

(ದೊಡ್ಡಬ್ಬ( ದೀಪಾವಳಿ)-ರೇಷ್ಮಾ ಗವಿನಸರ) https://www.youtube.com/watch?v=rWUG5A5zhxM&t=18s
ಹಬ್ಬಗಳ ಆಚರಣೆ ಪ್ರತಿ ಪ್ರದೇಶಕ್ಕೂ ಭಿನ್ನವಾಗುತ್ತ ಬೆರಗುಗೊಳಿಸುತ್ತ ಸಾಗುತ್ತದೆ ಅಂಥದ್ದೇ ಒಂದು ದೊಡ್ಡಬ್ಬ( ದೀಪಾವಳಿ)ಮಲೆನಾಡಿನಲ್ಲಿ ಈ ಹಬ್ಬದ ಆಚರಣೆ 5 ದಿನ ನಡೆಯುತ್ತದೆ ಗಂಗಾಷ್ಟಮಿ- ಅಷ್ಟಮಿಯಂದು ಮುತೈದೆಯರು ಮಂಗಳದ್ರವ್ಯಗಳಿಂದ ಗಂಗೆಯನ್ನು ಪೂಜಿಸುತ್ತಾರೆ.ಅದೇ ದಿನ ಅರಗತ್ತಿ ಎಲೆ ಮತ್ತು ಭತ್ತದ ಉವಿ ಯಿಂದ ತಿಕ್ಕಿ ಸ್ವಚ್ಚಗೊಳಿಸಿದ ಹಿತ್ತಾಳೆಯ ಗಂಟೆಗಳನ್ನು ಗೆಜ್ಜೆಸರಗಳನ್ನು ದನ ಕರುಗಳ ಕುತ್ತಿಗೆಗೆ ಕಟ್ಟಲಾಗುತ್ತದೆ ಅವು ವಸ್ತ್ರಡಿಕೆ ಹಬ್ಬದ ವರೆಗೂ ದನಗಳ ಕತ್ತಿನಲ್ಲೇ ಇರುತ್ತವೆ .
ಅಷ್ಟಮಿಯಿಂದ ಪಾಡ್ಯ ದವರೆಗೂ ಕೊಟ್ಟಿಗೆಯ ತುಂಬಾ ಅವುಗಳದ್ದೆ ನಾದ.
ಮಣ್ಣಬೂರೆ- ನಮ್ಮ ಹಿರಿಯರ ಕಾಲದಲ್ಲಿ ಈಗಿದ್ದಂತೆ ಕೊಟ್ಟಿಗೆಗಳು ಸಿಮೆಂಟಿ ನಿಂದ ಆಗಿರಲಿಲ್ಲ ಅದಕ್ಕೆ ವರುಷಕ್ಕೊಮ್ಮೆ ಮಣ್ಣುಬೂರೆ ದಿನ ದನಗಳ ಕಾಲ್ತುಳಿತಕ್ಕೆ ಕಿತ್ತ ಜಾಗಕ್ಕೆ ಮಣ್ಣನ್ನು ಹಾಕಿ ಕೊಟ್ಟಿಗೆ ಸರಿಪಡಿಸುವುದು ದೊಡ್ಡಬ್ಬ ದ ಆಚರಣೆಯಾಗಿ ಬಂದಿತ್ತು. ಈ ದಿನ ರಾತ್ರಿ ಹಳ್ಳಿಯ ಯುವಕರು ಬೂರ್ಗಳವೆಂದು ತೆಂಗು ಅಡಕೆ ಬಾಳೆ ಗೊನೆಗಳನ್ನು ಕಳವು ಮಾಡುವುದುಂಟು .ಇನ್ನು ಮನೆಯಲ್ಲಿ ಮುತೈದೆಯರು ಬಚ್ಚಲ ಹಂಡೆ ತೊಳೆದು ಅದಕ್ಕೆ ಶೇಡಿ ಕೆಮ್ಮಣ್ಣು( ಶೇಡಿ – ಬಿಳಿಮಣ್ಣು , ಕೆಮ್ಮಣ್ಣು- ಕೆಂಪು ಮಣ್ಣು)ಗಳಿಂದ ಚಿತ್ತಾರ ಬಳಿದು ಹಂಡೆಯ ಕಂಠಕ್ಕೆ ಹಿಂಡಲೆ ಕಾಯಿ ಬಳ್ಳಿಯಿಂದ ಸುತ್ತಿ ನೀರನ್ನು ತುಂಬಿಸಿಟ್ಟಿರುವರು.ಬೂರೆ ಹಬ್ಬಬೂರೆ ಹಬ್ಬದ ನಸುಕಿನಲ್ಲೆದ್ದು ಅಭ್ಯಂಜನ ಸ್ನಾನ ಮಾಡಿ ಬಾವಿಗೆ ಪೂಜೆ ಸಲ್ಲಿಸಿ ಬೂರೆ ನೀರನ್ನು ತುಂಬಿ ತರುತ್ತಾಳೆ ಬೂರೆ ನೀರನ್ನು ತುಂಬುವ ಪರಿಕರಕ್ಕೆ ಬೂರೆ ಕುಂಭ ಎನ್ನುವ ಹೆಸರು ಪ್ರಚಲಿತದಲ್ಲಿದೆ ಆದರೆ ಈಗ ಹೆಚ್ಚಿನ ಮಲೆನಾಡಿನ ಮನೆಗಳಲ್ಲಿ ಹಿತ್ತಾಳೆ ತಾಮ್ರದ ಬೂರೆ ಕುಂಭ ಗಳನ್ನೇ ಬಳಸುತ್ತಾರೆ. ಹೀಗೆ ತುಂಬಿ ತಂದ ನೀರನ್ನ ಅಭ್ಯಂಜನ ಮಾಡುವ ಸ್ನಾನದ ಹಂಡೆಗೆ , ತುಳಸಿಗೆ , ಮತ್ತು ಹೊಸ್ತಿಲಿಗೂ ಸ್ವಲ್ಪ ಹಾಕಲಾಗುತ್ತದೆ. ಹೀಗೆ ತಂದ ಕುಂಭವನ್ನು ಮನೆಒಡೆಯ ಮನೆದೇವರಿಗೆ ಪೂಜೆ ಸಲ್ಲಿಸಿ ತುಳಸಿಯ ಮುಂದೆ ಹುಲಿದೇವರ ಪ್ರಾರ್ಥಿಸಿ ಬಲಿಂದ್ರನನ್ನು ಆಹ್ವಾನಿಸುತ್ತಾನೆ.
ನಂತರ ದೇವರ ಮನೆಯಲ್ಲಿ ಕುಡಿಬಾಳೆಯ ಮೇಲೆ ಅಕ್ಕಿ ಹರವಿ ಎಲೆ ಅಡಕೆ ಹಣ್ಣು ಕಾಯಿ ಗೋವೇಕಾಯಿ, ಸೌತೆಕಾಯಿ ಕಡುಬಿನ ನೈವೇದ್ಯಯಿತ್ತು ಶಿರ ವನ್ನು ಅಡಿಕೆಯ ಹಿಂಗಾರದಿಂದ ಮತ್ತು ಭುಜವನ್ನು ದಾಬದಕಣಿ( ಪುಂಡಿ ನಾರಿನಿಂದ ತಯಾರಿಸಿದ ಹೊಸ ಹಗ್ಗ) ಯಿಂದ ಭುಜಗಳನ್ನು ಸಿಂಗರಿಸಲಾಗುತ್ತದೆ. ಬಲಿಂದ್ರನ ಮುಂದೆ ತುಪ್ಪದ ದೀಪವನ್ನು ಹಚ್ಚಿ ಅದರಿಂದ ಕಣಕಪ್ಪು( ಕಾಡಿಗೆ) ತಯಾರಿಸುತ್ತಾರೆ . ಬಲಿಂದ್ರನ ಮುಂದೆ ಹಚ್ಚಿಟ್ಟ ದೀಪ ಮುಂದಿನ ತುಳಸಿ ಕಾರ್ತೀಕದ ವರೆಗೂ ಬೆಳಗಬೇಕುಲಕ್ಷ್ಮೀ ಪೂಜೆಸಮುದ್ರ ಮಂಥನದಿಂದ ಈ ದಿನ ಉದಯಿಸಿದ ಶ್ರೀಲಕ್ಷ್ಮೀ ಯನ್ನು ಧನಧಾನ್ಯದ ಉತ್ತರೋತ್ತರ ಏಳಿಗೆಗಾಗಿ ಭಕ್ತಿಯಿಂದ ದೀಪಗಳನಿಟ್ಟು ಪೂಜಿಸಲಾಗುತ್ತದೆ.
ಶಕ್ತಾನುಸಾರ ನಗನಾಣ್ಯ ಫಲಪುಷ್ಪ ಗಳಿಂದ ಅಲಂಕರಿಸಿ ನೈವೇದ್ಯ ನೀಡಿ ಪ್ರಾರ್ಥಿಸಲಾಗುತ್ತದೆ.
ಪಾಡ್ಯ(ಗೋಪೂಜೆ)- ಪಾಡ್ಯದ ದಿನ ಪುರುಷರು ಕೊಟ್ಟಿಗೆಯ ಎಲ್ಲ ದನಕರುಗಳ ಮೈತೊಳೆದು ಶೇಡಿ ಕೆಮ್ಮಣ್ಣನ್ನು ಬೂರೆ ನೀರಿನಲ್ಲಿ ಕಲಸಿ ದನಕರುಗಳ ಮೈಗೆ ಡಾಕು( ಲೋಟ ವನ್ನು ಶೇಡಿ ಕೆಮ್ಮಣ್ಣಲ್ಲಿ ಅದ್ದಿ ಹಾಕಿದ ಗುಂಡನೆಯ ಚಿತ್ರ) ಮತ್ತು ಹಸ್ತಗಳಿಂದ ಚಿತ್ತಾರ ಬರೆದು ಕೊಡುಗಳಿಗೆ ಬಣ್ಣ ಹಚ್ಚುತ್ತಾರೆ, ಈಗಾಗಲೇ ತಯಾರಿಸಿದ ಅಡಕೆಯ ದಂಡೆ ( ಅಡಕೆ ಪಚ್ಛೆತೆನೆ ಚಪ್ಪೆ ರೊಟ್ಟಿ ವೀಳ್ಯದೆಲೆ ಹಿಂಗಾರ ವನ್ನು ದಬಣದಿಂದ ನಾರಿನಲ್ಲಿ ಸುರಿದ) ಯನ್ನು ದನಕರುಗಳ ಕುತ್ತಿಗೆಗೆ ಕಟ್ಟುತ್ತಾರೆ . ಪುಂಡಿನಾರಿನ ಬಾಸಿಂಗ ಚೌಲಗಳನ್ನು ಎತ್ತುಗಳಿಗೆ ಕಟ್ಟುತ್ತಾರೆ. ಅಷ್ಟರಲ್ಲಿ ಹೆಂಗಸರು ಸಿಹಿಅಡುಗೆ ತಯಾರಿಸಿ ಮನೆ ಅಂಗಳವೆಲ್ಲ ಸಾರಿಸಿ ದಾನಕರುವಿನ ಹೆಜ್ಜೆಯ ಚಿತ್ತಾರ ಬರೆದು ಗೋಪೂಜೆಗೆ ಅಣಿಗೊಳಿಸುತ್ತಾರೆ.ಪೂಜೆಗೆ ಬಂದ ಹಸು ಕರುವಿನ ಪಾದವನ್ನು ಕುಡಿ ಬಾಳೆಯಲ್ಲಿರಿಸಿ ತೊಳೆದು ಮಂಗಲ ದ್ರವ್ಯಗಳಿಂದ ಪೂಜಿಸಿ ನೈವೇದ್ಯ ನೀಡುತ್ತಾರೆ .ಶುಭ ಮುಹೂರ್ತ ದಲ್ಲಿ ದನ ಬಿಡಲಾಗುತ್ತದೆ ನಂತರ ಮನೆಯ ಎಲ್ಲ ದೇವನುದೇವತೆಗಳು, ಪ್ರಧಾನ ಬಾಗಿಲು , ಕೋಳು ಕಂಬ ,ನೇಗಿಲು, ನೊಗ, ಕೊರಡು ಗುದ್ದಲಿ, ಹಾರೆ, ಕತ್ತಿ, ಮುಂತಾದ ಕೃಷಿ ಸಲಕರಣೆಗಳಿಗೆ ನೈವೇದ್ಯ ವಿಟ್ಟು ಪೂಜಿಸಲಾಗುತ್ತದೆ. ಈಗಾಗಲೇ ತಯಾರಿಸಿದ ಕಣ್ಣಕಪ್ಪ ನ್ನು ದನಗಳಿಗೆ ಹಚ್ಚುತ್ತಾರೆ.ಇನ್ನೇನು ಊಟ ಮಾಡುವಷ್ಟರಲ್ಲಿಯೇ ದನಗಳು ಮರಳುವ ಸಮಯ ಆಗ ಮತ್ತೆ ಕೊಟ್ಟಿಗೆಯ ಬಾಗಿಲಿಗೆ ರಂಗೋಲಿ ಇಟ್ಟು ಬಂದ ದನಕರುಗಳಿಗೆ ಆರತಿ ಎತ್ತಿ ಬರಮಾಡಿಕೊಳ್ಳಲಾಗುತ್ತದೆ.ಹಿತ್ತಲಿನ ಗೊಬ್ಬರದ ಗುಂಡಿಯಲ್ಲಿ ದೀವಳಿಗೆ ಕೋಲು ತಯಾರಿಸಿ ಕಡಬತ್ತಿ ಮಾಡಿ ಅದನ್ನು ಬೆಳಗಿಸಿ ದೀಪ್ ದೀವಳಿಗೆಯೋ ನಾಳೆ ಬರೋದು ಹಾಲಬ್ಬೊ ಎಂದು ಬಲಿಂದ್ರನ ವಿಸರ್ಜಿಸಲಾಗುತ್ತದೆ.
ಮತ್ತೊಂದು ದೀವಳಿಗೆ ಕೋಲನ್ನು ಊರಿನ ಎಲ್ಲ ದೇವತೆಗಳಿಗೂ ಪ್ರಾರ್ಥಿಸಿ ಕೊಂಡು ಗದ್ದೆ ಯಲ್ಲಿ ಬೆಳಗಲಾಗುತ್ತದೆ.ರಾತ್ರೆ ಹಬ್ಬ ಹಾಡುವುದು ಇಲ್ಲಿ ಗುಂಪೊಂದು ಬಲವಿಂದ್ರ ಮತ್ತು ಗೋವಿನ ಪದಗಳನ್ನು ಹೇಳುತ್ತಾ ಮನೆಮನೆಗೂ ದೀಪವಿಡಿದು ಸಾಗುತ್ತಾರೆ ವಸ್ತ್ರಡಿಕೆ ಪಾಡ್ಯದ ಮರುದಿನ ಈ ಹಬ್ಬ ಆಚರಿಸಲಾಗುತ್ತದೆ ಗಡಿಭೂತ , ಕೊಟ್ಟಿಗೆ ಮಾರಿ, ಹುಲದೇವರು ಹೀಗೆ ಹೊರಗಿನ ದೇವರುಗಳ ಆರಾಧಿಸೋ ಹಬ್ಬ . ಈ ದಿನ ಗುರಿಕಾಯಿ , ದಂದಿ ಆಡುವುದು ಎಂಬ ಸಾಂಪ್ರದಾಯಿಕ ಆಟವನ್ನು ಆಡಲಾಗುತ್ತದೆ.
ಒಟ್ಟಿನಲ್ಲಿ ನಮಗೆಲ್ಲ ಅರ್ಥವಾಗದ ಹಲವು ಸಂಪ್ರದಾಯಗಳನ್ನೊಳಗೊಂಡಿದ್ದರೂ ದೊಡ್ಡಬ್ಬ ರೈತರ ಬದುಕಿನ ವಿಶೇಷಗಳಲ್ಲಿ ಒಂದೆನಿಸಿದೆ , ರೈತ ಕೃಷಿ ಭೂಮಿ ಅದನ್ನಾರಾಧಿಸುವ ಕಾರ್ಯದ ಸುತ್ತವೇ ಈ ಎಲ್ಲ ಆಚರಣೆಗಳು ಸುತ್ತಿಕೊಂಡಿವೆ ಅಷ್ಟಕ್ಕೂ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. –
ರೇಷ್ಮಾ.


