ಶಿವಗಿರಿಯ ಗುರು ಸಮಾಧಿ—
1904ರಲ್ಲಿ ನಾರಾಯಣ ಗುರುಗಳಿಗೆ ಮಧ್ಯ ತಿರುವಾಂಕೂರಿನಲ್ಲಿದ್ದ ವರ್ಕಳ ಎಂಬ ಪ್ರದೇಶದ ಸಂಪರ್ಕವಾಗುತ್ತದೆ. ಇದನ್ನೇ ಮುಂದೆ ಶಿವಗಿರಿ ಎಂದು ಕರೆಯಲಾಯಿತು. ಈ ಬೆಟ್ಟ ಪ್ರದೇಶದಲ್ಲಿ ನಾರಾಯಾಣ ಗುರುಗಳು ಒಂದು ಪರ್ಣ ಶಾಲೆಯನ್ನು ನಿರ್ಮಿಸಿ ಅಲ್ಲೇ ವಾಸ ಮಾಡಲಾರಂಬಭಿಸಿದರು. ವಿವಿಧ ಜಾತಿಯ ಗಿಡ , ಮರ, ಬಳ್ಳಿ, ಔಷದೀಯ ಸಸ್ಯಗಳನ್ನು ಬೆಳೆಸಿದರು. ಕ್ರಮೇಣ ಈ ಪ್ರದೇಶವೇ ತನ್ನ ಮುಂದಿನ ಕಾರ್ಯಕ್ಷೇತ್ರವಾಗಲು ಸೂಕ್ತವೆಂದು ಸುಮಾರು 100ಎಕ್ರೆಗೂ ಮಿಕ್ಕಿದ ಜಾಗವನ್ನು ಸರಕಾರದಿಂದ ಪಡೆದುಕೊಂಡರು. ಒಂದು ಮಠವನ್ನು, ಶಿವಾಲಯವನ್ನು ನಿರ್ಮಿಸಲಾಯಿತು. 1912ರ ಮೇ ತಿಂಗಳಲ್ಲಿ ಶಾರದಾ ಮಂದಿರದ ಸ್ಥಾಪನೆ, ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಾಯಿತು. ಸಂಸ್ಕೃತ ಶಾಲೆ ,ಆಂಗ್ಲ ಶಾಲೆ ,ಕೈಗಾರಿಕ ಕೇಂದ್ರಗಳ ಸ್ಥಾಪನೆಗೆ ಆರಂಭವಾಯಿತು. ಮಹಾತ್ಮಾ ಗಾಂಧಿ ,ವಿಶ್ವ ಕವಿ ರವೀಂದ್ರನಾಥ ಟಾಗೂರ್, ವಿನೋಬಾ ಭಾವೆ , ಸಿ.ರಾಜಗೋಪಾಲಚಾರಿ ಮೊದಲಾದವರು ಶಿವಗಿರಿಗೆ ಭೇಟಿ ಯಿತ್ತು ಗುರುಗಳ ಆಶೀರ್ವಾದ ಪಡೆದಿದ್ದಾರೆ. ಶಿವಗಿರಿ ಈಳವರ ತೀರ್ಥಕ್ಷೇತ್ರ ವಾಯಿತು.
ಯಾತ್ರಾರ್ಥಿಗಳು ಶ್ರೀ ಕೃಷ್ಣ ಮತ್ತು ಗೌತಮ ಬುದ್ಧ ಧರಿಸುತ್ತಿದ ಹಳದಿ ಸಾದಾ ಬಟ್ಟೆಯನ್ನು ಧರಿಸುವುದು ಉತ್ತಮವೆಂದು ಸಲಹೆಯಿತ್ತರು. ಇಂದಿಗೂ ನಾರಾಯಣ ಗುರುಗಳ ಭಕ್ತರು ಹಳದಿ ಬಟ್ಟೆಯನ್ನು ಧರಿಸುವುಧು ಕಂಡು ಬರುತ್ತಿದೆ. ನಾರಾಯಣ ಗುರುಗಳು ತನ್ನ ಕೊನೆಯ ದಿನಗಳನ್ನು ಶಿವಗಿರಿಯಲ್ಲಿಯೇ ಕಳೆದರು. ಅವರನ್ನು ಸಂಜೆ ವಿಹಾರಕ್ಕೆ ಕರೆದೊಯ್ಯುತ್ತಿದ್ದ ಸೈಕಲ್ ರಿಕ್ಷಾ ಈಗಲೂ ಶಿವಗಿರಿಯಲ್ಲಿದೆ. ಇಂದಿಗೆ 90ವರ್ಷಗಳ ಹಿಂದೆ 1928ನೇ ಇಸವಿ ಸೆಪ್ಟೆಂಬರ್ 20ನೇ ತಾರೀಕು, ಕನ್ಯಾ ತಿಂಗಳ 5ನೇ ದಿನ , ಕೇರಳದ ವರ್ಕಲದ ಶಿವಗಿರಿಯಲ್ಲಿ ಒಂದು ಬೆಳಕು ನಂದಿ ಉರಿಯಿತು. ಇಂದಿಗೂ ಉರಿಯುತ್ತಿದೆ. ಅದೇ ‘ಗುರುಸಮಾಧಿ’. ಅಂದು ಸಂಜೆ ವೈದಿಕ ಮಠದಲ್ಲಿ ಮಲಗಿಕೊಂಡು ಹೇಳಿದರಂತೆ,ಕನ್ಯಾ ತಿಂಗಳು 5 ಹೋಗುವ ದಿನ ಯಾತ್ರೆಗೆ ಒಳ್ಳೆಯ ದಿನ ಅಂದು ಎಲ್ಲರಿಗೂ ಊಟ ಹಾಕಬೇಕು. ಸಮಾಧಿಯ ದಿನ ಬೆಳ್ಳಿಗೆ ‘ನನ್ನನು ಎಬ್ಬಿಸಿ ಕೂರಿಸಿ ಯೋಗ ವಾಸಿಷ್ಠ ಪಾರಾಯನ ಮಾಡಿ’. ಹಾಗೆಯೇ ಮಾಡಲಾಯಿತು. ಪಾರಾಯಣ ಮೋಕ್ಷ ಕಾಂಡಕ್ಕೆ ಬರುವಾಗ ಗುರುಗಳ ಪ್ರಾಣಪಕ್ಷಿ ಹಾರಿಹೋಯಿತು. ಅವರು ಬದುಕಿರುವಾಗ ಹೇಳಿದಂತೆ ಶಿವಗಿರಿಯ ಶಿಖರದಲ್ಲಿ ಪದ್ಮಾಸನದಲ್ಲಿ ಕೂರಿಸಿ ಕರ್ಪುರ ಭಸ್ಮ,ಪುಷ್ಪಗಳನ್ನು ಹಾಕಿ ಸಮಾಧಿ ಮಾಡಲಾಯಿತು.
ಅಂದು ಬೆಳಗಿದ ಸಮಾಧಿಯ ದೀಪ ಇಂದಿಗೂ ಆರಿಲ್ಲ. ಅಲ್ಲಿ ಗುರುಮುರ್ತಿಗೆ ಪೂಜೆ ಇಲ್ಲ. ಪಾದಪೂಜೆ ಮಾತ್ರ. ಗುರುಗಳ ದೇಹಾಂತ್ಯವಾಗಿ 4 ವರ್ಷಗಳ ನಂತರ ಅಲ್ಲಿ ಭವ್ಯ ಸಮಾಧಿ ಕಟ್ಟಲಾಯಿತು. ಎನ್.ಪಿ.ಮುತ್ತೆಡರ್ ಎಂಬ ಪಾಲಕ್ಕಾಡಿನ ರೈಲ್ವೇ ಕಾಂಟ್ರಾಕ್ಟರ್ ಒಬ್ಬರು ಈ ಸಮಾಧಿಯನ್ನು ಕಟ್ಟಿಸಿಕೊಂಡಿದ್ದಾರೆ. ಅವರು ತುಂಬಾ ಕಷ್ಟದಲ್ಲಿದ್ದಾಗ ಅವರ ಹೆಂಡತಿ ‘ಗುರುಗಳಲ್ಲಿ ಹೋಗಿ ಕೇಳಿ ಏನಾದರೂ ಕೊಟ್ಟರು ಕಷ್ಟವನ್ನು ಹೇಳಿ’ ಎಂದಳು. ಹಾಗೆ ಮುತ್ತೆಡರ್ ಬಂದು ಕೇಳಿದಾಗ ಗುರುಗಳು ಒಂದು ಬೆಳ್ಳಿಯ ನಾಣ್ಯವನ್ನು ನೀಡಿದರಂತೆ. ಊಟಕ್ಕೆ ಗತಿ ಇಲ್ಲದ ಹೊತ್ತಿನಲ್ಲಿ ನೀಡಿದ ನಾಣ್ಯದಿಂದ ಆತ ನೆಲಕಡಲೆ ವ್ಯಾಪಾರ ಮಾಡಿದ. ಹಣ ಆಯಿತು. ಕಾಂಟ್ರಾಕ್ಟರ್ ಆದ. ಆದರೆ ವಿಶೇಷವೆಂದರೆ ಎಲ್ಲೂ ಆತನ ಹೆಸರನ್ನು ನಮೂದಿಸಿಲ್ಲ. ಈಗಲೂ ಅಲ್ಲಿ ‘ಮಕ್ಕಳಾಗದವರು ತುಲಾಭಾರ ಹರಕೆ ಹೇಳಿಕೊಂಡರೆ ಮಕ್ಕಳಾಗುವುದು’ ಎಂಬ ನಂಬಿಕೆಯಿದೆ.
ಇಂತಹ ಐತಿಹ್ಯಗಳು ಸಾಕಷ್ಟಿವೆ. ಅರವೀಪುರದಲ್ಲಿ ಕೋಂದಿ ಮೇಸ್ತ್ರಿ ಎಂಬುವರು ತೋಡಿದ ಅವಳಿ ಬಾವಿಗಳು, ಕ್ರೈಸ್ತ ಧರ್ಮೀಯರಾದ ಮರಿಯನ್ ಚಟ್ಟಾಂಬಿ ನೀಡಿದ ಸುಬ್ರಹ್ಮಣ್ಯ ದೇವರ ನವಿಲು, 1903ರಲ್ಲಿ ಬ್ರಿಟಿಷರ ಕಾಲದಲ್ಲಿ ಆರಂಭವಾದ ಯೋಗಪೀಠದ ಕಟ್ಟೆ, ಹಲಸಿನ ಮರ ಈಗಲೂ ಇದೆ. 1956ರಲ್ಲಿ ಪ್ರಧಾನಿ ಜವಹರಲಾಲ್ ನೆಹರೂ, 1982 ಇಂದಿರಾಗಾಂಧಿ ಶಿವಗಿರಿಯ ತೀರ್ಥಾಟನೆಗೆ ಬಂದಿದ್ದ ದಾಖಲೆಗಳಿವೆ. ಇಂದಿರಾಗಾಂಧಿಯವರು ಹೇಳಿದರಂತೆ ‘ಇಂತಹ ಮಹಾತ್ಮರನ್ನು ಲೋಕ ಇದುವರೆಗೆ ತಿಳಿಯದೆ ಹೋಯಿತಲ್ಲಾ?’ ಶಿವಗಿರಿಯಲ್ಲಿ ಗುರು ಸಮಾಧಿ ಬೆಳಗುತ್ತಿದೆ. ಆದರೆ ಗುರುಗಳ ಆಸೆಗಳು, ತತ್ವಗಳು ಸಮಾಧಿಯಾಗಬಾರದು ಎಂಬುದು ನಮ್ಮ ಆಶಯವಾಗಬೇಕು. ಕೇರಳ ತಿರುವನಂತಪುರ ವರ್ಕಲದ ಉನ್ನತ ಶಿಖರಾಗ್ರದಲ್ಲಿರುವ ಶಿವಗಿರಿಯ ಗುರುಗಳ ಸಮಾಧಿ ಮಂದಿರ, ಬ್ರಹ್ಮ ವಿದ್ಯಾಲಯದ, ಶಾರದಾ ಮಂದಿರ ಮೊದಲಾದವುಗಳೆಲ್ಲವೂ, ಯಾವ ತೀರ್ಥಕ್ಷೇತ್ರಕ್ಕೂ ಕಡಿಮೆಯಿಲ್ಲ. 2000 ವರ್ಷಗಳಷ್ಟು ಹಳೆಯದಾದ ವರ್ಕಳ ಜನಾರ್ಧನ ಸ್ವಾಮಿ ದೇವಸ್ಥಾನವು ಅದಾಗಲೇ ಒಂದು ಪವಿತ್ರ ತೀರ್ಥ ಕ್ಷೇತ್ರವೆಂದೆನಿಸಿ, ದಕ್ಷಿಣದ ಕಾಶಿ ಎಂದೂ ಕರೆಯಲ್ಪಟ್ಟಿದ್ದರಿಂದ, ನಾರಾಯಣ ಗುರುಗಳು ಶಿವಗಿರಿಯನ್ನು ತೀರ್ಥಕ್ಷೇತ್ರವೆಂದು ಘೋಷಣೆ ಮಾಡಲು ದೀರ್ಘಕಾಲದವರೆಗೆ ಮನಸ್ಸು ಮಾಡಿರಲಿಲ್ಲ. 18-01-1928ರಲ್ಲಿ ಗುರುಗಳು ‘ವೈಕಂ’ಗೆ ಪ್ರಯಾಣಿಸುತ್ತಿದ್ದವರು, ಕೊಟ್ಟಾಯಂನಲ್ಲಿ ಉಳಕೊಂಡಿದ್ದರು. ಅಲ್ಲಿಯೇ ಸಮೀಪದ ‘ನಾಗಪಾದಂ ದೇವಸ್ಥಾನದ’ ಅಂಗಳದಲ್ಲಿ ಬೀಸುತ್ತಿರುವ ತಂಗಾಳಿಯನ್ನು ಆಸ್ವಾದಿಸುತ್ತಾ ಮಾವಿನ ಮರದ ಬುಡದಲ್ಲಿ ವಿರಮಿಸುತ್ತಿದ್ದರು. ಆ ದಿನಗಳಲ್ಲಿ ಗುರುಗಳು ಎಲ್ಲಿಗೆ ಹೋದರೂ ಜನರು ತಂಡೋಪತಂಡವಾಗಿ ಅವರನ್ನು ಕಾಣಲು ಬರುತ್ತಿದ್ದರು. ಗುರುಗಳ ದರ್ಶನದಿಂದ ಅವರು ತಮ್ಮ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಿದ್ದರು. ರೋಗರುಜಿನಗಳಿಗೆ ಗುರುಗಳಿಂದ ಗಿಡಮೂಲಿಕೆಯ ಮದ್ದನ್ನೂ ಪಡೆದು ,ತೃಪ್ತರಾಗಿ ಹಿಂತಿರುಗುತ್ತಿದ್ದರು.
ಗುರುಗಳು ಬಂದವರೊಂದಿಗೆ ನಾನಾ ವಿಚಾರಗಳ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಜನರ ಸಂದೇಹಗಳಿಗೆ ಸಮರ್ಪಕವಾದ ಉತ್ತರವನ್ನೂ ನೀಡುತ್ತಿದ್ದರು. ಸಲಹೆ,ಸೂಚನೆ ಪರಿಹಾರಗಳನ್ನು ನೀಡುತ್ತಿದ್ದರು. ಅಂತಹ ಒಂದು ಸಂಧರ್ಭದಲ್ಲಿ ಅದೇ ಮಾವಿನ ಮರದ ಬುಡದಲ್ಲಿ ಕುಳಿತುಕೊಂಡು ಯಾವುದೋ ದೀರ್ಘ ಚಿಂತನೆಯಲ್ಲಿದ್ದರು. ಗುರುಗಳ, ಈ ಪ್ರಯಾಣದಲ್ಲಿ ಅವರ ಅನುಯಾಯಿ ಭಕ್ತರಾದ ವಲ್ಲಭಸ್ಸೇರಿ ಗೋವಿಂದನ್ ವೈದ್ಯರ್, ಟೀ ಕೆ ಕಿಟ್ಟನ್, ತಮ್ಮ ಇನ್ನಿತರ ಸಹಚರರೊಂದಿಗೆ ಆಗಮಿಸಿದ್ದರು. ಇವರೆಲ್ಲಾ ಮೊದಲೇ ಮಾತುಕತೆ, ಚರ್ಚೆ, ಸಮಾಲೋಚನೆಗಳನ್ನೆಲ್ಲಾ ನಡೆಸಿ,ಶಿವಗಿರಿಯನ್ನು ಈಳವರ ತೀರ್ಥಕ್ಷೇತ್ರವನ್ನಾಗಿ ಘೋಷಣೆ ಮಾಡಬೇಕೆಂಬ ತೀರ್ಮಾನಕ್ಕೆ ಬಂದವರಾಗಿದ್ದರು. ಇದಕ್ಕೆ ಗುರುಗಳು ಸಮ್ಮತಿಯನ್ನೀಯಬೇಕಿತ್ತು. ಆದರೆ ಗುರುಗಳು ಒಂದು ನಿಶ್ಚಿತ ಜಾತಿಯ ತೀರ್ಥಕ್ಷೇತ್ರವೆಂದು ಘೋಷಿಸಲು ಒಪ್ಪಲಿಕ್ಕಿಲ್ಲ ವೆಂಬ ಅನುಮಾನ ಅವರಿಗಿತ್ತು. ಅದಲ್ಲದೆ ವರ್ಕಳವು ಈಗಾಗಲೇ ಜನಾರ್ಧನ ದೇಗುಲವಿರುವ ತೀರ್ಥಕ್ಷೇತ್ರವಾಗಿರುವುದರಿಂದ, ತಮ್ಮ ನಿರ್ಣಯಕ್ಕೆ ಸರಿಯಾಗಿ ಸ್ಪಂದಿಸಲಾರರು ಎಂಬ ಯೋಚನೆಯೂ ಇತ್ತು. ಯಾವುದೇ ಒಂದು ವ್ಯಕ್ತಿ ಆಕಸ್ಮಿಕವಾಗಿ ಒಂದು ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದವರಾಗಿ, ತನ್ನ ಸಮಾಜ ಸುಧಾರಣಾ ಕಾರ್ಯವನ್ನು,ಈಳವ ಸಮಾಜವನ್ನು ಪ್ರಥಮ ಗುರಿಯಾಗಿಟ್ಟು ಕಾರ್ಯ ಪ್ರವೃತ್ತರಾಗುವುದು ಅನಿವಾರ್ಯವಾಗಿತ್ತು. ಅವರು ಸ್ವಾಮಿ ವಿವೇಕಾನಂದರಂತೆ, ರಾಮಕೃಷ್ಣ ಪರಮಹಂಸರಂತೆ, ಮಹಾತ್ಮಗಾಂದಿ ಮೊದಲಾದ ಸಮಾಜ ಸುಧಾರಕರಂತೆ, ಎಲ್ಲಾ ಜಾತಿ, ಮತ, ಕುಲ, ಲಿಂಗ ಭೇದವಿಲ್ಲದೆ ಜನರ ಹಿತವನ್ನು ಬಯಸಿದ ವಿಶ್ವಮಾನವತಾವಾದಿಯಾಗಿದ್ದರು. ಇದನ್ನೆಲ್ಲಾ ತಿಳಿದಿರುವ ವಲ್ಲಭ ಸೇರಿ ಗೋವಿಂದನ್ ವೈದರ್ ಮೊದಲಾದವರು ಭಕ್ತರೆಲ್ಲರ ಪ್ರತಿನಿಧಿಗಳಾಗಿ ಶಿವಗಿರಿಯನ್ನು ತೀರ್ಥಕ್ಷೇತ್ರವನ್ನಾಗಿ ಘೋಷಣೆ ಮಾಡಬೇಕೆಂಬ ಭಾವನೆಗಳನ್ನು ವ್ಯಕ್ತಪಡಿಸಿ ನಡೆಸಿದ ಸಂಭಾಷಣೆಯ ಸಾರಾಂಶ ಹೀಗಿತ್ತು.
ಈ ಸಂಭಾಷಣೆಯಲ್ಲಿ, ಗುರುಗಳು ಮಧ್ಯ ಮಧ್ಯದಲ್ಲಿ ಪ್ರಶ್ನಿಸಿ ತನ್ನ ಸಂಶಯಗಳನ್ನು ನಿವಾರಿಸಿಕೊಳ್ಳುತ್ತಿದ್ದರು ಮತ್ತು ಶಿವವಗಿರಿಯನ್ನು ಯಾವ ಬಗೆಯಲ್ಲಿ ತೀರ್ಥಕ್ಷೇತ್ರವೆಂದು ಪರಿಗಣಿಸಬಹುದೆಂದು ಸ್ಪಷ್ಟಪಡಿಸಿದರು .–_*ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರು* *ಯುವವಾಹಿನಿ (ರಿ) ಕೇಂದ್ರ ಸಮಿತಿ*