

ನನ್ನ ಅಸ್ತಮಾಕ್ಕೆ ೬೦ ವರ್ಷ” ಎಂಬ ಹೆಸರಿನಲ್ಲಿ (ಸುಮಾರು ಅಷ್ಟೇ ವರ್ಷಗಳ ಹಿಂದೆ) ಕಸ್ತೂರಿಯಲ್ಲಿ ನನ್ನ ಪ್ರೀತಿಯ ಲೇಖಕ ಪಾ.ವೆಂ. ಆಚಾರ್ಯ (ಲಾಂಗೂಲಾಚಾರ್ಯ) ಲೇಖನ ಬರೆದಿದ್ದರು. ನಾಳೆ ಮೇ ೫ರಂದು ʼವಿಶ್ವ ಅಸ್ತಮಾ ದಿನʼ. ಹಾಗಂತ ನಾನು ಪತ್ನಿ ರೇಖಾಗೆ ಹೇಳಿದ್ದೇ ತಡ, ಅವಳು ಸಂದೂಕದಿಂದ ಒಂದು ಮೂಟೆ ಪಂಪ್‌ಗಳನ್ನು ತಂದು ನೆಲಕ್ಕೆ ಸುರುವಿದಳು. ನಾನು ನೋಡುತ್ತಿದ್ದೆ. ನೆಲದ ಮೇಲೆ ಪಂಪ್‌ಗಳದ್ದೇ ಒಂದು ರಂಗೋಲಿ ವಿನ್ಯಾಸ ತಯಾರಾಯಿತು. ಜೊತೆಗೆ ನನ್ನದೊಂದು ವಿಲಕ್ಷಣ ಪೋರ್ಟ್ರೇಟ್ ಕೂಡ…ಸಹಧರ್ಮಿಣಿಯ ಇಂಥ ಕೀಟಲೆಗಳನ್ನು ಒಂದಿಷ್ಟು ಸಹಿಸಿಕೊಂಡು ಸಹಕರಿಸಿದರೇನೆ ಉಸಿರು ಸಹನೀಯವಾಗುತ್ತದೆ. ಅಷ್ಟೊಂದು ಪಂಪ್‌ಗಳನ್ನು ಯಾಕೆ ಸಂಗ್ರಹಿಸಿ ಇಟ್ಟುಕೊಂಡಿದ್ದೇವೆ? ಏಕೆಂದರೆ, ಅವು ಖಾಲಿಯಾದಂತೆಲ್ಲ ತಿಪ್ಪೆ ರಾಶಿಗೆ ಸೇರಿಸಲು ನಮಗೆ ಇಷ್ಟವಿಲ್ಲ. ಎಂದಾದರೂ ಅವನ್ನೆಲ್ಲ ಕಂಪನಿಗೆ ಹಿಂದಿರುಗಿಸುವ ಕನಸು ನನ್ನದು. ಪದೇ ಪದೇ ಸಿಪ್ಲಾ ಕಂಪನಿಗೆ ಆ ಬಗ್ಗೆ ಬರೆಯುತ್ತಿದ್ದೇನೆ. ಕನಸು ಇನ್ನೂ ಕೈಗೂಡಿಲ್ಲ. ಜಟಾಪಟಿ ಜಾರಿಯಲ್ಲಿದೆ. ಕಂಪನಿಗಳು ಖಾಲಿ ಶೀಶೆಗಳನ್ನು ಮರಳಿ ತಕ್ಕೊಳ್ಳಲೇಬೇಕು ಅಂತ ಕೆಲವು ಸುಧಾರಿತ ದೇಶಗಳಲ್ಲಿ ನಿಯಮ ಇವೆ. ನಮ್ಮಲ್ಲಿ ಕೂಡ ಅಂಥ ನಿಯಮ ಬರುವವರೆಗೆ ನಾನು ಕಾಯಬೇಕೇನೊ.ಬೆಂಗಳೂರನ್ನು ʼಅಸ್ತಮಾ ರಾಜಧಾನಿʼ ಅಂತಲೇ ಕರೆಯುತ್ತಾರೆ. ಅದಕ್ಕೆ ಮೂರು ಮುಖ್ಯ ಕಾರಣ ಇವೆ: (1) ಗ್ರಾನೈಟ್ ಮೂಲಕ ರೇಡಾನ್ ಎಂಬ ವಿಕಿರಣ ಸೂಸುತ್ತಿರುತ್ತದೆ. ಗ್ರಾನೈಟ್ ಬಂಡೆಯ ಮೇಲೆಯೆ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ರೇಡಾನ್ ಜಾಸ್ತಿ. (2) ಹೂಗಳ ಪರಾಗದಿಂದಲೂ ಕೆಲವರಿಗೆ ಅಲರ್ಜಿ ಅಸ್ತಮಾ ಹೆಚ್ಚುತ್ತದೆ. ಎಲ್ಲಕ್ಕಿಂತ ಮುಖ್ಯ ಅಂದರೆ (3) ಬೆಂಗಳೂರಿನ ಈ ಕುಖ್ಯಾತಿಯನ್ನು ಸದಾಕಾಲ ಜೀವಂತ ಇಡುವಂತೆ ಗಾಳಿಯಲ್ಲಿ ವರ್ಷ ವರ್ಷಕ್ಕೆ ದೂಳುಕಣಗಳ ಸಾಂದ್ರತೆ ಹೆಚ್ಚುತ್ತಲೇ ಇದೆ. ಕೊರೊನಾ ಹಾಗೆ ಅಸ್ತಮಾ ಕೂಡ ಶ್ವಾಸಕೋಶದ ಕಾಯಿಲೆ. ಈಗ ನಮಗೆ ಡಬಲ್ ಟ್ರಬಲ್!

“ಹಾಗಿದ್ರೆ ಅಸ್ತಮಾ ಪೀಡಿತರು ಜಾಸ್ತಿ ಇರೋದ್ರಿಂದಲೇ ಇಲ್ಲಿ ಕೋವಿಡ್ ಹಾವಳಿ ಜಾಸ್ತಿ ಇರಬಹುದಾ?” ಅಂತ ಗೆಳೆಯ ಕುಮಾರ ರೈತ ನನ್ನನ್ನು ಕಳೆದ ವಾರ ಕೇಳಿದರು. ನಾನು ನನಗೆ ಗೊತ್ತಿದ್ದನ್ನು ಹೇಳಿದೆ. ಕುಮಾರ ರೈತ “ಆಲಿಸಿರಿ” ಎಂಬ ಆಡಿಯೊಬುಕ್ ಸಂಸ್ಥೆಯ ಮುಖ್ಯಸ್ಥರೂ ಆಗಿದ್ದರಿಂದ ಆ ಕುರಿತೇ ಒಂದು ವೆಬಿನಾರ್ ಏರ್ಪಡಿಸಿದರು. ಅದರ ಲಿಂಕ್ ಇಲ್ಲಿದೆ. ಇಬ್ಬರು ಡಾಕ್ಟರ್‌ಗಳ ಮಾತಿನ ನಂತರ ನನ್ನ ಚಿತ್ರೋಪನ್ಯಾಸವೂ ಇದೆ.https://www.facebook.com/watch/live/?v=4244496272262478&ref=watch_permalink
ನಾನು ಡಾಕ್ಟರ್ ಅಲ್ಲ; ಆದರೆ ಹೊಸ ಡಾಕ್ಟರಿಗಿಂತ ಹಳೇ ಪೇಶಂಟ್‌ಗೆ ಜಾಸ್ತಿ ಗೊತ್ತಿರುತ್ತದೆ ತಾನೆ? ಈ ವೆಬಿನಾರ್ ಎಂಬ ಜಾಲಗೋಷ್ಠಿಯಲ್ಲಿ ನನ್ನ ಸಚಿತ್ರ ಪ್ರಸೆಂಟೇಶನ್‌ನ ಮುಖ್ಯಾಂಶ ಏನೆಂದರೆ-1. ಅಸ್ತಮಾ ದಾಳಿ ಆದಾಗ ಅದು ಕೋವಿಡ್ ದಾಳಿಯೆಂದು ಭ್ರಮಿಸಿ ಆಸ್ಪತ್ರೆಗೆ ದೌಡಾಯಿಸಬೇಡಿ ಖಂಡಿತ ನಿಮ್ಮನ್ನು ʼಒಳಗೆ ಹಾಕ್ತಾರೆʼ.2. ನಿಜಕ್ಕೂ ಕೋವಿಡ್ ಲಕ್ಷಣ ಕಂಡುಬಂದರೆ ಅದು ಅಸ್ತಮಾ ಇದ್ದೀತೆಂದು ಕಡೆಗಣಿಸಬೇಡಿ. 3. ಕೋವಿಡ್ ದಾಳಿಯಾದಾಗ ಅಸ್ತಮಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆಗ ಸೀದಾ ಸೀದಾ ಆಕ್ಸಿಜನ್ ಸಿಲಿಂಡರ್ ಗೆ ಮುಗಿಬೀಳಬೇಡಿ. ಸ್ಟಿರಾಯಿಡ್ ಇಲ್ಲದ (ಚಿತ್ರದಲ್ಲಿ ತೋರಿಸಿದಂಥ ಲೆವೊ ಸಾಲ್ಬುಟಮಾಲ್, ಲೆವೊಸಿಟ್ರಿಝೈನ್) ಔಷಧಗಳನ್ನು ಡಾಕ್ಟರ್ ಸಲಹೆಯ ಮೇಲೆ ಪಡೆಯಿರಿ. 4. ಕೊರೊನಾಕ್ಕೇನೋ ಲಸಿಕೆ ಬಂದಿದೆ. ಇನ್ನೆರಡು ವರ್ಷಗಳ ನಂತರ ಕೋವಿಡ್ ಕಾಯಿಲೆ ತಹಬಂದಿಗೆ ಬರಲೂಬಹುದು. ಅಥವಾ ಅದು ಜಾಸ್ತಿ ಹರಡದಂತೆ ಹರ್ಡ್ ಇಮ್ಯೂನಿಟಿ ಬರಲೂಬಹುದು.5. ಹಾಗಂತ ಮುಖವಾಡಗಳನ್ನು ಎಸೆಯಬೇಡಿ. (ಇಸ್ರೇಲಿನಲ್ಲಿ ಇಡೀ ದೇಶಕ್ಕೆ ಲಸಿಕೆ ಹಾಕಿದ ನಂತರ ಎಲ್ಲರೂ ಮುಖವಾಡ ಕಳಚಿ ಎಸೆದು ಸಂಭ್ರಮಿಸಿದ್ದಾರೆ). ನಮ್ಮ ನಗರಗಳಲ್ಲಿ ಮುಖವಾಡ ಸದಾ ನಮ್ಮೊಂದಿಗೆ ಇದ್ದರೆ ಒಳ್ಳೆಯದು. ಏಕೆಂದರೆ-6. ಅಸ್ತಮಾಕ್ಕೆ ಲಸಿಕೆ ಇಲ್ಲ. ಹಾಗಾಗಿ ಕಡಿಮೆ ಆಗುವುದಿಲ್ಲ. ಬದಲಿಗೆ, ಅದು ವರ್ಷ ವರ್ಷಕ್ಕೂ ಹೆಚ್ಚುತ್ತಲೇ ಹೋಗುವಂಥ ವ್ಯವಸ್ಥೆಯನ್ನು ನಾವು ಪೋಷಿಸಿಕೊಂಡು ಬಂದಿದ್ದೇವೆ. ಅವು ಯಾವುವೆಂದರೆ-7. ಟ್ರಾಫಿಕ್ ದೂಳು, ಹೊಗೆ; ರಬ್ಬರ್ ಚಕ್ರಗಳ ಸವೆತದಿಂದ ಹಾರುವ ವಿಷಕಣಗಳು; ಪ್ಲಾಸ್ಟಿಕ್ ಸುಡುವುದರಿಂದ ಹಾರುವ ವಿಷವಾಯು ಮತ್ತು ವಿಷಕಣಗಳು; ಜೊತೆಗೆ ನಿರಂತರ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯಿಂದ ಹೊಮ್ಮುವ ಸೂಕ್ಷ್ಮ ಕಣಗಳು ಸದಾಕಾಲ ಜೀವಂತ ರೋಗಾಣುಗಳಂತೆ ನಮ್ಮನ್ನು ಬಾಧಿಸುತ್ತಲೇ ಹೋಗುತ್ತವೆ.
8. ರಸ್ತೆ ಬದಿಯಲ್ಲಿನ ಜಂಕ್‌ಫುಡ್ ಮಾರುವವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಅದಕ್ಕೆ ಮುಗಿಬೀಳುವವರ ಸಂಖ್ಯೆಯೂ.9. ಟ್ರಾಫಿಕ್ ಹೊಗೆಯಿಂದ ಹೊಮ್ಮುವ ನೈಟ್ರೊಜನ್ ಭಸ್ಮಗಳು ಬಿಸಿಲಿನಲ್ಲಿ ಆಮ್ಲಜನಕ ಜೊತೆಗೂಡಿ ಓಝೋನ್ ಅನಿಲವನ್ನು ಸೃಷ್ಟಿಸುತ್ತವೆ. ಅವು ಅಸ್ತಮಾ ಕಾಯಿಲೆಯನ್ನು ಹೆಚ್ಚಿಸುತ್ತವೆ. ಆಮ್ಲಜನಕಕ್ಕೆ ನಾವು ಹಪಹಪಿಸುವಂತೆ ಮಾಡುತ್ತಿರುತ್ತವೆ.10. ನೆಲದ ಕೆಳಗಿನಿಂದ ರೇಡಾನ್ ಸೂಸುತ್ತಿರುತ್ತದೆ. ಕಟ್ಟಡ ನಿರ್ಮಾಣಕ್ಕೆಂದು ನೆಲದ ಅಡಿಪಾಯ ಆಳಕ್ಕೆ ಹೋದಷ್ಟೂ ಅಸ್ತಮಾ ಹೆಚ್ಚುತ್ತದೆ. ಸಂಪ್‌ನಲ್ಲೂ ರೇಡಾನ್ ಸೇರಿಕೊಳ್ಳುತ್ತದೆ. ಟ್ರಾಫಿಕ್‌ನಿಂದ ಹೊಮ್ಮುವ ಓಝೋನ್ ವಿಷಗಾಳಿಯನ್ನಾಗಲೀ ಸಂಪ್‌ಗಳಲ್ಲಿ ಶೇಖರವಾಗುವ ರೇಡಾನ್ ಅನಿಲವನ್ನಾಗಲೀ ಪತ್ತೆ ಹೆಚ್ಚುವ ಯಾವ ಸಲಕರಣೆಯೂ ನಮ್ಮ ವಿಜ್ಞಾನ ನಗರಿಯ ತಂತ್ರಜ್ಞರ ಬಳಿ ಇಲ್ಲ. ಸಲಕರಣೆ ಇದ್ದೀತು, ಬಳಕೆಯಲ್ಲಿಲ್ಲ.ಹಿಂದೆಲ್ಲ ಕೆಲವು ಪತ್ರಿಕೆಗಳು ದಿನವೂ ಹವಾಮಾನ ವರದಿಯ ಜೊತೆಗೆ ಪರಾಗಕಣಗಳ ಸಾಂದ್ರತೆಯ ವರದಿಯನ್ನೂ ಕೊಡುತ್ತಿದ್ದವು. ಈಗ ಕೈಬಿಟ್ಟಿವೆ. ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಾದಷ್ಟೂ ಪಂಪ್ ತಯಾರಕರ ಪ್ರಾಫಿಟ್ ಹೆಚ್ಚುತ್ತಲೇ ಹೋಗುತ್ತದೆ. ಸ್ಟೆರಾಯಿಡ್ ಔಷಧ ಮತ್ತು ಆಯುರ್ವೇದ ಔಷಧಗಳ ಖರೀದಿಯೂ ಹೆಚ್ಚುತ್ತಿದೆ. ಹಾಗಾಗಿ ಅದಕ್ಕೆ , ಅಂದರೆ ಅಸ್ತಮಾಕ್ಕೆ ಸರಳ ಮುಕ್ತಿ ಇಲ್ಲ.
ಅಸ್ತಮಾ ಕುರಿತು ಅನೇಕ ತಪ್ಪು ಕಲ್ಪನೆಗಳಿವೆ: 1. ಅದು ವಂಶಪಾರಂಪರ್ಯ (ಅದು ಸುಳ್ಳು). ನನ್ನ ಅಥವಾ ನನ್ನ ಪತ್ನಿಯ ಕುಟುಂಬದಲ್ಲಿ ಯಾರಿಗೂ ಇರಲಿಲ್ಲ. ಈಗ ಇಬ್ಬರಿಗೂ ಇದೆ.2. ಅದು ಇಳಿವಯಸ್ಸಿನವರಿಗೆ ಮಾತ್ರ ಬಾಧಿಸುತ್ತದೆ (ಅದು ಸುಳ್ಳು). ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಶೇ ೨೫ ಮಕ್ಕಳಿಗೆ ಅಸ್ತಮಾ ಇತ್ತು. ಈಗ ೩೫% ದಾಟಿದೆ.3. ಅಸ್ತಮಾ ಪೀಡಿತರು ವ್ಯಾಯಾಮ ಮಾಡಬಾರದು (ಅದೂ ಸುಳ್ಳು). ಉಸಿರಾಟ ಸಲೀಸಾಗಿದ್ದಾಗ ಚೆನ್ನಾಗಿ ವ್ಯಾಯಾಮ ಮಾಡಬೇಕು. ಪ್ರಾಣಾಯಾಮ ಒಳ್ಳೆಯದು.ಅಸ್ತಮಾ ನಿಯಂತ್ರಣಕ್ಕೆ ನಮ್ಮ ಪ್ರೀತಿಯ ಕೆಲವು ಆಹಾರಗಳಿಂದ (ಉದಾ: ಬಾಳೆಹಣ್ಣು, ಮೊಸರು) ತುಸು ದೂರ ಇರಬೇಕು. ನಮಗೆ ಅಷ್ಟೇನೂ ಇಷ್ಟವಿಲ್ಲದ ಕೆಲವು ಬಗ್ಗೆ ಸೊಪ್ಪು/ತರಕಾರಿಗಳನ್ನು ಜಾಸ್ತಿ ಸೇವಿಸಬೇಕು; ನಮಗೆ ಇಷ್ಟವಿಲ್ಲದ ಕೆಲವು ವ್ಯಾಯಾಮಗಳನ್ನು ಮಾಡುತ್ತಿರಬೇಕು. ಬದುಕು ಇಷ್ಟವಿದ್ದರೆ ಅಷ್ಟಾದರೂ ಮಾಡಬೇಕು ತಾನೆ?ಕೋವಿಡ್ ಬರುವುದಕ್ಕಿಂತ ಮುಂಚೆ ಅಸ್ತಮಾ ಬಗ್ಗೆ ಒಂದು ಕಿರುಕಲು ಮಾತು ಇತ್ತು: ಅಸ್ತಮಾ ಇದ್ದವರು ಅಷ್ಟು ಬೇಗನೆ ಸಾಯೋದಿಲ್ಲ ಅಂತ. ಕೊರೊನಾ ಅದನ್ನು ಸುಳ್ಳು ಮಾಡಬಹುದು. ಅದೇನೇ ಇರಲಿ, ನನಗಂತೂ ಅಸ್ತಮಾ ಅಷ್ಟು ಸುಲಭಕ್ಕೆ ನನ್ನ ಕೈಬಿಡಲ್ಲ ಅಂತ ನನಗೆ ಭರವಸೆ ಇದೆ. ಅಮಿತಾಭ್ ಬಚ್ಚನ್‌ಗೆ ʼದೀವಾರ್ʼ ಚಿತ್ರದಲ್ಲಿ ಶಶಿಕಪೂರ್ ಹೇಳಿದ ಮಾತು “ಮೇರೆ ಪಾಸ್ ಮಾ ಹೈ” ಎಂಬ ಡೈಲಾಗ್ ಅಜರಾಮರ ಆಯ್ತಲ್ಲ; ಅದನ್ನೇ ಕೊಂಚ ತಿರುವಿ ಜಯಂತ್ ಕಾಯ್ಕಿಣಿ “ಮೇರೆ ಪಾಸ್ ಸಿನೆ-ಮಾ ಹೈ” ಅಂತ ಉದ್ಗರಿಸಿದ್ದರು. ಅದನ್ನೇ ನಾನೂ ತುಸು ತಿರುವಿ “ಮೇರೆ ಪಾಸ್ ಅಸ್ತ್-ಮಾ ಹೈ” ಎನ್ನಬೇಕಾಗಿದೆ.
