ಕೋವಿಡ್ 19- ಜನ್ಮ ಜಾತಕ! ಲ್ಯಾಬಿನಿಂದ ಆಕಸ್ಮಿಕ ಸಿಡಿಯಿತೆ?

ಚೀನಾದ ಪ್ರಯೋಗಾಲಯದಿಂದಲೇ ಕೋವಿಡ್ ವೈರಾಣು ಸೋರಿಕೆ: ಬ್ರಿಟನ್ ಗುಪ್ತಚರ ವರದಿ

ಕೊರೋನಾ ಕರಿನೆರಳು ಪ್ರಪಂಚವನ್ನು ಆವರಿಸಿ ಹತ್ತಿರ ಹತ್ತಿರ 2 ವರ್ಷಗಳಾಗುತ್ತಿದೆ. ಇದಕ್ಕೆ ಚೀನಾ ಪ್ರಯೋಗಾಲಯವನ್ನು ಗುರಿಯಾಗಿರಿಸಿಕೊಂಡು ಪ್ರಕಟವಾಗುತ್ತಿದ್ದ ವರದಿಗಳಿಗೆ ಬ್ರಿಟನ್ ಸಹ ಧ್ವನಿಗೂಡಿಸಿದೆ. 

ಇದು ಬಾಂಬ್‌ ಇದ್ದೀತೆ? ಲ್ಯಾಬಿನಿಂದ ಆಕಸ್ಮಿಕ ಸಿಡಿಯಿತೆ?[ಈ ದಿನ ʼಪ್ರಜಾವಾಣಿʼಯಲ್ಲಿ ಪ್ರಕಟವಾದ ನನ್ನ ಲೇಖನ-ನಾಗೇಶ್ ಹೆಗಡೆ]“ಶಾಂತತಾ! ಕೋರ್ಟ್‌ ಚಾಲೂ ಆಹೆ!ʼʼ-

ಇದು ಖ್ಯಾತ ಮರಾಠೀ ನಾಟಕಕಾರ ವಿಜಯ್‌ ತೆಂಡೂಲ್ಕರ್‌ ಅವರ ನಾಟಕದ ಶಿರೋನಾಮೆ. ಒಂದು ಮಗುವಿನ ಅಸಲೀ ಅಪ್ಪ-ಅಮ್ಮ ಯಾರೆಂದು ಪತ್ತೆ ಮಾಡುವ ಅಸಂಗತ ತನಿಕಾ ಕಥನ ಅದರಲ್ಲಿದೆ. ʼಕೋರ್ಟ್‌ ಚಾಲೂ ಆಗಿದೆ, ಗಲಾಟೆ ಮಾಡಬೇಡಿʼ ಎಂದು ಒಂದು ಪಾತ್ರ ಕೂಗಿ ಹೇಳುತ್ತದೆ.ಇದೀಗ ವಿಶ್ವವೇದಿಕೆಯಲ್ಲೂ ಇಂಥದ್ದೊಂದು ನಾಟಕ ರಂಗಕ್ಕೇರುತ್ತಿದೆ. ಕೊರೊನಾ ಎಂಬ ಪ್ರಳಯಾಂತಕ ಶಿಶು ಎಲ್ಲಿ, ಹೇಗೆ ಉದ್ಭವಿಸಿತು ಎಂಬ ಚರ್ಚೆಗೆ ರಂಗೇರುತ್ತಿದೆ. ‘ಇದು ಸಹಜವಾಗಿ ನಿಸರ್ಗದಿಂದ ಬಂದಿದ್ದಲ್ಲ; ಚೀನೀಯರ ಪ್ರಯೋಗಶಾಲೆಯಲ್ಲಿ ಸೃಷ್ಟಿಯಾದ ಜೀವಾಯುಧ (Bio Weapon ). ಹೇಗೋ ಆಕಸ್ಮಿಕ ಸೋರಿಕೆಯಾಗಿ ಹೊರಬಿದ್ದಿದೆʼ ಎಂದು ತಜ್ಞರು ಮೆಲ್ಲಗೆ ಉಸುರಿದ್ದೇ ವಿರಾಟ್‌ ರೂಪ ತಾಳುತ್ತಿದೆ.

ಸತ್ಯ ಗೊತ್ತಿದ್ದವರು ಬಾಯಿ ಬಿಡುತ್ತಿಲ್ಲ. ಬಿಡಿಸಲೇಬೇಕೆಂದು ಹಠ ತೊಟ್ಟವರು ಸಾಕ್ಷ್ಯಗಳನ್ನು ಮುಂದಿಡುತ್ತಿಲ್ಲ. ವಿಜ್ಞಾನಿಗಳು, ರಾಜಕಾರಣಿಗಳು, ರಾಜತಾಂತ್ರಿಕರು ರಂಗಕ್ಕೆ ಬರುತ್ತಿದ್ದಾರೆ. ಹಿಮ್ಮೇಳದಲ್ಲಿ ಮಾಧ್ಯಮಗಳ ತಮಟೆ ಜೋರಾಗುತ್ತಿದೆ. ʼಚೀನಾ ತಪ್ಪಿತಸ್ಥʼ ಎಂಬ ಧ್ವನಿ ನೇಪಥ್ಯದಲ್ಲಿ ಹೊಮ್ಮುತ್ತಿದೆ. ತೀರ್ಪುಗಾರನ ಸ್ಥಾನದಲ್ಲಿರುವ ವಿಶ್ವ ಸ್ವಾಸ್ಥ್ಯ ಸಂಸ್ಥೆಯ (ವಿಸ್ವಾಸಂ ) ಅಧ್ಯಕ್ಷ ಮಾತ್ರ ʼಸಾಕ್ಷ್ಯ ಸಾಲದು, ಇನ್ನೂ ತನಿಖೆ ಆಗಬೇಕುʼ ಎಂದು ಹೇಳುತ್ತಿದ್ದಾರೆ.ಇದುವರೆಗಿನ ಕತೆ ನಮಗೆ ಗೊತ್ತೇ ಇದೆ: ಚೀನಾದ ವೂಹಾನ್‌ ನಗರದ ತೇವಸಂತೆಯಲ್ಲಿ ಈ ವೈರಾಣು ಪ್ರತ್ಯಕ್ಷವಾಯಿತು. ಸಂತೆಗೆ ಮಾರಾಟಕ್ಕೆ ಬಂದಿದ್ದ ಯಾವುದೋ ಕಾಡುಪ್ರಾಣಿಯ ಮಾಂಸದ ಮೂಲಕ ಈ ಭಯಾನಕ ಸೂಕ್ಷ್ಮಜೀವಿ ಮನುಷ್ಯನಿಗೆ ತಗುಲಿಕೊಂಡಿತು ಎಂದು ಚೀನೀಯರು ಹೇಳಿದ್ದರು. ಆ ಕಾಡುಪ್ರಾಣಿಗೆ ಪ್ರಾಯಶಃ ಯಾವುದೋ ಬಾವಲಿಯ ಎಂಜಲು ಸೋಂಕಿರಬೇಕು ಎಂದು ಊಹಿಸಲಾಗಿತ್ತು. ಹಿಂದೆಯೂ ನಿಫಾ, ಝಿಕಾ ಮತ್ತು ಹಂದಿಜ್ವರ- ಪಕ್ಷಿಜ್ವರ, ಮಂಗನಜ್ವರಕ್ಕೆ ಕಾರಣವಾದ ವೈರಸ್‌ಗಳೆಲ್ಲ ನಿಸರ್ಗದಿಂದಲೇ ಬಂದಿವೆಯಾದ್ದರಿಂದ ಹೀಗಾಗಿದ್ದೇ ಹೌದೆಂದು ಎಲ್ಲರನ್ನೂ ನಂಬಿಸಲಾಗಿತ್ತು. ಬಾವಲಿಗಳ ದೇಹದಲ್ಲಿ ಇಂಥ ಸಾರ್ಸ್‌ ಮಾದರಿಯ ವೈರಾಣು ಇರುತ್ತವೆಂದು ಚೀನೀ ಸಂಶೋಧಕಿ ಷಿ ಝೆಂಗ್‌ಲಿ ಅಲ್ಲಿನ ಗುಹೆಗಳಲ್ಲಿ ಓಡಾಡಿ 2012ರಲ್ಲೇ ವರದಿ ಮಾಡಿದ್ದಳು. ಅದಕ್ಕೂ ತುಸು ಹಿಂದೆ 2011ರಲ್ಲೇ ಬೆಳ್ಳಿತೆರೆಗೆ ಬಂದ ʼಕಂಟೇಜಿಯನ್‌ʼ ಎಂಬ ಸಿನೆಮಾದಲ್ಲಿ ಅದೇ ಚಿತ್ರಕಥೆ ಇತ್ತು. ಬುಲ್‌ಡೋಝರ್‌ಗಳು ಕಾಡಿನ ಹೆಮ್ಮರಗಳನ್ನು ಬೀಳಿಸುತ್ತಿದ್ದಾಗ ಒಂದು ಬಾವಲಿ ಹಾರಿ ಹೋಗಿ ಕಾಡಂಚಿನ ಹಂದಿಗೂಡಿನ ಸೂರಿಗೆ ನೇತಾಡುತ್ತದೆ. ಅದರ ಬಾಯಿಂದ ಬಿದ್ದ ಹಣ್ಣನ್ನು ಹಂದಿ ತಿನ್ನುತ್ತದೆ; ಆ ಹಂದಿಯ ಮಾಂಸವನ್ನು ಹಾಂಗ್‌ಕಾಂಗಿನಲ್ಲಿ ಬೇಯಿಸಿ ಬಡಿಸಿದವನಿಗೆ ಜ್ವರ ಬರುತ್ತದೆ. ಉಂಡವಳು ಅಡುಗೆಯವನಿಗೆ ಶೇಕ್‌ಹ್ಯಾಂಡ್‌ ಮಾಡಿ ವಿಮಾನ ಏರಿ, ತನ್ನೊಂದಿಗೆ ರೋಗಾಣುವನ್ನೂ ಅಮೆರಿಕಕ್ಕೆ ಕೊಂಡೊಯ್ಯುತ್ತಾಳೆ. ಅಲ್ಲಿ ಮಹಾಸಾಂಕ್ರಾಮಿಕ , ಲಾಕ್‌ಡೌನ್‌ ಕೋಲಾಹಲ, ರಾಜಕಾರಣ, ಮೆಡಿಕಲ್‌ ಮಾಫಿಯಾ, ಹಣಕ್ಕಾಗಿ ತಜ್ಞರ ಅಪಹರಣ, ಬ್ಲ್ಯಾಕ್‌ಮೇಲ್‌ ಇತ್ಯಾದಿ ಎಲ್ಲ ಮಸಾಲೆಗಳೂ ಆ ಸಿನೆಮಾದಲ್ಲಿದ್ದವು.

ವುಹಾನ್‌ನಲ್ಲಿ ಹೊರಬಿದ್ದ ವೈರಸ್‌ ಲ್ಯಾಬಿನಿಂದ ಆಕಸ್ಮಿಕ ಸೋರಿಕೆಯಾದ ಜೀವಾಯುಧವೇ ಹೌದು ಎನ್ನಲು ಮೇಲ್ನೋಟದ ಸಾಕ್ಷ್ಯಗಳು ಹೀಗಿವೆ: 1. ವೈರಾಣುಗಳನ್ನು ಪೋಷಿಸಿ, ಛೇದಿಸಿ, ಪರೀಕ್ಷಿಸುವಲ್ಲಿ ವಿಶ್ವಖ್ಯಾತಿ ಪಡೆದ ಘೋರಭದ್ರ ಸಂಶೋಧನ ಸಂಸ್ಥೆ ವೂಹಾನ್‌ನಲ್ಲೇ ಇದೆ. 2. ಈ ಸಂಸ್ಥೆಯ ಸಿಬ್ಬಂದಿ ಹತ್ತುವರ್ಷಗಳ ಹಿಂದೆ ತಾಮ್ರದ ಗಣಿಯಲ್ಲಿ ಬಾವಲಿಗಳ ಸಮೀಕ್ಷೆಗೆ ಹೋದಾಗ ಮೂವರಿಗೆ ಸಾರ್ಸ್‌ ಮಾದರಿಯ ಜ್ವರ ತಗುಲಿತ್ತು. 3. ಕಳೆದ ವರ್ಷ ಫೆಬ್ರುವರಿಯಲ್ಲಿ ಇಬ್ಬರು ಚೀನೀ ಸಂಶೋಧಕರೇ ಇದು ಲ್ಯಾಬ್‌ನಿಂದ ಸೋರಿಕೆಯಾದ ವೈರಾಣುವೇ ಇರಬೇಕೆಂದು ಹೇಳಿದ್ದಾರೆ. 4. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದವರಲ್ಲಿ ಮೂವರು ಈ ಸಂಸ್ಥೆಯ ಸಿಬ್ಬಂದಿಯೇ ಆಗಿದ್ದಾರೆಂದು ಈಗ ಗೊತ್ತಾಗಿದೆ 5. ಆಕಸ್ಮಿಕ ಸೋರಿಕೆ ಆದಾಗ ತುರ್ತುಕ್ರಮ, ಪ್ರತ್ಯೌಷಧ ಏನಿರಬೇಕು ಎಂಬುದು ವೂಹಾನ್‌ ವಿಜ್ಞಾನಿಗಳಿಗೆ ಗೊತ್ತಿತ್ತು. ಆದ್ದರಿಂದಲೇ ಚೀನಾ ಅತಿ ಕ್ಷಿಪ್ರವಾಗಿ ಚೇತರಿಸಿಕೊಂಡಿದೆ. ಅಷ್ಟು ದೊಡ್ಡ ದೇಶದಲ್ಲಿ ಕೇವಲ 4634 ಜನ ಮಾತ್ರ ಕೋವಿಡ್‌ನಿಂದ ಗತಿಸಿದ್ದಾರೆ. ತಾನು ಗೆದ್ದಿದ್ದಕ್ಕೆ ಹಬ್ಬ ಆಚರಿಸಿದೆ. ಗೆದ್ದಿದ್ದು ಹೇಗೆ ಎಂದು ಮಾತ್ರ ಹೇಳಲಿಲ್ಲ. ತನ್ನದೇನೂ ತಪ್ಪಿಲ್ಲ, ಲ್ಯಾಬಿನಿಂದ ವೈರಸ್‌ ಸೋರಿಕೆ ಆಗಿಲ್ಲ ಎಂದು ವಾದಿಸುವ ಚೀನಾ ಇನ್ನೂ ಒಂದು ಹೇಳಿಕೆಯನ್ನು ಗಾಳಿಯಲ್ಲಿ ಹರಿಬಿಟ್ಟಿದೆ. ಕಾಡಿನಿಂದ ವೈರಾಣು ಬಂದಿರಲಿಕ್ಕಿಲ್ಲ. ಬದಲಿಗೆ ವಿದೇಶೀ ಆಹಾರವಸ್ತುಗಳ ಮೂಲಕ ಬಂದಿರಬೇಕು ಎಂದು ಹೇಳಿದೆ. ತನ್ನ ದೇಶಕ್ಕೆ ಎಲ್ಲೆಲ್ಲಿಂದ ಸಿದ್ಧ ಆಹಾರವಸ್ತುಗಳು ಬರುತ್ತಿವೆ ಎಂಬುದರ ಪಟ್ಟಿಯನ್ನೇ ಅದು ಕೊಟ್ಟಿದೆ. ಕಾಡಿನಲ್ಲಿರುವ ಪ್ರಾಣಿ, ಪಕ್ಷಿ, ಕೀಟಗಳಲ್ಲಿ ನಾನಾ ಬಗೆಯ ವೈರಾಣು ಇರುತ್ತವೆ ನಿಜ. ಆದರೆ ಅವನ್ನು ಲ್ಯಾಬಿಗೆ ತಂದು, ಅದರ ಸೋಂಕುಗುಣ ತೀರಾ ಇಮ್ಮಡಿ ಮುಮ್ಮಡಿ ಆಗುವಂತೆ ತಿದ್ದಿತೀಡಿ ಜೀವಾಣು ಬಾಂಬ್‌ ಆಗಿ ರೂಪಿಸುವ ಸಂಶೋಧನೆಗಳು ನಡೆಯುತ್ತಲೇ ಇವೆ. ಚೀನಾದ ಅಂಥ ಸಂಶೋಧನೆಗೆ ಅಮೆರಿಕ ಸರಕಾರವೂ ಕೈಜೋಡಿಸಿದ್ದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಪರಮಾಣು ಬಾಂಬ್‌ಗಳ ಬದಲಿಗೆ ಇಂಥ ಜೀವಾಣು ಬಾಂಬ್‌ಗಳನ್ನು, ವಿಷಾನಿಲ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಇಟ್ಟುಕೊಳ್ಳಲು ಎಲ್ಲ ಶಕ್ತರಾಷ್ಟ್ರಗಳೂ ಬಯಸುತ್ತವೆ. ಹಾಗೆ ಮಾಡಬಾರದೆಂದು ವಿಶ್ವಮಟ್ಟದಲ್ಲಿ ಜೀವಾಣು ಬಾಂಬ್‌ ನಿಷೇಧ ಒಪ್ಪಂದಗಳಿವೆ ನಿಜ. ಆದರೂ ರಹಸ್ಯ ಕಾರ್ಯಾಚರಣೆಗಳು ನಡೆದೇ ಇವೆ. ಇವುಗಳ ಮಧ್ಯೆ ಬಲಾಢ್ಯ ಖಾಸಗಿ ಕಾರ್ಪೊರೇಟ್‌ ಸಂಸ್ಥೆಗಳೂ ಅಂಥ ಹೈಬ್ರಿಡ್‌ ವೈರಾಣುಗಳ ಸೃಷ್ಟಿಗೆ ಹಣ ಹೂಡುತ್ತಿವೆ. ಅವುಗಳ ಉದ್ದೇಶ ಏನೆಂದರೆ, ವೈರಸ್‌ಗಳಿಗೆ ಲಸಿಕೆಗಳನ್ನು ತಯಾರಿಸಿ ಲಾಭ ಗಳಿಸುವುದು.

ಮೇಲ್ನೋಟಕ್ಕೆ ಮನುಕುಲದ ಕಲ್ಯಾಣ!ಪರಮಾಣು ಬಾಂಬ್‌ಗಳಿಗಿಂತ ಜೀವಾಣು ಬಾಂಬ್‌ ಉತ್ತಮ ಏಕೆಂದರೆ, ಆಸ್ತಿಪಾಸ್ತಿ ನಷ್ಟ ಆಗುವುದಿಲ್ಲ; ಲಸಿಕೆ ಪಡೆದಿರುವ ಪ್ರಭಾವಿಗಳೆಲ್ಲ ಬಚಾವ್‌ ಆಗುತ್ತಾರೆ. ಆದರೆ ಅಂಥ ಬಾಂಬ್‌ ದಾಳಿಗೆ ಬಲಿಯಾಗುವ ದೇಶದ ಆರ್ಥಿಕ ಬೆನ್ನೆಲುಬು ಮುರಿಯುತ್ತದೆ. ದೇಶರಕ್ಷಣೆಯ ಎಲ್ಲ ವ್ಯವಸ್ಥೆಗಳೂ ಕುಸಿಯುತ್ತವೆ. ವೈರಿ ಯಾರು, ಪ್ರತ್ಯಸ್ತ್ರವನ್ನು ಯಾವ ದಿಕ್ಕಿಗೆ ಪ್ರಯೋಗಿಸಬೇಕು ಎಂಬುದು ಗೊತ್ತಾಗದೆ ಮಿಲಿಟರಿ ಕೈಕಟ್ಟಿ ಕೂರಬೇಕಾಗುತ್ತದೆ. ಹೆಚ್ಚೆಂದರೆ ತನ್ನ ಪ್ರಜೆಗಳಿಗೆ ಆಮ್ಲಜನಕ, ಲಸಿಕೆ, ವೆಂಟಿಲೇಟರು, ಆಕ್ಸಿಮೀಟರು, ಬಯಲು ರುಗ್ಣಾಲಯಗಳ ಉಸ್ತುವಾರಿಯಲ್ಲೇ ಏಗುತ್ತಿರಬೇಕಾಗುತ್ತದೆ. ದೇಶದ ನಾಯಕರಂತೂ ವಿದೇಶೀ ಸಹಾಯಕ್ಕೆ ಅಂಗಲಾಚುತ್ತ, ಅಸ್ತವ್ಯಸ್ತ ಆಡಳಿತಯಂತ್ರವನ್ನು ನಿಭಾಯಿಸುವುದರಲ್ಲೇ ವ್ಯಸ್ತ ಆಗಿರಬೇಕಾಗುತ್ತದೆ. ವಿರೋಧಿಗಳ ಬಾಯಿಗೆ ಬಲಿಯಾಗದಂತೆ, ಪ್ರಜೆಗಳು ದಂಗೆ ಏಳದಂತೆ ನೋಡಿಕೊಂಡರೆ ಸಾಕಾಗಿರುತ್ತದೆ.ಯಾವ ರಾಷ್ಟ್ರಕ್ಕೂ ಇಂಥ ವಿಷಣ್ಣ ಪ್ರಸಂಗ ಬಾರದಂತೆ, ಎಲ್ಲೂ ಇಂಥ ಶಸ್ತ್ರಾಸ್ತ್ರಗಳ ನಿರ್ಮಾಣ ಆಗದಂತೆ ಜಾಗತಿಕ ಮಟ್ಟದಲ್ಲಿ ನಿಗಾ ಇಡುವ ಹೊಣೆಗಾರಿಕೆ ವಿಸ್ವಾಸಂ WHO ಅಧ್ಯಕ್ಷರ ಮೇಲಿರುತ್ತದೆ. ಆ ಪೀಠಕ್ಕೆ ಯಾರನ್ನು ಕೂರಿಸಬೇಕು ಎಂಬ ಬಗ್ಗೆ ಭಾರೀ ರಾಜಕೀಯ ಜಟಾಪಟಿ ನಡೆಯುತ್ತದೆ. ಈಗಿರುವ (ಇಥಿಯೋಪಿಯಾ ಮೂಲದ) ಟೆಡ್ರೋಸ್‌ ಮಹಾಶಯ ಅಧ್ಯಕ್ಷನಾಗುವುದು ಅಮೆರಿಕಕ್ಕೆ ಹಾಗೂ ಅದರ ಬೆಂಬಲಿತ ದೇಶಗಳಿಗೆ ಬೇಕಿರಲಿಲ್ಲ. ಆದರೆ ಚೀನಾ ಅದೇನೇನೊ ಮಸಲತ್ತು ಮಾಡಿ, ಆಫ್ರಿಕದ ರಾಷ್ಟ್ರಗಳಿಗೆ ಆರ್ಥಿಕ ನೆರವಿನ ಆಮಿಷ ಒಡ್ಡಿ ವೋಟ್‌ ಬ್ಯಾಂಕನ್ನು ಭದ್ರಪಡಿಸಿ ಟೆಡ್ರೋಸನ್ನು ಗೆಲ್ಲಿಸಿಯೇಬಿಟ್ಟಿತು. ಭಾರತವೂ ಆತನಿಗೇ ವೋಟ್‌ ಹಾಕಿತು. ಒಂದು ಕಾರಣ ಏನೆಂದರೆ, ಟೆಡ್ರೋಸ್‌ಗೆ ಪ್ರತಿಸ್ಫರ್ಧಿಯಾಗಿ ಪಾಕಿಸ್ತಾನದ ಡಾ. ಸಾನಿಯಾ ನಿಷ್ತಾರ್‌ ಕಣದಲ್ಲಿದ್ದರು.

ಚೀನಾ ಬೆಂಬಲಿತ ವ್ಯಕ್ತಿ ಗೆದ್ದಿದ್ದ ಉರಿ; ಅಮೆರಿಕವನ್ನೂ ಕೊರೊನಾ ಅಮರಿಕೊಂಡಿದ್ದ ಪರಿ – ಅಂತೂ ಟ್ರಂಪ್‌ಗೆ ವಿಸ್ವಾಸಂ ಮೇಲೆ ವಿಶ್ವಾಸವೇ ಉಳಿಯಲಿಲ್ಲ. ಕೂಗಾಡಿ, ಈ ಸಂಸ್ಥೆಗೆ ಚಂದಾ ಕೊಡುವುದಿಲ್ಲ ಎಂದು ಬೈದಾಡಿದ್ದಂತೂ ಆಯಿತು. ಆದರೆ ಕೊರೊನಾ ಸೋರಿಕೆಗೆ ಚೀನಾದ ಸಂಶೋಧನೆಯೇ ಕಾರಣ ಎಂದು ಬಹಿರಂಗ ಹೇಳುವ ಹಾಗಿರಲಿಲ್ಲ. ಉಗ್ರ ತನಿಖೆಗೂ ಒತ್ತಾಯಿಸುವ ಹಾಗಿಲ್ಲ- ಏಕೆಂದರೆ ಅಮೆರಿಕದ ಮಿಲಿಟರಿಯೂ ಅಂಥ ಸಂಶೋಧನೆಯಲ್ಲಿ ಶಾಮೀಲಾಗಿದ್ದ ಸಂಗತಿ ಹೊರಬಂದರೆ? ಸೋರಿಕೆ ಸಾಧ್ಯತೆ ಕುರಿತು ವಿಸ್ವಾಸಂ ತನಿಖೆ ನಡೆಸಬೇಕು ಎಂದು ಅನೇಕ ವಿಜ್ಞಾನಿಗಳು ಒತ್ತಾಯಿಸಿದ್ದಾರೆ. ಹಿಂದೆಯೇ ಅಂಥದ್ದೊಂದು ತನಿಖಾ ಸಮಿತಿಯನ್ನು ವಿಸ್ವಾಸಂ ವೂಹಾನ್‌ಗೆ ಕಳಿಸಿ ವರದಿ ತರಿಸಿತ್ತು. ʼಇದು ನೈಸರ್ಗಿಕವಾಗಿ ಹೊರಬಿದ್ದ ಕಾಯಿಲೆʼ ಎಂದೇ ತೀರ್ಪು ನೀಡಿತ್ತು. ಆದರೆ ಆ ಸಮಿತಿಯ 34 ಸದಸ್ಯರ ಪೈಕಿ 17 ಮಂದಿ ಚೀನೀಯರೇ ಆಗಿದ್ದು, ಟೆಡ್ರೋಸ್‌ ಕೂಡಾ ಚೀನೀ ನೆಂಟನೇ ಆಗಿದ್ದರಿಂದ ತನಿಖಾ ಸಮಿತಿ ನಿಜ ಸಂಗತಿಯನ್ನು ದಫನ ಮಾಡಿದೆ ಎಂಬ ಟೀಕೆ ಬಂದಿತ್ತು. ಇದೀಗ ಅದೇನು ಒತ್ತಡ ಬಂತೊ, ಟೆಡ್ರೋಸ್‌ ಮಹಾಶಯ ʼಸಾಕ್ಷ್ಯ ಸಾಲದು, ಇನ್ನಷ್ಟು ತನಿಖೆ ನಡೆಯಬೇಕುʼ ಎಂದಿದ್ದಾರೆ. ಆದರೆ ಈಗ ಅಮೆರಿಕ ಸತ್ಯಶೋಧಕ್ಕೆ ಇಳಿಯುವುದು ಅನಿವಾರ್ಯ ಆಗುತ್ತಿದೆ, ಏಕೆಂದರೆ ಪ್ರತಿಷ್ಠಿತ 18 ವಿಜ್ಞಾನಿಗಳು ಎರಡು ವಾರಗಳ ಹಿಂದೆ ತನಿಖೆಗೆ ಒತ್ತಾಯಿಸಿ “Science” ಪತ್ರಿಕೆಗೆ ಬರೆದ ಪತ್ರ ಜಗಜ್ಜಾಹೀರಾಗಿದೆ. ಅದಕ್ಕೇ “ಸತ್ಯಪತ್ತೆ ಕೆಲಸವನ್ನು ತೀವ್ರಗೊಳಿಸಿʼʼ ಎಂದು ಮೊನ್ನೆ ಬುಧವಾರ ಅಧ್ಯಕ್ಷ ಬೈಡೆನ್‌ ಅಮೆರಿಕಾದ ಗುಪ್ತಚರ ಸಂಸ್ಥೆಗೆ ಆದೇಶ ನೀಡಿದ್ದಾರೆ.ತನಿಖೆಗೆ ವಿಜ್ಞಾನಿಗಳ ಸಹಾಯವಂತೂ ಬೇಕು. ಅವರು ಅದೇನೇ ಸತ್ಯವನ್ನು ಹೊರಗೆಳೆದರೂ ಅದನ್ನೂ ಅಮೆರಿಕ ಸರಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಬಿಚ್ಚಿಡಬಹುದು ಅಥವಾ ಬಚ್ಚಿಡಬಹುದು. ಆಗಿನ ಸ್ವಾರಸ್ಯ ಏನೆಂದರೆ ಗುಪ್ತಚರರು ಪತ್ತೆ ಮಾಡಿದ್ದನ್ನು ಮಾಧ್ಯಮಗಳು ಪತ್ತೆ ಮಾಡಿ ಟಾಂ ಟಾಂ ಮಾಡುತ್ತವೆ.ಆಯಿತು, ಲ್ಯಾಬಿನಿಂದ ವೈರಾಣು ಸೋರಿಕೆಯಾಗಿದ್ದೇ ಹೌದೆಂದು ಗೊತ್ತಾದರೂ ಏನೀಗ? ಯಾರು ಏನು ಮಾಡಲು ಸಾಧ್ಯ? ಚೀನಾ ಅದನ್ನು ಒಪ್ಪಿಕೊಳ್ಳುವುದಿಲ್ಲ. ಈ ಮಹಾಸಾಂಕ್ರಾಮಿಕದಿಂದ ಯಾರು ಯಾರು ಎಷ್ಟೆಷ್ಟು ಗಿಟ್ಟಿಸಿಕೊಳ್ಳಬೇಕೊ ಅವಷ್ಟನ್ನೂ ದಕ್ಕಿಸಿಕೊಂಡಾಗಿದೆ. ಲಸಿಕೆ , ಪಿಪಿಇ ಕಿಟ್‌, ಸ್ಯಾನಿಟೈಸರ್‌, ಆಕ್ಸಿಜನ್‌, ಟೆಸ್ಟಿಂಗ್‌ ಉಪಕರಣ, ಮೊಬೈಲ್‌, ಕಂಪ್ಯೂಟರ್‌, ಟ್ಯಾಬ್ಲೆಟ್‌ಗಳ ತಯಾರಕರೂ ನೆಟ್‌ವರ್ಕ್‌ ಕಂಪನಿಗಳೂ ತಂತಮ್ಮ ಕೈಲಾದ ಸೇವೆಗೆ ಇಳಿದು ಲಾಭಾಂಶವನ್ನು ಶೇರುದಾರರಿಗೆ ರವಾನಿಸುತ್ತಿವೆ. ಕಷ್ಟಕ್ಕೀಡಾದವರಿಗೆ, ನಷ್ಟದಲ್ಲಿದ್ದವರಿಗೆ ಮತ್ತು ಪ್ರಾಣತೆತ್ತ ವೈದ್ಯವೃಂದಕ್ಕೆ ಪರಿಹಾರ ಕೊಡುವಂತೆ ಚೀನಾವನ್ನು ಕೋರಲು ಸಾಧ್ಯವೆ? ಕೊನೆಗೂ ದೊಣ್ಣೆ ಯಾರದೋ ಎಮ್ಮೆಯೂ ಅವನದೇ!ಅಂತೂ ಸತ್ಯಶೋಧನೆಯ ಈ ಅಸಂಗತ ನಾಟಕ ರಂಗಕ್ಕೇರಲಿದೆ. ರಾಜಕೀಯ ಮಸಲತ್ತು, ತನಿಖಾ ವರದಿಗಾರರ ಕಸರತ್ತುಗಳ ನಡುವೆ ಹೆಚ್ಚೆಂದರೆ ಲ್ಯಾಬ್‌ಗಳ ಭದ್ರತಾ ವ್ಯವಸ್ಥೆ ಇನ್ನಷ್ಟು ಬಿಗಿಯಾದೀತು. ನಮ್ಮನಿಮ್ಮೆಲ್ಲರ ಬದುಕಿನ ಭದ್ರತೆಯ ವಿಷಯ? ಪಾರ್ಕಲಾಂ. ಸದ್ಯಕ್ಕೆ “ಶಾಂತತಾ! ಕೋರ್ಟ್‌ ಚಾಲೂ ಆಗಿದೆ!”

coronavirus

ಲಂಡನ್: ಕೊರೋನಾ ಕರಿನೆರಳು ಪ್ರಪಂಚವನ್ನು ಆವರಿಸಿ ಹತ್ತಿರ ಹತ್ತಿರ 2 ವರ್ಷಗಳಾಗುತ್ತಿದೆ. ಇದಕ್ಕೆ ಚೀನಾ ಪ್ರಯೋಗಾಲಯವನ್ನು ಗುರಿಯಾಗಿರಿಸಿಕೊಂಡು ಪ್ರಕಟವಾಗುತ್ತಿದ್ದ ವರದಿಗಳಿಗೆ ಬ್ರಿಟನ್ ಸಹ ಧ್ವನಿಗೂಡಿಸಿದೆ. 

ಬ್ರಿಟನ್ ನ ಗುಪ್ತಚರ ಏಜೆನ್ಸಿಗಳ ಇತ್ತೀಚಿನ ಹೇಳಿಕೆಯ ಪ್ರಕಾರ ಕೋವಿಡ್-19 ಸಾಂಕ್ರಾಮಿಕಕ್ಕೆ ಕಾರಣವಾಗಿರುವ ಕೊರೋನಾ ವೈರಸ್ ಚೀನಾದ ಬಯೋ ಪ್ರಯೋಗಾಲಯದಿಂದಲೇ ಸೋರಿಕೆಯಾಗಿರುವುದರ ಸಾಧ್ಯತೆ ಇದೆ ಎಂದು ಹೇಳಿದೆ. 

ಬ್ರಿಟನ್ ನ ಲಸಿಕೆ ಸಚಿವ ನಧೀಮ್ ಝಹಾವಿ ಮಾರಕ ವೈರಾಣುವಿನ ಮೂಲದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ಸಂಪೂರ್ಣ ತನಿಖೆ ನಡೆಸಬೇಕೆಂದು ಹೇಳಿದೆ. 

ಕೋವಿಡ್-19 ಮೂಲ ವಿಸ್ತೃತ ಚರ್ಚೆಗೆ ಗ್ರಾಸವಾಗಿರುವ ವಿಷಯವಾಗಿದ್ದು, ಪ್ರಯೋಗಾಲಯದಿಂದಲೇ ಈ ಮಾರಕ ವೈರಾಣು ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ರಾಜಕಾರಣಿಗಳು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

ಸಾಂಕ್ರಾಮಿಕ ಪ್ರಾರಂಭದ ದಿನಗಳಲ್ಲಿ ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳು ಕೊರೋನಾ ವೈರಸ್ ಪ್ರಯೋಗಾಲಯದಿಂದ ಸೋರಿಕೆಯಾಗಿರುವ ಸಾಧ್ಯತೆಗಳು ಕ್ಷೀಣ ಎಂದು ಹೇಳಿ, ಬಾವಲಿಗಳ ಮೂಲಕ ಕೊರೋನಾ ಹರಡಿರುವ ಜಾಡನ್ನು ಹಿಡಿದು ಸಂಶೋಧನೆ ನಡೆಸಿತ್ತು. 

ಆದರೆ ಈಗ ಅದೇ ಗುಪ್ತಚರ ಸಂಸ್ಥೆಗಳು ಪ್ರಯೋಗಾಲಯದಿಂದಲೇ ಕೊರೋನಾ ವೈರಾಣು ಹರಡಿರುವ ಸಾಧ್ಯತೆಗಳಿವೆ ಎಂದು ಹೇಳುತ್ತಿರುವುದನ್ನು ಸಂಡೇ ಟೈಮ್ಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ. 

ಚೀನಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಇರುವುದು ಚೀನಾದಲ್ಲಿ ಕೊರೋನಾದ ಮೂಲ ಸ್ಥಾನವೆಂದು ನಂಬಲಾಗಿರುವ ವುಹಾನ್ ನಲ್ಲಿರುವ ಸೀಫುಡ್ ಮಾರ್ಕೆಟ್ ನ ಬಳಿ ಎಂಬುದು ಗಮನಾರ್ಹ ಅಂಶ. 

ಸಾಕ್ಷ್ಯಗಳು ನಮ್ಮನ್ನು ಬೇರೆ ಬೇರೆ ದಿಕ್ಕಿನಲ್ಲಿ ಯೋಚನೆ ಮಾಡುವಂತೆ ಮಾಡುತ್ತದೆ, ಆದರೆ ಚೀನಾದವರು ಹೇಗಿದ್ದರೂ ಸುಳ್ಳು ಹೇಳುತ್ತಾರೆ. ಹೀಗಿರುವಾಗ ನಮಗೆ ಕೊರೋನಾದ ಮೂಲ ಎಂದಿಗೂ ತಿಳಿಯುವುದಿಲ್ಲ ಎಂದು ಬ್ರಿಟನ್ ನ ಗುಪ್ತಚರ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. 

ಪಾಶ್ಚಿಮಾತ್ಯ ಏಜೆನ್ಸಿಗಳು ಚೀನಾದಲ್ಲಿ ಗುಪ್ತಚರ ಇಲಾಖೆ ಚೀನಾದಲ್ಲಿ ಕೆಲವು ಮಾನವ ಗುಪ್ತಚರ ಮೂಲಗಳನ್ನು ಹೊಂದಿದ್ದು, ಮಾಹಿತಿ ಸಂಗ್ರಹಿಸುತ್ತಿವೆ, ಹೆಸರು, ತಮ್ಮ ವಿವರಗಳನ್ನು ನೀಡಲು ಬಯಸದ ಚೀನಾದ ಉದ್ಯೋಗಿಗಳು ಕೆಲವು ರಹಸ್ಯಗಳನ್ನು ಈ ಗುಪ್ತಚರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. 

ಕೊರೋನಾ ವೈರಾಣು ಪ್ರಯೋಗಾಲಯದಲ್ಲಿ ಸೋರಿಕೆಯಾಗಿದೆ ಎಂಬ ವಾದಕ್ಕೆ ಈಗ ಬ್ರಿಟನ್ ಸಹ ಧ್ವನಿಗೂಡಿಸಿದ್ದು, ತನಿಖೆ ನಡೆಸುವುದಕ್ಕೆ ಡಬ್ಲ್ಯುಹೆಚ್ಒ ಮೇಲೆ ಮತ್ತಷ್ಟು ಒತ್ತಡ ಉಂಟಾಗಿದೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *