“ನಾನೀಗ ಒಂದು ವರದಿಯನ್ನು ಓದುತ್ತೇನೆ” ಎಂದು ತೀರ ಸರಳವಾಗಿ ಪರಕ್ಕಳ ಪ್ರಭಾಕರ ತಮ್ಮ ವಾರದ ಪ್ರಸ್ತುತಿಯನ್ನು ಆರಂಭಿಸುತ್ತಾರೆ. ಅನೇಕರಿಗೆ ಈಗಾಗಲೇ ಗೊತ್ತಿರಬಹುದು ಪರಕ್ಕಳ ಪ್ರಭಾಕರ ಯಾರು ಅಂತ. ಅವರು ನಮ್ಮ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ನರ ಗಂಡ. ಮೋದಿ ಸರಕಾರದ ನಿಲುವುಗಳನ್ನು, ನಡೆಗಳನ್ನು ಹರಿತವಾಗಿ, ಖಂಡತುಂಡಾಗಿ ವಿಮರ್ಶಿಸುವ ಚಿಂತಕ. ಅವರ ಜೂನ್ ಎರಡರ ವಿಡಿಯೊ ಅಂಕಣದ ಮೊದಲ ವಾಕ್ಯದಲ್ಲಿ ಹೇಳಿದ್ದನ್ನು ನಾವೂ ಓದೋಣ:
“ಕೊರೊನಾ ವೈರಸ್ಸಿನಿಂದಾದ ಎಲ್ಲ ಭಾನಗಡಿಗಳನ್ನು ಪರಿಶೀಲಿಸುವ ಸ್ವತಂತ್ರ ತನಿಖಾ ಸಮಿತಿಯೊಂದು ಇನ್ನೇನು ಕೆಲಸ ಆರಂಭಿಸಲಿದೆ” ಎಂದು ಪ್ರಧಾನ ಮಂತ್ರಿ ಘೋಷಿಸಿದರು… ಇಂಥ ಮಹಾನ್ ದುರಂತದಲ್ಲಿ ಏನೇನಾಯಿತು ಎಂಬುದನ್ನು ಖಚಿತ ತನಿಖೆಯ ಮೂಲಕ ನಡೆಸಬೇಕಾಗಿದ್ದು ಸರಕಾರದ ಕರ್ತವ್ಯವಾಗಿದೆ. ಇದರಲ್ಲಿ ನಾವು ಕಲಿಯುವ ಎಲ್ಲ ಪಾಠಗಳೂ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗುತ್ತದೆ. ಈ ದುರಂತದಲ್ಲಿ ಯಾರ ಯಾರ ಕೆಲಸಗಳು ಹೇಗಿದ್ದವು ಎಂಬುದನ್ನು ಎಲ್ಲ ಮುಖ್ಯ ಪಾತ್ರಧಾರಿಗಳಿಂದ ಅರಿತು, ಸರಕಾರದ ಎಲ್ಲ ಬಗೆಯ ಸ್ಪಂದನೆಗಳನ್ನೂ ಸೂಕ್ಷ್ಮವಾಗಿ ಬಗೆದು ನೋಡಿ ಅದನ್ನು ವಿಶ್ಲೇಷಣೆ ಮಾಡಬೇಕು. “ನಾನು ಇಂಥ ತನಿಖಾ ಸಮಿತಿಯವರು ಕೇಳುವ ಎಲ್ಲ ಪ್ರಶ್ನೆಗಳಿಗೂ ಪ್ರತಿಜ್ಞಾಪೂರ್ವಕವಾಗಿ ಉತ್ತರಿಸುತ್ತೇನೆ” ಎಂದು ಪ್ರಧಾನಿಯವರು ಹೇಳಿದರು.
https://www.youtube.com/watch?v=e1f67SCm1N0
ನಮ್ಮ ಪ್ರಧಾನಿಯವರು ಹೀಗೆಂದು ಘೋಷಣೆ ಮಾಡಿದ್ದು ನಿಜವೆ ಎಂದು ನೀವು ಪ್ರಶ್ನಿಸಬಹುದು. ಅದು ನಮ್ಮ ಪ್ರಧಾನಿಯ ಘೋಷಣೆ ಅಲ್ಲ! ಬ್ರಿಟಿಷ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಹೇಳಿದ್ದು. ಅವರದ್ದು ನಮಗಿಂತ ಚಿಕ್ಕ ಪ್ರಜಾಪ್ರಭುತ್ವ.
*
ಇಷ್ಟು ಹೇಳಿದ ಪರಕ್ಕಳ ಪ್ರಭಾಕರರ ಮುಂದಿನ ಮಾತುಗಳನ್ನು ಕೇಳಿ:
ನಮ್ಮ ದೇಶದ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ಜನಸಾಮಾನ್ಯರ ಪಾತ್ರ ಈ ಮಹಾದುರಂತದಲ್ಲಿ ಹೇಗಿತ್ತು ಎಂಬುದರ ಬಗ್ಗೆ ನಮ್ಮಲ್ಲೂ ಇಂಥದ್ದೊಂದು ತನಿಖೆ ನಡೆಯಲೇಬೇಕಾಗಿದೆ. ಕೋವಿಡ್ ಸಂಕಟವನ್ನು ನಿಭಾಯಿಸಲು ಹೋಗಿ ಏನೆಲ್ಲ ಅಧ್ವಾನಗಳಾಗಿವೆ ಎಂಬುದರ ತನಿಖೆ ನಡೆಸು ಹೊರಟಿದ್ದು ಬ್ರಿಟನ್ ಒಂದೇ ಅಲ್ಲ. ಸ್ವೀಡನ್ ಕೋವಿಡ್ ಕುರಿತಂತೆ ತಾನು ಕೈಗೊಂಡ ಮುಕ್ತ ನಿಲುವಿನಿಂದಾಗಿ ಏನೇನಾದವು ಎಂಬುದರ ತನಿಖೆಗೆಂದು ಅಲ್ಲಿನ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ಘಟಿಸಿದೆ. ಈ ಸಮಿತಿ ತನ್ನ ಎರಡು ಮಧ್ಯಂತರ ವರದಿಗಳನ್ನು ಸಲ್ಲಿಸಿ ನಂತರ ೨೦೨೦ರಲ್ಲಿ ಅಂತಿಮ ವರದಿಯನ್ನು ಸಲ್ಲಿಸಲಿದೆ.ಸ್ವೀಡಿಶ್ ಪ್ರಧಾನಿ ತನ್ನ ದೇಶದಲ್ಲಿ ಸುಮಾರು ಐದು ಸಾವಿರ ಜನರ ಸಾವು ಸಂಭವಿಸಿದಾಗ ಈ ಸಮಿತಿಯನ್ನು ಘಟಿಸಿದರು. ಹೌದು, ಕೇವಲ ೫೦೦೦ ಸಾವು. ನಾರ್ವೆ ದೇಶವೂ ತಾನು ಕೋವಿಡ್ ಕಾಲದಲ್ಲಿ ಕೈಗೊಂಡ ನಿರ್ಣಯಗಳು ಸರಿಯಾಗಿದ್ದುವೆ ಇಲ್ಲವೆ ಎಂಬುದರ ತನಿಖೆಗೆ ಒಂದು ಸ್ವತಂತ್ರ ಸಮಿತಿಯನ್ನು ನೇಮಕ ಮಾಡಿದೆ. ಇಟಲಿಯಲ್ಲಿ ಕೋವಿಡ್ನಿಂದಾಗಿ ದಾಖಲೆ ಪ್ರಮಾಣದ ಸಾವು ನೋವು ಸಂಭವಿಸಿತಲ್ಲ? ಅದಕ್ಕೆ ಸರಕಾರದಿಂದಾದ ಅಧಿಕೃತ ತಪ್ಪುಗಳೇ ಕಾರಣ ಹೌದೋ ಅಲ್ಲವೋ ಎಂಬುದರ ಕುರಿತು ಸ್ವತಂತ್ರ ಸಮಿತಿಯೊಂದು ಕಳೆದ ಜೂನ್ನಲ್ಲಿ ಅಲ್ಲಿನ ಪ್ರಧಾನಿಯನ್ನು ಮೂರು ಗಂಟೆಗಳ ಕಾಲ ಪ್ರಶ್ನೆ ಮಾಡಿತು. ಹೌದು, ಮತ್ತೆ ನಾನು ಸರಿಯಾಗಿಯೇ ಹೇಳುತ್ತಿದ್ದೇನೆ. ಇಟಲಿಯ ಪ್ರಧಾನ ಮಂತ್ರಿಯನ್ನು ಮೂರು ಗಂಟೆಗಳ ಕಾಲ ಪ್ರಶ್ನಿಸಲಾಯಿತು. ಆ ಸಮಿತಿ ಅಲ್ಲಿನ ಆರೋಗ್ಯ ಸಚಿವರನ್ನೂ ಗೃಹಸಚಿವರನ್ನೂ ಈ ಬಗ್ಗೆ ಪ್ರಶ್ನಿಸಿತು.
ಈಗ ಫ್ರಾನ್ಸ್ ದೇಶಕ್ಕೆ ಬರೋಣ. ಕೊರೊನಾ ಸಂಕಟವನ್ನು ಸರಕಾರ ಹೇಗೆ ನಿಭಾಯಿಸಿದೆ ಎಂಬುದರ ಬಗ್ಗೆ ತನಿಖೆ ನಡೆಸಬೇಕೆಂದು ಅಲ್ಲಿನ ವಿಶೇಷ ನ್ಯಾಯಾಯಲ ಆಜ್ಞಾಪಿಸಿದೆ. ಫ್ರೆಂಚ್ ಪೊಲೀಸರು ಅಲ್ಲಿನ ಆರೋಗ್ಯ ಸಚಿವೆಯ ಮನೆಯನ್ನು ಜಾಲಾಡಿದರು. ಮಾಜಿ ಪ್ರಧಾನಿಯ ಹಾಗೂ ಇನ್ನಿತರ ಉನ್ನತ ಅಧಿಕಾರಿಗಳ ಮನೆಗಳನ್ನೂ ಮೊನ್ನೆ ಮೇ ತಿಂಗಳಲ್ಲಿ ಶೋಧಿಸಿದರು. ಈ ತನಿಖಾ ಸಮಿತಿಯ ನೇಮಕವಾಗಿದ್ದು ಏಕೆಂದರೆ ಉನ್ನತ ಹುದ್ದೆಯಲ್ಲಿರುವ ಇವರೆಲ್ಲರೂ ಕೋವಿಡ್ ಸಾಂಕ್ರಾಮಿಕವನ್ನು ಎದುರಿಸುವಲ್ಲಿ ತೀರ ನಿಧಾನವಾಗಿ ಹೆಜ್ಜೆಯಿಟ್ಟರೆಂದು ಕೆಲವು ರೋಗಪೀಡಿತರು ದೂರು ನೀಡಿದ್ದರು. ಹಿಂದಿನ ಆರೋಗ್ಯ ಸಚಿವರು, ಪ್ರಧಾನಿಯವರ ಜೊತೆ ಈಗಿನ ಪ್ರಧಾನಿಯನ್ನೂ ತನಿಖಾ ಸಮಿತಿ ಪ್ರಶ್ನೆ ಮಾಡಿದೆ.
ಕೊರೊನಾ ಮಹಾಸಾಂಕ್ರಾಮಿಕದಿಂದಾಗಿ ಏನೆಲ್ಲ ಗೊಂದಲ, ಏನೆಲ್ಲ ಢೋಂಗಿ ಆತ್ಮವಿಶ್ವಾಸ ಮತ್ತು ವಿವಿಧ ಸಂಘಟನೆಗಳ ಅಸಮರ್ಪಕ ಸಹಕಾರದಿಂದಾಗಿ ಇಡೀ ಯುರೋಪ್ ಖಂಡವೇ ಎಷ್ಟೊಂದು ಸಂಕಟಗಳನ್ನು ಎದುರಿಸಬೇಕಾಗಿ ಬಂತೆಂದು ಅಲ್ಲಿನ ನಿಗಮಗಳು ಟೀಕೆ ಮಾಡಿದ್ದನ್ನು ಗಮನಿಸಿ ಐರೋಪ್ಯ ಸಂಘ ಪ್ರತ್ಯೇಕ ತನಿಖೆಯನ್ನು ಆರಂಭಿಸಿದೆ. ಹದಿನೈದು ದಿನಗಳ ಹಿಂದಷ್ಟೇ (ಮೇ ೧೮ರಂದು) ಕೋವಿಡ್ ಕುರಿತ ಎಡವಟ್ಟು ಕ್ರಮಗಳಿಂದ ಏನೆಲ್ಲ ದುರಂತಗಳು ಸಂಭವಿಸಿದವು ಎಂಬುದರ ಬಗ್ಗೆ ಐರೋಪ್ಯ ಓಂಬುಡ್ಸ್ಮನ್ ವರದಿಯನ್ನು ಬಹಿರಂಗಗೊಳಿಸಲಾಗಿದೆ.
ಬ್ರಝಿಲ್ ದೇಶದಲ್ಲೂ ಕೋವಿಡ್ ಸಂಕಟವನ್ನು ನಿಭಾಯಿಸುವಲ್ಲಿ ಸರಕಾರ ಏನೇನು ತಪ್ಪು ಕ್ರಮಗಳನ್ನು ಕೈಗೊಂಡಿತು ಎಂಬುದರ ಬಗ್ಗೆ ಸೆನೆಟ್ (ಸಂಸತ್ತು) ತನಿಖೆ ಮಾಡಬೇಕೆಂದು ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಆಜ್ಞಾಪಿಸಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತದ ಸಂಸತ್ತು ಕೂಡ ತನಿಖಾ ಸಮಿತಿಯನ್ನು ನೇಮಕ ಮಾಡಿ, ಕಳೆದ ಫೆಬ್ರವರಿಯಲ್ಲೇ ವರದಿಯನ್ನು ತರಿಸಿಕೊಂಡಿದೆ.
ವಿಶ್ವ ಸ್ವಾಸ್ಥ್ಯ ಸಂಘದ ಸಲಹೆಯ ಪ್ರಕಾರ ವಿವಿಧ ದೇಶಗಳು ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಸಮರ್ಪಕವಾಗಿದ್ದುವೆ ಇಲ್ಲವೆ ಎಂಬುದರ ಮೌಲ್ಯಮಾಪನ ಆಗಬೇಕೆಂದು ಕಳೆದ ವರ್ಷವೇ ವಿಶ್ವ ಆರೋಗ್ಯ ಸದನದಲ್ಲಿ ನಿರ್ಣಯವನ್ನು ಮಂಡಿಸಲಾಗಿತ್ತು. ಭಾರತ ಅದಕ್ಕೆ ತನ್ನ ಒಪ್ಪಿಗೆಯ ಮುದ್ರೆಯನ್ನೂ ಒತ್ತಿತ್ತು. ಅಂಥ ಮೌಲ್ಯಮಾಪನದ ವರದಿಯನ್ನೂ ಕಳೆದ ತಿಂಗಳು ಸಲ್ಲಿಸಲಾಗಿದೆ. ನಾನು ಇದುವರೆಗೆ ಹೇಳಿರುವ ಅಷ್ಟೂ ಸಂಗತಿಗಳ ಅಧಿಕೃತ ದಾಖಲೆಗಳಿರುವ ಜಾಲತಾಣದ ಕೊಂಡಿಗಳನ್ನು ನಾನು ಮುಂದೆ ಕೊಟ್ಟಿರುತ್ತೇನೆ, ಯಾರು ಬೇಕಾದರೂ ಪರಿಶೀಲಿಸಬಹುದು.
ಇದುವರೆಗೆ ಭಾರತ ಒಟ್ಟೂ ಕೋವಿಡ್ ರೋಗಪೀಡಿತರ ಸಂಖ್ಯೆ ಎರಡು ಕೋಟಿ ೮೧ ಲಕ್ಷ, ೬೯ ಸಾವಿರದ ೯೭೦ರಷ್ಟಾಗಿದೆ. ಇದುವರೆಗೆ ಒಟ್ಟೂ ೩,೩೧, ೮೭೧ ಜನರು ಮೃತಪಟ್ಟಿದ್ದಾರೆ. ಮೇ ಮೊದಲ ವಾರದಲ್ಲಿ ರೋಗದ ಉಲ್ಪಣ ಗರಿಷ್ಠ ಮಟ್ಟ ತಲುಪಿ ಆಮೇಲೆ ಇಳಿಮುಖವಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಅದಕ್ಕೆ ಪೂರಕವಾಗಿ ಸಾವಿನ ಸಂಖ್ಯೆಯೂ ಇಳಿಮುಖವಾಗಬೇಕಿತ್ತು. ಆಗುತ್ತಿಲ್ಲ. ಅಮೆರಿಕದ ಮಿಷಿಗನ್ ಯುನಿವರ್ಸಿಟಿಯ ಭ್ರಮರ್ ಮುಖರ್ಜಿ ಮತ್ತಿತರ ತಜ್ಞರು ಮತ್ತು ಮೀಡಿಯಾ ಪರಿಣತರು ಹೇಳುವ ಪ್ರಕಾರ, ಕೋವಿಡ್ ಸಾವಿನ ನಿಜವಾದ ಸಂಖ್ಯೆ ಈಗಿಗಿಂತ ೪-೫ ಪಟ್ಟು ಹೆಚ್ಚಿಗೆ ಇರಬಹುದು. ಪ್ರತಿ ಒಂಬತ್ತು ಸಾವುಗಳ ಪೈಕಿ ಎರಡನ್ನು ಮಾತ್ರ ಲೆಕ್ಕಕ್ಕೆ ಪರಿಗಣಿಸಲಾಗುತ್ತಿದೆ. ನ್ಯೂಯಾರ್ಕ್ ಟೈಮ್ಸ್ನ ಕೋವಿಡ್ ಟ್ರ್ಯಾಕರ್ ಪ್ರಕಾರ ಇದುವರೆಗೆ ೧೬ ಲಕ್ಷ ಸಾವು ಸಂಭವಿಸಿರಬೇಕು. ಇನ್ನೂ ಕಟುವಾಸ್ತವ ಏನಿರಬಹುದೆಂದರೆ ೪೨ ಲಕ್ಷ ಸಾವು ಸಂಭವಿಸಿರಬಹುದು. ನಾವು ಯಾವುದನ್ನು ನಂಬಬೇಕು? ತಜ್ಞರ ಮಾತುಗಳನ್ನೋ ಅಥವಾ ಸರಕಾರದ ಅಂಕಿಸಂಖ್ಯೆಗಳನ್ನೋ? ವಾಸ್ತವ ಏನೆಂಬುದು ರಾಷ್ಟ್ರಕ್ಕೆ ಗೊತ್ತಾಗಬೇಕಲ್ಲವೆ? ಈ ಮಹಾಸಾಂಕ್ರಾಮಿಕದಿಂದ ನಮ್ಮ ದೇಶದಲ್ಲಿ ನಿಖರವಾಗಿ ಅದೆಷ್ಟು ಸಾವು ಸಂಭವಿಸಿದೆ ಎಂಬುದು ಸ್ವತಂತ್ರ ತನಿಖಾ ಸಮಿತಿಯ ಮೂಲಕ ಹೊರಬರಬೇಕಲ್ಲವೆ?
ಸಂಸತ್ತಿನಲ್ಲಿ ಸರಕಾರ ಏನು ಹೇಳಿತ್ತೆಂಬುದು ನೆನಪಿಸಿಕೊಳ್ಳಿ. ಎಷ್ಟು ಮಂದಿ ಡಾಕ್ಟರ್ಗಳು, ಆರೋಗ್ಯ ಕಾರ್ಯಕರ್ತರು ಮತ್ತು ವಲಸೆ ಕಾರ್ಮಿಕರು ಕೋವಿಡ್ನಿಂದಾಗಿ ಸತ್ತರು ಎಂಬುದರ ಬಗ್ಗೆ ತನ್ನ ಬಳಿ ಸರಿಯಾದ ಅಂಕಿಸಂಖ್ಯೆಗಳಿಲ್ಲ ಎಂದು ಸರಕಾರ ಹೇಳಿತ್ತು. ಅಧಿಕೃತ ಅಂಕಿಸಂಖ್ಯೆಗಳೇ ಇಲ್ಲದ ಸಂದರ್ಭದಲ್ಲಿ ಎಲ್ಲ ಬಗೆಯ ಅಂದಾಜು ಸಂಖ್ಯೆಗಳೂ ಎಲ್ಲರ ಬಾಯಲ್ಲಿ ಓಡಾಡುತ್ತಿವೆ. ಅದಕ್ಕೊಂದು ಮುಕ್ತಾಯ ಹಾಕಬೇಕಲ್ಲವೆ? ವಾಸ್ತವದಲ್ಲಿ ಎಷ್ಟು ಜನರು ಪ್ರಾಣ ಕಳೆದುಕೊಂಡರು ಎಂಬುದರ ಬಗ್ಗೆ ಸಮರ್ಪಕ ತನಿಖೆ ನಡೆದು ನಮಗೆ ನಿಜವಾದ ಸತ್ಯ ಗೊತ್ತಾಗಬೇಕಲ್ಲವೆ?
ಈ ಕಾಯಿಲೆ ಇಷ್ಟೊಂದು ವ್ಯಾಪಕವಾಗಿ ಹರಡಲು ತಬ್ಲಿಗೀಯವರೋ, ಕುಂಭಮೇಳವೋ ಅಥವಾ ಚುನಾವಣಾ ಪ್ರಚಾರ ಭರಾಟೆಯೋ ಕಾರಣವೆಂದು ಜನರು ತಲೆಗೊಂದೊಂದು ಮಾತಾಡುತ್ತಿದ್ದಾರೆ. ಈ ಮೂರರಲ್ಲಿ ತಮಗೆ ತೋಚಿದ ಒಂದೋ ಎರಡನ್ನೋ ಎತ್ತಿ ಹೇಳುತ್ತಾರೆ. ಸಾಂಕ್ರಾಮಿಕದ ಆರಂಭದ ಹಂತದಲ್ಲೇ ಇದನ್ನು ಕಡೆಗಣಿಸಿ “ನಮಸ್ತೇ ಟ್ರಂಪ್” ಎಂಬಂಥ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸರಕಾರದ ತಪ್ಪೆಂದೂ ಕೆಲವರು ವಾದಿಸುತ್ತಾರೆ. ನಿಜಕ್ಕೂ ಯಾವುದು ಎಷ್ಟರಮಟ್ಟಿಗೆ ಕಾರಣ ಎಂಬುದು ನಮಗೆ ಗೊತ್ತಾಗಬೇಕಲ್ಲವೆ? ಅದಕ್ಕೆಂದು ಒಂದು ಸ್ವತಂತ್ರ, ಬಹಿರಂಗ ತನಿಖೆ ನಡೆಯಬೇಕಲ್ಲವೆ?
ಕೇಂದ್ರ ಸರಕಾರದ ಆರೋಗ್ಯ ಇಲಾಖೆಯ ರಾಜ್ಯ ಸಚಿವರು ಕಳೆದ ಸಂಸತ್ ಅಧಿವೇಶನದಲ್ಲಿ ಸುದೀರ್ಘ ಲೆಕ್ಕ ಕೊಟ್ಟರು. ಲಾಕ್ಡೌನ್ ಸಮಯದಲ್ಲಿ ಇಂತಿಷ್ಟು ಆಸ್ಪತ್ರೆಗಳಲ್ಲಿ ಇಂತಿಷ್ಟು ಐಸಿಯುಗಳನ್ನು , ಬೆಡ್ಗಳನ್ನು, ಆಮ್ಲಜನಕ ಪೂರೈಕೆಯ ಇಂತಿಂಥ ವ್ಯವಸ್ಥೆಗಳನ್ನೂ ಮಾಡಲಾಯಿತೆಂದು ವಿವರಿಸಿದರು. ಇದು ಯಾತಕ್ಕೂ ಸಾಲಲಿಲ್ಲವೆಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರ ಪ್ರಕಾರ, ಕಳೆದ ಎಪ್ಪತ್ತು ವರ್ಷಗಳಿಂದ ನಮ್ಮ ಆರೋಗ್ಯ ವ್ಯವಸ್ಥೆಯನ್ನು ಕಡೆಗಣಿಸಿದ್ದೇ ಈ ಮಹಾದುರಂತಕ್ಕೆ ಕಾರಣವಾಯಿತೆಂದೂ ಕೊನೇ ನಿಮಿಷದ ತುರ್ತು ಸಂದರ್ಭದಲ್ಲಿ ಇದಕ್ಕಿಂತ ಹೆಚ್ಚು ವ್ಯವಸ್ಥೆಯನ್ನು ಮಾಡಲು ಯಾವ ಸರಕಾರಕ್ಕೂ ಸಾಧ್ಯವಿಲ್ಲವೆಂದೂ ಇನ್ನು ಕೆಲವರು ಹೇಳುತ್ತಾರೆ. ಹಾಗಿದ್ದರೆ ವಾಸ್ತವಾಂಶ ಏನು? ಇದು ನಮಗೆ ಗೊತ್ತಾಗಬೇಕಲ್ಲವೆ?
ಕೆಲವರು ಹೇಳುವ ಪ್ರಕಾರ ಆರಂಭದಲ್ಲಿ ಲಸಿಕೆಯ ಕುರಿತು ನಾನಾ ಬಗೆಯ ಭಯಜನಕ ಊಹಾಪೋಹಗಳು ಎದ್ದಿದ್ದರಿಂದ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುವಂತಾಗಿತ್ತು. ಅದರಿಂದಾಗಿಯೇ ಲಸಿಕೆಯ ಅಭಿಯಾನದಲ್ಲಿ ವ್ಯಾಪಕ ಅವ್ಯವಸ್ಥೆಗಳು ತಲೆದೋರಿದವು. ಇದು ನಿಜವೆ? ನಿಜಕ್ಕೂ ಲಸಿಕೆ ವಿತರಣೆಗೆ ಇದು ಅಡ್ಡಿಯಾಗಿತ್ತೆ? ಇದರ ಸತ್ಯಾಂಶ ಏನೆಂಬುದು, ಸ್ವತಂತ್ರ ತನಿಖಾ ಸಮಿತಿಯಿಂದ ನಮಗೆಲ್ಲ ಗೊತ್ತಾಗಬೇಕಲ್ಲವೆ?
ಮಹಾಸಾಂಕ್ರಾಮಿಕ ಇಷ್ಟೊಂದು ವ್ಯಾಪಿಸಲು ಸಮಾಜದ ವಿವಿಧ ಘಟಕಗಳ, ಪ್ರತಿಪಕ್ಷಗಳ, ಮಾಧ್ಯಮಗಳ ಹಾಗು ಇತರ ತಜ್ಞರ, ತಜ್ಞರಲ್ಲದವರ ಪಾತ್ರ ಏನಿತ್ತು ಎಂಬುದರ ಬಗ್ಗೆ ನಮಗೆ ಸ್ಪಷ್ಟ ಚಿತ್ರಣ ಗೊತ್ತಾಗಬೇಕು. ಲಸಿಕೆ ತಯಾರಿಸುವ ವಿವಿಧ ಕಂಪನಿಗಳೊಂದಿಗೆ ಸರಕಾರವೇನೋ ಈ ಮಹಾಕಾಯಿಲೆಯ ಆರಂಭದಿಂದಲೂ ಮಾತುಕತೆ ನಡೆಸುತ್ತಲೇ ಇತ್ತು ಎಂದು ನೀತಿ ಆಯೋಗದ ವಕ್ತಾರರೊಬ್ಬರು ಹೇಳಿದ್ದಾರೆ. ಏನು ಮಾತುಕತೆ ನಡೆಯಿತು, ಲಸಿಕೆ ಪೂರೈಕೆಯ ವಿಳಂಬದಲ್ಲಿ ಯಾರ ಪಾತ್ರ ಏನಿತ್ತು ಎಂಬುದು ನಮಗೆ ಗೊತ್ತಾಗಬೇಕಲ್ಲವೆ?
ವೈದ್ಯಕೀಯ ಮೂಲವ್ಯವಸ್ಥೆಯನ್ನು ರಾಜ್ಯಗಳು ಕಡೆಗಣಿಸಿದ್ದೇ ಈ ದುರಂತಗಳಿಗೆ ಕಾರಣವೆಂದು ಕೇಂದ್ರ ಸರಕಾರದ ಕೆಲವು ವಕ್ತಾರರು ಹೇಳಿದ್ದಾರೆ. ಅದು ಹಾಗಲ್ಲವೆಂದು ಇನ್ನು ಕೆಲವರು ವಾದಿಸುತ್ತಿದ್ದಾರೆ. ಇದು “ಮಹಾಸಾಂಕ್ರಾಮಿಕ” (ಪ್ಯಾಂಡೆಮಿಕ್) ಆಗಿರುವುದರಿಂದ ಅದರ ನಿರ್ವಹಣೆಯ ಹೊಣೆ ಸಂಪೂರ್ಣವಾಗಿ ಕೇಂದ್ರ ಸರಕಾರದ್ದೇ ಆಗಿರುತ್ತದೆಂದು ಅವರು ಹೇಳುತ್ತಾರೆ. ನಿಜ ಸಂಗತಿ ಏನು, ಯಾರ ಹೊಣೆ ಎಷ್ಟಿರಬೇಕಿತ್ತು; ಯಾವ ರಾಜ್ಯ ಯಾವ ಯಾವ ರೀತಿಯ ಕ್ರಮ ಕೈಗೊಂಡಿದ್ದರಿಂದ ಕಾಯಿಲೆಯ ಪ್ರಸರಣದ ಮೇಲೆ ಏನೇನು ಪರಿಣಾಮಗಳಾದವು ಎಂಬುದು ನಮಗೆಲ್ಲ ಗೊತ್ತಾಗಬೇಕಲ್ಲವೆ? ಔಷಧದ ಖರೀದಿಯಲ್ಲೂ ರಾಜ್ಯಕ್ಕೊಂದು ರೇಟು, ಕೇಂದ್ರಕ್ಕೊಂದು ರೇಟು -ಹೀಗೆ ನಿರ್ಧರಿಸಿದ್ದು ಅನ್ಯಾಯವೆಂದೂ ಹೀಗೆ ಕೇಂದ್ರ ಸರಕಾರ ನಿರ್ಧರಿಸಿದ್ದು ಸರಿಯಲ್ಲವೆಂದೂ ಕೆಲವರು ವಾದಿಸುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯವೂ ಅದನ್ನೇ ಹೇಳಿದೆ. ಸರಕಾರ ತನ್ನ ನಿರ್ಧಾರವೇ ಸರಿಯೆಂದು ಹೇಳುತ್ತಿದೆ. ಯಾವುದು ಸರಿ? ನಮಗೆ ಗೊತ್ತಾಗಬೇಡವೆ?
ಗಣಕತಜ್ಞರ ಪ್ರಕಾರ, ಲಸಿಕೆಗೆ ಬರಬೇಕೆಂದು ಕಂಪ್ಯೂಟರಿನ ಮೂಲಕವೇ ಕ್ರಮವಾರು (ಕೋವಿನ್) ವ್ಯವಸ್ಥೆ ಮಾಡಿದ್ದರಿಂದ ಅಷ್ಟೇನೂ ಕಂಪ್ಯೂಟರ್ ಸಾಕ್ಷರತೆ ಇಲ್ಲದ ಶ್ರಮಜೀವಿಗಳಿಗೆ, ರೈತರಿಗೆ, ಗ್ರಾಮೀಣ ಜನರಿಗೆ ಅನ್ಯಾಯವಾಗಿದೆ. ಆದರೆ ಕೇಂದ್ರ ಸರಕಾರದ ಗಣಕತಜ್ಞರು ಅದನ್ನು ಒಪ್ಪುತ್ತಿಲ್ಲ. ವಾಸ್ತವದಲ್ಲಿ ಕಂಪ್ಯೂಟರ್ ಸಾಕ್ಷರತೆ ಇಲ್ಲದವರಿಗೆ ಅನ್ಯಾಯವಾಗಿದ್ದು ನಿಜವೆ? ಲಸಿಕೆ ಹಾಕಿಸಿಕೊಳ್ಳಬೇಕೆಂದು ನೋಂದಣಿ ಮಾಡಿಸಿಕೊಳ್ಳುವವರಿಗೆ ಈ ಅತ್ಯಾಧುನಿಕ ಆಪ್ ಮತ್ತು ಪೋರ್ಟಲ್ಗಳಿಂದ ತೊಂದರೆ ಆಗಿದೆಯೊ ಅನುಕೂಲವಾಗಿದೆಯೊ? ಇದಕ್ಕೆ ಖಚಿತ ಉತ್ತರ ಸಿಕ್ಕರೆ ಮುಂದಿನ ಇಂಥ ಪ್ರಸಂಗಗಳಲ್ಲಿ ನಾವು ಇವರನ್ನು ಟೀಕಿಸುವ ಅಥವಾ ಅವರನ್ನು ಶ್ಲಾಘಿಸುವ ಪ್ರಸಂಗ ಬರಬಾರದಲ್ಲವೆ? ಸ್ವತಂತ್ರ ಸಮಿತಿಯೊಂದು ಇದರ ತನಿಖೆ ಮಾಡಬೇಕಲ್ಲವೆ?
ಆಸ್ಪತ್ರೆಗಳಲ್ಲಿ ಮೆಡಿಕಲ್ ಆಮ್ಲಜನಕದ ಲಭ್ಯತೆಯ ಬಗ್ಗೆ ಕೂಡ ತೀವ್ರ ವಿವಾದಗಳಿವೆ. ಸಾವಿರಾರು ಜನರು ಆಮ್ಲಜನಕ ಸಿಗದೆ, ಐಸಿಯು ಸಿಗದೆ, ಸಾಮಾನ್ಯ ಆಸ್ಪತ್ರೆಯಲ್ಲೂ ಬೆಡ್ ಸಿಗದೆ ಮೃತಪಟ್ಟಿದ್ದಾರೆ. ಆಸ್ಪತ್ರೆಗಳಲ್ಲಿ ಪ್ರವೇಶ ಸಿಗದೆ, ಹೆಬ್ಬಾಗಿಲಲ್ಲೇ ಸಾವಪ್ಪಿದ್ದಾರೆ. ಆದರೆ ಸರಕಾರ ಏನು ಹೇಳುತ್ತದೆ? ಆಮ್ಲಜನಕದ ಪೂರೈಕೆ ಹಾಗೂ ಇನ್ನಿತರ ಮೆಡಿಕಲ್ ವ್ಯವಸ್ಥೆಗಳು ಸಮರ್ಪಕವಾಗಿಯೇ ಇದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲೇ ಅದು ಹೇಳಿಕೊಂಡಿದೆ. ನಿಜವಾದ ಸಂಗತಿ ಏನಿದ್ದೀತು? ಕೆಲವು ರಾಜ್ಯಗಳು ನ್ಯಾಯಾಲಯಕ್ಕೆ ಹೋಗಿ, ತಮಗೆ ಹೆಚ್ಚಿನ ಆಮ್ಲಜನಕ ಬೇಕೆಂದು ಹಠ ಹೊತ್ತು ವಾದಿಸಿ, ಆಮ್ಲಜನಕವನ್ನು ತರಿಸಿಕೊಂಡಿವೆ. ಇದರಲ್ಲಿ ಯಾರ ಮಾತು ಸತ್ಯ ಎಂಬುದು ಗೊತ್ತಾದರೆ ತಾನೆ, ಮುಂದೆಂದೂ ಇಂಥ ವಾಗ್ವಾದ ತಲೆ ಎತ್ತದಂತೆ, ವೈದ್ಯಕೀಯ ಸೌಲಭ್ಯಗಳ ಪೂರೈಕೆಗೆ ಕೇಂದ್ರ ಮತ್ತು ರಾಜ್ಯಗಳ ಹೊಣೆಗಾರಿಕೆ ಏನಿರಬೇಕು ಎಷ್ಟಿರಬೇಕು ನಿರ್ಣಯಿಸಲು ಸಾಧ್ಯ?
ಈ ಮಹಾಸಾಂಕ್ರಾಮಿಕದ ಅವಧಿಯಲ್ಲಿ ಕೇಂದ್ರ ಸರಕಾರ ಅದೆಷ್ಟೊ ಕಾರ್ಯಪಡೆಗಳನ್ನು ರಚಿಸಿದ್ದರ ಬಗ್ಗೆ ವರದಿಗಳು ಬರುತ್ತಿದ್ದವು. ಅವುಗಳಲ್ಲಿ ಕೆಲವನ್ನು ಅರ್ಧಕ್ಕೇ ಕೈಬಿಟ್ಟಿದ್ದೂ, ಕೆಲವು ಪಡೆಗಳು ಆಗಾಗ ಒಂದಿಷ್ಟು ಪ್ರಗತಿಯ ತುಣುಕು ವಿವರ ಕೊಟ್ಟಿದ್ದೂ ನಮ್ಮ ಗಮನಕ್ಕೆ ಆಗಾಗ ಬಂದಿದ್ದಿದೆ. ಅವು ಸರಕಾರಕ್ಕೆ ಏನೇನು ಸಲಹೆ ಕೊಟ್ಟವು ಎಂಬುದಂತೂ ಅವರ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳಲ್ಲಿ ದಾಖಲಾಗಿರಬೇಕು. ಅದರಿಂದ ಏನಾದರೂ ಪ್ರಯೋಜನವಾಯಿತೆ, ಸರಕಾರಿ ಅಧಿಕಾರಿಗಳೊಂದಿಗೆ ಅವರ ವ್ಯವಹಾರ ಹೇಗಿತ್ತು, ಅವರ ಸಲಹೆಗಳ ಫಲಿತಾಂಶ ಏನು ಎಂಬುದು ನಮಗೆ ಗೊತ್ತಾಗಬೇಕು ತಾನೆ? ಅದು ಸ್ವತಂತ್ರ ಸಮಿತಿಯೊಂದರ ತನಿಖೆಯ ಮೂಲಕವೇ ಗೊತ್ತಾಗಬೇಕು.
ಕೊರೊನಾ ಸಂಕಷ್ಟಕಾಲದಲ್ಲಿ ಕುಸಿದ ಆರ್ಥಿಕತೆಯನ್ನು ಮೇಲೆತ್ತಲೆಂದು ಸರಕಾರ ಕೈಗೊಂಡ ಕ್ರಮಗಳಿಗೂ ಟೀಕೆಗಳು ಬಂದಿವೆ. ಅಂಥ ಕ್ರಮಗಳು ಸೂಕ್ತವಾಗಿದ್ದವೆ, ಸಕಾಲಿಕವಾಗಿದ್ದವೆ ಎಂಬುದರ ನಿಷ್ಪಕ್ಷಪಾತ ವಿಶ್ಲೇಷಣೆ ನಡೆದರೆ ಅದು ಮುಂದಿನ ಇಂಥ ಸಂಕಟಗಳ ನಿಭಾವಣೆಯಲ್ಲಿ ನೆರವಿಗೆ ಬರಬಹುದು.
ಬ್ರಿಟಿಷ್ ಪ್ರಧಾನಮಂತ್ರಿಯ ವಿಷಯಕ್ಕೆ ಮತ್ತೆ ಬರೋಣ. ಅಲ್ಲಿ ಕೋವಿಡ್ ಸಂಕಟದ ಸಂದರ್ಭದಲ್ಲಿ ಸರಕಾರ ಕೈಗೊಂಡ ಕ್ರಮಗಳ ಸಿಂಧುತ್ವದ ಬಗ್ಗೆ ತನಿಖೆ ಆಗಬೇಕೆಂದು ಹೇಳುವಾಗ ಅವರು ಇನ್ನೂ ಕೆಲವು ವಿಷಯಗಳನ್ನು ಹೊರ ಜಗತ್ತಿಗೆ ತಿಳಿಸಿದ್ದಾರೆ: ಸರಕಾರದ ನಡೆ ಸರಿಯಿತ್ತೆ ಇಲ್ಲವೆ ಎಂಬುದನ್ನು ವಿಶ್ಲೇಷಿಸಲು ಸುಮಾರು ಐವತ್ತು ಸಂಸದೀಯ ಸಮಿತಿಗಳು ಅದಾಗಲೇ ತನಿಖೆ ನಡೆಸಿವೆ. ಅದರ ಹೊರತಾಗಿ ರಾಷ್ಟ್ರೀಯ ಲೆಕ್ಕಪತ್ರ ಸಮಿತಿಯವರು ಅದಾಗಲೇ ಹದಿನೇಳು ವರದಿಗಳನ್ನು ಸಲ್ಲಿಸಿವೆ. ಹಾಗಿದ್ದರೆ ನಮ್ಮ ಸಂಸತ್ತಿನಲ್ಲೂ ವಿವಿಧ ಸಮಿತಿಗಳು ಇಲ್ಲಿ ಕೈಗೊಂಡ ನಿರ್ಣಯಗಳ ಕ್ರಮಬದ್ಧತೆಯನ್ನು ಪರಿಶೀಲಿಸುತ್ತಿವೆಯೆ?ನನಗಂತೂ ಅದರ ಸುಳಿವಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿ. ಅಂಥ ಸಮಿತಿಗಳನ್ನು ರಚಿಸಿಲ್ಲವೆಂದಾದರೆ ಯಾಕೆ ರಚಿಸಿಲ್ಲ ಎಂಬುದೂ ನಮಗೆ ಗೊತ್ತಾಗಬೇಕು. ಇವೆಲ್ಲಕ್ಕೂ ಸ್ವತಂತ್ರ ತನಿಖಾ ಆಯೋಗದ ವರದಿಯಲ್ಲೇ ನಮಗೆ ಉತ್ತರ ಸಿಗಬೇಕು.
ಇಂಥದ್ದೊಂದು ಸಮಿತಿಯ ವಿಚಾರಣೆಯ ನಂತರ ಹೊರಬರುವ ಸತ್ಯಗಳಿಂದ ನಮ್ಮ ದೇಶಕ್ಕೆ ಏನೇನು ಲಾಭಗಳಿವೆ ಎಂಬುದರ ಉದ್ದ ಪಟ್ಟಿಯನ್ನೇ ನಾವು ನೀಡುತ್ತ ಹೋಗಬಹುದು. ಆದರೆ ನಾನು ಒಂದು ಮಾತನ್ನಷ್ಟೇ ಇಲ್ಲಿ ಹೇಳಲು ಬಯಸುತ್ತೇನೆ: ಅದೇನೇಂದರೆ ಈ ಸತ್ಯಗಳು ಹೊರಬಂದರೆ ಇಡೀ ಜಗತ್ತಿಗೆ ಲಾಭವಾಗಲಿದೆ. ಇಂಥ ಸಂಕಟಕಾಲದಲ್ಲಿ ಏನೇನು ಮಾಡಬಹುದಿತ್ತು, ಮಾಡದಿದ್ದರೆ ಎದುರಿಸಬೇಕಾದ ವೈಫಲ್ಯಗಳೇನು ಎಂಬುದು ಎಲ್ಲ ದೇಶಗಳಿಗೂ ಒಂದು ಪಾಠವಾಗಲಿದೆ. ಅಂಥ ಪಾಠವನ್ನು ನಾವು ಮುಂದಿಟ್ಟಾಗ ಮಾತ್ರ ಭಾರತ “ವಿಶ್ವಗುರು” ಎಂಬ ಪಟ್ಟಕ್ಕೆ ಅರ್ಹತೆಯನ್ನು ಗಳಿಸುತ್ತದೆ.
ಫ್ರಾನ್ಸ್, ಸ್ವೀಡನ್, ಇಟಲಿ, ನಾರ್ವೆ ಅಥವಾ ಆಸ್ಟ್ರೇಲಿಯಾದ ನದಿಗಳಲ್ಲಿ ಶವಗಳು ತೇಲಿರಲಿಲ್ಲ. ಆದರೂ ಅವು ಸ್ವಯಂಪ್ರೇರಿತವಾಗಿ ಸ್ವತಂತ್ರ ತನಿಖೆಗೆ ಮುಂದಾದವು. ಬ್ರಿಟನ್ನಿನಲ್ಲೂ ತನಿಖೆ ನಡೆಯಬೇಕೆಂದು ಒತ್ತಾಯಿಸಲು ಯಾರೂ ಶವಗಳಾಗಿ ಥೇಮ್ಸ್ ನದಿಯಲ್ಲಿ ತೇಲಲಿಲ್ಲ. ಬದಲಿಗೆ ಅಲ್ಲಿನ ಸಾರ್ವಜನಿಕರು ಸಂಸತ್ತಿನ ಮೇಲೆ ಒತ್ತಾಯ ಹೇರಿದ್ದರು. ಫ್ರಾನ್ಸ್, ಇಟಲಿ ಮತ್ತು ಬ್ರಝಿಲ್ಗಳಲ್ಲಿ ಸಮರ್ಥ, ಸ್ವತಂತ್ರ ನ್ಯಾಯಾಲಯಗಳು ಅಲ್ಲಲ್ಲಿನ ಸರಕಾರಕ್ಕೆ ತನಿಖೆಯ ಆದೇಶ ನೀಡಿದ್ದವು. ಅಲ್ಲೂ ಸಿಯೆನ್, ಟೈಬರ್ ಅಥವಾ ಅಮೆಝಾನ್ ನದಿಗಳಲ್ಲಿ ಶವಗಳು ತೇಲಿರಲಿಲ್ಲ. ನಮ್ಮ ದೇಶದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ದುರಂತಗಳು ಸಂಭವಿಸುತ್ತಿರುವಾಗ, ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರ ವ್ಯವಸ್ಥೆ ಹಾಗೂ ಸುಭದ್ರ ಸರಕಾರ ಇರುವಾಗ ನಾವು ಅತ್ಯಂತ ಆತ್ಮವಿಶ್ವಾಸದಿಂದ ನಮ್ಮೆಲ್ಲ ನಡೆಯ ಪರಿಣಾಮ ಏನಾಗಿದೆಯೆಂದು ಅರಿಯಲು ಧೈರ್ಯವಾಗಿ, ಖಚಿತವಾದ ತನಿಖೆಯನ್ನು ಆದೇಶಿಸಬೇಕು. ಸರಕಾರ ತಾನಾಗಿ ತನ್ನ ಕ್ರಮಗಳ ಮೌಲ್ಯಮಾಪನಕ್ಕೆ ಮುಂದಾಗದಿದ್ದರೆ, ನಮ್ಮ ದೇಶದ ಸಾರ್ವಜನಿಕ ಸಂಘಟನೆಗಳು ಸ್ವತಂತ್ರ ತನಿಖೆಗೆ ಒತ್ತಾಯಿಸಬೇಕು. ನಮ್ಮ ನ್ಯಾಯಾಂಗವಾದರೂ ಅಂಥ ತನಿಖೆಗೆ ಆದೇಶ ನೀಡಬೇಕು.
ಪರಕಾಲ ಪ್ರಭಾಕರ್ ಪ್ರತಿ ಬುಧವಾರ ಮಧ್ಯಾಹ್ನ ೧ ಗಂಟೆಗೆ ತಮ್ಮ “ಮಿಡ್ವೀಕ್ ಮ್ಯಾಟರ್ಸ್” ಹೆಸರಿನ ಸುದ್ದಿ ವಿಶ್ಲೇಷಣೆಯ ವಿಡಿಯೊ ರೆಕಾರ್ಡನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡುತ್ತಾರೆ. ತಮ್ಮ ಪತ್ನಿ ಕೇಂದ್ರ ಸರಕಾರದ ಹಣಕಾಸು ಸಚಿವೆ ಆಗಿದ್ದರೂ ಮೋದಿ ಸರಕಾರದ ಆಕ್ಷೇಪಾರ್ಹ ನಡೆಗಳನ್ನು ನಿರ್ಭಿಡೆಯಾಗಿ, ಖಚಿತ ಮಾತುಗಳಲ್ಲಿ ಪ್ರಶ್ನಿಸುತ್ತಾರೆ. ದಿಲ್ಲಿಯ ಜವಾಹರಲಾಲ್ ನೆಹರೂ ವಿ.ವಿಯಲ್ಲಿ ನಿರ್ಮಲಾರ ಸಮಕಾಲೀನ ವಿದ್ಯಾರ್ಥಿಯಾಗಿದ್ದು ನಂತರ ನಿರ್ಮಲಾರನ್ನು ವಿವಾಹವಾಗಿ ಇಬ್ಬರೂ ಹೆಚ್ಚಿನ ಅಧ್ಯಯನಕ್ಕಾಗಿ ಲಂಡನ್ನಿಗೆ ತೆರಳುತ್ತಾರೆ. ಪ್ರಭಾಕರ್ ಅಲ್ಲಿನ ಖ್ಯಾತ ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್ ಸಂಸ್ಥೆಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಹೈದರಾಬಾದ್ನಲ್ಲಿ ವಾಸಿಸುವ ಇವರು ಆಂಧ್ರ ಪ್ರದೇಶ ಸರಕಾರಕ್ಕೆ ಆರ್ಥಿಕ ಸಲಹಾಕಾರರಾಗಿ ಕ್ಯಾಬಿನೆಟ್ ದರ್ಜೆಯ ಹುದ್ದೆಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದರು.
ಅವರ ಜೂನ್ ಎರಡರ ವಿಶ್ಲೇಷಣೆಯನ್ನು ನಾಗೇಶ ಹೆಗಡೆ ಇಲ್ಲಿ ಅನುವಾದಿಸಿ ಕೊಟ್ಟಿದ್ದಾರೆ. ಇದು ಪದಶಃ ಅನುವಾದ ಅಲ್ಲವೆಂದೂ, ಪೂರಕ ಮಾಹಿತಿಗೆ ಮೂಲ ಇಂಗ್ಲಿಷ್ ವಿಡಿಯೊವನ್ನು ನೋಡಬಹುದೆಂದೂ ಹೆಗಡೆ ಸೂಚಿಸಿದ್ದಾರೆ. ಅದರ ಕೊಂಡಿ: https://www.youtube.com/watch?v=2D5owbRN_EY