

ಹತ್ತಿರ ಹತ್ತಿರ ೩ ಲಕ್ಷ ಚದರ ಕಿಲೋಮೀಟರ್ ಇರುವ ‘ಮಹಾ ಕಣಿವೆ’ ರಾಜ್ಯದ ನನ್ನ ಮೊದಲ ನೋಟ ಸದಾ ನೆನಪಿನಲ್ಲಿ ಉಳಿಯುವಂತದ್ದು. ನಾವು ಡಾಲ್ಲಸ್‌ನಿಂದ ಮೂರು ದಿನಗಳ ಪ್ರವಾಸಕ್ಕೆ ಹೊರಟಾಗ ವಿಮಾನದಲ್ಲಿ ಎಂದಿನಂತೆ ನನಗೆ ಐಲ್ ಸೀಟೇ ಗತಿಯಾಗಿತ್ತು. ವಿಮಾನ ಇಳಿಯಲು ಇನ್ನು ೨೦-೨೫ ನಿಮಿಷಗಳಿರಬೇಕಾದರೆ ನಮ್ಮವರು ಪಕೃತಿಯ ಕರೆಗೆ ಹೋಗಿದ್ದೇ ತಡ ನಾನವಳ ಜಾಗ ಆಕ್ರಮಿಸಿದೆ. ವಿಮಾನ ಆಗಷ್ಟೇ ಇಳಿಯಲು ಸಿದ್ಧವಾಗಿತ್ತು. ‘ಮಹಾ ಕಣಿವೆ’ಯ ರುದ್ರ ರಮಣೀಯ ದೃಷ್ಯಗಳು ಕಾಣ್ತಾ ಇದ್ದವು. ಅಷ್ಟು ಸುಲಭಕ್ಕೆ ನೆನಪಿನಿಂದ ಮರೆಯಾಗುವಂತವಲ್ಲ ಆ ದೃಷ್ಯಗಳು. ಹಾಗಾಯೇ ನಮ್ಮ ವಿಮಾನ ಸರಿಯಾಗಿ ‘ಹೋವರ್ ಆಣೆಕಟ್ಟೆ’ಯ ಮೇಲೆ ಹೋಗಿದ್ದು ಮಾತ್ರ ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ. ನಾನು ಮುಂಚೆ ಅರಿಝೋನಾ ಸಂಪೂರ್ಣವಾಗಿ ಮರುಭೂಮಿಯಿಂದ ಆವರಿಸಲ್ಪಟ್ಟಿದೆ ಎಂದು ತಿಳಿದಿದ್ದೆ, ಆದರೆ ಆಮೇಲೆ ತಿಳಿದಿದ್ದೇನೇಂದರೆ ಬಹಳ ಸುಂದರವಾದ ಪರ್ವತ ಪ್ರದೇಶಗಳೂ ಈ ರಾಜ್ಯದಲ್ಲಿವೆ.

ಪ್ರಾಕೃತಿಕ ಅದ್ಭುತ ಗ್ರಾಂಡ್ ಕೆನ್ಯಾನ್‌ನಿಂದಾಗಿ ‘ಮಹಾ ಕಣಿವೆ ರಾಜ್ಯ’ ಎಂದು ಕರೆಯಲ್ಪಡುವ ಒಂದುಕಾಲದಲ್ಲಿ ಮೆಕ್ಸಿಕೋ ದೇಶದ ಭಾಗವಾಗಿದ್ದ ಅರಿಝೋನಾ ರಾಜ್ಯವಾಗಿ ಒಕ್ಕೂಟಕ್ಕೆ ಸೇರಿದ್ದು ಬಹಳ ತಡವಾಗಿ -ಇಂದಿಗೂ ಗಣನೀಯ ಸಂಖ್ಯೆಯ ಮೆಕ್ಸಿಕನ್ ಜನರು ಇಲ್ಲಿದ್ದಾರೆ ಮತ್ತು ಅವರ ಅಕ್ರಮ ವಲಸೆ ಇಲ್ಲಿ ದೊಡ್ಡ ಸಮಸ್ಯೆಯಾಗಿದೆ. ಪರಸ್ಪರ ಕೂಡಿರುವ ೪೮ ರಾಜ್ಯಗಳಲ್ಲಿ (ಇನ್ನೆರಡು ರಾಜ್ಯಗಳಾದ ಹವಾಯಿ ಮತ್ತು ಅಲಾಸ್ಕಾಗಳು ಅನುಕ್ರಮವಾಗಿ ದ್ವೀಪ ಸಮೂಹ ಮತ್ತು ಮತ್ತು ಉತ್ತರ ದಿಶೆಯಲ್ಲಿರುವಂತದ್ದು) ಕೊನೆಯದಾಗಿ ಅಮೆರಿಕಾ ಒಕ್ಕೂಟಕ್ಕೆ ಸೇರಿದ್ದು. ಅಂದರೆ ೧೯೧೨ ರಲ್ಲಿ. ಈ ನಾಡಿನಲ್ಲಿ ‘ನೊವಾಹೋ ನೇಶನ್’ ಸೇರಿಸಿ ಕೆಲ ಭಾಗಗಳು ನೇಟಿವ್ ಅಮೆರಿಕನ್ನರ ಸ್ವಾಯತ್ತ ಆಡಳಿತಕ್ಕೆ ಒಳಪಟ್ಟಿವೆ.
ಆರ್ಥಿಕವಾಗಿ ತಕ್ಕಮಟ್ಟಿಗೆ ಬಲಿಷ್ಟವಾದ ಈ ರಾಜ್ಯ ಗಣಿಗಾರಿಕೆ, ಕೃಷಿ, ಸೇವೆಗಳು ಮತ್ತು ಪ್ರವಾಸೋದ್ಯಮದಿಂದ ಪಡೆಯುತ್ತದೆ. ಆರ್ಥಿಕವಾಗಿ ತಕ್ಕಮಟ್ಟಿಗೆ ಪ್ರಬಲವಾಗಿರುವ ರಾಜ್ಯ ಹೆಚ್ಚಿನ ಸೂಚ್ಯಂಕಗಳಲ್ಲಿ ವಿಷಯಗಳಲ್ಲಿ ಮೇಲೂ ಇಲ್ಲದ ಕೆಳಗೂ ಇಲ್ಲದ ಮಧ್ಯಮ ವರ್ಗದ ರಾಜ್ಯ.
ಬೂದಿಯಿಂದೆದ್ದು ಬಂದ ಫೀನಿಕ್ಸ್ ಪಕ್ಷಿಯಂತೆ
ಮರುಭೂಮಿಯ ನಡುವೆ ಉದಯಿಸಿರುವ ನಗರ ಫಿನಿಕ್ಸ್ ಈ ರಾಜ್ಯದ ರಾಜಧಾನಿ. ದೇಶದ ಅತ್ಯಂತ ದೊಡ್ಡ ರಾಜಧಾನಿ ನಗರವಾದ ಫಿನಿಕ್ಸ್ ಅಮೆರಿಕಾದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದು.
ರಾಜ್ಯವಿಡೀ ಹರಿವ ಕೊಲರಾಡೋ ನದಿ ಈ ರಾಜ್ಯದ ನೆಲವನ್ನು ಕೊರೆದು ಕೊರೆದೂ ಈ ನಾಡಿಗೆ ಸಾಕಷ್ಟು ಪ್ರವಾಸಿ ತಾಣಗಳನ್ನ ನೀಡಿದೆ. ಗ್ರಾಂಡ್ ಕೆನ್ಯಾನ್, ಪಾವೆಲ್ ಸರೋವರ, ಹೋವರ್ ಆಣೆಕಟ್ಟು, ಕುದುರೆ ಲಾಳದ ತಿರುವು ಇತ್ಯಾದಿ. ಇದಲ್ಲದೇ ಸ್ಮಾರಕ ಕಣಿವೆ, ಹುಲ್ಲೆ ಕಣಿವೆ, ಇತ್ಯಾದಿ ಹತ್ತು ಹಲವು ಅದ್ಭುತ ಪ್ರವಾಸಿ ತಾಣಗಳಿವೆ ಎಲ್ಲವೂ ಅಸಾಮಾನ್ಯ ತಾಣಗಳೇ. ಈ ಕಾರಣದಿಂದಲೇ ಈ ನಾಡು ಪ್ರವಾಸೋದ್ಯಮದಿಂದ ಹೆಚ್ಚಿನ ಆದಾಯ ಪಡೆಯುತ್ತದೆ.
‘ಹಗಲು ಬೆಳಕಿನ ಉಳಿತಾಯ’ ಪದ್ಧತಿ ಅನೇಕ ದೇಶಗಳಲ್ಲಿದೆ. ಬೇಸಿಗೆಯಲ್ಲಿ ಗಡಿಯಾರವನ್ನು ಒಂದು ಗಂಟೆ ಮುಂದೋಡಿಸಿ ತಡವಾಗಿ ರಾತ್ರಿ ಮಾಡಿಕೊಳ್ಳುವ ವಿಧಾನ. ಅಂದರೆ ಅಮೆರಿಕಾದ ಮಟ್ಟಿಗೆ ಹೇಳುವುದಾದರೆ ಪ್ರತೀವರ್ಷ ಮಾರ್ಚ್ ಎರಡನೇ ಭಾನುವಾರದ ಬೆಳಗಿನ ಜಾವ ಎರಡು ಗಂಟೆಗೆ ಸಮಯವನ್ನು ಒಂದು ಗಂಟೆ ಮುಂದೂಡಿ ಮೂರು ಗಂಟೆ ಮಾಡ್ತಾರೆ. ಹಾಗೇ ನವೆಂಬರ್ ಮೊದಲನೇ ಭಾನುವಾರದ ಬೆಳಗಿನ ಜಾವದ ಎರಡು ಗಂಟೆಗೆ ಗಡಿಯಾರವ ಒಂದು ಗಂಟೆ ಹಿಂದೆ ಹಾಕಿ ಯಥಾ ಸ್ಥಿತಿಗೆ ತರುತ್ತಾರೆ. ಬೇಸಿಗೆಯಲ್ಲಿ ಸಂಜೆ ಹೆಚ್ಚು ಹಗಲನ್ನು ಹೊಂದುವುದು ಇದರ ಹಿಂದಿನ ಉದ್ದೇಶ. ಅನುಕೂಲತೆ ಅನನುಕೂಲತೆಗಳ ಬಗ್ಗೆ ಬಹಳ ವಾದಗಳಿವೆ. ಏನೇ ಆದರೂ ನನಗೆ ಖುಷಿಯಾಗ್ತಾ ಇತ್ತು, ರಾತ್ರಿ ೮.೩೦-೯ ರ ವರೆಗೂ ಬೆಳಕಿರೋದು. ಈ ಡೇ ಲೈಟ್ ಸೇವಿಂಗ್ ಅಥವಾ ಹಗಲು ಬೆಳಕಿನ ಉಳಿಕೆ ಪದ್ಧತಿ ಅರಿಝೋನಾ ಮತ್ತು ಹವಾಯಿಗಳಲ್ಲಿ ಮಾತ್ರ ಇಲ್ಲ. ಅದರಲ್ಲೂ ಮುಖ್ಯ ಭೂಭಾಗದಲ್ಲಿರೋ ೪೮ ರಾಜ್ಯಗಳಲ್ಲಿ ಅರಿಝೋನಾದಲ್ಲಿ ಮಾತ್ರ ಇಲ್ಲ ಅನ್ನೋಕೆ ಇಷ್ಟೆಲ್ಲಾ ಪೀಠಿಕೆ ಹಾಕಬೇಕಾಯ್ತು (ಅದರೆ ಅರಿಝೋನಾದ ನೊವಾಹೋ ನೇಶನ್ ಪ್ರದೇಶದಲ್ಲಿ ಡೇ ಲೈಟ್ ಸೇವಿಂಗ್ ಪಾಲಿಸ್ತಾರೆ).
ವಿಷಯಾಂತರವಾದರೂ ಪರವಾಗಿಲ್ಲ, ಈ ಡೇ ಲೈಟ್ ಸೇವಿಂಗಿನಿಂದಾಗಬಹುದಾದ ಒಂದು ವಿಚಿತ್ರ ಸನ್ನಿವೇಶ ಹೇಳ್ತಿನಿ ಕೇಳಿ. ಉದಾಹರಣೆಗೆ ಅವಳಿ ಮಕ್ಕಳ ಒಡಲೊಳಗಿಟ್ಟುಕೊಂಡ ಒಂದು ತಾಯಿ ನವೆಂಬರ್ ಮೊದಲ ಭಾನುವಾರ ೧. ೫೫ ಎ.ಎಂ ಗೆ ರಮೇಶನನ್ನೂ ಸರಿಯಾಗಿ ಹತ್ತು ನಿಮಿಷಗಳ ನಂತರ ಸುರೇಶನನ್ನೂ ಹೆತ್ತಳೆಂದುಕೊಳ್ಳಿ. ಮಧ್ಯರಾತ್ರಿ ಎರಡು ಗಂಟೆಗೆ ಸಮಯ ಒಂದು ಗಂಟೆ ಹಿಂದಕ್ಕೆ ಹೋಗುವ ಕಾರಣ ಸುರೇಶನ ಜನ್ಮ ಸಮಯ ಭಾನುವಾರ ಮಧ್ಯರಾತ್ರಿ ೧.೦೫ ಕ್ಕೆ ಆಗುತ್ತದೆ. ಅಂದರೆ ನಿಜವಾಗಿ ಸುರೇಶ ರಮೇಶನಿಗಿಂತ ಹತ್ತು ನಿಮಿಷ ಚಿಕ್ಕವನಾದರೂ ಟೆಕ್ನಿಕಲಿ ೫೦ ನಿಮಿಷ ದೊಡ್ಡವನಾಗುತ್ತಾನೆ. ಇವರಿಬ್ಬರಲ್ಲಿ ಅಣ್ಣ ಯಾರಾಗ್ತಾರೆ ಅನ್ನೋದೇ ದೊಡ್ಡ ಸಂಶಯ 😁
ಅದೇ ರೀತಿ ರಾತ್ರಿ ಪಾಳಿ ಇರುವವರು ಒಂದು ಗಂಟೆ ಹೆಚ್ಚು ಇಲ್ಲಾ ಕಡಿಮೆ ಕೆಲಸ ಮಾಡಬೇಕಾಗುತ್ತದೆ. ಇಂತಹ ಹಲ ಕುತೂಹಲಕಾರಿ ಅಂಶಗಳು ಈ ವಿಷಯದಲ್ಲಿ ನಿಮಗೆ ಸಿಗುತ್ತವೆ. ಆಸಕ್ತರು ಸ್ವಲ್ಪ ಯೋಚಿಸಿ ನೋಡಿ ಏನೆಲ್ಲಾ ವಿಶೇಷ ಸನ್ನಿವೇಶಗಳು ಬರಬಹುದೆಂದು.
ಮುಂದಿನ ಭಾಗದಲ್ಲಿ ನಾನು ನೋಡಿದ ಪ್ರವಾಸಿ ತಾಣಗಳ ಬಗ್ಗೆ ಹೇಳುತ್ತೇನೆ.
- ಪಟದಲ್ಲಿರುವುದು ಆ್ಯಂಟಲೋಪ್ ಅಥವಾ ಹುಲ್ಲೆ ಕಣಿವೆಯ ಒಂದು ದೃಷ್ಯ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
