

ಉತ್ತರ ಕನ್ನಡ ಜಿಲ್ಲೆಯ ಅನೇಕ ಹಳ್ಳಿಗಳಿಗೆ ಸೇತುವೆ,ರಸ್ತೆ ವ್ಯವಸ್ಥೆ ಇಲ್ಲದೆ ಮಳೆಗಾಲ ಶಾಪವಾಗಿ ಕಾಡುವುದು ಇಲ್ಲಿಯ ವಿದ್ಯಮಾನ. ಇಂಥ ಹಳ್ಳಿಗಳ ಸಾಲಿನಲ್ಲಿ ಸಿದ್ಧಾಪುರದ ಮಾಣಿಹೊಳೆ ದಂಡೆಯ ಅನೇಕ ಗ್ರಾಮಗಳು ಸೇರುತ್ತವೆ. ಸಿದ್ಧಾಪುರದ ಕುಮಟಾ ರಸ್ತೆ ಮತ್ತು ಹೆಗ್ಗರಣೆ ರಸ್ತೆಗಳನ್ನು ಸಂಪರ್ಕಿಸುವ ಕತ್ರಿಗಾಲ, ಮಾಣಿಹೊಳೆ ರಸ್ತೆಯ ಎಡಕ್ಕೆ ಸುಮಾರು ನಾಲ್ಕ್ಐದು ಕಿ.ಮೀ. ದೂರದಲ್ಲಿ ಮಾಣಿಹೊಳೆ (ಅಘನಾಶಿನಿ) ತನ್ನಷ್ಟಕ್ಕೆ ತಾನು ಹರಿದು ಹೋಗುತ್ತದೆ. ಈ ಹೊಳೆಯ ಇಕ್ಕೆಲಗಳ ಅನೇಕ ಗ್ರಾಮಗಳಿಗೆ ಈಗಲೂ ಅವಶ್ಯ ಸೇತುವೆ, ಸಂಪರ್ಕ ರಸ್ತೆಗಳಿಲ್ಲ. ಈ ತೊಂದರೆಯಿಂದ ಬೇಸತ್ತ ಇಲ್ಲಿಯ ಹಾವಿನಬೀಳು, ಹಾಸಗೋಡು, ಕಸ್ಗೆ, ಕಾನ್ಮನೆ ಉಳ್ಳಾಣೆಜಡ್ಡಿ ಜನರು ಇದೇ ವಾರದ ಮೊದಲದಿನ ಮಾಧ್ಯಮ ಪ್ರತಿನಿಧಿಗಳನ್ನು ತಮ್ಮೂರಿಗೆ ಕರೆಸಿ ತಮ್ಮ ಬವಣೆ ಹೇಳಿಕೊಂಡರು.

ಈ ಭಾಗದಲ್ಲಿ ಮೊಬೈಲ್ ಸಂಪರ್ಕ ಇಲ್ಲ, ರಸ್ತೆಗಳಲ್ಲಿ ಮಳೆಗಾಲದಲ್ಲಿ ಓಡಾಡುವುದೇ ಕಷ್ಟ, ಕೆಲವು ಸಮಯದಲ್ಲಂತೂ ಇಲ್ಲಿ ಬೀಳುವ ಮರಗಳನ್ನು ತೆರವುಮಾಡದೆ ದಿನವೀಡಿ ಮಾರ್ಗಮಧ್ಯೆದಲ್ಲೇ ಉಳಿಯುವ ದುಸ್ಥಿತಿ, ಇಂಥ ತೊಂದರೆಯಿಂದಾಗಿ ಈ ಭಾಗದ ಕೆಲವರು ಅನಾರೋಗ್ಯ, ಹೆರಿಗೆ ನೋವು,ಬಾಣಂತನದ ಅವಧಿಯಲ್ಲಿ ಜೀವಬಿಟ್ಟಿದ್ದಾರೆ ಎಂದರು. ಹಾವಿನಬೀಳಿನ ಪ್ರಕಾಶ ಹೆಗಡೆ.
ಮಳೆಗಾಲದಲ್ಲಿ ಇಲ್ಲಿ ಸಂಪರ್ಕ ರಸ್ತೆ, ಸಂಪರ್ಕ ಸಾಧನಗಳದ್ದೇ ಸಮಸ್ಯೆ ನನ್ನ ಹೆರಿಗೆ ಸಮಯದಲ್ಲಿ ಈ ತೊಂದರೆ ಬೇಡ ಎಂದು ಎರಡು ತಿಂಗಳು ಶಿರಸಿಯ ಸಂಬಂಧಿಗಳ ಮನೆಯಲ್ಲಿ ಉಳಿದಿದ್ದೆ, ಅಸಹಾಯಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ಕಷ್ಟ ಅನುಭವಿಸಬೇಕಾಗುತ್ತದೆ ಈ ತೊಂದರೆ ಬಗ್ಗೆ ಜನಪ್ರತಿನಿಧಿಗಳೂ ಗಮನಹರಿಸದಿರುವುದು ನಮ್ಮ ದುರಂತ ಎನ್ನುತ್ತಾರೆ ಇದೇ ಗ್ರಾಮದ ಶ್ವೇತಾ ಹೆಗಡೆ
ಈಬಗ್ಗೆ ಈಗಾಗಲೇ ಹಲವು ಬಾರಿ ಜಿಲ್ಲಾಡಳಿತದ ವರೆಗೆ ಮನವಿ ಮಾಡಿದ್ದರೂ ಫಲ ಸಿಗಲಿಲ್ಲ ಹಾಗಾಗಿ ಈಗ ಮುಖ್ಯಮಂತ್ರಿಗಳ ವರೆಗೆ ನಿಯೋಗ ಹೋಗಿ ಈ ಸಮಸ್ಯೆ ಬಗೆಹರಿಸಬೇಕಾದ ಅನಿವಾರ್ಯತೆ ನಮಗಿದೆ ಎಂದು ಅಲವತ್ತುಕೊಂಡವರು ಕನ್ನ ನಾಯ್ಕ, ಮಂಜುಗೌಡ.
ಈ ಭಾಗದ ಸಮಸ್ಯೆ ಬಗ್ಗೆ ಮಾಧ್ಯಮಗಳ ಮೂಲಕ ಗಮನಸೆಳೆಯುವ ಪ್ರಯತ್ನ ಮಾಡಿರುವ ಸಿದ್ಧಾಪುರ ತಾಲೂಕಾ ಬಿ.ಎಸ್. ಎನ್.ಡಿ.ಪಿ. ಅಧ್ಯಕ್ಷ ವಿನಾಯಕ ನಾಯ್ಕ ತಾಲೂಕಿನಲ್ಲಿ ರಸ್ತೆ, ಸೇತುವೆಗಳಿಲ್ಲದೆ ಇಂಥ ತೊಂದರೆ ಇರುವ ಅನೇಕ ಗ್ರಾಮಗಳಿವೆ. ಈ ಗ್ರಾಮಗಳ ಸಮಸ್ಯೆ ಬಗೆ ಹರಿಸಲು ತಾಲೂಕಿಗೆ ಕನಿಷ್ಟ 200 ಕೋಟಿಗಳ ವಿಶೇಶ ಅನುದಾನ ಬೇಕು. ಈ ಬಗ್ಗೆ ನಮ್ಮನ್ನಾಳುತ್ತಿರುವ ಕಾಲು ಶತಮಾನಗಳ ಜನಪ್ರತಿನಿಧಿಗಳಿಂದ ಈ ಕೆಲಸ ಸಾಧ್ಯವೆ ಎನ್ನುವ ಅನುಮಾನ ನಮಗೆ ಎನ್ನುತ್ತಾರೆ.
ಹೀಗೆ ತಮ್ಮ ಬವಣೆ, ತೊಂದರೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಿವಿಯಾಗದೆ ಮಾಧ್ಯಮಗಳ ಮೊರೆ ಹೋಗಿರುವ ಇಲ್ಲಿಯ ಜನರ ನಿತ್ಯ ಸಮಸ್ಯೆ ರಸ್ತೆ, ಸಂಪರ್ಕಮಾಧ್ಯಮಗಳದ್ದು ಈ ಬಗ್ಗೆ ಒಂದು ತಿಂಗಳೊಳಗಾಗಿ ಅವಶ್ಯ ಭರವಸೆ ದೊರೆಯದಿದ್ದರೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಹೋಗುವ ಇವರ ಯೋಚನೆ, ಯೋಜನೆ ಇವರ ಸಮಸ್ಯೆಗೆ ಉತ್ತರ ದೊರಕಿಸಬಹುದೆ ಎನ್ನುವುದೇ ಯಕ್ಷ ಪ್ರಶ್ನೆ.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
