

ಹೇಳಿ ಕೇಳಿ ನಾನೊಬ್ಬ ಪಕ್ಕಾ ಸೋಮಾರಿ. ನಮ್ಮ ಮನೆಯಿಂದ 15 ರಿಂದ 20 km ಒಳಗಡೆ ಜೋಗ್ ಫಾಲ್ಸ್, ಬುರುಡೆ ಫಾಲ್ಸ್, ಉಂಚಳ್ಳಿ ಫಾಲ್ಸ್….ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳಿವೆ. ಅವುಗಳಲ್ಲಿ ಕೆಲವೊಂದನ್ನು ಅದೇ ದಾರಿಯಲ್ಲಿ ಇನ್ನೆಲ್ಲಿಗೋ ಹೋಗುವಾಗ ನೋಡಿದ್ದೇನೆ ಹೊರತು ನೇರವಾಗಿ ಅವುಗಳನ್ನೇ ನೋಡುವ ಉದ್ದೇಶಕ್ಕೆ ಭೇಟಿ ನೀಡಿದಿಲ್ಲ. ಹಲವು ಸ್ಥಳಗಳನ್ನು ಇನ್ನೂ ನೋಡಿಯೇ ಇಲ್ಲ! ಬೆಂಗಳೂರಲ್ಲಿ ಯಾರಾದರು ಹೊಸ ಪರಿಚಯವಾಗುವಾಗ ನಮ್ಮದು ಶಿರಸಿ ಸಿದ್ದಾಪುರ ಅಂಥ ಹೇಳಿದಾಗ ಆ ಕಡೆಯಿಂದ ಬರುವ ಪ್ರತಿಕ್ರಿಯೆ ಏನು ಗೊತ್ತಾ? ನಿಮ್ಮ ಸಿದ್ದಾಪುರದ ಉಂಚಳ್ಳಿ ಸಖತ್ತಾ ಗಿದೆ, ಶಿರಸಿಯ ಯಾಣ, ಸಹಸ್ರಲಿಂಗ…ಅದು ಇದು ಪ್ರವಾಸಿ ಸ್ಥಳಗಳ ಹೆಸರು ಹೇಳುತ್ತಾ ಅದ್ಭುತ ಅಂತಾರೆ. ಆಗ ನಾನು ಹೌದೌದು ಅಂತ ತಲೆ ಅಲ್ಲಾಡಿಸಿ ಬಿಡ್ತೀನಿ. ಯಾಕೆಂದರೆ ಆ ಸ್ಥಳಗಳನ್ನ ನಾನೇ ನೋಡಿಲ್ಲ! (ಆಗಾಗ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ) ಅದ್ಯಾವನ್ ನೋಡ್ತಾನೆ ಅನ್ನೋ ಸೋಮಾರಿ ಆಗಿರೋನಿಗೆ ಅದೊಂದು ಫಾಲ್ಸ್ (ಮನೆಯಿಂದ 15km ದೂರ) ಹೆಸರು ಕೇಳಿದಾಗ, ಅದನ್ನು ನೋಡಲು ಏಳು ಕೆರೆಯ ನೀರು ಕುಡಿದಷ್ಟು ಹರಸಾಹಸ ಮಾಡ್ಬೇಕು ಅಂತ ಕಿವಿಗೆ ಬಿದ್ದಾಗ, ರುದ್ರರಮಣೀಯ ದೃಶ್ಯದ ವರ್ಣನೆ ಕೇಳಿದಾಗ ಯಾಕೋ ಮನಸ್ಸು ಸೆಳೆಯುತ್ತಿತ್ತು. ಊರ ಕಡೆಯ ಸ್ನೇಹಿತರು fb ನಲ್ಲಿ ಫೋಟೋ ಹಾಕಿದಾಗ, ಛೇ! ನಾನು ಇನ್ನೂ ನೋಡಿಲ್ವಲ್ಲ ಅನ್ನೂ ಕೊರಗು ಮತ್ತೆ ಮತ್ತೆ ಕಾಡುತ್ತಿತ್ತು.ಅಂತೂ ಇತ್ತೀಚೆಗೆ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ಊರಿಗೆ ಹೋದೆ. ಅಡಿಕೆ ಕೊಯ್ಲು ಮುಗಿಸಿದ ಮಾರನೇ ದಿನವೇ ಊರಲ್ಲಿ ಒಂದಷ್ಟು ಅಣ್ಣತಮ್ಮಂದಿರನ್ನು ಕರೆದುಕೊಂಡು ಹೊರಟೆ. ಸುಮಾರು ಎರಡು ಕಿ. ಮೀ. ದಟ್ಟ ಅಡವಿಯ ಕಿರಿದಾದ ಕಾಲು ದಾರಿಯಲ್ಲಿ ಪಾದಯಾತ್ರೆ. ಆಮೇಲೆ ಸುಮಾರು ಎರಡು ಕಿ. ಮೀ. ನಷ್ಟು ಕಡಿದಾದ ಇಳಿಜಾರಲ್ಲಿ ಗಿಡ, ಮರ, ಬಳ್ಳಿ, ಕಲ್ಲು ಬಂಡೆ ಹಿಡಿಯುತ್ತಾ ಇಳಿದೆವು. ಅಲ್ಲಲ್ಲಿ ಅಂಡನ್ನು ನೆಲಕ್ಕೆ ಊರುತ್ತಾ ಜಾರಿದೆ. ಆ ಸುಂದ್ರಿ ತನ್ನ ರಮಣೀಯ ದೃಶ್ಯದ ದರ್ಶನ ನೀಡಬೇಕು ಅಂದರೆ ಅಂಡನ್ನು ಭೂಮಿಗೆ ಸ್ಪರ್ಶಿಸಿಯೇ ಬರಬೇಕು ಅಂತ ಪಣತೊಟ್ಟಂಗಿದೆ.ಅಂದಹಾಗೆ ನಾನು ಹೇಳಲು ಹೊರಟಿರೋದು ಪೇಪರ್ನಲ್ಲಿ ಲೇಖನ ಕಾಣದ, ಯೂಟ್ಯೂಬ್ ನಲ್ಲಿ ನಾಲ್ಕೈದು ವಿಡಿಯೋನೂ ಇಲ್ಲದ(ಒಂದೆರಡು ಇವೆ) , ರಸ್ತೆಯಲ್ಲಿ ಒಂದೇ ಒಂದು ನಾಮಫಲಕವೂ ಇಲ್ಲದ ನೆಟ್ಗೋಡ್ ಫಾಲ್ಸ್ ಬಗ್ಗೆ, ಇದು ಇರುವುದು ಜಲಪಾತಗಳ ಜಿಲ್ಲೆ ಎಂದೇ ಖ್ಯಾತವಾದ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಊರಾದ ಸಿದ್ದಾಪುರ ತಾಲೂಕಿನ ದೊಡ್ಮನೆ ಇಂದ ಕೂಗಳತೆಯ ದೂರ. ಇಲ್ಲಿ ಸುಮಾರು 300 ಅಡಿ ಎತ್ತರದಿಂದ ಗಂಗಾದೇವಿ ಕಲ್ಲಿನ ಬಂಡೆಯ ಮೇಲೆ ನೃತ್ಯ ಮಾಡುತ್ತಾ ಧುಮುಕುವುದನ್ನು ಕಣ್ಣಾರೆ ಕಂಡೆ. ಸುಮಾರು 50 ಅಡಿ ಫಾಲ್ಸ್ ಅನ್ನು ಕಲ್ಲಿನ ಬಂಡೆಗಳ ಮೇಲೆ ಅಂಬೆಗಾಲಿಡುತ್ತಾ ನಿಧಾನಕ್ಕೆ ಏರಿದೆ. ಅಲ್ಲಿ ಝರಿಗೆ ಮೈಯೊಡ್ಡುವುದು ಇದೆಯಲ್ಲ, ಆಹಾ! ಅದನ್ನು ವರ್ಣಿಸಲಾಗದು ಮರ್ರೆ, ಅನುಭವಿಸಿಯೇ ನೋಡ್ಬೇಕು.ಪಶ್ಚಿಮಘಟ್ಟದ ಪ್ರಕೃತಿಯ ಮಡಿಲಲ್ಲಿರುವ ಈ ಜಲಪಾತದ ವೈಭವ ನೋಡುತ್ತಾ, ನೀರಲ್ಲಿ ಮಿಂದೆದ್ದು ಸುಮಾರು ನಾಲ್ಕೈದು ತಾಸು ಅಲ್ಲಿಯೇ ಇದ್ದು ಹೊರಟೆವು. ನಿಜವಾದ ಸವಾಲು ಆರಂಭ ಆಗಿದ್ದೆ ಆಗ ನೋಡಿ. ಏನೋ ಉತ್ಸಾಹದಲ್ಲಿ ಸೆಲ್ಫೀ ತೆಗೆದುಕೊಳ್ಳುತ್ತಾ, ವಿಡಿಯೋ ಮಾಡುತ್ತಾ ಪ್ರಪಾತಕ್ಕೆ ಇಳಿದು ಗಂಗೆಯನ್ನು ಸ್ಪರ್ಶಿಸಿ ಮನಸ್ಸು ಕುಣಿದಾಡಿತ್ತು. ಈಗ ಹಾಗಲ್ಲ, ಮಂಡಿಯೂರಿ ಬಂಡೆ ಹತ್ತಬೇಕಾಯ್ತು, ಗುಡ್ಡ ಏರಬೇಕಾಯ್ತು, ಎದುರುಸಿರು ಬಿಡುತ್ತಾ, ಬೇವರು ಸುರಿಸುತ್ತಾ ಹತ್ತತ್ತು ಮಾರಿಗೂ ಕುಳಿತು ವಿಶ್ರಾಂತಿ ಪಡೆಯಬೇಕಾಯ್ತು…
ಅಂತಿಮವಾಗಿ ಆಕೆಯನ್ನು ನೋಡಿದ ಧನ್ಯತಾ ಭಾವ ಮೂಡಿತು.ಮಾರ್ಗ:ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಪಟ್ಟಣದಿಂದ ಕುಮಟಾಕ್ಕೆ ಹೋಗುವ ರಸ್ತೆಯಲ್ಲಿ 28km ಪ್ರಯಾಣಿಸಿದರೆ ಬೀರ್ಲಮಕ್ಕಿ ಎಂಬ ಊರು ಸಿಗುತ್ತದೆ. ಅಲ್ಲಿಂದ ಎಡಕ್ಕೆ ಕೊಡಿಗದ್ದೆಗೆ ಹೋಗುವ ರಸ್ತೆಯಲ್ಲಿ ಸುಮಾರು 2.5 km ದೂರದಲ್ಲಿ ನೆಟ್ಗೋಡ್ ಕ್ರಾಸ್ ಇದೆ. ಅಲ್ಲಿ ಬಲಭಾಗದಲ್ಲಿರೋ ಬಸ್ ನಿಲ್ದಾಣದ ಪಕ್ಕದ ಮಣ್ಣಿನ ರಸ್ತೆಯಲ್ಲಿ ಸುಮಾರು 4km ಹೋದರೆ ರಸ್ತೆ ಅಂತ್ಯವಾಗುತ್ತೆ. ಅಲ್ಲಿ ವಾಹನ ನಿಲ್ಲಿಸಿ. ಅಲ್ಲೇ ಅಕ್ಕ ಪಕ್ಕ ಎರಡು ಮನೆಗಳು ಇವೆ, ಅವರಲ್ಲಿ ವಿಚಾರಿಸಿ ಕಾಲು ದಾರಿ ಹಿಡಿಯಿರಿ (ಅವರಲ್ಲಿ ವಿಚಾರಿಸದೇ, ಮಾರ್ಗದರ್ಶನ ಪಡೆಯದೇ ದಾರಿ ಗುರುತಿಸುವುದು ಕಷ್ಟ). ಅಲ್ಲಲ್ಲಿ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಸಂಪೂರ್ಣವಾಗಿ ಗೂಗಲ್ ಮ್ಯಾಪ್ ಮೇಲೆ ಅವಲಂಬಿತರಾಗಬೇಡಿ. ಬೆಂಗಳೂರಿಂದ 420 km ಪ್ರಯಾಣ.
ಒಂದಷ್ಟು ಸಲಹೆ:1-ಬೆಳಗ್ಗೆ 11 ಗಂಟೆಯೊಳಗೆ ಫಾಲ್ಸ್ ಇಳಿಯುವಂತೆ ಸಮಯ ಹೊಂದಾಣಿಕೆ ಮಾಡಿಕೊಳ್ಳಿ2-ಬಿಸ್ಕೆಟ್, ಬ್ರೆಡ್, ಹಣ್ಣು, ಊಟ… ಏನಾದರೂ ತೆಗೆದುಕೊಂಡು ಹೋಗಿ (ಇದನ್ನು ನೀವು ಸಿದ್ದಾಪುರದಲ್ಲೇ ಪಾರ್ಸೆಲ್ ಮಾಡಿಕೊಳ್ಳಿ), ಹಸಿದ ಹೊಟ್ಟೆಯಲ್ಲಿ ವಾಪಸ್ ಬರಲು ಸಾಧ್ಯವಾಗದು. 3-ಚಿಕ್ಕ ಮಕ್ಕಳನ್ನು ವಯಸ್ಸಾದವರನ್ನು ಕರೆದುಕೊಂಡು ಹೋಗುವ ಸಾಹಸ ಬೇಡ4-ಜನ ಬರದ ಪ್ರದೇಶ ಅದು. ಏನಾದರೂ ಅಪಾಯವಾದರೆ ಹೇಳೋರು ಹೇಳೋರು ಇರದು. ಹೀಗಾಗಿ ಒಂಟಿ ಪ್ರಯಾಣ ಬೇಡವೇಬೇಡ5-ಪಾರ್ಸೆಲ್ ತೆಗೆದುಕೊಂಡು ಹೋಗಿ ಪಾರ್ಟಿ ಮಾಡಲು, ಮದ್ಯ ಸೇವಿಸಲು ಹೋಗಬೇಡಿ. ಒಮ್ಮೆ ಮದ್ಯ ಸೇವಿಸಿದರೆ ವಾಪಸ್ ಮರಳುವಾಗ ಅಪಾಯ ಎದುರಿಸಬೇಕಾಗುತ್ತೆ. 6-ಸ್ಥಳೀಯರು ಹೇಳುವಂತೆ ಹೆಬ್ಬಾವುಗಳು ಆಗಾಗ ಕಂಡುಬರುತ್ತವೆ. ಹೀಗಾಗಿ ಅರಣ್ಯದಲ್ಲಿ ಸಾಗುವಾಗ ಸ್ನೇಹಿತರನ್ನು ಒಬ್ಬಬ್ಬರನ್ನೇ ಬಿಟ್ಟು ಮುಂದೆ ಸಾಗಬೇಡಿ, ನಿಮ್ಮ ಪ್ರಯಾಣ ಗುಂಪಾಗಿಯೇ ಇರಲಿ.7-ಗುಂಪಲ್ಲಿ ಹೋದಾಗ ಇಳಿಯುವಾಗ, ಏರುವಾಗ ಜಾಗ್ರತೆ. ನೀವು ಕಾಲಿಟ್ಟಾಗ ಜಾರಿದ ಕಲ್ಲು ಕೆಳಭಾಗದಲ್ಲಿ ಇರುವವನ ಪ್ರಾಣವನ್ನೇ ತೆಗೆಯಬಹುದು. 8-ಮಳೆಗಾಲದಲ್ಲಿ ಹೋಗಲಾಗದು. ಮಾರ್ಚ್ ನಂತರ ನೀರು ಕಡಿಮೆ ಆಗಿ ಬಿಡುತ್ತೆ. ಹೀಗಾಗಿ ಅಕ್ಟೋಬರ್ ಇಂದ ಮಾರ್ಚ್ ವರೆಗೆ ಭೇಟಿಗೆ ಸೂಕ್ತ ಸಮಯ. -ಮಂಜು ಮಳಗುಳಿ


