ಸಂಘಗಳ ಅಂತರಂಗ….


ಇತ್ತೀಚೆಗೆ ಎ.ಟಿ.ಎಮ್. ಯಂತ್ರಗಳು ಅಲಂಕಾರದ ಗೊಂಬೆಗಳಂತಾಗಿ ಹೋಗಿವೆ. “ನೋ ಸರ್ವೀಸ್” ಎಂಬ ಬೋರ್ಡ್ ಒಂದನ್ನು ಬಾಗಿಲಿಗೆ ನೇತು ಹಾಕಿ ಬ್ಯಾಂಕಿನವರು ಕೈ ತೊಳೆದುಕೊಂಡು ಬಿಡುತ್ತಾರೆ. ಬಂದ ದಾರಿಗೆ ಸುಂಕವಿಲ್ಲದಂತೆ ನಾವು ಗ್ರಾಹಕರು ಹೊರಟು ಹೋಗುತ್ತೇವೆ. ಅದನ್ನು ಕಂಡ ಮಷೀನುಗಳು ಹಾಗೂ ಅಲ್ಲಿನ ಸೆಕ್ಯುರಿಟಿ ತಮ್ಮ ಮೀಸೆಯಡಿಯಲ್ಲಿಯೇ ನಕ್ಕಿರುತ್ತಾರೆ. ಮೊನ್ನೆ ಒಮ್ಮೆ ಹೀಗೇ ಆಯಿತು. ಇನ್ಷೂರನ್ಸ್ ಹಣವನ್ನು ಕಟ್ಟಲೆಂದು ಎ.ಟಿ.ಎಮ್.ನಿಂದ ದುಡ್ಡು ಬಿಡಿಸಿಕೊಂಡು ಬರಲು ಹೋಗಿದ್ದೆ. ಬಾಗಿಲಿಗೆ ಅಡ್ಡಲಾಗಿ ನಿಂತಿದ್ದ ಸೆಕ್ಯುರಿಟಿ ಗಾರ್ಡ್ ದುಡ್ಡು ಇಲ್ಲ ಎಂದು ಕೈಸನ್ನೆ ಮಾಡಿದ್ದ. ದುಡ್ಡಿಲ್ಲದ ಎ.ಟಿ.ಎಮ್.ಗಳಿಗೆ ದುಡ್ಡು ಕೊಟ್ಟು ಪಹರೆಯನ್ನು ಇಡುವ ಅಗತ್ಯವೇನಿದೆ ಎಂದು ಮನೆ ಕೆಲಸದ ಬೂಬೂನ ಹತ್ತಿರ ಅಲವತ್ತುಗೊಂಡಿದ್ದೆ. “ಅಯ್ಯೋ ಅದಕ್ಯಾಕೆ ಚಿಂತೆ ಮಾಡ್ತೀರಿ ಅಕ್ಕಾ ಎಷ್ಟು ಹಣ ಬೇಕಿ ತ್ತು ಎಂದು ಬೂಬು ಕೇಳಿದ್ದಳು. “ಒಂದು ಇಪ್ಪತ್ತು ಸಾವಿರ ಬೇಕಿತ್ತು ಕಣೆ ಎಂದಿದ್ದೆ.” ಅದಕ್ಕೆ ಬೂಬು “ಅಕ್ಕಾ ಇವತ್ತು ಸಂಜೆ ತಂದು ಕೊಡ್ತೀನಿ. ನೀವು ಎರಡು ದಿನ ಬಿಟ್ಟು ವಾಪಸ್ಸು ಕೊಡಿ” ಎಂದಿದ್ದಳು.

ನೂರು ಇನ್ನೂರನ್ನು ನನ್ನ ಹತ್ತಿರವೇ ಕೇಳುತ್ತಿದ್ದವಳು ಇಪ್ಪತ್ತು ಸಾವಿರ ಸಾಲ ಕೊಡುವಷ್ಟು ಶ್ರೀಮಂತಳಾಗಿಬಿಟ್ಟಳೆ ಬೂಬು ಎಂದು ಕೇಳಿದಾಗ “ಅಕ್ಕಾ ನಮ್ಮಂತವರ ಪಾಲಿಗೆ ಸಂಘಗಳೇ ದೇವರು. ಮಗಳ ಹೆರಿಗೆ ದಿನ ಹತ್ತಿರ ಬಂದಿದೆ. ಅದಕ್ಕೇ ಸಂಘದಿಂದ ಮೂವತ್ತು ಸಾವಿರ ಸಾಲ ಪಡೆದಿದ್ದೇನೆ ಎಂದಿದ್ದಳು. ನಿಜವಾಗಿಯೂ ಸಂಘಗಳೆಂಬ ಆಪದ್ಭಾಂದವರು ಇರದೇ ಹೋಗಿದ್ದಲ್ಲಿ ಬಡ ಕುಟುಂಬಗಳ ಬದುಕು ದುಸ್ಥರವಾಗುತ್ತಿತ್ತು.

 ಸ್ವ ಸಹಾಯ ಗುಂಪುಗಳು, ಸ್ತ್ರೀ ಶಕ್ತಿ ಸಂಘ, ಉಳಿತಾಯ

ಸಂಘ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಂಡು, ಆರ್ಥಿಕ ಪ್ರಗತಿಯ ಉದ್ದೇಶವನ್ನು ಇಟ್ಟುಕೊಂಡ ನಾರೀಮಣಿಯರ ಗುಂಪುಗಳ ಪಾತ್ರ ಸಾಮಾನ್ಯದ್ದಲ್ಲ. ಸಂಘಗಳ ಅಂತರಂಗವನ್ನು ಹೊಕ್ಕು ನೋಡಿದರೆ ನಮ್ಮ ದೇಶದ ಚಿತ್ರಣವೇ ತೆರೆದುಕೊಳ್ಳುತ್ತದೆ. ಸಾಸಿವೆ ಡಬ್ಬ, ಜೀರಿಗೆ ಡಬ್ಬಗಳಲ್ಲಿ ಹೊಂಚಿ ಇಡುತ್ತಿದ್ದ ದುಡ್ಡಿನ ಮೇಲೆ ಕುಡುಕ ಗಂಡನ ಕಣ್ಣು ಬಿದ್ದಾಗ ಪಾಪದ ಹೆಣ್ಣು ಮಕ್ಕಳು “ಇನ್ನು ದುಡ್ಡನ್ನು ಹೊಟ್ಟೆಯಲ್ಲಿ ಇಟ್ಟುಕೊಂಡರೆ ಸೈ” ಎಂದು ಕಣ್ಣೀರು ಹಾಕುತ್ತಿದ್ದರು. ಅಕ್ಷರ ಜ್ಞಾನವಿಲ್ಲದ ಹೆಂಗಸರು ಬ್ಯಾಂಕಿನ ಮುಖವನ್ನೂ ಕಂಡವರಲ್ಲ. ಮೂವತ್ತು ಮೂವತ್ತೆರಡು ವರ್ಷದ ಹಿಂದೆ ಕ್ರಾಂತಿಯೋಪಾದಿಯಲ್ಲಿ ಉಳಿತಾಯ ಸಂಘಗಳು ಕಣ್ಣು ಬಿಡತೊಡಗಿದವು.

 ನಾವು ಹೆಂಗಸರು ಅಷ್ಟು ಸುಲಭವಾಗಿ ಯಾರನ್ನೂ ನಂಬುವವರಲ್ಲ. ಅದರಲ್ಲೂ ದುಡ್ಡಿನ ವಿಷಯದಲ್ಲಿ. ಹತ್ತು ಜನ ಹೆಂಗಸರನ್ನು ಒಂದೆಡೆ ಸೇರಿಸಿ, ಅವರಲ್ಲಿ ಉಳಿತಾಯದ ಆಶಾ ಕಿರಣವನ್ನು ಬಿತ್ತುವುದೆಂದರೆ ಕಪ್ಪೆಯನ್ನು ತಕ್ಕಡಿಗೆ ಹಾಕಿದಂತೆ. ಎರಡು ಜಡೆಗಳು ಎಂದೂ ಒಟ್ಟಿಗೆ ಸೇರಲಾರವು ಎಂಬ ಮಾತಿದೆ. ಆದರೆ ಹತ್ತು ಜಡೆಗಳನ್ನು ಒಟ್ಟು ಮಾಡುವುದೆಂದರೆ ಸವಾಲಿನ ಕೆಲಸವೇ ಸರಿ. ಐದಾರು ವರ್ಷಗಳ ಕಾಲ ಸಮುದಾಯ ಸಂಘಟಕಿಯಾಗಿ ಉಳಿತಾಯ ಸಂಘಗಳನ್ನು ಕಟ್ಟುವಲ್ಲಿ ಅನುಭವವೇದ್ಯವಾದ ಸಂಗತಿಗಳು ಒಂದೆರಡಲ್ಲ. ಸ್ನೇಹ, ಪ್ರೀತಿ, ವಿಶ್ವಾಸ, ಅರಿವುಗಳೆಂಬ ಬೀಜವನ್ನು ಅವರಲ್ಲಿ ಬಿತ್ತಿ ಒಗ್ಗಟ್ಟಿನ ಫಸಲನ್ನು ಅಲ್ಲಿ ಬೆಳೆಯಬೇಕಿತ್ತು. ಎರಡು ಗುಂಪುಗಳನ್ನು ಕಟ್ಟುವಷ್ಟರಲ್ಲಿ ನಾನು ಹೈರಾಣಾಗಿದ್ದೆ. ಇನ್ನೇನು ಗುಂಪು ತಯಾರಾಯಿತು ಎನ್ನುವಷ್ಟರಲ್ಲಿ ಗಾಳಿ ಮಾತುಗಳನ್ನು ಕೇಳಿ ಸೂತ್ರ ಹರಿದ ಗಾಳಿ ಪಟದಂತಾಗಿ ಬಿಡುತ್ತಿತ್ತು ಕಟ್ಟಿದ ಗುಂಪು. ಛಲ ಬಿಡದ ವಿಕ್ರಮನಂತೆ ಹಠ ತೊಟ್ಟಾಗ ಹಳ್ಳಿಯ ಹೆಣ್ಣು ಮಕ್ಕಳ ಅರಿವಿನ ಬಾಗಿಲು ನಿಧಾನವಾಗಿ ತೆರೆದಿತ್ತು. ಮಳೆಗಾಲದಲ್ಲಿ ಏಳುವ ಅಣಬೆಗಳಂತೆ ಸ್ವ ಸಹಾಯ ಸಂಘಗಳು ಹುಟ್ಟಿಕೊಳ್ಳತೊಡಗಿದವು.



 ನಮ್ಮ ಹೆಣ್ಣು ಮಕ್ಕಳ ಬದುಕಿನುದ್ದಕ್ಕೂ ಆಕೆಯ ಕೈ ಹಿಡಿದು ನಡೆಸುವ ಸಂಘಗಳ ಪಾತ್ರ ಒಂದು ರೀತಿಯಲ್ಲಿ ಬಿದಿರಿನ ಬದುಕಿನಂತೆ. “ನಾನಾರಿಗಲ್ಲದವಳು, ಬಿದಿರು ನಾನಾರಿಗಲ್ಲದವಳು”ಎನ್ನುವ ಅರ್ಥವತ್ತಾದ ಹಾಡಿನಂತೆ ಹುಟ್ಟಿನಿಂದ ಚಟ್ಟದವರೆಗೂ ಬಿದಿರು ಉಪಯೋಗಿಯಾಗಿದೆ. ಗಿಡವೂ ಅಲ್ಲದ ಬಳ್ಳಿಯೂ ಅಲ್ಲದ ಯಕಶ್ಚಿತ್ ಹುಲ್ಲಿನ ಜಾತಿಗೆ ಸೇರಿದ ಬಿದಿರು ಅದೆಷ್ಟು ಮೃದುವೋ ಅಷ್ಟೇ ಕಠಿಣ. ಸೀಳಿ ಕಡ್ಡಿಯನ್ನಾಗಿ ಮಾಡಿದರೆ ಹೇಗಾದರೂ ಬಾಗಬಲ್ಲದು. ಕಸದಿಂದ ಕೂಡಿದ ಕಾಳು ಕಡ್ಡಿಗಳನ್ನು ಒನೆದು, ಕೇರಲು ಮೊರವಾಗಬಲ್ಲದು. ತೊಟ್ಟಿಲಾಗಿ ಮಕ್ಕಳ ಕನಸುಗಳಿಗೆ ಬಣ್ಣವಾಗಬಲ್ಲದು. ನಿಲುಕಲಾರದ ವಸ್ತುಗಳಿಗೆ ಕೈಚಾಚಲು ಏಣಿಯಾಗಬಲ್ಲದು. ಹೊಂಗನಸಿನ ಗೂಡನ್ನು ಕಟ್ಟಿಕೊಳ್ಳು ಸಾರುವೆಯಾಗಬಲ್ಲದು. ಕೊನೆಗೊಮ್ಮೆ ಬಂದ ದಾರಿಗೆ ಸುಂಕವಿಲ್ಲದಂತೆ ಹೊರಡುವಾಗ ಚಟ್ಟವಾಗಬಲ್ಲದು. ಹೀಗೆ ಹುಟ್ಟಿನಿಂದ ಸಾವಿನವರೆಗೂ ಉಪಕಾರಿಯಾಗುವ ಬಿದಿರಿನಂತೆ ಹೆಣ್ಣಿನ ಬುಕಿನುದ್ದಕ್ಕೂ ಆಕೆಯ ಆಪತ್ಕಾಲಕ್ಕಾಗುವ ಸಂಘಗಳು ಬಿದಿರಿನಂತೆಯೇ ಪರೋಪಕಾರಿ.




 ಬದುಕಿನ ಅನಿವಾರ್ಯಗಳನ್ನು ನೀಗಲು ಇಂದಿನ ದಿನಗಳಲ್ಲಿ ಹೆಣ್ಣು ಹೊಸಿಲು ದಾಟಿ ಹೊರಗೆ ಬರಲೇಬೇಕಿದೆ. ಹಿಂದಿನಂತೆ ಬೇಯಿಸಿ ಹಾಕಲಷ್ಟೇ ಅವಳ ಜೀವನ ಸೀಮಿತಗೊಂಡಿಲ್ಲ. ಎಲ್ಲದಕ್ಕೂ ಗಂಡಸರ ಮುಂದೆ ಕೈ ಚಾಚುವ ಕಾಲ ದೂರವಾಗಿದೆ. ಅಷ್ಟೋ ಇಷ್ಟೋ ದುಡಿದು ಉಳಿಸಿರುವುದನ್ನು ಕಾಪಿಡಲು ಸಂಘಗಳೆಂಬ ತಿಜೋರಿಗಳು ಭದ್ರವಾಗಿವೆ. ಜೊತೆಗೆ ಕಷ್ಟಕಾಲದಲ್ಲಿ ಕೈಹಿಡಿಯಲೂ ತಯಾರಿವೆ. ನಾವು ಹೆಂಗಸರು ಆಶಾವಾದಿಗಳು. ಅಂದುಕೊಂಡದ್ದನ್ನು ಸಾಧಿಸಲು ಗುರಿಯ ಬೆನ್ನು ಹತ್ತುವವರು. ಇಷ್ಟವಾಗುವುದನ್ನು ಕಷ್ಟ ಪಟ್ಟಾದರೂ ಪಡೆಯಬೇಕೆನ್ನುವವರು. ಅವಳ ಮನೆಯಲ್ಲಿರುವುದು ನಮ್ಮ ಮನೆಯಲ್ಲೂ ಇರಲೇ ಬೇಕೆನ್ನುವವರು. ಇಂದು ಎಷ್ಟೇ ಬಡವರೆಂದುಕೊಂಡರೂ ಮನೆಯಲ್ಲಿ ಕಣ್ಣಾಡಿಸಿದರೆ ಜೀವನಕ್ಕೆ ಬೇಕಾದ ಅತ್ಯಗತ್ಯ ವಸ್ತುಗಳು ಇಲ್ಲವೆನ್ನುವ ಹಾಗಿಲ್ಲ. ಅವರಲ್ಲಿ ಅಡುಗೆ ಮನೆಗೆ ಶೋಭೆ ತರುವ ಗ್ಯಾಸ್ ಒಲೆ, ಗ್ರೈಂಡರ್, ರೆಫ್ರಿಜಿರೇಟರ್, ಫಿಲ್ಟರ್ ಇವೆಲ್ಲ ಸಂಘಗಳ ಸಹಕಾರದಿಂದಲೇ ಆಗಿರುತ್ತವೆ.  ಇನ್ನು ಮನೆಗೆ ಬಂದ ಅಥಿತಿಗಳನ್ನು ಕೂರಿಸಲು ಕುರ್ಚಿ, ಟೀಪಾಯ್, ಬೇಕೇ ಬೇಕು. ಬಂದವರು ಸುತ್ತ ಮುತ್ತ ಕಣ್ಣಾಡಿಸದೇ ಹಾಗೇ ಕುಳಿತಿರಲು ಆಗುತ್ತದೆಯೇ? ಕಣ್ಣಾಡಿಸಿದಾಗ ಗೋಡೆಗೊಂದು ಗಡಿಯಾರ, ಟಿ.ವಿ., ಕಾಣಬಾರದೆ? ಬೇಜಾವಾಬ್ದಾರಿ ಗಂಡಸರೋ ಇಲ್ಲಾ ಕುಡುಕ ಗಂಡನನ್ನು ಕಟ್ಟಿಕೊಂಡವರಾದಲ್ಲಿ ಇವನ್ನೆಲ್ಲ ಬಯಸಲಾದರೂ ಉಂಟೆ? ಇರುವುದನ್ನೆಲ್ಲ ಇಲ್ಲವಾಗಿಸುವವರಿರುವ ಮನೆಗೆ ಸಂಘಗಳೇ ದಿಕ್ಕು. ಉಳಿಸಿದ ಹಣವನ್ನು ವಾರಕ್ಕೋ ತಿಂಗಳಿಗೋ ಸೇರಿಸಿ ಹೆಂಗಸರೆಲ್ಲ ಒಂದೆಡೆ ಕಲೆತು ಭದ್ರವಾಗಿಡುವ ಪರಿ ಹನಿ ಹನಿಯನ್ನು ಹಳ್ಳವಾಗಿಸುವುದಾಗಿದೆ. ಹಲವಾರು ಹಳ್ಳಗಳು ಸೇರಿ ನದಿಯಾಗಿ ಹರಿದು ಸಮುದ್ರವಾದಂತೆ ಸಂಘಗಳ ಪಯಣದ ಹಾದಿ. ಬೇಕೆನಿಸಿದಾಗ ಅದರಿಂದ ಒಂದು ಬೊಗಸೆ ನೀರನ್ನು ತೆಗೆದುಕೊಂಡಂತೆ. ನಿರಂತರವಾಗಿ ಹನಿ ಹನಿ ತೊಟ್ಟಿಕ್ಕುತ್ತಿದ್ದರೆ ಸಮುದ್ರವೆಂದೂ ಬರಿದಾಗದು.


 ದೋಣಿ ನಡೆಸಲು ಅಂಬಿಗನ ಅಗತ್ಯವಿರುವಂತೆ ಈ ಸಂಘಗಳ ಚುಕ್ಕಾಣಿ ಹಿಡಿಯಲು ಒಬ್ಬಿಬ್ಬರು ಮುಂದಾಳುಗಳು ಬೇಕು. ಗುಂಪು ಎಂದ ಮೇಲೆ ಎಲ್ಲ ತರಹದ ಹೆಂಗಸರೂ ಇರುತ್ತಾರೆ. ಕೆಲವರು ಎಲ್ಲರ ಜೊತೆ ತಾವೂ ಸೋ... ಎಂದರೆ ಇನ್ನು ಕೆಲವರು ಚಿಣಿಗೆ ಹಾವಿನಂತವರು. ಅಂದರೆ ಸದಾ ಚಟುವಟಿಕೆಯಿಂದೊಡಗೂಡಿದವರು. ಜವಾಬ್ದಾರಿಗಳಿಗೆ ಬೆನ್ನು ತೋರಿಸದೇ ಎಳೆದು ತಮ್ಮ ಹೆಗಲ ಮೇಲಿಟ್ಟುಕೊಳ್ಳುವವರು. ಸಂಕೋಚ ಸ್ವಭಾವವನ್ನು ಗಂಟು ಮೂಟೆ ಕಟ್ಟಿ ಇಟ್ಟವರು. ಇವರು ಮಾತನಾಡಲು ನಿಂತರೆ ಜಲಲ ಜಲ ಧಾರೆಯಂತೆ ಓಘವನ್ನು ಹೊಂದಿದವರು. ಇಂಥ ಹೆಂಗಸರನ್ನೇ ಗುಂಪಿನಲ್ಲಿ ತಮ್ಮ ಪ್ರತಿನಿಧಿಗಳೆಂದು ಒಪ್ಪುವುದು. ಒಪ್ಪಲೇಬೇಕು. ಏಕೆಂದರೆ ಗುಂಪಿನ ಒಳಿತಿಗಾಗಿ  ಒಂದು ಸಣ್ಣ ಸಾಲದ ಮಂಜೂರಿಗಾಗಿ ಬ್ಯಾಂಕಿಗೆ ಅಂಡಲೆಯಬೇಕು. ಬ್ಯಾಂಕಿನ ಅಧಿಕಾರಿಗಳು ನೂರೆಂಟು ದಾಖಲೆಗಳನ್ನು ಒದಗಿಸುವಂತೆ ಪ್ರಾಣ ತಿನ್ನುವುದು, ಎಲ್ಲವೂ ಮುಗಿಯಿತು ಎನ್ನುವ ವೇಳೆಗೆ ಏನಾದರೊಂದು ಐಬು ಹುಡುಕಿ ಸಾಲ ಮಂಜೂರಿಗೆ ಕೊಕ್ಕೆ ಹಾಕುವುದು ಸಾಮಾನ್ಯ. ಇನ್ನು ಕೆಲವೊಮ್ಮೆ ಗುಂಪಿನ ಹೆಂಗಸರು ತೆಗೆದುಕೊಂಡ ಸಾಲವನ್ನು ತೀರಿಸದೇ ಬಡ್ಡಿಗೆ ಚಕ್ರಬಡ್ಡಿ ಆಗುವಂತೆ ಮಾಡಿದಾಗ ಘಟವಾಣಿಯರು ಬೇಕೇ ಬೇಕು. ಇಂಥವರು ಬಹುಮತದಿಂದ ಆಯ್ಕೆಯಾಗುತ್ತಾರೆ. ಕೆಲವೊಮ್ಮೆ ಇಂಥವರು ಒಬ್ಬರಿಗಿಂತ ಜಾಸ್ತಿ ಇದ್ದಾಗ ಅವರಲ್ಲಿಯೇ ಮಿನಿ ಚುನಾವಣೆಗಳೂ ನಡೆಯುವುದುಂಟು. ಆಯ್ಕೆಯಾದ ಇಂಥ ಪ್ರತಿನಿಧಿಗಳೇ ಅನುಭವ ಹೊಂದಿ ಮುಂದೆ ಜನಪ್ರತಿನಿಧಿಗಳಾಗಲೂ ಬಹುದು. ಅಂದರೆ ರಾಜಕೀಯಕ್ಕೆ ನೆಗೆಯಲು ಇದೊಂದು ಮೊದಲ ಮೆಟ್ಟಿಲು.

 ಓಟಿನ ಲಾಭಕ್ಕಾಗಿ ರಾಜಕಾರಣಿಗಳು ಸ್ವ ಸಹಾಯ ಸಂಘಗಳನ್ನು ನೆಚ್ಚಿಕೊಂಡಷ್ಟು ಇನ್ಯಾರನ್ನೂ ನೆಚ್ಚಿಕೊಂಡಿಲ್ಲ. ಹಳ್ಳಿ, ಪಟ್ಟಣ, ನಗರ, ಮಹಾನಗರಗಳೆಂಬ ಭೇದ-ಭಾವವಿಲ್ಲದೆ ನಮ್ಮ ಸ್ತ್ರೀ ಶಕ್ತಿ ಸಂಘಗಳು ಕಾರ್ಯನಿರತವಾಗಿವೆ. ಚುನಾವಣಾ ಸಂದರ್ಭಲ್ಲಂತೂ ತಮ್ಮ ತೌಡು ಕುಟ್ಟುವ ಕಾರ್ಯಕ್ರಮಕ್ಕೆ ಹೆಂಗಳೆಯರನ್ನೇ ಕರೆತರುತ್ತಾರೆ. ಬೀದಿ ಬೀದಿಗೂ ಉಚಿತ ವಾಹನಗಳನ್ನು ಕಳುಹಿಸಿ ಸಂಘದ ಹೆಂಗಸರನ್ನು ತುಂಬಿಸಿ ತಂದು ಅದು ತಮ್ಮ ಪಕ್ಷದ ಬಲ ಎಂದು ಕೊಚ್ಚಿಕೊಳ್ಳುತ್ತಾರೆ. ಮಾರನೆ ದಿನ ಮತ್ತೊಂದು ಪಕ್ಷದವರು ಇದೇ ಹೆಣ್ಣು ಮಕ್ಕಳನ್ನು ತಮ್ಮ ಭಾಷಣಕ್ಕೆ  ಕರೆ ತಂದು ತಮ್ಮ ಬಲಾಬಲ ಎಂದು ಬಿಂಬಿಸುತ್ತಾರೆ. ಏನೇ ಆಗಲಿ ನಮ್ಮ ಮಹಿಳೆಯರೂ ಚಾಲಾಕಿಗಳೇ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬ ಮಾತಿನಂತೆ ಎರಡೂ ಕಡೆಯ ಲಾಭವನ್ನೂ ಪಡೆಯುತ್ತಾರೆ. ಆದರೆ ಕಳೆದ ಚುನಾವಣೆಯಲಿ ್ಲರಾಜಕಾರಣಿಗಳು ಒಂದೂ ಸುತ್ತು ಸುತ್ತದ ಮಿಕ್ಸರ್‍ಗಳನ್ನು ವಿತರಿಸಿ, ಒಂದೇ ಒಗೆತಕ್ಕೆ ಬಣ್ಣಗೇಡಿಯಾದ ಸೀರೆಗಳನ್ನು ಕೊಟ್ಟು ಹೆಂಗಳೆಯರಿಂದ ನೆಟಿಗೆ ಮುರಿಸಿಕೊಂಡಿದ್ದಾರೆ.

 ಒಮ್ಮನಸಿನ ಕೆಲ ಹೆಂಗಳೆಯರು ಇಲ್ಲವೆ ಒಂದೇ ಕೇರಿಯ ಹತ್ತಾರು ಮಹಿಳೆಯರು ಸೇರಿ ಕಟ್ಟಿಕೊಂಡ ಗುಂಪು ಒಂದೆಡೆ ಕಲೆತರೆ ಅಲ್ಲಿ ಕೇವಲ ಹಣದ ವ್ಯವಹಾರ ಮಾತ್ರ ನಡೆಯುವುದಿಲ್ಲ. ಏನು ತಿಂಡಿ? ಯಾವ ಸಾರು ದಿಂದ ಪ್ರಾರಂಭಗೊಂಡು ಕಷ್ಟ-ಸುಖಗಳ ವಿನಿಮಯವಾಗಿ, ತಲೆಗೊಂದು ಪರಿಹಾರ ಸೂಚಿಸಿ, ಉಚಿತ ಸಲಹೆ ಸಮಾಲೋಚನೆ ದೊರೆತು ಅಲ್ಲಿಯೇ ಒಂದು ಸೊಲ್ಯುಷನ್ ಸಿಕ್ಕಿರುತ್ತದೆ. ಕೆಲವೊಮ್ಮೆ ಯಾವುದೋ ಒಂದು ವಿಷಯಕ್ಕೆ ಮಾತಿಗೆ ಮಾತು ಬೆಳೆದು ಜುಟ್ಟಿಗೆ ಜುಟ್ಟು ಹಿಡಿಯುವ ಪ್ರಸಂಗಗಳೂ ನಡೆಯುತ್ತವೆ. ಸಮಯಕ್ಕೆ ಸರಿಯಾಗಿ ಬಂದು ಉಳಿತಾಯದ ಹಣವನ್ನು ಕೊಡದೇ ಹೋದಲ್ಲಿ, ನಿಗದಿತ ವೇಳೆಗೆ ಸಾಲದ ಕಂತನ್ನು ಕಟ್ಟದೇ ಇದ್ದಲ್ಲಿ, ಒಂದೇ ಬಾರಿ ಮೂರ್ನಾಲ್ಕು

ಸದಸ್ಯೆಯರಿಗೆ ಸಾಲ ಪಡೆಯುವ ತುರ್ತು ಪರಿಸ್ಥಿತಿ ಇದ್ದಾಗ ಸಂಘ ನಡೆಯುವ ಸ್ಥಳಗಳು ರಣರಂಗಗಳಾಗಿ ಮಾರ್ಪಡುವುದೂ ಉಂಟು. ಇನ್ನು ಕೆಲವೊಮ್ಮೆ ಒಬ್ಬರನ್ನು ಇನ್ನೊಬ್ಬರ ಮುಂದೆ ಆಡಿಕೊಂಡು, ಅವರ ಮನೆಯ ದೋಸೆಯ ತೂತನ್ನು ಇನ್ನಷ್ಟು ಅಗಲ ಮಾಡಲು ಹೋಗಿ ಕೈಗೆ ಕೈ ಹತ್ತುವುದೂ ಉಂಟು. ಕೆಲವೊಮ್ಮೆ ಅತ್ತೆ-ಸೊಸೆಯರಿಗೆ ವೇದಿಕೆಯೊಂದು ಸಿಕ್ಕಂತಾಗಿ, ಮನೆಯಲ್ಲಿನ ಜಗಳ ರಿಹರ್ಸಲ್ ಆಗಿ, ಸಂಘದಲ್ಲಿ ಗ್ರ್ಯಾಂಡ್ ಶೋ ನಡೆಯಲೂಬಹುದು. ಒಂದು ಬಾರಿ ಒಂದೇ ಸಂಘದ ಅಮ್ಮಂದಿರ ಮಕ್ಕಳಾದ ಹುಡುಗ ಹುಡುಗಿಯ ಜೊತೆಯೊಂದು ಪ್ರೀತಿಸಿ ಮನೆಯಿಂದ ಪೇರಿ ಕಿತ್ತಿದ್ದರು. ಸಂಘದ ಮೀಟಿಂಗ್ ದಿನ ಆ ಇಬ್ಬರೂ ಅಮ್ಮಂದಿರ ಕಾಳಗವನ್ನು ನಿಲ್ಲಿಸಲು ಪೋಲಿಸರೇ ಬರಬೇಕಾಯಿತು. ಎಂದೂ ಅತ್ತ ತಲೆ ಹಾಕದ ಸ್ತ್ರೀಯರ ಶಕ್ತಿ ಸೌಧದಂತಹ ಅವರ ಗಂಡಂದಿರು ಬಂದು ಇನ್ನು ಮುಂದೆ ನಿಮ್ಮ ಉಳಿತಾಯವೂ ಬೇಡ, ನಮ್ಮ ಎಣ್ಣೆಗೆ ದುಡ್ಡೂ ಬೇಡ ಎನ್ನುವ ಹಾಗಾಗಿತ್ತು. ಗಂಡಸರ ದೊಡ್ಡದೊಂದು ಗುಂಪೇ ಅಲ್ಲಿ ನೆರೆದು ಅವರದೇ ಆದ ಒಂದು ಪುರುಷರ ಉಳಿತಾಯ ಗುಂಪು ರಚನೆಯಾಗಿ ತಿಂಗಳೊಪ್ಪೊತ್ತಿನಲ್ಲೇ ಹೇಳ ಹೆಸರಿಲ್ಲದಂತಾಗಿತ್ತು.

 ಒಮ್ಮೆ ನಾವು ರಚಿಸಿದ ಸ್ವ ಸಹಾಯ ಸಂಘದ ತಿಂಗಳ ಸಭೆ ನಡೆದಿತ್ತು. ಹತ್ತು ಜನರಿಂದ ಪ್ರಾರಂಭವಾದ ಗುಂಪು ಇಪ್ಪತ್ತಕ್ಕೇರಿತ್ತು. ಅವರಲ್ಲಿ ಒಂದು ಒಗ್ಗಟ್ಟು ಇರಲೆಂಬ ಕಾರಣದಿಂದ ಎಲ್ಲರೂ ಒಂದೇ ರೀತಿಯ ಸೀರೆಯನ್ನು ಖರೀದಿಸಿ ಸಮವಸ್ತ್ರವನ್ನಾಗಿಸಿಕೊಳ್ಳೋಣ ಎಂದು ಠರಾಯಿಸಿದ್ದರು. ಸೀರೆಯ ಬಣ್ಣ,  ಕ್ವಾಲಿಟಿ, ಡಿಸೈನ್‍ದ್ದಾಗಿರಬೇಕೋ ಪ್ಲೇನ್ ಇರಲೋ? ಸೆರಗು-ಬಾರ್ಡರ್ ಬೇಕೋ ಬೇಡವೋ? ಅದಕ್ಕೆ ಹೊಲಿಸುವ ಬ್ಲೌಸ್ ಯಾವ ಪ್ಯಾಟರ್ನ್‍ದ್ದಾಗಿರಬೇಕು ಎಂದು ಪ್ರಾರಂಭವಾದ ಚರ್ಚೆ ವಾದಕ್ಕೆ ತಿರುಗಿ ವಾದ ಜಗಳ, ಗಲಾಟೆಗಳಲ್ಲಿ ಮುಗಿದಿತ್ತು. ಒಬ್ಬರು ಹೇಳುವುದನ್ನು ಇನ್ನೊಬ್ಬರು ಒಪ್ಪರು ತಯಾರಿಲ್ಲ. ಕೊನೆಗೆ ಸಭೆ ದರಖಾಸ್ತುಗೊಂಡು ಮುಂದಿನ ಸಭೆಯ ಅಜೆಂಡಾದಲ್ಲಿ ಸೀರೆಯ ಚರ್ಚೆಯೇ ಮೊದಲ ಸ್ಥಾನದಲ್ಲಿ ಕುಳಿತಿತ್ತು.

 ಒಗ್ಗಟ್ಟಿನ ವಿಷಯ ಬಂದಾಗ ಗುಂಪಿನ ಸದಸ್ಯರು ಒಂದಾಗಿಬಿಟ್ಟರೆ ಯಾರಿಗೂ ಉಳಿಗಾಲವಿಲ್ಲ. ನ್ಯಾಯ ಬೆಲೆ ಅಂಗಡಿಯ ಮಾಲೀಕನೊಬ್ಬ ತೂಕದಲ್ಲಿ ಬಾರಾ ಬಾನಗಡಿ ಮಾಡುತ್ತಿದ್ದ.  ಅವನು ತೂಗಿದ ಹತ್ತು ಕೆ,ಜಿ. ಅಕ್ಕಿಯನ್ನು ಬೇರೆಡೆ ತೂಗಿಸಿದಾಗ ಏಳರಿಂದ ಎಂಟು ಕೆ.ಜಿ. ತೂಗುತ್ತಿತ್ತು. ಹೆಂಗಳೆಯರೆಲ್ಲ ಒಟ್ಟಾಗಿ ಮೇಲಧಿಕಾರಿಗಳ ಕಚೇರಿಗೆ ಲಗ್ಗೆ ಇಟ್ಟರು. ಪ್ರತಿ ತಿಂಗಳೂ ನ್ಯಾಯ ಬೆಲೆ ಅಂಗಡಿಯಲ್ಲಿ ಕಾಳು ಕಡ್ಡಿ ತೂಗಿಸುವ ಜವಾಬ್ದಾರಿಯನ್ನು ತಮಗೆ ಕೊಡಿಸಬೇಕೆಂದು, ಇಲ್ಲದಿದ್ದಲ್ಲಿ ಆ ಮಾಲೀಕನ ಪರವಾನಿಗೆಯನ್ನೇ ರದ್ದುಪಡಿಸಬೇಕೆಂದು ಹಠ ಹಿಡಿದರು. ಅದರಲ್ಲಿ ಜಯವನ್ನು ಸಾಧಿಸಿ ಮಾಲೀಕನ ಮೋಸದ ತೂಕಕ್ಕೆ ಮಂಗಳ ಹಾಡಿದ್ದರು.

 ಅನ್ಯಾಯದ ವಿರುದ್ಧ ಸೊಲ್ಲೆತ್ತುವ, ಪ್ರತಿಭಟಿಸುವ ಹೆಣ್ಣು ಗಯ್ಯಾಳಿ ಎಂತಲೋ, ಬಜಾರಿ ಎಂದೋ ಬಿಂಬಿಸಲ್ಪಡುತ್ತಾಳೆ. ಆದರೆ ಹತ್ತಾರು ಹೆಂಗಸರು ಒಟ್ಟಿಗೆ ಸೇರಿ ದಂಗೆ ಎದ್ದರೆ ಕುಹುಕವಾಡುವ ಕುಟುಂಬ ಹಾಗೂ ಸಮಾಜದ ಬಾಯಿಗೆ ಬೀಗ ಬೀಳುತ್ತದೆ. ತಾನು ಕೆಡುವುದಲ್ಲದೇ ಕೋತಿ ವನವನ್ನೆಲ್ಲ ಕೆಡಿಸಿತು ಎಂಬ ಮಾತಿನಂತೆ  ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿರುವ ಮದ್ಯಪಾನದ ವಿರುದ್ಧ ಸಿಡಿದೆದ್ದಿದ್ದಾರೆ ಮಾನಿನಿಯರು. ನೂರಾರು ಸ್ವಸಹಾಯ ಗುಂಪುಗಳ ಸದಸ್ಯರು ಸರಕಾರಕ್ಕೆ ಬಿಸಿ ಮುಟ್ಟಿಸಲು ಕೆಲ ದಿನಗಳ ಹಿಂದೆ ಕಾಲ್ನಡಿಗೆಯಲ್ಲೇ ರಾಜಧಾನಿಗೆ ತೆರಳಿದ್ದರು. ಈ ದುರ್ಗೆಯರ ಮನೋಬಲದ ಮೂಲ ಸ್ತ್ರೀ ಶಕ್ತಿ ಸಂಘಗಳೇ. ಇವರ ಒಗ್ಗಟ್ಟಿನ ಹಿಂದೆ ಸಂಘಟನಾ ಶಕ್ತಿಯನ್ನು ಉದ್ದೀಪಿಸುವ ಸಂಘಗಳ ಪ್ರಭಾವವಿದೆ. ಹೆಣ್ಣು ವಾಚಾಳಿ, ಬುದ್ಧಿಮಟ್ಟ ಮೊಣಕಾಲ ಕೆಳಗೆ, ಒಡಕು ಬಾಯಿಯವಳು ಎಂಬ ಅಂಕಿತಗಳೇನೇ ಇದ್ದರೂ ಅನ್ಯಾಯದ ವಿರುದ್ಧ ಆಕೆ ಹೋರಾಡಲು ನಿಂತರೆ ಅವಳೆದುರು ಎಲ್ಲವೂ ಗೌಣ.

 ಬಾಳ ಬಂಡಿಯನ್ನು ಎಳೆಯುತ್ತ ಬಸವಳಿದ ಹೆಣ್ಣು ಮಕ್ಕಳು ಹಾಯಾಗಿ ನಾಲ್ಕು ದಿನ ಪ್ರವಾಸಕ್ಕೋ, ಪುಣ್ಯಕ್ಷೇತ್ರಗಳಿಗೋ ಹೋಗಲು ಈಗ ತಮ್ಮ ಮನೆಯವರನ್ನು ನೆಚ್ಚಿಕೊಳ್ಳಬೇಕಾಗಿಲ್ಲ. ಸಂಘದ ಸದಸ್ಯೆಯರೆಲ್ಲ ವಾಹನವೊಂದನ್ನು ಗೊತ್ತುಪಡಿಸಿಕೊಂಡು ಮನೆಯವರಿಗೆ ಟಾ ಟಾ ಹೇಳುತ್ತಾರೆ. ನಾಲ್ಕಾರು ದಿನ ಸ್ವತಂತ್ರ ಬದುಕನ್ನು ಬದುಕುವ, ಧಾವಂತದ ಜೀವನದಿಂದ ಕ್ಷಣಿಕ ಮಟ್ಟಿಗಾದರೂ ಬಿಡುಗಡೆ ಹೊಂದುವ ಅವಕಾಶವನ್ನು ಮಾಡಿಕೊಡುತ್ತವೆ ಸಂಘಗಳು. ತನಗೂ ಒಂದು ಬದುಕಿದೆ ಎಂಬ ಅಸ್ಮಿತೆ ಅವಳನ್ನು ಆವರಿಸಿಕೊಳ್ಳುತ್ತದೆ. ಪ್ರತಿ ನಿತ್ಯದ ಏಕತಾನತೆಯಿಂದ ಹೊರ ಬಂದು ಮನಸ್ಸು ಪುನಶ್ಚೇತನ ಗೊಳ್ಳುತ್ತದೆ.

 ಸ್ವ ಸಹಾಯ ಸಂಘಗಳ ಪರಿಕಲ್ಪನೆ ಮೊಟ್ಟ ಮೊದಲು ಹುಟ್ಟಿಕೊಂಡದ್ದು ಬಾಂಗ್ಲಾ ದೇಶದಲ್ಲಿ. 86-87ರ ಆಸುಪಾಸಿನಲ್ಲಿ ನಮ್ಮ ದೇಶದಲ್ಲಿ ಹುಟ್ಟಿಕೊಂಡ ಉಳಿತಾಯ ಸಂಘಗಳ ಸಂಖ್ಯೆ ಇಪ್ಪತ್ತು ಲಕ್ಷವನ್ನು ದಾಟಿದೆ. ಆರ್ಥಿಕ, ಸಾಮಾಜಿಕ ಅಭಿವೃದ್ಧಿಯೇ ಇವುಗಳ ಮೂಲ ಮಂತ್ರವಾಗಿದೆ. ಸಂಘಗಳೆಂಬ ಆಪತ್ಪಾಂಧವರಿರದೇ ಹೋಗಿದ್ದಲ್ಲಿ ನಮ್ಮ ಸಮಾಜದ ಹೆಣ್ಣು ಮಕ್ಕಳ ಬದುಕು ಅಯೋಮಯವಾಗಿರುತ್ತಿತ್ತು. ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಇವು ಅಭಯ ಹಸ್ತಗಳಾಗಿವೆ. ಹೆರಿಗೆಯೇ ಬರಲಿ ನಾಮಕರಣವೇ ಇರಲಿ, ಮದುವೆ ಮತ್ತೊಂದು ಸಂಭ್ರಮವೇನೇ ಇದ್ದರೂ ಉಳಿತಾಯ ಸಂಘಗಳೇ ಹೆಂಗಸರಿಗೆ ಆಸರೆ.  ಇದರಲ್ಲಿ ಸದಸ್ಯತ್ವವನ್ನು ಪಡೆದ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿದ್ದಾರೆ. ದೊರೆತ ಅಲ್ಪ ಮಟ್ಟದ ಸಾಲದಿಂದ ಕುರಿ-ಕೋಳಿಗಳನ್ನೋ, ದನ-ಕರುಗಳನ್ನೋ ಸಾಕಿ ಜೀವನ ಮಟ್ಟವನ್ನು ಉನ್ನತೀಕರಣಗೊಳಿಸಿಕೊಂಡಿದ್ದಾರೆ. ಗಂಡು ದಿಕ್ಕಿರದ, ಇದ್ದೂ ಇಲ್ಲದಂತಿರುವ ಕುಟುಂಬಗಳಿಗೆ ಸ್ವ ಸಹಾಯ ಗುಂಪುಗಳು ವರದಾನವಾಗಿವೆ. ಮಹಿಳಾ ಸಬಲೀಕರಣವೇ ಇವುಗಳ ಮೂಲ ಉದ್ದೇಶವಾಗಿದೆ.

 ಕಸುವಾದ ನೆಲ ಸಿಕ್ಕರೆ ಸಾಕು ಬಸಳೆಯ ಹರಿವು ಹಾವು ಹರಿದಂತೆ. ಹದವಾದ ಮಣ್ಣಿನಲ್ಲಿ ಹೂತ ಬೇರುಗಳು ಸಿಕ್ಕ ಪಸೆಯನ್ನೇ ಹೀರಿ ಒಂಟಿ ದೇಟಿಗೆ ನೂರೆಂಟು ಟಿಸಿಲುಗಳನ್ನು ಕರುಣಿಸುತ್ತದೆ. ಅವುಗಳದ್ದೋ ಶರವೇಗದ ಹರಿವು. ನಾಮುಂದೆ ತಾಮುಂದೆ ಎನ್ನುವ ಅದಮ್ಯ ಉತ್ಸಾಹ. ಸೊಕ್ಕಿ ಸೆಟೆದು ಉದ್ದಗಲಕ್ಕೂ ಹಬ್ಬುವ ಬಸಳೆಯ ಬಳ್ಳಿಯಂತೆ ಸ್ವಸಹಾಯ ಗುಂಪುಗಳೆಂಬ ರಸ ಬಳ್ಳಿ ಹಬ್ಬಲಿ.



    

ಗೌರಿ.ಚಂದ್ರಕೇಸರಿ, 
                    ಶಿವಮೊಗ್ಗ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *