

ಹಬ್ಬಗಳು ಭಾರತೀಯ ಸಂಸ್ಕೃತಿ,ಸಂಪ್ರದಾಯಗಳ ಪ್ರತಿಬಿಂಬ,ಧ್ಯೋತಕ ಎನ್ನಲಾಗುತ್ತದೆ. ಈ ಹಬ್ಬಗಳಲ್ಲಿ ರೂಢಿ, ಆಚರಣೆಗಳನ್ನು ಕಾಣುತ್ತೇವೆ ಬಿಟ್ಟರೆ ಸಂಸ್ಕೃತಿ-ಸಂಪ್ರದಾಯ ಅದ್ಹ್ಯಾಗೆ ಹಾಜರಾಗುತ್ತವೋ ಎನ್ನುವ ಅನುಮಾನದ ನಡುವೆ ನನಗೆ ನಮ್ಮೆಡೆಯ ಗೌರಿ ಹಬ್ಬ ಎಂದರೆ ಗೌರಿ-ಗಣೇಶ ಹಬ್ಬ ನೆನಪಾಗುತ್ತದೆ.
ವಾಸ್ತವದಲ್ಲಿ ಬೆನಕರಾಜನ ಮಗಳು ಪಾರ್ವತಿ (ಸ್ಕಂದ ಪುರಾಣ ಆಧರಿಸಿ) ಬೂದಿ ಬಡುಕ, ಸ್ಮಶಾನವಾಸಿ ಈಶ್ವರ ನನ್ನು ಮದುವೆಯಾಗುತ್ತಾಳೆ. ಇಂಥ ರಾಜ ಒಪ್ಪದ ರಾಜಪುತ್ರಿಯ ಮದುವೆ ಈಗಿನ ಲವ್ ಎಂಡ್ ರನ್ ಮಾದರಿಯ ಮದುವೆಯಂತಾಗುತ್ತದೆ.
ನಂತರ ಆದಿವಾಸಿ ಶಿವನನ್ನು ವರಿಸಿದ ರಾಜಪುತ್ರಿ ಪಾರ್ವತಿಯ ಪರವಾಗಿ ಒಂದು ರಾಜಿ ಪಂಚಾಯತಿ ನಡೆದು ಆಕೆ ವರ್ಷದ ನಾಲ್ಕು ದಿನ ತವರು ಮನೆ ಅಪ್ಪನ ಮನೆಗೆ ಬಂದು ಹೋಗಲು ಅನುಮತಿ ದೊರೆಯುತ್ತದೆ.
ಇದೇ ಪುರಾಣದ ಕಥೆ ಆಧರಿಸಿದಂತೆ ನಮ್ಮ ಮಲೆನಾಡು ಭಾಗದಲ್ಲಿ ಗೌರಿ ಹಬ್ಬಕ್ಕೆ ಮಗಳು ಅಥವಾ ಸಹೋದರಿಯರು ತವರುಮನೆಗೆ ಬಂದು ವಾರದ ವರೆಗೆ ಅಪ್ಪನ ಮನೆಯಲ್ಲಿ ತಿಂದುಂಡು ಗಂಡನ ಮನೆಗೆ ಮರಳುತ್ತಾರೆ. ಈ ಗೌರಿ ಹಬ್ಬದಲ್ಲಿ ಅಳಿಯ ಅಥವಾ ಮನೆಮಗಳ ಗಂಡ ಹೆಂಡತಿಯ ತವರಿಗೆ ಬರುವುದು ತುಸು ಅಪರೂಪವೆ! ಆದರೆ ಗೌರಿ ತಂದು ವಿಸರ್ಜಿಸುವ ಸಮಯದಲ್ಲಿ ಗೌರಿಯೆಂಬ ತಾಮ್ರದ ಚೊಂಬಿನ ನೀರನ್ನು ಕೆರೆ, ಬಾವಿ, ಹೊಳೆಗೆ ಬಿಟ್ಟು ಅದರೊಂದಿಗೆ ತಂದ ಊಟದ ಎಡೆಯೊಂದನ್ನು ಕೆರೆ ಏರಿ ಮೇಲೆ ಇಟ್ಟುಹೋದ ಮೇಲೆ ಆ ಊಟದ ಎಡೆಯನ್ನು ಗ್ರಾಮದ ಅಥವಾ ಸಮೀಪದ ಪರಿಶಿಷ್ಟರು ಹೊತ್ತೊಯ್ದು ಉಣ್ಣವುದು ಭಾರತೀಯ ಸಂಪ್ರದಾಯದ ಸಂಸ್ಕೃತಿ, ನಂಬಿಕೆ!
ಇದು ಗೌರಿ ಹಬ್ಬದ ಕತೆಯಾದರೆ….. ದೀಪಾವಳಿಯಲ್ಲಿ ಪರಾಕ್ರಮಿ ಬಲಿ, ಬಲೀಂದ್ರ ರಾಜನನ್ನು ಮನೆಗೆ ಕರೆತಂದು ಮೂರು ದಿನ ಪೂಜಿಸಿ ನೀರಿನ ರೂಪದ ಬಲೀಂದ್ರನನ್ನು ನೀರಿನಲ್ಲಿ ವಿಸರ್ಜಿಸುವ ಮೂಲಕ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬ-ಆಚರಣೆ, ಸಂಪ್ರದಾಯದ ಹಿನ್ನೆಲೆ ಕೂಡಾ ತುಸು ಭಯಾನಕವೆ? ಶೂದ್ರ ಪರಾಕ್ರಮಿ ಬಲೀಂದ್ರ ತನ್ನ ಆಳ್ವಿಕೆಯಲ್ಲಿ ರೈತರನ್ನು ಖುಷಿಯಿಂದಿಟ್ಟಿದ್ದನಂತೆ. ಪ್ರಸಿದ್ಧ, ಸಾಹಸಿ, ಪರಾಕ್ರಮಿಯಾಗಿದ್ದ ಬಲಿ ಚಕ್ರವರ್ತಿಯ ಮೇಲೆ ಹಗೆ ಸಾಧಿಸಿದ ದೇವತೆಗಳು (ಪರಾಕ್ರಮಿ, ಜನಪರ, ಜನಹಿತ ಬಯಸುವವರ ಮೇಲೆ ದೇವತೆಗಳಿಗ್ಯಾಕೆ ಸಿಟ್ಟು!?) ಜನಪರ ದೊರೆ ಬಲಿಂದ್ರನನ್ನು ವಿಷ್ಟುವಿನ ವಾಮನ ಅವತಾರದ ಮೂಲಕ ಸಂಹರಿಸಿದರಂತೆ!
ಶೂದ್ರರ ಗೌರಿ ಪೂಜೆಯಲ್ಲಿ ವನವಾಸಿ ಶಿವನಿಗೆ ಒಳಗೆ ಪ್ರವೇಶವಿಲ್ಲ. ಬಲಿ. ಬಲೀಂದ್ರನ ಪೂಜೆಯಲ್ಲಿ ಶೂದ್ರರು ತಮ್ಮ ಪರಾಕ್ರಮಿ ರಾಜನನ್ನು ಒಳಗೆ ಪೂಜಿಸುವುವಂತಿಲ್ಲ. ಇದಕ್ಕೆ ಪರ್ಯಾಯವಾಗಿ ಕಾಲ್ಪನಿಕ ದೇವತೆಗಳಾದ ಸರಸ್ವತಿ,ಲಕ್ಷ್ಮೀ, ಬ್ರಹ್ಮ, ವಿಷ್ಟು, ಮಹೇಶ್ವರ, ಗಣಪತಿಯಂಥ ಬ್ರಾಹ್ಮಣ ಪಕ್ಷಪಾತಿ ದೇವರು, ದೇವತಿಗಳಿಗೆ ಒಳಗೆ ಸ್ಥಾನ?
ತಮ್ಮ ದೇವರಾದ ಚೌಡಮ್ಮ, ಭೂತಪ್ಪ, ಬಲಿ, ಶಿವ ಇತ್ಯಾದಿ ಶೂದ್ರ ದೇವತೆಗಳಿಗೆ ಮನೆಯ ಹೊರಗಿನ ಜಾಗ. ಭಾರತೀಯ ಸನಾತನತೆ, ಹಿಂದುತ್ವ ರಾಷ್ಟ್ರೀಯತೆ ಎಂದು ಬಹುಸಂಖ್ಯಾತರನ್ನು ವಂಚಿಸುವ, ಶೂದ್ರವರ್ಗದ ದುಡಿಮೆಯನ್ನು ಕಬಳಿಸುವ ಮೇಲ್ವರ್ಗ ಈ ಹೊರಗಿರುವ, ಹೊರಗಾದ ದೇವರುಗಳಿಗೂ ಪೂಜಿಸಿ ಹಣ ಪಡೆಯುವುದು ಕೂಡಾ ವಾಡಿಕೆ,ರೂಢಿ-ಸಂಪ್ರದಾಯ!. ಇಂಥ ಆಚರಣೆ ಮಾಡುವ ಶೂದ್ರವರ್ಗ ಲಾಗಾಯ್ತಿನ ಸನಾತನವಾದಿ ಬ್ರಾಹ್ಮಣರ ಸೇವೆ ಮಾಡುವುದು, ದಕ್ಷಿಣೆ, ಕಾಣಿಕೆ ನೆಪದಲ್ಲಿ ಹಣ, ವಸ್ತು ದಾನ ಮಾಡುವುದು! ಈ ಆಚರಣೆಗಳಲ್ಲೆಲ್ಲಾ ಗಳಿಕೆಯನ್ನು ಭಕ್ತಿ-ಧಾರ್ಮಿಕತೆ ಹೆಸರಲ್ಲಿ ಕರ್ಚುಮಾಡುವ ಶ್ರಮಿಕ ಶೂದ್ರ ವರ್ಗ ದೇವರಿಗೆ ನಮಗಿಂತ ಆಪ್ತ, ಸಮೀಪ, ಬಂದಿವಂತಿರುವ ಪುರೋಹಿತರಿಗೆ ನಮಗಿಂತ ಒಳಿತನ್ನೇ ಮಾಡಬೇಕಾದರೆ ಆ ದೇವರ ಪೂಜೆಗೆ ಪುರೋಹಿತರು, ಪೂಜಾರಿಗಳು, ಭಟ್ಟರು ಕಾಣಿಕೆ, ದೇಣಿಗೆ, ಶುಲ್ಕ ವಿಧಿಸಬಾರದಲ್ವೆ?
ಗೃಹಪ್ರವೇಶ, ಹೋಮ, ಹವನ ಮಾಡುವ ಪುರೋಹಿತರು ಒಂದೆರಡು ದಿನದ ತಮ್ಮ ಕೆಲಸಕ್ಕೆ ಲಕ್ಷಾಂತರ ಪಡೆಯುತ್ತಾರೆ. ಉಪನ್ಯಾಸಕರು, ಐಟಿ ಹುಡುಗರ ಲಕ್ಷಾಂತರ ಮಾಸಿಕ ಸಂಬಳ ಪ್ರಶ್ನಿಸುವ ಮೂರ್ಖ ಶೂದ್ರವರ್ಗ ದಡ್ಡ-ವಂಚಕ ಪುರೋಹಿತರಿಗೆ ಒಂದೆರಡು ದಿವಸಗಳ ಕೆಲಸಕ್ಕೆ ಲಕ್ಷಾಂತರ ಹಣ ಕೊಟ್ಟು ಪುನೀತರಾಗುತ್ತಾರೆ. ಇದನ್ನೇ ಹಿಂದುತ್ವ, ಭಾರತೀಯ ಸಂಸ್ಕೃತಿ-ಸಂಪ್ರದಾಯ ಎನ್ನುತ್ತಾರೆ. ಇದೇ ದುಡಿಮೆಯಿಂದ ರಾಜಕೀಯಮಾಡಿ ಸರ್ಕಾರದ ಸೌಲ ಭ್ಯಗಳನ್ನೂ ಕ ಬಳಿಸುತ್ತಾರೆ. ಇದನ್ನು ಪ್ರಶ್ನಿಸುವುದು, ತಕರಾರೆತ್ತುವುದು ಧರ್ಮದ್ರೋಹ, ಧರ್ಮವಿರೋಧವಾಗುವುದಾದರೆ…. ಬಹುಸಂಖ್ಯಾತ ಶೂದ್ರ ವರ್ಗವನ್ನು ದೇವರು, ಧಾರ್ಮಿಕತೆ,ಪೂಜೆ. ಹಿಂದುತ್ವ ಎಂದು ವಂಚಿಸುವುದು ಘೋರ ಪಾಪವಲ್ಲವೆ? ಅಂದಹಾಗೆ ಈಗಿನ ಪಾಪದ ರಾಜ್ಯ ಸರ್ಕಾರ ಸೋಮಾರಿ ಪುರೋಹಿತ ವಂಚಕ ಸಮೂಹಕ್ಕೆ ವಿಮೆ ಸೌಲಭ್ಯವನ್ನೂ ನೀಡಿ ಪುನೀತವಾಗಿದೆ. ಈಗಿನ ಈ ರಾಜ್ಯ-ಒಕ್ಕೂಟ ಸರ್ಕಾರಗಳು ಹಿಂದುತ್ವ ಪಠಿಸುತ್ತಾ ಬಹುಸಂಖ್ಯಾತರ ವಿರೋಧಿ ಕಾರ್ಯಾಚರಣೆ ಮಾಡಿ ಪರಾಕ್ರಮಿ ಬಲೀಂದ್ರ ರೆಂಬ ಶೂದ್ರರನ್ನು ಪಾತಾಳಕ್ಕೆ ತಳ್ಳುತ್ತಿರುವ ಬಗ್ಗೆ ಎಚ್ಚರವಾಗಬೇಕಾದ ಸಂದರ್ಭದಲ್ಲಿ ಪುರೋಹಿತರ ರಾಜಕಾರಣದ ಬೆಂಕಿಗೆ ಎಣ್ಣೆಗಳಾಗುತ್ತಿರುವ ಭಜರಂಗಿಗಳನ್ನು ಬಹಿಷ್ಕರಿಸಲು ಮುಂದಾಗಲು ಈ ಬಲವಾದ ತಕರಾರು.
