Jorge-ಮನೆಗೆ ಬೀಗಹಾಕದ ನಿಜ ಫಕೀರ ಜಾರ್ಜ್!

ಜಾರ್ಜ್ ಫರ್ನಾಂಡಿಸ್ ಸ್ಮರಣೆ

ಇಂದು ಜಾರ್ಜ್ ಫರ್ನಾಂಡಿಸ್‍ (03-06-1930) ಅವರ ಹುಟ್ಟುಹಬ್ಬ.

   ಅಂದು (29-01-2019) ಜಾರ್ಜ್ ಫರ್ನಾಂಡೀಸ್ ಇನ್ನಿಲ್ಲ ಎಂಬ ಸುದ್ದಿ  ಓದಿ ಮುಗಿಸುವಷ್ಟರಲ್ಲಿ ಕಣ್ಣಂಚು ತೇವವಾಗಿತ್ತು.
  ನೆನಪು ಕ್ರಿ.ಶ.2003ರ ಆಗಸ್ಟ್ 2ರ ರಾತ್ರಿಯತ್ತ ಓಡಿತ್ತು.  ಅಂದು ಶನಿವಾರ.  ಮುಂಜಾನೆಯ ಎಲ್ಲ ಪತ್ರಿಕೆಗಳ ಮುಖಪುಟಗಳಲ್ಲಿ ಜಾರ್ಜ್ ಫರ್ನಾಂಡಿಸ್ ರಾರಾಜಿಸಿದ್ದರು.  ಪತ್ರಿಕೆಗಳ ಹಾಗೂ ಸುದ್ದಿ ವಾಹಿನಿಗಳಿಂದ `ಹಾರಾಡುವ ಶವ ಪೆಟ್ಟಿಗೆ'ಯೆಂದು ಕರೆಸಿಕೊಳ್ಳುತ್ತಿದ್ದ `ಮಿಗ್-21' ವಿಮಾನದಲ್ಲಿ ಹಿಂದಿನ ದಿನವಷ್ಟೇ ಯುವ ಪೈಲಟ್‌ನೊಂದಿಗೆ ಸಹಚರಿಯಾಗಿ ರಕ್ಷಣಾ ಸಚಿವ ಜಾರ್ಜ್ ಹಾರಾಟ ನಡೆಸಿದ್ದರು.  `ನಿಮ್ಮ ಡಿಫೆನ್ಸ್ ಮಿನಿಸ್ರ‍್ರು ಮಿಗ್-21ರಲ್ಲಿ ಕುಳಿತು ಹಾರಾಡಿದಾಕ್ಷಣ ಅಪಘಾತಗಳ ಸಂಖ್ಯೆ ಕಡಿಮೆಯಾಗಿಬಿಡುತ್ತದೆಯೆ'? ಎಂದು ನನ್ನ ತಂದೆಯವರು (ಸಂಯುಕ್ತ ಕರ್ನಾಟಕ ಪತ್ರಿಕೆಯ ನಿವೃತ್ತ ಸ್ಥಾನಿಕ ಸಂಪಾದಕ ಹೆಚ್.ಆರ್.ನಾಗೇಶರಾವ್) ಪ್ರಶ್ನಿಸಿದಾಗ ರಾತ್ರಿ ಹನ್ನೊಂದೂವರೆ ಗಂಟೆ ಸಮಯ.  



     ಸಾಮಾನ್ಯವಾಗಿ ನಮ್ಮಿಬ್ಬರಿಗೂ ಪತ್ರಿಕೆಯ ಸುದ್ದಿಗಳ ಬಗ್ಗೆ ವಾದ-ವಿವಾದ ನಡೆಯುವ ಸಮಯವದು.  ಪ್ರಶ್ನೆಯಿಂದ ನನಗ್ಯಾಕೋ ಭಾವೋದ್ವೇಗವಾಗಿತ್ತು.  `ಹೆಚ್ಚೂ-ಕಮ್ಮಿ ನಿಮ್ಮಷ್ಟೇ ಅಥವಾ ನಿಮಗಿಂತ ಒಂದೆರಡು ವರ್ಷ ಚಿಕ್ಕವರಿರಬಹುದಾದ ಮನುಷ್ಯ ಅದರಲ್ಲೂ ಒಬ್ಬ ಡಿಫೆನ್ಸ್ ಮಿನಿಸ್ಟರ್ ಯುದ್ಧ ವಿಮಾನದಲ್ಲಿ ಕುಳಿತು ಹಾರಾಟ ನಡೆಸುವುದೆಂದರೆ ತಮಾಷೆನಾ?  ಅವರು ಅದರಲ್ಲಿ ಹತ್ತಿ ಕುಳಿತು ಅದೆಷ್ಟು ನೂರು ಮಂದಿ ಪೈಲಟ್‌ಗಳಿಗೆ ಆತ್ಮಸ್ಥೈರ್ಯ ತುಂಬಿರುತ್ತಾರೆ .......' ಹೀಗೆ ನನ್ನ ವಾಗ್ಝರಿ ಹರಿದಿತ್ತು.  ನಸು ನಕ್ಕ ನನ್ನ ತಂದೆ `ಜಾರ್ಜ್ ಬಗ್ಗೆ ನನಗೆ ಹೇಳುತ್ತಿದ್ದೀಯಾ?  ಸುಮ್ಮನೆ ನಿನ್ನನ್ನು ತಮಾಷೆ ಮಾಡಿದೆ.  ಬಹುಶಃ ಅವರಷ್ಟು ಪ್ರಾಮಾಣಿಕ ಹಾಗೂ ಕಳಕಳಿಯ ಸಚಿವರು ಮತ್ತೊಬ್ಬರಿರಲಾರರು ....' ಎಂದು ನನ್ನನ್ನು ಸಮಾಧಾನಿಸಿದ್ದರು.  ಮಾತುಕತೆ ಎಮರ್ಜೆನ್ಸಿ, ಬರೋಡಾ ಡೈನಮೈಟ್ ಪ್ರಕರಣ, ರೈಲ್ವೆ ಮುಷ್ಕರ, ಸಿ.ಜಿ.ಕೆ.ರೆಡ್ಡಿ, ಖಾದ್ರಿ ಶಾಮಣ್ಣ, ಜನತಾಪಕ್ಷ-ಜನತಾದಳ-ಸಮಾಜವಾದ ... ಇತ್ಯಾದಿಗಳತ್ತ ಹರಿದಿತ್ತು.  ಆ ಮಾತುಕತೆ ನನ್ನ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಬಹುದೆಂದು ನಾನು ನೆನೆಸಿರಲಿಲ್ಲ.  ಅದು ತಂದೆಯೊಂದಿಗಿನ ನನ್ನ ಕಟ್ಟ ಕಡೆಯ ಸಂ`ವಾದ'.  ಮರುದಿನ ಮುಂಜಾನೆ ನನ್ನ ತಂದೆಯವರು ಇಹಲೋಕ ತ್ಯಜಿಸಿಯಾಗಿತ್ತು.  

   ಹಿಂದೆ ಶಾಲಾ ಬಾಲಕನಾಗಿದ್ದಾಗ ಜನತಾ ಪಕ್ಷದ ಕಿಕ್ಕಿರಿದ ನ್ಯಾಷನಲ್ ಕಾಲೇಜು ಸಭಾಂಗಣ, ಮಲ್ಲೇಶ್ವರದ ಮೈದಾನಗಳಲ್ಲಿ ಜಾರ್ಜ್ ಅವರ ಭಾಷಣಗಳನ್ನು ಕೇಳಿದ್ದೆ.  ಕನ್ನಡಿಗ, ಕಾರ್ಮಿಕ ನಾಯಕ ಮುಂಬೈ-ಬಿಹಾರಗಳಲ್ಲಿ ಚುನಾವಣೆಗಳಲ್ಲಿ ಗೆದ್ದು ಬರುವುದು, ಜೈಲಿನಲ್ಲಿದ್ದಾಗಲೂ ಪ್ರಚಾರವಿಲ್ಲದೆಯೆ ಆರಿಸಿಬರುವುದು ಬೆರಗಿನ ವಿಷಯವಾಗಿತ್ತು.  ಐ.ಬಿ.ಎಂ. ಹಾಗೂ ಕೋಲಾಗಳನ್ನು ಮರಳಿ ಮನೆಗೆ ಕಳುಹಿಸಿದ ಅಪ್ಪಟ ದೇಶಾಭಿಮಾನಿ ಎಂಬುದಷ್ಟೇ ಆಗಿನ ಇಂಪ್ರೆಶನ್.  ಜಾರ್ಜ್ ಹೆಚ್ಚು ಪರಿಚಿತರಾಗಿದ್ದು ಡಿ.ಆರ್.ಡಿ.ಒ.ದ ನನ್ನ ಹಿರಿಯ ಸಹೋದ್ಯೋಗಿಗಳ ಮೂಲಕ.  ಉನ್ನತ ಮಟ್ಟದ ಜಾರ್ಜ್ ಅವರೊಂದಿಗಿನ ಸಭೆಗಳಲ್ಲಿ ಭಾಗಿಯಾದಾಗಿನ ತಮ್ಮ ಅನುಭವಗಳನ್ನು ಆ ಹಿರಿಯರು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು.  ಹಿಂದೆ ರಕ್ಷಣಾ ಸಚಿವರಾದವರೊಂದಿಗೆ ಜಾರ್ಜ್ ಅವರನ್ನು ಹೋಲಿಸುತ್ತಿದ್ದರು.  ಸ್ವದೇಶಿ ಯೋಜನೆಗಳನ್ನು ಸದಾ ಬೆಂಬಲಿಸುತ್ತಿದ್ದ ಜಾರ್ಜ್ ಬಗ್ಗೆ ಒಳ್ಳೆಯ ಮಾತುಗಳನ್ನು ನಾನು ಕೇಳುತ್ತಿದ್ದೆ.  ಸಿಯಾಶಿನ್ ನೀರ್ಗಲ್ಲಿನ ಸಮೀಪದ ಲೆಹ್‌ನಲ್ಲಿನ ವಾಯುಪಡೆ ನೆಲೆಯಲ್ಲಿ ನಮ್ಮ ಹೆಲಿಕಾಪ್ಟರ್ ಗಳ ಪರೀಕ್ಷೆಗೆಂದು ಹೋಗಿದ್ದ ಒಂದು ಸಂದರ್ಭ.  ಆ ಕೊರೆಯುವ ಚಳಿಗಾಲದ ಸಂಜೆ ಆರ್ಮಿ-ಏರ್‌ಫೋರ್ಸ್ ಜವಾನರು ಜಾರ್ಜ್ ಅವರ ಕಳಕಳಿಯ ಬಗ್ಗೆ ಆನಂದಭಾಷ್ಪ ಸುರಿಸಿದ್ದನ್ನು ನಾನು ಕಂಡಿದ್ದೆ.  ಇದೇ ಜಾರ್ಜ್ ಬಗ್ಗೆ ದೆಹಲಿಯ ಅನೇಕ ಸಭೆಗಳಲ್ಲಿ ಸೌತ್ ಬ್ಲಾಕ್‌ನ ಐ.ಎ.ಎಸ್. ಅಧಿಕಾರಿಗಳಿಂದ ನಿಂದನೆಗಳನ್ನೂ ವಾಯುಪಡೆ ಅಧಿಕಾರಿಗಳಿಂದ ಪ್ರಶಂಸೆಗಳನ್ನೂ ಆಲಿಸಿದ್ದೆ.

     ಇಂಥ ಜಾರ್ಜ್ ಅವರನ್ನು ನೇರವಾಗಿ ಸೌತ್ ಬ್ಲಾಕ್‌ನಲ್ಲಿ ಕಾಣುವ ಅವಕಾಶ ಸಿಗುತ್ತದೆಂಬ ನಿರೀಕ್ಷೆ ನನಗಿರಲೇ ಇಲ್ಲ.  ಜಾರ್ಜ್ ಅಧ್ಯಕ್ಷತೆಯ ಉನ್ನತ ಮಟ್ಟದ ತಾಂತ್ರಿಕ ಸಮಿತಿಯೊಂದರಲ್ಲಿ ನನ್ನ ಬಾಸ್‌ನ ಬಾಸ್ ಸದಸ್ಯರಾಗಿದ್ದ ಸಮಯವದು (2004).  ಅವರ ಸಹಾಯಕರಾಗಿ ನನ್ನ ಬಾಸ್, ನನ್ನ ಬಾಸ್‌ಗೆ ಸಹಾಯಕನಾಗಿ ನಾನು ತಾಂತ್ರಿಕ ವಿಚಾರಗೋಷ್ಠಿಗಳಲ್ಲಿ ಭಾಗಿಯಾಗಲು ವಾರಕ್ಕೊಮ್ಮೆಯಾದರೂ ದೆಹಲಿಗೆ ಸತತವಾಗಿ ಪಯಣಿಸುತ್ತಿದ್ದ ಸಮಯವದು.  ಸಮಿತಿಯ ವರದಿಗೆ ಅಂತಿಮ ರೂಪ ನೀಡುವ ಮುನ್ನ ನಡೆದ ಒಂದು ಸಭೆ.  ರಾತ್ರಿ ಎಂಟಾಗಿರಬೇಕು.  ಸೌತ್ ಬ್ಲಾಕ್‌ನ ರಕ್ಷಣಾ ಸಚಿವರ ಸಭಾಂಗಣ.  ವಯಸ್ಸಿನಲ್ಲಿ ಅದೆಷ್ಟೋ ದಶಕಗಳಷ್ಟು ಚಿಕ್ಕವರಾಗಿದ್ದ ನನ್ನಂಥವರಿಗೇ ಸುಸ್ತು-ಆಕಳಿಕೆ-ನಿದ್ರೆ.  ದಕ್ಷಿಣ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಸಭೆಗೆ ಜಾರ್ಜ್ ಕಾಫಿ ತರಿಸಿದ್ದರು, ಅದೇ ಸೌತ್ ಬ್ಲಾಕಿನ ಕೆಳ ಅಂತಸ್ತಿನಲ್ಲಿದ್ದ ಇಂಡಿಯಾ ಕಾಫಿ ಬಾರ್‌ನಿಂದ.  `ಇಡೀ ದೆಹಲಿಯಲ್ಲಿ ಅತ್ಯುತ್ತಮ ಕಾಫಿ ಸಿಗುವ ಸ್ಥಳವಿದು' ಎಂದೇ ಮಾತುಕತೆ ಆರಂಭಿಸಿದ ಜಾರ್ಜ್ ಅವರಿಗೆ ಆ ಸರಹೊತ್ತಿನಲ್ಲೂ ದಣಿವಾಗಿರಲೇ ಇಲ್ಲ.  ಚಳಿಗಾಲವೆಂದು ಸೂಟು-ಬೂಟು-ಟೈ-ಸ್ವೆಟರ್ ... ಧರಿಸಿ ನಾವೆಲ್ಲಾ ಕೈಯುಜ್ಜಿಕೊಳ್ಳುತ್ತಿದ್ದರೆ, ಜಾರ್ಜ್ ಅವರು ಅದೇ ಜುಬ್ಬಾ-ಪಾಯಿಜಾಮ-ಚಪ್ಪಲಿಯಲ್ಲಿ ಸಭೆಯನ್ನಲಂಕರಿಸಿದ್ದರು.  ಸುತ್ತಿ-ಬಳಸಿ ಮಾತನಾಡುವ ಅಭ್ಯಾಸವಿಲ್ಲದ ಜಾರ್ಜ್, ಅತ್ಯುನ್ನತ ಮಟ್ಟದ ತಂತ್ರಜ್ಞಾನದ ಉತ್ಪನ್ನ ಮಾತ್ರ ಖರೀದಿಯಾಗಲಿ, ಸಾಧ್ಯವಾದಷ್ಟು ಮಟ್ಟಿಗೆ ಅದರ ಉತ್ಪಾದನೆ ದೇಶೀಯವಾಗಿರಲಿ ಎಂಬ ಸಂದೇಶ ಸಾರಿದ್ದರು.  ಸೌತ್ ಬ್ಲಾಕ್‌ನಲ್ಲೇ ಮೂರು ದಶಕಗಳನ್ನು ಕಳೆದಿದ್ದ, ಹಿಂದಿನ ರಕ್ಷಣಾ ಸಚಿವರ ಅಧಿಕೃತ ಟಿಪ್ಪಣಿ-`ನೋಟ್'ಗಳನ್ನು ಪರಿಶೀಲಿಸಿದ್ದ ವ್ಯಕ್ತಿಯೊಬ್ಬರು ಆ ಸಮಯದಲ್ಲಿ ಉಚ್ಛರಿಸಿದ್ದ ಮಾತುಗಳು ನನ್ನ ಮನಸ್ಸಿನಲ್ಲಿ ಇನ್ನೂ ಹಸಿರಾಗಿವೆ - "ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಮಂತ್ರಿ-ಪ್ರಧಾನಮಂತ್ರಿಯಾಗಿದ್ದಾಗ ಕಾಣುತ್ತಿದ್ದ ನಿಷ್ಕಳಂಕ ಹಾಗೂ ಪ್ರಾಮಾಣಿಕ `ನೋಟ್'ಗಳನ್ನು ಇಂದಿಗೂ ನಾವು ಜಾರ್ಜ್ ಅವರ ಕಚೇರಿಯ ದಫ್ತರುಗಳಲ್ಲಿ ಕಾಣುತ್ತಿದ್ದೇವೆ".  

    ತಾಂತ್ರಿಕ ಪರಿಶೀಲನಾ ಸಮಿತಿಯ ಶಿಫಾರಸ್ಸುಗಳನ್ನು ಒಪ್ಪಿ ಸಹಿ ಹಾಕುವ ಮುನ್ನ ನೆರೆದಿದ್ದ ಮಿಲಿಟರಿ ಮುತ್ಸದ್ಧಿಗಳಿಗೊಂದು ಗಂಭೀರ ಪ್ರಶ್ನೆಯನ್ನು ಜಾರ್ಜ್ ಅವರು ಹಾಕಿದರು -  "ಅಷ್ಟೊಂದು ಸಂಖ್ಯೆಯ ತರಬೇತಿ ಯುದ್ಧ ವಿಮಾನಗಳನ್ನು ವಿದೇಶದಿಂದ ಖರೀದಿಸುವ ಬದಲು, ನಮ್ಮದೇ ದೇಶ ಅಂಥ ವಿಮಾನಗಳನ್ನು ತಯಾರಿಸಬಹುದಲ್ಲವೆ?".  ತಂತ್ರಜ್ಞ ಸಮಿತಿ ಅವರ ಸಲಹೆಯನ್ನು ಒಪ್ಪಿತು.  ಸ್ವದೇಶಿಯಾದ ಆಧುನಿಕ ತರಬೇತಿ ವಿಮಾನ ಯೋಜನೆಯ ರೂಪುರೇಷೆ ಅಂದಿನಿಂದಲೇ ಸಿದ್ಧವಾಯಿತು.  ಆ ಮಹಾತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡುವ ಪತ್ರ ಸಿದ್ಧವಾಗುವಷ್ಟರಲ್ಲಿ ಜಾರ್ಜ್ ಅವರು ಅಧಿಕಾರ ಕಳೆದುಕೊಂಡಿದ್ದರು.      

        ಕ್ರಿ.ಶ.2005ರ ಸಮಯವದು. `ಗರ್ವ' ಎಂಬ ಕನ್ನಡ ಸಾಪ್ತಾಹಿಕದ ಬಿಡುಗಡೆಯ ಸಮಯದಲ್ಲಿ ಬೆಂಗಳೂರಿನಲ್ಲೇ ಜಾರ್ಜ್ ಅವರ ಸಮೀಪ ದರ್ಶನ ನನಗಾಗಿತ್ತು.  ಅವರ ಆಪ್ತ ಮಾತುಗಳನ್ನು ಕನ್ನಡದಲ್ಲೇ ಹತ್ತಿರದಿಂದ ಕೇಳಿಸಿಕೊಳ್ಳುವ ಮತ್ತೊಂದು ಸದವಕಾಶ ಸಿಕ್ಕಿತ್ತು.  ಮತ್ತೆ ಅವರನ್ನು ನಾನು ಕಂಡದ್ದು 2006ರ ಮೇ 24ರಂದು - ದೆಹಲಿಯಿಂದ ಲಖನೌಗೆ ಹೊರಟಿದ್ದ ಮುಂಜಾನೆಯ ಇಂಡಿಯನ್ ಏರ್‌ಲೈನ್ಸ್ ವಿಮಾನದಲ್ಲಿ.  ನಮ್ಮೆಲ್ಲರಿಗಿಂತಲೂ ಸಾಮಾನ್ಯರಾಗಿ, ಕ್ಯೂನಲ್ಲಿ ನಿಂತು ಎಕಾನಮಿ ಕ್ಲಾಸ್ ಪಯಣಿಗರೊಂದಿಗೆ ಅವರು ವಿಮಾನ ಹತ್ತಿದರು.  ಮಗುವೊಂದನ್ನು ಎತ್ತಿಕೊಂಡು ಬಂದಿದ್ದ ಮಹಿಳೆಗೆ ಮೊದಲು ದಾರಿ ಮಾಡಿಕೊಟ್ಟು, ಹಿಂದಿನ ಯಾವುದೋ ಒಂದು ಸಾಲಿನಲ್ಲಿ ಕುಳಿತರು ಜಾರ್ಜ್.  ತಮ್ಮ ಕೆದರಿದ ತಲೆಗೂದಲನ್ನು ಸರಿಪಡಿಸಿಕೊಳ್ಳುತ್ತಾ ಕೈಯ್ಯಲ್ಲಿದ್ದ ಪುಸ್ತಕ ಓದತೊಡಗಿದರು.  ಇಳಿಯುವ ಸಮಯದಲ್ಲೂ ಅದೇ ನೋಟ.  ಕರೆದೊಯ್ಯಲು ಅಧಿಕೃತ ವಾಹನ ಬಂದಿದೆಯೊ, ಇಲ್ಲವೊ ಎಂದು ಉರಿಬಿಸಿಲಲ್ಲಿ ನನ್ನಂಥವರೂ ಪರದಾಡುತ್ತಿದ್ದರೆ, ಜಾರ್ಜ್ ಮಾತ್ರ ಸುಮ್ಮನೆ ಲೌಂಜ್‌ನಿಂದ ಹೊರ ನಡೆದು ಬಂದರು.  ಅವರನ್ನು ಕರೆದೊಯ್ಯಲು ಸಹಾಯಕನೊಬ್ಬ ಬಂದಿರದಿದ್ದರೆ ಅಲ್ಲಿನ ‘ಫಟ್‌ಫಟಿ’ಯೆಂಬ ಆಟೊರಿಕ್ಷಾವನ್ನು ಹತ್ತುತ್ತಿದ್ದರೇನೊ?

      ಆದರೆ, ಜಾರ್ಜ್ ಅವರಂಥ ಪ್ರಾಮಾಣಿಕರನ್ನೂ ಭ್ರಷ್ಟಾಚಾರದ ಭೂತ ಬೆಂಬಿಡದೆ ಕಾಡಿತ್ತು.  ಶವಪೆಟ್ಟಿಗೆ ಹಗರಣದಲ್ಲಿ ರಾಜಕೀಯ ಕಾರಣಗಳಿಂದ ಅವರನ್ನು ಬೇಕೆಂದೇ ಸಿಲುಕಿಸಲಾಗಿತ್ತು.  ಇಂದು ಶವಪೆಟ್ಟಿಗೆಯಲ್ಲಿಯೇ ನೀರವ ಮೌನಕ್ಕೆ ಜಾರಿದ್ದಾರೆ.

(2019ರ ಜನವರಿ 29ರಂದು ಅವರು ನಿಧನರಾದಾಗ, “ವಿಜಯ ಕರ್ನಾಟಕ” ದಿನಪತ್ರಿಕೆಗೆ ನಾನು ಬರೆದ ಈ ಶ್ರದ್ಧಾಂಜಲಿ ಮರುದಿನದ ಸಂಚಿಕೆಯಲ್ಲಿ ಪ್ರಕಟವಾಗಿತ್ತು.

ಸ್ವದೇಶಿ ವಿಮಾನ ನಿರ್ಮಾಣಕ್ಕೆ ಒತ್ತಾಸೆ ನೀಡಿದ್ದ ಅಪ್ಪಟ ಸಮಾಜವಾದಿ – ಜಾರ್ಜ್ ಫರ್ನಾಂಡೀಸ್)

  • Sudheendra Haldoderi

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *