

ರಾಘು… ಚಾರ್ವಾಕ ರಾಘು ಸಾಗರ. ವಕೀಲರು, ಪತ್ರಕರ್ತರು, ಹೋರಾಟಗಾರರು, ಜಗಳಗಳ ನಡುವೆ ಪ್ರೀತಿ ಉಳಿಸಿಕೊಳ್ಳುವ ನನ್ನ ಗೆಳೆಯ.2005 ನಾನು ಎಂ ಎ ಮುಗಿಸಿ ದ್ವೀಪಕ್ಕೆ ಅಗಮಿಸಿದ್ದೆ. ಮೆದುಳು ತುಂಬಾ ಸಮಾಜ ಬದಲಾಗಬೇಕು ಎಂಬ ಯೋಚನೆ. ಎದೆ ಒಳಗೆ ವಿಚಿತ್ರ ತುಡಿತ. ಸಮಾಜದ ವಕ್ರಗಳು ನೋಟಕ್ಕೆ ದಕ್ಕುವಂತೆ ವಿಧ್ಯೆ ಅರಿವಾಗಿತ್ತು. ಆದರೆ ಥಿಯರಿ ಮತ್ತು ಪ್ರಾಕ್ಟಿಕಲ್ ನಡುವೆ ಅಂತರ ಇದ್ದೇ ಇರುತ್ತದೆ. ಸರ್ಕಾರಿ ನೌಕರಿ ಹೋಗಲ್ಲ ಎಂದು ನಿರ್ಧಾರಕ್ಕೆ ಬಂದು ದ್ವೀಪಕ್ಕೆ ಬಂದರೆ ಊರು ತುಂಬಾ ಸಾರಾಯಿ ಅಂಗಡಿ. ಬಡವನ ದುಡಿತ ಸಂಜೆ ಸಾರಾಯಿಗೆ ಮುಗಿದು ದುಡಿಯುವ ಕುಟುಂಬ ಬೀದಿಗೆ ಬಿದ್ದಿದ್ದವು. ಪರಿಣಾಮ ಮಕ್ಕಳು ಶಾಲೆ ಬಿಟ್ಟಿದ್ದವು, ಸಾಲದ ಜತೆ ಕೈ ಕೊಡುವ ಆರೋಗ್ಯ, ಸಾಮಾಜಿಕ ಅಶಾಂತಿ. ಅದೇ ಹೊತ್ತಿಗೆ ಸ್ತ್ರೀ ಶಕ್ತಿ ಸಂಘಗಳು ರಚನೆ ಆಗಿ ಅವು ಸಾರಾಯಿ ಅಂಗಡಿ ವಿರುದ್ದ ಕುದಿಯಲು ಆರಂಭಿಸಿದ್ದವು. ಅಸಹನೆ ಸ್ಪೋಟಗೊಳ್ಳಲು ಕಾಯುತ್ತಾ ಇದ್ದವು.ಅದೇ ಹೊತ್ತಿಗೆ ರಾಘು ಪರಿಚಯವಾಯ್ತು…..ಮೋಹನ್ ಚಂದ್ರಗುತ್ತಿ ಪರಿಚಯಿಸಿದರು.ನಂತರ ಹುಟ್ಟಿಕೊಂಡಿದ್ದು ” ನಮ್ಮೂರಿಗೆ ಸಾರಾಯಿ ಬೇಡ ಚಳುವಳಿ”. ಒಂದು ವರ್ಷ ನಡೆದ ಚಳುವಳಿಯನ್ನ ಹಿನ್ನೆಲೆಯಲ್ಲಿ ನಿಂತು ಮುನ್ನೆಡೆಸಿದವ ರಾಘು. ಲಾಯರ್ ರಾಘು. ದ್ವೀಪ ನೆಲದಲ್ಲಿ ಇಂದಿಗೂ ಐತಿಹಾಸಿಕವಾಗೇ ಉಳಿದಿರುವ ಆ ಚಳುವಳಿ ದುಡಿಯುವ ಜನರ ವ್ಯವಸ್ಥೆ ವಿರುದ್ದ ಆಕ್ರೋಶಕ್ಕೆ ಕಾರಣ ಆಯಿತು. ಹಲವು ಮಜಲು ದಾಟಿ ಸಾರಾಯಿ ಗುತ್ತಿಗೆದಾರರು ಮಹಿಳೆಯರ ಮೇಲೆ ಹಲ್ಲೆ ಮಾಡಿದ ನಂತರ ಸಾಗರ, ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಯಿತು.
ಹಲವು ಹೋರಾಟಗಾರರ ಜತೆ ಆದರು. ಮಾಧ್ಯಮದವರು ನೈತಿಕ ಬೆಂಬಲ ನೀಡಿದರು. ಈ ಹೋರಾಟ ಸಾರಾಯಿ ಅಂಗಡಿ ಮುಚ್ಚುವುದಕ್ಕೆ ಸರ್ಕಾರ ಆದೇಶ ನೀಡಿದ ನಂತರ ಯಶಸ್ವಿ ಹೋರಾಟ ವರ್ಷದ ನಂತರ ಮುಕ್ತಾಯ ಆಯ್ತು. ಆದರೆ 60 ಜನ ಹೋರಾಟಗಾರರ ಮೇಲೆ ಒಟ್ಟು 12 ವಿವಿಧ ಕೇಸುಗಳನ್ನು ಧಾಖಲಾಗಿತ್ತು. 3 ವರ್ಷ ಕಾಲ ನ್ಯಾಯಾಲಯದಲ್ಲಿ ಕೇಸು ನಡೆಯಿತು. ಅಷ್ಟು ಕೇಸುಗಳನ್ನ ಒಂದು ರೂಪಾಯಿ ಶುಲ್ಕ ಕೂಡ ಪಡೆಯದೇ ನಡೆಸಿದವನು ಲಾಯರ್ ರಾಘು. ಇವತ್ತಿಗೂ ಕರೂರು ನೆಲದಲ್ಲಿ ರಾಘು ದುಡಿಯುವ ಮಹಿಳೆಯರ ನೆನಪಿನಲ್ಲಿ ಹಾಗೇ ಇದ್ದಾನೆ. ದ್ವೀಪ ಎಂದರೆ ರಾಘು ಗೂ ಪ್ರೀತಿ. ಆದರೆ ಆ ಹೋರಾಟ ನನಗೆ ಪಾಠ ಹೇಳಿಕೊಟ್ಟಿತು. ಸಮಾಜ ನೋಡುವ ಕ್ರಮ, ಓದು, ಗ್ರಹಿಕೆ, ವಿಷಯ ಜ್ಞಾನ, ಸೀಳುನೋಟದ ಕ್ರಮ ಇಂತ ಹಲವು ವಿಚಾರದಲ್ಲಿ ರಾಘುವಿನಿಂದ ನಾನು ತುಂಬಾ ಕಲಿತಿದ್ದೇನೆ.ದೆಹಲಿಯಲ್ಲಿ ನಡೆಯುತ್ತಾ ಇರುವ ರೈತಹೋರಾಟ ಬೆಂಬಲಿಸಿ ಕರ್ನಾಟಕದ ಚಳುವಳಿಗಾರರ ತಂಡ ಮೊನ್ನೆ ದೆಹಲಿಗೆ ಭೇಟಿ ನೀಡಿತು. ಹೋರಾಟದ ನೆಲ ಶಿವಮೊಗ್ಗ-ಸಾಗರದಿಂದ ಸುದ್ದಿ ಸಾಗರ ಸಂಪಾದಕರೂ ಚಾರ್ವಾಕ ರಾಘು ಈ ತಂಡದ ಜತೆ ದೆಹಲಿ ಹೋಗಿ ಪ್ರತ್ಯಕ್ಷ ವರದಿ ನೀಡುವ ಜತೆ ರೈತರಿಗೆ ನೈತಿಕ ಬೆಂಬಲ ನೀಡುವ ಮಹತ್ವದ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಹಿಂತಿರುಗಿದ್ದಾರೆ.ದೆಹಲಿ ಚಿತ್ರಗಳನ್ನು ನೋಡಿದಾಗ ಸಾರಾಯಿ ಹೋರಾಟ ಆರಂಭ ಆದಾಗ ರಾಘು ಜತೆ ಆಗಿದ್ದು ನೆನಪಾಯ್ತು. ಜೀವನದ ಹಲವು ಸರಿ ತಪ್ಪುಗಳ ನಡುವೇ ಮನುಷ್ಯ ಪ್ರೀತಿಯ ನೆಲೆ ಮತ್ತು ತಾತ್ವಿಕ ಬದ್ಧತೆ ಹೊಂದಿದಾಗ ಕಾಲದ ನಂತರವೂ ವ್ಯಕ್ತಿ ಗಟ್ಟಿಯಾಗಿ ಉಳಿಯುತ್ತಾನೆ. ಒಂಟಿ ನಡಿಗೆ ಎಂದು ಹೊರನೋಟಕ್ಕೆ ಅನ್ನಿಸಿದರೂ ಆತ ಒಂಟಿಯಾಗಿರುವುದಿಲ್ಲ. ರಾಘು ದೆಹಲಿ ಪಯಣ ಇದಕ್ಕೆ ಒಂದು ಸಾಕ್ಷಿ.ಭೂಮಿ ಹೋರಾಟದ ಸಾಗರ ನೆಲದ ಮಗ ಚಾರ್ವಾಕ ರಾಘು ಭೂಮಿ ತಾಯಿ ಮಕ್ಕಳ ದೆಹಲಿ ಹೋರಾಟಕ್ಕೆ ಬೆಂಬಲ ನೀಡಿ ದೇಶದ ರಾಜಧಾನಿಗೆ ತೆರಳುವುದು ಸಾಗರ ನೆಲದ ಕಸು ಮತ್ತು ಹೆಮ್ಮೆ. ಇದನ್ನು ಗುರುತಿಸುವುದು ಬಹಳ ಮುಖ್ಯ ಎಂದೇ ಈ ಬರಹ.
ಜಗಳ, ಕೋಪ, ಒರಟುತನ, ಅನ್ನಿಸಿದ್ದು ನೇರ ಹೇಳುವ ಸ್ವಭಾವ, ಪ್ರಶ್ನೆ ಮಾಡುವ ಮನೋವೃತ್ತಿ ಇವೆಲ್ಲವೂ ವ್ಯಕ್ತಿಯ ಒಳಗಿನ ಪ್ರೀತಿಯ ಪ್ರತಿರೂಪಗಳೇ… ಚಾರ್ವಾಕ ರಾಘು ಇವೆಲ್ಲವೂ ಒಳಗೊಳ್ಳುತ್ತಲೇ ಆಳದಲ್ಲಿ ಕರಡಿ ಪ್ರೀತಿಯನ್ನು ಕಾಯ್ದುಕೊಂಡವ. ರಾಘು ದೆಹಲಿ ಹೆಜ್ಜೆ ಕೂಡ ಈ ಹಾದಿಯದು. ಸೆಲ್ಯೂಟ್ ಚಾರ್ವಾಕ…. ನೆಲದ ನಿಜ ಪ್ರತಿನಿಧಿಯಾಗಿದ್ದಕ್ಕೆಹೋರಾಟದ ನೆಲಕ್ಕೆ ಧಾವಿಸಿದ್ದಕ್ಕೆ
-.ಜಿ.ಟಿ. ಸತ್ಯನಾರಾಯಣ ಕರೂರು.

