

ಅಮೆರಿಕಾ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಲಿರುವ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಅಕ್ರಮದ ಕಹಿ ಆರೋಪದ ನಡುವೆಯೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅಮೆರಿಕಾದ 46ನೇ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಅವರು ಈ ಹಾದಿಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರೊಂದಿಗೆ ತುರುಸಿನ ಸ್ಪರ್ಧೆ ನಡೆಸಬೇಕಾಯಿತು. ಚಲಾವಣೆಯಾದ ಮತಗಳ ಪೈಕಿ ಶೇ. 50.6ರಷ್ಟು ಮತಗಳನ್ನು (7,50,33,193) ಪಡೆದು ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಅತಿ ಹೆಚ್ಚು ಮತ ಪಡೆದು ಅಧ್ಯಕ್ಷರಾದ ದಾಖಲೆ ಬರೆದಿದ್ದಾರೆ. ಈ ದಾಖಲೆ ಇದುವರೆಗೂ 2008ರಲ್ಲಿ 6,94,98,516 ಮತಗಳನ್ನು ಪಡೆದು ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಹೆಸರಿನಲ್ಲಿತ್ತು. ಈ ಬಾರಿಯ ಚುನಾವಣಾ ವೈಶಿಷ್ಟ್ಯವೆಂದರೆ, ಬರಾಕ್ ಒಬಾಮಾರ ದಾಖಲೆಯನ್ನು ಪರಾಜಿತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಕೂಡ ಅಳಿಸಿ ಹಾಕಿರುವುದು!! ಶೇ. 47.7ರಷ್ಟು ಮತ ಪಡೆದಿರುವ ಡೊನಾಲ್ಡ್ ಟ್ರಂಪ್ ಒಟ್ಟು 7,07,08,633 ಮತ ಗಳಿಸಿದ್ದಾರೆ. ಆ ಮೂಲಕ ಪರಾಜಿತ ಅಭ್ಯರ್ಥಿಯೊಬ್ಬ ಪಡೆದ ಅತಿ ಹೆಚ್ಚು ಮತ ಎಂಬ ದಾಖಲೆಗೆ ಭಾಜನರಾಗಿದ್ದಾರೆ!!!
ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವುದು ಡೆಮಾಕ್ರಟಿಕ್ ಪಕ್ಷಕ್ಕೆ ಅಸಾಧ್ಯವೇ ಆಗಿತ್ತು. ಅದಕ್ಕೆ ಕಾರಣ ಡೊನಾಲ್ಡ್ ಟ್ರಂಪ್ ಅಮೆರಿಕಾದಲ್ಲಿ ಉಂಟು ಮಾಡಿರುವ ವರ್ಣೀಯ, ಕೋಮು ಧ್ರುವೀಕರಣ. ಒಂದು ವೇಳೆ ಅಲ್ಲಿನ ಮಾಧ್ಯಮಗಳು ಭಾರತೀಯ ಮಾಧ್ಯಮಗಳಂತೆ ಆಳುವ ಪಕ್ಷದ ಬಾಲಬಡುಕತನಕ್ಕಿಳಿದಿದ್ದರೆ ನಿಶ್ಚಿತವಾಗಿ ಡೊನಾಲ್ಡ್ ಟ್ರಂಪ್ ಎರಡನೆಯ ಅವಧಿಗೂ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದರು ಮಾತ್ರವಲ್ಲ, ಅತ್ಯಂತ ಜನಪ್ರಿಯ ಅಧ್ಯಕ್ಷ ಎಂಬ ಹಿರಿಮೆಯೊಂದಿಗೇ ನಿರ್ಗಮಿಸುತ್ತಿದ್ದರು. ಈ ಮಾತಿಗೆ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದಿರುವ ತುರುಸಿನ ಪೈಪೋಟಿಯೇ ಸಾಕ್ಷಿ ನುಡಿಯುತ್ತಿದೆ. ಆದರೆ, ಅಮೆರಿಕಾ ಮಾಧ್ಯಮಗಳು ಮಾತ್ರ ಅಪ್ಪಟ ವಿರೋಧ ಪಕ್ಷವಾಗಿಯೇ ಕಾರ್ಯನಿರ್ವಹಿಸಿದವು. ಅವು ಪಟ್ಟಿ ಮಾಡಿರುವ ಪ್ರಕಾರ ಈವರೆಗೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಸುಮಾರು 15,000 ಸುಳ್ಳುಗಳನ್ನು ಹೇಳಿದ್ದಾರೆ. ಮಾತ್ರವಲ್ಲ; ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಡೊನಾಲ್ಡ್ ಟ್ರಂಪ್ ಅವರ ಆರೋಪದಲ್ಲಿ ಹಸಿ ಸುಳ್ಳಿದೆ ಎಂಬ ಕಾರಣ ನೀಡಿ ಅವರ ಶ್ವೇತ ಭವನ ಭಾಷಣದ ನೇರ ಪ್ರಸಾರವನ್ನೇ ಸ್ಥಗಿತಗೊಳಿಸುವ ಗೈರತ್ತು ಪ್ರದರ್ಶಿಸಿದವು ಅಮೆರಿಕಾ ಮಾಧ್ಯಮಗಳು.2016ರಲ್ಲಿ ಅಧ್ಯಕ್ಷರಾಗಿ ಚುನಾಯಿತರಾದ ನಂತರ ತಮ್ಮ ವಿರುದ್ಧವಿದ್ದ ಮಾಧ್ಯಮಗಳನ್ನು ಬಗ್ಗುಬಡಿಯಲು ಡೊನಾಲ್ಡ್ ಟ್ರಂಪ್ ಅವರು ನಾನಾ ವಾಮಮಾರ್ಗಗಳನ್ನು ಅನುಸರಿಸಿದರು. ಆದರೆ, ಅಮೆರಿಕಾ ಮಾಧ್ಯಮಗಳು ಮಾತ್ರ ಅದಕ್ಕೆ ಜಗ್ಗಲಿಲ್ಲ; ಬದಲಿಗೆ ಅವರ ತಪ್ಪು ನಡೆಗಳಿಗೆ ಬೂದುಗನ್ನಡಿ ಹಿಡಿಯುವ ತಮ್ಮ ಮಾಧ್ಯಮ ಧರ್ಮವನ್ನು ಮತ್ತಷ್ಟು ತೀಕ್ಷ್ಣಗೊಳಿಸಿದವು. ಈ ಪ್ರವೃತ್ತಿ ಸಾಮಾಜಿಕ ಜಾಲತಾಣಗಳಿಗೂ ವಿಸ್ತರಿಸಿದಾಗ ಡೊನಾಲ್ಡ್ ಟ್ರಂಪ್ ಅಧೀರರಾದರು. ಅಮೆರಿಕಾದ ಪ್ರಭಾವಿ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’ಗೆ ಮೂಗುದಾರ ತೊಡಿಸಲು ಮುಂದಾದರು. ಇದರಿಂದ ಡೊನಾಲ್ಡ್ ಟ್ರಂಪ್ ವಿರುದ್ಧದ ಆಕ್ರೋಶ ಮತ್ತಷ್ಟು ಸಾರ್ವತ್ರಿಕವಾಯಿತು. ಡೊನಾಲ್ಡ್ ಟ್ರಂಪ್ ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಲು ಮುಂದಾಗಿರುವ ಸುಳಿವರಿತ ಅಲ್ಲಿನ ಬಲಪಂಥೀಯ ಮಾಧ್ಯಮಗಳೆಂದೇ ಗುರುತಿಸಿಕೊಂಡಿರುವ ಸಿಎನ್‌ಎನ್, ಸಿಎನ್‌ಬಿಸಿ, ಫಾಕ್ಸ್ ನ್ಯೂಸ್ ಕೂಡಾ ಅವರ ವಿರುದ್ಧ ದಾಳಿ ಮಾಡಲು ಶುರು ಮಾಡಿದವು. ಅದೆಲ್ಲದರ ಒಟ್ಟು ಫಲಿತಾಂಶವೇ ಜೋ ಬೈಡನ್ ಗೆಲುವು.
ಇತ್ತ ಭಾರತೀಯ ಮಾಧ್ಯಮಗಳತ್ತ ಒಮ್ಮೆ ನೋಡಿ. ಕಳೆದ ಆರೂವರೆ ವರ್ಷಗಳಿಂದ ವಿರೋಧ ಪಕ್ಷವಾಗುವುದನ್ನೇ ಮರೆತು ಆಡಳಿತಾರೂಢ ಪಕ್ಷವಾದ ಬಿಜೆಪಿಯ ಬಾಲಬಡುಕ ನಾಯಿಯಂತಾಗಿವೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯನ್ನು ಇಂದ್ರ, ಚಂದ್ರ ಎಂದು ದಿನ ನಿತ್ಯ ಹಾಡಿ ಹೊಗಳುವುದರಲ್ಲೇ ಧನ್ಯವಾಗುತ್ತಿವೆ. ನರೇಂದ್ರ ಮೋದಿಯ ಸರ್ವಾಧಿಕಾರಿ ನಿರ್ಧಾರಗಳನ್ನು ‘ಮಾಸ್ಟರ್ ಸ್ಟ್ರೋಕ್’ಗೆ ಹೋಲಿಸಿ ಪಾವನವಾಗುತ್ತಿವೆ. ಅಂತಹ ಕೆಲವು ಮೋದಿ ‘ಮಾಸ್ಟರ್ ಸ್ಟ್ರೋಕ್’ಗಳ ಕೆಳಗಿನಂತಿವೆ:
1. ನರೇಂದ್ರ ಮೋದಿ 2016ರ ನವೆಂಬರ್ 8ರಂದು ರಾತ್ರೋರಾತ್ರಿ ಪ್ರಕಟಿಸಿದ ನೋಟು ಅಮಾನ್ಯೀಕರಣ ನಿರ್ಧಾರ.2. ಜುಲೈ 1, 2017ರಂದು ಮಧ್ಯರಾತ್ರಿಯಲ್ಲಿ ಜಾರಿಗೆ ತಂದ ಅವೈಜ್ಞಾನಿಕ ಜಿಎಸ್‌ಟಿ ಪದ್ಧತಿ3. ಮಾರ್ಚ್ 22, 2020ರಂದು ಘೋಷಿಸಿದ ದಿಢೀರ್ ಲಾಕ್‌ಡೌನ್.ಮೇಲಿನವುಗಳೊಂದಿಗೆ ಚರಂಡಿ ಅನಿಲ ಸಂಶೋಧನೆ, ರಾಡಾರ್ ತಂತ್ರಜ್ಞಾನ, ಗಾಳಿಯಂತ್ರದಿಂದ ಏಕಕಾಲಕ್ಕೆ ವಿದ್ಯುತ್, ನೀರು, ಆಮ್ಲಜನಕ ಉತ್ಪಾದಿಸುವ ಥಿಯರಿಯನ್ನೂ ಸೇರಿಸಿಕೊಳ್ಳಬಹುದು.ಮೊದಲೇ ಹೇಳಿದಂತೆ ಅಮೆರಿಕಾ ಮಾಧ್ಯಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವ ಸುಮಾರು 15,000 ಸುಳ್ಳುಗಳನ್ನು ಬೆತ್ತಲು ಮಾಡಿವೆ. ಹಾಗೆಯೇ ಅಗಣಿತ ತಿಕ್ಕಲು ನಿರ್ಧಾರ, ಜನವಿರೋಧಿ ಕ್ರಮಗಳನ್ನು ಖಂಡಿಸಿವೆ. ಕನಿಷ್ಠ ಪಕ್ಷ ಭಾರತೀಯ ಮಾಧ್ಯಮಗಳು ನೋಟು ಅಮಾನ್ಯೀಕರಣ, ಅವೈಜ್ಞಾನಿಕ ಜಿಎಸ್‌ಟಿ ಜಾರಿಯನ್ನು ಪ್ರಶ್ನಿಸಿದ್ದರೂ ಸಾಕಿತ್ತು; ನರೇಂದ್ರ ಮೋದಿ ಖಂಡಿತ ಎರಡನೆ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗುತ್ತಿರಲಿಲ್ಲ.
ಭಾರತ ಸ್ವಾತಂತ್ರ್ಯಾನಂತರ ಅನುಭವಿಸಿರದ ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಿರಲಿಲ್ಲ. ದುರಂತವೇನು ಗೊತ್ತೆ? ಖಾಸಗಿ ದೃಶ್ಯ ಮಾಧ್ಯಮಗಳು ಕಾರ್ಯಾಚರಿಸಲು ಅವಕಾಶ ನೀಡಿ, ಲಕ್ಷಾಂತರ ಪತ್ರಕರ್ತರ ಹೊಟ್ಟೆಪಾಡಿಗೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷವನ್ನೇ ವಿಲನ್ ಆಗಿಸಿದ್ದಾವೆ ವೈದಿಕ ಮಾಧ್ಯಮಗಳು. ಆ ಮೂಲಕ ತಮ್ಮ ಶವ ಪೆಟ್ಟಿಗೆಗೆ ತಾವೇ ಕೊನೆಯ ಮೊಳೆ ಹೊಡೆದುಕೊಂಡಿವೆ.ಮಾಧ್ಯಮಗಳು ಕನ್ನಡಿಯಂಥ ಗುಣ ಉಳಿಸಿಕೊಳ್ಳದಿದ್ದರೆ ತಾವೇ ತಾವಾಗಿ ಅಪ್ರಸ್ತುತಗೊಳ್ಳುತ್ತವೆ. ಆ ದುರಂತದತ್ತ ಭಾರತೀಯ ಮಾಧ್ಯಮಗಳು ಈಗಾಗಲೇ ದಾಪುಗಾಲಿಟ್ಟಿವೆ. ಎಚ್ಚೆತ್ತುಕೊಳ್ಳದಿದ್ದರೆ ಪತ್ರಕರ್ತರೆಲ್ಲ ವಾರಾನ್ನದ ಮನೆಗಳನ್ನು ಹುಡುಕಿಕೊಳ್ಳುವುದು ಅನಿವಾರ್ಯವಾಗಲಿದೆ…
-ಸದಾನಂದ ಗಂಗನಬೀಡು
