two in one- nagesh hegade artical-ಚಿತ್ರ ಬರೆಯಬಲ್ಲವರು ಬೇಕಾಗಿದ್ದಾರೆ…..!

[ಈ ಮಾಹಿತಿ ಹೆಚ್ಚು ಹೆಚ್ಚು ಜನರಿಗೆ ತಲುಪಿದಷ್ಟೂ ಒಳ್ಳೆಯದು.]

ಕನ್ನಡದ ಹೊಸ ಚಿತ್ರಕಾರರನ್ನು ಬೆಳಕಿಗೆ ತರಲೆಂದು ʼಪರಾಗ್‌ʼ ಸಂಸ್ಥೆ ರಾಷ್ಟ್ರಮಟ್ಟದ ಒಂದು ತರಬೇತಿಗೆ ಪ್ರತಿಭಾವಂತರನ್ನು ಸ್ಪಾನ್ಸರ್‌ ಮಾಡಲಿದೆ. ಚಿತ್ರಕಲೆಯಲ್ಲಿ ಆಸಕ್ತಿ ಇರುವ ಯುವಕ/ಯುವತಿಯರಿಗೆ ಈ ಮಾಹಿತಿ ತಲುಪಬೇಕು. ಅವರ ಜೀವನಕ್ಕೆ ಹೊಸ ತಿರುವು ಸಿಕ್ಕೀತು.

* ಚಿಕ್ಕ ಮಕ್ಕಳು ಓದಿಗಿಂತ ಚಿತ್ರಗಳ ಮೂಲಕವೇ ಜಗತ್ತನ್ನು ಚುರುಕಾಗಿ ಗ್ರಹಿಸುತ್ತಾರೆ. ಆದರೆ ಮಕ್ಕಳ ಕಥೆಗಳಿಗೆ, ಹಾಡುಗಳಿಗೆ ಚಿತ್ರ ಬರೆಯಬಲ್ಲವರ ತೀವ್ರ ಕೊರತೆ ನಮ್ಮಲ್ಲಿದೆ. ಮಕ್ಕಳ ಮಟ್ಟಕ್ಕೆ ಇಳಿದು ರೇಖೆಗಳ ಮೂಲಕ ಅವರನ್ನು ಮುದಗೊಳಿಸಬಲ್ಲ ಚಿತ್ರಕಾರರಿಗೆ ತುಂಬ ಬೇಡಿಕೆ ಇದೆ. ಏಕೆಂದರೆ ಈಗೀಗ, ಚಿತ್ರ, ಗ್ರಾಫಿಕ್‌, ವಿಡಿಯೊ ಮುಂತಾದ ದೃಶ್ಯ ಮಾಧ್ಯಮಗಳ ಮೂಲಕವೇ ಕತೆ ಹೇಳುವ/ಕೇಳುವ ಪ್ರವೃತ್ತಿ ಎಲ್ಲೆಡೆ ಹೆಚ್ಚಿದೆ.ಆದರೆ ಇಲ್ಲೊಂದು ಕಂದಕ ಇದೆ. ಚಿತ್ರ ಬರೆಯುವ ಪ್ರತಿಭೆ ಇದ್ದವರಿಗೆ ಮೇಲೇರುವ ಮಾರ್ಗ ಗೊತ್ತಿಲ್ಲ. ಇತ್ತ ಚಿತ್ರಗಳನ್ನು, ಮಕ್ಕಳ ಪುಸ್ತಕಗಳನ್ನು ಪ್ರಕಟಿಸಲು ಬಯಸುವವರಿಗೆ ಹೊಸ ಚಿತ್ರಕಾರರು ಎಲ್ಲಿದ್ದಾರೆಂಬುದು ಕಾಣುತ್ತಿಲ್ಲ.ಚಿತ್ರಕಾರರ ಮತ್ತು ಪ್ರಕಾಶಕರ ನಡುವಣ ಇಂಥ ಹಳ್ಳಕ್ಕೆ ಒಂದು ಏಣಿ/ಸೇತುವೆ ಕಟ್ಟಲು ʼರಿಯಾಝ್‌ ಅಕಾಡೆಮಿʼ ವರ್ಷಗಳಿಂದ ತೊಡಗಿಕೊಂಡಿದೆ. ಭಾರತದ ಪ್ರಸಿದ್ಧ ಕಲಾ ಶಿಕ್ಷಕರ ಮೂಲಕ ಪ್ರತಿಭಾವಂತ ಚಿತ್ರಕಾರರಿಗೆ ಅದು 11 ತಿಂಗಳ ಅವಧಿಯ ತರಬೇತಿ (ಸರ್ಟಿಫಿಕೇಟ್‌ ಕೋರ್ಸ್‌) ನೀಡುತ್ತಿದೆ. ನಿಮ್ಮಲ್ಲಿ ಪ್ರತಿಭೆ ಇದ್ದರೆ ರೂ. ೪೦,೦೦೦ ಶುಲ್ಕ ಕಟ್ಟಿ ಈ ಕೋರ್ಸ್‌ಗೆ ಸೇರಬಹುದು. ಆದರೆ ʼಪರಾಗ್‌ʼ ಸಂಸ್ಥೆಯ ಮೂಲಕ ಆಯ್ಕೆಯಾದ ಕನ್ನಡದ ಪ್ರತಿಭಾವಂತರಿಗೆ ಇದು ಉಚಿತ ಕೋರ್ಸ್!‌ಅಷ್ಟೇ ಅಲ್ಲ, ತರಬೇತಿಯ ಅವಧಿಯಲ್ಲಿ ನೀವು ಬರೆದ ಚಿತ್ರಗಳು ಆಯ್ಕೆಯಾಗಿ ಯಾವುದೋ ಪುಸ್ತಕದಲ್ಲೋ ಮ್ಯಾಗಝಿನ್‌ನಲ್ಲೋ ಪ್ರಕಟವಾದರೆ ಅದರ ಸಂಭಾವನೆಯಲ್ಲಿ 60% ನಿಮಗೇ ಸೇರುತ್ತದೆ.ʼರಿಯಾಝ್‌ʼ ಅಂದರೆ ಅಭ್ಯಾಸ ಅಥವಾ ತಾಲೀಮು (ಸಂಗೀತದಲ್ಲಿ ಈ ಪದ ಹೆಚ್ಚಾಗಿ ಬಳಕೆಯಲ್ಲಿದೆ. ಕ್ರಿಕೆಟ್‌ ನಲ್ಲೂ ಬೇರೆ ಒಂದು ರಿಯಾಝ್‌ ಅಕಾಡೆಮಿ ಇದೆ, ಗೊಂದಲ ಮಾಡಿಕೊಳ್ಳಬೇಡಿ).

ಮಕ್ಕಳ ಶಿಕ್ಷಣಕ್ಕಾಗಿ ಉತ್ತಮ ಕೆಲಸ ಮಾಡುತ್ತಿರುವ ಟಾಟಾ ಟ್ರಸ್ಟ್‌ ಒಡೆತನದ ʼಪರಾಗ್‌ʼ ಸಂಸ್ಥೆ ಈ ಅಕಾಡೆಮಿಯನ್ನು ಆರಂಭಿಸಿದೆ. ಅದರೊಂದಿಗೆ ಭೋಪಾಲದ ಹೆಸರಾಂತ ʼಏಕಲವ್ಯʼ ಸಂಸ್ಥೆಯೂ ರಿಯಾಜ್‌ ಅಕಾಡೆಮಿಗೆ ಕೈಜೋಡಿಸಿದೆ.ಇನ್ನೂ ವಿಶೇಷವೆಂದರೆ, ಮಕ್ಕಳ ಚಿತ್ರಕ್ಕೆ ಬಹುದೊಡ್ಡ Big Little Book ರಾಷ್ಟ್ರೀಯ ಪ್ರಶಸ್ತಿ ಪಡೆದ ಅತನು ರಾಯ್‌ (Atanu Roy) ಕೂಡ ರಿಯಾಜ್‌ಗೆ ಜೊತೆಯಾಗಿದ್ದಾರೆ. (ಕನ್ನಡ ಮಕ್ಕಳ ಸಾಹಿತ್ಯಕ್ಕೆ ಇದೇ ಪ್ರಶಸ್ತಿ ಕಳೆದ ವರ್ಷ ನನಗೆ ಸಂದಿತ್ತು).ಚಿತ್ರಕಲಾ ಪ್ರತಿಭೆ ಇರುವ ಯಾರೇ ಆದರೂ ಈ ಅಕಾಡೆಮಿಯ ಸರ್ಟಿಫಿಕೇಟ್‌ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. (ಪ್ರತಿಭೆಯೊಂದೇ ಆಯ್ಕೆಗೆ ಮಾನದಂಡ.) ಇದು ಸಂಪೂರ್ಣ ಸದುದ್ದೇಶದ, ನಿಸ್ವಾರ್ಥ ಯತ್ನವಾಗಿದ್ದು, ಚಿತ್ರಕಲೆಯಲ್ಲಿ ಆಸಕ್ತಿ ಇರುವ ಹಾಗೂ ನಿಜಕ್ಕೂ ಪ್ರತಿಭೆಯುಳ್ಳ ಕನ್ನಡ ಯುವಕ ಯುವತಿಯರು ಎಲ್ಲೇ ಇದ್ದರೂ ಅವರನ್ನು ಬೆಳಕಿಗೆ ತರಬೇಕೆಂಬುದೇ ಇದರ ಉದ್ದೇಶವಾಗಿದೆ. ಆಯ್ಕೆಯಾದರೆ ತರಬೇತಿಯ ಜೊತೆಗೆ ರಾಷ್ಟ್ರಮಟ್ಟದ ವಿವಿಧ ಕಲಾವಿದರೊಂದಿಗೆ ಪಾಠ ಹೇಳಿಸಿಕೊಳ್ಳುವ, ವಿವಿಧ ಬಗೆಯ ಬರಹಗಳನ್ನು, ಬರಹಗಾರರನ್ನು ಸಂಪರ್ಕಿಸುವ ಹಾಗೂ ಹಿಂದಿ, ಮರಾಠಿ, ಬಂಗಾಳಿ, ಇಂಗ್ಲಿಷ್‌ ಪ್ರಕಾಶನಗಳನ್ನು ತಲುಪುವ ಅವಕಾಶವೂ ಇದೆ. ಆದರೆ ನೆನಪಿಡಿ: ಅಷ್ಟಿಷ್ಟು ಇಂಗ್ಲಿಷ್‌/ಹಿಂದಿ ಜ್ಞಾನವೂ ಇದ್ದರೆ ಒಳ್ಳೆಯದು. ಮೊದಮೊದಲು ಕೇವಲ ಆನ್‌ಲೈನ್‌ ಮೂಲಕ ಕ್ಲಾಸ್‌ ನಡೆದೀತು. ವಾರಕ್ಕೆ ಇಂತಿಷ್ಟು ಚಿತ್ರಗಳನ್ನು ಬರೆಯಲೇ ಬೇಕೆಂಬ ಕಂಡೀಶನ್‌ ಇದ್ದೀತು. ಪ್ರತ್ಯಕ್ಷ ತರಬೇತಿಗೆಂದು ದೂರದ ತಾಣಗಳಿಗೆ ಪ್ರವಾಸ ಹೋಗಬೇಕಾಗಿ ಬಂದರೆ ಕೈಯಿಂದ ಖರ್ಚು ಹಾಕಿಕೊಳ್ಳಬೇಕಾಗಬಹುದು. ಅಂಥ ವಿವರಗಳಿಗೆ ಅರ್ಜಿ ಫಾರ್ಮ್‌ನಲ್ಲಿ ಹುಡುಕಿ ನೋಡಿ. ಇಲ್ಲಿ ತರಬೇತಿ ಪಡೆದ ಅನೇಕ ಕಲಾವಿದರು ಖ್ಯಾತ ಪ್ರಕಾಶನ ಸಂಸ್ಥೆಗಳ ಮೂಲಕ ಜಾಗತಿಕ ಮಾನ್ಯತೆ ಪಡೆದಿದ್ದಾರೆ. ಇವರು ರಚಿಸಿದ ಚಿತ್ರಗಳು ಹೆಸರಾಂತ ಪ್ರಕಾಶನ ಸಂಸ್ಥೆಗಳಾದ ಪ್ರಥಮ್‌ ಬುಕ್ಸ್‌, ʼಏಕಲವ್ಯʼ, ಆಗಾಖಾನ್‌ ಅಕಾಡೆಮಿ, ನ್ಯಾಶನಲ್‌ ಬುಕ್‌ ಟ್ರಸ್ಟ್‌, ʼರೂಮ್‌ಟು ರೀಡ್‌ʼ ಮುಂತಾದವುಗಳ ಪುಸ್ತಕಗಳಲ್ಲಿ ಪ್ರಕಟವಾಗಿವೆ.

ಮಕ್ಕಳ ಪುಸ್ತಕಗಳಿಗೆ ಚಿತ್ರ ಬರೆಯುವುದೆಂದರೆ ವಿಶೇಷ ಪರಿಣತಿ, ಮನೋಧರ್ಮ ಬೇಕಾಗುತ್ತದೆ. ಅಂಥ ಚಿತ್ರಗಳಲ್ಲಿ ತಮಾಷೆ ಇರಬೇಕು, ಬೆರಗಿನ ಅಂಶಗಳಿರಬೇಕು, ಲಿಂಗ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತ- ಧರ್ಮನಿರಪೇಕ್ಷ ಗುಣಗಳಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಅವು ಮಕ್ಕಳನ್ನು ಹಿಡಿದಿಡುವಂತಿರಬೇಕು. ಅವನ್ನೆಲ್ಲ ಈ ತರಬೇತಿಯಲ್ಲಿ ಕಲಿಸಲಾಗುತ್ತದೆ. ನೀವು, ಅಥವಾ ನಿಮಗೆ ಗೊತ್ತಿದ್ದ ಪ್ರತಿಭಾವಂತ ಯುವಕ-ಯುವತಿ (ಆಸಕ್ತಿ ಇದ್ದರೆ) ಇಂದೇ ಅರ್ಜಿ ಫಾರ್ಮ್‌ ತುಂಬಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜಾಸ್ತಿ ದೂರ ಇಲ್ಲ. ಇದೇ ಫೆಬ್ರುವರಿ 15ರೊಳಗೆ ಅರ್ಜಿ ತಲುಪಿರಬೇಕು. ಅರ್ಜಿಯ ಜೊತೆ ಅವರೇ ಬರೆದ ನಾಲ್ಕಾರು ಚಿತ್ರಗಳಲ್ಲೂ ಲಗತ್ತಿಸಬೇಕು. ಅರ್ಜಿ ಫಾರ್ಮ್‌ ಸಿಗುವ ಜಾಲತಾಣ: http://riyaaz.in/course/ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ: jeevithac@tatatrusts.org,ಕೊನೆಯ ದಿನ ಫೆ. ೧೫. {ಅರ್ಜಿ ಫಾರ್ಮ್ ನಲ್ಲಿ ತೋರಿಸಿದ ಇತರ ವಿಳಾಸಗಳಿಗೂ ನೀವು ಅರ್ಜಿಯನ್ನು ಸಲ್ಲಿಸಬಹುದು. ಆದರೆ ಉಚಿತ ತರಬೇತಿ ಬಯಸುವವರ ಅರ್ಜಿಗಳು ಕನ್ನಡತಿ ಸಿ. ಜೀವಿತಾ ಅವರ ಮೂಲಕ ಹೋದರೆ ಒಳ್ಳೆಯದು. ಅವರು ಟಾಟಾ ಟ್ರಸ್ಟ್‌ನವರ ಪರಾಗ್‌ ಸಂಸ್ಥೆಯ ಸಿಬ್ಬಂದಿ Jeevitha Chandrashekar]

ರಿಹನ್ನಾ-ಗ್ರೇಟಾ-ಮೀನಾ ಗ್ರೇಟಾ ಮೋದಿ ಗ್ರೇಟಾ?

[ಮೂವರು ಯುವತಿಯರು ಭಾರತ ಸರಕಾರವನ್ನು ಕಂಗೆಡಿಸಿ ದಂಗುಬಡಿಸಿ, ಭಕ್ತರ ನಿದ್ದೆಗೆಡಿಸಿದ ಕತೆ]ರೈತರ ಟ್ರ್ಯಾಕ್ಟರ್‌ಗಳು ಮತ್ತೊಮ್ಮೆ ದಿಲ್ಲಿಗೆ ಬಾರದಂತೆ, ಕೇಂದ್ರ ಸರಕಾರ ಮೊಳ ಉದ್ದ ಮೊಳೆಗಳನ್ನು, ಮೈಲುದ್ದದ ಮುಳ್ಳುಬೇಲಿಯನ್ನು ಹಾಕಿದ್ದನ್ನು ನೋಡಿ ಜಗತ್ತೇ ಬೆರಗಾಯಿತು.ಪ್ರಜಾಪ್ರಭುತ್ವದ ಬಾಯಿಗೇ ಹೊಲಿಗೆ ಹಾಕುವಂತೆ ರೈತರ ಮೊಬೈಲ್‌ಗಳಿಗೆ ಸಿಗ್ನಲ್ಲೇ ಬಾರದಂತೆ ಮಾಡಿ, ರೈತರ ಟಾಯ್ಲೆಟ್‌ಗೂ ನೀರಿಲ್ಲದಂತೆ, ಧ್ವನಿವರ್ಧಕಕ್ಕೂ ಕರೆಂಟ್‌ ಇಲ್ಲದಂತೆ ಮಾಡಿದ್ದನ್ನು ನೋಡಿ ಜಗತ್ತು ದಂಗಾಯಿತು.

“ರೈತ ಹೋರಾಟಕ್ಕೆ ನನ್ನ ಬೆಂಬಲವಿದೆ” ಎಂದು ಮೂವರು ವಿದೇಶೀ ಯುವತಿಯರು ಟ್ಟೀಟ್‌ ಮಾಡಿದ್ದೇ ತಡ, ಸರಕಾರ ಧಿಗ್ಗನೆದ್ದಿತು. ಹೀಗೆ ಟ್ವೀಟ್‌ ಮಾಡಿದ್ದೇ ಭಾರೀ ಕ್ರಿಮಿನಲ್‌ ಕೆಲಸವೆಂಬಂತೆ ದಿಲ್ಲಿ ಪೊಲೀಸರು ಎಫ್‌ಐಆರ್‌ ಹಾಕಿದರು. ಜಗತ್ತು ನಕ್ಕಿತು.ಟ್ವೀಟ್‌ ಮಾಡಿದ್ದು ಯಾರು?

1. ರೆಹನ್ನಾ ಹೆಸರಿನ ಒಬ್ಬ ಖ್ಯಾತ ಹಾಡುಗಾರ್ತಿ (ಗ್ಯಾರಿ ಸೋಬರ್ಸ್‌ ಎಂಬ ಕ್ರಿಕೆಟಿಗನ ತಾಯ್ನಾಡಾದ ಬಾರ್ಬಡೋಸ್‌ ದೇಶದವಳು). 2. ಹದಿಹರಯದ ಗ್ರೇಟಾ ಥನ್‌ಬರ್ಗ್‌ ಎಂಬ ಪರಿಸರ ಹೋರಾಟಗಾರ್ತಿ; 3ನೆಯವಳು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರ ಸೊಸೆ (ಅಡ್ವೊಕೇಟ್‌) ಮೀನಾ ಹ್ಯಾರಿಸ್‌. ʼವಿಶ್ವಗುರುʼ ಎನ್ನಿಸಿಕೊಳ್ಳಲು ಪರಿಶ್ರಮಿಸುತ್ತಿರುವ ಭಾರತ ದೇಶ ಈ ಟ್ವೀಟ್‌ಗಳನ್ನು ಕಡೆಗಣಿಸಬಹುದಿತ್ತು. ಇಷ್ಟಕ್ಕೂ ಈ ಮೂವರಲ್ಲಿ ಯಾರೂ ನಮ್ಮ ದೇಶದ ಶಾಂತಿಯನ್ನು ಕದಡುವ ಯತ್ನ ಮಾಡಲಿಲ್ಲ. ದಂಗೆ ಏಳಿರೆಂದು ಕರೆ ಕೊಟ್ಟಿಲ್ಲ. ಶಸ್ತ್ರ ಕೈಗೆತ್ತಿಕೊಳ್ಳಲು ಪ್ರಚೋದನೆ ನೀಡಲಿಲ್ಲ. ಜಗತ್ತಿನ ಯಾವ ದೇಶದಲ್ಲಾದರೂ ಅಲ್ಲಿನ ಸರಕಾರ ಕೋಟ್ಯಂತರ ಜನರ ಧ್ವನಿಯನ್ನು ಹತ್ತಿಕ್ಕುವ ಯತ್ನ ನಡೆಸಿದ್ದರೆ ಅಂತಃಕರಣ ಇರುವವರು ಯಾವ ದೇಶದವರಾಗಿದ್ದರೂ ಖಂಡಿಸುತ್ತಾರೆ. ಖಂಡಿಸಬೇಕು.

ನಾವು ಮಯನ್ಮಾರ್‌ ವಿದ್ಯಮಾನವನ್ನು ಖಂಡಿಸುತ್ತೇವೆ. ಈ ಮೂವರು ಮಹಿಳೆಯರು ತಮ್ಮ ಟ್ವೀಟ್‌ನಲ್ಲಿ ಯಾರನ್ನೂ ಖಂಡಿಸಲೂ ಇಲ್ಲ. ಸುಮ್ಮನೆ ʼಭಾರತದ ರೈತರ ಶಾಂತಿಪೂರ್ಣ ಹೋರಾಟಕ್ಕೆ ನಮ್ಮ ಬೆಂಬಲವಿದೆʼ ಎಂದರು ಅಷ್ಟೆ. ಕಳೆದ 75 ದಿನಗಳಿಂದ ಲಕ್ಷಾಂತರ ರೈತರು ತಮ್ಮ ಜಾತಿ, ಧರ್ಮ, ಭಾಷೆ, ಪಕ್ಷ ಪಂಥ ಎಲ್ಲವನ್ನೂ ಮರೆತು ಒಗ್ಗಟ್ಟಿನಿಂದ ಚಳಿಮಳೆಗೂ ಬಗ್ಗದೆ ಹರತಾಳ ಆಚರಿಸುತ್ತಿದ್ದಾರೆ. ಸುಮಾರು 120 ಜನರು ಸಾವಪ್ಪಿದ್ದಾರೆ. ಅನುಕಂಪವುಳ್ಳ ಯಾರಾದರೂ ಹೇಳುವ ಮಾತು ಅದು.ಅಷ್ಟಕ್ಕೇ ಧಿಗ್ಗನೆದ್ದ ಸರಕಾರ, ವಿದೇಶಾಂಗ ಸಚಿವರ ಮೂಲಕ “ಭಾರತದ ವಿರುದ್ಧ ಅಪ ಪ್ರಚಾರ ಕೂಡದು” ಎಂಬರ್ಥದ ಟ್ವೀಟ್‌ ಮಾಡಿಸಿತು. “ಭಾರತದ ಐಕ್ಯತೆಗೆ ಧಕ್ಕೆ ತರಲೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದ ಭಾರೀ ಕುತಂತ್ರ ಇದು” ಎಂದು ಕಪಿಲ್‌ ಮಿಶ್ರಾ ಎಂಬ ದಿಲ್ಲಿಯ ಬಿಜೆಪಿ ರಾಜಕಾರಣಿ ಘೋಷಿಸಿದರು (ಈತನ ಉದ್ರೇಕಕಾರಿ ಭಾಷಣದಿಂದಾಗಿಯೇ ಕಳೆದ ವರ್ಷ ದಿಲ್ಲಿಯಲ್ಲಿ ಕೋಮುದಂಗೆ ಭುಗಿಲೆದ್ದು 23 ಜನರು ಪ್ರಾಣ ತೆರುವಂತಾಯಿತು-ಅದಿರಲಿ). ಈ ಯುವತಿಯರ ಟ್ವೀಟ್‌ ನಿಂದ ಭಾರತದ ಐಕ್ಯತೆಗೆ ಈಗ ಅದೇನು ಧಕ್ಕೆ ಬಂತೊ? ಅಷ್ಟಕ್ಕೇ ಮುಗಿದಿದ್ದರೆ ಬೇರೆ ಮಾತಿರಲಿಲ್ಲ. ಆದರೆ , ಭಾರತ ಸರಕಾರ ಬಾಲಿವುಡ್‌ ಸ್ಟಾರ್‌ಗಳನ್ನು ಹಿಡಿದು ಅವರ ಮೂಲಕ ಮುಯ್ಯಿ ಮರುಟ್ವೀಟ್‌ ಮಾಡಿಸಲು ಮುಂದಾಯಿತು.”ಭಾರತದ ಸಾರ್ವಭೌಮತ್ವದ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಹೊರಗಿನವರು ಬೇಕಾಗಿಲ್ಲ” ಎಂಬರ್ಥದಲ್ಲಿ ಭಾರತರತ್ನದ್ವಯ ಸಚಿನ್‌ ತೆಂಡೂಲ್ಕರ್‌ ಮತ್ತು ಲತಾ ಮಂಗೇಶ್ಕರ್‌ ಸೇರಿದಂತೆ, ಕ್ರಿಕೆಟಿಗ ಕುಂಬ್ಳೆ, ವಿರಾಟ್‌ ಕೊಹ್ಲಿ, ಬಾಲಿವುಡ್‌ ನಟ ಅಕ್ಷಯ ಕುಮಾರ್‌, ಕರಣ್‌ ಜೋಹರ್‌ ಮುಂತಾದವರ ಮೂಲಕ ಆಲ್ಮೋಸ್ಟ್‌ ಏಕರೂಪದ ಟ್ವೀಟ್‌ ಮಾಡಿಸಲಾಯಿತು. ಗ್ರೇತಾ ಥನ್‌ಬರ್ಗ್‌ ವಿರುದ್ಧ ಎಫ್‌ಐಆರ್‌ ಹಾಕಿತು.ಜಗತ್ತು ಗೊಳ್ಳೆಂದು ನಕ್ಕಿತು.

ಮೂವರು ವನಿತೆಯರಿಂದ ಭಾರತ ಸರಕಾರದ ಜಂಘಾಬಲ ಉಡುಗಿತೆ? ಅಷ್ಟೊಂದು ದುರ್ಬಲವೆ ನಮ್ಮ ದೇಶ? ಕಳೆದ ವರ್ಷ ಇದೇ ದಿನಗಳಲ್ಲಿ ಅಹಮ್ಮದಾಬಾದಿನ ಕೊಳೆಗೇರಿಗಳು ಟ್ರಂಪ್‌ ಕಣ್ಣಿಗೆ ಬೀಳಬಾರದೆಂದು ಉದ್ದುದ್ದ ಗೋಡೆ ಕಟ್ಟುವ ಕೆಲಸ ನಡೆದಿತ್ತು. ಈಗ ಮುಷ್ಕರನಿರತ ರೈತರು ಮಾಧ್ಯಮಗಳ ಕಣ್ಣಿಗೆ ಬೀಳಬಾರದೆಂದು ಬಂಗಾರ ಬಣ್ಣದ ಲೋಹದ ಗೋಡೆಗಳನ್ನು, ದಿಲ್ಲಿಯ ಹೊರವಲಯದಲ್ಲಿ ನಿರ್ಮಿಸಲಾಗಿದೆ. ಚೀನಾ ಗಡಿಯಲ್ಲೂ ಕಾಣಲಾಗದ ಬಿಗಿ ಭದ್ರತೆಯನ್ನು ಹೆದ್ದಾರಿಯಲ್ಲಿ ಜಡಿದು, ಅಂಬುಲೆನ್ಸ್‌ ಕೂಡ ಓಡಾಡಲಾಗದಂತೆ ಮಾಡಲಾಗಿದೆ.ನಮ್ಮ ದೇಶದ ವಾಸ್ತವಗಳನ್ನು ಮರೆಮಾಚಲು ಹೀಗೆಲ್ಲ ಯತ್ನಿಸಿ ನಗೆಪಾಟಲಿಗೆ ತುತ್ತಾಗುವುದರಿಂದ ರಾಷ್ಟ್ರದ ಘನತೆ ಹೆಚ್ಚುತ್ತದೆಯೆ?

ಘನತೆಗೆ ವಿಶೇಷ ಮೆರುಗು ಕೊಡಲೆಂದು ಸಚಿನ್‌ ತೆಂಡೂಲ್ಕರಂಥ ಹೆಕ್ಕಿ ತೆಗೆದ ಹೀರೋಗಳ ಮೂಲಕ ಟ್ವೀಟ್‌ ಮಾಡಿಸಲು ಹೋಗಿ ಅವರನ್ನೂ ನಗೆಪಾಟಲಿಗೆ ತುತ್ತಾಗಿಸಿದ್ದು ಸರಿಯೆ? *ಇಷ್ಟೆಲ್ಲ ಕೆದಕಲು ಕಾರಣ ಏನೆಂದರೆ, ನಾನು ಗ್ರೇತಾ ಬಗ್ಗೆ ಪುಸ್ತಕ ಬರೆದಿದ್ದನ್ನು ನೆನಪಿಸಿಕೊಂಡು ಅನೇಕ ಮೋದಿಭಕ್ತರು ಇದೇ ಸುಸಂದರ್ಭವೆಂದು ನನ್ನ ಕಾಲೆಳೆಯಲು ಧಾವಿಸಿ ಬಂದರು. ಪವನಜ ಎಂಬ ನೆಟ್‌ ತಜ್ಞ “Nagesh Hegde, – ನೀವು ಈ ಹೋರಾಟಗಾರ್ತಿ ಬಗ್ಗೆ ತಾನೆ ಪುಸ್ತಕ ಬರೆದದ್ದು? ಈಗ ನೋಡಿ. ಆಕೆಯ ಬಂಡವಾಳ ಹೊರಬಿದ್ದಿದೆ” ಎಂದು ತಮ್ಮ ಗೋಡೆಯ ಮೇಲೆ ಬರೆದುಕೊಂಡರು. ಅದಕ್ಕೆ ಪ್ರತ್ಯುತ್ತರವಾಗಿ ಶ್ರೀವತ್ಸ ಜೋಷಿ ಎಂಬ ಅಮೆರಿಕದ ಅನಿವಾಸಿ ಟೆಕಿಯೊಬ್ಬರು ಗ್ರೇತಾಳನ್ನು ಮತ್ತು ನನ್ನನ್ನು ಇನ್ನಷ್ಟು ಲೇವಡಿ ಮಾಡಿದರು. “(ಗ್ರೇತಾಳದು) ಬಂಡವಾಳ ಅಲ್ಲ, ಭಂಡ ಬಾಳ್ವೆ. ಅಂಥವಳನ್ನು ಎತ್ತಿಮುದ್ದಾಡುವವರಿಗೋ ತಲೆಯಲ್ಲೇನಿದೆ ಎಂದು ಅವರಿಗೇ ಗೊತ್ತಿದ್ದಂತಿಲ್ಲ” ಎಂದರು.

ಡಾ. ಕಿರಣ್‌ ಸೂರ್ಯ ಕೂಡ “ಪುಸ್ತಕ ಬರೆಸಿಕೊಳ್ಳುವಷ್ಟು ಘನಂದಾರಿ ಕೆಲಸವನ್ನು ಆಕೆ ಮಾಡಿರಲಿಲ್ಲ. ಪುಸ್ತಕ ರಚನೆ ತೀರಾ premature ನಿರ್ಧಾರವಾಯಿತು ಎಂದು ಅನ್ನಿಸಿತ್ತು. ಈಗ ಆಕೆ ಮಾಡುತ್ತಿರುವ ತಪ್ಪುಗಳನ್ನು ವಿಧಿಯಿಲ್ಲದೇ ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ! ಬಿಸಿತುಪ್ಪ!” ಎಂದು ಕಣ್ಣೀರು ಸುರಿಸುವ ಐಕಾನ್‌ ಹಾಕಿದರು.ಈ ಮೂವರು ಗೌರವಾನ್ವಿತರೂ ಗ್ರೇತಾ ಮಾಡಿದ ತಪ್ಪು ಏನೆಂದು ಬರೆಯಲಿಲ್ಲ. ಸುಮ್ಮನೆ ಬೇರೆ ಯಾರದೋ ಉಗುಳಿದ್ದನ್ನು ಪವನಜ ತಮ್ಮ ಗೋಡೆಗೆ ಅಂಟಿಸಿಕೊಂಡು ನನ್ನನ್ನು ಹೀಗಳೆಯಲು ಬಳಸಿಕೊಂಡರು. ತನಗೆ ತುರಿಕೆ ಹತ್ತಿದಾಗಲೆಲ್ಲ ಬೇರೆಯವರ ಮೈಯನ್ನು ಕೆರೆಯಲು ಹೊರಟ ಹಾಗೆ. ಗ್ರೇತಾ ಥನ್‌ಬರ್ಗ್ ರೈತರನ್ನು ಬೆಂಬಲಿಸಿದ್ದು ತಪ್ಪೆ? ಅವಳದು ಭಂಡ ಬಾಳ್ವೆಯೆ? ‌18 ವರ್ಷದ ಆ ಹುಡುಗಿಯ ಗೌರವಾರ್ಥ ಅವಳ ದೇಶವಾದ ಸ್ವೀಡನ್ನಿನಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಲಾಗುತ್ತಿದೆ. ಅವಳಿಗೆ ಬದಲೀ ನೊಬೆಲ್‌ ಪ್ರಶಸ್ತಿ ಸಿಕ್ಕಿದೆ. ಗೌರವ ಡಾಕ್ಟರೇಟ್‌ ನೀಡಲಾಗಿದೆ. ಟೈಮ್‌ ವಾರಪತ್ರಿಕೆಯೂ ಸೇರಿದಂತೆ ಅನೇಕ ಪತ್ರಿಕೆಗಳು ಅವಳನ್ನು ಹೊಸಪೀಳಿಗೆಯ ಗಟ್ಟಿಧ್ವನಿ ಎಂದೆಲ್ಲ ಶ್ಲಾಘಿಸಿ ಎತ್ತಿ ಮೆರೆದಿವೆ. ಬ್ರಿಟನ್‌, ಫ್ರಾನ್ಸ್‌ ಮತ್ತು ಐರೋಪ್ಯ ಸಂಸತ್ತಿಗೆ, ದಾವೋಸ್‌ ಆರ್ಥಿಕ ಸಮ್ಮೇಳನಕ್ಕೆ, ಅಷ್ಟೇಕೆ ವಿಶ್ವಸಂಸ್ಥೆಯ ಮಹಾಸಭೆಗೆ ಅವಳನ್ನು ಉಪನ್ಯಾಸಕ್ಕೆ ಕರೆಸಿ ಗೌರವಿಸಲಾಗಿದೆ.ಅವಳ ಬಗ್ಗೆ ನಾನು ಪುಸ್ತಕ ಬರೆದಿದ್ದು ತೀರಾ premature ಅನ್ನಿಸಿತೆ, ಡಾಕ್ಟರ್‌ ಕಿರಣ್‌ ಸೂರ್ಯರೆ? ಆ ಹುಡುಗಿ ಮೋದಿ ಸರಕಾರವನ್ನು ಬೆಂಬಲಿಸಿದ್ದಿದ್ದರೆ ಆಗ mature ಆಗುತ್ತಿದ್ದಳೆ? ಅವಳ ನಡೆಯಲ್ಲಿ ಈಗೇನು ತಪ್ಪು ಕಾಣಿಸಿದೆ? ಅವಳದ್ದು ಭಂಡ ಬಾಳ್ವೆಯೆ ಶ್ರೀವತ್ಸ ಜೋಷಿಯವರೆ? ಅವಳನ್ನು ಎತ್ತಿ ಮುದ್ದಾಡಿದವರೆಲ್ಲರ ತಲೆ ಖಾಲಿಯೆ? ನನ್ನ ತಲೆಯಲ್ಲಿ ಹೆಚ್ಚೇನೂ ಇರಲಿಕ್ಕಿಲ್ಲ ಸರಿ. ಆದರೆ ನಾನು ಹಿಂದೆ ಕಾಂಗ್ರೆಸ್‌ ಸರಕಾರದ ನೀತಿಗಳನ್ನು ಆಗೀಗ ಟೀಕಿಸುತ್ತಿದ್ದಾಗ ನನಗೆ ಅಷ್ಟೆಲ್ಲ ಗೌರವ ಸಮ್ಮಾನ ಮಾಡಿ ನಿಮ್ಮ ಪುಸ್ತಕದ ಬಿಡುಗಡೆಗೂ ನನ್ನನ್ನೇ ಆಮಂತ್ರಿಸಿ ಎತ್ತಿ ಮೆರೆದಿರಲ್ಲ! ಆಗ ನನ್ನ ತಲೆಯಲ್ಲಿ ಏನೇನು ಕಂಡಿತೊ ನಿಮಗೆ?

ನನ್ನ ವೃತ್ತಿಧರ್ಮಕ್ಕೆ ಬದ್ಧನಾಗಿ ಈಗಿನ ಸರಕಾರದ ಕೆಲವು ಧೋರಣೆಗಳನ್ನು ಪ್ರಶ್ನಿಸತೊಡಗಿದ ನಂತರ ನನ್ನ ಮೇಲೆ ಪದೇ ಪದೇ ತಿರುಗಿ ಬೀಳತೊಡಗಿದಿರಿ. ನಿಮ್ಮ ವೃತ್ತಿಧರ್ಮವನ್ನು, ಪ್ರತಿಭೆ, ಪಾಂಡಿತ್ಯವನ್ನು ನಾನು ಎಂದಾದರೂ ಜರೆದಿದ್ದಿದೆಯೆ? ನಾನು ಬರೆದುದನ್ನು ಇನ್ನೆಂದೂ ಓದುವುದಿಲ್ಲವೆಂದು ನಿಮಗೆ ನೀವೇ ಕಣ್ಣಿಗೆ ಪಟ್ಟಿ ಹಾಕಿಕೊಂಡಂತೆ ನನ್ನನ್ನು ಬ್ಲಾಕ್‌ ಮಾಡಿದಿರಿ. ನಂತರ ನೀವೇ ಬ್ಲಾಕ್‌ ತೆರವು ಮಾಡಿಕೊಂಡು, ಮತ್ತೆ ನನ್ನ ಗೋಡೆಗೆ ಬಂದು ಕೆರೆಯತೊಡಗಿದಿರಿ. ಜೋಷಿಯವರೆ, ನೀವು ಮತ್ತು ನಿಮ್ಮ ಗೆಳೆಯರು ಈಗಲೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡೇ ಇದ್ದೀರಿ ಗೊತ್ತು. ಆದರೆ ಕೆರೆತ ಉಂಟಾದಾಗ ನಿಮ್ಮ ಅಂಗಾಂಗಗಳಲ್ಲೇ ಕೈಯಾಡಿಸಿ ಮಾರಾಯ್ರೆ, ನನ್ನ ಬಳಿ ಯಾಕೆ ಬರ್ತೀರಿ?[ಇಂದು 5.2.21ರ ಬೆಳಿಗ್ಗೆ ಸಂಸ್ಕೃತ, ಹಿಂದಿ, ಇಂಗ್ಲಿಷ್‌ ಮತ್ತು ಕನ್ನಡ ಭಾಷೆಗಳಲ್ಲಿ ಆಲ್‌ ಇಂಡಿಯಾ ರೇಡಿಯೊದಲ್ಲಿ ʼಗ್ರೇಟಾ ಥನ್‌ಬರ್ಗ್‌ʼ ಹೆಸರು ಪದೇಪದೇ -ಹನ್ನೆರಡು ಬಾರಿ ಬಂತು. ನಿದ್ದೆಯ ಮಂಪರಿನಲ್ಲಿದ್ದವರಿಗೆ ಅದು ಅಗ್ನಿಶಾಮಕ ವಾಹನದ ಹಾರ್ನ್‌ ಥರಾ ಕೇಳಿಸುತ್ತಿತ್ತು.]

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *