ತಮ್ಮಣ್ಣ ಬೀಗಾರರು ಮಕ್ಕಳಿಗಾಗಿ ಬರೆದ ಕಥಾಸಂಕಲನ “ಗಿರಗಿಟ್ಟಿ” ಒಂದು ಕುತೂಹಲ ಭರಿತ ಮಕ್ಕಳ ಸಾಹಿತ್ಯ. ಮಕ್ಕಳ ಮನಸ್ಸಿಗೆ ಒಪ್ಪುವ 15 ಕಥೆಗಳಿವೆ. ಮನೆಯ ಸುತ್ತಲಿನ ಪರಿಸರ, ಸಾಕು ಪ್ರಾಣಿಗಳು, ಪಕ್ಷಿಗಳು ಇವೆಲ್ಲವೂ ಇವರ ಕಥಾ ವಸ್ತುಗಳು. ಮಕ್ಕಳು ಶಾಲೆಗೆ ಹೋಗುವಾಗ ದಾರಿಯಲ್ಲಿ ಸಿಗುವ ಕೆಲವೊಂದು ಪ್ರಾಣಿ ಪಕ್ಷಿ ಅವುಗಳ ಜೊತೆಗೆ ಸಂಕೀರ್ಣವಾದ ಬಾಲ್ಯದ ಮಕ್ಕಳ ಯೋಚನಾ ಲಹರಿಯನ್ನು ಮಕ್ಕಳ ಕಣ್ಣಿನಿಂದಲೇ ನೋಡಿದ ಕೃತಿ ‘ಗಿರಗಿಟ್ಟಿ’.
ಗಿರಗಿಟ್ಟಿ’ಯಲ್ಲಿ “ಕತ್ತಲು” ಎಂಬುದು ಮೊದಲನೆಯ ಕಥೆಯಾದರೆ “ಹೆಗಲ ಮೇಲೆ ಕುಳಿತು” ಎಂಬುದು ಕೊನೆಯ ಕಥೆಯಾಗಿದೆ. “ಕತ್ತಲು” ಕಥೆಯಲ್ಲಿ ಸ್ಕೂಲ್ ಬಸ್ಸಿನಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿ ಇಶಾನ ನಾಯಿಯೊಂದನ್ನು ಇಷ್ಟ ಪಟ್ಟ ಬಗೆ ಮನೋಜ್ಞಾನವಾಗಿದೆ. ಈ ಇಶಾನನಂತೆ ನಮ್ಮ ನಡುವೆಯೂ ಹಲವರು ಇಶಾನರಿರಬಹುದು. ಕೊನೆಯ ಕಥೆಯಾದ ‘ಹೆಗಲ ಮೇಲೆ ಕುಳಿತು’ ಕಥೆಯೂ ಅಷ್ಟೆ. ಹೆಣ್ಣು ನಾಯಿ ಮರಿಯೊಂದನ್ನು ಅದರ ಯಜಮಾನ ಹಿಂಸಿಸಿದ ರೀತಿ ಮತ್ತು ಕೊನೆಗೂ ಆ ಪುಟ್ಟ ನಾಯಿಮರಿ ಯಜಮಾನನ ಮಗನ ಮೂಲಕ ಮತ್ತೆ ಮನೆ ಸೇರುವ ರೀತಿ ತುಂಬಾ ಮಾರ್ಮಿಕವಾಗಿದೆ.
‘ಕಪ್ಪೆಯ ಕಣ್ಣು’ ಎಂಬ ಕಥೆಯಲ್ಲಿ ಶಿಕ್ಷಕರು ಪಾಠ ಮಾಡುವಾಗ ನಿಶಬ್ದ ತರಗತಿಯಲ್ಲಿಯೂ ಕೆಲವು ಮಕ್ಕಳು ಬಾಯಿಯಿಂದ ಮಾತಾಡದಿದ್ದರೂ ಕಣ್ಣಿನ ಮೂಲಕ, ಹುಬ್ಬಿನ ಮೂಲಕ, ಮೂಗಿನ ತುದಿಯಲ್ಲಿ ಮಾತನಾಡುವಂತೆ ಸಂವಹನ ಸಾಧಿಸುವ ಕಲೆಯನ್ನು ಹೊಂದಿರುತ್ತಾರೆ ಎಂಬುದನ್ನು ಸಹಜವಾಗಿ ಹೇಳಿದ್ದಾರೆ. ಮಲೆನಾಡಿನ ಪರಿಸರದಲ್ಲಿ ಬೇರೆ ಬೇರೆ ರೀತಿಯ ಕಪ್ಪೆಗಳ ವರ್ತನೆ ಹಾಗೂ ಅವುಗಳೊಂದಿಗೆ ಮಕ್ಕಳ ಸಂಬಂಧ ಕುತೂಹಲ ಮೂಡಿಸುತ್ತದೆ. ‘ರೋಹನ, ಗಣಪ ಮತ್ತು ನಾನು’ ಕಥೆಯಲ್ಲಿ ಕಾಡು ಅಂದರೆ ಏನು ಎಂದು ತಿಳಿಯದ ರೋಹನನನ್ನು ಅವನ ಚಿಕ್ಕಪ್ಪನ ಮಗ ಹಾಗೂ ಕಾಡನ್ನು ಬಲ್ಲ ಅವನ ಗೆಳೆಯ ಕಾಡಿಗೆ ಕರೆದುಕೊಂಡು ಹೋಗುವ ಸನ್ನಿವೇಶದ ಚಿತ್ರಣ ಸೊಗಸಾಗಿದೆ. ಇಲ್ಲೆಲ್ಲ ಕಾಡಿನ ಚಿತ್ರಣ ಸುಂದರವಾಗಿ ತೆರೆದುಕೊಂಡಿದೆ. ‘ಓತಿ ರಾಜ ಕಥೆ’ಯಲ್ಲಿ ಪುಟ್ಟಿ ಜಿರಲೆಯನ್ನು ಮುಷ್ಠಿಯಲ್ಲಿ ಬಚ್ಚಿಟ್ಟು ಯಾವ ಭಯವೂ ಇಲ್ಲದೆ ಹೊರಗಿನ ಪರಿಸರಕ್ಕೆ ಬಿಡುವ ರೀತಿ ಮುಂದೆ ಅದೇ ಪರಿಸರದಲ್ಲಿ ಪುಟ್ಟಿ ಓತಿಕ್ಯಾತದ ಬಗ್ಗೆ ನಡೆಸುವ ಸಂಭಾಷಣೆ ಅರ್ಥಪೂರ್ಣವಾಗಿದೆ. ಹೀಗೆ ಪ್ರತಿಯೊಂದು ಕಥೆಯೂ ಮಕ್ಕಳ ಆಲೋಚನಾವರ್ತುಲದಲ್ಲೇ ರೂಪುಗೊಳ್ಳುತ್ತಾ ಹೋಗುತ್ತದೆ.
‘ದೆವ್ವದ ಮರ’ ಕಥೆಯಲ್ಲಿ ಬಸುರಿ ಮರದ ಸುತ್ತ ಇದ್ದ ರೋಚಕ ಕಥೆಯನ್ನು ಸಾರುತ್ತದೆ. ಯಾವ ರೀತಿ ಮಕ್ಕಳ ಮನಸ್ಸಿನಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬಹುದು,. ತಮಗೆದುರಾಗುವ ವಿವಿಧ ಸಮಸ್ಯೆಗಳನ್ನು ಮನೋ ವೈಜ್ಞಾನಿಕವಾಗಿ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬ ವಿಶಿಷ್ಟ ಚಿಂತನೆಗೆ ಕಥೆ ಅವಕಾಶ ಮಾಡಿಕೊಟ್ಟಿದೆ. ‘ಗಿರಗಿಟ್ಟಿ’ ಎಂಬ ಕಥೆಯೂ ಆಕಾಶ ಕಾಯಗಳ ಮೂಲಭೂತ ಪರಿಕಲ್ಪನೆಯನ್ನು ಒಳಗೊಂಡಿದೆ. ‘ಹಸಿವಾಗಿಲ್ವ’ ಎಂಬ ಕಥೆಯು ಅಮ್ಮನ ಪ್ರೀತಿಯನ್ನು ಮತ್ತು ತ್ಯಾಗವನ್ನು ಅತೀ ಹತ್ತಿರದಿಂದ ಸಹಜವಾಗಿ ಸಾರುತ್ತದೆ.
ತಮ್ಮಣ್ಣ ಬೀಗಾರರ ರಚನೆಯ ಪ್ರತಿ ಕಥೆಯಲ್ಲಿಯೂ ಮಕ್ಕಳ ಮನಸ್ಸಿನ ಸೂಕ್ಷಸ್ತರದಯೋಚನೆ ಈ ಪರಿಸರದೊಂದಿಗೆ ಮಕ್ಕಳು ಬೆರೆಯುವ ಕ್ರಮ, ನಮ್ಮ ಸುತ್ತ ಮುತ್ತಲೂ ಇರುವ ಸಾಕು ಪ್ರಾಣಿಗಳಾದ ನಾಯಿ, ದನ, ಬೆಕ್ಕುಗಳು, ಯಾವ ರೀತಿ ಯೋಚಿಸುತ್ತದೆ ಎಂಬುದು ಅನಾವರಣಗೊಳ್ಳುವುದೇ ಒಂದು ವಿಶೇಷ ವಿಚಾರವಾಗಿದೆ.
ಪರಿಸರದಿಂದಲೇ ಹೆಕ್ಕಿ ತೆಗೆದ ಹತ್ತು ಹಲವು ವಸ್ತುವನ್ನಾಯ್ದ ಕಥೆಗಳು ಮಕ್ಕಳ ಮನೋ ವಿಕಾಸಕ್ಕೆ ಅತ್ಯಂತ ಪರಿಣಾಮಾಕಾರಿಯಾಗಿದೆ ಎನ್ನುವುದೇ ಕಥಾನಕದ ವಿಶಿಷ್ಟ ಮಾರ್ಗವಾಗಿದೆ. ಮನುಷ್ಯ ಮತ್ತು ಪ್ರಾಣಿಗಳ ಸಂಕೀರ್ಣವಾದ ಸಂಬಂಧಗಳು ಒಂದು ಕಥೆಯು ಹೇಳಿದರೆ... ಇನ್ನೊಂದು ಕಥೆಯಲ್ಲಿ ಕಪ್ಪೆಯ ಬಗ್ಗೆ ಹೇಳುತ್ತಾ ಮಳೆಗಾಲದ ಮಲೆನಾಡಿನ ಪರಿಸರ, ಹಳ್ಳಿಯ ಜನರ ಜೀವನ ಶೈಲಿ, ಹಳ್ಳಿಯ ಮನೆಗಳ ಚಿತ್ರಣ, ಶಾಲಾದಿನಗಳು ಪ್ರಾರಂಭವಾಗುವಾಗ ವಿದ್ಯಾರ್ಥಿಗಳ ಸಂಭ್ರಮ, ಈ ರೀತಿಯ ದೃಶ್ಯವನ್ನು ಕಾಣುತ್ತೇವೆ.
ಇಲ್ಲಿನ ಕಥೆಗಳಲ್ಲಿ ಬರುವ ಸನ್ನಿವೇಶಗಳು ಮಕ್ಕಳ ಭಾಷಾ ಬೆಳವಣಿಗೆಗೆ, ಜ್ಞಾನಾರ್ಜನೆಗೆ ಸಹಾಯವಾಗುತ್ತದೆ. ತಮ್ಮಣ್ಣ ಬೀಗಾರರ ಕಥೆಗಳು ಕೇವಲ ಮಕ್ಕಳಿಗಷ್ಟೇ ಅಲ್ಲದೆ ಶಿಕ್ಷಣ ಕ್ಷೇತ್ರದ ಆಸಕ್ತರಿಗೆ ಶಿಕ್ಷಕರಿಗೆ ಶಿಕ್ಷಕ ತರಬೇತುದಾರರಿಗೆ ಒಂದು ಅಧ್ಯಾಪನ ವಿಷಯವಾಗಿಯೂ ಸಲ್ಲುತ್ತದೆ. ಶಿಕ್ಷಣ ಶಾಸ್ತ್ರದ ಜ್ಞಾನ, ಸಂರಚನಾವಾದದ ತಳಹದಿಯಲ್ಲಿಯೇ ರೂಪುಗೊಂಡ ಇಂಥ ಕಥೆಗಳು ಮಕ್ಕಳ ಭಾವ ಕೋಶಕ್ಕೆ ಮತ್ತು ಬದುಕಿಗೆ ಹಿಡಿದ ಕೈ ಕನ್ನಡಿಯಾಗಿವೆ.
ಹೀಗೆ ಗಿರಗಿಟ್ಟಿ ಸಂಕಲನದ ಎಲ್ಲ ಕಥೆಗಳೂ ಕೂಡ ಮಕ್ಕಳ ಮನಸ್ಸಿನ ಸೂಕ್ಷ್ಮ ಸಂವೇದನೆಗಳನ್ನು ಎಳೆ ಎಳೆಯಾಗಿ ಬಿಡಿಸುತ್ತದೆ. ಕೇವಲ ಕಥೆಯಾಗಿ ಓದುಗನನ್ನೂ ಸೆಳೆದು ಕೊಂಡು ಹೋಗುವುದರ ಜೊತೆಜೊತೆಗೆ ಶಿಕ್ಷಣ ಕ್ಷೇತ್ರದ ಆಸಕ್ತರು ಅಧ್ಯಯನ ಕೃತಿಯಾಗಿಯೂ ಗಿರಗಿಟ್ಟಿಯನ್ನು ಬಳಸಿಕೊಳ್ಳಬಹುದು.
-ಪದ್ಮನಾಭ ಸಿ ಹೆಚ್
ಉಪನ್ಯಾಸಕರು
ಮಂಗಳೂರು
17/10/2020
ಬ್ಲರ್ಬ್-
ನಿಸರ್ಗ ಪ್ರೀತಿ, ಬಾಲ್ಯದ ಹುಡುಗಾಟ, ಮೋಜು, ಮಾನವೀಯತೆ, ಅಂತಃಕರಣ ಮತ್ತು ಜೀವನದ ವಾಸ್ತವಗಳನ್ನು ಎಷ್ಟು ಬೇಕೋ ಅಷ್ಟು ಮಾತ್ರ ಎರಕ ಹೊಯ್ಯುತ್ತ ಮೊದಲಿನಿಂದಲೂ ಮಕ್ಕಳಿಗೆ ತುಂಬಾ ವಿಶಿಷ್ಟವಾದ ಕಥೆಗಳನ್ನು ಕೊಡುತ್ತ ಬಂದವರು ತಮ್ಮಣ್ಣ ಬೀಗಾರ ಅವರು. ಬಾಲ್ಯತನದ ಹುರುಪು-ಹುಮ್ಮಸ್ಸು, ಸುಖ-ಸ್ವಾರಸ್ಯ, ಸಿಟ್ಟು-ಸೆಡವು, ನಿರಾಸೆ-ನಿಟ್ಟುಸಿರುಗಳನ್ನು ಕಲಾತ್ಮಕವಾಗಿ ಕಟ್ಟಿಕೊಡಬಲ್ಲರು. ಮಕ್ಕಳ ಬಾಲ್ಯವನ್ನು ಬಾಲ್ಯತನದ ಕಣ್ಣುಗಳಿಂದ ಕಂಡು, ಬಾಲ್ಯತನದ ಕಿವಿಗಳಿಂದ ಕೇಳಿ ಅದನ್ನು ಮಕ್ಕಳ ಮನಸ್ಸಿಗೆ ಮುದಕೊಡುವಂತೆ ಬರೆಯುವ ಶಕ್ತಿ ಅವರಿಗಿದೆ. ಹಿಂದಿನಿಂದಲೂ ಇವರದು ತುಂಬಾ ಸಮಾಧಾನ ಚಿತ್ತದ ಬರವಣಿಗೆ. ಒಂದು ರೀತಿಯಲ್ಲಿ ಅದು ಯಾವುದೇ ನಿಡುಸುಯ್ಯುವಿಕೆ ಇಲ್ಲದ ನಿಸರ್ಗದ ನಿತ್ಯೋತ್ಸವ.
-ಡಾ. ಬಸು ಬೇವಿನಗಿಡದ.
ಲೇಖಕರು: ತಮ್ಮಣ್ಣ ಬೀಗಾರ.
ಪ್ರಕಾಶಕರು: ಪ್ರೇಮ ಪ್ರಕಾಶನ ಮೈಸೂರು
ಮೊಬೈಲ ನಂ:9886026085
ಪುಟಗಳು: 100
ಬೆಲೆ; 90 ರೂ.
ಮೊದಲ ಮುದ್ರಣ: 2020