗುತ್ತವೆ.
ಇದು ಬರುವುದು ಕೋಲಂಬಿಯಾ ದೇಶದ ಗಾರ್ಸಿಯಾ ಮಾರ್ಕ್ವಿಝ್ ಎಂಬ ಸರ್ವಕಾಲಿಕ ಲೇಖಕನ ‘ಲೀಫ್ ಸ್ಟಾರ್ಮ್’ ಎಂಬ ಕಾದಂಬರಿಯಲ್ಲಿ. ಸಾಹಿತ್ಯ ಕೃತಿಯೊಂದು ಕಾಲ, ದೇಶ ಬದ್ಧವಾಗಿದ್ದು, ಸಾರ್ವತ್ರಿಕ, ಸರ್ವಕಾಲಿಕ ಆಯಾಮ ಸಾಧಿಸಿಕೊಂಡಿರುವುದು ಜಗತ್ತಿನಲ್ಲಿ ಇಂತಹ ಘಟನೆಗಳು ಪುನಃ ಪುನಃ ಮರುಕಳಿಸುವುದರಿಂದಲೇ…
ಅದೇ ರೀತಿ ಮತ್ತೊಂದು ಘಟನೆ ಅಕ್ಟೋಬರ್ 1988ರ ಸಮಯದಲ್ಲಿ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಾ ಕೇಂದ್ರದಲ್ಲಿ ಆಗಿನ ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಿ ಅಬ್ದುಲ್ ನಜೀರ್ ಸಾಬರನ್ನು ಹೊತ್ತ ಹೆಲಿಕಾಪ್ಟರ್ ಆಕಾಶದಿಂದಲೇ ತನ್ನ ಪ್ರೀತಿಯ ತಾಲ್ಲೂಕಿನ ಬೆಟ್ಟ, ಕೆರೆ, ಹೊಲ, ಗದ್ದೆ, ತೋಟಗಳನ್ನು ತೋರಿಸುತ್ತಿತ್ತು. ಆಕಾಶದಿಂದಲೇ ಅವನ್ನೆಲ್ಲ ಕಣ್ತುಂಬಿಕೊಂಡು ಭಾವುಕರಾದ ನಜೀರ್ ಸಾಬ್ ತನ್ನನ್ನು ಈ ಎತ್ತರಕ್ಕೆ ಬೆಳೆಸಿದ ಜನರನ್ನು ಕೊನೆಯ ಬಾರಿಗೆ ನೋಡುವ ಆಸೆ ಹೊತ್ತು ಬಂದಿದ್ದರು. ಏಕೆಂದರೆ, ಅವರು ಆಗಲೇ ಕ್ಯಾನ್ಸರ್ ನಿಂದ ಬಳಲುತ್ತಿದ್ದು ತೀವ್ರ ಕೃಶರಾಗಿದ್ದರು.
ತನ್ನ ಮತ ಕ್ಷೇತ್ರದ ಬಹಳಷ್ಟು ಜನರ ಹೆಸರು ಹಿಡಿದು ಕರೆಯುವಷ್ಟು ಜನಾನುರಾಗಿ ನಜೀರ್ ಸಾಬ್ ಕರ್ನಾಟಕ ಇಲ್ಲಿಯವರೆಗೆ ಕಂಡ ಅತ್ಯುತ್ತಮ ರಾಜಕಾರಣಿಗಳಲ್ಲಿ ಪ್ರಮುಖರು. ಗುಂಡ್ಲುಪೇಟೆ ಜನರಿಗೆ ಇವರೆಂದರೆ ಮನೆಯ ಮನುಷ್ಯ. ಅಕ್ಕರೆ ಅಣ್ಣ, ಪ್ರೀತಿಯ ತಮ್ಮ, ಗೆಳೆಯ. ಇವರು ಮಂತ್ರಿಯಾಗುತ್ತಿದ್ದಂತೆ ಇಡೀ ಕ್ಷೇತ್ರದ ಜನರು ತಮ್ಮ ಸಹೋದರನೇ ಮಂತ್ರಿಯಾದಂತೆ ಸಂಭ್ರಮಿಸಿದ್ದರು. ಅದಕ್ಕೆ ಪೂರಕವಾಗಿ ಇಡೀ ದೇಶವೇ ಮೆಚ್ಚುವಂತಹ ಕರ್ನಾಟಕ ಪಂಚಾಯತ್‌ರಾಜ್ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅಧಿಕಾರ ವಿಕೇಂದ್ರೀಕರಣವನ್ನು ಮಾದರಿಯಾಗಿ ಜಾರಿಗೆ ತಂದರು. ನೀರಿನ ಬರದಿಂದ ತತ್ತರಿಸಿದ ಜನರಿಗೆ ಕೊಳವೆಬಾವಿ ತೆಗೆಸಿ ನೀರಿನ ದಾಹ ಇಂಗಿಸಿ, ನಜೀರಸಾಬರು ‘ನೀರಸಾಬ’ರಾದರು. ಇವರ ಈ ಕೆಲಸಗಳಿಗೆ ಬೆಂಬಲವಾಗಿ ನಿಂತವರು ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು.
ನಜೀರಸಾಬರು ಗುಂಡ್ಲುಪೇಟೆಗೆ ಬರುತ್ತಿರುವುದಾಗಿ ಸ್ಥಳೀಯ ಪತ್ರಿಕೆಗಳ ಮೂಲಕ ಕರಪತ್ರಗಳ ಮೂಲಕ ಡಂಗುರಗಳ ಮೂಲಕ ತಿಳಿಸಲಾಯಿತು. ಇವರನ್ನು ಹೊತ್ತ ಹೆಲಿಕಾಪ್ಟರ್ ಇಳಿಯುವ ಪ್ರದೇಶದಲ್ಲಿ ಪತ್ರಿಕಾ ವರದಿಗಾರರು ಕಾತರದಿಂದ ಕಾಯುತ್ತಿದ್ದರು. ನಜೀರಸಾಬ್ ಬರುತ್ತಾರೆಂದರೆ, ಸಾವಿರಾರು ಅವರ ಅಭಿಮಾನಿಗಳು, ಭಟ್ಟಂಗಿಗಳು, ಹಿಂಬಾಲಕರು, ಕಾಂಟ್ರಾಕ್ಟರ್‌ಗಳು, ಅಧಿಕಾರಿಗಳು ನೆರೆದಿರುತ್ತಿದ್ದರು. ಆದರೆ, ಕೊನೆಯ ಬಾರಿ ಅವರು ಬಂದಾಗಿನ ಚಿತ್ರಣವೇ ಬೇರೆ. ಇವರಾರು ಇರಲೇ ಇಲ್ಲ. ಅತ್ತಕಡೆ ಸುಳಿಯಲೇ ಇಲ್ಲ. ಅಲ್ಲೇ ಇದ್ದ ನಾಲ್ಕರು ಜನ ಆಪ್ತೇಷ್ಟರು ಮಾತ್ರ ಸ್ವಾಗತಿಸಿದರು. ಇವರೊಂದಿಗೆ ಸ್ವಲ್ಪ ಹೊತ್ತು ಮಾತನಾಡಿ, ತಮ್ಮ ಮನೆಗೆ ಬಂದರು. ಇದಾದ ನಾಲ್ಕೈದು ದಿನಗಳಿಗೆ ಮರಣ ಹೊಂದಿದರು.
ಜೀವನ ಅಂತಿಮ ಕ್ಷಣದಲ್ಲಿ ತಮ್ಮ ಜನರ ಬಗ್ಗೆ ಚಿಂತಿಸಿ, ನೋವಿನಲ್ಲೂ ತನ್ನವರನ್ನು ಕಾಣುವ ಆಸೆಯಿಂದ ಓಡೋಡಿ ಬಂದವನಿಗೆ ಜನರು ಹೀಗೇಕೆ ಪ್ರತಿಕ್ರಿಯಿಸಿದರು? ಎನ್ನುವುದು ನಿಗೂಢವಾಗಿದೆ.
ಷೇಕ್ಸಪಿಯರ್‌ನ ಒಂದು ಸಾನೆಟ್ ನೆನಪಾಗುತ್ತದೆ..
When in disgrace with fortune and men’s eyes
I all alone beweep my outcast state
And trouble deaf heaven with my bootless cries
And look upon myself and curse my fate.
ವಿಧಿಯ ದುರ್ಲಕ್ಷ್ಯಕ್ಕೆ ಜನರ ನಿರ್ಲಕ್ಷ್ಯಕ್ಕೆ
ತುತ್ತಾಗಿ ಕುಳಿತು ನಾನೊಬ್ಬನೇ ದುಃಖಿಸುವೆ.
ನನ್ನೀ ಅನಾಥತೆಗೆ ಕಿವಿಸತ್ತ ಸ್ವರ್ಗಕ್ಕೆ
ಮೊರೆಯಿಡುವೆ ಒಂದೇ ಸಮ, ಬರೀ ವ್ಯರ್ಥ ಚೀರಿಡುವೆ.
– ಎಂ.ಎಚ್.ನಾಯ್ಕ ಕಾನಗೋಡ
9886253409
