

Lovely darlingಗೆ 75 ವರ್ಷ ಆಯ್ತು. ಅವರ ಸಾರ್ಥಕತೆ ಕಾಣ್ಕೆ ನೆನಪಿಸಿಕೊಳ್ಳುವ ಎಷ್ಟೋ ಇವೆ. ಅವುಗಳನ್ನೆಲ್ಲಾ ಒಕ್ಕಡೆ ಇಟ್ಟು- ಸಂಕ್ರಾಂತಿ, ಗುಣಮುಖ, ಉಮಾಪತಿಯ ಸ್ಕಾಲರ್‍ಶಿಪ್ ಯಾತ್ರೆ- ಇಷ್ಟನ್ನು ಕಣ್ಣು ಮುಂದೆ ತಂದುಕೊಂಡರೂ ಸಾಕು, ಲಂಕೇಶ್ ಸಾಹಿತ್ಯದ ಎಲ್ಲೆಗಳನ್ನು ವಿಸ್ತರಿಸುವ ಸೃಷ್ಟಿಕರ್ತರಾಗಿ ನನಗೆ ಕಾಣುತ್ತಾರೆ. ಇವು ಕನ್ನಡಕ್ಕೆ ಬೆಲೆ ಹೆಚ್ಚಿಸಿದ ಕೃತಿಗಳು.
ತೇಜಸ್ವಿ ಅಥವಾ ರಾಮದಾಸ್ ಇಬ್ಬರಲ್ಲಿ ಯಾರೋ ಒಬ್ಬರು ಇರಬೇಕು, ಲಂಕೇಶರನ್ನು ‘ಹುಚ್ಚು ಫಿರಂಗಿ’ ಎಂದು ಕರೆಯುತ್ತಿದ್ದರು. ‘ಸಹವಾಸ ಸಹವಾಸ ಅಲ್ಲ ಕಣ್ರಿ. ಎತ್ತಗೆ ಢಮಾರ್ ಅನ್ಸುತ್ತೊ ಗೊತ್ತಾಗಲ್ಲ. ನಮ್ಮ ಕಡೇನೂ ಬೀಳಬಹುದು ಬಾಂಬು’ ಅಂತಿದ್ದರು. ಈ ಲೇವಡಿಯಲ್ಲಿ ಸತ್ಯವೂ ಇದೆ. ಲಂಕೇಶರ ವ್ಯಕ್ತಿತ್ವವೂ ಇದೆ. ಲಂಕೇಶ್ ಒಂದು ಎನರ್ಜಿ ಆಗಿದ್ದರು. ‘ಎತ್ತಗೆ ಢಮಾರ್ ಅನ್ಸುತ್ತೊ ಗೊತ್ತಾಗಲ್ಲ’ ಇದೂ ನಿಜವೇ ಅಂದರೆ ಲಂಕೇಶ್ ತರ್ಕಾತೀತರಾಗಿದ್ದರು. ನೀವು ಇಂಗ್ಲಿಷ್‍ನಲ್ಲಿ unpredictable ಅಂತೀರಲ್ಲ ಅದು. ಇದನ್ನು ನಾನು ಬಹಳ ಹಿಂದೆಯೇ ಸಭ್ಯವಾಗಿ ಬರೆದಿದ್ದೆ- ಮುಸ್ಸಂಜೆ ಕಥಾಪ್ರಸಂಗದ ಮೊದಲ ಆವೃತ್ತಿಗೆ ಬೆನ್ನುಡಿ.
ಆ ನುಡಿಗಳ ಅಂದಾಜು ಹೀಗಿದೆ- ‘ಲಂಕೇಶರನ್ನು ಇಷ್ಟೇ ಎಂದು ಹೇಳಿ ಅಂದರೆ ಕತೆಗಾರ, ಕಾದಂಬರಿಕಾರ, ಕವಿ, ನಟ ಇನ್ನೂ ಹತ್ತಾರು ಪಟ್ಟಿಕೊಟ್ಟು ಕಟ್ಟು ಹಾಕಿದರೆ ಮೂರ್ಖತನವಾಗುತ್ತದೆ. ತರ್ಕಾತೀತವಾದ ಸೃಷ್ಟಾತ್ಮಕತೆ ಇದು’- ಬಹುಶಃ ಹೀಗೆ ಇರಬೇಕು, ಬರೆದಿದ್ದೆ. ನನಗೆ ಅರ್ಥವಾಗದೇ ಇರುವುದು ಎಂದರೆ ಈ ಎನರ್ಜಿಯ ಚೈತನ್ಯ ಉಕ್ಕಿ ಹರಿಯಲು ಲಂಕೇಶ್‍ಗೆ ಒಂದು ಹುಲ್ಲುಕಡ್ಡಿಯಾದರೂ ವೈರಿಯಾಗಿ ಅವರ ಎದುರಿಗೆ ಬಂದು ತಲೆಕುಣಿಸಬೇಕಿತ್ತು! ತೊಡೆತಟ್ಟಬೇಕಿತ್ತು! ಇದು ಯಾಕೆ ಅಂತ ನನಗೆ ಈಗಲೂ ಅರ್ಥವಾಗ್ತಿಲ್ಲ.ಯಾವುದೇ ಭಾಷೆಯ ಯಾವುದೇ ಲೇಖಕರು ಬಹುತೇಕ ಬಾಲ್ಯವನ್ನೆ ಬಂಡವಾಳ ಮಾಡಿಕೊಂಡಿದ್ದರೆ ಲಂಕೇಶ್ ಹೆಚ್ಚಾಗಿ ವರ್ತಮಾನದ ಲೇಖಕರಾಗಿದ್ದರು.
‘ಈ ಕ್ಷಣದಲ್ಲಿ ಇಡಿಯಾಗಿ ಇರುವುದೇ ಧ್ಯಾನ’ ಅಂತ ಎಲ್ಲೋ ಓದಿದ ನೆನಪು. ಇದು ನಿಜವೇ ಆದರೆ ಲಂಕೇಶ್ ಧ್ಯಾನಿಯಾಗಿದ್ದರು. ಇದೇ ಮಾತನ್ನು ಬಹಳ ಹಿಂದೆ ಆಂದೋಲನ ಪತ್ರಿಕೆಯ ವಿಸ್ತರಣೆ ಸಂದರ್ಭದಲ್ಲಿ ಹೇಳಿದ್ದೆ- ‘ಪತ್ರಿಕೋದ್ಯಮ ಕ್ಷೇತ್ರದಲ್ಲಿ ರಾಜಶೇಖರ ಕೋಟಿ ಒಂಟಿ ಕಾಲಿನ ತಪಸ್ವಿಯಾದರೆ ಲಂಕೇಶ್ ಧ್ಯಾನಿಯಂತೆ. ಈ ಇಬ್ಬರೂ ಯಶಸ್ವಿಯಾಗಿ ಅನೇಕ ಪತ್ರಿಕೆಗಳ ಹುಟ್ಟಿಗೂ ಸಾಹಸಗಳಿಗೂ ಪ್ರೇರಕರೂ ಆಗಿದ್ದಾರೆ. ಇವರೊಡನೆ ಸ್ಪರ್ಧೆಗಿಳಿಯುವವರೂ ಕೂಡ ಇವರನ್ನು ಗುರುವಾಗಿ ನೋಡಬೇಕು. ಅರ್ಜುನ ಯುದ್ಧದಲ್ಲಿ ಎದುರಾಳಿಯಾಗಿದ್ದ ದ್ರೋಣನ ಪಾದಕ್ಕೆ ನಮಸ್ಕರಿಸಿ ಯುದ್ಧ ಮಾಡಿದಂತೆ ಸ್ಪರ್ಧಿಸಬೇಕು’ ಎಂದಿದ್ದೆ.
ಈ ಕೃತಜ್ಞತೆಯು ಪತ್ರಿಕೋದ್ಯಮ ಕ್ಷೇತ್ರಕ್ಕೆ ಇರಬೇಕಾಗಿದೆ. ಜೊತೆಗೆ ಲಂಕೇಶರದು ಎಚ್ಚರದ ತೀಕ್ಷ್ಣ ಪ್ರಜ್ಞೆ ಕೂಡ. ಹಾಗಾಗಿ ತನ್ನ ಕಾಲಮಾನದ ಸಮುದಾಯವನ್ನು ಎಚ್ಚರಿಸುತ್ತಿದ್ದರು, ಪ್ರಭಾವಿಸುತ್ತಿದ್ದರು. ಈ ಬಗೆಯಲ್ಲಿ ವರ್ತಮಾನದ ತಲ್ಲಣಗಳಿಗೆ ಪ್ರತಿಕ್ರಿಯಿಸಿ ಪ್ರಭಾವಿಸಿದ ಲೇಖಕ ಕನ್ನಡದಲ್ಲಿ ಇವರೊಬ್ಬರೇ ಅನ್ನುವಷ್ಟು ಪ್ರಭಾವಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಇವರ ಕಾಣ್ಕೆ ಅಂದರೆ-ಸಮಾಜವು ದಲಿತರನ್ನು ಅವಮಾನಿಸಿ ನೋಡುತ್ತಿತ್ತು, ಮುಸ್ಲಿಮರನ್ನು ಅನುಮಾನಿಸಿ ನೋಡುತ್ತಿತ್ತು- ಲಂಕೇಶ್ ಇವೆಲ್ಲವನ್ನೂ ಆರೋಗ್ಯಕರವಾಗಿ ನೋಡುವ ಒಂದು ನೋಟ ಕೊಟ್ಟರು. ಮತ್ತು ಇಷ್ಟೇ ಅಲ್ಲ. ಒಂದು ಜೋಕ್ ಹೇಳುವೆ. ಲಂಕೇಶ್ ಯಾವಾಗಲೂ ಜಯಮಾಲರನ್ನು ‘ನನ್ನ ತಮ್ಮ’ ಎಂದು ಬರೆದುಕೊಳ್ಳುತ್ತಿದ್ದರು. ಇದನ್ನು ಚೇಷ್ಟೆ ಮಾಡಬೇಕು ಅನ್ನಿಸಿತು ನನಗೆ. ಪತ್ರಿಕೆಯ ಪ್ರಶ್ನೋತ್ತರ ವಿಭಾಗಕ್ಕೆ ಒಂದು ಹುಡುಗಿ ಹೆಸರಲ್ಲಿ ಒಂದು ಪ್ರಶ್ನೆ ಕಳಿಸಿದೆ. ಆದರೆ ನಾನೇ ಈ ಪ್ರಶ್ನೆ ಕಳಿಸಿದ್ದು ಎಂದು ಜೊತೇಲಿ ಬರೆದಿದ್ದೆ. ಪ್ರಶ್ನೆ ಈ ರೀತಿ: ಜಯಮಾಲರನ್ನು ನೀವು ತಮ್ಮ ಎಂದು ಕರೆಯುವಂತೆ ನಾನು ನಿಮ್ಮನ್ನು ಅತ್ತೆ ಅಂದರೆ ಲಂಕೇಶತ್ತೆ ಎಂದು ಕರೆಯಬಹುದೆ? ನಾನು ಬಹುಮಾನಿತ ಪ್ರಶ್ನೆಯಲ್ಲಿ ಆಯ್ಕೆಯಾಗಬಹುದು ಎಂದು ನಿರೀಕ್ಷೆಯಲ್ಲಿ ಇದ್ದರೆ ಲಂಕೇಶ್ ಪ್ರಶ್ನೆಯನ್ನು ರೂಪಾಂತರಿಸಿಬಿಟ್ಟಿದ್ದರು! ಅವರ ಪ್ರಶ್ನೆಯ ರೂಪಾಂತರ: ನಾನು ನಿಮ್ಮನ್ನು ಆಂಟಿ ಎಂದು ಕರೆಯಬಹುದೇ? ಉತ್ತರ: ಆಂಟಿ (Aunty) ಎಂದು ಕರೆಯಿರಿ, ಆದರೆ ಯ್ಯಾಂಟಿ (Anti) ಆಗದಿದ್ದರೆ ಸಾಕು. ಲಂಕೇಶ್ ಪ್ರಶ್ನೆಯನ್ನು ಮುಚ್ಚಿಹಾಕಿಬಿಟ್ಟಿದ್ದರು.
ನಾನು ‘ಲಂಕೇಶತ್ತೆ’ ಎಂಬುದನ್ನು ಲಂಕೇಶ್ ಪತ್ರಿಕೆ ಕಛೇರಿಯಲ್ಲಿ ಬಿತ್ತನೆ ಮಾಡಬೇಕೆಂದಿದ್ದೆ! ಆದರೆ ಲಂಕೇಶ್ ಪತ್ರಿಕೆ ಕಛೇರಿಯ ಮೇಲೆ ನನಗೆ ವಿಶ್ವಾಸ ಬರಲಿಲ್ಲ. ಕಛೇರಿ ಸಿಬ್ಬಂದಿ ನಾಡಿನಾದ್ಯಂತ ‘ಲಂಕೇಶತ್ತೆ’ ಮಾಡಿಬಿಡಬಹುದೆಂಬ ಆತಂಕದಿಂದ ಆಗ ಸುಮ್ಮನಾದೆ. ಅದೇ ತಲ್ಲಣಕ್ಕೆ ಬಂದರೆ ಲಂಕೇಶ್ ತಲ್ಲಣಿಸುವ ಜೀವ. ಅವರು ತೀರಿಕೊಂಡಮೇಲೆ ನಾಡಿನ ತಲ್ಲಣ ಯದ್ವಾತದ್ವಾ ಹೆಚ್ಚಾಗಿಬಿಟ್ಟಿವೆ. ಯಾರು ಏನೇ ಮಾಡಿದರೂ ಎರಡೆರಡು ಸಲ ಯೋಚನೆ ಮಾಡಿ ಮಾಡಬೇಕಾದ ಭಯವನ್ನು ಅವರ ಇರುವಿಕೆ ಉಂಟುಮಾಡಿತ್ತು. ಈ ಭಯದಿಂದಾಗಿ ಒಳ್ಳೇದು, ಕೆಟ್ಟದೂ ಎರಡೂ ಆಗಿದೆ. ಆದರೆ ಆಗಿರುವ ಒಳ್ಳೇದರ ಮುಂದೆ ಕೆಟ್ಟದು ನಗಣ್ಯ. ಲಂಕೇಶ್ ಇದ್ದಿದ್ದರೆ ಹಂಪಿಯಲ್ಲಿ ಭೂತಕಾಲದ ಸ್ಮಶಾನ ನಿರ್ಮಿಸಲು ಹೊರಟಿರುವ ಸರ್ಕಾರ ಸ್ವಲ್ಪ ತಡೆದು ನಿರ್ಧಾರ ತೆಗೆದುಕೊಳ್ಳುತ್ತಿತ್ತೇನೊ. ಮತಾಂತರ ನಿಷೇಧ ಕಾನೂನು ತರುವ ಸರ್ಕಾರದ ಬಯಕೆ ಸ್ವಲ್ಪವಾದರೂ ಅಳುಕುತ್ತಿತ್ತೇನೊ. ಈ ಮಠಾಧಿಪತಿಗಳು, ಸ್ವಾಮೀಜಿಗಳು ಕೆಲವರು ಮತಾಂತರ ನಿಷೇಧಕ್ಕೆ ಒತ್ತಾಯಿಸುತ್ತಾರೆ. ಸ್ವಜಾತಿ ಮದುವೆ ಧರ್ಮಬಾಹಿರ ಎಂದಾಗಲಿ ಅಥವಾ ಸರ್ವಜಾತಿಗೂ ನಮ್ಮ ಮಠದಲ್ಲಿ ಪರ್ಯಾಯ ಪೀಠಾಧಿಪತಿ ಸ್ಥಾನಮಾನ ಇದೆಯೆಂದಾಗಲಿ ತಾತ್ವಿಕ ಮಟ್ಟದಲ್ಲಾದರೂ ನಿರ್ಣಯಿಸಿ ಹೇಳದೆ, ಮತಾಂತರ ನಿಷೇಧ ಆಗಲಿ ಎಂದು ಹೇಳುವವರನ್ನು ಮನುಷ್ಯರು ಎಂದು ಕರೆಯಲು ಕಷ್ಟವಾಗುತ್ತದೆ. ಅಥವಾ ಪ್ರೇತಗಳು ಎಂದು ಕರೆಯುವುದಕ್ಕೆ ಮನಸ್ಸಾಗದು. ಇಂಥ ಸಂದಿಗ್ಧ ಸ್ಥಿತಿಯನ್ನು ಸರ್ಕಾರವೂ ಮಠಾಧಿಪತಿಗಳು ತಂದೊಡ್ಡಬೇಡಿ ಎಂದು ಪ್ರಾರ್ಥಿಸುವೆ. ಲಂಕೇಶ್ ಇದ್ದಿದ್ದರೆ ‘ಗೋಹತ್ಯೆ ನಿಷೇಧ’ ಎಂಬ ನರಹತ್ಯೆ ಹಿಡೆನ್ ಅಜೆಂಡಾ ಕಾನೂನು ಬಗ್ಗೆ ಹೇಗೆ ಗ್ರಹಿಸುತ್ತಿದ್ದರು, ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎಂದು ಒಂದು ಕ್ಷಣ ನೋಡಿದರೆ ನನಗೆ ಹೀಗೆ ಅನ್ನಿಸುತ್ತೆ: ಲಂಕೇಶ್ ಗೋಮಾಂಸ ಸೇವನೆಗೆ ‘ವಾಜಪೇಯಿ ಖಾದ್ಯ’ ಎಂದು ಹೆಸರಿಟ್ಟು ರಾಜ್ಯದ ತುಂಬಾ ಪ್ರಸಿದ್ಧಿಗೆ ತಂದು ಸಮಸ್ಯೆ ಬಗೆಹರಿಸುತ್ತಿದ್ದರು ಅನ್ನಿಸುತ್ತದೆ. ಯಜ್ಞಯಾಗಗಳಲ್ಲಿ ಗೋಮಾಂಸ ಅರ್ಪಿಸುತ್ತಿದ್ದುದ್ದರಿಂದಲೂ, ವಾಜಪೇಯಿ ಗೋಮಾಂಸ ಸೇವನೆ ಮಾಡಿದರೆಂಬ ಸುದ್ದಿ ಎಲ್ಲವೂ ಕೂಡಿ ಈ ಒಂದು ಪದದೊಳಗೆ ಇರುತ್ತಿತ್ತು. ಕೊನೆಯದಾಗಿ, 80ರ ದಶಕದಲ್ಲಿ ನಡೆದ ಮೀಸಲಾತಿ ಸೆಮಿನಾರ್‍ನಲ್ಲಿ ಲಂಕೇಶ್ ‘ದಲಿತರು ಈ ಸಮಾಜದ ಕಡೆ ನೋಡುತ್ತಿರುವುದು ಪ್ರೀತಿಗಾಗಿ ಕೂಡ. ಇದಕ್ಕೆ ‘ಒಂದು ಮುಗುಳ್ನಗೆ ಸಾಕು’ ಎಂದಿದ್ದರು. ಆ ಸೆಮಿನಾರ್ ವಿವರಗಳು, ಒತ್ತಾಯಗಳು ಎಲ್ಲವೂ ಇಂದು ಮರೆತುಹೋಗಿದೆ. ಆದರೆ ಅವರ ನುಡಿ ‘ಒಂದು ಮುಗುಳ್ನಗೆ ಸಾಕು’ ಎಂಬುದು ಲಂಕೇಶ್ ಮುಗುಳ್ನಗೆಯಾಗಿಯೂ ನಮ್ಮೊಡನೆ ಇದೆ.[‘ಎದೆಗೆ ಬಿದ್ದ ಅಕ್ಷರ’ ಸಂಗ್ರಹದ ಒಂದು ಆಯ್ದ ಬರಹ]
