

ಶಿವಮೊಗ್ಗ ಜಿಲ್ಲೆಯ ಹೊಸಗುಂದದ ಪುರಾತನ ಉಮಾಮಹೇಶ್ವರ ದೇವಾಲಯ, ಅಲ್ಲಿಯ ನವೀಕೃತ ದೇವಸ್ಥಾನ, ಪುಷ್ಕರಣೆಗಳ ಜೊತೆಗೆ ಪ್ರಕೃತಿಪ್ರೀಯರಿಗೆ ಅಲ್ಲಿಯ ದೇವರಕಾಡು ಕೈಬೀಸಿ ಕರೆಯುತ್ತದೆ. ಸಾವಿರಾರು ವರ್ಷಗಳ ನಂತರ ಬೆಳಕಿಗೆ ಬಂದ ಈ ಹೊಸಗುಂದ ಅರಸರ ರಾಜಧಾನಿ ಸಸ್ಯ, ಪ್ರಾಣಿ ಜೀವಸಂಕುಲಗಳನ್ನು ಸಲಹುವ ಕೇಂದ್ರವಾಗಿತ್ತು ಎನ್ನುವುದಕ್ಕೆ ಇಲ್ಲಿ ಸಾಕ್ಷಿಗಳಿವೆ. ದುರ್ಗಮ ಕಾಡಿನ ಒಳಗೆ ಹೋಗಲು ಹಗಲೂ ಭಯ ಪಡುವಂಥ ಭಯಾನಕ ಕಾಡು ವಾತಾವರಣದಲ್ಲಿ ಮರಗಳು, ಬಳ್ಳಿಗಳ ಆಯಸ್ಸು ಕೇಳಿದರೆ ಆಶ್ಚರ್ಯವಾಗುತ್ತದೆ. 500,600, 700 ಸಾವಿರಾರು ವರ್ಷಗಳ ವೃಕ್ಷಸಂಕುಲ, ಮರಗಿಡ, ಬಳ್ಳಿಗಳೂ ಸಾವಿರಾರು ವರ್ಷಗಳಿಂದ ಇಲ್ಲಿ ಹೇಗೆ ಸಂರಕ್ಷಿಸಲ್ಪಟ್ಟವೆಂದರೆ…… ಅದಕ್ಕೆ ಉತ್ತರ ದೇವರಕಾಡು.


ದೇವರಕಾಡು ಪವಿತ್ರ, ದೇವರಕಾಡಿನಿಂದ ಮರ-ಗಿಡ, ಬಳ್ಳಿ ತೆಗೆದರೆ ದೇವರು ಮುನಿಸಿಕೊಳ್ಳುತ್ತಾನೆ. ಕಾಡು,ಪ್ರಾಣಿ ಜೀವಸಂಕುಲಕ್ಕೆ ತೊಂದರೆಮಾಡಿದರೆ ಇಲ್ಲಿಯ ದೇವರು ಮುನಿಸಿಕೊಳ್ಳುತ್ತಾನೆ ಎನ್ನುವ ಭ್ರಮೆ, ನಂಬಿಕೆ ಹುಟ್ಟಿಸಿ ರಾಜರಕಾಲದಿಂದ ಸಂರಕ್ಷಿಸಲ್ಪಟ್ಟ ಇಲ್ಲಿಯ ಸಂಮೃದ್ಧ ಕಾಡನ್ನು ಈ ಶತಮಾನದಲ್ಲಿ ಸರ್ಕಾರ,ಅರಣ್ಯ ಇಲಾಖೆ ಇಲ್ಲಿಯ ದೇವಸ್ಥಾನದ ಆಡಳಿತ ಸಮೀತಿಗಳು ಗ್ರಾಮ ಅರಣ್ಯ ಸಮೀತಿಗಳ ಸಹಕಾರದಿಂದ ಸಂರಕ್ಷಿಸುತ್ತಿವೆ. ದೇವರು, ನಂಬಿಕೆ, ಹೆದರಿಕೆಗಳು ನೈಸರ್ಗಿಕ ಅರಣ್ಯ ಜೀವಜಲ, ಜೀವವೈವಿಧ್ಯಗಳನ್ನು ರಕ್ಷಿಸುವುದಾದರೆ ಅವು ಮಾರಕ ಅಲ್ಲ ಎನ್ನಬಹುದಲ್ಲವೆ?
