

..ಮುಳುಗಡೆಯಿಂದ ಕುತ್ತಿಗೆ ತನಕ ನೀರು ತುಂಬಿದ ಕರೂರು ಎನ್ನುವ ನನ್ನ ಊರು ಒಂದು ಕಾಲದಲ್ಲಿ ವಾರದ ಸಂತೆ ನಡೆಯುವ ಹೋಬಳಿ ಕೇಂದ್ರವಾಗಿ ಮೆರೆದಿತ್ತು. ಕರೂರಿನ ವೃತ್ತದಲ್ಲಿ ಮೈಸೂರು ಮಹಾರಾಜರು ಜನಸಂಪರ್ಕ ಸಭೆ ನಡೆಸಿದ್ದರು ಎಂಬ ಇತಿಹಾಸ ಜತೆ ಸೇರಿ ಇದರ ಪೇಟೆ ವಲಯದ ಸಿರಿವಂತಿಕೆ ಕಾರಣ ಊರನ್ನು ರತ್ನಪೇಟೆ ಎಂದು ಕರೆಯುತ್ತಿದ್ದರಂತೆ ಇಂತಹ ಊರು ಎರಡೆರೆಡು ಮುಳುಗಡೆಯಾಗಿ ಕೊನೆಗೂ ಆಗ ಉಳಿದಿದ್ದು ಆರೆಂಟು ಮನೆ ಈಗ ಅದು ಅರವತ್ತಕ್ಕೆ ಬಂದಿದೆ. ಸುತ್ತಲೂ ನೀರು ಅಗಾಧ ಕಾಡು ಇದ್ದ ಕಾರಣ ಕಾಡು ಪ್ರಾಣಿಗಳೇನು ಕಡಿಮೆ ಇರಲಿಲ್ಲ ಆಗಿನ ಕಾಲದಲ್ಲಿ. ನಾನು ಸಣ್ಣವ ಇದ್ದಾಗ ನಮ್ಮೂರಿನಲ್ಲಿ ಸೋವು ಬೇಟೆ ವಾರಕ್ಕೆ ಒಮ್ಮೆ ನಡೆಯುತ್ತಾ ಇತ್ತು. ಸುತ್ತಲೂ ನೀರು ಆವರಿಸಿ ಆಯಕಟ್ಟಿನ ಜಾಗಗಳು ಸಿಗುತ್ತಾ ಇದ್ದ ಕಾರಣ ಕಾಡು ಭೇಟೆ ಕೂಡ ಸಲೀಸು ಆಗಿತ್ತು. ಅವಡೆ ದೀವರುಮಕ್ಕಿ, ಹೊಳೆಬಾಗಿಲುಪಟ್ಟೆ, ಹರದೂರು, ಹಾಳುಹಿತ್ಲು, ಮೊಸ್ಕಾರು, ಸಂಪೋಡಿ ಕಾನು ದಾಟಿ ವನಗದ್ದೇಕಾನು, ಕಿರುವಾಸೆ, ಗೌಡರಮನೆ ಗುಡ್ಡ, ಕಾನುಕೇರಿ, ಚೌಡಿಕಾನು ಇವೆಲ್ಲ ಕಾಡಿನ ಕೋವುಗಳ ಹೆಸರು. ಭತ್ತದ ಗದ್ದೆ ಹೆಚ್ಚಿದ ಕಾಲದಲ್ಲಿ ಕಾಡು ಹಂದಿ ಶಿಕಾರಿ ಆ ಕಾಲದಲ್ಲಿ ಅನಿವಾರ್ಯವೂ ಆಗಿತ್ತು. ಶಿಕಾರಿ ಆಯಿತು ಎಂದರೆ ಸಣ್ಣವರಿದ್ದ ನಮಗೆ ತುಂಬಾ ಖುಷಿ. ಕಾರಣ ಶಿಕಾರಿ ಮಾಡಿದ ನಂತರ ಕಾಡು ಹಂದಿಯನ್ನು ಸುಟ್ಟು ಅದನ್ನು ಹಸಿಗೆ ಮಾಡಿ ಮಾಂಸ ತಯಾರು ಮಾಡುವ ಪ್ರಕ್ರಿಯೆ ನಡುವೆ ಕಾಡು ಹಂದಿಯ ಹದ ಮಾಂಸವನ್ನ ಬಹಳ ಮುಖ್ಯವಾಗಿ ಅದರ ಸೂಟಗ ಎಂದು ಕರೆಯುವ ಚರ್ಮವನ್ನ ಸೇರಿ ಒಂದಿಷ್ಟು ಮಾಂಸವನ್ನ ಪ್ರತ್ಯೇಕವಾಗಿ ಬೇಗ ಕೊಚ್ಚಿ ಅದನ್ನು ನಲ್ಲೇ ತಯಾರು ಮಾಡುವ ಪ್ರಕ್ರಿಯೆ ನಡೆಯುತ್ತಿತ್ತು.
ಹಂದಿ ಸುಟ್ಟ ಬೆಂಕಿಯಲ್ಲೇ ಒಂದಿಷ್ಟು ಕುಂಟೆ ಬೆಂಕಿ ತೆಗೆದು ದೊಡ್ಡ ಪಾತ್ರೆಯಲ್ಲಿ ಮಾಂಸ ಹಾಕಿ ಅದಕ್ಕೆ ಕೊಂಚ ಜಾಸ್ತಿಯೇ ಉಪ್ಪು ಹಾಕಿ ಕಡಿಮೆ ನೀರು ಹಾಕಿ ಬೇಯಿಸಲು ಇಡುವ ವಿಶೇಷ ಪಾಕ ಪ್ರವೀಣ ಅದರಲ್ಲಿ ತಲ್ಲೀನ ಆಗಿ ಹಂಪಿನಕಣದಲ್ಲಿ ಇತ್ತ ಮಾಂಸ ಕೊಚ್ಚಿ ಪಾಲು ಹಾಕುವ ಹೊತ್ತಿಗೆ ಅತ್ತ ನಲ್ಲೇ ಘಮ ಹುರುಪು ಮತ್ತು ಬಾಯಲ್ಲಿ ನೀರು ಎರಡೂ ಒಟ್ಟಿಗೆ ತರಿಸುತ್ತಾ ಇತ್ತು. ಕಾಡಲ್ಲಿ ಶಿಕಾರಿ ಆದರೂ ನಲ್ಲೇ ಮಾಡಲು ಪಾತ್ರ ಮತ್ತು ಉಪ್ಪು ಹಾಗೂ ಭೇಟೆ ದಯ್ಯಕ್ಕೆ ಒಂದು ಕಾಯಿ ಮತ್ತು ಬಾಳೆ ಎಲೆಗೆ ಊರಿಗೆ ಬರಲೇ ಬೇಕಿತ್ತು. ಹಾಗೆ ಊರಿಗೆ ಬಂದವರ ಬೆನ್ನು ಹತ್ತಿ ನಾವು ಒಂದೆರೆಡು ಜನ ಹಂಪಿನಕಣ ತಲಪುತ್ತಾ ಇದ್ದೆವು. ಶಿಕಾರಿ ಆದ ಮೇಲೆ ಹೆಚ್ಚಿನವರಾಗಿ ಹಂಪಿನಕಣಕ್ಕೆ ಹೋಗುವುದು ಇದಿಯಲ್ಲ ಅದು ನರಕ. ಆದರೆ ನಮಗೆ ಅದರ ಅರಿವೇ ಇಲ್ಲದೆ ಹೋಗಿ ಅಪ್ಪಯ್ಯ ಪಕ್ಕ ಕುಳಿತು ನಲ್ಲೇ ತಿನ್ನುತ್ತಿದ್ದೆವು. ಬಾಲ್ಯದ ಆ ನೆನಪು ಹಾಗೆ ಉಳಿದಿವೆ.ನನ್ನ ಮಾವ ಭಲೇ ಬಿಲ್ಲುಗಾರ. ಆತನ ವಾರಿಗೆಯ ತುಂಬಾ ಒಳ್ಳೆಯ ಬಿಲ್ಲುಗಾರರು ಆಗಿನ ಕಾಲದಲ್ಲಿ ಇದ್ದರು. ನಮ್ಮ ಕರೂರಿನ ಶಿಕಾರಿಯ ಅತ್ಯಂತ ಆಯಕಟ್ಟಿನ ಕೋವು ಅಂದರೆ ಅದು ಅವಡೆ. ಗಡಿನೆಂಜಲು ಎನ್ನುವ ಬಿಲ್ಲು ನಿಲ್ಲುವ ಜಾಗ ಅತ್ಯಂತ ಕಿರಿಯದು ಆಗಿತ್ತು. ಒಳಗೆ ಸೋವಿನವರು ದೀವರಮಕ್ಕಿ ತುದಿಯಿಂದ ಕುಕ್ಕಳ್ಳಿ ಕೆರೆ ಸುತ್ತು ಹಾಕಿ ಬರಲು ಸುಮಾರು ನಾಲ್ಕು ಗಂಟೆ ಬೇಕು. ಗಡಿನೆಂಜಲು ಬಿಲ್ಲಿನಲ್ಲಿ ಈಡು ಮೊಳಗಿತು ಅಂದರೆ ಪಕ್ಕ ಶಿಕಾರಿ ಆಯ್ತು ಅಂತ. ಹೀಗೆ ನಮ್ಮ ವಯದವರ ಬಾಲ್ಯ ಎಂದರೆ ಅದು ನಮ್ಮೂರ ಶಿಕಾರಿ ಕಥನದ ನೆನಪು ಕೂಡ.
ಒಮ್ಮೆ ಹಂಪಿನ ಕಣಕ್ಕೆ ಹೋಗಿದ್ದೆ. ಸಾಹಿತ್ಯ ಓದಿನ ಗುಂಗಿನಲ್ಲಿ ಇದ್ದ ನನಗೆ ಶಿಕಾರಿಯ ಪಾತ್ರಗಳು ಹಂಪಿನ ಕಣದಲ್ಲಿ ಕಾಣುತ್ತಾ ಇದ್ದವು. ಸೋವು ಹೊಡೆದವರು ಹಂದಿ ಎಬ್ಬಿಸಲು ಪಟ್ಟ ಕಷ್ಟ ಹೇಳಿದರೆ, ಹಂದಿ ಹೊಡೆದವನು ಕೊನೆ ಕ್ಷಣ ಈಡು ಮೊಳಗಿಸಿದ ಸನ್ನಿವೇಶ ವಿವರಣೆ ಟೀವಿಯಿಂದ ಕೊಟ್ಟರೆ, ಸೋವು ಹೊಡೆಯದೇ ಕಳ್ಳಾಟ ಆಡಿದವರಿಗೆ ಕೊಂಕು ಮಾತು ಜತೆ ಉತ್ತಮ ಕೆಲಸ ಮಾಡಿದ ಸೋವಿಗ ಮತ್ತು ನಾಯಿಗಳಿಗೆ ಮೆಚ್ಚುಗೆ ಸಿಗುತ್ತಾ ಇತ್ತು. ಇದರ ಜತೆ ಹಂಪಿನ ಕಣದಲ್ಲಿ ಹಂದಿ ಹೊಡೆದವ ಬಲ ತೊಡೆ, ಬೆನ್ನು ಬೀಗು ಇತ್ಯಾದಿ ಅರ್ಧ ಭಾಗವೇ ಹೊತ್ತೋಯ್ಯುವ ಜತೆ ಕೋವಿ ಪಾಲು ತೆಗೆದರೆ ಇಡೀ ಹಂದಿಯಲ್ಲಿ ಅರ್ಧ ಭಾಗ ಮಾತ್ರವೇ ಸೋವಿನ 20 ಕ್ಕೂ ಹೆಚ್ಚು ಜನರಿಗೆ ಸಿಗುತ್ತಿತ್ತು. ಇದು ನನಗೆ ತೀವ್ರ ಅಸಮಾನತೆ ಮತ್ತು ಜಮೀನ್ದಾರಿ ಮನೋಭಾವ ಅನ್ನಿಸುತಾ ಇತ್ತಾದರೂ ಹೇಳುವಂತೆ ಇರಲಿಲ್ಲ. ಕಾನು ತಿರುಗಿ ಸೋವು ಹೊಡೆದ ನಿಜ ದುಡಿದವರಿಗೆ ಮುಷ್ಠಿ ಮಾಂಸ ನೆರಳಲ್ಲಿ ಕೂತು ಬಿಲ್ಲುಗಾರ ಒಬ್ಬನಿಗೆ ಅರ್ಧ ಭಾಗ ಹಂದಿ…!!!
ಆದರೆ ನಲ್ಲೇ ಇದೆಯಲ್ಲ ಅದನ್ನ ಹಂಪಿನ ಕಣದಲ್ಲಿ ತಿನ್ನುವ ಸುಖ ಇದಿಯಲ್ಲ….ಅದ್ಬುತ. ಹೀಗೆ ನಡೆಯುತ್ತಾ ಇದ್ದ ನಮ್ಮ ಊರಿಗೆ ಮೊದಲು ಎಂ ಪಿ ಎಂ ಬಂತು. ಆಮೇಲೆ ನಮ್ಮ ಗ್ರೇಟ್ ಅರಣ್ಯ ಇಲಾಖೆಯ ಪ್ಲಾಂಟೇಶನ್ ಬಂತು. ಮೇಲೆ ಹೆಸರಿಸಿದ ಎಲ್ಲಾ ಕಾಡುಗಳ ಖಾಲಿ ಜಾಗ ಗುಡ್ಡ ಅಕಾಶಿಯ ಸುತ್ತಿಕೊಂಡಿತು. ಆ ಬಿಲ್ಲುಗಾರರ ತಲೆಮಾರು ಕೂಡ ಹೆಚ್ಚಿನವರು ಹೊರಟು ಹೋದರು. ಕಾಡಲ್ಲಿ ಪ್ರಾಣಿಗಳು ಕಡಿಮೆ ಆದವು.ವಾರಕ್ಕೆ ಒಂದು ದಿನ ನಡೆಯುತ್ತಾ ಇದ್ದ ಶಿಕಾರಿ ವರ್ಷಕ್ಕೆ ಒಮ್ಮೆ ಆಯ್ತು. ಭೂಮಿ ಹುಣ್ಣಿಮೆ ಮಾರನೇ ದಿನ ಶಿಕಾರಿ ಮಾಡುವುದು ಉಳಿದು ಕೊಂಡಿತ್ತು.ಹದಿನೈದು ವರ್ಷದ ಹಿಂದೆ ಇರಬೇಕು…ಸಂಜೆ ಊರಿಂದ ಕರೆ ಬಂತು. ಚಳುವಳಿ ಹೋರಾಟ ಎಂದು ತುಮರಿಯಲ್ಲಿ ಇದ್ದವನು ತುರ್ತು ಊರಿಗೆ ಹೋದರೆ ನನ್ನ ಗೆಳೆಯನ ಭುಜ ರಕ್ತಮಯವಾಗಿದೆ. ಊರೆಲ್ಲ ಸ್ಮಶಾನ ಮೌನ. ಕ್ಷಣ ಕ್ಷಣಕ್ಕೂ ಭಯ. ಭೂಮಿ ಹುಣ್ಣಿಮೆ ಮಾರನೇ ದಿನ ಶಿಕಾರಿ ಹೋದ ಗೆಳೆಯರು ಅದು ಹೇಗೆಲ್ಲ ಬಿಲ್ಲು ನಿಲ್ಲಿಸಿಕೊಂಡಿದ್ದರೋ ಅಂತಿಮವಾಗಿ ಮೊಳಗಿದ ಈಡು ಕರೆಂಟು ಕಂಬಕ್ಕೆ ತಾಗಿ ಅದರ ಗುಂಡು ಗೆಳೆಯನ ಭುಜ ಹೊಕ್ಕಿದೆ. ಮುಂದೆ ಅದನ್ನು ಎದುರಿಸಿದ್ದು ಬೇರೆಯದೇ ಕಥನ.ಕೊನೆಗೂ ಹೆಚ್ಚಿನ ಅಪಾಯ ಆಗಲಿಲ್ಲಭುಜಕ್ಕೆ ತಗುಲಿದ ಗುಂಡು ಮಾಂಸ ಖಂಡ ನಡುವೆ ಸಾಗಿ ಬೆನ್ನಿನಲಿ ಬಂದು ಕೂತಿತ್ತು.ಅದೃಷ್ಟ ಆತ ಉಳಿದ…ಊರು ಉಳಿಯಿತು….ಅವತ್ತೇ ನಮ್ಮ ಊರ ಕೊನೆಯ ಶಿಕಾರಿ. ಅರಣ್ಯ ಇಲಾಖೆಯ ಬಿಗಿ ನಿಯಮ ಬರುವ ಮುನ್ನವೇ ನಮ್ಮೂರಿನ ಶಿಕಾರಿಯ ಕಥನ ಮುಗಿದಿತ್ತು.
-ಜಿ. ಟಿ ಸತ್ಯನಾರಾಯಣ ಕರೂರು.

