

ನೀವೆಂದಾದರೂ ಊಟಿಗೆ ಹೋಗಿದ್ದರೆ ಘಟ್ಟ ಹತ್ತುತ್ತಾ ಇದ್ದಹಾಗೇ ನೀಲಗಿರಿಯ ಸುಮಧುರ ಪರಿಮಳ ನಿಮಗೆ ಏನೋ ಒಂಥರಾ ಹೊಸ ಅನುಭವ ನೀಡುತ್ತಾ ಹೋಗುತ್ತದೆ. ರಸ್ತೆಯ ಎರಡೂ ಕಡೆಗಳಲ್ಲಿ ೧೫೦ ವರ್ಷಕ್ಕೂ ಮೊದಲು ದೂರದ ಆಸ್ಟ್ರೇಲಿಯಾ ದೇಶದಿಂದ ಬರಲೇ ಬಾರದಿದ್ದ, ಆದರೂ ಬಂದ ನೂರುಗಟ್ಟಲೇ ಅಡಿ ಎತ್ತರದ ನೀಲಗಿರಿ ಅಥವಾ ಯೂಕಲಿಪ್ಟಿಸ್ ಮರಗಳು ಕಾಣುತ್ತವೆ. ಆ ಮರಗಳನ್ನು ವಾಣಿಜ್ಯದ ಉದ್ದೇಶದಿಂದ ಇಲ್ಲಿ ನೆಡುವ ಯೋಚನೆ ಯಾವ ಪುಣ್ಯಾತ್ಮನಿಗೆ ಬಂತೋ ಏನೋ? ಒಟ್ಟಾರೆ ಈ ಮರಗಳು ಈಗ ಉದಕಮಂಡಲದ ಅವಿಭಾಜ್ಯ ಅಂಗಗಳಾಗಿವೆ. ಮುಂದೆಲ್ಲೇ ನೀಲಗಿರಿ ಎಣ್ಣೆಯ ಪರಿಮಳ ಬಂದರೂ ಊಟಿಯ ನೆನಪಾಗುವಷ್ಟು ಆಳವಾಗಿ ಆ ಪರಿಮಳ ನಿಮ್ಮ ಮನದಲ್ಲಿ ಅಚ್ಚೊತ್ತುತ್ತವೆ.
ವಸಾಹತು ಸ್ಥಾಪನೆಗಾಗಿ ಭಾರತಕ್ಕೆ ಬಂದ ಬ್ರಿಟಿಷರಿಗೆ ತಮ್ಮೂರ ವಾತಾವರಣದ ನೆನಪ ಕೊಡುವ ಮಡಿಕೇರಿ, ಊಟಿ, ಡಾರ್ಜಿಲಿಂಗ್ ಮುಂತಾದ ಗುಡ್ಡ ಪ್ರದೇಶಗಳು ಬಹಳ ಅಪ್ಯಾಯಮಾನವಾಗಿ ಕಂಡಿದ್ದಂತೂ ಆಶ್ಚರ್ಯವಲ್ಲ. ಬರೀ ವಾತಾವರಣವಿದ್ದರೆ ಸಾಕಾ? ನೋಡಲೂ ಹಾಗೇ ಕಾಣಬೇಡವೇ? ಅದಕ್ಕೆ ಊಟಿಯ ಛಳಿಗೆ ಪೂರಕವಾದ ಸೂಜಿಮೊನೆಗಿಡಗಳನ್ನು ಊರಲ್ಲೆಲ್ಲಾ ನೆಟ್ಟು ಒಂದು ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಸೇರಿದ್ದ ಆದರೆ ಮುಂದೆಂದೂ ನಮ್ಮ ರಾಜ್ಯಕ್ಕೆ ಬಾರದ ಉದಕಮಂಡಲಕ್ಕೆ ಯುರೋಪಿನ ಟಚ್ ಕೊಟ್ಟಿದ್ದಾರೆ.
ಇನ್ನು ಊಟಿ ಪ್ರಸಿದ್ಧವಾಗಿರುವುದೇ ಚಹಾಕ್ಕೆ. ಸುಂದರವಾದ ಚಹಾ ತೋಟಗಳು ಊಟಿ ಮತ್ತು ಅದಿರುವ ನೀಲಗಿರಿಸ್ ಜಿಲ್ಲೆಗೇ ವಿಶೇಷ ಮೆರುಗನ್ನು ತಂದುಕೊಡುತ್ತವೆ. ಆದರೆ ಚಹಾ ಕೂಡಾ ನಮ್ಮ ಸಸ್ಯವಲ್ಲ. ನೂರಾರು ವರ್ಷಗಳ ಹಿಂದೆ ವಲಸಿಗರಾಗಿ ಬಂದು ಅಲ್ಲಿಯವರೇ ಆಗಿ ಹೋಗುವ ಜನಸಮೂಹದಂತೆ ಊಟಿಯ ಸೂಜಿಮೊನೆ ಮರಗಳು, ಟೀ ಗಿಡಗಳು ಮತ್ತು ನೀಲಗಿರಿ ಮರಗಳಿವೆ.
ಆದರೆ ಈ ಮೂರು ವಲಸಿಗ ಪ್ರಬೇಧಗಳ ಮರಗಳೇ ಊಟಿಗೆ ಒಂದು ವಿಶಿಷ್ಟವಾದ ಸ್ಥಾನ ತಂದುಕೊಟ್ಟಿವೆ. ಇಲ್ಲವಾದರೇ ನನ್ನಂತ ಮಲೆನಾಡಿಗನಿಗೆ ಸಿದ್ದಾಪುರಕ್ಕೂ ಊಟಿಗೂ ಏನೂ ವ್ಯತ್ಯಾಸ ಗೊತ್ತಾಗದೇ ಇಡೀ ತಿರುಗಾಟ ನೀರಸ ಅನ್ನಿಸ್ತಾ ಇತ್ತು.
ಮೊದಲಬಾರಿ ಊಟಿಗೆ ಕರೆದುಕೊಂಡು ಹೋದ ಕಾರಿನ ಚಾಲಕರು ದೊಡ್ಡ ಬೆಟ್ಟಕ್ಕೆ ಕರೆದುಕೊಂಡು ಹೋಗ್ತಾ “ಊಟಿಲಿ ಕನ್ನಡ ಉಳ್ಕೋಂಡಿರೋದು ಈ ಹೆಸರಲ್ಲಿ ಮಾತ್ರ ” ಎಂದಿದ್ದರು. ಕನ್ನಡಿಗ ಪ್ರವಾಸಿಗರಿಗೋಸ್ಕರ ಕನ್ನಡ ಮಾತನಾಡುವ ಜನರ ನೋಡಿದಾಗ ಅವರ ಮಾತು ಪೂರ್ತಿ ಸತ್ಯ ಎನಿಸಲಿಲ್ಲ.
ಊಟಿ ಕಡೆ ಹೋದಾಗ ಒಂದು ವೇಳೆ ಒಳ್ಳೆ ಕಾಫಿ ಸಿಕ್ಕರೂ ಅಲ್ಲಿ ಚಹಾ ಕುಡಿಯೋದೆ ಜಾಣತನ. ಊಟಿಯಾಗಲಿ ಮುನ್ನಾರಿನಲ್ಲಾಗಲೀ ಚಹಾ ತೋಟದ ಮಧ್ಯೆ ಕಾಫಿ ಕುಡಿದು ಅದನ್ನ ಅವಮಾನಿಸೋದು ಅಷ್ಟು ಸಭ್ಯತೆಯಲ್ಲ ಅನ್ನೋದು ನನ್ನ ಅನಿಸಿಕೆ. ಆದರೂ ಚಹಾದೆಲೆಯನ್ನು ಯಾವರೀತಿ ಮುರಿದೂ ಹಿಚುಕಿದರೂ ಚೂರೂ ಪರಿಮಳ ಬಾರದೇ ಕೇವಲ ಒಣಗಿಸಿ ಕುದಿಸಿದಾಗ ಆ ಪರಿಮಳ ಬರೋದು ಎಂತಹ ವಿಚಿತ್ರ ಅಲ್ವಾ? ಆ ಚೀನಿ ರಾಜನ ಕುದಿಯುವ ನೀರಿನ ಪಾತ್ರೆಗೆ ಅದ್ಯಾವ ಮುಹೂರ್ತದಲ್ಲಿ ಚಹಾ ಎಲೆ ಬಿದ್ದು ಇಂತಹ ಪೇಯ ಹುಟ್ಟಿತೋ ಎಂದು ತಲೆ ಕೆರೆದುಕೊಂಡಿದ್ದೇನೆ.
ಯಾಕೋ ಏನೋ ಎರಡು ಬಾರಿ ಹೋದರೂ ಇನ್ನೊಮ್ಮೆ ಹೋಗಬೇಕು ಅನ್ನಿಸುವಷ್ಟರಮಟ್ಟಿಗೆ ಊಟಿ ಇಷ್ಟ ನನಗೆ.
ಪಟದಲ್ಲಿ ಊಟಿಯ ಬಹುಮುಖ್ಯ ಅಂಗವಾದ ನೀಲಗಿರಿ ಮರಗಳ ನೋಡಬಹುದು. ಚಿಕ್ಕಂದಿನಲ್ಲಿ ನಾಗೇಶ್ ಹೆಗಡೆಯವರ ‘ನೆಡದಿರಿ ನೀಲಗಿರಿ’ ಓದಿದ್ದಕ್ಕೋ ಏನೋ ಈ ಮರಗಳ ಚಂದ ನೋಡಿ ಖುಷಿಪಟ್ಟರೂ ಪ್ರೀತಿಸಲು ನನ್ನಿಂದ ಆಗ್ತಾನೇ ಇಲ್ಲ.


