Old is gold – titanic…

ಓ ಟೈಟಾನಿಕ್!

‘ಟೈಟಾನಿಕ್’ ಸಿನಿಮಾ ಬಿಡುಗಡೆಯಾದ ಹೊಸದರಲ್ಲಿ (1997) ಹೆಂಡತಿ ಮತ್ತು ಮಗನಿಗೆ (ಆಗ ಅವನಿನ್ನೂ ಚಿಕ್ಕ ಹುಡುಗ) ಸಿನಿಮಾ ತೋರಿಸಬೇಕೆಂದು ಬೆಂಗಳೂರಿನ ಸಂಗಮ್ ಟಾಕೀಸಿಗೆ ಕರೆದೊಯ್ದಿದ್ದೆ, ಬೆಳಗಿನ ಪ್ರದರ್ಶನಕ್ಕೆ. (ನಾನಾಗಲೇ ಒಮ್ಮೆ ನೋಡಿಯಾಗಿತ್ತು.) ಚಿತ್ರಮಂದಿರದಲ್ಲಿ ಸಹಜವಾಗಿಯೇ ಅರ್ಧಕ್ಕರ್ಧ ಪ್ರೇಕ್ಷಕರು ಕಾಲೇಜು ಹುಡುಗ ಹುಡುಗಿಯರೇ. ಸರಿಯೇ, ಇರಬೇಕಾದ್ದೇ! ಮೂರೂ ಕಾಲು ಗಂಟೆಯ ದೀರ್ಘ ಸಿನಿಮಾ. ದೈತ್ಯ ಹಡಗು ಆಗಲೇ ಮುಳುಗಿಹೋಗಿದೆ. ನಾಯಕ ನಾಯಕಿ ಅದುವರೆಗೆ ಆದಷ್ಟೂ ಹೋರಾಡಿ ಈಗ ಇಬ್ಬರೂ ಕೊರೆವ ನೀರಿನಲ್ಲಿ ಗದಗುಟ್ಟುತ್ತ ಸಾವಿನ ಹೊಸ್ತಿಲಲ್ಲಿ ತೇಲುತ್ತಿದ್ದಾರೆ. ಇದೀಗ ‘ಏನೇ ಸಂಭವಿಸಲಿ, ನೀನು ಯಾವ ಸಂದರ್ಭದಲ್ಲೂ ಬದುಕುವ ಛಲ ಮಾತ್ರ ಬಿಡಕೂಡದು. ನನಗೆ ಮಾತು ಕೊಡು’ ಎಂದು ಜಾಕ್, ರೋಸ್ ಳಿಂದ ಭಾಷೆ ಪಡೆಯುವ ಸನ್ನಿವೇಶಕ್ಕೆ ಬಂದಿದ್ದೇವೆ. ರೋಸ್ ಮಲಗಿರುವ ಮರದ ಹಲಗೆ ಅವಳೊಬ್ಬಳಿಗಷ್ಟೇ ಸಾಕು. ಹಾಗಾಗಿ ಜಾಕ್ ಪ್ರೇಯಸಿಯ ಕೈ ಹಿಡಿದು ನೀರಿನಲ್ಲಿ ತೇಲುತ್ತಿದ್ದಾನೆ. ಅಲ್ಲಿ ನಾಯಕ ನಾಯಕಿ ಸಮುದ್ರದಲ್ಲಿ ನೆಂದರೆ ಇಲ್ಲಿ ಪ್ರೇಕ್ಷಕರ ಎದೆ ಬಿರಿದು ಹೋಗುತ್ತಿದೆ. ನೋಡುಗರೆಲ್ಲ ದೃಶ್ಯದಲ್ಲೇ ತಲ್ಲೀನರಾಗಿದ್ದಾಗ, ಥಿಯೇಟರಿನಲ್ಲಿ ಇದ್ದಕ್ಕಿದ್ದಂತೆ ಹತ್ತಿರದಲ್ಲೇ ಏನೋ ಹೆಚ್ಚುವರಿ ಶಬ್ದ ಬರತೊಡಗಿತು. ನೋಡಿದರೆ ನಮ್ಮ ಮುಂದಿನ ಸಾಲಿನ ಅರ್ಧ ಡಜನ್ ಹುಡುಗಿಯರು ಒಂದೇ ಸಮ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ! ಅವರನ್ನು ತಡೆಯುವವರು ಯಾರೂ ಇಲ್ಲ, ಸ್ವತಃ ಅವರೂ ತಡೆಯುತ್ತಿಲ್ಲ! ನೋಡುವಷ್ಟು ನೋಡಿ ನನ್ನ ಹೆಂಡತಿ ‘ಓ, ಈ ಹುಡುಗಿಯರೆಲ್ಲ ತಾವೇ ಹೋಗಿ ಆ ನಾಯಕನ ಕೈ ಹಿಡಿದುಕೊಂಡುಬಿಟ್ಟದ್ದಾರೆ!’ ಅಂದಳು….

ಇದು ‘ಟೈಟಾನಿಕ್’ ಸಿನಿಮಾ ಸೃಷ್ಟಿಸಿದ ಮಾಯೆಯ ಬಗ್ಗೆ ಒಂದು ಸಾಲಿನ ತೀರ್ಪು!

ಅದುವರೆಗೆ ಸೈನ್ಸ್ ಫಿಕ್ಷನ್, ಆ್ಯಕ್ಷನ್, ಹೀಗೆ ಯಶಸ್ವಿ ಥ್ರಿಲರ್ ಗಳನ್ನೇ ಕೊಟ್ಟಿದ್ದ ಆ ದೈತ್ಯ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಮೊದಲ ಬಾರಿ ಪ್ರೇಮ ಕಥನಕ್ಕೆ ಕೈ ಹಾಕಿದ್ದ. ಮತ್ತು ಮೊದಲ ಪ್ರಯತ್ನದಲ್ಲೇ ಇಡೀ ಜಗತ್ತಿನ ಉದ್ದಗಲ ಹೀಗೆ ಎಳೆ ಹೃದಯಗಳನ್ನು ಹಿಂಡಿ ದಾಖಲೆ ಬರೆದುಬಿಟ್ಟ….

ತುಸು ಇತಿಹಾಸದ ಕಡೆ ಹೋಗುವುದಾದರೆ: ಆರ್ ಎಂ ಎಸ್ ಟೈಟಾನಿಕ್- ಜಗತ್ತಿನಲ್ಲೇ ಅದುವರೆಗಿನ ಹಡಗುಗಳಲ್ಲೇ ಬೃಹತ್ತಾದುದು; ವೈಭವೋಪೇತವಾದದ್ದು. 1912ರ ಏಪ್ರಿಲ್ 10ರಂದು ಇಂಗ್ಲೆಂಡಿನ ಸೌತಾಂಪ್ಟನ್ನಿನಿಂದ ನ್ಯೂಯಾರ್ಕಿಗೆ ಹೊರಟು ಏಪ್ರಿಲ್ 14ರ ರಾತ್ರಿ 11.40ಕ್ಕೆ ಬೃಹತ್ ಮಂಜುಗಡ್ಡೆಗೆ ಡಿಕ್ಕಿ ಹೊಡೆದ ಪರಿಣಾಮ ಏಪ್ರಿಲ್ 15ರ ಬೆಳಗಿನ ಜಾವ 2.20ಕ್ಕೆ ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ತನ್ನ ಚೊಚ್ಚಲ ಯಾತ್ರೆಯಲ್ಲೇ ಮುಳುಗಿದ ದೈತ್ಯ ಹಡಗು. ಆ ನೌಕೆಯಲ್ಲಿದ್ದವರು- (ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ) ಒಟ್ಟು 2224 ಮಂದಿ. ಈ ವಿರಾಟ್ ದುರಂತದಲ್ಲಿ ಜೀವ ಕಳೆದುಕೊಂಡವರು 1500ಕ್ಕೂ ಹೆಚ್ಚು ಜನ! ಅದಕ್ಕೇ ‘ನೌಕಾಘಾತಗಳ ಚರಿತ್ರೆಯಲ್ಲೇ ಇದು ಮೌಂಟ್ ಎವರೆಸ್ಟ್’ ಎಂದು ಉದ್ಗರಿಸುತ್ತಾನೆ ಕ್ಯಾಮೆರಾನ್….

ಈ ದುರಂತ ಸಂಭವಿಸಿದ 1912ರಿಂದ ಈವರೆಗೆ ಟೈಟಾನಿಕ್ ದುರಂತದ ಬಗ್ಗೆಯೇ 18 ಕಥಾಚಿತ್ರಗಳು, 22 ಸಾಕ್ಷ್ಯಚಿತ್ರಗಳು ಮತ್ತು 26 ಟಿವಿ ಸಿನಿಮಾಗಳು, ಸರಣಿಗಳು ಬಂದಿವೆ. ಅವುಗಳಲ್ಲೆಲ್ಲ ದಾಖಲೆ ಮಟ್ಟದ ಯಶಸ್ಸು ಹಾಗೂ ಗಳಿಕೆ ಸಾಧಿಸಿದ್ದು- ಈ ಜೇಮ್ಸ್ ಕ್ಯಾಮೆರಾನನ ಪ್ರೇಮ ಕಥಾನಕವೇ. ಬಿಡುಗಡೆಯಾದಾಗ ಹಾಲಿವುಡ್ ಇತಿಹಾಸದಲ್ಲೇ ಗಳಿಕೆಯ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿತ್ರ ಟೈಟಾನಿಕ್. ಆ ದಾಖಲೆಯನ್ನು ಮುರಿದದ್ದು- ಇದೇ ನಿರ್ದೇಶಕನ ಮುಂದಿನ ಚಿತ್ರ- ಅವತಾರ್.
ಟೈಟಾನಿಕ್ ಚಿತ್ರದ ಹಿಂದಿನ ಕಥೆಯೂ ಚಿತ್ರದಷ್ಟೇ ರೋಚಕವಾಗಿದೆ!

ನೌಕೆಗಳು, ನೌಕಾಘಾತ, ಸಮುದ್ರದಾಳದ ರಹಸ್ಯಗಳ ಬಗ್ಗೆ ಕ್ಯಾಮೆರಾನನಿಗೆ ಅದಮ್ಯ ಕುತೂಹಲ. 1985ರಲ್ಲಿ ಸಮುದ್ರದಾಳದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳು ಮೊದಲ ಬಾರಿ ಪತ್ತೆಯಾದಾಗಿನಿಂದಲೂ ಈತನಿಗೆ, ತಾನೇ ಖುದ್ದು ಹೋಗಿ ನೋಡಬೇಕೆಂದು ಆಸೆ. ಆ ಆಸೆಯೇ ಆತನಲ್ಲಿ ಟೈಟಾನಿಕ್ ದುರಂತ ಕುರಿತು ಚಿತ್ರ ನಿರ್ಮಿಸಬೇಕೆಂಬ ಉಮೇದು ಹುಟ್ಟಿಸಿದ್ದು! ಸರಿ, ಟ್ವೆಂಟಿಯೆತ್ ಸೆಂಚುರಿ ಫಾಕ್ಸ್ ಸಂಸ್ಥೆಗೆ ‘ಟೈಟಾನಿಕ್ ಹಡಗಿನ ಮೇಲೊಂದು ರೋಮಿಯೋ ಜೂಲಿಯೆಟ್ ಕಥಾನಕ’ ಎಂಬ ಒಂದು ಸಾಲಿನ ಎಳೆ ಇಟ್ಟ. ಅವರು ಅಷ್ಟಕ್ಕೇ ಮನ ಸೋತು (ಜೊತೆಗೆ ಈತ ಹಾಲಿವುಡ್ಡಿನ ಸೋಲಿಲ್ಲದ ಸರದಾರ!) ಒಪ್ಪಿಗೆ ಕೊಟ್ಟುಬಿಟ್ಟರು. ಮುಂದಿನ ಎರಡು ವರ್ಷಗಳಲ್ಲಿ ಕ್ಯಾಮೆರಾನ್ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂವತ್ತಮೂರು ಬಾರಿ ಸಮುದ್ರದಾಳಕ್ಕೆ ಮುಳುಗು ಹಾಕಿ ಬಂದ. ಅಷ್ಟೇ ಅಲ್ಲ, ಟೈಟಾನಿಕ್ ಹಡಗಿನ ಅವಶೇಷಗಳನ್ನು ಸ್ವತಃ ತಾನೇ ಚಿತ್ರೀಕರಿಸಿ ತಂದ. ಆ ತುಣುಕುಗಳು ಅಂತಿಮವಾಗಿ ಚಿತ್ರದಲ್ಲೂ ಬಳಕೆಯಾಗಿವೆ. ವಿಕಿಪೀಡಿಯಾ ಪ್ರಕಾರ ಟೈಟಾನಿಕ್ ಅವಶೇಷಗಳು ಇರುವುದು ಮೂರೂಮುಕ್ಕಾಲು ಕಿಲೋಮೀಟರ್ ಸಮುದ್ರದಾಳದಲ್ಲಿ. ಆ ಆಳದಲ್ಲಿ ಒಂದು ಚದರ ಅಂಗುಲದ ಮೇಲೆ 6000 ಪೌಂಡುಗಳಷ್ಟು ಅಂದರೆ 2720 ಕೆಜಿಗೂ ಹೆಚ್ಚು ಒತ್ತಡ ಇರುತ್ತದೆ. ತುಸು ಎಚ್ಚರ ತಪ್ಪಿದರೂ, ಕಣ್ಣೆವೆ ಇಕ್ಕುವಷ್ಟರಲ್ಲಿ ಮನುಷ್ಯನ ಲವಲೇಶವೂ ಉಳಿಯುವುದಿಲ್ಲ. ಕ್ಯಾಮೆರಾನನದು ಇಂಥ ದುಸ್ಸಾಹಸಕ್ಕೆ ಕೈ ಹಾಕುವ ವಯಸ್ಸೂ ಅಲ್ಲ. ಆದರೆ ಆತ ಮೂಲತಃ ಸಾಹಸಿ. ತನ್ನ ಕೈ ಮೀರಿದ್ದನ್ನೂ ಮಾಡಿದ.

ಕ್ಯಾಮೆರಾನ್ ಮೊದಲಿಗೆ ಟೈಟಾನಿಕ್ ದುರಂತದ ಸಾಮೂಲಾಗ್ರ ಅಧ್ಯಯನ ನಡೆಸಿದ. ಮೂಲ ಹಡಗು ನಿರ್ಮಾಣ ಸಂಸ್ಥೆಯಿಂದ ಅದರ ಬ್ಲೂಪ್ರಿಂಟ್ ಪಡೆಯುವುದರಿಂದ ಹಿಡಿದು, ಟೈಟಾನಿಕ್ ತಜ್ಞರನ್ನೂ ತಂಡಕ್ಕೆ ಸೇರಿಸಿಕೊಂಡು, ದುರಂತದಲ್ಲಿ ಬದುಕುಳಿದಿದ್ದ ಬೆರಳೆಣಿಕೆಯ ಜನರ ಸಂದರ್ಶನ ಮಾಡಿ ಸಕಲ ವಿವರ ಪಡೆದುಕೊಂಡ. ಟೈಟಾನಿಕ್ ನೌಕೆ ಸೌತಾಂಪ್ಟನ್ನಿನಿಂದ ಹೊರಟು- ಏಪ್ರಿಲ್ 14ರ ನಡುರಾತ್ರಿ ಕಳೆದು 2.20ಕ್ಕೆ- ಮುಳುಗುವ ಕ್ಷಣದವರೆಗೆ ಸಂಪೂರ್ಣ ವಿವರಗಳು ಅವನಿಗೆ ಕರಗತವಾದವು. ಅದೂ ಸಾಲದೆಂದು ಕಡೆಯ ಎರಡು ಗಂಟೆಗಳಲ್ಲಿ ಏನೇನಾಯಿತು ಎಂಬುದರ ಕ್ಷಣ ಕ್ಷಣದ ವಿವರಗಳನ್ನು ಇನ್ನೂ ವಿಸ್ತೃತವಾಗಿ ಸಂಗ್ರಹಿಸಿಕೊಂಡ…. ಈ ಚಾರಿತ್ರಿಕ ವಿವರಗಳ ನಡುವೆಯೇ ಅವನು ಅಂದುಕೊಂಡಿದ್ದ ‘ರೋಮಿಯೋ ಜೂಲಿಯೆಟ್ ಕಥಾನಕ’ವನ್ನು ಹೆಣೆಯಬೇಕು!….

ಚಿತ್ರ ನೋಡಿದವರೆಲ್ಲರಿಗೂ ಗೊತ್ತಿರುತ್ತದೆ: ಜೇಮ್ಸ್ ಕ್ಯಾಮೆರಾನ್ ಟೈಟಾನಿಕ್ ಹಡಗಿನ ಮೂಲೆ ಮೂಲೆಯನ್ನೂ ಬಲ್ಲ, ಪ್ರತಿ ನಟ್ಟು ಬೋಲ್ಟನ್ನೂ ಬಲ್ಲ. ದುರಂತದ ವಿವರಗಳಂತೂ ಕ್ಷಣ ಕ್ಷಣದ ಲೆಕ್ಕದಲ್ಲಿ ಕಣ್ಣಿಗೆ ಕಟ್ಟುವಂತೆ ಮೂಡಿವೆ. ಮೊದಲು ಎಲ್ಲಿ ನೀರು ತುಂಬಿಕೊಂಡಿತು, ನಂತರ ಏನಾಯಿತು, ಪ್ರಯಾಣಿಕರ ಸಂಖ್ಯೆಯಲ್ಲಿ ಅರ್ಧದಷ್ಟು ಜನಕ್ಕೆ ಮಾತ್ರ ಸಾಕಾಗುವಷ್ಟಿದ್ದ ದೋಣಿಗಳು,- ಆ ದೋಣಿಗಳನ್ನು ಇಳಿಸುವಾಗ ಏನೇನಾಯಿತು, ಅಷ್ಟಕ್ಕೂ ‘ಮುಳುಗಲು ಸಾಧ್ಯವೇ ಇಲ್ಲದ ಹಡಗು’ ಎಂಬ ಖ್ಯಾತಿ ಟೈಟಾನಿಕ್ ನದು! ಕ್ಯಾಮೆರಾನನ ಕಣ್ಣು ಯಾವ ವಿವರವನ್ನೂ ಬಿಟ್ಟಿಲ್ಲ. (ನೀರು ಆವರಿಸುತ್ತಿದ್ದಂತೆಯೇ ಆ ಕಾರಿಡಾರುಗಳಲ್ಲಿ ಓಡಿಬರುವ ಇಲಿಗಳನ್ನು ನೆನೆಸಿಕೊಳ್ಳಿ!

ಈ ಹಡಗಿನ ಮೇಲೆ ಪ್ರಯಾಣಿಸುವ 2200 ಮಂದಿ, ಅವರಲ್ಲೇ ಮೇಲು ವರ್ಗ, ಕೆಳ ವರ್ಗದ ಪ್ರತ್ಯೇಕ ಪ್ರಪಂಚಗಳು, ಆ ಮುಖ್ಯ ಕಥೆಯೊಳಗಿನ ಉಪಕಥೆಗಳು, ಪ್ರತಿಷ್ಠಿತರ ಪ್ರತಿಷ್ಠೆಯ- ಮೂರ್ಖ ಅಹಂಕಾರದ ಗತ್ತುಗಳು… ಹಡಗು ಮುಳುಗುವುದು ನಿಶ್ಚಿತವೆಂದು ಆಗಲೇ ಸಿಬ್ಬಂದಿಗೆ ಗೊತ್ತಾಗಿದೆ. ಹಡಗನ್ನು ನಿರ್ಮಿಸಿದ ಆಂಡ್ರ್ಯೂಸ್ ಅತೃಪ್ತ ಆತ್ಮದಂತೆ ದಿಕ್ಕು ತೋಚದೆ ಅಡ್ಡಾಡುತ್ತಿದ್ದಾನೆ. ಎಲ್ಲರಿಗೂ ಲೈಫ್ ಬೆಲ್ಟುಗಳನ್ನು ಹಂಚುತ್ತಿದ್ದಾರೆ. ಆಗ ಯಾಕೀ ಕೋಲಾಹಲವೆಂಬುದರ ತಲೆಬುಡ ತಿಳಿಯದ ನಾಯಕಿಯ ತಾಯಿ ರೂಥ್ ತನ್ನ ಸಹಾಯಕಿಗೆ ‘ಹೋಗಿ ನಮ್ಮ ರೂಮಿನ ಹೀಟರ್ ಆನ್ ಮಾಡು. ನಾನು ವಾಪಸು ಬಂದಾಗ ನನಗೆ ಟೀ ಬೇಕು’ ಎಂದು ಆರ್ಡರ್ ಮಾಡುತ್ತಾಳೆ…!

ಇಂಥ ಸೂಕ್ಷಾತಿಸೂಕ್ಷ್ಮ ಮಾನವೀಯ ವಿವರಗಳ ಮೂಲಕ ಆ ಹಡಗಿನ ಮೇಲೆಯೇ ಕ್ಯಾಮೆರಾನ್ ಒಟ್ಟು ಸಮಾಜದ ತಾತ್ಪರ್ಯವನ್ನೇ ಕಣ್ಣ ಮುಂದೆ ತರುತ್ತಾನೆ. ನಮಗೆ ಆ ಹಡಗಿನ ಮೇಲೆ ಕಾಣುವುದು ಲೋಕಲೀಲೆಯ ತದ್ರೂಪ. ಹಾಗಾಗಿ ಇಡೀ ನಾಗರಿಕತೆಯನ್ನೇ ಆ ನೌಕೆ ಹೊತ್ತೊಯ್ಯುತ್ತಿರುವಂತೆ ಭಾಸವಾಗುತ್ತದೆ. ಇದು ಅವನ ಬರವಣಿಗೆಯ ಶಕ್ತಿ… ಆ ದೈತ್ಯ ಹಡಗಿನ ಹಿಂದಿನ ದೈತ್ಯ ಮಹತ್ವಾಕಾಂಕ್ಷೆ, ಎಲ್ಲ ಮಹತ್ವಾಕಾಂಕ್ಷೆಯ ಒಡಲಲ್ಲೇ ಅಂತರ್ಗತವಾದ ದುರಂತ- ಯಾವುದೂ ಚಿತ್ರಕಥಾ ಲೇಖಕನ ಕಣ್ಣಿನಿಂದ ತಪ್ಪಿಸಿಕೊಳ್ಳವುದಿಲ್ಲ.

ಆದರೆ ಇದಿಷ್ಟೂ ವಿವರ ಸಮೃದ್ಧಿ ಸಹ ಪ್ರೇಕ್ಷಕನ ದೃಷ್ಟಿಯಲ್ಲಿರುವುದಿಲ್ಲ; ಯಾಕೆಂದರೆ ಎಷ್ಟೆಂದರೂ ಅದು ಪ್ರಧಾನ ಕಥೆಯ “ಹಿನ್ನೆಲೆ” ಮಾತ್ರ. ಸಿನಿಮಾ ನೋಡುವಾಗಲೂ, ಮುಗಿದ ಮೇಲೂ ನಮ್ಮನ್ನು ಆವರಿಸುವುದು- ಆ ಸಿರಿವಂತ ಹುಡುಗಿ ರೋಸ್ ಮತ್ತು ಜೂಜಿನಲ್ಲಿ ಪ್ರಯಾಣದ ಟಿಕೆಟ್ ಗೆದ್ದುಕೊಂಡು ಹಡಗು ಹತ್ತಿರುವ ಬಡ ಕಲಾವಿದ ಜಾಕ್- ಇವರಿಬ್ಬರ ಸ್ನಿಗ್ಧ ಪ್ರೇಮ ಹಾಗೂ ತ್ಯಾಗದ ಕಥಾನಕ. ಅವರು ಹಡಗಿನ ಮೇಲಿರುವುದೇ ನಾಲ್ಕು ದಿನ. ಆ ನಾಲ್ಕು ದಿನಗಳಲ್ಲಿ ಆ ಎಳೆ ಪ್ರೇಮಿಗಳು ಇಡೀ ಯೌವನವನ್ನು ಸೂರೆಗೈದಂತೆ ಉತ್ಕಟವಾಗಿ ‘ಫಾಸ್ಟ್ ಫಾರ್ವರ್ಡ್’ನಲ್ಲಿ ಬದುಕಿಬಿಡುತ್ತಾರೆ. ನಾಯಕನಂತೂ ನಾಯಕಿಗಾಗಿ ಹಚ್ಚಿಟ್ಟ ಕರ್ಪೂರದ ಬೊಂಬೆಯಂತೆ ಉರಿದು ಆತ್ಮಾರ್ಪಣೆ ಮಾಡಿಕೊಂಡುಬಿಡುತ್ತಾನೆ.

ಈ ಹೃದಯಂಗಮ- ಹೃದಯ ವಿದ್ರಾವಕ ಕಥೆಯ ಮಜಲುಗಳನ್ನೇ ಗಮನಿಸಿ:
ಮೊದಲು, ಕೆಳಗಿನ ಡೆಕ್ಕಿನಲ್ಲಿ ಕೂತ ಜಾಕ್, ಮೇಲಿನ ಡೆಕ್ಕಿಗೆ ಬಂದ ರೋಸ್ ಳನ್ನು ಮಂತ್ರಮುಗ್ಧನಾಗಿ ನೋಡುತ್ತಾನೆ. ಎರಡನೇ ಭೇಟಿ- ಸಮುದ್ರಕ್ಕೆ ಹಾರಿಕೊಳ್ಳಲಿರುವ ಅವಳನ್ನು ಮರಳಿ ಬದುಕಿನ ತೆಕ್ಕೆಗೆ ಸೆಳೆಯುವುದು. ಈ ‘ಉಪಕಾರಕ್ಕಾಗಿ’ ಅವನಿಗೆ ಈ ಪ್ರತಿಷ್ಠಿತರ ನಡುವೆ ಭೋಜನಕೂಟಕ್ಕೆ ಆಹ್ವಾನ. ಊಟದ ನಂತರ ಅವಳನ್ನು ಕರೆದೊಯ್ದು ತಳ ವರ್ಗದ ‘ನಿಜವಾದ ಪಾರ್ಟಿಯ’ ಅನುಭವ ಕೊಡುತ್ತಾನೆ. ಅದುವರೆಗೆ ಸಿರಿವಂತಿಕೆಯ, ಶಿಷ್ಟಾಚಾರದ ಪಂಜರದಲ್ಲಿ ಬಂದಿಯಾಗಿದ್ದ ರೋಸ್ ಮೊಟ್ಟಮೊದಲ ಬಾರಿ ಮೈ ಚಳಿ ಬಿಡುತ್ತಾಳೆ. ಸ್ವಚ್ಛಂದಳಾಗುತ್ತಾಳೆ. ಇನ್ನೆರಡು ಭೇಟಿಗಳಲ್ಲೇ ರೋಸ್ ಳನ್ನು ಜಾಕ್ ಟೈಟಾನಿಕ್ ಹಡಗಿನ ಮೂತಿಯ ಕಂಬಿಯ ಮೇಲೆ ಹತ್ತಿಸಿ ಕೈ ಚಾಚಿಸಿ ಕಣ್ಣು ಬಿಟ್ಟೊಡನೆ ಅವಳು ‘ಓ, ನಾನು ಹಾರುತ್ತಿದ್ದೇನೆ’ ಎಂದು ಉದ್ಗರಿಸುತ್ತಾಳೆ. ಅಲ್ಲಿಗೆ ಅವಳ ದೇಹ ಮನಸ್ಸುಗಳೆರಡಕ್ಕೂ ಈಗ ಜೀವನದಲ್ಲೇ ಮೊಟ್ಟಮೊದಲ ಬಾರಿ ನಿಜವಾದ ಸ್ವಾತಂತ್ರ್ಯದ ಆನಂದ ದಕ್ಕಿದಂತಾಗಿದೆ. ಅದೊಂದು ಸ್ಮರಣೀಯ ದೃಶ್ಯವೇ ಒಟ್ಟು ಸಿನಿಮಾದ ಆಶಯವನ್ನು ಸೂತ್ರರೂಪದಲ್ಲಿ ಧರಿಸಿದಂತೆ ಭಾಸವಾಗುತ್ತದೆ. (ಆ ದೃಶ್ಯದ ಬೆನ್ನಿಗೇ ‘ಟೈಟಾನಿಕ್ ನೋಡಿದ ಕಡೇ ಹಗಲು ಅದು’ ಎಂಬ ಶೀತಲ ವಾಕ್ಯ, ವಯೋವೃದ್ಧ ರೋಸ್ ದನಿಯಲ್ಲಿ ನಮ್ಮ ಎದೆ ಇರಿಯುತ್ತದೆ). ಅದಾದ ಸ್ವಲ್ಪ ಸಮಯದಲ್ಲೇ ರೋಸ್ ಇನ್ನೂ ಮುಕ್ತಳಾಗಿ ಅವನ ಮುಂದೆ ವಿವಸ್ತ್ರಳಾಗಿ ಬಂದು ವಜ್ರವೊಂದನ್ನೇ ಧರಿಸಿ ತನ್ನ ಚಿತ್ರ ಬರೆಸಿಕೊಳ್ಳುತ್ತಾಳೆ. ನಂತರ ಇಬ್ಬರೂ ಸ್ವಚ್ಛಂದವಾಗಿ ಹಡಗು ಸುತ್ತುತ್ತಾರೆ. ಮುಂದಕ್ಕೆ ದೈಹಿಕ ಮಿಲನ. ಅಲ್ಲಿಂದ ಮೇಲಿನ ಡಕ್ಕೆಗೆ ಬರುತ್ತಿದ್ದಂತೆಯೇ ಹಡಗು ಅವರಿಬ್ಬರ ಕಣ್ಣೆದುರೇ ಬೃಹತ್ ಮಂಜುಗಡ್ಡೆಗೆ ಡಿಕ್ಕಿ ಹೊಡೆಯುತ್ತದೆ…. ನಂತರ ಜಾಕ್ ವಜ್ರ ಕದ್ದನೆಂಬ ಆರೋಪ ಹೊರೆಸಿ ಕೂಡಿ ಹಾಕುವುದು, ರೋಸ್ ಅವನನ್ನು ಬಿಡಿಸುವುದು, ಅವಳು ದೋಣಿ ಹತ್ತಿದರೂ ವಾಪಸ್ ಹಾರಿ ಬಂದು ಇವನೊಂದಿಗೇ ಸೆಣೆಸುವುದು….

ಕಡೆಗೂ ಅವನಿಗಿತ್ತ ಭಾಷೆಯಂತೆ ರೋಸ್ ಬದುಕುಳಿಯುತ್ತಾಳೆ, ಜಾಕ್ ನೀರಿನಲ್ಲೇ ಮರಗಟ್ಟಿ ಅಂತರ್ಧಾನನಾಗುತ್ತಾನೆ. (ಆ ರಾತ್ರಿಯ ಉಷ್ಣಾಂಶ- ಮೈನಸ್ 4 ಡಿಗ್ರಿ ಎನ್ನುತ್ತದೆ ಇತಿಹಾಸ.) ಇದಾಗಿ 84 ವರ್ಷಗಳ ತರುವಾಯ ‘ಅವನು, ಒಬ್ಬ ವ್ಯಕ್ತಿಯನ್ನು ಹೇಗೆಲ್ಲ ಕಾಪಾಡಬಹುದೋ, ಹಾಗೆಲ್ಲ ನನ್ನನ್ನು ಕಾಪಾಡಿದ’ ಎಂದು ನೆನೆಸಿಕೊಳ್ಳುತ್ತಾಳೆ 101ರ ಪ್ರಾಯದ ರೋಸ್…..

ಈ ಕಥೆಯನ್ನು ಅಮರ ಪ್ರೇಮಕಥೆಯ ಹಾಗೆ ನಿರೂಪಿಸುವ ಕ್ಯಾಮೆರಾನ್ ನನ್ನು ದೈತ್ಯ ಪ್ರತಿಭೆ ಎಂದರೆ ಸಾಲದು; ಆತ ನಿಜಕ್ಕೂ ದೃಶ್ಯ ಲೋಕದ ಮಾಯಾವಿ. ಅವನ ಚಿತ್ರಕಥೆ- ಚಿತ್ರಕಥೆ ಅಭ್ಯಾಸಿಗಳಿಗೊಂದು ಅಮೂಲ್ಯ ಪಠ್ಯ.

ಇನ್ನು ಈ ಚಿತ್ರದ ತಾಂತ್ರಿಕ ಪರಿಣತಿ, ಅದರ ಹಿಂದಿನ ಅತಿಮಾನುಷ ಶ್ರಮ, ಸಾವಿರಾರು ಜನರ ಸೈನ್ಯವನ್ನೇ ಮುನ್ನಡೆಸಿದ ನಿರ್ದೇಶಕನ ದೈಹಿಕ ತ್ರಾಣ- ಅದೇ ಬೇರೆ ಅಧ್ಯಾಯ. ಇರಲಿ.

ಇನ್ನು ಜೇಮ್ಸ್ ಕ್ಯಾಮೆರಾನನ ಬರವಣಿಗೆ ಶೈಲಿಯ ಬಗ್ಗೆ ಒಂದು ಮಾತು ಹೇಳಬೇಕು: ಸಾಮಾನ್ಯ ಎಲ್ಲರೂ ಚಿತ್ರೀಕರಣಕ್ಕೆ ಅತ್ಯಗತ್ಯವಾದಷ್ಟು ವಿವರಗಳನ್ನು ಮಾತ್ರ ಚಿತ್ರಕಥೆಯಲ್ಲಿ ನಮೂದಿಸಿಕೊಳ್ಳುವುದು ವಾಡಿಕೆ. ಆದರೆ ಕ್ಯಾಮೆರಾನ್ ಹಾಗಲ್ಲ, ಅದೊಂದು ಸಾಹಿತ್ಯ ಕೃತಿ ಎಂಬಂತೆ, ಪ್ರತಿ ದೃಶ್ಯದ ಭಾವಪರಿಸರವನ್ನೇ ಚಿತ್ರಿಸಿ ಬರೆಯುತ್ತಾನೆ. ಈ ದೃಷ್ಟಿಯಲ್ಲೂ ಇದೊಂದು ವಿಶೇಷ ಚಿತ್ರಕಥೆ. ಇಲ್ಲಿ ಒಂದೇ ಉದಾಹರಣೆ ಉಲ್ಲೇಖಿಸುತ್ತೇನೆ. ಅದೇ- ರೋಸ್ ಹಾರಾಟದ ಅನುಭವ ಪಡೆದ ದೃಶ್ಯದಲ್ಲಿ, ಕೂಡಲೇ ಕಾಣುವ ಮುಂದಿನ ಪಂಕ್ತಿಯಿದು:

Rose turns her head until her lips are near his. She lowers her arms, turning further, until she finds his mouth with hers. He wraps his arms around her from behind, and they kiss like this with her head turned and tilted back, surrendering to him, to the emotion, to the inevitable. They kiss, slowly and tremulously, and then with building passion.
Jack and the ship seem to merge into one force of power and optimism, lifting her, buoying her forward on a magical journey, soaring onward into a night without fear….

ನಾನು ಈ ಅಪೂರ್ವ ಚಿತ್ರಕಥೆಯ ಪ್ರತಿಗಾಗಿ ಹುಡುಕಿದಾಗ ಅಮೆಜಾನಿನಲ್ಲಿ ಅದಕ್ಕೆ ಹತ್ತಿರ ಹತ್ತಿರ 34 ಸಾವಿರ ರೂಪಾಯಿ ದರ! ಕಡೆಗೆ ತಡಕಾಡಿ ಅಂತರ್ಜಾಲದಲ್ಲಿ ಅದರ ಪ್ರತಿ ತೆಗೆದೆ. ಆದರೆ ಅದು ಅಂತಿಮ ಚಿತ್ರದ ಯಥಾವತ್ ರೂಪದಲ್ಲಿರಲಿಲ್ಲ. ಹಲವು ಮಾರ್ಪಾಡುಗಳಾಗಿವೆ, ಕೆಲವು ದೃಶ್ಯಗಳು ಹಿಂದುಮುಂದಾಗಿವೆ, ಕೆಲವು ದೃಶ್ಯಗಳನ್ನು ತೆಗೆಯಲಾಗಿದೆ, ಅನೇಕ ದೃಶ್ಯಗಳನ್ನು ವಿಸ್ತರಿಸಲಾಗಿದೆ, ಅಲ್ಲಲ್ಲಿ ಸಣ್ಣಪುಟ್ಟ ತಿದ್ದುಪಡಿಗಳಾಗಿವೆ… ಅಂತೂ ಆ ಪಠ್ಯದ ಪುಟವಿನ್ಯಾಸ ಮಾಡಿದ ಮೇಲೆ ಮತ್ತೆ ಟೈಟಾನಿಕ್ ಸಿನಿಮಾವನ್ನೇ ದೃಶ್ಯ ದೃಶ್ಯವಾಗಿ ಹಲವು ಬಾರಿ ನೋಡುತ್ತ ಅದಕ್ಕೆ ತಕ್ಕಂತೆ ಚಿತ್ರಕಥೆಯನ್ನು ನಿಷ್ಠಪಠ್ಯವಾಗಿ ರೂಪಿಸುತ್ತ ಭರ್ತಿ ಎರಡು ತಿಂಗಳೇ ಕಳೆದುಹೋಯಿತು! ಸಿನಿಮಾದ ಅವಧಿ ಕತ್ತರಿಸಲೆಂದೋ, ಅಥವಾ ಚಿತ್ರದ ಶಿಲ್ಪಕ್ಕೆ ಭಂಗ ಬರಬಾರದೆಂದೋ, ನಿರ್ದೇಶಕ ಕಿತ್ತು ಹಾಕಿರುವ ದೃಶ್ಯಗಳನ್ನು ನಾನು ಈ ಪಠ್ಯದಿಂದ ತೆಗೆದು ಹಾಕಲು ಹೋಗಲಿಲ್ಲ. ಅದರ ಮೇಲೆ ಗೀಟು ಹೊಡೆದು ಹಾಗೇ ಉಳಿಸಿದೆ. ಯಾಕೆಂದರೆ ಅವು ಕೂಡ ಚಿತ್ರಕಥಾ ಕಸುಬಿನ ಅಮೂಲ್ಯ ಪಾಠಗಳೇ….. ಅಂತೂ ಈ ಅಸಾಧಾರಣ ಚಿತ್ರಕಥೆ ರೂಪಿಸಿದ ಜೇಮ್ಸ್ ಕ್ಯಾಮೆರಾನ್ ಗೊಂದು ನಮನ ಹೇಳುತ್ತ ರಚನೆಯ ಕ್ರಿಯೆಯಲ್ಲಿ ನಾನೂ ಭಾಗಿಯಾದೆನೆಂಬ ಭ್ರಮೆಯಲ್ಲಿ- ‘ಟೈಟಾನಿಕ್’ನಲ್ಲಿ ಮುಳುಗಿಹೋದೆ!

ಮುಂಚೆ ಅಟೆನ್ ಬರೋನ ‘ಗಾಂಧಿ’ ಚಿತ್ರದ ಹಾಗೆಯೇ ‘ಟೈಟಾನಿಕ್’ ಕೂಡ ಚಿತ್ರಕಥಾ ಪುಸ್ತಕವಾಗಿ ನನ್ನ ಲೈಬ್ರರಿ ಸೇರಿದ್ದು ಹೀಗೆ.

ಗಾಂಧಿ ಚಿತ್ರಕಥೆಯ ಪಿಡಿಎಫ್ ಪ್ರತಿಯನ್ನು ನಾನು ಹಲವರು ಗೆಳೆಯ/ ಗೆಳತಿಯರಿಗೆ ಕಳಿಸಿಕೊಟ್ಟಿದ್ದೆ. ಅವರಲ್ಲಿ ಯಾರೊಬ್ಬರೂ ಪೂರ್ಣ ಚಿತ್ರಕಥೆ ಓದಿರುವುದಿಲ್ಲ ಎಂದು ನನಗೆ ಗೊತ್ತು! ಯಾಕೆಂದರೆ ಚಿತ್ರಕಥೆಯ ಗಂಭೀರ ವಿದ್ಯಾರ್ಥಿಗಳಿಗಷ್ಟೇ ಅದರಲ್ಲಿ ಆಸಕ್ತಿ ಇರಲು ಸಾಧ್ಯ. ಅಷ್ಟಾದರೂ, ಈಗಲೂ ಬೇಕು ಅನ್ನುವವರು ಕೈ ಎತ್ತಿ! (ಅಂದರೆ ನಿಮ್ಮ ವಾಟ್ಸಪ್ ನಂಬರ್/ ಮೇಲ್ ಐಡಿ ಕಳಿಸಿ ಎಂದರ್ಥ!)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *