

ಇಂದು ರೈತ ದಿನಾಚರಣೆ. ಸಾಕಷ್ಟು ರೈತ ಹೋರಾಟಗಳನ್ನು ನಮ್ಮ ದೇಶದ ಕಂಡಿದೆ. ಆದರೆ ಮೊಟ್ಟ ಮೊದಲ ಬಾರಿಗೆ ರೈತ ಹೋರಾಟಕ್ಕೆ ಒಂದು ಸರಿಯಾದ ರೂಪು ಕೊಟ್ಟು ಬೃಹತ್ ಪ್ರಮಾಣದಲ್ಲಿ ಸತ್ಯಾಗ್ರಹ ಸಂಘಟಿಸಿ ಯಶಸ್ವಿಯಾದ ಕೀರ್ತಿ ಮಹಾತ್ಮ ಗಾಂಧೀಯವರಿಗೆ ಸಲ್ಲಬೇಕು. ಇದಕ್ಕೆ ಉದಾಹರಣೆಯಾಗಿ ನಮ್ಮ ಕಣ್ಣ ಮುಂದೆ ಬರುವುದು ಚಂಪಾರಣ್ ನಲ್ಲಿ ನಡೆದ ನೀಲಿ ಬೆಳೆಗಾರರ ಶೋಷಣೆಯ ವಿರುದ್ಧದ ಸತ್ಯಾಗ್ರಹ. ಭಾರತದಲ್ಲಿ ಗಾಂಧೀಯವರ ಹೋರಾಟ ಆರಂಭವಾಗಿದ್ದೇ ರೈತ ಚಳುವಳಿಯ ಮೂಲಕ. ನಂತರ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕಾಲಿಟ್ಟರು.ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಫಿನಿಕ್ಸ್ ಮತ್ತು ಟಾಲ್‌ಸ್ಟಾಯ್ ಆಶ್ರಮಗಳಲ್ಲಿ ಅದಾಗಲೇ ಗಾಂಧೀಜಿ ಕೃಷಿ ಆರಂಭಿಸಿ ಅನುಭವ ಹೊಂದಿದ್ದರು. ಭಾರತಕ್ಕೆ ಬಂದ ಹೊಸತರಲ್ಲಿ ಗೋಖಲೆಯವರ ಆದೇಶದ ಮೇರೆಗೆ ದೇಶ ಸುತ್ತಲು ಆರಂಭಿಸಿದರು. ದೇಶದ ಹಳ್ಳಿ ಹಳ್ಳಿಗಳನ್ನು ಸಂಚರಿಸಿದ ಅವರಿಗೆ ದೇಶದ ರೈತರ ಮೇಲೆ ಬ್ರಿಟಿಷರು ನಡೆಸುತ್ತಿರುವ ಶೋಷಣೆ ಅರ್ಥವಾಯಿತು.

ರೈತರ ಅಭಿವೃದ್ಧಿ ಆದಾಗ ಮಾತ್ರ ದೇಶದ ಅಭಿವೃದ್ಧಿಯಾಗುತ್ತದೆ ಎಂಬ ನಿರ್ಧಾರಕ್ಕೆ ಗಾಂಧೀಯವರು ಬಂದರು.ಈ ಕುರಿತು ಅವರು ಬನಾರಸ್‌ನ ಹಿಂದೂ ವಿಶ್ವವಿದ್ಯಾಲಯದ ಅಡಿಗಲ್ಲು ಸಮಾರಂಭದಲ್ಲಿ ಜುಲೈ ೧೬, ೧೯೧೫ ರಂದು ಮಾಡಿದ ತಮ್ಮ ಮೊಟ್ಟ ಮೊದಲ ಸಾರ್ವಜನಿಕ ಭಾಷಣ ಗಮನಾರ್ಹವಾದದ್ದು. ತಮ್ಮ ಭಾಷಣದಲ್ಲಿ ಅವರು ತಮ್ಮ ಭವಿಷ್ಯದ ಹೋರಾಟದ ಪರಿವಿಡಿಯನ್ನೇ ತೆರೆದಿಟ್ಟರು.”ಬ್ರಿಟಿಷರು ಭಾರತ ಬಿಟ್ಟು ಹೋಗಲೇಬೇಕು. ಆದರೆ ಹೋಗುವಾಗ ಅವರು ಹಿಂಸಾಚಾರವಾಗದಂತೆ ಎಚ್ಚರವಹಿಸಬೇಕು” ಎಂದು ವೇದಿಕೆಯ ಮೇಲಿದ್ದ ಬ್ರಿಟಿಷ್ ಅಧಿಕಾರಿ ಲಾರ್ಡ್ ಹಾರ್ಡಿಂಜ್ ಅವರನ್ನು ಎಚ್ಚರಿಸಿದ ಗಾಂಧೀಜಿ ಮುಂದುವರೆದು “ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಸಂಪತ್ತನ್ನು ಇಲ್ಲಿಯೇ ಬಿಟ್ಟು ಹೋಗಬೇಕು. ರಾಜರು, ಜಮೀನ್ದಾರರು ಅದನ್ನು ರೈತರು ಮತ್ತು ಕಾರ್ಮಿಕರಿಗೆ ಹಂಚಬೇಕು. ಆ ಸಂಪತ್ತು ಯಾವುದೇ ರಾಜರು ಮತ್ತು ಜಮೀನ್ದಾರರಿಗೆ ಸೇರಿದ್ದಲ್ಲ. ಆ ಸಂಪತ್ತು ರೈತರಿಗೆ ಸೇರಿದ್ದು. ಅದನ್ನು ಅವರು ರಕ್ತ ಮತ್ತು ಬೆವರು ಸುರಿಸಿ ಗಳಿಸಿದ್ದಾರೆ” ಎಂದು ಎಚ್ಚರಿಸಿದರು. ಇದನ್ನು ಪ್ರತಿಭಟಿಸಿ ಅನಿಬೆಸೆಂಟ್ ವೇದಿಕೆಯಿಂದ ಇಳಿದು ಹೋದರು. ಹಾರ್ಡಿಂಜ್ ಕ್ರೋಧಗೊಂಡರು. ಗಾಂಧೀಯವರನ್ನು ತಡೆದು ನಿಲ್ಲಿಸಲಾಯಿತು. ಇದು ಗಾಂಧೀಯವರಿಗೆ ರೈತರ ಬಗೆಗಿದ್ದ ಬದ್ಧತೆ.ಕಾಂಗ್ರೆಸ್ ಪಕ್ಷದ ಸದಸ್ಯರಾದ ನಂತರ ಮಾಡಿದ ತಮ್ಮ ಮೊದಲ ಭಾಷಣದಲ್ಲಿ ಕೂಡ ಗಾಂಧೀಯವರು ರೈತರನ್ನು ಮರೆಯಲಿಲ್ಲ. “ನಾವು ಈ ರೀತಿ ವೇದಿಕೆಯ ಮೇಲೆ ಸೂಟು ಬೂಟುಧಾರಿಗಳಾಗಿ ಹೋರಾಟ ಮಾಡಿದರೆ ಸ್ವರಾಜ್ಯ ಪ್ರಾಪ್ತಿಯಾಗುವುದಿಲ್ಲ. ನಾವು ಉರಿಯುವ ಸುಡು ಬಿಸಿಲಿನಲ್ಲಿ ನಡು ಬಗ್ಗಿಸಿ ದುಡಿಯುವ ರೈತರೊಡನೆ ಗುರುತಿಸಿಕೊಳ್ಳಬೇಕು. ಅವರು ಕುಡಿಯುವ ಪ್ರಾಣಿಗಳು ಮಲ, ಮೂತ್ರ ಮಾಡಿದ, ಬಟ್ಟೆ ತೊಳೆದ ಕೆರೆಯ ನೀರನ್ನು ಕುಡಿಯುವ ಅವರ ಕುರಿತು ಚಿಂತಿಸಬೇಕು. ಆ ನೀರನ್ನು ನಮ್ಮಿಂದ ಕುಡಿಯಲು ಸಾಧ್ಯವೇ?? ಎಂಬ ಪ್ರಶ್ನೆಯನ್ನು ನಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಬೇಕು. ಕಿಸಾನ್ ಅಥವಾ ರೈತ, ಅವನು ಜಮೀನಿಲ್ಲದ ಶ್ರಮಿಕನಾಗಿರಲಿ ಅಥವಾ ಶ್ರಮಿಸುವ ಮಾಲೀಕನಾಗಿರಲಿ ಅವನು ಮೊದಲನೇ ಸ್ಥಾನದಲ್ಲಿ ಬರುತ್ತಾನೆ. ಅವನು ಇತರರಿಗೆ ಮಾದರಿಯಾಗುವ ಶ್ರೇಷ್ಠ ವ್ಯಕ್ತಿಯಾಗಿದ್ದು ಜಮೀನಿನ ಫಲ ನ್ಯಾಯಬದ್ಧವಾಗಿ ಅವನಿಗೆ ಸೇರಬೇಕಾದದ್ದಾಗಿರುವುದು. ಅಥವಾ ಅವನಿಗೆ ಸೇರಬೇಕು. ಅದು ಜಮೀನ್ದಾರನಿಗಾಗಲಿ ಇಲ್ಲವೇ ಅನುಪಸ್ಥಿತಿ ಜಮೀನ್ದಾರನಿಗೆ ಸೇರಿದ್ದಾಗಿರುವುದಿಲ್ಲ” ಎಂದು ಹೇಳಿದರು.
ಗಾಂಧೀಯವರ ಅರೆಬೆತ್ತಲೆ ಉಡುಗೆ ನೋಡಿದವರಿಗೆ ಥಟ್ಟನೇ ನೆನಪಾಗುವುದು ನಮ್ಮ ಹಳ್ಳಿಯ ಕಡುಬಡವ ರೈತ. ಕೇವಲ ರೈತರ ಬಗ್ಗೆ ಮಾತನಾಡದೇ ತಮ್ಮ ಉಡುಗೆಯನ್ನೂ ರೈತರ ರೀತಿಗೆ ಬದಲಿಸಿಕೊಂಡರು.ಗಾಂಧೀಯವರ ರೈತಪರ ಹೋರಾಟ ಕೇವಲ ಮಾತಿಗೆ ಸೀಮಿತವಾಗಿರಲಿಲ್ಲ. ಕಾರ್ಯಪ್ರವೃತ್ತರಾಗಿ ‘ಚಂಪಾರಣ್’ ನಲ್ಲಿ ಬ್ರಿಟಿಷರು ನೀಲಿ ಬೆಳೆಗಾರರ ಮೇಲೆ ನಡೆಸುತ್ತಿದ್ದ ದೌರ್ಜನ್ಯದ ವಿರುದ್ಧ ಸತ್ಯಾಗ್ರಹ ಹೂಡಿ ಯಶಸ್ವಿಯಾದರು. ಇದುವೇ ಅವರು ಭಾರತದಲ್ಲಿ ನಡೆಸಿದ ಮೊದಲ ರೈತಪರ ಚಳುವಳಿ.ಗಾಂಧೀಯವರು ಜನರ ಮಧ್ಯದಲ್ಲಿ ಉದಯಿಸಿದ ಸಾಮಾನ್ಯ ನಾಯಕರಾಗಿದ್ದರು. ವಿಶೇಷವಾಗಿ ರೈತರು ಮತ್ತು ಕಾರ್ಮಿಕ ಪರ ಹಿತಾಸಕ್ತಿ ಅವರಿಗೆ ಮುಖ್ಯವಾಗಿತ್ತು. ಅವರು ರೈತರಿಗೆ ಏನು ಮಾಡಿದ್ದರು? ಎಂಬುದಕ್ಕೆ ಲೋಹಿಯಾ ಅವರು ಬರೆದ ಈ ಘಟನೆ ಒಂದು ಸಾಕು…
ಅಂದು ಮಹಾತ್ಮ ಗಾಂಧೀಯವರ ಚಿತಾಭಸ್ಮವನ್ನು ಅಲಹಾದಾಬಾದ್‌ಗೆ ರೈಲಿನಲ್ಲಿ ಸಾಗಿಸುತ್ತಿದ್ದಾಗ, ರೈಲು ಹಳಿಗಳ ಪಕ್ಕದ ಹೊಲಗಳಲ್ಲಿ ಅರೆಬೆತ್ತಲೆಯಾಗಿ ನಿಂತು ರೈತ ಪುರುಷರು ಮತ್ತು ಮಹಿಳೆಯರು ಅಳುತ್ತಾ ಕಣ್ಣೀರು ಸುರಿಸುತ್ತಾ ತಮ್ಮ ಬಂಧುವನ್ನು ಕಳೆದುಕೊಂಡಿದ್ದೇವೆ ಏನೋ ಎಂಬಂತೆ ಬೋಗಿಗಳಿಗೆ ಹೂವು ಎಸೆಯುತ್ತಿದ್ದರು. ಇದನ್ನು ನೋಡಿ ಲೋಹಿಯಾ ಅಕ್ಷರಶಃ ಕಣ್ಣೀರಾದರು. ಅವರು ತಮ್ಮ ಮನಸ್ಸಿನಲ್ಲಿ “ಒಬ್ಬ ವ್ಯಕ್ತಿಗೆ ಇದಕ್ಕಿಂತ ಶ್ರೇಷ್ಠವಾದ ಶ್ರದ್ಧಾಂಜಲಿ ಇನ್ನೊಂದಿದೆಯೇ” ಎಂದು ಹೆಮ್ಮೆ ಪಟ್ಟರು.ಹಳ್ಳಿಗಳೆ ದೇಶದ ಬೆನ್ನೆಲಬು. ಹಳ್ಳಿಗಳು ನಾಶವಾದರೆ ಇಡೀ ಭಾರತವೇ ನಾಶವಾಗುತ್ತದೆ ಎಂಬ ಗಾಂಧೀಯವರ ಮಾತು ಅವರ ಕೃಷಿ ಮತ್ತು ರೈತ ಕಾಳಜಿಗೆ ಹಿಡಿದ ಕನ್ನಡಿ.
~ರವಿಚಂದ್ರ ಜಂಗಣ್ಣವರ್.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
