

ಶಿವಮೊಗ್ಗದಲ್ಲಿ ದೀವರ ಬೂಮಣ್ಣಿ ಚಿತ್ತಾರ ಸ್ಪರ್ಧೆಯ ವಿಜೇತ ಹೆಣ್ಣು ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಂದರ್ಭದಲ್ಲಿ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರು ಆಡಿದ ಮಾತುಗಳು ಕಣ್ಣಂಚಿನಲ್ಲಿ ನೀರಾಡುವಂತೆ ಮಾಡಿದವು. ಒಬ್ಬ ವ್ಯಕ್ತಿ ಮಾಗಿದಾಗ ಮಗುವಿನಂತೆ ನಿಷ್ಕಲ್ಮಶನಾಗಿ ಆಗಿಬಿಡುತ್ತಾನೆ ಅನಿಸಿತು.
“ನಾವು ಚಿಕ್ಕವರಿದ್ದಾಗ ನಮ್ಮ ಜನ ಪಡಬಾರದ ಕಷ್ಟ ಪಡುತ್ತಿದ್ದುದನ್ನು ನೋಡಿದವರು. ಅಂತಹ ಗುಲಾಮಗಿರಿಯ ದಾರುಣ ಸ್ಥಿತಿಯಿಂದ ಹೊರಬರಲು, ಉಳುವವನೇ ಹೊಲದೊಡೆಯನಾಗಲು ಕಾಗೋಡು ಸತ್ಯಾಗ್ರಹ ನಡೆದಿತ್ತು. ಆಗ ಸಮಾಜವಾದಿ ನಾಯಕ ಗೋಪಾಲ ಗೌಡರನ್ನು ನಮ್ಮ ಗುರುಗಳಾಗಿ ಸ್ವೀಕರಿಸಿದ್ದೆವು. ದೂರದ ಲೋಹಿಯಾ ಅವರು ಇಲ್ಲಿನ ಹೋರಾಟದ ಸಂಗತಿ ತಿಳಿದು ಕಾಗೋಡಿಗೆ ಬಂದು ಹೋರಾಟ ಅಹಿಂಸಾತ್ಮವಾಗಿ ನಡೆಯಬೇಕು ಎಂದು ತಿಳಿ ಹೇಳಿದ್ದರು. ಅವರು ಗಾಂಧಿ ಮಾರ್ಗದಲ್ಲಿ ನಡೆಯುತ್ತಿದ್ದ ಸಮಾಜವಾದಿ. ಈ ಸಂದರ್ಭದಲ್ಲಿ ನಮ್ಮ ಆಲೋಚನೆಗಳೆಲ್ಲಾ ಅದೇ ಆಗಿತ್ತು. ಆದರೆ ನಮ್ಮ ಸಮುದಾಯದ ಕಲೆ ಸಂಸ್ಕೃತಿಯ ಕುರಿತು ನಾವು ನಿಜವಾಗಿ ಗಮನ ಹರಿಸದೇ ಹೋದೆವು. ಅದು ಮುಖ್ಯ ಎಂದು ಅಂದು ನಮಗೆ ಹೊಳೆಯಲೇ ಇಲ್ಲ.
ಇಂದು ನೀವೆಲ್ಲ ಆಯೋಜಿಸಿರುವ ಈ ಕಾರ್ಯಕ್ರಮ ನೋಡಿ ನಾವು ನಿಜವಾಗಿ ತಪ್ಪು ಮಾಡಿದ್ದೇವೆ ಅನಿಸುತ್ತಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರ ಕ್ಷಮೆ ಕೋರುತ್ತೇನೆ’ ಎಂದು ಹಿರಿಯ ಜೀವ ನುಡಿದಾಗ ನಿಜಕ್ಕೂ ಮನ ಕಲಕಿತು.
ನಾವು ಮಲೆನಾಡಿನ ದೀವರ ಚಿತ್ತಾರದ ಬಗ್ಗೆ ಯೋಚಿಸುವಾಗ ಮಾತಾಡುವಾಗಲೆಲ್ಲ ಎಲ್ಲೋ ಮನಸಿನ ಒಂದು ಕಡೆ ನಮ್ಮ ರಾಜಕೀಯ ನಾಯಕರು ಇಂತಹ ವಿಶಿಷ್ಟ ಕಲೆಗೆ ಸರಿಯಾದ ಕಾಯಕಲ್ಪ ಮಾಡಲು ತೋರಿಸ ಅಸಡ್ಡೆ ಕುರಿತು ಬೇಸರ ವ್ಯಕ್ತಪಡಿಸಿದ್ದಿದೆ. ಈ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರಿಗೆ ಇದು ಅರಿವಿಗೆ ಬರಲಿ ಎಂಬ ಉದ್ದೇಶವೂ ಇತ್ತು. ಆದರೆ ನಮ್ಮ ಮನಸಿನ ನೋವು, ಅಸಮಾಧಾನವನ್ನು ತಾವಾಗಿಯೇ ಅರ್ಥ ಮಾಡಿಕೊಂಡಂತೆ ಮಾತಾಡಿ ಕ್ಷಮೆ ಕೇಳಿದ ಕಾಗೋಡು ತಿಮ್ಮಪ್ಪನವರು ನಿಜಕ್ಕೂ ದೊಡ್ಡವರಾಗಿಬಿಟ್ಟರು.
ಹೌದು, ಅಂದಿನ ಅವರ ಆದ್ಯತೆಗಳು ಬೇರೆಯೇ ಇದ್ದವು. ಗೇಣಿದಾರರ ಸಮಸ್ಯೆಗಳು, ಬಲಾಡ್ಯ ಸಮುದಾಯಗಳ ದಬ್ಬಾಳಿಕೆಯಲ್ಲಿ ಸಾಮಾಜಿಕ ನ್ಯಾಯದ ವಿಷಯಗಳು ಆದ್ಯತೆಯಾಗಿದ್ದವು. ಆದರೂ ತಳ ಸಮುದಾಯದ ಕಲೆ ಸಂಸ್ಕೃತಿಗಳು ವಿನಾಶಹೊಂದುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಅವಶ್ಯವಾಗಿ ಮಾಡಬೇಕಿದ್ದ ಹಲವು ಕೆಲಸಗಳಿದ್ದವು. ದೀವರಂತಹುದೇ ವೊರ್ಲಿ ಸಮುದಾಯ ಚಿತ್ತಾರದಂತಹುದೇ ಕಲೆಯನ್ನು ದೇಶ ವಿಖ್ಯಾತಗೊಳಿಸಿದಂತೆ ದೀವರ ಚಿತ್ತಾರವೂ ಆಗಬೇಕಿತ್ತು. ಈ ಕುರಿತು ಹಿರಿಯ ಸಾಹಿತಿ ನಾ ಡಿಸೋಜಾ ಅವರು ಮಾತಾಡುತ್ತಾ ಒಮ್ಮೆ ನನ್ನ ಬಳಿ ಹೀಗೆಂದಿದ್ದರು. ‘ದೀವರು ಆರ್ಥಿಕವಾಗಿ ರಾಜಕೀಯವಾಗಿ ಅಭಿವೃದ್ಧಿ ಹೊಂದುವುದು ಮಾತ್ರ ಸಮುದಾಯದ ಪ್ರಗತಿ ಎಂದು ತಿಳಿದು ತಮ್ಮ ಅತ್ಯಂತ ವಿಶಿಷ್ಟ ಸಂಸ್ಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಇದು ಬಹಳ ದುರದೃಷ್ಟದ ವಿಷಯ”.
ಬಹಳ ತಡವಾಗಿ ಎಚ್ಚೆತ್ತಿದ್ದೇವೆ. ಈಗಲೂ ಕಾಲ ಮಿಂಚಿಲ್ಲ. ಕಾಗೋಡು ತಿಮ್ಮಪ್ಪನವರು ಹೇಗೂ ನಮ್ಮ ಪ್ರಯತ್ನದಲ್ಲಿ ಜೊತೆಯಾಗಿರುವುದಾಗಿ ಹೇಳಿದ್ದಾರೆ. ಶಾಸಕರಾದ ಹಾಲಪ್ಪನವರೂ, ಮಾಜಿ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಅವರೂ ಚಿತ್ತಾರ ಕಲೆಯನ್ನು ಬೆಳೆಸುವಲ್ಲಿ ಸಮುದಾಯದ ಜೊತೆಗೆ ಕೈಗೂಡಿಸುವುದಾಗಿ ಮಾತು ಕೊಟ್ಟಿದ್ದಾರೆ. ಕಾರ್ಮೋಡದ ನಡುವಿನಿಂದ ಬೆಳ್ಳಿ ಗೆರೆಯೊಂದು ಕಾಣಿಸಿಕೊಂಡಂತಾಗಿದೆ.
“ಹಿರಿಯರ ಪಾದಕ್ಕೆ ಶರಣೂ
ಅವರ ಮೆಟ್ಟಡಿಯ ಅರಿವೀಗೇ ಶರಣೂ” ಎಂಬ ಕೋಟಗಾನಳ್ಳಿ ರಾಮಯ್ಯ ಅವರ ಗೀತೆಯ ಸಾಲಿನಂತೆ ಹಿರಿಯ ಚೇತನಗಳಿಗೆ ವಂದಿಸಿ ಮುಂದೆ ಸಾಗೋಣ.
- ಹರ್ಷಕುಮಾರ್ ಕುಗ್ವೆ

