ಗ್ರಾಮ ಪಂಚಾಯಿತಿ ಚುನಾವಣೆ ಎದುರಿಸುತ್ತಾ ಇರುವವರು ಈ ಲೇಖನ ಓದಿಕೊಳ್ಳಿ…

ಮತದಾನ ಮಾಡುವ ಜನತಾ ಜನಾರ್ಧನರು ಕೂಡ ಓದಿ.. -ಜಿ. ಟಿ ಸತ್ಯನಾರಾಯಣ ಸುರೇಶ್ ಕಂಜರ್ಪಣೆ ಪೇಸ್ ಬುಕ್ ಗೋಡೆಯಿಂದ…ಇಂದಿನ ಆಂದೋಲನದಲ್ಲಿ ಪಂಚಾಯತ್ ಕುರಿತ ಲೇಖನಸರಕಾರವೆಂಬ ಭೂತಯ್ಯ ಮತ್ತು ಶಕ್ತಿಹೀನ ಪಂಚಾಯತುಗಳು

-ಗ್ರಾಮ ಪಂಚಾಯತುಗಳನ್ನು 1985ರಲ್ಲಿ ಹೊಸ ಮೂಸೆಯಲ್ಲಿ ನಜೀರ್ ಸಾಬ್ ತಂದಾಗ ಅದು ದೇಶದ ಗಮನವನ್ನಷ್ಟೇ ಅಲ್ಲ, ವಿಶ್ವದ ಗಮನ ಸೆಳೆದಿತ್ತು. ವಿಕೇಂದ್ರೀಕರಣವನ್ನು ಸಂವಿಧಾನಿಕ ಹಾಗೂ ಆಡಳಿತಾತ್ಮಕ ಸ್ವರೂಪದಲ್ಲಿ ಒಂದು ಸಂಸ್ಥೆಯಾಗಿ ಇಟ್ಟು ಕಟ್ಟುವುದು ಸುಲಭವಲ್ಲ. ಗಾಂಧಿ ಕನಸು ಕಂಡ ಗ್ರಾಮ ಸ್ವರಾಜ್ ಬಗ್ಗೆ ಮಾತಾಡಿದಾಗೆಲ್ಲ, ಅದೊಂದು ಸ್ವಾಯತ್ತ ಗಣರಾಜ್ಯ ಎಂದು ಒತ್ತಿಹೇಳುವುದಿತ್ತು. ಆದರೆ ನಮ್ಮ ಹಳ್ಳಿಗಳು ಜಾತಿಕೂಪ, ಪಾಳೇಗಾರಿಕೆಯ ಆಡುಂಬೊಲ ಎಂದು ಬಾಬಾ ಸಾಹೇಬರು ಎಚ್ಚರಿಸಿದ್ದೂ ಗಮನಿಸಬೇಕು. ಅರ್ಥಾತ್ ಈ ಗ್ರಾಮಪಂಚಾಯಿತಿಗಳ ಆಡಳಿತ ವ್ಯವಸ್ಥೆಯನ್ನು ಸ್ವಾಯತ್ತಗೊಳಿಸುತ್ತಲೂ ಸಾಂವಿಧಾನಿಕ ಪ್ರಗತಿಪರ ಆಶಯಗಳ ಜೊತೆ ಸಾಗುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆಯನ್ನು ನಜೀರ್ ಸಾಬ್ ಸರಳವಾಗಿ ಬಗೆಹರಿಸಿದ್ದರು. 1993ರಲ್ಲಿ ಕೇಂದ್ರ ಸರಕಾರವು ಸಂವಿಧಾನದ 73ನೇ ತಿದ್ದುಪಡಿ ಮೂಲಕ ಈ ವಿಕೇಂದ್ರೀಕರಣದ ಮಾದರಿಗೆ ಸಂವಿಧಾನಿಕ ಮುದ್ರೆ ಒತ್ತಿತು. ಅರ್ಥಾತ್ ರಾಜ್ಯ ಸರಕಾರಗಳು ಈ ಸಂಸ್ಥೆಗಳಿಗೆ ಕಡ್ಡಾಯ ಚುನಾವಣೆ ನಡೆಸುವ, ನಿಧಿ ಬಿಡುಗಡೆ ಮಾಡುವ ಬಾಧ್ಯತೆ ಒದಗಿ ಬಂತು. ನಜೀರ್ ಸಾಬ್ ಇಂಥಾ ಮಾಡೆಲ್ಲನ್ನು ಮುಂದಿಟ್ಟಾಗ ನಮ್ಮ ಹಳ್ಳಿಗಳನ್ನು ಆಳುವ ಜಾತಿ ಪಾಳೇಗಾರಿಕೆಯ ಶಕ್ತಿಗಳನ್ನು ನಿಯಂತ್ರಿಸುವುದು ಹೇಗೆ ಎಂಬ ಪ್ರಶ್ನೆಯೂ ಬಂದಿತ್ತು. ಪಕ್ಷವಾರು ಸ್ಪರ್ಧೆ ಹೇಗಿದ್ದರೂ ನಡೆಯುತ್ತದೆ ಎಂಬ ವಾಸ್ತವದ ಅರಿವಿನಲ್ಲಿ ನಜೀರ್ ಸಾಬ ಅವರು equilibrium in opposition ಎಂಬ ಪದ ಪ್ರಯೋಗ ಮಾಡಿದ್ದರಂತೆ. ಅಂದರೆ ಪ್ರತೀ ಜಾತಿ/ ವರ್ಗವೂ ನೇರಾ ನೇರಾ ಸೀಳಿ ಸ್ಪರ್ಧಿಸಬೇಕಾಗುತ್ತದೆ. ಇದರೊಂದಿಗೆ ಮೀಸಲಾತಿಯ ಅಸ್ತ್ರ ಮುಂದಿಟ್ಟಾಗ ಎಷ್ಟೇ ಹೇವರಿಕೆ ಇದ್ದರೂ ಪರಿಶಿಷ್ಟಜಾತಿಯ ಮಹಿಳೆ ಅಧ್ಯಕ್ಷೆಯಾಗುವುದನ್ನು ಸಹಿಸಲೇ ಬೇಕಲ್ಲ. ಅಂದರೆ ಈ ಮಾದರಿ ಏಕಕಾಲಕ್ಕೆ ಸಾಮಾಜಿಕ ನ್ಯಾಯ, ಸಾಮಾಜಿಕ ಚಲನೆ ಮತ್ತು ಸಾಮಾಜಿಕ ಅಸ್ಮಿತೆಗಳನ್ನು ಪ್ರೋತ್ಸಾಹಿಸಿತು. ಆರಂಭದ ವರ್ಷಗಳಲ್ಲಿ ‘ಮನೆ ಮನೆಯಲ್ಲಿ ರಾಜಕೀಯ ತಂದು ಮನೆ ಹಾಳು ಮಾಡಿದರು’ ಅಂತ ಹಳೇ ಪಾಳೇಗಾರಿಕೆ ಕುಟುಂಬಗಳವರು ಗೋಳಿಟ್ಟಿದ್ದಿದೆ. ಒಂದೇ ಏಟಿಗೆ ನೂರಾರು ಪಂಚಾಯತುಗಳಲ್ಲಿ ಅಷ್ಟು ವರ್ಷ ಸೂತ್ರ ಹಿಡಿದಿದ್ದ ಮೇಲ್ಜಾತಿ ಕುಟುಂಬಗಳು ಪಂಚಾಯತ್ ಪ್ರವೇಶಿಸಲಾರದೇ ಒದ್ದಾಡಿದ್ದನ್ನ ನಾನೇ ನೋಡಿದ್ದೇನೆ. ನಮ್ಮೂರಲ್ಲೇ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ತರುಣಿಯೊಬ್ಬಳು ತಾಲೂಕು ಪಂಚಾಯತ್ ಸದಸ್ಯೆಯಾಗಿ ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿದ್ದಳು. ಸುಳ್ಯದ ಪತ್ರಿಕಾಲಯದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ದಲಿತ ಹುಡುಗನೊಬ್ಬ ತಾಲೂಕು ಪಂಚಾಯತ್ ಅಧ್ಯಕ್ಷನಾಗಿದ್ದ.

ಇಂಥಾ ಹತ್ತಾರು ಉದಾಹರಣೆಗಳನ್ನು ನಾನು ಕಂಡಿದ್ದೇನೆ. ಪಂಚಾಯತ್ ಸ್ಥಾನಗಳಲ್ಲಿ ಶೇ. 50ರಷ್ಟನ್ನು ಮಹಿಳೆಯರಿಗೆ ಮೀಸಲಿಟ್ಟ ಮೊದಲ ರಾಜ್ಯ ಕರ್ನಾಟಕ. ಇಂದಿಗೂ ಇದು ಅಭೂತ ಪೂರ್ವ ಎನ್ನಬಹುದು. ಇದರಿಂದ ಮಹಿಳಾ ದೃಷ್ಟಿಕೋನದ ಅಭಿವೃದ್ಧಿ ಮೀಮಾಂಸೆ, ಪರಿಕಲ್ಪನೆ ಮುನ್ನೆಲೆಗೆ ಬಂದಿತೇ ಎಂದರೆ ಹಾಗೇನೂ ಆಗಲಿಲ್ಲ. ಇದರೊಂದಿಗೆ, ಮಹಾರಾಷ್ಟ ಸರಕಾರ ಮಹಿಳಾ ಗ್ರಾಮಸಭೆಯನ್ನು ಕಡ್ಡಾಯಗೊಳಿಸಿದ ಮೇಲೆ ಕರ್ನಾಟಕದಲ್ಲೂ ಅದು ಜಾರಿಗೆ ಬಂದಿತು. ಮಹಿಳಾ ಗ್ರಾಮಸಭೆಯ ನಿರ್ಣಯಗಳನ್ನು ತರುವಾಯದ ಗ್ರಾಮಸಭೆ ಕಡ್ಡಾಯವಾಗಿ ಅಂಗೀಕರಿಸಬೇಕು ಎಂಬ ನಿಯಮವೂ ಇದೆ. ಆದರೆ ಇದು ಜಾರಿಯಾಗಿರುವ ಉದಾಹರಣೆಗಳು ಕಡಿಮೆ. ಅಷ್ಟೇಕೆ ಮಹಿಳಾ ಗ್ರಾಮಸಭೆ ಎಂಬುದು ದಾಖಲೆಗೆ ಮಾತ್ರಾ ಇರುವ ಕಾಟಾಚಾರದ ಪ್ರಸಂಗವಾಗಿರುವುದೇ ಹೆಚ್ಚು.ಸಾಮಾಜಿಕ ನ್ಯಾಯ ಮತ್ತು ಅಂಚಿಗೆ ಸರಿದವರ ಅಭಿವೃದ್ಧಿಯನ್ನು ಅವರೇ ಹೆಚ್ಚು ಸ್ಪಷ್ಠವಾಗಿ ಹೇಳಬಲ್ಲರು ಎಂಬ ಕಲ್ಪನೆಯೇ ಈ ಮೀಸಲಾತಿಯ ಹಿಂದಿರುವ ತರ್ಕ.

ಆದರೆ ಸರಕಾರ ಸತತವಾಗಿ ಈ ಗ್ರಾಮೀಣ ಮಹಿಳೆಯರು ಸ್ವಂತ ನಿರ್ಧಾರ ತೆಗೆದುಕೊಳ್ಳದ ಹಾಗೆ, ತಾನೇ ಸರ್ವಸ್ವವನ್ನೂ ನಿಯಂತ್ರಿಸುವ ನಿಯಮಗಳನ್ನು ಕಾಲಕಾಲಕ್ಕೆ ರೂಪಿಸುತ್ತಾ ಈ ಆಶಯವನ್ನೇ ನೆಲಸಮ ಮಾಡಿದೆ. ಆರ್ಥಿಕ ಆಯಾಮ: ಪಂಚಾಯತುಗಳಿಗೆ ಸಾಂವಿಧಾನಿಕವಾಗಿ ಸರಕಾರ ಅದೆಷ್ಟೋ ಪ್ರಮಾಣದ ಅನುದಾನವನ್ನು ವರ್ಗಾಯಿಸಲೇ ಬೇಕಿದೆ. ನೇರವಾಗಿ ಪಂಚಾಯತುಗಳಿಗೆ ವರ್ಗಾವಣೆ ಆದರೂ ಅದು ಏನಿದ್ದರೂ ಗನ್ ಪಾಯಿಂಟಲ್ಲಿ ಸಹಿ ಹಾಕಿಸಿಕೊಂಡ ರೀತಿಯದ್ದು. ಇದರಲ್ಲಿ ಎರಡು ಮೂರು ಆಯಾಮಗಳಿವೆ. 1. ಸರಕಾರದ ಅನುದಾನಗಳು. ಇದರಲ್ಲಿ ಕೇಂದ್ರ ಸರಕಾರ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ವರ್ಗಾಯಿಸುವ ನಿಧಿ. ಇದಕ್ಕೆ ಸ್ಥೂಲ ಮಾರ್ಗದರ್ಶನಗಳಿವೆ. ತುಂಬಾ ಕೊಕ್ಕೆಗಳಿಲ್ಲ. ಪಂಚಾಯತ್ ಸುಮಾರಾಗಿ ತಾನೇ ಕ್ರಿಯಾಯೋಜನೆ ಮಾಡಬಹುದು. ಇನ್ನೊಂದು ರಾಜ್ಯ ಸರಕಾರದ ಅನುದಾನ. ಇದರಲ್ಲಿ ಯಾವ ಯಾವ ಬಾಬುಗಳಿಗೆ ಹಣ ಮೀಸಲಿಡಬೇಕು ಎನ್ನುವುದನ್ನು ಸರಕಾರ ಮೊದಲೇ ಹೇಳಿರುತ್ತೆ. ಅದಕ್ಕೆ ತಕ್ಕ ನಿರ್ಣಯ ಮಾಡಿ ಕಳಿಸುವುದು ಬಿಟ್ಟರೆ ಪಂಚಾಯತುಗಳಿಗೆ ಇನ್ನೇನೂ ಮಾಡುವ ಅಧಿಕಾರ/ ಹಕ್ಕು ಇಲ್ಲ. 2. ಸ್ವಂತ ಆದಾಯದ್ದು. ಈ ಸ್ವಂತ ಆದಾಯವೆಂಬುದು ಮುಕ್ಕಾಲುಪಾಲು ಮನೆ ತೆರಿಗೆಯಿಂದ ಹುಟ್ಟುತ್ತದೆ. ಇದರ ಪ್ರಮಾಣಕ್ಕನುಸಾರವಾಗಿ ರಾಜ್ಯ ಸರಕಾರದ ಅನುದಾನವೂ ಇರುತ್ತದೆ. ಇಷ್ಟೇ ಆದರೆ ಪರವಾಗಿಲ್ಲ. ತೆರಿಗೆ ಸಂಗ್ರಹದ ಪ್ರಮಾಣಕ್ಕನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅಂದರೆ ಪಂಚಾಯತ್ ಶೇ.25 ಸ್ವಂತ ಆದಾಯ ಸಂಗ್ರಹಿಸಿದರೆ ಅನುದಾನವೂ ಅದೇ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಪಂಚಾಯತುಗಳಿಗೆ ತೆರಿಗೆ ಸಂಗ್ರಹದ ಆರ್ಥಿಕ ಶಿಸ್ತು ಕಲಿಸುವ ಈ ಜಬರ್‌ದಸ್ತ್ ಮೇಷ್ಟ ಕೆಲಸದಿಂದಾಗಿ ಬಹುತೇಕ ರಾಜ್ಯ ಅನುದಾನಕ್ಕೊಳಪಟ್ಟ ಕಾಮಗಾರಿಗಳು ಜನವರಿ ಬಂದರೂ ಶುರುವಾಗುವುದಿಲ್ಲ! ಪ್ರಜೆಗಳ ಉಡಾಫೆ ಇದಕ್ಕೆ ಕೈಲಾದ ಕೊಡುಗೆ ನೀಡುತ್ತದೆ.! ಉದಾ: ಮನೆ ತೆರಿಗೆ. ಬಿಲ್ ಕಲೆಕ್ಟರ್ ಬಂದು ಕೇಳಿದರೆ , “ಈಗೇನಯ್ಯಾ ಅರ್ಜೆಂಟು, ಮಾರ್ಚ್ ವರೆಗೆ ಟೈಮಿದೆಯಲ್ಲಾ.. ಅಂತ ಜಬರಿಸುವವರೇ ಜಾಸ್ತಿ. ನನ್ನಂಥವನೂ ಡಿಸೆಂಬರ್ ಮೊದಲು ಕಟ್ಟಿದ್ದಿಲ್ಲ. !! ಇದಕ್ಕೆ ಪಂಚಾಯತ್ ಇನ್ನೊಂದು ದಾರಿ ಹುಡುಕಿರುತ್ತೆ.

ಯಾರಿಗಾದರೂ ಏನಾದರೂ ಕೆಲಸವಾಗಬೇಕು, ಪಂಚಾಯತಿನ ಸೀಲು, ಅನುಮತಿ, ಸರ್ಟಿಫಿಕೇಟು ಬೇಕು ಅಂತಿಟ್ಟುಕೊಳ್ಳಿ, ಮನೆ ತೆರಿಗೆ ಕಟ್ಟಿ ಅಂತ ಶರತ್ತು ಹಾಕುತ್ತಾರೆ. ರೇಶನ್ ಕಾರ್ಡು ಅದೂ ಇದೂ ಅಂತ ಒದ್ದಾಡುವ ಬಡವರೇ ಈ ಉರುಳಿಗೆ ಜಾಸ್ತಿ ಬೀಳುವವರು. ಕೊಂಚ ಪೇಟೆಯ ಲಿಂಕು ಇರುವ ಪಂಚಾಯತುಗಳ ಆದಾಯ ಗಮನಾರ್ಹವಾಗಿರುತ್ತದೆ. ಪುಣ್ಯವಶಾತ್ ಇದರಲ್ಲೂ ಗ್ರೇಡಿಂಗ್ ಮಾಡಿರುವ ಕಾರಣ ತೀರಾ ಹಿಂದುಳಿದ, ಗುಡ್ಡಗಾಡಿನ ಪಂಚಾಯತುಗಳಿಗೆ ಅಷ್ಟಿಷ್ಟು ವಿನಾಯತಿ ಇದೆ. ಕೇರಳ ಬಹುತೇಕ ನಗರೀಕರಣಗೊಂಡಂತಿರುವ ಕಾರಣ ಅಲ್ಲಿನ ಪಂಚಾಯತುಗಳ ಆದಾಯ ಕೋಟಿಗಳಲ್ಲಿರುವುದಿದೆ. ನಮ್ಮಲ್ಲಿ ಅಂಥಾ ಪಂಚಾಯತುಗಳು ಕಡಿಮೆ. ಸುಬ್ರಮಣ್ಯ ಇತ್ಯಾದಿ ಯಾತ್ರಾ ಸ್ಥಳಗಳ ಪಂಚಾಯತುಗಳು ಡಿಕಾವಾಗಿ ಇವೆ. ಆದರೆ ಅವಕ್ಕೆ ನಾಗರಿಕ ಸೌಕರ್ಯದ ವೆಚ್ಚವೂ ಜಾಸ್ತಿ. ಕರ್ನಾಟಕದ ಇನ್ನೊಂದು ಸಮಸ್ಯೆ ಎಂದರೆ ಅದರ ವೈವಿಧ್ಯಮಯ ಪರಿಸರ ವಲಯಗಳು. ಪಶ್ಚಿಮದ ಭಾಗ ಅಪಾರ ಮಳೆಯ ಮುಂಗಾರು ಋತುವಿಗೆ ಪಕ್ಕಾಗಿ ಜೂನ್‌ನಿಂದ ಒಕ್ಟೊಬರದ ವರೆಗೆ ಅನುದಾನ ಬಿಡಿ, ಸಿಬ್ಬಂದಿಯೇ ಸಿಕ್ಕಿ ಬಿದ್ದವರಂತೆ ಕೂತಿರುತ್ತಾರೆ. ಏನಿದ್ದರೂ ಮಳೆಗಾಲ ಕಳೆದ ಮೇಲೆ ಎಂಬ ಕಾರಣಕ್ಕೆ ಸರಕಾರಕ್ಕೂ ಅನುಕೂಲ. ಪಂಚಾಯತಿಯ ಮುಂದಿನ ವರ್ಷದ ಕಾಮಗಾರಿಗಳ ಪಟ್ಟಿ ಬಹುತೇಕ ಡಿಸೆಂಬರ್ ವೇಳೆಗೆ ಅಂತಿಮವಾಗಿ ತಾಲೂಕು ಪಂಚಾಯತಿಗೆ ಎತ್ತಿ ಹಾಕುತ್ತಾರೆ. ಅಲ್ಲಿ ಕೂತವರು ಇಡೀ ತಾಲೂಕಿನ ಒಟ್ಟಾರೆ ಕಾಮಗಾರಿಗಳ ಮೊತ್ತಗೂಡಿಸಿ ಜಿಲ್ಲಾಪಂಚಾಯತಿಗೆ ಕಳಿಸುತ್ತಾರೆ. ಅಲ್ಲಿಂದ ಅದು ಬೆಂಗಳೂರಿಗೆ ರವಾನೆಯಾಗುತ್ತದೆ. ತನಗೆ ಬೇಕಾದಷ್ಟು ಅನುದಾನದ ಭಾಗ್ಯ ಯಾವ ಪಂಚಾಯತಿಗೂ ಇಲ್ಲ. ಏನಿದ್ದರೂ ಬಂದದ್ದರಲ್ಲಿ ಪುನಃ ಲೆಕ್ಕ ಹಾಕಿ ಆದ್ಯತಾ ಪಟ್ಟಿ ಬದಲಾಯಿಸುವುದಷ್ಟೇ ಅದರ ಕೆಲಸ! ಅರ್ಥಾತ್ ವಿಕೇಂದ್ರೀಕರಣವೆಂದರೆ ಮೃಗಾಲಯದ ಪ್ರಾಣಿಗಳನ್ನು ಪ್ರತ್ಯೇಕವಾಗಿ ಇಟ್ಟ ಹಾಗೆ, ಭೌಗೋಲಿಕವಾಗಿ ಪಂಚಾಯತುಗಳನ್ನು ಸೃಷ್ಟಿಸಲಾಗಿದೆ ಅಷ್ಟೇ ಹೊರತು ಈ ಪ್ರಾಣಿಗಳು ತಮಗೆಸೆಯುವ ಮಾಂಸಕ್ಕೆ ಆರ್ತವಾಗಿ ಕಾಯುವ ಹಾಗೆ ಈ ಪಂಚಾಯತುಗಳು ಅನುದಾನಕ್ಕೆ ಕಾಯಬೇಕಿದೆ. ‘ಕ್ರಿಯಾ ಯೋಜನೆಯನ್ನು ಕಳಿಸಿದರೆ ಅನುದಾನ ಲಭ್ಯತೆಯನ್ನು ಹೊಂದಿಕೊಂಡು’ ಎಂಬ ಕೊಕ್ಕೆ ಶರಾ ಇದ್ದೇ ಇರುತ್ತದೆ!!ಕಳೆದ ನಾಲ್ಕಾರು ವರ್ಷಗಳಿಂದ ರಾಜ್ಯ ಸರಕಾರದ ಅನುದಾನ ನಾಪತ್ತೆಯಾಗಿದೆ!! ಏನಿದ್ದರೂ ಕೇಂದ್ರ ನೇರವಾಗಿ ನಿಧಿ ವರ್ಗಾವಣೆ ಮಾಡುವ ಉದ್ಯೋಗ ಖಾತರಿ ಮತ್ತು 15ನೇ ಹಣ ಕಾಸು ಆಯೋಗದ ಶಿಫಾರಸಿನ ನಿಧಿಯಲ್ಲೇ ಪಂಚಾಯತುಗಳು ಕೆಲಸ ಮಾಡುತ್ತಿರುವುದು. ಈ ಕಾರಣಕ್ಕೇ ಉದ್ಯೋಗ ಖಾತರಿ ಎಂಬ ಅಕ್ಷಯ ಪಾತ್ರೆಯ ಮೇಲೆ ಪಂಚಾಯತು ಕಣ್ಣು ಬಿದ್ದಿರುವುದು.

ಇದು ಬೇಡಿಕೆ ಆಧಾರಿತ ಆದ ಕಾರಣ ಪಂಚಾಯತಿನ ಸಮಸ್ತ ಕಾಮಗಾರಿಗಳನ್ನೂ ಅದರಲ್ಲೇ ಮಾಡುವಂತೆ ಸರಕಾರ ಜುಲುಮೆ ಮಾಡುತ್ತಲೇ ಇರುತ್ತದೆ. ಇದೇನಿದ್ದರೂ ಭೌತಿಕ ನಿರ್ಮಾಣಗಳ ಸಂತೆ. ಮೊನ್ನೆ ಮೊನ್ನೆ ವರೆಗೂ ಬಾಕ್ಸ್ಚರಂಡಿ, ಕಾಂಕ್ರೀಟ್ ರಸ್ತೆ, ಕೆರೆ ಹೂಳೆತ್ತುವಂಥಾ ಕಾಮಗಾರಿಗಳಲ್ಲಿ ಉದ್ಯೋಗ ಖಾತರಿ ಹಣ ವಿನಿಯೋಗವಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ರೈತರ ಜಮೀನಿನ ಅಭಿವೃದ್ಧಿಗೆ ಶೇ.5ರಷ್ಟೂ ಉದ್ಯೋಗ ಖಾತರಿ ನಿಧಿ ಖರ್ಚಾಗುತ್ತಿರಲಿಲ್ಲ. ಈಗ ವಾಸಿ. ಕೃಷ್ಣ ಭೈರೇ ಗೌಡರ ಅವಧಿಯಲ್ಲಿ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಸಾಕಷ್ಟು ನಿಧಿ ಉದ್ಯೋಗ ಖಾತರಿ ಮೂಲಕ ಹರಿದು ಬರುವ ವ್ಯವಸ್ಥೆ ಬಂದಿತು.ಇದರಲ್ಲೂ ಒಂದು ಪರಿಸರ ಸಂಬಂಧೀ /ವರ್ಗ ಸಮಸ್ಯೆ ಇದೆ. ಈ ಉದ್ಯೋಗ ಖಾತರಿ ಅನುದಾನ ಆಹಾರ ಧಾನ್ಯಗಳನ್ನು ಬೆಳೆಯುವ ರೈತರಿಗೆ ಲಭ್ಯವಿಲ್ಲ. ಏನಿದ್ದರೂ ತೋಟಗಾರಿಕಾ ಬೆಳೆ ಬೆಳೆವವರಿಗೆ ಮಾತ್ರಾ. ಇವೆಲ್ಲಾ ಅನುದಾನಗಳ ಬಗ್ಗೆ ಆಯಿತು. ಊರ ರಾಜಕೀಯ? ಬಹುತೇಕ ಪಂಚಾಯತು ಅಧಿಕಾರದ ಹಂಬಲ ಒಂದಲ್ಲ ಒಂದು ಕಾಮಗಾರಿಗಳ ಗುತ್ತಿಗೆ ಹಿಡಿದು ಅದರಲ್ಲಿ ದುಡ್ಡು ಹೊಡೆಯುವ ಪರಮಗುರಿಯಲ್ಲಿ ಸಮಾಪ್ತವಾಗುತ್ತಿದೆ. ಶಾಸಕರ ಅಧಿಕಾರದ ಕಪಿ ಮುಷ್ಠಿ ಹೇಗಿದೆಯೆಂದರೆ ಪಂಚಾಯತಿನ ಒಂದೇ ಒಂದು ಕಾಮಗಾರಿಯಾಗಲೀ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಆಯ್ಕೆಯಾಗಲೀ ಪಂಚಾಯತಿನ ಸ್ವಯಮಾಧಿಕಾರದ ಮೂಲಕ ಆಗಿರುವುದು ಅಪರೂಪ. ಈ ಅಧಿಕಾರ ವಿಕೇಂದ್ರೀಕರಣದ ಮಾದರಿಯನ್ನು ಇನ್ನಿಲ್ಲದಂತೆ ಕೆಡಿಸುವ ಪ್ರವೃತ್ತಿ ಯಾವ ಮಟ್ಟಿಗಿತ್ತೆಂದರೆ ಈ ಹಿಂದೆ ಒಮ್ಮೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷನ ಆಯ್ಕೆಯನ್ನೂ ಶಾಸಕರಿಗೆ ನೀಡುವ ಫರ್ಮಾನು ನಮ್ಮ ರಾಜ್ಯ ಸರಕಾರ ಹೊರಡಿಸಿತ್ತು. ಪಂಚಾಯತ್ ಮಟ್ಟದಲ್ಲಿ ಊರೊಟ್ಟಿನ ಒಳಿತಿನಕೆಲಸ ಮುಖ್ಯ; ಇಲ್ಲಿ ಕಾಮಗಾರಿ ಕಮಿಷನ್/ ರಾಜಕೀಯ ಮಾಡಬಾರದು ಎಂದು ಹೇಳಬೇಕಾದ ಶಾಸಕರು/ ರಾಜಕೀಯ ಪಕ್ಷಗಳ ನಾಯಕರು ಬೇರು ಮಟ್ಟದಲ್ಲಿ ಬಂಟರನ್ನು ಸೃಷ್ಟಿಸುವ ತವಕದಲ್ಲಿ ಈ ಸ್ಥಳೀಯರನ್ನೂ ಭ್ರಷ್ಟರನ್ನಾಗಿಸಿ ಕೂತಿದ್ದಾರೆ. ಪಂಚಾಯತ್ ಚುನಾವಣೆಗೆ ಹತ್ತು ಲಕ್ಷದ ವರೆಗೂ ಖರ್ಚು ಮಾಡುವ ಅಭ್ಯರ್ಥಿಗಳ ಬಗ್ಗೆ ಸುದ್ದಿ ಬರುವುದು ನೋಡಿದರೆ ಈ ಬ್ರಹ್ಮಾಂಡ ಮಾನಸಿಕ ಕುಷ್ಠದ ಅರಿವಾಗುತ್ತದೆ. ನಮ್ಮ ಪ್ರಜೆಗಳೂ ಅಷ್ಟೇ. ಕಳೆದೊಂದೆರಡು ದಶಕಗಳಲ್ಲಿ ದೇವಸ್ಥಾನಗಳ ರಿಪೇರಿ ಹುಚ್ಚು ನಮ್ಮ ಗ್ರಾಮೀ ಣರನ್ನು ಯಾವ ಪರಿ ಅಂಟಿಕೊಂಡಿದೆಯೆಂದರೆ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯನ್ನು ಸಾರಾ ಸಗಟು ದೇವಸ್ಥಾನಗಳ ರಿಪೇರಿಗೆ ಕೊಟ್ಟು ಸಂಪ್ರೀತಗೊಳಿಸುತ್ತಿದ್ದಾರೆ. ಮೊನ್ನೆ ಮೊನ್ನೆ ಇಂಥಾ ಘನ ಉದ್ದೇಶಕ್ಕೆ ಪಂಚಾಯತ್ ಸ್ಥಾನಗಳನ್ನೇ ಹರಾಜು ಹಾಕಿದ ವರದಿ ನೋಡಿದರೆ ಎದೆ ಹಾರುತ್ತದೆ. ಊರಿನ ಶಾಲೆ ಬಗ್ಗೆ ಮಮಕಾರ ಮಾಯವಾಗಿ ಯಾವುದೋ ಕಾಲವಾಯಿತು. ಊರಿನ ಆಸ್ಪತ್ರೆ ಬಗ್ಗೆ ಅಷ್ಟಿಷ್ಟು ಹಕ್ಕೊತ್ತಾಯ ಇದೆ. ಕೃಷಿ ಬಗ್ಗೆ, ಅಂತರ್ಜಲದ ಬಗ್ಗೆ, ಮಾಯವಾಗುತ್ತಿರುವ ಗೋಮಾಳ, ಕೆರೆ ಕುಂಟೆಗಳ ಬಗ್ಗೆ ಪಂಚಾಯತು ಮೂಲಕ ಏನಾದರೂ ಮಾಡಬಹುದೇ ಎಂಬ ಆಸಕ್ತಿಯೇ ಜನರಿಗೆ ಮಾಯವಾದಂತಿದೆ. ಕುಡಿಯುವ ನೀರಿನ ಬಗ್ಗೆ ಮಾತ್ರಾ ಅಷ್ಟಿಷ್ಟು ನಿಗಾ ಇದೆ. ಪಂಚಾಯತು ಮೂಲಕ ಮಾಡಬಹುದಾದ ಕೆಲಸಗಳ ಸೂಚಿ ದೊಡ್ಡದಿದೆ. ಇವೆಲ್ಲಾ ಘನವಾಗಿ ಅನುಷ್ಠಾನವಾಗುತ್ತದೋ ಎಂಬ ಪ್ರಶ್ನೆಗಿಂತ ಇವುಗಳನ್ನು ನಾಮಕಾವಸ್ತೆ ಮುನ್ನೆಲೆಗೆ ತಂದರೂ ಗಮನ ಸೆಳೆಯುವ ಕೆಲಸವಾಗುತ್ತದೆ ಎಂಬುದನ್ನು ನಮ್ಮ ಗ್ರಾಮಸ್ಥರು ನೆನಪಿಟ್ಟುಕೊಳ್ಳಬೇಕು. ಇತ್ತೀಚೆಗೆ ಬಂದ ಭೂಸುಧಾರಣಾ ಕಾಯಿದೆ ತಿದ್ದುಪಡಿ ಮೂಲಕ ಗ್ರಾಮದ ಕೃಷಿ ಜಮೀನುಗಳೆಲ್ಲಾ ಉಳ್ಳವರ ಪಾಲಾಗುವ ಅಪಾಯದ ಬಗ್ಗೆಯೂ ಪಂಚಾಯತು ಒಂದು ರಕ್ಷಣಾತ್ಮಕ ನಿಲುವು ತೆಗೆದುಕೊಳ್ಳಬೇಕಿದೆ. ಕೇರಳದಲ್ಲಿ ತಾನು ಸ್ಥಾಪಿಸಿದ್ದ ಕೈಗಾರಿಕಾ ಸ್ಥಾವರಕ್ಕೆ ಪಂಚಾಯತಿನ ಆಕ್ಷೇಪ ಬಂದಿದ್ದೇ ಆ ಕಂಪೆನಿ ಸಿ.ಎಸ್.ಆರ್ ಮೂಲಕ ಹಣದ ಹೊಳೆ ಹರಿಸಿ, ಮುಂದಿನ ಚುನಾವಣೆಯಲ್ಲಿ ತನ್ನದೇ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆದ್ದು ಪಂಚಾಯತಿನ ಸೂತ್ರ ಹಿಡಿದ ಘಟನೆ ಕೇರಳದಲ್ಲಿ ನಡೆದಿದೆ.

ಗ್ರಾಮಸ್ಥರು ಬಿಡಿ ಕೊಡುಗೆಗಳ ಆಕರ್ಷಣೆಗೆ ತಮ್ಮ ಸ್ವಾಯತ್ತತೆಯನ್ನೇ ಅಡವಿಡುವ ಮನಃ ಸ್ಥಿತಿ ಇದು. ಇಷ್ಟಾಗಿಯೂ ಎಲ್ಲವೂ ಕರಾಳವಾಗಿದೆಯೆಂದಲ್ಲ. ಅಷ್ಟಿಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ಸೂತ್ರ ಹಿಡಿದವರ ಕನಸಿನ ಕಾರಣಕ್ಕೋ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ದಕ್ಷತೆಯ ಕಾರಣಕ್ಕೋ, ಶಾಸಕರು ತಲೆ ಹಾಕದಿರುವ ಕಾರಣಕ್ಕೋ ಉತ್ತಮ ಕೆಲಸಗಳು ನಡೆದಿವೆ. ಗ್ರಾಮಸ್ಥರ ಮುತುವರ್ಜಿಯಿಂದ ವಿಶೇಷ ಕೆಲಸಗಳು ನಡೆದಿರುವುದು ಅಪರೂಪ. ಪಂಚಾಯತ್ ಮಾಡಬಹುದಾದ ಕೆಲಸಗಳ ಪಟ್ಟಿ: ಇಷ್ಟರ ಹೊರತಾಗಿಯೂ ಸರಕಾರದ ಕಾನೂನಿನಲ್ಲಿರುವ, ಪಂಚಾಯತಿಯ ಮಾಡಬಹುದಾದ ಕೆಲಸಗಳ ಪಟ್ಟಿಯನ್ನು ನೋಡಿದರೆ ಅಚ್ಚರಿಯಾಗುತ್ತದೆ. ಇವು ಬಹುತೇಕ ಯಾವ ಪಂಚಾಯಿತಿಗಳಲ್ಲೂ ಜಾರಿಗೆ ಜಾರಿಗೆ ಬಂದಿಲ್ಲ; ಅನುಷ್ಠಾನವಾಗಿಲ್ಲ.ಇದೊಂಥರಾ ಸಣ್ಣ ಹೋಟೆಲುಗಳ ದೊಡ್ಡ ತಿಂಡಿ ಪಟ್ಟಿ ಇದ್ದಹಾಗೆ. ಮುಕ್ಕಾಲು ಪಾಲು ಅಸಲಿಗೆ ಇರುವುದೇ ಇಲ್ಲ. ಏನಿದೆ ಅಂತ ಹುಡುಕಿದರೆ ಮಾಮೂಲಿಯಾದ ಕೆಲವು ಮಾತ್ರ ಇರುತ್ತೆ. ಇದು ಆಶಯಾತ್ಮಕವಾಗಿದೆಯೇ ಹೊರತು, ವಾಸ್ತವಿಕ ಅನುಷ್ಠಾನದ ಲಕ್ಷಣವೂ ಇಲ್ಲದ ಪುಸ್ತಕ ಪಿಂಡ ಅಷ್ಟೇ.

ಬಲುದೊಡ್ಡ ಆಶಯದ ಸಂಸ್ಥೆಯೊಂದನ್ನು ಸೃಷ್ಟಿಸಿದಾಗ ಅಧಿಕಾರವೂ ಹಂಚಿಕೆಯಾಗಬೇಕು. ಹಕ್ಕಿನ ಅನುದಾನವೂ ಕೊಕ್ಕೆಗಳಿಲ್ಲದೇ ಇಳಿದು ಬರಬೇಕು. ಗ್ರಾಮಸಭೆಯಂಥಾ ಸಮುದಾಯದ ನಿರ್ಧಾರಕ್ಕೆ ದಾಖಲೆಯಲ್ಲಿ ಮನ್ನಣೆ ಇದ್ದರೆ ಸಾಲದು; ನೈಜ ಗೌರವ, ಮನ್ನಣೆ ಸಲ್ಲಬೇಕು. ಇವು ಮೂರೂ ಇಲ್ಲದ ಸಂಸ್ಥೆ ಕೇವಲ ಮೇಲಿನಿಂದ ಇಳಿದ ಆಜ್ಞೆಗಳನ್ನು ಪಾಲಿಸುವ ವಿಕೇಂದ್ರೀಕೃತ ಜೀ ಹುಜೂರ್ ಅನುಷ್ಠಾನ ಸಮಿತಿಗಳಾಗುತ್ತವೆ ಅಷ್ಟೆ. ಶಾಸಕಾಂಗ ಮತ್ತು ಕಾರ್ಯಾಂಗಗಳೆರಡೂ ತಮ್ಮ ಅಧಿಕಾರ/ ಪ್ರಭಾವ ಚಲಾಯಿಸಿ ಈ ಆಶಯಗಳು ನಿಷ್ಪಲವಾಗುವಂತೆ ಕೈಜೋಡಿಸಿರುವುದಷ್ಟೇ ನಮ್ಮೆದುರು ಕಂಡು ಬರುತ್ತಿರುವ ಸತ್ಯ. ನಮ್ಮ ಸರಕಾರ ಥೇಟ್ ಭೂತಯ್ಯನ ತರ ಚಾವಿ ಸೊಂಟಕ್ಕೆ ಸಿಕ್ಕಿಸಿ ದಿನದ ಅಡುಗೆಗೂ ಈರುಳ್ಳಿ ಲೆಕ್ಕ ಹಾಕಿ ಕೊಡುವ ಪಾತ್ರ ಮಾಡುತ್ತಿದೆ. ಪ್ರತಿ ಪಂಚಾಯಿತಿನಲ್ಲಿ ಮೂರು ಮುಖ್ಯ ಸ್ಥಾಯಿ ಸಮಿತಿಗಳ ರಚನೆ ಕಡ್ಡಾಯವಾಗಿರುತ್ತದೆ 1. ಕೃಷಿ ಉತ್ಪಾದನೆ, ಪಶುಸಂಗೋಪನೆ, ಗ್ರಾಮಾಂತರ ಕೈಗಾರಿಕೆಗಳು, ಬಡತನ ನಿವಾರಣೆ ಮುಂತಾದ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಉತ್ಪಾದನಾ ಸಮಿತಿ

2. ಅನುಸೂಚಿತ ಜಾತಿ ಪಂಗಡಗಳು ಮತ್ತು ಇತರ ವರ್ಗಗಳ ಶೈಕ್ಷಣಿಕ ಆರ್ಥಿಕ ಸಾಂಸ್ಕೃತಿಕ ಮತ್ತಿತರ ಅಭಿವೃದ್ಧಿಗೆ ಉತ್ತೇಜನ ನೀಡಲು, ಸಾಮಾಜಿಕ ಅನ್ಯಾಯ ಅಥವಾ ಶೋಷಣೆಯಿಂದ ರಕ್ಷಣೆ ಕೊಡಲು ಮತ್ತು ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಇದಕ್ಕಾಗಿ ಸಾಮಾಜಿಕ ನ್ಯಾಯ ಸಮಿತಿ ಎಂದಿರುತ್ತದೆ.

3. ಶಿಕ್ಷಣ, ಸಾರ್ವಜನಿಕ ಆರೋಗ್ಯ, ಲೋಕೋಪಯೋಗಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸೌಕರ್ಯ ಸಮಿತಿ ಈ ಮೂರು ಸರ್ವೇಸಾಮಾನ್ಯವಾಗಿ ಇರುತ್ತದೆ. ಆದರೆ ಇತರ ಉದ್ದೇಶಗಳಿಗಾಗಿ ಗ್ರಾಮ ಪಂಚಾಯಿತಿಗಳು ಸಮಿತಿಗಳನ್ನು ರಚಿಸಬಹುದು. ಉದಾಹರಣೆಗೆ ಜೀವವೈವಿಧ್ಯದ ಸಂವರ್ಧನೆ, ಜಲ ಸಂವರ್ಧನೆ ಇತ್ಯಾದಿ.ಆದರೆ ಇಂತಹ ಸಮಿತಿಗಳು ಇರುವ ಪಂಚಾಯಿತಿಗಳನ್ನು ದುರ್ಬೀನು ಇಟ್ಟು ಹುಡುಕಬೇಕು. ಸೃಜನಶೀಲವಾಗಿ ಯೋಚಿಸಿದರೆ ಇಂಥ ಹತ್ತು ಹಲವು ಸಮಿತಿಗಳ ಮೂಲಕ ಗ್ರಾಮದ ವಿವಿಧ ಆದರೆ ಒಂದಕ್ಕೊಂದು ಸಂಬಂಧವಿರುವ ವಿಷಯಗಳನ್ನು ಒಂದುಗೂಡಿಸಿ ಅಭಿವೃದ್ಧಿಪಡಿಸಬಹುದು.ಪಿರಿಯಾಪಟ್ಟಣದ ಮಾಲಂಗಿ ಪಂಚಾಯಿತಿಯಲ್ಲಿ ಸಮುದಾಯ ಬೀಜ ಬ್ಯಾಂಕೊಂದು ಅಸ್ತಿತ್ವದಲ್ಲಿದೆ. ಇದು ಹೇಗೆ ಸಾಧ್ಯವಾಯಿತು? ಮೂಲತಃ ಇಂಥ ಪರಿಕಲ್ಪನೆಗಳನ್ನು ಅರ್ಥಮಾಡಿಕೊಂಡು ಅದನ್ನು ಪಂಚಾಯತಿನ ಒಟ್ಟಾರೆ ಅಭಿವೃದ್ಧಿಯ ಒಳಗೆ ತರುವ ಮೇಧಾಶಕ್ತಿ ಆಡಳಿತ ಮಂಡಳಿಗೂ ಆಡಳಿತ ಅಧಿಕಾರಿಗಳು ಅಭಿವೃದ್ಧಿ ಅಧಿಕಾರಿಗಳು ಇರಬೇಕು.

ಕ್ಷೇತ್ರವಾರು ಪಂಚಾಯತಿ ಮಾಡಬಹುದಾದ ಕೆಲಸಗಳ ಸೂಚಿ ಹೀಗಿದೆ: ಕೃಷಿ ಮತ್ತು ತೋಟಗಾರಿಕೆಗೆ ಉತ್ತೇಜನ ಮತ್ತು ಅಭಿವೃದ್ಧಿ ಬಂಜರು ಭೂಮಿ ಅಭಿವೃದ್ಧಿ ಹುಲ್ಲುಗಾವಲುಗಳ ಅಭಿವೃದ್ಧಿ ಅವುಗಳ ಅನಧಿಕೃತ ಪರಭಾರೆ ಮತ್ತು ಬಳಕೆಯನ್ನು ತಡೆಯುವುದು.

ಪಶುಸಂಗೋಪನೆ ಹೈನುಗಾರಿಕೆ ಮತ್ತು ಕೋಳಿ ಸಾಕಣೆಗೆ ಉತ್ತೇಜನ ನೀಡುವುದು. ಮೀನುಗಾರಿಕೆ ಅಭಿವೃದ್ಧಿ ಸಾಮಾಜಿಕ ಮತ್ತು ಹೊಲಗದ್ದೆಗಳ ಅರಣ್ಯ ನಿರ್ಮಾಣ ಸಣ್ಣ ಅರಣ್ಯ ಉತ್ಪನ್ನ ಖಾದಿ ಗ್ರಾಮೋದ್ಯೋಗ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ವಿಚಾರ ಸಂಕಿರಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಅಸಂಪ್ರದಾಯಿಕ ಶಕ್ತಿ ಯೋಜನೆಗಳನ್ನು ಪ್ರೋತ್ಸಾಹಿಸುವುದು ಜೈವಿಕ ಅನಿಲ ಸುಧಾರಿತ ಒಲೆ ಇತ್ಯಾದಿಗಳನ್ನು ಪ್ರೋತ್ಸಾಹಿಸುವುದು, ಬಡತನ ನಿವಾರಣೆಗಾಗಿ ಉತ್ಪಾದಕ ಸ್ವತ್ತುಗಳ ಸೃಷ್ಟಿ. ಕೃಷಿ ವಿಸ್ತರಣೆಯಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಉತ್ತೇಜನ ನೀಡುವುದಷ್ಟೇ ಅಲ್ಲ ಕೃಷಿ ಅಥವಾ ತೋಟಗಾರಿಕಾ ಕ್ಷೇತ್ರಗಳ ನಿರ್ವಹಣೆ ಕೀಟನಾಶಕ ಕ್ರಿಮಿನಾಶಕಗಳ ದಾಸ್ತಾನು ಮತ್ತು ವಿತರಣೆ. ಸುಧಾರಿತ ಕ್ರಮಗಳ ಪ್ರಸಾರ ತರಕಾರಿ ಹಣ್ಣುಗಳ ಬೇಸಾಯಮಾರುಕಟ್ಟೆಗೆ ಉತ್ತೇಜನ, ರೈತರ ತರಬೇತಿ ಗ್ರಾಮೀಣ ಕಲೆಗಳಿಗೆ ಮತ್ತು ವೃತ್ತಿ ಶಿಕ್ಷಣಕ್ಕೆ ಉತ್ತೇಜನ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *