

ನನಗೆ ಗೊತ್ತಿಲ್ಲ, ಈ ರೀತಿ ವಿಶ್ಲೇಷಿಸಿದರೆ ತಪ್ಪಾಗುತ್ತದೆಯೇ, ತಿಳಿದವರು ಹೇಳಬೇಕು. ರಾಜ್ಯ ಸರ್ಕಾರ ಗೋ ಹತ್ಯಾ ನಿಷೇಧ ಕಾಯಿದೆಯನ್ನು ಜಾರಿ ಮಾಡುವ ಹಂತದಲ್ಲಿದೆ. ಈ ಕುರಿತಾಗಿ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದ ಹೊಸನಗರದ ರಾಮಚಂದ್ರಾಪುರ ಮಠ ಅದನ್ನು ಸಹಜವಾಗಿಯೇ ಸ್ವಾಗತಿಸಿದೆ.ಈ ಮಠದ ಅನುಯಾಯಿಗಳಾಗಿ, ಗ್ರಾಮೀಣ ಭಾಗದ ಹವ್ಯಕ ರೈತರಾಗಿ ನಾವು ಕೊಟ್ಟಿಗೆಗಳನ್ನೇ ಕಳೆದುಕೊಳ್ಳುತ್ತಿರುವುದರಿಂದ, ಗೋವುಗಳನ್ನು ಸಾಕದೆ ಆ ಮೂಲಕ ಗೋ ಹತ್ಯೆಯ ಸಾಧ್ಯತೆಯನ್ನು ಕಡಿಮೆ ಮಾಡಿದ್ದೇವೆ ಎಂದು ಕಟುವಾಸ್ತವವನ್ನು ಹೇಳಬಹುದು.

ಹಿಂಸೆ ಅಸಹನೀಯವಾಗಿರುವ ಗೋ ಹತ್ಯೆ ನಮಗೆ ಸಮ್ಮತವಲ್ಲ. ಗೋವನ್ನು ಸಾಕಿ ಕಟುಕರಿಗೆ ನಾವು ಕೊಡಲಾರೆವು. ಆದರೆ ಮಾಂಸಾಹಾರಿಗಳಿಗೆ ಅದನ್ನು ಸಾಕಿ, ಅದನ್ನು ಸಾಕುವಂತಿಲ್ಲ ಎಂದು ನಾವು ನಿರ್ದೇಶಿಸುವುದು ಸರಿಯೇ, ನನಗೆ ಗೊತ್ತಿಲ್ಲ. ನಾವು ಸಾಕುವ ಹಸುಗಳನ್ನು ಕದ್ದು ಆಹಾರಕ್ಕೆ ಬಳಸುವ ಪ್ರಯತ್ನ ಮಾಡುತ್ತಿದ್ದರೆ ಅದನ್ನು ಪರಿಣಾಮಕಾರಿಯಾಗಿ ತಡೆಯಲು ಈಗಾಗಲೇ ನಮ್ಮಲ್ಲಿ ಕಾನೂನುಗಳಿಲ್ಲವೇ? ನನಗೆ ಗೊತ್ತಿಲ್ಲ.
ಹೊಸನಗರದ ರಾಮಚಂದ್ರಾಪುರ ಮಠ ಗೋವುಗಳ ಮಹತ್ವ, ಅದರಲ್ಲೂ ಹಳ್ಳಿಕಾರು ಗೋವುಗಳ ಮಹತ್ವವನ್ನು ವಿಶೇಷವಾಗಿ ಪ್ರಚಾರ ಮಾಡಿದೆ. ವಿಶ್ವ ಗೋ ಸಮ್ಮೇಳನವೇ ಒಂದು ಕಾಲದಲ್ಲಿ ನಡೆದಿತ್ತು. ಆನಂತರದಲ್ಲಿ ಮಠದ ಸದಸ್ಯರಲ್ಲಿ ಮತ್ತು ಒಟ್ಟಾರೆ ಸಮಾಜದಲ್ಲಿ ಗೋವುಗಳ ಸಾಕಾಣಿಕೆ ಹೆಚ್ಚಾಗಿದೆಯೋ, ಕಡಿಮೆಯಾಗಿದೆಯೋ ಎಂಬುದರ ಕುರಿತು ಖುದ್ದು ಮಠ ಸಮೀಕ್ಷೆ ನಡೆಸಿ ವರದಿ ನೀಡಬೇಕಾಗಿತ್ತು. ನನ್ನ ಮಟ್ಟಿಗೆ, ಗೋ ಸಮ್ಮೇಳನದ ಯಶಸ್ಸು, ಗೋವುಗಳನ್ನು ಅರ್ಥಾತ್ ಮಲೆನಾಡು ಗಿಡ್ಡ ತರಹದ ಸ್ಥಳೀಯ ಜಾತಿಯ ಹಸುಗಳ ಸಾಕಾಣಿಕೆಯನ್ನು ಹೆಚ್ಚಿಸುವುದರಲ್ಲಿದೆ. ತಪ್ಪಿದ್ದರೆ ತಿಳಿಸಬಹುದು.ಅಷ್ಟಕ್ಕೂ ಪ್ರತಿ ಪ್ರಯತ್ನದಲ್ಲಿಯೂ ಸಫಲತೆಯೇ ಸಿಗಬೇಕೆಂದಿಲ್ಲ.
ಅದು ಹೊಸನಗರದ ಮಠದ ಗೋ ಸಮ್ಮೇಳನಕ್ಕೂ ಅನ್ವಯ. ಅವತ್ತಿನ ಪ್ರಯತ್ನ ಸಫಲ ಅಲ್ಲ ಎಂತಾದರೆ ಆ ಹೋರಾಟವನ್ನು ಮತ್ತೊಂದು ಮಜಲಿಗೆ ತೆಗೆದುಕೊಂಡುಹೋಗಬೇಕಾಗುತ್ತದೆ. ಜನರ ಮನಸ್ಸಿನಲ್ಲಿ, ಊಹ್ಞೂ, ತನ್ನ ಹತ್ತಿರದ ಸದಸ್ಯ ಬಳಗ ಗೋ ಸಾಕಾಣಿಕೆಯನ್ನು ಹೆಚ್ಚಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು. ಅದರಲ್ಲಿ ಯಶಸ್ಸು ಪಡೆಯಬೇಕು. ಆಗ ಅದು ಒಂದು ಆಂದೋಲನದ ರೂಪ ಪಡೆಯುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಯದೆ, ಗೋ ಸ್ವರ್ಗದ ಯೋಜನೆಯ ಜಾರಿ ವೈಫಲ್ಯವನ್ನು ಒಪ್ಪಿಕೊಂಡಿದ್ದರ ದ್ಯೋತಕವೇ? ಏಕೆ ಹೇಳುತ್ತೇನೆಂದರೆ, ಗೋವುಗಳನ್ನು ಸಾಕಿದವರು, ಸಾಕಾಣಿಕೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿ ಗೋ ಸ್ವರ್ಗಕ್ಕೆ ಅವನ್ನು ದಾಟಿಸುವುದು ಸುಲಭದ ಕೆಲಸ. ಅಂದರೆ ಗೋ ಸಾಕಾಣಿಕೆಯನ್ನು ಪ್ರೋತ್ಸಾಹಿಸಬೇಕಾದ ವ್ಯವಸ್ಥೆ ಅದನ್ನು ನಿರುತ್ತೇಜನಕಗೊಳಿಸುವ ಕೆಲಸ ಮಾಡಿದಂತೆ. ಗೋ ಸ್ವರ್ಗ ನಮಗೆ ಪಿಕ್ನಿಕ್ ಸ್ಪಾಟ್ ಆಗುವುದು, ನಮ್ಮ ಗೋ ಪ್ರೇಮವನ್ನು ವ್ಯಕ್ತಪಡಿಸುವ ಕೇಂದ್ರವಾಗುವುದು, ಒಂದಿಷ್ಟು ಹಣ ಕೊಟ್ಟು, ಆ ಹಣ ಕೊಟ್ಟಿದ್ದೇನೆನ್ನವ ಮೂಲಕ ನಾನೂ ಗೋ ಸೇವೆಯಲ್ಲಿ ಭಾಗಿ ಎನ್ನುವುದು ಲಾಜಿಕಲ್ ಆಗುತ್ತದಾ ಎನ್ನುವುದು ನನ್ನ ಪ್ರಶ್ನೆ.
ನಾನಂತೂ ಈ ಮಾತುಗಳನ್ನು ವ್ಯಂಗ್ಯವಾಗಿ ಆಡುತ್ತಿಲ್ಲ. ತಲೆಯಲ್ಲಿ ಓಡಾಡುತ್ತಿದ್ದ ವಿಷಯವನ್ನು ಜಿಜ್ಞಾಸೆಯ ಸ್ವರೂಪದಲ್ಲಿ ಇಟ್ಟಿದ್ದೇನೆ. ಚರ್ಚೆಗೆ ಸ್ವಾಗತ.
….ಟಿಪ್ಪಣಿ: ಗೋ ಸಮ್ಮೇಳನಕ್ಕೆ ಹೋಗಿದ್ದೆ. ನಾವಂತೂ ಕೊಟ್ಟಿಗೆ ಕ್ಲೋಸ್ ಮಾಡಿದ್ದೇವೆ. ಗೋ ಸೇವೆ ಕಲ್ಪನೆಗೆ ಮಾಡಬೇಕು, ಮಾಡಬಾರದು ಎಂಬ ತರ್ಕ ತಲೆಯಲ್ಲಿಲ್ಲ.
….ಮಾವೆಂಸ ಪ್ರಸಾದ್
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
