

ನಯಾಗರಾ ಜಲಪಾತವು ಎಷ್ಟು ಸುಂದರವೋ ಅಷ್ಟೇ ಆಸಕ್ತಿಕರ ಅಂಶಗಳನ್ನ ಹೊಂದಿದೆ


-೧. ಚಿತ್ರದಲ್ಲಿ ದೂರದಲ್ಲಿ ಕಾಣುವ ಕುದುರೆಲಾಳದ ಜಲಪಾತದಲ್ಲಿ ನಯಾಗರ೯೦% ನೀರು ಸುರಿದರೆ ಉಳಿದ ೧೦% ನೀರು ಅಮೆರಿಕಾದ ಜಲಪಾತ ಮತ್ತು ಮದುವಣಗಿತ್ತಿಯಮುಸುಕಿನ ಜಲಪಾತಗಳಲ್ಲಿ ಸುರಿಯುತ್ತದೆ. ಹಾಗೇ ಈ ಕುದುರೆಲಾಳದ ಜಲಪಾತ ೯೦ ಪ್ರತಿಶತ ಕೆನಡಾದಲ್ಲಿದ್ದರೆ ೧೦ ಪ್ರತಿಶತ ಅಮೆರಿಕಾದಲ್ಲಿದೆ.
೨. ಚಿತ್ರದಲ್ಲಿ ಎಡಭಾಗದಲ್ಲಿರುವ ಅಮೆರಿಕಾದ ಜಲಪಾತದ ಮೂಲೆಯಲ್ಲೆಲ್ಲೋ ಕಂಡೂ ಕಾಣದಂತಿರುವುದು ಮದುವಣಗಿತ್ತಿಯಮುಸುಕಿನ ಜಲಪಾತ. ಕ್ರೈಸ್ತ ಸಂಪ್ರದಾಯದಲ್ಲಿ ಮದುಮಗಳು ಧರಿಸುವ ತೆಳುವಾದ ಬಿಳಿ ಮುಸುಕಿನಂತೆ ಯಾರಿಗೋ ಕಂಡಿರಬೇಕು ಅದಕ್ಕೇ ಈ ಹೆಸರು. ಉಳಿದೆರಡು ದೈತ್ಯರ ಮುಂದೆ ಇದು ಪ್ರಪಂಚದ ಪಾಲಿಗೆ ಬಹುಪಾಲು ಅಜ್ಞಾತವಾಗಿಯೇ ಇದೆ.
೩. ಅಮೆರಿಕಾ ಈ ಜಲಪಾತದ ಸುತ್ತ ಕೈಗಾರಿಕಾ ಅವಕಾಶಗಳನ್ನ ಹುಡುಕಹೊರಟರೆ ಕೆನಡಾ ಪ್ರವಾಸೋದ್ಯಮದತ್ತ ಗಮನ ಹರಿಸಿತು. ಅಮೆರಿಕಾದ ಪರಿಸರ ಹೋರಾಟಗಾರರಿಗೆ ಇಲ್ಲಿನ ಉದ್ಯಮ ಲಾಬಿಯ ಎದುರು ಹೋರಾಡಿ ಗೆಲ್ಲಲು ಬಹಳ ಸಮಯ ಬೇಕಾಯಿತು.ಈಗಲೂ ಅಮೆರಿಕಾ ಭಾಗದ ಬಹುಪಾಲು ನೀರು ಜಲವಿದ್ಯುತ್ ಸ್ಥಾವರಕ್ಕೆ ಹರಿವುದರಿಂದ ಜಲಪಾತಕ್ಕೆ ಪ್ರವಹಿಸುವ ನೀರಿನ ಅಗಾಧತೆ ಕಮ್ಮಿಯೇ. ಹಾಗೇ ಕೈಗಾರಿಕೆಗಳಿಂದಾದ ಹಾನಿಯಿಂದ ನಯಾಗರಾ ಪೂರ್ಣ ಚೇತರಿಸಿಕೊಂಡಿಲ್ಲ ಅನ್ನುವುದು ಕೂಡಾ ಸತ್ಯ.
೪. ನಯಾಗರ ನದಿ ಪಂಚಮಹಾಸರೋವರಗಳಲ್ಲಿ ಎರಡಾದ ಈರಿ ಮತ್ತು ಓಂಟಾರಿಯೋಗಳನ್ನ ಸಂಪರ್ಕಿಸುವ ಕಾಲುವೆಯಾದುದರಿಂದ ಇದರ ನೀರೆಂದೂ ಬತ್ತದು ಇಲ್ಲಾ ಕಮ್ಮಿಯಾಗದು (off course yes ಮಾನವನ ಹಸ್ತಕ್ಷೇಪವಿಲ್ಲದಿದ್ದರೆ). ಚಳಿಗಾಲದಲ್ಲಿ ಹೆಪ್ಪುಗಟ್ಟುತ್ತದೆಯಷ್ಟೇ.
೫. ನಯಾಗರಾ ಭೌಗೋಳಿಕವಾಗಿ ತೀರಾ ಹೊಸರಚನೆ. ಅಂದರೆ ಕೇವಲ ೧೨೦೦೦ ವರ್ಷಗಳ ಹಿಂದಿನದು. ೧೯೬೯ ರಲ್ಲಿ ನಯಾಗರಾದ ಶಿಲಾರಚನೆ ಸಡಿಲವಾಗುತ್ತಿದೆಯೆಂದು ವಿಜ್ಞಾನಿಗಳು ಅನುಮಾನಪಟ್ಟ ಹಿನ್ನೆಲೆಯಲ್ಲಿ ಅಧ್ಯಯನಕ್ಕಾಗಿ ಸಂಪೂರ್ಣ ಅಮೆರಿಕಾದ ಜಲಪಾತವನ್ನು ಬತ್ತಿಸಲಾಗಿತ್ತು. ಆ ಸಮಯದಲ್ಲಿ ಲಕ್ಷಾಂತರ ನಾಣ್ಯಗಳು ಸಿಕ್ಕವಂತೆ. ದಯವಿಟ್ಟು ನಮ್ಮದೇಶ ಮಾತ್ರ ಮೂಢನಂಬಿಕೆಗಳ ಕಂತೆ ಪಾಶ್ಚಾತ್ಯ ದೇಶದವರೆಲ್ಲಾ ಮಹಾನ್ ವೈಜ್ಞಾನಿಕ ದೃಷ್ಟಿಕೋನವುಳ್ಳವರೆಂದು ನಮ್ಮ ದೇಶದ ಬಗ್ಗೆ ಕರುಣಾಜನಕವಾದ ಮೀಮ್‌ಗಳನ್ನು ಸೃಷ್ಟಿಸುವ ಮೊದಲು ಅಥವಾ ಶೇರ್ ಮಾಡುವ ಮೊದಲು ಇಂತದ್ದನ್ನ ಸ್ವಲ್ಪ ಯೋಚಿಸಿ.
೬. ನಯಾಗರದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಲು ನಿಕೋಲಸ್ ಟೆಸ್ಲಾ ಎಂಬ ಅದ್ಭುತ ಪ್ರತಿಭಾವಂತ ಆದರೆ ಅತ್ಯಂತ ದುರದೃಷ್ಟವಂತ, ಅಂದರೆ ಪ್ರತಿಭೆಗೆ ತಕ್ಕ ಫಲ ಪಡೆದುಕೊಳ್ಳದ ಅತ್ಯಂತ ಮಾನವೀಯ ಕಳಕಳಿಯುಳ್ಳ ವಿಜ್ಞಾನಿಯ ಕೊಡುಗೆ ಅಪಾರ. ಅದಕ್ಕೇ ಅಲ್ಲಿ ಅವರ ಪ್ರತಿಮೆ ನಿರ್ಮಿಸಿ ಗೌರವಿಸಲಾಗಿದೆ. ವಿಜ್ಞಾನದ ವಿದ್ಯಾರ್ಥಿಗಳಿಗೆ ಈ ಹೆಸರು ಪರಿಚಿತ. ಹಾಗೇ ಅವರ ಜೀವನ ಚರಿತ್ರೆಯನ್ನೂ ಓದಿ ಒಮ್ಮೆ.
೭. ಅಮೆರಿಕಾಗೆ ಬರುವ / ತಮ್ಮವರ ಕರೆಸಿಕೊಂಡ ಭಾರತೀಯರೆಲ್ಲರೂ ಖಾಯಂ ಆಗಿ ಭೇಟಿ ಕೊಡುವ ಜಾಗವಾದುದರಿಂದ ಸಸ್ಯಾಹಾರಿ ಆಯ್ಕೆಗಳು ಹಲವಾರಿವೆ. ಸಸ್ಯಾಹಾರವಿರಲೀ ಮಾಂಸಾಹಾರವಿರಲಿ ಭಾರತೀಯ ಊಟವೇ ಬೇಕೆನ್ನುವುದು ನಮ್ಮವರ ಸಿದ್ಧಾಂತವಾಗಿದ್ದರಿಂದ ಸಾಕಷ್ಟು ಭಾರತೀಯ ರೆಸ್ಟೋರೆಂಟುಗಳೂ ಇವೆ.
೮. ಇನ್ನೂ ಬಹಳ ಇವೆ ಇಷ್ಟು ಸಾಕು. ಹಾಗೇ ಕೊನೆ ಮಾತು, ಜೋಗ ಜಲಪಾತದ ಬಹುಭಾಗ ಉತ್ತರಕನ್ನಡ ಜಿಲ್ಲೆಯಲ್ಲಿದ್ದರೂ ಅದರ ಸುಂದರ ನೋಟ ಸಿಗುವುದು ಶಿವಮೊಗ್ಗ ಜಿಲ್ಲೆಯಲ್ಲಿ. ಉತ್ತರ ಕನ್ನಡ ಭಾಗದಿಂದ ಪಾರ್ಶ್ವ ನೋಟ ಮಾತ್ರ ಲಭ್ಯ. ಹಾಗೇ ನಯಾಗರಾದ ಸುಂದರ ನೋಟ ಕಾಣುವುದು ಕೆನಡಾ ಕಡೆಯಿಂದ.
#ನಾನುನೋಡಿದಸ್ಟೇಟುಗಳು#ನ್ಯೂಯಾರ್ಕ್
