

ಉತ್ತರ ಕನ್ನಡ ಜಿಲ್ಲೆಗೆ ಬಂದಿದೆ 7000 ಡೋಸ್ ಕೊರೋನಾ ವ್ಯಾಕ್ಸಿನ್
ಬೆಳಗಾವಿಯ ಕೋವ್ಯಾಕ್ಸಿನ್ ಡಿಪೊದಿಂದ ಬುಧವಾರ 7000 ಡೋಸ್ ಕೊರೋನಾ ಲಸಿಕೆಗಳು ಉತ್ತರ ಕನ್ನಡ ಜಿಲ್ಲೆಗೆ ಬಂದು ತಲುಪಿವೆ. ಜ.16 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚುವಲ್ ವೇದಿಕೆಯಲ್ಲಿ ಲಸಿಕಾ ಅಭಿಯಾನ ಉದ್ಘಾಟಿಸಿದ ಬಳಿಕ ಜಿಲ್ಲೆಯಲ್ಲೂ ಚಾಲನೆ ದೊರಕಲಿದೆ.’ಜಿಲ್ಲೆಯ 11 ಕೇಂದ್ರಗಳನ್ನು ಲಸಿಕೆ ನೀಡಲು ಗುರುತಿಸಲಾಗಿದೆ. ಈ ಕೇಂದ್ರಗಳಲ್ಲಿ ತಲಾ 100 ಮಂದಿಗೆ ಲಸಿಕೆ ನೀಡಲು ಗುರಿ ಹೊಂದಲಾಗಿದೆ. ಮೊದಲ ದಿನ 1,100 ಮಂದಿಗೆ ಲಸಿಕೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.ಮೊದಲ ದಿನ ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರಿಗೆ ಲಸಿಕೆ ನೀಡಲಾಗುವುದು. ಬಳಿಕ ಹಂತ ಹಂತವಾಗಿ ಎಲ್ಲರಿಗೂ ದೊರಕುವಂತೆ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ
ಕೋವಿಡ್-19 ಲಸಿಕೆ ಅಭಿಯಾನ ದೇಶದಲ್ಲಿ ನಾಳೆ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಲಸಿಕೆಯನ್ನು ಯಾರು ಬಳಸಬಹುದು, ಯಾರು ಬಳಸಬಾರದು ಎಂಬ ಬಗ್ಗೆ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಹೊರಡಿಸಿದೆ.

ನವದೆಹಲಿ: ಕೋವಿಡ್-19 ಲಸಿಕೆ ಅಭಿಯಾನ ದೇಶದಲ್ಲಿ ನಾಳೆ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಲಸಿಕೆಯನ್ನು ಯಾರು ಬಳಸಬಹುದು, ಯಾರು ಬಳಸಬಾರದು ಎಂಬ ಬಗ್ಗೆ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಹೊರಡಿಸಿದೆ.
ಕೋವಿಡ್-19 ಲಸಿಕೆಯನ್ನು ಒಬ್ಬರಿಂದ ಮತ್ತೊಬ್ಬರಿಗೆ ಪರಸ್ಪರ ಬದಲಾಯಿಸುವುದು, ಗರ್ಭಿಣಿಯರು, ಮಗುವಿಗೆ ಹಾಲುಣಿಸುವ ತಾಯಂದಿರಿಗೆ ನೀಡುವ ಹಾಗಿಲ್ಲ. ಅವರು ಇದುವರೆಗೆ ಯಾವುದೇ ಕೊರೋನಾ ವೈರಸ್ ತಡೆ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯ ಭಾಗವಾಗಿಲ್ಲದಿರುವುದರಿಂದ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಆರೋಗ್ಯ ಸಚಿವಾಲಯ, ತುರ್ತು ಪರಿಸ್ಥಿತಿ ಬಳಕೆಯಲ್ಲಿ ಮಾತ್ರ ಸದ್ಯದ ಮಟ್ಟಿಗೆ ಕೊರೋನಾ ವೈರಸ್ ಲಸಿಕೆಯನ್ನು 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ನೀಡಲು ಶಿಫಾರಸು ಮಾಡಲಾಗಿದೆ ಎಂದು ಹೇಳಿದೆ.
ಅಗತ್ಯಬಿದ್ದರೆ ಕೋವಿಡ್-19 ಲಸಿಕೆ ಮತ್ತು ಇತರ ಲಸಿಕೆಗಳನ್ನು 14 ದಿನಗಳ ಅಂತರದಲ್ಲಿ ಪ್ರತ್ಯೇಕಿಸಬಹುದು. ಕೋವಿಡ್-19 ಲಸಿಕೆಗಳನ್ನು ಪರಸ್ಪರ ಬದಲಿಸಲು ಅನುಮತಿಯಿಲ್ಲ. ಮೊದಲು ಕೊಟ್ಟ ಡೋಸ್ ನ ಕೋವಿಡ್-19 ಲಸಿಕೆಯನ್ನೇ 14 ದಿನಗಳು ಕಳೆದ ನಂತರ ಎರಡನೇ ಬಾರಿ ನೀಡಬೇಕಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನನಿ ತಿಳಿಸಿದ್ದಾರೆ.
ಎಚ್ಚರಿಕೆ ಮತ್ತು ವ್ಯತಿರಿಕ್ತ ಪರಿಣಾಮಗಳು: ಕೋವಿಡ್-19 ಲಸಿಕೆಗಳನ್ನು ನೀಡುವುದರಿಂದ ವ್ಯಕ್ತಿಯ ದೇಹಕ್ಕಾಗುವ ಅಡ್ಡಪರಿಣಾಮಗಳು, ಶಾರೀರಿಕ ಸಮಸ್ಯೆ, ಅವುಗಳ ಡೋಸೇಜ್, ಶೀತಲ ಸಂಗ್ರಹ ಅಗತ್ಯತೆ ಮೊದಲಾದವುಗಳ ಕುರಿತು ಸಹ ಮಾರ್ಗಸೂಚಿಯನ್ನು ಹೊರಡಿಸಿದೆ.
ಕೋವಿಡ್-19 ಲಸಿಕೆಯ ವಿರೋಧಾಭಾಸಗಳನ್ನು ಪಟ್ಟಿಮಾಡಿ, ಲಸಿಕೆಯ ಹಿಂದಿನ ಡೋಸ್‌ಗೆ ಅನಾಫಿಲ್ಯಾಕ್ಟಿಕ್ ಅಥವಾ ಅಲರ್ಜಿ ಸಮಸ್ಯೆ ಹೊಂದಿರುವ ವ್ಯಕ್ತಿಗಳಲ್ಲಿ ಮತ್ತು ಲಸಿಕೆಗಳು ಅಥವಾ ಚುಚ್ಚುಮದ್ದಿನ ಚಿಕಿತ್ಸೆಗಳಿಗೆ ತಕ್ಷಣದ ಅಥವಾ ವಿಳಂಬವಾದ ಅನಾಫಿಲ್ಯಾಕ್ಸಿಸ್ ಅಥವಾ ಅಲರ್ಜಿಯ ಪ್ರತಿಕ್ರಿಯೆಯನ್ನು ಹೊಂದಿರುವ ವ್ಯಕ್ತಿಗಳಲ್ಲಿ ಲಸಿಕೆಯ ಬಳಕೆ ವಿರುದ್ಧ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.
ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಇಲ್ಲಿಯವರೆಗೆ ಯಾವುದೇ ಕೋವಿಡ್-19 ಲಸಿಕೆ ಕ್ಲಿನಿಕಲ್ ಪ್ರಯೋಗದಲ್ಲಿ ಭಾಗವಹಿಸಿಲ್ಲ. ಆದ್ದರಿಂದ, ಗರ್ಭಿಣಿಯರು ಅಥವಾ ಗರ್ಭಧಾರಣೆಯ ಬಗ್ಗೆ ಖಚಿತವಾಗಿರದ ಮತ್ತು ಹಾಲುಣಿಸುವ ಮಹಿಳೆಯರು ಈ ಸಮಯದಲ್ಲಿ ಕೋವಿಡ್-19 ಲಸಿಕೆ ಪಡೆಯಬಾರದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಯಾವುದೇ ರಕ್ತಸ್ರಾವ ಅಥವಾ ಹೆಪ್ಪುಗಟ್ಟುವಿಕೆಯ ಅಸ್ವಸ್ಥತೆಯ ಸಮಸ್ಯೆ ಹೊಂದಿರುವ ವ್ಯಕ್ತಿಗಳಿಗೆ ಲಸಿಕೆಯನ್ನು ಎಚ್ಚರಿಕೆಯಿಂದ ನೀಡಬೇಕು.
ಸಾರ್ಸ್ -ಕೋವಿಡ್-2 ಸೋಂಕಿನ ಸಕ್ರಿಯ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ, ಕೊರೋನಾ ವೈರಸ್ ಸೋಂಕಿತ ರೋಗಿಗಳಿಗೆ ಸಾರ್ಸ್ ಕೋವಿಡ್-2 ಮೊನೊಕ್ಲೋನಲ್ ಪ್ರತಿಕಾಯಗಳು ಅಥವಾ ಚೇತರಿಸಿಕೊಳ್ಳುವ ಪ್ಲಾಸ್ಮಾವನ್ನು ನೀಡಬಹುದಾಗಿದೆ. ಯಾವುದೇ ಅನಾರೋಗ್ಯದ ಕಾರಣದಿಂದಾಗಿ ತೀವ್ರ ಅಸ್ವಸ್ಥ ಮತ್ತು ಆಸ್ಪತ್ರೆಗೆ ದಾಖಲಾದ ರೋಗಿಗಳು, ಕೋವಿಡ್-19 ಲಸಿಕೆ ನೀಡಿ ಚೇತರಿಸಿಕೊಂಡ ನಂತರ ನಾಲ್ಕರಿಂದ ಎಂಟು ವಾರಗಳವರೆಗೆ ಬೇರೆ ರೋಗಗಳಿಗೆ ಲಸಿಕೆ ನೀಡಲು ಸಾಧ್ಯವಾಗುತ್ತದೆ.
ಈಗಾಗಲೇ ಮೊದಲ ಹಂತದಲ್ಲಿ ನೀಡಲು ಸಾಧ್ಯವಾಗುವಷ್ಟು ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಮತ್ತು ಸೆರಂ ಇನ್ಸ್ ಟ್ಯೂಟ್ ನ ಕೋವಿಶೀಲ್ಡ್ ಲಸಿಕೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದ್ದು ನಾಳೆಯಿಂದ ಲಸಿಕೆ ಅಭಿಯಾನ ಆರಂಭವಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಕೋವಿಡ್-19 ಲಸಿಕೆ ನೀಡಿದ ತಿಂಗಳ ಬಳಿಕ ಕಾಣಿಸಿಕೊಳ್ಳಬಹುದಾದ ಅಡ್ಡಪರಿಣಾಮಗಳಿಗೆ ಪ್ಯಾರೆಸಿಟಮಾಲ್ ತೆಗೆದುಕೊಳ್ಳಬಹುದು ಎಂದು ಆರೋಗ್ಯ ಸಚಿವಾಲಯ ಪತ್ರದಲ್ಲಿ ತಿಳಿಸಿದೆ. (kpc)
