Neharu for tribes-ಬುಡಕಟ್ಟುಗಳ ಅಭಿವೃದ್ಧಿ : ನೆಹರು ಚಿಂತನೆಗಳು

(ಪಂಡಿತ್ ಜವಾಹರ್ ಲಾಲ್ ನೆಹರು ಅವರು ಆದಿವಾಸಿಗಳ ಮತ್ತು ಜನಪದರ ಅಭಿವೃದ್ಧಿಯ ಕುರಿತು ಮಾಡಿದ ಮೂರು ಪ್ರಖ್ಯಾತ ಭಾಷಣಗಳ ಕನ್ನಡದ ಅನುವಾದಕ್ಕೆ ಬರೆದ ಟಿಪ್ಪಣಿ)

ಭಾರತದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರು ಆದಿವಾಸಿಗಳ ಸಂಸ್ಕೃತಿ ಮತ್ತು ಅವರ ಅಭಿವೃದ್ದಿಯ ಕುರಿತು ಮಾಡಿದ ಮೂರು ಪ್ರಖ್ಯಾತ ಭಾಷಣಗಳನ್ನು ಇಲ್ಲಿ ಅನುವಾದಿಸಲಾಗಿದೆ. ಅರವತ್ತರ ದಶಕದಲ್ಲಿ ನೆಹರು ಆದಿವಾಸಿಗಳ ಅಭಿವೃದ್ಧಿಯ ಕುರಿತು ಮಾಡಿದ ಈ ಭಾಷಣಗಳಿಗೆ ಚಾರಿತ್ರಿಕ ಮಹತ್ವವಿದೆ. ಅಲ್ಲದೆ ಆದಿವಾಸಿಗಳ ಕುರಿತ ಅಂದಿನ ಭಾರತದ ರಾಜಕೀಯಾರ್ಥಿಕ ಸಂದರ್ಭಗಳನ್ನು ಸೂಕ್ಷ್ಮವಾಗಿ ಈ ಭಾಷಣಗಳು ವಿವರಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ವಾತಂತ್ರ್ಯಾನಂತರ, ಭಾರತ ಸರ್ಕಾರ ಆದಿವಾಸಿಗಳ ಅಭಿವೃದ್ಧಿ ನೀತಿಯನ್ನು ರೂಪಿಸಲು ನೆಹರು ಅವರ ಈ ಭಾಷಣಗಳನ್ನು ಪ್ರಧಾನ ಆಕರಗಳೆಂದೇ ಪರಿಗಣಿಸಿತು. ಆದಿವಾಸಿಗಳ ಅಭಿವೃದ್ಧಿಗೆ ಅಂದು ರಚಿಸಲ್ಪಟ್ಟ ಪಂಚಶೀಲ ತತ್ವಗಳು ನೆಹರು ಅವರ ಈ ಭಾಷಣಗಳಿಂದಲೇ ಉದ್ಭವಿಸಿದಂತಹವು. ನೆಹರು ಆದಿವಾಸಿಗಳ ಕುರಿತು ಗಂಭೀರವಾಗಿ ಚಿಂತಿಸಲು ತೊಡಗಿದ್ದು, ಅಂದಿನ ತಮ್ಮ ಸಹವರ್ತಿ ವೆರಿಯರ್ ಎಲ್ವಿನ್‍ರ ಪ್ರಭಾವದಿಂದ. ಎಲ್ವಿನ್ನರ Philosphy of NEFA ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ನೆಹರು ಎಲ್ವಿನ್‍ರ ಕುರಿತು ‘He is the missionary of my views of tribal affairs’ ಎಂದೇ ಬರೆಯುತ್ತಾರೆ.

ಆದಿವಾಸಿಗಳ ಅಭಿವೃದ್ಧಿಯ ಕುರಿತು ನೆಹರು ಒಬ್ಬ ಮಾನವಶಾಸ್ತ್ರಜ್ಞನಂತೆಯೇ ಚಿಂತಿಸಿದ್ದಾರೆ. ಆದಿವಾಸಿಗಳನ್ನು ಅಭಿವೃದ್ಧಿಪಡಿಸಲೆಂದೇ ನಾವು ಒತ್ತಾಯದಿಂದ ಅವರ ಮೇಲೆ ಏನನ್ನೂ ಹೇರಕೂಡದು. ಮತ್ತು ವಸ್ತು ಸಂಗ್ರಹಾಲಯದ ಸ್ಪೆಶಿಮನ್‍ಗಳ ತರಹ ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಬಾರದು. ಅವರ ಅಭಿವೃದ್ಧಿಗೆ ಒಂದು ಸುವರ್ಣ ಮಾಧ್ಯಮ ಸೂತ್ರವನ್ನು ಕಂಡುಕೊಳ್ಳಬೇಕಿದೆ ಎಂದು, ತಮ್ಮ ಈ ಮೂರು ಭಾಷಣಗಳಲ್ಲಿ ನೆಹರು ಆದಿವಾಸಿಗಳ ಅಭಿವೃದ್ಧಿ ನೀತಿಯನ್ನು ರೂಪಿಸಲು ಅನೇಕ ಒಳನೋಟಗಳನ್ನು ನೀಡುತ್ತಾರೆ. ಆದರೆ ಅಭಿವೃದ್ಧಿಯ ಜೊತೆಯಲ್ಲಿಯೇ ಬರುವ ಆಧುನಿಕತೆಯನ್ನು ನೆಹರು ನಿರಾಕರಿಸುತ್ತಾರೆ. ಆಧುನಿಕತೆ ಬುಡಕಟ್ಟುಗಳ ಬದುಕನ್ನು ನಾಶ ಮಾಡಿಬಿಡುತ್ತದೆ ಎಂಬುದು ನೆಹರು ಅವರ ನಂಬಿಕೆಯಾಗಿದೆ.

ಭಾರತ ದೇಶ ಶೀಘ್ರ ಪ್ರಗತಿ ಸಾಧಿಸಲು ಯುರೋಪ್ ಮಾದರಿಯ ಅಭಿವೃದ್ಧಿ ನೀತಿ ಬೇಕು. ಆದರೆ ಈ ಬಗೆಯ ನೀತಿಯ ಜೊತೆಗೇ ಬರುವ ಆಧುನಿಕತೆಯಿಂದ ಇಂಡಿಯಾದ ವೈವಿಧ್ಯತೆಯು ನಾಶವಾಗಬಾರದು. ಆಧುನಿಕತೆಯ ಕಡು ಮೋಹಿಯಾಗಿದ್ದ ನೆಹರು, ಆದಿವಾಸಿಗಳು ತಮ್ಮ ಹಾಡು, ನೃತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿಕೊಳ್ಳಬೇಕು, ನಗರದಲ್ಲಿರುವ ಆಧುನಿಕತೆಯಿಂದ ವಿಕಾರಗೊಂಡಿರುವ ಸಮುದಾಯಗಳಂತೆ ಆದಿವಾಸಿಗಳು ರೂಪಾಂತರಗೊಳ್ಳಬಾರದು, ಆಧುನಿಕತೆಯು ಆದಿವಾಸಿಗಳ ಜೀವನಕ್ರಮದ ಮೇಲೆ ಅನೇಕ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ನಂಬಿದ್ದರು. ಆದಿವಾಸಿಗಳು ಅಭಿವೃದ್ಧಿ ಹೊಂದಬೇಕು, ಆದರೆ ಅವರ ಸಂಸ್ಕೃತಿ ಮತ್ತು ಪಾರಂಪರಿಕ ಮೌಲ್ಯಗಳು ಉಳಿಯಬೇಕು. ಇದು ನೆಹರು ಚಿಂತನೆಯಲ್ಲಿರುವ ಬಹುದೊಡ್ಡ ವಿರೋಧಾಭಾಸ. ಆದಿವಾಸಿಗಳು ತಮ್ಮ ಸಂಸ್ಕೃತಿ, ನೃತ್ಯ ಮತ್ತು ಇತ್ಯಾದಿ ಕಲೆಗಳನ್ನು ಉಳಿಸಿಕೊಳ್ಳಬೇಕೆಂದರೆ, ತಮ್ಮ ಪಾರಂಪರಿಕ ಉತ್ಪಾದನಾ ವ್ಯವಸ್ಥೆ ಮತ್ತು ಸಾಮುದಾಯಿಕ ಬದುಕನ್ನು ಹಾಗೆಯೇ ಉಳಿಸಿಕೊಂಡು ಹೋಗಬೇಕು. ಅಭಿವೃದ್ದಿ ಯೋಜನೆಗಳು ತರುವ ಅಲ್ಪಸ್ವಲ್ಪ ಸುಧಾರಣೆಗಳೂ ಆದಿವಾಸಿಗಳ ಬದುಕಿನ ಮೇಲೆ ನಿರ್ಣಾಯಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ನೆಹರು ಹೇಳುವ `ಉಳಿಸಿಕೊಳ್ಳುವ’ ಚಿಂತನೆ ವರ್ತಮಾನದಲ್ಲಿ ಬಿದ್ದುಹೋಗುತ್ತದೆ. ನೆಹರು ಅವರ ಪಂಚಶೀಲ ತತ್ವಗಳ ಹಿಂದೆಯೂ ಇದೇ ಬಗೆಯ ಚಿಂತನಾಕ್ರಮ ಕೆಲಸ ಮಾಡಿದೆ. ಆದಿವಾಸಿಗಳ ಸಂಸ್ಕೃತಿಯನ್ನು ಕಾಪಾಡುವ, ಅವರ ಪಾರಂಪರಿಕ ಉತ್ಪಾದನಾ ಮೂಲಗಳನ್ನು ಗೌರವಿಸುವ, ಯಾವ ಆಧುನಿಕ ಆಯಾಮಗಳು ಇವರ ಮೇಲೆ ಅಡ್ಡ ಪರಿಣಾಮಗಳನ್ನು ಬೀರದಿರುವಂತೆ ಎಚ್ಚರವಹಿಸುವ ಒಂದು ಬಗೆಯ ರಕ್ಷಣಾತ್ಮಕ ಮನೋಭಾವ ಪಂಚಶೀಲ ತತ್ವಗಳಲ್ಲಿ ಅಡಗಿದೆ. ನೆಹರು ಅತ್ಯಂತ ಮಮಕಾರದಿಂದ ಆದಿವಾಸಿಗಳ ಕುರಿತು ಮಾತಾಡಿದ್ದಾರೆ. ಈ ಭಾವನಾತ್ಮಕ ನಿಲುವನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಆದಿವಾಸಿಗಳ ಸಹಜ ಹಕ್ಕುಬಾಧ್ಯತೆಗಳ ಕುರಿತ ನೆಹರು ಅವರ ರಾಜಕೀಯ ನಿಲುವುಗಳು ಮಾತ್ರ ಪ್ರಶ್ನಾರ್ಹವಾಗಿಯೇ ಇವೆ.

ವಸಾಹತು ಆಡಳಿತದ ಸಂದರ್ಭದಲ್ಲಿ ಮಾನಸಿಕವಾಗಿ ಭಾರತದೇಶದಿಂದ ದೂರ ಸರಿದಿದ್ದ ಈಶಾನ್ಯ ಭಾರತದ ಆದಿವಾಸಿಗಳು, ಸ್ವಾತಂತ್ರ್ಯಾನಂತರ ಸಹಜವಾಗಿಯೇ ಭಾರತ ಒಕ್ಕೂಟದಲ್ಲಿ ಪ್ರತ್ಯೇಕ ರಾಜ್ಯ ಮತ್ತು ಸ್ವಯಂ ಆಡಳಿತದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟವು. ಈಶಾನ್ಯ ಭಾರತದ ಆದಿವಾಸಿಗಳು, ಬಿಹಾರ್, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ದಂಡಕಾರಣ್ಯದಲ್ಲಿ ವಾಸಿಸುತ್ತಿರುವ ಆದಿವಾಸಿಗಳು ಈ ಸ್ವಯಂ ಆಡಳಿತದ ಕುರಿತು ಚಳುವಳಿಗಳನ್ನೇ ರೂಪಿಸಿದರು. ಈ ಬಗೆಯ ಪ್ರತ್ಯೇಕ ರಾಜ್ಯ ಮತ್ತು ಸ್ವಯಂ ಆಡಳಿತದ ಬೇಡಿಕೆಗಳ ಹಿಂದೆ ಅನೇಕ ಸಾಮಾಜಿಕಾರ್ಥಿಕ ಕಾರಣಗಳು ಅಡಗಿವೆ. ವಸಾಹತು ಆಡಳಿತದ ಸಂದರ್ಭದಲ್ಲಿ ಆದಿವಾಸಿಗಳು ಕಂಪನಿ ಸರ್ಕಾರದ ಮತ್ತು ಭಾರತದ ಊಳಿಗಮಾನ್ಯಶಾಹಿ ಆಕ್ರಮಗಳಿಂದ ದಿಕ್ಕೆಟ್ಟು ಹೋಗಿದ್ದರು. ಅವರ ಕೃಷಿ ಭೂಮಿಗಳು ಎಸ್ಟೇಟುಗಳಾಗಿ, ವಾಣಿಜ್ಯ ಬೆಳೆಗಳನ್ನು ಬೆಳೆವ ಪ್ಲಾಂಟರುಗಳ ಕೈ ವಶವಾಗಿದ್ದವು. ಸಂತಾಲರು, ಖಾರ್ಜಂಡಿಗಳು, ಬೋಡೋಗಳು ಆರಂಭದಲ್ಲಿಯೇ ಕಂಪನಿ ಸರ್ಕಾರದ ಸೈನ್ಯಕ್ಕೆ ಮುಖಾಮುಖಿಯಾದರು. ಬಹಳ ಸಲ ಆದಿವಾಸಿಗಳು ಈ ಮುಖಾಮುಖಿಯಲ್ಲಿ ಹಿಂಸಾತ್ಮಕವಾಗಿ ಹತ್ತಿಕ್ಕಲ್ಪಟ್ಟರು. ವಸಾಹತುಶಾಹಿಗೆ, ಅಧೀನ ರಾಷ್ಟ್ರಗಳ ಅಮಾಯಕ, ಮೂಖ ಸಮುದಾಯಗಳನ್ನು ಹತ್ತಿಕ್ಕುವುದು ಕಷ್ಟಕರ ಕೆಲಸವಾಗಿರಲಿಲ್ಲ. ಆದರೆ ವಸಾಹತು ಆಡಳಿತದ ಸಂದರ್ಭದಲ್ಲಿ ಈ ಭಾಗದ ಆದಿವಾಸಿಗಳು ಪದೇ ಪದೇ ತಮ್ಮ ಪಾರಂಪರಿಕ ನೆಲೆಗಳಿಗಾಗಿ ಹೋರಾಟ ಮಾಡುತ್ತಲೇ ಬಂದರು. ಈ ಹೋರಾಟಗಳು ಸ್ವಾತಂತ್ರ್ಯಾ ನಂತರವೂ ಮುಂದುವರೆದವು. ಆದರೆ ಭಾರತ ಸರ್ಕಾರವು, ಈ ಜನತಾಂತ್ರಿಕ ಹೋರಾಟಗಳನ್ನು ವಿದೇಶಿ ಏಜೆಂಟರ ಇಲ್ಲವೇ ಮಿಶನರಿಗಳ ಪಿತೂರಿ ಎಂದೇ ಭಾವಿಸಿತು.

ನೆಹರುವಿನ ಸಂಗಡಿಗರು ಈ ನಿಲುವಿನಿಂದ ಹೊರತಾಗೇನೂ ಇರಲಿಲ್ಲ. ಆದಿವಾಸಿಗಳ ಹೋರಾಟಗಳು ಅವರ ಸಾಮಾಜಿಕಾರ್ಥಿಕ ನೆಲೆಗಳಿಂದ ರೂಪಗೊಂಡಿವೆ ಎಂದು ನೆಹರು ಸಂಗಡಿಗರು ಭಾವಿಸಲಿಲ್ಲ. `ಸರ್ವಶಕ್ತ ಬೃಹತ್ ಭಾರತ’ ಮಾತ್ರ ಅವರ ಪ್ರಧಾನ ಪರಿಗಣನೆಯಾಗಿತ್ತು. ಭಾರತದ ವೈವಿಧ್ಯಮಯ ಸಮಾಜವನ್ನು ಇನ್ನೂ ಶ್ರೀಮಂತಗೊಳಿಸಲು ಆದಿವಾಸಿಗಳು ಈ ದೇಶದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲೇಬೇಕೆಂಬುದು ನೆಹರು ಅವರ ಆಸೆಯಾಗಿತ್ತು. ಆದಿವಾಸಿಗಳು ತರಲೆ ಮಾಡದೆ ಭಾರತದ ಭಾಗವಾಗಿ ಬದುಕಬೇಕು, ಅವರಿಗೆ ಬೇಕಾದ ಶಾಲೆ, ರಸ್ತೆಗಳನ್ನು ಕೊಟ್ಟುಬಿಡೋಣ ಎಂಬುದು ನೆಹರು ಅವರ ವಾದವಾಗಿತ್ತು. ಸ್ವಯಂ ಆಡಳಿತದ ಹಕ್ಕನ್ನು ಒಂದು ಸಮುದಾಯ ಯಾಕಾಗಿ ಪದೇ ಪದೇ ತನ್ನ ಅಸ್ತಿತ್ವದ ಕಾರಣಕ್ಕಾಗಿ ಮಂಡಿಸುತ್ತಿದೆ ಎಂಬ ರಾಜಕೀಯ ಪ್ರಶ್ನೆ ನೆಹರು ಅವರ ಚಿಂತನೆಯಲ್ಲಿ ಗೈರು ಹಾಜರಾಗಿದೆ. ಆದಿವಾಸಿಗಳ ಹೋರಾಟಗಳು ದೇಶದ್ರೋಹಿ ಚಟುವಟಿಕೆಗಳೆಂದೇ ಸರಳೀಕರಿಸಿ ಅರ್ಥೈಸಲ್ಪಟ್ಟಿವೆ. ತಮ್ಮ ರಾಜಕೀಯಾರ್ಥಿಕ ಕಾರಣಗಳಿಗಾಗಿ ಮತ್ತು ಸಾಮಾಜಿಕ ಅವಮಾನಗಳನ್ನು ಮೀರಿ ನಿಲ್ಲುವುದಕ್ಕಾಗಿ ಸಂಘಟಿತವಾದ ಹೋರಾಟಗಳನ್ನು ನೆಹರು ತಮ್ಮ ಅಮಿತ ರಾಷ್ಟ್ರಪ್ರೇಮದ ಭ್ರಮೆಗಳಲ್ಲಿ ಕ್ಷುಲ್ಲಕವಾಗಿಯೇ ಕಂಡಂತಿದೆ. ಈ ಬಗೆಯ ಅಸೈದ್ಧಾಂತಿಕ ರಾಜಕೀಯ ನಿಲುವು ನೆಹರು ಅವರ ಆದಿವಾಸಿಗಳ ಕುರಿತ ಚಿಂತನೆಗಳಲ್ಲಿ ಹಾಸುಹೊಕ್ಕಾಗಿದೆ.

ಆದಿವಾಸಿಗಳ ಬದುಕಿನಲ್ಲಿ ಯಾವ ಮೂಲಭೂತ ಬದಲಾವಣೆಗಳನ್ನು ತರದೆ, ಅವರು ಅಖಂಡ ಭಾರತದ ಭಾಗವಾಗಿ ಬದುಕಬೇಕೆಂಬ ನೆಹರು ಮತ್ತು ಅವರ ಸಂಗಡಿಗರ ಆಶಯವೇ ಅಪ್ಪಟ ಊಳಿಗಮಾನ್ಯಶಾಹಿ ಮೌಲ್ಯಗಳಿಂದ ಪ್ರೇರೇಪಿತವಾದದ್ದು. ದುಡಿವ ವರ್ಗಗಳ ಹಕ್ಕು ಬಾಧ್ಯತೆಗಳ ಕುರಿತು ಭಾರತದ ಆಡಳಿತ ವ್ಯವಸ್ಥೆ ಯಾವತ್ತೂ ಕುರುಡಾಗಿ ಬೇಜವಾಬ್ದಾರಿಯ ದಾಪುಗಾಲನ್ನಿಡುತ್ತಲೇ ಬಂದಿದೆ. ಒಂದು ಗಣರಾಜ್ಯವಾಗಿ, ಜಾತ್ಯಾತೀತ ನೆಲೆಗಟ್ಟಿನಲ್ಲಿ ಎಲ್ಲಾ ಸಾಮಾಜಿಕ ಅನನ್ಯತೆಗಳನ್ನು, ಅವುಗಳ ಸಹಜ ಹಕ್ಕುಗಳನ್ನು ರಕ್ಷಿಸುವ ಮತ್ತು ದುರ್ಬಲ ಸಮುದಾಯಗಳಿಗೆ ರಾಜಕೀಯಾರ್ಥಿಕ ಅವಕಾಶಗಳನ್ನು ಕಲ್ಪಿಸುವ ಸದಾಶಯಗಳಿಂದ ನಮ್ಮ ಸಂವಿಧಾನ ರಚಿಸಲ್ಪಟ್ಟಿದೆ. ಆದರೆ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಭಾರತದ ಶಕ್ತಿರಾಜಕಾರಣ ನಡೆದುಕೊಂಡು ಬಂದಿದೆ. ಈ ದೇಶದ ಆದಿವಾಸಿಗಳ ಮತ್ತು ಕೆಳವರ್ಗಗಳ ಹೋರಾಟಗಳನ್ನು ಹುಸಿ ರಾಷ್ಟ್ರೀಯತೆಯ ಕಾರಣಗಳಿಗಾಗಿ ಕ್ಷುಲ್ಲಕವಾಗಿ ಕಂಡು ಅವುಗಳನ್ನು ಹತ್ತಿಕ್ಕುವ ಪ್ರಯತ್ನಗಳು ನೆಹರುವಿನ ಕಾಲದಿಂದಲೇ ಪ್ರಾರಂಭವಾಗಿವೆ. ಇದಕ್ಕೆ ಬಹುದೊಡ್ಡ ಉದಾಹರಣೆಯೆಂದರೆ ನೆಹರು ಸರ್ಕಾರದ ಸೈನ್ಯ ತೆಲಂಗಾಣದ ರೈತ ಹೋರಾಟವನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ್ದು. ಇದನ್ನು ನೆಹರುವಿನ ವ್ಯಕ್ತಿಗತ ತಾತ್ವಿಕ ಮಿತಿಯೆಂದು ನೋಡುವುದಕ್ಕಿಂತ ಅಂದಿನ ಭಾರತದ ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸಿದ ಊಳಿಗಮಾನ್ಯಶಾಹಿ ಆಶಯಗಳ ಭಾಗವಾಗಿ ಈ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಬೇಕು.

ಅಂದಿನ ರಾಷ್ಟ್ರೀಯತೆಯ ಕಲ್ಪನೆಯೇ ಇಂದು ಸಾಂಸ್ಕೃತಿಕ ರಾಷ್ಟ್ರೀಯತೆ’ಯೆಂಬ ಭೂತವಾಗಿ ಭಾರತದ ಕೋಮು ಸಾಮರಸ್ಯವನ್ನು ಕದಡುತ್ತಿದೆ. ಭಾರತದ ಏಕರೂಪೀ ಸಮಾಜದ ನಿರ್ಮಾಣಕ್ಕೆ ಇಲ್ಲಿನ ವೈವಿಧ್ಯಮಯ ಜಗತ್ತುಗಳನ್ನು ಅದು ನಾಶ ಮಾಡುತ್ತಿದೆ. ಈ ಬಗೆಯ ಮತೀಯ ಅತಿರೇಕಗಳು ಯಾವ ತಾತ್ವಿಕ ನೆಲೆಯಿಲ್ಲದ ಹುಸಿರಾಷ್ಟ್ರೀಯತೆಯಿಂದಲೇ ಹುಟ್ಟುವುದು. ಭಾರತದ ಶಕ್ತಿರಾಜಕಾರಣವು, ‘ಸರ್ವಶಕ್ತ ಭಾರತವೆಂಬುದು ಅಗಾಧ ರಾಷ್ಟ್ರಪ್ರೇಮದಿಂದ ಉದ್ಭವಿಸಬಲ್ಲದು, ಆ ಕಾರಣಕ್ಕಾಗಿ ಈ ಕ್ಷಣಕ್ಕೆಆಂತರಿಕ ಏರುಪೇರುಗಳನ್ನು’ ಎಲ್ಲರೂ ಸಹಿಸಿಕೊಳ್ಳಬೇಕು’ ಎಂದು ನಮ್ಮನ್ನು ನಂಬಿಸುತ್ತಾ ಬಂದಿದೆ. ಹೀಗಿದ್ದಾಗ ಯಾವುದೇ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಆದರ್ಶದ ಯೋಜನೆಗಳು ಫಲಿತಾಂಶದಲ್ಲಿ ವಿಫಲವಾಗುತ್ತಲೇ ಹೋಗುತ್ತವೆ. ಈ ಕಾರಣಕ್ಕಾಗಿ ನೆಹರು ಆದಿವಾಸಿಗಳ ಅಭಿವೃದ್ಧಿಯ ಕುರಿತು ರೂಪಿಸಿದ ಪಂಚಶೀಲ ತತ್ವಗಳು ಉನ್ನತ ಆದರ್ಶಗಳಾಗಿ ಮಾತ್ರ ಗೋಚರಿಸುತ್ತವೆ.

ಆದರೆ ಸ್ವಾತಂತ್ರ್ಯಾನಂತರ ಆದಿವಾಸಿಗಳ ಕುರಿತು ಮಾನವೀಯ ನೆಲೆಯಲ್ಲಿ ಯೋಚಿಸಿದ ನೆಹರು ಅವರ ಚಿಂತನೆಗಳು, ಆದಿವಾಸಿಗಳ ಕುರಿತ ಇಂದಿನ ಚರ್ಚೆಗಳಿಗೆ ಉಪಯುಕ್ತವಾಗಬಲ್ಲವೆಂದು ಈ ಭಾಷಣಗಳನ್ನು ಅನುವಾದಿಸಲಾಗಿದೆ. ಆದಿವಾಸಿಗಳ ಅಭಿವೃದ್ಧಿ ನೀತಿಯನ್ನು ಇನ್ನೂ ಗಾಢವಾಗಿ ಪ್ರಭಾವಿಸುತ್ತಿರುವ ನೆಹರುವಿನ ಪಂಚಶೀಲ ತತ್ವಗಳು, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನುಷ್ಟಾನಗೊಳ್ಳುವ ಸಾಧ್ಯಾಸಾಧ್ಯತೆಯ ಕುರಿತು ನಾವೆಲ್ಲರೂ ಯೋಚಿಸಬೇಕಿದೆ.

                                            -ಎ ಎಸ್  ಪ್ರಭಾಕರ
                                             ಕನ್ನಡ ವಿವಿ, ಹಂಪಿ
                                              2004

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *