

ಕಾಡುತ್ತಿರುವ ಅನಾರೋಗ್ಯ, ಸಕ್ರಿಯ ರಾಜಕಾರಣಕ್ಕೆ ಸೋನಿಯಾ ಗಾಂಧಿ ಗುಡ್ ಬೈ? ಶರದ್ ಪವಾರ್ ಗೆ ಯುಪಿಎ ಅಧ್ಯಕ್ಷ ಪಟ್ಟ?
ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದರು. ನಂತರ ಮಧ್ಯಂತರ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಹೊಣೆ ಹೊತ್ತುಕೊಂಡರು.


ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದರು. ನಂತರ ಮಧ್ಯಂತರ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಹೊಣೆ ಹೊತ್ತುಕೊಂಡರು. ಅವರು ಯುಪಿಎ ಮೈತ್ರಿಕೂಟದ ಅಧ್ಯಕ್ಷೆ ಕೂಡ ಆಗಿ ಮುಂದುವರಿದಿದ್ದಾರೆ.
ಆದರೆ ಅವರನ್ನು ಪದೇ ಪದೇ ಅನಾರೋಗ್ಯ ಕಾಡುತ್ತಿದೆ. ಅಂದುಕೊಂಡಂತೆ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎನ್ ಸಿಪಿ ನಾಯಕ ಶರದ್ ಪವಾರ್ ಅವರು ಯುಪಿಎ ಮೈತ್ರಿಕೂಟದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ಪತ್ರಿಕೆಗೆ ತಿಳಿದುಬಂದಿದೆ.
ಯುಪಿಎ ಮೈತ್ರಿಕೂಟದ ಪಕ್ಷಗಳಲ್ಲಿರುವ ಹಲವು ಹಿರಿಯ ನಾಯಕರುಗಳಲ್ಲಿ ಶರದ್ ಪವಾರ್ ಕೂಡ ಒಬ್ಬರು. ಅವರು ಎಲ್ಲಾ ಪಕ್ಷಗಳ ನಾಯಕರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಬೆಂಬಲ ನೀಡಿ ಕೇಂದ್ರ ಸರ್ಕಾರ ನೂತನ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ ನಾಯಕರಲ್ಲಿ ಶರದ್ ಪವಾರ್ ಮತ್ತು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಕೂಡ ಇದ್ದರು.
ಮೊನ್ನೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ನಿಯೋಗದಲ್ಲಿ ಸೀತಾರಾಮ್ ಯೆಚೂರಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮತ್ತು ಡಿಎಂಕೆ ನಾಯಕ ಟಿ ಕೆ ಎಸ್ ಎಲಂಗೊವನ್ ಪ್ರಮುಖರು.
ತಮ್ಮ ಅನಾರೋಗ್ಯ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿಯವರು ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗಲು ಬಯಸಿದ್ದಾರೆ ಎನ್ನಲಾಗುತ್ತಿದೆ. 2017ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನವನ್ನು ಪುತ್ರ ರಾಹುಲ್ ಗಾಂಧಿಗೆ ಬಿಟ್ಟುಕೊಟ್ಟಿದ್ದು ಆ ಪ್ರಕ್ರಿಯೆಯ ಭಾಗವಾಗಿತ್ತು. ಆದರೆ 2019ರ ಲೋಕಸಭೆ ಚುನಾವಣೆ ನಂತರ ರಾಹುಲ್ ಗಾಂಧಿ ನಾಯಕನ ಪಟ್ಟ ಬಿಟ್ಟು ಕೆಳಗಿಳಿದರು. ಆಗ ಸೋನಿಯಾ ಗಾಂಧಿಯವರು ಬೇರೆ ದಾರಿಯಿಲ್ಲದೆ ಮಧ್ಯಂತರ ಅಧ್ಯಕ್ಷೆಯಾದರು.
ಶ್ವಾಸಕೋಶದ ಸೋಂಕಿನಿಂದ ಆಗಾಗ ಆಸ್ಪತ್ರೆಗೆ ಬಂದು ಹೋಗುತ್ತಿರುತ್ತಾರೆ ಸೋನಿಯಾ ಗಾಂಧಿ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅವರು ಪಕ್ಷದ ಪರವಾಗಿ ಪ್ರಚಾರ ಮಾಡಲು ಕೂಡ ಸಾಧ್ಯವಾಗಿರಲಿಲ್ಲ. ಯುಪಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದೆ. ಹಾಗಾಗಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಗೆ ಸಿಗಬೇಕು. ಆದರೆ ಸೋನಿಯಾ ಗಾಂಧಿಯವರು ನಿವೃತ್ತಿ ಹೊಂದಿದರೆ ಶರದ್ ಪವಾರ್ ನಂತರದ ಅತಿ ಹಿರಿಯ ನಾಯಕ. ಇನ್ನು ಮುಂದೆ ಯುಪಿಎ ಮೈತ್ರಿಕೂಟ ಇನ್ನಷ್ಟು ಬಲಿಷ್ಠವಾಗಿ ಮೋದಿ ಆಡಳಿತ ವಿರುದ್ಧ ಹೋರಾಟ ನಡೆಸಬೇಕೆಂದು ತೀರ್ಮಾನಿಸಿದಂತಿದೆ.
1991ರಲ್ಲಿ ಕಾಂಗ್ರೆಸ್ ಜೊತೆ ಭಿನ್ನಾಭಿಪ್ರಾಯದಿಂದ ರಾಜೀನಾಮೆ ನೀಡಿ ಹೊರಬಂದ ಮೇಲೆ ಸೋನಿಯಾ ಗಾಂಧಿ ಮತ್ತು ಶರದ್ ಪವಾರ್ ಅವರ ನಡುವಿನ ಬಾಂಧವ್ಯ ಅಷ್ಟಕಷ್ಟೆ. ಆದರೆ ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯ ಶಕ್ತಿ, ಪ್ರಭಾವ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಮಯದಲ್ಲಿ ಎನ್ ಸಿಪಿ ನಾಯಕರು ಬಲವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಬೆಳೆದು ಆಡಳಿತ ಪಕ್ಷಕ್ಕೆ ಕಠಿಣ ಸವಾಲು ನೀಡಬೇಕು ಎಂದು ಬಯಸಿದರೆ ಆಶ್ಚರ್ಯವಿಲ್ಲ.
ಆದರೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಇಬ್ಬರೂ ನಾಯಕತ್ವ ಬದಲಾವಣೆ ವಿಷಯವನ್ನು ನಿರಾಕರಿಸುತ್ತಾರೆ. ಎನ್ ಸಿಪಿ ಮುಖ್ಯ ವಕ್ತಾರ ಮಹೇಶ್ ತಪಸೆ, ಇಂತಹ ಪ್ರಸ್ತಾಪದ ಬಗ್ಗೆ ಯುಪಿಎ ಒಳಗೆ .ಯಾವುದೇ ಚರ್ಚೆ ನಡೆದಿಲ್ಲ ಎನ್ನುತ್ತಾರೆ.
ರೈತರ ಪ್ರತಿಭಟನೆಯಿಂದ ಗಮನವನ್ನು ಬೇರೆಡೆ ಸೆಳೆಯಲು ಪಟ್ಟಭದ್ರ ಹಿತಾಸಕ್ತಿಗಳು ಇಂತಹ ವದಂತಿ ಹಬ್ಬಿಸುತ್ತಿವೆ ಎಂದು ಕಾಂಗ್ರೆಸ್ ಹೇಳಿದೆ. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
