

ಅಪ್ಪಯ್ಯ ಭಾಗ…07
ಭೂಮಿ ಹೋರಾಟದ ವಿರುದ್ಧ ಚಲನೆಯ ಹಾದಿ…..
ನಮ್ಮ ಕುಟುಂಬಕ್ಕೆ ಭೂಮಿಯ ಒಡೆತನ ಬಂದಿದ್ದು 1996ರಲ್ಲಿ. ಅದಕ್ಕೂ ಮೊದಲು ಅಪ್ಪಯ್ಯ 18 ವರ್ಷ ಗೇಣಿ ರೈತ ಆಗಿದ್ದರು. ಸಾಗರ ತಾಲೂಕಿನ ಕರೂರು ಮತ್ತು ಬಾರಂಗಿ ಹೋಬಳಿಯಲಿ ಜೈನ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಗೇರುಸೊಪ್ಪ ರಾಣಿಯ ನಿಕಟತೆ ಸೇರಿ ಬೇರೆ ಬೇರೆ ಇತಿಹಾಸ ದ ಕಾರಣ ಇದಕ್ಕೆ ಇದೆ. ನನ್ನ ಮನೆಯ ಕೂಗಳತೆ ದೂರದಲ್ಲಿ ಕದಂಬರ ಕಾಲದ ಬಸದಿ ಇತ್ತು. (ಈಗ ವಳಗೆರೆ ಗೆ ಸ್ಥಳಾಂತರ ಆಗಿದೆ). ಬಸದಿಯ ರಕ್ಷಣೆಗೆ ಏಳು ಸುತ್ತಿನ ಕಂದಕವನ್ನು ನಿರ್ಮಾಣ ಆ ಕಾಲದಲ್ಲೇ ಮಾಡಲಾಗಿದೆ.
ನಮ್ಮ ಅಪ್ಪ ಗೇಣಿ ಮಾಡುತ್ತಾ ಇದ್ದಿದ್ದು ಕರೂರು ಪುಟ್ಟೇಗೌಡರ ನಾಲ್ಕು ಎಕರೆ ಫಲವತ್ತಾದ ಜಮೀನನ್ನು. ವರದಾನದಿ ದಂಡೆಯ ಮೇಲೆ ಭೂ ಹೋರಾಟ ಉಚ್ಛಾಯ ಸ್ಥಿತಿ ತಲುಪಿ ಲೋಹಿಯಾ ಜಂಬಗಾರು ರೈಲು ನಿಲ್ದಾಣಕೆ ಹೆಜ್ಜೆ ಇಡುವ ಹೊತ್ತಿನಲ್ಲಿ ನನ್ನ ನೆಲ ಶರಾವತಿ ತೀರ ತಣ್ಣಗೆ ಇತ್ತು. ಎರೆಡೆರೆಡು ಮುಳುಗಡೆ ಆಗಿ ಊರು ಆನೆ ಹೋಗಿ ಬಾಲ ಉಳಿದಿತ್ತು. ಅದೇ ಹೊತ್ತಿನಲ್ಲಿ ಅಪ್ಪ ತನ್ನ 4 ಮಕ್ಕಳ ಸಂಸಾರವನ್ನ ಗೇಣಿ ಭೂಮಿಯ ಜತೆ ಮುನ್ನೆಡೆಸಿದ್ದ.
ಅತ್ತ ರೈತ ಹೋರಾಟ ಬಲಿತು ಗಣಪತಿಯಪ್ಪ ಕರೂರು ಬಯಲಿಗೆ ಬರುವುದಕ್ಕೆ ಕಾಲ ಹಿಡಿಯಲಿಲ್ಲ. ಇಲ್ಲೂ ಕೂಡ ಹೋರಾಟ ಕಾವು ಶುರು ಆಗುವ ಲಕ್ಷಣಗಳು ಗೋಚರಿಸಿದವು. ಅದು ಮುಂದುವರಿದು ಗೇಣಿ ಕಾನೂನು ಜಾರಿಗೆ ಬರಲು ಆರಂಭ ಆದವು. ಕಾಗೋಡು, ಜಯಂತ್ ಇತರ ಸಮಾಜವಾದಿಗಳು ಕರೂರು ಹೋಬಳಿಯ ಕುಂಬಾನಾಯ್ಕ ಮತ್ತು ಮುಖನಾಯ್ಕ ಅವಳಿ ಸ್ಥಳೀಯ ನಾಯಕರಿಗೆ ಜತೆ ಆಗಿ ಗೇಣಿ ರೈತರು ಅರ್ಜಿ ಹಾಕುವ ಉತ್ಸಾಹದಲ್ಲಿ ಹೋರಾಟ ಹೂ ಬಿಡುವ ಕಾಲ ಶುರು ಆಗಿತ್ತು.
ಪುಟ್ಟೇಗೌಡರು ಎಲ್ಲವನ್ನೂ ಗಮನಿಸುತ್ತಾ ಇದ್ದರು. ಸಾಕಷ್ಟು ಭೂಮಿ ಗೇಣಿ ಕೊಟ್ಟಿದ್ದರು. ಕರೂರಲ್ಲಿ ಆ ಕಾಲದಲ್ಲೇ ಜವಳಿ ಅಂಗಡಿ ಇಟ್ಟವರು. ಶಿಸ್ತಿನ ಮನುಷ್ಯ. ತಾವು ಆಪ್ತವಾಗಿ ಮಾತಾಡುತ್ತಾ ಇದ್ದಿದ್ದು ಕದ್ದು ಕೇಳಿಸಿಕೊಂಡ ಎಂಬ ಕಾರಣಕ್ಕೆ ದಫೆದಾರ್ ಒಬ್ಬನಿಗೆ ಕೆನ್ನೆ ಮೇಲೆ ಬಾರಿಸಿದ್ದರು ಎಂದು ಆಗಿನ ಕಾಲದ ದೊಡ್ಡ ಸುದ್ದಿ ಆಗಿ ಭಯ ಮೂಡಿಸಿತ್ತು. ಕಂಟ್ರಾಕ್ಟರ್ ಮಾಸ್ತಿನಾಯ್ಕ ಮೊಮ್ಮಗ ಎಂಬ ಕಾರಣಕ್ಕೋ ಏನೋ ಅಪ್ಪನ ಮೇಲೆ ಪ್ರೀತಿ ಮತ್ತು ನಂಬಿಕೆ. ಅಜ್ಜ ಕರೂರು ಪೇಟೆ ಕಟ್ಟಿಸಿದ್ದ 24 ಅಂಕಣ ಮನೆಯ ಉಚ್ಛಾಯ ಮತ್ತು ಅದು ಪಾಳುಬಿದ್ದಿದ್ದು ಎರಡನ್ನು ಕಣ್ಣೆದುರೇ ನೋಡಿದ್ದ ಪುಟ್ಟೇಗೌಡರು ಅಪ್ಪನನ್ನ ಕರುಣೆ ಕಣ್ಣಲಿ ನೋಡಿರಬಹುದು.
ಇದೇ ಕಾರಣಕ್ಕೆ ಗೌಡರ ಸೂಚನೆ ಮೇಲೆ ಸಣ್ಣ ಪಂಚಾಯತ್ ಮಾಡುವವರೂ ಆಗಿದ್ದರು. ಅಪ್ಪನ ಒಳಗಿನ ನ್ಯಾಯ ಪ್ರಜ್ಞೆ, ತಿಳುವಳಿಕೆ ಇದಕ್ಕೆ ಕಾರಣ ಆಗಿ ಪೇಟೆ ತಿಮ್ಮಣ್ಣಾ ಪಂಚಾಯತ್ ಬಂದರೆ ನ್ಯಾಯನೇ ಹೇಳುತ್ತಾರೆ ಅನ್ನುವ ವಾಡಿಕೆ ಅಂದಿನಿಂದ ಇಂದಿನವರೆಗೆ ಇದೆ. ಯಾವಾಗ ಗೇಣಿ ಕಾನೂನು ಬಲ ಆಯಿತೋ ಗುಲ್ಲು ಎದ್ದಿತು. ಅಪ್ಪನಿಗೆ ಆಗದವರು ಗೌಡರಿಗೆ ಚಾಡಿ ಹೇಳಿದರು. ಆದರೆ ಗೌಡರು ಮೌನ ಮುರಿಯಲಿಲ್ಲ. ಅಪ್ಪನಿಗೆ ದಿಕ್ಲಾರೇಷನ್ ಫಾರಂ ತಂದು ಕೊಟ್ಟರು ಅಪ್ಪ ಮಾತಾಡಲಿಲ್ಲ. ಪಾರಂ ತಂದು ಕೊಟ್ಟವರೇ ಗೌಡರಿಗೆ ಹೋಗಿ ಹೇಳಿದರೂ ಉಹುಂ ಮಾತಿಲ್ಲ.
ಅವರ ಪರಸ್ಪರ ನಂಬಿಕೆ ಪ್ರೀತಿ ಅಂಥಹದು. ಒಡೆಯ ಒಕ್ಕಲು ಅನ್ನೋ ಬೀಗುವ ಬಾಗುವ ಸಂಬಂಧ ಧಾಟಿ ಅವರಿಬ್ಬರ ಸಂಬಂಧ ಮುಂದೆ ಬಂದಿತ್ತು. “ಪ್ಯಾಟೆ ತಿಮ್ಮ ನಂಗೆ ಮೋಸ ಮಾಡಲ್ಲ ಹೋಗಾ” ಎಂದು ಚಾಡಿ ಹೇಳಲು ಬಂದ ಅವರ ಬಂಧುವಿಗೆ ಹೇಳಿ ಕಳುಹಿಸಿದ್ದರು. 1990 ರ ಹೊತ್ತಿಗೆ ಒಂದು ಬೆಳಿಗ್ಗೆ ಅಪ್ಪ ಗೌಡರು ಪರಸ್ಪರ ಮಾತಾಡಿಕೊಂಡು ನಿರ್ಧಾರಕ್ಕೆ ಬಂದರು. ನಾಲ್ಕು ಎಕರೆ ಜಮೀನಿಗೆ 15 ಸಾವಿರ ರೂ 5 ವರ್ಷದ ಕಂತಿನಲ್ಲಿ ಕೊಡುವುದು ಎಂದು. ಕಾಲ ಚಲಿಸಿತು. ಕೊನೆ ಕಂತು ತೀರುವ ಹೊತ್ತಿಗೆ ಗೌಡರು ತೀರಿ ಹೋದರು. ತೀರಿ ಹೋಗುವ ಮುನ್ನ ಮಗ ಹೊಯ್ಸಳ (ಸಾಗರದ ಪದ್ಮಂಬ ಕಬ್ಬಿನ ಅಂಗಡಿ ಮಾಲೀಕರು) ಗೆ ಹೇಳಿ ಹೋಗಿದ್ದರು. ” ತಿಮ್ಮ ನಮ್ಮವ ಭೂಮಿ ಬರೆದು ಕೊಡು” ಎಂದು.
ಹೊಯ್ಸಳ ಗೌಡರು ಭೂಮಿ ಅಪ್ಪನ ಹಸರಿಗೆ ವರ್ಗಾಯಿಸಿ ಇಪ್ಪತ್ತೈದು ವರ್ಷವೇ ಕಳೆದಿದೆ. ನಮ್ಮ ಕುಟುಂಬ ಮತ್ತು ಗೌಡರ ಕುಟುಂಬ ಅದೇ ಒಡನಾಟದಲ್ಲಿ ಇದೆ. ಹೊಯ್ಸಳಗೌಡರು ಊರಿಗೆ ಬಂದರೆ ಅವರ ಬಂಧುಗಳ ಮನೆಗೆ ಹೋಗದಿದ್ದರೂ ನಮ್ಮ ಮನೆಗೆ ಆಗಾಗ ಬಂದು ಗಂಟೆಗಟ್ಟಲೆ ಕೂತು ಮಾತಿಗೆ ಕೂರುತ್ತಾರೆ. ” ನೀವು ಕೊಟ್ಟ ಭೂಮಿ”ಎಂದು ಅಪ್ಪ ಏಳನೀರು ಇಳಿಸಿ ಕೊಡುತ್ತಾರೆ. ಪ್ರೀತಿ ನದಿಯಾಗಿ ಹರಿಯುತ್ತದೆ. “ಸಂಬಂಧ ಅನ್ನೋದು ದೊಡ್ಡದು ಕಣಾ”
ಅಪ್ಪ ಭಿನ್ನ ಹಾದಿಯ ಪಯಣಿಗ…ಅವರು ಬದುಕನ್ನು ನೋಡುವ ಕ್ರಮ ಆದರ್ಶಗಳ ಮೆರವಣಿಗೆ. 80 ವರ್ಷದ ಅಪ್ಪ ಒಂದು ರೂ ಮೋಸ ಮಾಡಿದ, ಮಾತಿಗೆ ತಪ್ಪಿದ ಎಂಬ ಆರೋಪವೇ ಇಲ್ಲ ಪ್ರಾಮಾಣಿಕತೆ ಎನ್ನುವುದು ಅಪ್ಪನ ಒಳಗೆ ರಕ್ತಕ್ಕಿಂತ ದಟ್ಟವಾಗಿ ಹರಿದಿದೆ. ಕೆಲವರು ನನ್ನ ಜತೆ ಮಾತಾಡುವಾಗ “ನಿಮಗೆ ಕಾಗೋಡು ಪ್ರೀತಿ ಮಾಡಲು ಗೇಣಿ ಹೋರಾಟ ಭೂಮಿ ಕಾರಣ ಆದ್ರು ಇದೆ” ಎನ್ನುತ್ತಾರೆ. ನಾನು ಗೇಣಿ ರೈತನ ಮಗ ನಿಜ, ಭೂಮಿ ಬಂದದ್ದು ಅಪ್ಪನ ಭಿನ್ನ ಬದುಕಿನ ನೆಲೆಯಿಂದ.
ನಾನು ಜೀವನದಲ್ಲಿ ತುಂಬಾ ಅತ್ತಿದ್ದು ಎಂದರೆ ಕಾಗೋಡು ಕಳೆದ ಬಾರಿ ಸೋತಾಗ. ಈಗಲೂ ನಾನು ನೆನೆದರೆ ಭಾವುಕ ಆಗುವೆ. ಆ ಸೋಲು ನಾನು ಅರಗಿಸಿಕೊಳ್ಳಲು ಇನ್ನೂ ತುಂಬಾ ವರ್ಷ ಬೇಕೇನೋ. ಚುನಾವಣಾ ಹೊತ್ತಿನಲ್ಲಿ ತುಮರಿಯ ಗೇಣಿ ರೈತರ ಮಗನೊಬ್ಬ ” ನಿಮ್ಮ ಕಾಗೋಡು ಏನು ಮಾಡಿದ್ದಾನೆ…?” ಎಂದು ಕೇಳಿದ ಮಾತು ನನ್ನ ಆಳಕ್ಕೆ ಇಳಿದಿದೆ.
ಗೇಣಿ ಭೂಮಿಯಿಂದ ಅಕ್ಷರ, ನೌಕರಿ, ಸ್ಥಾನಮಾನ ಎಲ್ಲಾ ಪಡೆದು ವಿಸ್ಮೃತಿ ಒಳಗಾಗಿರುವವರ ಎದುರು ತಾನು ಖರೀದಿ ಮಾಡಿದ ಹಿಡುವಳಿ ಆದರೂ “ಭೂಮಿ ಕೊಟ್ಟವರು” ಎಂದು ಎಳನೀರು ಕಿತ್ತು ತರುವ ಅಪ್ಪ ಕಲ್ಪವೃಕ್ಷದಂತೆ ಎತ್ತರ ಎತ್ತರ ಕಾಣುತ್ತಾರೆ. ಕಾಗೋಡು ಹೋರಾಟ ನಡೆಯದಿದ್ದರೆ ನಮ್ಮ ಭೂಮಿ ಕನಸು ಇನ್ನೂ ದೂರವೇ ಇರುತ್ತಿತ್ತು ಎನ್ನುವ ಅಪ್ಪಯ್ಯ ಕಾಗೋಡು ತಿಮ್ಮಪ್ಪನವರ ಅಪಾರ ಅಭಿಮಾನಿ. ಅಪ್ಪಯ್ಯ ಇವೆಲ್ಲವನ್ನೂ ನನ್ನೊಂದಿಗೆ ಹಂಚಿ ಕಾಗೋಡು ನಾಲ್ಕು ಚುನಾವಣೆಯಲ್ಲಿ ನಾನು ಕಾಗೋಡು ಜತೆ ಇರುವುದಕ್ಕೆ ಕಾರಣ ಆಗಿದ್ದಾರೆ. ಅದು ಮಾತ್ರ ವ್ಯಕ್ತಿಯ ಜತೆಯಲ್ಲ… ಸಿದ್ದಾಂತದ ಜತೆ. 3 ಸೋಲು ಒಂದು ಗೆಲುವು ಆದರೂ ಸೋಲು ಗೆಲುವಲ್ಲಿ ಜತೆ ಜತೆ ಆಗಿದ್ದೇನೆ ಕಾಗೋಡು ಜತೆ. ಈ ಮೌಲ್ಯವನ್ನು ಎದೆಯೊಳಗೆ ಅಪ್ಪಯ್ಯ ತುಂಬಿದ್ದಾರೆ ಭೂಮಿ ಗೀತೆಯಾಗಿ.
-ಜಿ. ಟಿ ಸತ್ಯನಾರಾಯಣ ಕರೂರು.
