

ಇಂತಹ ಸುಧಾರಕರನ್ನಲ್ಲವೆ ‘ಸಿಂಗಂ’ ಎನ್ನಬೇಕಾದ್ದು?
ಇತ್ತೀಚಿನ ದಿನಗಳಲ್ಲಿ ಒಂದು ಟ್ರೆಂಡ್ ಶುರುವಾಗಿದೆ. ಖಾಕಿ ಹಾಕಿ ಸಾರ್ವಜನಿಕವಾಗಿ ಸಿನಿಮೀಯ ಶೈಲಿಯಲ್ಲಿ ಖಡಕ್ ವಾರ್ನಿಂಗ್ ನೀಡಿದ ಕೂಡಲೇ ಅವರನ್ನು “ಸಿಂಗಂ” ಎಂದು ಬಿರುದು ನೀಡುವ, ಒಂದೆರಡು ಪ್ರಕರಣ ಭೇದಿಸಿದ ಕೂಡಲೇ ದಕ್ಷ, ಪ್ರಾಮಾಣಿಕ ಎಂದು ವೈಭವೀಕರಿಸುವ, ಅವರಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿ ಬಳಗ ಪೇಜ್ ಸೃಷ್ಟಿಸುವ ಚಾಳಿ ಎಗ್ಗಿಲ್ಲದೇ ನಡೆಯುತ್ತಿವೆ. ವಾಸ್ತವದಲ್ಲಿ ಸರ್ಕಾರ ಅವರಿಗೆ ಕಾರು, ಬಂಗ್ಲೆ, ವೇತನ ಕೊಡುವುದೇ ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡಲಿ ಎಂದಲ್ಲವೇ?
ಅದಿರಲಿ; ಹೀಗೆ ವಂಧಿಮಾಗದರ ಕೈಯಿಂದಲೇ ಅಭಿಮಾನ ಬಳಗ ಸೃಷ್ಟಿ ಮಾಡಿಸಿಕೊಂಡು, ಹೋದಲ್ಲಿ ಬಂದಲ್ಲೆಲ್ಲ ಬಹುಪರಾಕ್ ಹಾಕಿಸಿಕೊಂಡು ತಿರುಗಾಡುವ ಅಧಿಕಾರಿಗಳು ಒಂದೆಡೆಯಾದರೆ, ಸದ್ದಿಲ್ಲದೇ ಸೇವೆಯನ್ನೇ ಉಸಿರಾಗಿಸಿಕೊಂಡು, ತಾಯ್ತನದ ಅಕ್ಕರೆಯಿಂದ ಕ್ರಿಮಿನಲ್ ಗಳ ಮನಃಪರಿವರ್ತನೆಯಲ್ಲಿ ತಣ್ಣಗೆ ತೊಡಗಿರುವ ಪ್ರಾಮಾಣಿಕ ವೃತ್ತಿನಿಷ್ಠ ಅಧಿಕಾರಿಯೊಬ್ಬರು ನಮ್ಮ ನಡುವೆಯೇ, ಕರ್ನಾಟಕ ಗೃಹ ಇಲಾಖೆಯಲ್ಲಿ ಇದ್ದಾರೆ.
ಅವರು ಮೂಲತಃ ಆಯುರ್ವೇದ ವೈದ್ಯರು. ದೇಹದ ಕಾಯಿಲೆಗಳಿಗೆ ಚಿಕಿತ್ಸೆಯನ್ನು ಕೊಡುತ್ತಿದ್ದರು. ಗೃಹ ಇಲಾಖೆ ಸೇರಿದ ನಂತರ ಅಪರಾಧಿಕ ಮನಸ್ಥಿತಿಗೇ ಚಿಕಿತ್ಸೆ ಕೊಡುತ್ತಿದ್ದಾರೆ. ಹದಿನಾಲ್ಕು ವರ್ಷಗಳಿಂದ ಅವರು ಕಾರ್ಯನಿರ್ವಹಿಸಿರುವ ಕಾರವಾರ, ಬಳ್ಳಾರಿ, ಶಿವಮೊಗ್ಗದಲ್ಲಿ ಈಗಾಗಲೇ ಅಂತಹ ಚಿಕಿತ್ಸೆಯನ್ನು ನೀಡಿ, ಅಪರಾಧಿಗಳಲ್ಲಿ ಕವಿಯನ್ನು, ಹಾಡುಗಾರರನ್ನು, ನಾಟಕಕಾರರನ್ನು, ಚಿತ್ರಕಲಾವಿದರನ್ನು, ರೇಖಾಚಿತ್ರಕಾರರನ್ನು, ವ್ಯಂಗ್ಯಚಿತ್ರಕಾರರನ್ನು ಅಷ್ಟೇ ಯಾಕೆ ಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಾಧಿಪತಿಯಂತಹದೇ ಕಾರ್ಯಕ್ರಮ ರೂಪಿಸಿ ಅದಕ್ಕೆ ‘ಸಾವಿರ ರೂಪಾಯಿ ಸರದಾರ’ ಎಂದು ಹೆಸರಿಟ್ಟು ಅಪರಾಧಿ ಎನ್ನಿಸಿಕೊಂಡಿರುವವರಲ್ಲೂ ಒಬ್ಬ ಬುದ್ಧಿವಂತನನ್ನು ಹೊರತೆಗೆಯುವ ಕೆಲಸ ಮಾಡಿದ್ದಾರೆ.
ಅವರು ಅಂದರೆ ಹಾಗೆಯೇ ಹೋದಲ್ಲಿ ಬಂದಲ್ಲಿ ಸುತ್ತಲೂ ಜನರಿರಬೇಕು. ಅವರೆಲ್ಲರೂ ಎಂತಹ ಜನರು? ಬಹುಪರಾಕ್ ಹಾಕುವ ಮಂದಿಯಲ್ಲ. ಎಲ್ಲರೂ ಆಪ್ತಮಿತ್ರರೇ. ಅಲ್ಲಿ ಅವರೊಡನೆ ಕಾಲೇಜು ಕಲಿತವರಿರುತ್ತಾರೆ, ಬಾಲ್ಯದಲ್ಲಿ ಒಡನಾಡಿದವರು ಇರುತ್ತಾರೆ, ಅವರ ದೂರದ ಮತ್ತು ಹತ್ತಿರದ ಸಂಬಂಧಿಯೊಬ್ಬರು ಇರ್ತಾರೆ. ಅಷ್ಟೇ ಯಾಕೆ ಇವರು ಊಟಕ್ಕೆ ಕೂತಾಗ ತಾವೊಬ್ಬ ಹಿರಿಯ ಅಧಿಕಾರಿ ಎನ್ನುವುದನ್ನು ಮರೆತು ತಮ್ಮ ಕಾರು ಚಾಲಕನನ್ನು ಪಕ್ಕದಲ್ಲೇ ಕೂರಿಸಿಕೊಂಡು ಊಟ ಮಾಡಿಸುತ್ತಾರೆ. ಸ್ನೇಹಿತರು ಹಿರಿಯನಿರಲಿ, ಕಿರಿಯನಿರಲಿ, ಬಡವನೇ ಇರಲಿ, ಶ್ರೀಮಂತನೇ ಇರಲಿ ಅವರ ದೃಷ್ಟಿಯಲ್ಲಿ ಎಲ್ಲರೂ ಒಂದೇ! ಇಂತಹ ಅಪರೂಪದ ವ್ಯಕ್ತಿತ್ವದ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡ, ಪ್ರಗತಿಪರ ಮನೋಭಾವದ ಅಧಿಕಾರಿ ನಮ್ಮ ನಡುವೆ ಇದ್ದಾರೆ.
ಅವರು ಬೇರೆ ಯಾರೂ ಅಲ್ಲ ಡಾ.ಪಿ.ರಂಗನಾಥ್. ಹೌದು, ಮೊನ್ನೆಯಷ್ಟೇ ಪರಪ್ಪನ ಅಗ್ರಹಾರದ ಜೈಲಿನ ಮುಖ್ಯ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುವುದು ಡಾ.ರಂಗನಾಥ್.
ಮೂಲತಃ ಇವರು ಚಾಮರಾಜನಗರ ಜಿಲ್ಲೆಯವರು. ಅಲ್ಲಿನ ಕೊಳ್ಳೇಗಾಲ ತಾಲೂಕಿನಲ್ಲಿರುವ ಎಡಮೋಳೆ ಎಂಬ ಕುಗ್ರಾಮದವರು. ಆ ಗ್ರಾಮದ ಪರುವಶೆಟ್ಟಿ- ಶಂಕರಮ್ಮ ದಂಪತಿಗಳ ಪುತ್ರರಾಗಿ 14 ಫೆಬ್ರವರಿ 1977 ರಂದು ತುಂಬು ಕುಟುಂಬದಲ್ಲಿ ಜನಿಸಿದ ರಂಗನಾಥ ಅವರು ಓದಿದ್ದು ಆಯುರ್ವೇದ ಮೆಡಿಕಲ್ ಪದವಿ. ಕಾಲೇಜು ದಿನಗಳಿಂದಲೂ ನಾನೊಬ್ಬ ಅಧಿಕಾರಿಯಾಗಬೇಕು, ಆ ಮೂಲಕ ತುಳಿತಕ್ಕೊಳಗಾದವರಿಗೆ ಸೇವೆ ಸಲ್ಲಿಸಬೇಕು ಎಂಬ ಅದಮ್ಯ ಬಯಕೆಯನ್ನು ಹೊಂದಿದ್ದ ಇವರು, ಕರ್ನಾಟಕ ಲೋಕಸೇವಾ ಆಯೋಗ 2007 ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕಾರಾಗೃಹ ಇಲಾಖೆಗೆ ಡಿವೈಎಸ್ಪಿಯಾಗಿ ನೇಮಕಗೊಂಡರು. ಕಾರವಾರದಲ್ಲಿ ಬಂಧಿಖಾನೆ ಡಿವೈಎಸ್ಪಿಯಾಗಿ ವೃತ್ತಿ ಆರಂಭಿಸಿ, ನಂತರ ಬಳ್ಳಾರಿ ಕೇಂದ್ರ ಕಾರಾಗೃಹದ ಎಸ್ಪಿಯಾಗಿ, ಶಿವಮೊಗ್ಗ ಸೆಂಟ್ರಲ್ ಜೈಲಿನ ಚೀಫ್ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸಿ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರಾಗಿ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದಾರೆ.
ಸಾಮಾನ್ಯವಾಗಿ ನಾಗರಿಕ ಪೊಲೀಸರು ತಮ್ಮ ಸರಹದ್ದಿನೊಳಗೆ ನಾಗರಿಕರ ಮಧ್ಯೆ ಇರುತ್ತಾರೆ. ಇಲ್ಲಿ ಅಪರಾಧಿಕ ಮನೋಭಾವದ ಜನರ ಸಂಖ್ಯೆ ಕಡಿಮೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಇವರ ಮುಖ್ಯ ಕೆಲಸ. ಅದಕ್ಕಾಗಿ ಇವರಿಗೆ ಲಾಠಿ, ಬಂದೂಕು, ಪಿಸ್ತೂಲ್ ಗಳನ್ನು ನೀಡುತ್ತೆ ಸರ್ಕಾರ. ಆದರೆ ಇವರಿಗಿಂತಲೂ ಹೆಚ್ಚಿನ ಸವಾಲಿನ ಕೆಲಸ ಅಂದರೆ ಕಾರಾಗೃಹದಲ್ಲಿ ಕೆಲಸ ಮಾಡೋದು. ಇಲ್ಲಿ ಇರುವ ಬಂಧಿ ಗಳೆಲ್ಲರೂ ಒಂದಲ್ಲ ಒಂದು ಅಪರಾಧಿಕ ಕೃತ್ಯ ಎಸಗಿದವರೇ. ವಿಚಾರಣಾ ಖೈದಿಗಳಿಗಿಂತ ಸಜಾ ಬಂದಧಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಅವರಲ್ಲಿ ಕೊಲೆ, ಹಲ್ಲೆ, ದರೋಡೆ, ಸುಲಿಗೆ, ಕಳ್ಳತನ , ಅತ್ಯಾಚಾರ, ವಂಚನೆ ಹೀಗೆ ಒಂದಲ್ಲ ಒಂದು ಕೃತ್ಯ ಎಸಗಿಯೇ ತಪ್ಪಿತಸ್ಥರಾಗಿ ಜೈಲಿಗೆ ಬಂದಿರುತ್ತಾರೆ. ಇವರ ನಡುವೆ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಕೆಲಸ ಮಾಡುವ ಕಾರಾಗೃಹದ ಅಧಿಕಾರಿ ಮತ್ತು ಸಿಬ್ಬಂದಿಗಳ ಕೆಲಸ ಮಾತ್ರ ಅತ್ಯಂತ ಶ್ಲಾಘನೀಯ.
ಇಂತಹ ಸೇವೆಯಲ್ಲಿ ಸರಿಸುಮಾರು ಒಂದೂವರೆ ದಶಕಗಳಿಂದ ಡಾ.ರಂಗನಾಥ ತೊಡಗಿಸಿಕೊಂಡಿದ್ದಾರೆ. ದೇಶದ ಪ್ರಥಮ ಕೊರಿಯನ್ ಮಾದರಿಯ ಜೈಲು ಎನ್ನಿಸಿರುವ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಇವರ ನೇತೃತ್ವದಲ್ಲಿ ಆಗಿರುವ ಸುಧಾರಣೆ ಅಸಾಮಾನ್ಯವಾದುದು. 600 ಕ್ಕೂ ಅಧಿಕ ಖೈದಿಗಳಿರುವ ಶಿವಮೊಗ್ಗ ಜೈಲನ್ನು 90 ಮಂದಿ ಅಧೀನ ಸಿಬ್ಬಂದಿಗಳನ್ನು ಇಟ್ಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಜೈಲಿನಲ್ಲೇ ತಮ್ಮ ಅಧಿಕಾರಾವಧಿಯಲ್ಲಿ ಕ್ರಿಮಿನಲ್ ಗಳ ತಲೆಯಲ್ಲೂ ಓದುವ, ಬರೆಯುವ, ಹಾಡುವ, ನಟಿಸುವ ಪ್ರವೃತ್ತಿಯನ್ನು ಬಿತ್ತಿದ್ದು. ಇದರ ಪರಿಣಾಮವೇ ಈ ಜೈಲಿನಲ್ಲಿ ಕವಿಗಳು, ಕಥೆಗಾರರು, ಚಿತ್ರಕಲಾವಿದರು, ಹಾಡುಗಾರರು ನಾಟಕಕಾರರು ಸೃಷ್ಟಿಯಾಗಿದ್ದಾರೆ.
ಮೊನ್ನೆಯಷ್ಟೇ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ವರ್ಗಾವಣೆಗೊಂಡ ರಂಗನಾಥ ಅವರಿಗೆ ಜೈಲಿನ ಸಿಬ್ಬಂದಿಗಳು ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆ ಕಾರ್ಯಕ್ರಮ ಉದ್ಘಾಟಿಸಿದ್ದು ಓರ್ವ ಖೈದಿ. ಆತನ ಹೆಸರು ಬೆಂಕಿ ಜಗದೀಶ @ ಫೈರ್ ಜಗ್ಗ. ಹುಲ್ಲಿನ ಬಣವೆಗೆ ಬೆಂಕಿ ಹಚ್ಚುವುದೇ ಈತನ ಕುಕೃತ್ಯವಾಗಿತ್ತು. ಆ ಕಾರಣಕ್ಕೆ ಜೈಲು ಪಾಲಾಗಿದ್ದ. ಮೊನ್ನೆಯ ಕಾರ್ಯಕ್ರಮದಲ್ಲಿ ಈತನ ಕೈಯಿಂದ ಜ್ಯೋತಿ ಬೆಳಗಿಸಲಾಯಿತು, ಅದಕ್ಕೆ ಕಾರಣ ಬೆಂಕಿಯನ್ನು ಹೇಗೆ ಮತ್ತು ಯಾವುದಕ್ಕೆ ಬಳಸಬಹುದು ಎಂಬುದನ್ನು ಆತನಿಗೆ ಮನವರಿಕೆ ಮಾಡಿಕೊಡುವುದು ಸಹ ಆತನಿಂದ ಜ್ಯೋತಿ ಬೆಳಗಿಸಲು ಕಾರಣವಾಯಿತು. ಬಳಿಕ ಫೈರ್ ಜಗ್ಗ ಭಾವುಕನಾದ. ರಂಗನಾಥ ಅವರ ಕಾರ್ಯವೈಖರಿಗೆ ಇದೊಂದು ಸನ್ನಿವೇಶವೇ ನಿದರ್ಶನ.
ಕೆಲವು ದಿನಗಳ ಹಿಂದಷ್ಟೇ ಕಾರವಾರದ ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕರಾದ ಗಂಗಾಧರ ಹಿರೇಗುತ್ತಿ ಅವರಿಗೆ ಶಿವಮೊಗ್ಗದಲ್ಲಿ ಮಿಂಚು ಶ್ರೀನಿವಾಸ ಪ್ರಶಸ್ತಿ ಪ್ರದಾನ ಆಗುತ್ತದೆ. ಪ್ರಶಸ್ತಿಯ ನಗದಾಗಿ ದೊರೆತ ಹತ್ತು ಸಾವಿರ ರೂಪಾಯಿಯನ್ನು ರಂಗನಾಥ ಅವರಿಗೆ ಹಸ್ತಾಂತರಿಸಿ, ಹತ್ತು ಸಾವಿರ ಪುಸ್ತಕಗಳು ಇರುವ ನಿಮ್ಮ ಜೈಲಿನ ಗ್ರಂಥಾಲಯಕ್ಕೆ ಬಳಸಿಕೊಳ್ಳಿ ಎಂದರು.
ಈಗ ಹೇಳಿ ಇಂತಹ ಮಾತೃ ಹೃದಯದ, ಜೀವಪರ ಕಾಳಜಿಯುಳ್ಳ ಅಧಿಕಾರಿಗಳಲ್ಲವೇ ನಮ್ಮ ಆಸ್ತಿ? ಇಂತಹ ಸುಧಾರಕರಲ್ಲವೇ ನಿಜವಾದ ಸಿಂಗಂ?

🖋 ಗೌಡಹಳ್ಳಿ ಮಹೇಶ್
ಉತ್ತರ ಕನ್ನಡ ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ವೃತ್ತ ನಿರೀಕ್ಷಕರಿಗೆ ಉಪ ಪೊಲೀಸ್ ವರಿಷ್ಠರಾಗಿ ಪದೋನ್ನತಿ ದೊರೆತಿದೆ. ಹೀಗೆ ಬಡ್ತಿ ಪಡೆದವರಲ್ಲಿ ಸಿದ್ಧಾಪುರ ಸಿ.ಪಿ.ಐ ಎನ್.ಮಹೇಶ್, ಜೊಯಡಾ ಸಿ.ಪಿ.ಐ ಹುಲ್ಲಣ್ಣನವರ್, ಶಿರಸಿ ಸಿ.ಪಿ.ಐ ಪ್ರದೀಪ ಸೇರಿದ್ದಾರೆ. ಈ ಮೂವರೂ ಅಧಿಕಾರಿಗಳು ಡಿ.ವೈ.ಎಸ್.ಪಿ. ಗಳಾಗಿಭಡ್ತಿ ಹೊಂದಿದ್ದಕ್ಕೆ ಅವರ ಹಿತೈಶಿಗಳು ಅಭಿನಂದಿಸಿದ್ದಾರೆ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
