

ಸಿದ್ದಾಪುರ
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಾಪಂ ಸಭಾಭವನದಲ್ಲಿ ಕೋವಿಡ್-19 ಹಾಗೂ ಕೆ.ಎಫ್.ಡಿ. ಕಾಯಿಲೆಗಳ ನಿಯಂತ್ರಣದ ಕುರಿತಂತೆ ಅಧಿಕಾರಿಗಳ ಸಮಾಲೋಚನಾ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ತಹಸೀಲದಾರ ಪ್ರಸಾದ ಎಸ್.ಎ. ತಾಲೂಕಿನಲ್ಲಿ ಈವರೆಗೆ ಈ ಎರಡೂ ಕಾಯಿಲೆಗಳ ಬಗ್ಗೆ ತೆಗೆದುಕೊಳ್ಳಲಾದ ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ಕ್ರಮಗಳ ಕುರಿತಾದ ವಿವರ ನೀಡಿ ಸಾರ್ವಜನಿಕರಿಗೆ ಲಸಿಕೆ ನೀಡಿಕೆ ಕಾರ್ಯ ನಡೆಯುತ್ತಿದೆ. ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು ಅಲ್ಲಿ ಮತ್ತು ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆ ಹಾಗೂ ಅಗತ್ಯ ಬಿದ್ದರೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಆದರೆ ದಿನದಿಂದ ದಿನಕ್ಕೆ ಪಾಸಿಟೀವ್ ಪ್ರಕರಣ ಕಂಡುಬರುತ್ತಿರುವುದು ಕಳವಳಕಾರಿ.ಕಳೆದ 10 ದಿನದಲ್ಲಿ ಒಮ್ಮೇಲೆ ಹೆಚ್ಚಳವಾಗಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ|ಲಕ್ಷ್ಮೀ ಕಾಂತ ವಿವರ ನೀಡಿ ಜನರು ನೆಗಡಿ,ಕೆಮ್ಮು ಮುಂತಾದವಕ್ಕೆ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಅಲ್ಲಿ ಅವುಗಳಿಗೆ ಮಾತ್ರೆ ನೀಡುತ್ತಾರೆ. ಯಾವುದೇ ಪರೀಕ್ಷೆ ನಡೆಸುತ್ತಿಲ್ಲ. ಸರಕಾರಿ ಆಸ್ಪತ್ರೆಗೆ ಅಂಥ ರೋಗಿಗಳ ಕುರಿತು ಮಾಹಿತಿಯೂ ದೊರಕುತ್ತಿಲ್ಲ. ಶೇ.80ರಷ್ಟು ಜನರಿಗೆ ಈಗಾಗಲೇ ಪಾಸಿಟೀವ್ ಇರುವ ಸಾಧ್ಯತೆ ಇದೆ. ಮದುವೆ ಕಾರ್ಯಗಳಿಂದ ಗಣನೀಯ ಸಂಖ್ಯೆಯಲ್ಲಿ ಕಾಯಿಲೆ ಹೆಚ್ಚಳವಾಗಿದೆ ಎಂದರು.
ಅನಂತ ಅಶೀಸರ ಮಾತನಾಡಿ ನೆಗಡಿ,ಕೆಮ್ಮು,ಜ್ವರಗಳ ಕುರಿತು ಅಲಕ್ಷ ಮಾಡುವಂತಿಲ್ಲ. ಗ್ರಾಮೀಣ ಭಾಗದವರು ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿಲ್ಲ ಎಂದು ತಿಳಿದುಬಂದಿದೆ. ಮದುವೆ ಕಾರ್ಯಗಳಿಂದಲೇ ಕಾಯಿಲೆ ಹೆಚ್ಚಳವಾಗಿರುವ ಸಾಧ್ಯತೆ ಇದೆ. ತಾಲೂಕಿನಲ್ಲಿ ಈ ಜನತಾ ಕಪ್ರ್ಯೂ ಬಂದ ನಂತರದಲ್ಲಿ 165 ಅನುಮತಿ ಪಡೆದ ಮದುವೆಗಳು ನಡೆದಿವೆ. ಮದುವೆ ಮುಂದಕ್ಕೆ ಹಾಕುವ ಬಗ್ಗೆ ಜನರಲ್ಲಿ ಅರಿವು ಬರಬೇಕು. ಒಮ್ಮೆ ಇವೆಲ್ಲವನ್ನೂ ಸಂಪೂರ್ಣ ನಿಲ್ಲಿಸಬೇಕು. ದೊರೆತ ಮಾಹಿತಿಯ ಪ್ರಕಾರ ತಾಲೂಕಿನ ಹಲವು ಭಾಗದಲ್ಲಿ ಜನರಲ್ಲಿ ಜ್ವರ ಕಾಣಿಸಿಕೊಂಡಿದೆ. ಈ ಮಟ್ಟದಲ್ಲಿ ಪಾಸಿಟೀವ್ ಬಂದರೆ ನಿಯಂತ್ರಣ ಮಾಡುವದು ಕಷ್ಟ. ಮಂಗನ ಕಾಯಿಲೆ ಶರಾವತಿ ನದಿಯ ಅಂಚಿನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಕಳೆದ ವರ್ಷ ಜೋಗಿನಮಠದಲ್ಲಿ ಹೆಚ್ಚಿತ್ತು. ಯಾವುದೇ ಕಾರಣಕ್ಕೂ ಅಲಕ್ಷ ಮಾಡಿದರೆ ಈ ಎರಡೂ ಕಾಯಿಲೆಯನ್ನುನಿಭಾಯಿಸುವದು ಕಷ್ಟವಾಗಬಹುದು ಎಂದರು.
ಭಾನ್ಕುಳಿಯ ಗೋಸ್ವರ್ಗದಲ್ಲಿ ಜಾನುವಾರು ತಳಿ ಸಂರಕ್ಷಣಾ ಕೇಂದ್ರ ಸ್ಥಾಪನೆ ಕುರಿತಂತೆ ತಾಪಂನಲ್ಲಿ ಠರಾವು ಮಾಡಲಾಗಿದ್ದು ಈ ಕುರಿತು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವದು. ಕತ್ತಲೆ ಕಾನು ಪ್ರದೇಶವನ್ನು ಜೀವ ವೈವಿಧ್ಯ ತಾಣ ಎಂದು ಅಧಿಕೃತವಾಗಿ ಘೋಷಿಸುವ ಕುರಿತು ಠರಾವಾಗಿದ್ದು ಆ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಘನಾಶಿನಿ- ಬೇಡ್ತಿ ನದಿ ತಿರುವು ಪ್ರಸ್ತಾಪವನ್ನು ಮುಂದುವರಿಸಬಾರದು ಎಂದು ಮುಖ್ಯಮಂತ್ರಿಗಳಿಗೆ ಸಮಿತಿಯ ಮೂಲಕ ಮನವಿ ಸಲ್ಲಿಸಲು ನಿರ್ಣಯಿಸಲಾಗಿದೆ ಎಂದು ಅನಂತ ಹೆಗಡೆ ಅಶೀಸರ ತಿಳಿಸಿದರು.
ತಹಸೀಲದಾರ ಪ್ರಸಾದ ಎಸ್.ಎ., ತಾಲೂಕು ವೈದ್ಯಾದಿಕಾರಿ ಡಾ|ಲಕ್ಷ್ಮಿಕಾಂತ, ನರೇಗಾ ಸಹಾಯಕ ನಿರ್ದೇಶಕ ದಿನೇಶ, ಸೆಕ್ಷನ್ ಫಾರೆಸ್ಟರ್ ಮಂಜುನಾಥ ಮುಂತಾದವರು ಇದ್ದರು.


ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಶಿಲೀಂಧ್ರ ಸೋಂಕು: ಏನಿದು ಫಂಗಲ್ ಇನ್ಫೆಕ್ಷನ್?ಇಲ್ಲಿದೆ ಮಾಹಿತಿ…
ಕೊರೋನಾ 2ನೇ ಅಲೆಯಿಂದಾಗಿ ಈಗಾಗಲೇ ತತ್ತರಿಸಿರುವ ಭಾರತದಲ್ಲಿ ಹೊಸ ಸಂಕಷ್ಟವೊಂದು ಶುರುವಾಗಿದೆ. ಸೋಂಕಿಗೊಳಗಾಗಿ ಗುಣಮುಖರಾದವರಲ್ಲಿ ಬ್ಲಾಕ್ ಫಂಗಲ್ ಎಂದು ಕರೆಯಲ್ಪಡುವ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಬಹಳ ಎಚ್ಚರಿಕೆಯಿಂದಿರುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ.

ನವದೆಹಲಿ: ಕೊರೋನಾ 2ನೇ ಅಲೆಯಿಂದಾಗಿ ಈಗಾಗಲೇ ತತ್ತರಿಸಿರುವ ಭಾರತದಲ್ಲಿ ಹೊಸ ಸಂಕಷ್ಟವೊಂದು ಶುರುವಾಗಿದೆ. ಸೋಂಕಿಗೊಳಗಾಗಿ ಗುಣಮುಖರಾದವರಲ್ಲಿ ಬ್ಲಾಕ್ ಫಂಗಸ್ ಎಂದು ಕರೆಯಲ್ಪಡುವ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಬಹಳ ಎಚ್ಚರಿಕೆಯಿಂದಿರುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ.
ಶಿಲೀಂದ್ರ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ವರದಿಯಾಗುತ್ತಿವೆ. ಕಳೆದ ವರ್ಷ ಕೂಡ ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಬ್ಲಾಕ್ ಫಂಗಸ್’ಗಳು ಕಂಡು ಬಂದಿದ್ದವು. ಈ ಸೋಂಕು ಕಾಣಿಸಿಕೊಂಡವರಲ್ಲಿ ದೃಷ್ಟಿ ಹೀನತೆಗೆ ಕಾರಣವಾಗಲಿದೆ. ಒಂದು ವೇಳೆ ಈ ಸೋಂಕು ಮೆದುಳಿಗೆ ವ್ಯಾಪಿಸಿದರೆ ಸಾವನ್ನಪ್ಪುವ ಸಾಧ್ಯತೆಯೂ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಏನಿದು ಬ್ಲಾಕ್ ಫಂಗಸ್…?
ರೋಗನಿರೋಧಕ ಶಕ್ತಿ ಕಡಿಮೆ ಇದ್ದವರು, ಡಯಾಬಿಟಿಸಿ ನಂತಹ ಕಾಯಿಲೆ ಉಳ್ಳವರಲ್ಲಿ ಶಿಲೀಂದ್ರ ಸೋಂಕು ಕಾಣಿಸಿಕೊಳ್ಳುತ್ತಿದೆ.
ಕೊರೋನಾದಿಂದ ಗುಣಮುಖರಾದ ರೋಗಿಗಳು ಮ್ಯೂಕೋರ್ಮೈಕೋಸಿಸ್’ಗೆ ಕಾರಣವಾಗುವ ಫಂಗಸ್ ಗಳಿಗೆ ತುತ್ತಾಗುವುದರಿಂದ ಸೋಂಕಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ.
ರೋಗ ಲಕ್ಷಣಗಳೇನು?
ಕಣ್ಣಿನಲ್ಲಿ ನೋವು, ಒಂದು ಕಡೆ ಮುಖ ಊದಿಕೊಳ್ಳುವಿಕೆ, ತಲೆ ನೋವು, ಜ್ವರ, ಮೂಗು ಕಟ್ಟುವಿಕೆ ಇವು ಸೋಂಕಿನ ಲಕ್ಷಣಗಳಾಗಿವೆ.
ಯಾರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ?
ಕೊರೋನಾ ಸೋಂಕಿಗೆ ತುತ್ತಾಗಿದ್ದ ಸಕ್ಕರೆ ಕಾಯಿಲೆ ಇರುವ ರೋಗಿಗಳಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಕೊರೋನಾದಿಂದ ಚೇತರಿಸಿಕೊಂಡ 2-3 ವಾರಗಳ ಬಳಿಕ ಈ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಚಿಕಿತ್ಸೆಗಾಗಿ ಸ್ಟಿರಾಯ್ಡ್ ಪಡೆದುಕೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಈ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. (kpc)
