ನಾರಾಯಣ ಗುರುಗಳ ಹಾದಿ

(- ರೆಹಮತ್ ತರಿಕೆರೆ) .

ಗುರುಪಂಥಗಳ ಮೇಲೆ ಸಂಶೋಧನೆ ಮಾಡುತ್ತಿರುವಾಗ ಈ ಲೋಕಕ್ಕೆ ಸೇರಿದ ಅನೇಕರ ಸಂಗ ನನಗೆ ಲಭಿಸಿತು. ಅವರಲ್ಲಿ ನಾರಾಯಣ ಗುರುಗಳ ಶಿಷ್ಯರಲ್ಲೊಬ್ಬರಾದ ನಟರಾಜ ಗುರುಗಳ ಶಿಷ್ಯರೂ ಒಬ್ಬರು. ಇವರ ಹೆಸರು ವಿನಯ ಚೈತನ್ಯ. ಇವರು ಗುರುಗಳು ಮಲೆಯಾಳ, ತಮಿಳು, ಸಂಸ್ಕೃತದಲ್ಲಿ ರಚಿಸಿರುವ ಪದ್ಯಸಾಹಿತ್ಯವನ್ನು ಕನ್ನಡಕ್ಕೆ ತಂದವರು. ಸಾಹಿತ್ಯ ವಿದ್ಯಾರ್ಥಿಯಾದ ನನಗೆ ಗುರುಗಳ ಕವಿತ್ವ ಮತ್ತು ಅವರು ಪ್ರಯೋಗಿಸಿರುವ ಛಂದಸ್ಸುಗಳನ್ನು ಕಂಡು ಅಚ್ಚರಿಯಾಯಿತು. ಸಾಮಾನ್ಯ ಜನರಿಗಾಗಿ ಬರೆದ ಭಕ್ತಿಗೀತೆಗಳು, ಯೋಗಿಗಳಿಗೆ ಬೇಕಾದ ತತ್ವ ಜಿಜ್ಞಾಸೆಯೂ ಇರುವ ಈ ಕೃತಿಗಳು, ನಮ್ಮ ವಚನಗಳನ್ನು ತತ್ವಪದಗಳನ್ನು ನೆನಪಿಸುತ್ತವೆ. ಇವು ಕುವೆಂಪು ಮತ್ತು ಠಾಕೂರರ ಅಧ್ಯಾತ್ಮಗೀತೆಗಳಿಗೂ ಸಮೀಪವಾಗಿವೆ.ಕೆಳಜಾತಿಗಳ ವಿಮೋಚನೆಗಾಗಿ ಜೀವನವಿಡೀ ಸೆಣಸಾಡಿದ ನಾರಾಯಣ ಗುರು, ಉಪನಿಷತ್ತುಗಳಿಂದಲೂ ಅದ್ವೈತ ದರ್ಶನದಿಂದಲೂ ಪ್ರೇರಣೆ ಪಡೆದವರು; ಮಲೆಯಾಳ ಮತ್ತು ಸಂಸ್ಕೃತಗಳಲ್ಲಿ ಕೃತಿ ರಚನೆ ಮಾಡಿದವರು. ಅದ್ವೈತಿ ಸನ್ಯಾಸಿಗಳಾಗಿದ್ದವರು. ಅವರು ಹಿಡಿದ ಈ ವಿಶಿಷ್ಟ ಹಾದಿಗೆ ಎರಡು ಚಾರಿತ್ರಿಕ ಕಾರಣಗಳಿವೆ.

ಒಂದು: ಅವರಿಗೆ ಬಾಲ್ಯದಲ್ಲೇ ಸಿಕ್ಕ ಸಂಸ್ಕೃತ ಶಿಕ್ಷಣ. ಎರಡು: ೧೯ನೇ ಶತಮಾನದ ಕೊನೆಯಲ್ಲಿ ಆಧ್ಯಾತ್ಮಿಕ ಹಿನ್ನೆಲೆಯಿಂದ ರೂಪುಗೊಂಡ ಸಮಾಜಸುಧಾರಕ ಚಳವಳಿಗಳ‌ ಮಾದರಿ. ಈ ವಿಶಿಷ್ಟ ಅಧ್ಯಾತ್ಮಮಾರ್ಗಿ ಚಳವಳಿಗಳಲ್ಲಿ ವಿವೇಕಾನಂದರೂ ಸಿದ್ಧಾರೂಢರೂ ಸೇರುತ್ತಾರೆ. ನಾರಾಯಣ ಗುರುಗಳ ಆಪ್ತರಾದ ಮಹಾಕವಿ ಕುಮಾರನ್ ಆಶಾನರೂ, ಕನ್ನಡದ ಕುವೆಂಪು ಅವರೂ ಬರುತ್ತಾರೆ. ದರ್ಶನ ಕಾವ್ಯ ಹಾಗೂ ಸಾಮಾಜಿಕ ಪ್ರಜ್ಞೆಗಳು ಏಕೀಭವಿಸಿದ ವಿಶಿಷ್ಟ ಜಾಡುಗಳಿವು.ಕೇರಳದ ಹಿಂದುಳಿದ ತೀಯನ್ ಸಮುದಾಯಕ್ಕೆ ಸೇರಿದ ಸಾಮಾನ್ಯ ಕುಟುಂಬವೊಂದರಲ್ಲಿ ಹುಟ್ಟಿದ ನಾಣು, ನಾರಾಯಣ ಗುರುವಾಗಿ ರೂಪಾಂತರಗೊಂಡ ಕಥೆ ಅಪೂರ್ವವಾಗಿದೆ.

ಅದು ದೇಶೀವೈದ್ಯ ತಾಯ್ತಂದೆಗೆ ಜನಿಸಿದ ನಾಣು, ಸಮಾಜದ ರೋಗಗಳಿಗೆ ವೈದ್ಯನಾಗಿ ಬದಲಾದ ಕಥೆಯೂ ಹೌದು. ಆರೂಢ ಪರಿಭಾಷೆಯಲ್ಲಿ ಹೇಳುವುದಾದರೆ, ಇದು ಥಟ್ಟನೆ ಸಾಧ್ಯವಾದ ವಿಹಗ(ಹಕ್ಕಿ)ಮಾರ್ಗದ ಫಲವಲ್ಲ. ನೆಲದ ಮೇಲಣ ಇರುವೆ ಮರದಲ್ಲಿರುವ ಹಣ್ಣಿಗೆ ಕಷ್ಟಪಟ್ಟು ಮಾಡುವ ಯಾನದ ಪಿಪೀಲಿಕಾ ಮಾರ್ಗದ ಪರಿಣಾಮ. ‘ಆಶಾನ್’ ಎಂದರೆ ಮಲೆಯಾಳದಲ್ಲಿ ಉಪಾಧ್ಯಾಯ ಎಂದರ್ಥ. ಗುರುಗಳು ತರುಣರಾಗಿದ್ದಾಗ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದುಂಟು. ಮುಂದೆ ಅವರು ಹಲವರಿಗೆ ಸನ್ಯಾಸ ದೀಕ್ಷೆ ಕೊಡುವ ಆಧ್ಯಾತ್ಮಿಕ ಗುರುವಾದರು. ಬೌದ್ಧರ ಸಂಘವನ್ನು ಹೋಲುವ ಸನ್ಯಾಸಿ ಪರಂಪರೆಯ ಶ್ರೀನಾರಾಯಣ ಧರ್ಮಸಂಘವನ್ನು ಸ್ಥಾಪಿಸಿದರು. ಅವರ ಗುರುತನಕ್ಕೆ ನಿಜವಾಗಿ ಮಹತ್ವ ಸಂದಿದ್ದು ದಮನಿತ ಸಮಾಜದ ಬಿಡುಗಡೆಗಾಗಿ ಅವರು ಮಾಡಿದ ಚಿಂತನೆ ಮತ್ತು ಹಮ್ಮಿಕೊಂಡ ಮುಂಗಾಣ್ಕೆಯ ಕಾರ್ಯಕ್ರಮಗಳಿಂದ.

ಭಾರತದ ಸಮಾಜ ಸುಧಾರಣಾ ಚಳವಳಿಗಳಲ್ಲಿ ಎರಡು ಪ್ರಮುಖ ಮಾದರಿಗಳಿವೆ. ಒಂದು- ದಮನಿತ ಸಮುದಾಯಗಳ ಸಂಕಟಗಳಿಗೆ ಕಾರಣವಾದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಸಂಗತಿಗಳನ್ನು ಗುರುತಿಸಿ, ಆ ಸಮುದಾಯಗಳ ಜನರಲ್ಲಿ ಪ್ರಜ್ಞೆ ಮತ್ತು ಪ್ರತಿರೋಧ ಶಕ್ತಿಯನ್ನು ತುಂಬುವ ಮಾದರಿ. ಆಧುನಿಕ ಕಾಲದ ಬಹುತೇಕ ವಿಮೋಚನಾ ಸಿದ್ಧಾಂತ ಮತ್ತು ಚಳವಳಿಗಳ ಮೂಲವು ಪಾಶ್ಚಾತ್ಯ ವಿಚಾರವಾದದಲ್ಲಿ ಇರುವುದಕ್ಕೆ ಇದುವೇ ಕಾರಣ. ಎರಡು– ದೀಕ್ಷೆ, ಧ್ಯಾನ, ಅಧ್ಯಯನ, ಸಾಧನೆಗಳ ಮೂಲಕವೇ ಪರ್ಯಾಯ ಸಮಾಜದ ಕಲ್ಪನೆಯನ್ನು ಮುಂದಿಡುವ ಅಧ್ಯಾತ್ಮವಾದಿ ಮಾದರಿ. ಈ ಎರಡನೇ ಮಾದರಿಯು ಪಶ್ಚಿಮದ ಆಧುನಿಕತೆ, ವೈಚಾರಿಕತೆಗಳನ್ನು ನಿರಾಕರಿಸುವುದಿಲ್ಲ. ಅವುಗಳ ಜತೆಗೆ ದೇಶೀ ಪರಂಪರೆಯಲ್ಲಿರುವ ಜೀವಪರ ಧಾರೆಗಳನ್ನೂ ಕೂಡಿಸಿ, ಆ ಮೂಲಕ ಸಂಪ್ರದಾಯವಾದವನ್ನು ಎದುರುಗೊಳ್ಳುತ್ತದೆ. ಇಲ್ಲಿ ಅಲೌಕಿಕವಾದುದು ಸಾರ್ಥಕಗೊಳ್ಳುವುದು ಲೌಕಿಕ ಆಶೋತ್ತರಗಳಲ್ಲಿ; ಸಾಮಾಜಿಕ ಚಿಂತನೆಗೆ ಕಸುವು ಒದಗುವುದು ಕ್ರಾಂತಿಕಾರಕ ಭಕ್ತಿ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ತಳೆದ ಬೇರಿನಿಂದ.

ಇಂತಹ ಮಾದರಿಗಳಿಗೆ ಹೆಚ್ಚು ನೆರವಾಗಿದ್ದು ಬೌದ್ಧ ಮತ್ತು ಅದ್ವೈತ ದರ್ಶನಗಳು.ಅದ್ವೈತವಾದಿಗಳಲ್ಲಿ ಆತ್ಮದ ವಿಷಯದಲ್ಲಿ ಸಮಾನತೆಯನ್ನು ಘೋಷಿಸಿ, ಸಾಮಾಜಿಕ ವಿಷಯದಲ್ಲಿ ತರತಮವನ್ನು ಒಪ್ಪುವವರುಂಟು. ಆಧ್ಯಾತ್ಮಿಕ ಸಮಾನತೆಯ ಸ್ತರವನ್ನು ಹಿಡಿದು ಸಾಮಾಜಿಕ ಸಮಾನತೆಯ ಚಿಂತನೆ ಮತ್ತು ಕ್ರಿಯಾಶೀಲತೆಯನ್ನು ವಿಸ್ತರಿಸಿದವರೂ ಉಂಟು. ಈ ಎರಡನೇ ಹಾದಿ ಹಿಡಿದವರಿಗೆ ಜಾತಿ ಮತ್ತು ವರ್ಣಾಶ್ರಮಗಳು ಮುಖ್ಯ ಹಗೆಗಳು. ಶರಣರು, ವಿವೇಕಾನಂದ, ನಾರಾಯಣ ಗುರು, ಕುವೆಂಪು, ಕುಮಾರನ್ ಆಶಾನ್ ಇವರೆಲ್ಲ ಜಾತಿಮತಗಳ ವಿಷಯ ಬಂದೊಡನೆ ವ್ಯಗ್ರಗೊಳ್ಳುವುದನ್ನು ಗಮನಿಸಬೇಕು. ಈ ಹಾದಿಯು ವ್ಯಷ್ಟಿ-ಸಮಷ್ಟಿಯ ನೆಲೆಗಳನ್ನು ಏಕೀಕರಿಸುತ್ತದೆ. ವ್ಯಕ್ತಿಗಳು ಸಾಧಕರಾಗಿ ಧ್ಯಾನಯೋಗಗಳ ಮೂಲಕ ತಮ್ಮ ತಾವರಿತು ಪ್ರಜ್ಞೆ, ಮೈತ್ರಿ, ಕರುಣೆಗಳನ್ನು ಬೆಳೆಸಿಕೊಳ್ಳುವುದು ಒಂದು ನೆಲೆ; ಈ ಸಾಧನೆ ಅಥವಾ ಬಿಡುಗಡೆಯು ವ್ಯಕ್ತಿಗತ ಹಂತದಲ್ಲೇ ವಿರಮಿಸದೆ, ಪರಿಸರದಲ್ಲಿರುವ ಕೇಡುಗಳನ್ನು ನಿವಾರಿಸಲು ತೊಡಗುವುದಕ್ಕೆ ಪ್ರೇರಿಸುವುದು ಇನ್ನೊಂದು ನೆಲೆ. ತತ್ವಪದಕಾರರಲ್ಲೂ ವಿವೇಕಾನಂದರಲ್ಲೂ ಕುವೆಂಪು ಅವರ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಉಪನ್ಯಾಸದಲ್ಲೂ ಸ್ವಾಮಿ ಅಗ್ನಿವೇಶರ ಆ್ಯಕ್ಟಿವಿಸಂನಲ್ಲೂ ಈ ಗುಣವನ್ನು ಗಮನಿಸಬಹುದು.

ಗುರುಗಳು ಸಾಮಾಜಿಕ ಪ್ರಜ್ಞೆಯ ಅದ್ವೈತಿ ಸಂತರಂತೆ, ಸರ್ವಜೀವಗಳಲ್ಲಿ ಸಮಾನತೆಯನ್ನೂ ವಿಶ್ವಮಾನವತೆಯನ್ನೂ ಪ್ರತಿಪಾದಿಸಿದವರು. ಮನುಷ್ಯರೆಲ್ಲರೂ ಒಂದೇ ಜಾತಿ. ಎಲ್ಲರೂ ದೈವದ ಸೃಷ್ಟಿಗಳು ಎಂದು ಅವರು ಮತ್ತೆಮತ್ತೆ ಹೇಳಿದರು. ಈ ಹಿನ್ನೆಲೆಯಲ್ಲಿ ಇದೇ ನಿಲುವುಳ್ಳ ಠಾಕೂರರ (೧೯೨೨) ಹಾಗೂ ಗಾಂಧಿಯವರ (೧೯೨೫) ಜತೆ ಅವರು ಗೈದ ಸಂವಾದಗಳನ್ನು ಗಮನಿಸಬೇಕು. ಇವು ಗಾಂಧಿ-ಠಾಕೂರ್, ಗಾಂಧಿ-ಅಂಬೇಡ್ಕರ್ ಮುಖಾಮುಖಿಗಳಷ್ಟೇ ಚಾರಿತ್ರಿಕ ಮಹತ್ವದವಾಗಿವೆ. ಗಾಂಧೀಜಿ ವೈಕಂನ ಅಸ್ಪೃಶ್ಯತಾ ನಿವಾರಣಾ ಚಳವಳಿಗೆಂದು ಕೇರಳಕ್ಕೆ ಬಂದಾಗ, ಗುರುಗಳ ಜತೆ ಮಾವಿನಮರದಡಿ ಕೂತು ಚರ್ಚಿಸುವ ಸನ್ನಿವೇಶವೊಂದಿದೆ. ಗಾಂಧಿ ಕೇಳುತ್ತಾರೆ: ‘ನಿಮಗೆ ಇಂಗ್ಲಿಷ್ ತಿಳಿಯುತ್ತದೆಯೇ?’ ಗುರುಗಳು ಹೇಳುತ್ತಾರೆ: ‘ನಿಮಗೆ ಸಂಸ್ಕೃತದಲ್ಲಿ ಮಾತಾಡಿದರೆ ತಿಳಿಯುವುದೇ?’. ಗಾಂಧಿ ಹೇಳುತ್ತಾರೆ: ‘ಈ ಮರದ ಎಲೆಗಳು ಆಕಾರದಲ್ಲಿ ಒಂದಕ್ಕಿಂತ ಒಂದು ವಿಭಿನ್ನವಾಗಿವೆ’. ಅದಕ್ಕೆ ಗುರುಗಳ ಉತ್ತರ: ‘ನಿಜ. ಅವುಗಳಲ್ಲಿರುವ ಆಂತರಿಕ ಸತ್ವ ಮಾತ್ರ ಒಂದೇ ಮರದಿಂದ ಬಂದಿದೆ’. ವೈವಿಧ್ಯ ಮತ್ತು ಏಕತೆಗಳ ನಡುವಣ ವಿಶಿಷ್ಟ ಅಂತರ ಸಂಬಂಧವನ್ನು ಈ ಪ್ರಶ್ನೋತ್ತರವು ಮಾರ್ಮಿಕವಾಗಿ ಕಾಣಿಸುತ್ತಿದೆ.೧೯ನೇ ಶತಮಾನದ ಕೊನೆಯಲ್ಲಿ ಮತ್ತು ೨೦ನೇ ಶತಮಾನದ ಆದಿಯಲ್ಲಿ ಭಾರತದ ಶೂದ್ರಸಂತರು ರೂಪಿಸಿದ ಸಮಾಜ ಸುಧಾರಣಾ ಚಳವಳಿಗಳು, ಬ್ರಿಟಿಷರ ರಾಜಕೀಯ ವಸಾಹತುಶಾಹಿಗಿಂತ ದೇಶೀಯ ಸಾಮಾಜಿಕ ಯಜಮಾನಿಕೆಯನ್ನೇ ಪ್ರಧಾನ ಹಗೆಯೆಂದು ಪರಿಭಾವಿಸಿದವು. ಹೀಗೆಂತಲೇ ಅವು ಪಾಶ್ಚಾತ್ಯ ಆಧುನಿಕತೆ, ವಿಜ್ಞಾನ, ತಂತ್ರಜ್ಞಾನ ಮತ್ತು ವೈಚಾರಿಕತೆಗಳನ್ನು ಸಾಮಾಜಿಕ ಬೇನೆಗೆ ತಕ್ಕ ಮದ್ದಿನಂತೆ ಸ್ವೀಕರಿಸಿದವು. ಈ ಹಿನ್ನೆಲೆಯಲ್ಲಿ ಗುರುಗಳು ಆಂಗ್ಲಶಾಲೆ ಆರಂಭಿಸುವುದನ್ನು ಹಾಗೂ ಯುರೋಪಿಗೆ ಶಿಷ್ಯರನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಕಳಿಸಿಕೊಡುವುದನ್ನು ಗಮನಿಸಬೇಕು. ಪಾಶ್ಚಾತ್ಯ ವೈಚಾರಿಕತೆ ಮತ್ತು ಭಾರತೀಯ ಅದ್ವೈತ ದರ್ಶನ ಕೂಡಿದ ಈ ಆಧ್ಯಾತ್ಮಿಕ ವೈಚಾರಿಕತೆಯ ಇನ್ನೊಂದು ಗುಣವೆಂದರೆ, ಜನಪದ ದೈವ ಮತ್ತು ಆಚರಣೆಗಳನ್ನು ಮೌಢ್ಯವೆಂದು ನಿರಾಕರಿಸುವುದು; ಅಲ್ಲಿರಬಹುದಾದ ಜೀವಪರ ಆಶಯಗಳನ್ನು ಶೋಧಿಸುವ ತಾಳ್ಮೆ ತೋರದಿರುವುದು.ಭಾರತದ ಸಮಾಜ ಸುಧಾರಕ ಸಂತರು, ದೇವರು ಮತ್ತು ಗುಡಿಗಳ ವಿಷಯದಲ್ಲಿ ತಳೆದ ವಿಭಿನ್ನ ನಿಲುವು ಕೂಡ, ಅವರ ಪಥಗಳ ವೈಶಿಷ್ಟ್ಯವನ್ನು ಕಾಣಿಸುತ್ತದೆ. ಈ ಪಥಗಳು ಅವರ ದಾರ್ಶನಿಕ-ಸೈದ್ಧಾಂತಿಕ ಹಿನ್ನೆಲೆಗಳಿಂದ ಮಾತ್ರವಲ್ಲದೆ, ಅವರು ಬದುಕಿದ್ದ ಕಾಲದೇಶಗಳ ಚಾರಿತ್ರಿಕ ಒತ್ತಡಗಳಿಂದ ರೂಪುಗೊಂಡವು. ಉದಾಹರಣೆಗೆ, ಶರಣರು ದೇಹವೇ ದೇಗುಲದ ಪರಿಕಲ್ಪನೆ ಮುಂದಿಟ್ಟರು. ಪೆರಿಯಾರ್ ದೇವರನ್ನೇ ನಿರಾಕರಿಸಿದರು. ಅಂಬೇಡ್ಕರ್ ನಾಸಿಕದ ಕಾಲಾರಾಂ ಗುಡಿಯ ಪ್ರವೇಶಕ್ಕೆ ಯತ್ನಿಸಿದರೂ ಅದು ದಲಿತರ ನಾಗರಿಕ ಹಕ್ಕು ಪ್ರತಿಪಾದನೆಯ ಸಾಂಕೇತಿಕ ಕ್ರಿಯೆಯಾಗಿತ್ತು. ಅಂತಿಮವಾಗಿ ಅವರು ಧಮ್ಮವನ್ನು ಆರಿಸಿಕೊಂಡರು.

ಕುವೆಂಪು ದೇವರ ಅಸ್ತಿತ್ವವನ್ನು ಸ್ಥಾವರಗಳಲ್ಲಿ ಹುಡುಕದೆ ನಿಸರ್ಗದಲ್ಲಿ ಮತ್ತು ‘ಜಲಗಾರ’ನ ದುಡಿಮೆಯಲ್ಲಿ, ನೇಗಿಲಯೋಗಿಯಲ್ಲಿ ಗುರುತಿಸಿದರು. ಅಸ್ಪೃಶ್ಯರಿಗೆ ಪ್ರವೇಶವಿರದ ಎಡೆಯಲ್ಲಿ ನಾನು ಹೋಗಲಾರೆ ಎಂದರು ಗಾಂಧಿ. ಇವರೆಲ್ಲರಿಗಿಂತ ಬೇರೆಯಾಗಿ ನಾರಾಯಣ ಗುರುಗಳು ಶೂದ್ರರಿಗೆ ಪ್ರತ್ಯೇಕ ಗುಡಿ ಸ್ಥಾಪಿಸುವ ಚಳವಳಿ ಎತ್ತಿಕೊಂಡರು. ಧಾರ್ಮಿಕ ಪ್ರವೃತ್ತಿಯುಳ್ಳ ಹಿಂದುಳಿದ ಸಮುದಾಯಗಳ ಬಿಡುಗಡೆಯ ದೀರ್ಘ ಯಾನದಲ್ಲಿ, ಇದು ಅನಿವಾರ್ಯವಾದ ಆರಂಭಿಕ ಹೆಜ್ಜೆ ಎಂದು ಅವರಿಗೆ ಅನಿಸಿರಬೇಕು. ಆದರೆ ಅವರ ಗುಡಿಯ ಕಲ್ಪನೆ ವಿಶಿಷ್ಟವಾಗಿತ್ತು. ಅರುವಿಪ್ಪುರದಲ್ಲಿ (೧೮೮೮) ಅವರು ಸ್ಥಾಪಿಸಿದ ಶಿವಾಲಯದ ಗೋಡೆಯಲ್ಲಿ ‘ಜಾತಿಭೇದಂ ಮತದ್ವೇಷಂ ಏತುಮಿಲ್ಲಾತೆ ಸರ್ವರುಂ ಸೋದರತ್ವೇನ ವಾಳುನ್ನ ಮಾತೃಕಾ ಸ್ಥಾನಮಣ್ಣಿತು’ ಎಂಬ ಏಕತಾ ಸಂದೇಶ ಬರೆಸಿದರು. ಅವರು ಮುರುಕಂಪುಳ್ಳ ಗುಡಿಯ ಪ್ರತಿಷ್ಠಾಪನೆಯಲ್ಲಿ ಕೊಟ್ಟ ಸಂದೇಶ: ‘ಸತ್ಯ, ಕರ್ತವ್ಯ, ಮಾನವೀಯತೆ, ಪ್ರೀತಿ’. ಕವಲಂಗೋಡಿನ ಗುಡಿ ಪ್ರತಿಷ್ಠಾಪನೆಯಂತೂ (೧೯೨೮) ಮತ್ತೂ ಅನನ್ಯ. ಅವರು ‘ಓಂ ಸತ್‍ತತ್’ ಬರೆಯಿಸಿದ ಕನ್ನಡಿಯೊಂದನ್ನು ಪ್ರತಿಷ್ಠಾಪಿಸಿದರು.

ಸಾಧಕರು ತಮ್ಮ ಸಾಧನೆಯಲ್ಲಿ ಯಾವ ಅಲೌಕಿಕ ಸತ್ಯವನ್ನು ಹುಡುಕುತ್ತಾರೋ ಅದು ಅವರೊಳಗೇ ಇದೆ ಎಂದು ಸೂಚಿಸುವ ಆತ್ಮಸಾಕ್ಷಾತ್ಕಾರದ ಅರ್ಥವಿದು.ಕರ್ನಾಟಕದಲ್ಲೂ ಅನೇಕ ಸಂತರ ಸಮಾಧಿಗಳಲ್ಲಿ ಕನ್ನಡಿಯೇರಿಸುವ ಆಚರಣೆಯಿದೆ. ಕನ್ನಡಿ ಆತ್ಮಶೋಧಕ್ಕೆ ಮಾತ್ರವಲ್ಲ, ಆತ್ಮವಿಮರ್ಶೆಗೂ ಪ್ರತೀಕ. ನಮ್ಮೊಳಗಿನ ಕೇಡನ್ನು ಗುರುತಿಸಿ ಕಳೆದುಕೊಳ್ಳುವ, ನಮ್ಮ ಕಸುವನ್ನು ಕಂಡುಕೊಂಡು ಪ್ರಜ್ಞೆ ಪಡೆವ ಸಂಕೇತ. ಗುರುಗಳು ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಗುಡಿಗಳನ್ನು ಸಾಂಸ್ಕೃತಿಕ ಕೇಂದ್ರಗಳಾಗಿ ಮಾರ್ಪಡಿಸಲು ಯತ್ನಿಸಿದರು. ಗುಡಿಗಳಿಗಿಂತ ಮುಖ್ಯವಾಗಿ ಗ್ರಂಥಾಲಯ, ಶಿಕ್ಷಣಸಂಸ್ಥೆ, ಉದ್ಯಮಗಳು ಬೇಕೆಂಬ ಹೊಸ ಚಳವಳಿಯನ್ನು ರೂಪಿಸಿದರು.ಯಾವುದೇ ಸಾಂಸ್ಕೃತಿಕ ನಾಯಕರ ವ್ಯಕ್ತಿತ್ವ, ಚಿಂತನೆ ಹಾಗೂ ಕ್ರಿಯಾಶೀಲತೆ ರೂಪುಗೊಳ್ಳುವುದು, ಅವರ ಕಾಲದ ಸಾಮಾಜಿಕ ವಾಸ್ತವ ಮತ್ತು ಅದನ್ನು ಮುಖಾಮುಖಿ ಆಗುವುದಕ್ಕೆ ಆಯ್ದುಕೊಂಡ ಹಾದಿಯಿಂದ ಮಾತ್ರವಲ್ಲ; ಅವರ ಎದುರಾಳಿಗಳ ವಿರೋಧ ಹಾಗೂ ಸಂಗಾತಿಗಳ ನೆರವಿನ ಸ್ವರೂಪದಿಂದ ಕೂಡ. ಈ ಹಿನ್ನೆಲೆಯಲ್ಲಿ ಗುರುಗಳ ಚಳವಳಿಗೆ ಕುವೆಂಪು ಅವರ ಲೋಕದೃಷ್ಟಿಯನ್ನೇ ಹೊಂದಿದ್ದ ಕುಮಾರನ್ ಆಶಾನರು ಕಾವ್ಯದ ಆಯಾಮ ಕೊಟ್ಟರು; ಮೈಸೂರು ಸಂಸ್ಥಾನದ ವೈದ್ಯಾಧಿಕಾರಿಯಾಗಿದ್ದ ಡಾ.ಪಲ್ಪು, ಆಧುನಿಕ ವಿಜ್ಞಾನ, ತಂತ್ರಜ್ಞಾನ ಹಾಗೂ ಉದ್ಯಮಶೀಲತೆಯ ಮಗ್ಗುಲನ್ನು ಜೋಡಿಸಿದರು; ಎಡಪಂಥೀಯ ವಿಚಾರಧಾರೆ ಹೊಂದಿದ್ದ ರಾಜಕಾರಣಿ ಅಯ್ಯಪ್ಪನ್ ಸಮಾಜವಾದಿ ಮುಖವನ್ನು ಲಗತ್ತಿಸಿದರು. ಸನ್ಯಾಸಿ, ಕವಿ, ವೈದ್ಯ, ರಾಜಕಾರಣಿಗಳ ಈ ಚತುಷ್ಕೂಟವು, ಕೇರಳದ ಸಮಾಜ, ಧರ್ಮ, ಶಿಕ್ಷಣ ಕ್ಷೇತ್ರಗಳಲ್ಲಿ ಮಾಡಿದ ಪ್ರಯೋಗಗಳು, ಆಧುನಿಕ ಭಾರತದ ಸಾಮಾಜಿಕ ಚರಿತ್ರೆಯಲ್ಲಿ ಉಜ್ವಲವಾದ ಅಧ್ಯಾಯಗಳಾಗಿವೆ. ಕೇರಳದಲ್ಲಿ ತೀಯನ್ ಸಮುದಾಯದಿಂದ ಬಂದ‌ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿದ್ದು ಎಡಪಂಥೀಯ ರಾಜಕಾರಣದಿಂದ ಹೌದಾದರೂ, ಅದರ ಹಿಂದೆ ನಾರಾಯಣ ಗುರು ಹಾಕಿದ ಅಸ್ತಿವಾರವಿದೆ. (ಪ್ರಜಾವಾಣಿ:೨೨.೮-೨೧)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶಿರಸಿ – ಹಣಕಾಸಿನ ವಿಚಾರ ಒಂದು ಸಾವು, ಮಹಿಳೆಯ ಬಂಧನ!

ಶಿರಸಿ ಪೊಲೀಸ್ರಿಂದ ಕಾರ್ಯಚರಣೆ. ಎಟಿಎಂ ನಿಂದ ಹಣ ತೆಗೆಯಲು ಮುಗ್ದ ಹೆಣ್ಣು ಮಕ್ಕಳಿಗೆ ನೆರವಾಗುವ ನಾಟಕಮಾಡಿ ಅವರ ಎಟಿಎಂ ನಿಂದಲೇ ಹಣ ತೆಗೆದು ಪರಾರಿಯಾಗುತ್ತಿದ್ದ...

ನಾನು ಗ್ಯಾರಂಟಿ ವಿರೋಧಿಯಲ್ಲ…- ಆರ್.ವಿ. ದೇಶಪಾಂಡೆ

ಐದು ಗ್ಯಾರಂಟಿಗಳಿಗೆ ೫೮ ಸಾವಿರ ಕೋಟಿ ವ್ಯಯವಾಗುತಿದ್ದು ಇದು ಸರ್ಕಾರಕ್ಕೆ ಹೊರೆಯಾಗುತ್ತಿರುವುದರಿಂದ ಅಭಿವೃದ್ಧಿಗೂ ತೊಡಕಾಗುತ್ತಿದೆ. ಅರ್ಹರಿಗೆ ಮಾತ್ರ ಈ ಯೋಜನೆಗಳ ಲಾಭ ತಲುಪುವಂತೆ ಮಾಡಿ...

ಕಾನಗೋಡು ಬಳಿ ಅಪಘಾತ, ಒಂದು ಸಾವು

ಶಿರಸಿ ತಾಲೂಕಿನ ಕಾನಗೋಡು ಬಳಿ ಇಂದು ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಇನ್ನೊಬ್ಬರಿಗೆ ತೀವೃತರಹದ ಗಾಯಗಳಾದ ಬಗ್ಗೆ ವರದಿಯಾಗಿದೆ. ಕಾರು...

ತಾ.ಜಿ. ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ……

ಬ್ಲಾಕ್, ಜಿಲ್ಲಾಧ್ಯಕ್ಷರ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸುಳಿವು ಸಂಘಟನಾತ್ಮಕ ಬದಲಾವಣೆ ಹಾಗೂ ಸಮಾಜಕ್ಕೆ ತಲುಪುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತದೆ ಎಂದು...

ಹುಲಕುತ್ರಿಯ ಶಿಕ್ಷಕ ದರ್ಶನ ಹರಿಕಾಂತ್‌ ಅಭಿನಂದಿಸುತ್ತಾ……

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಕುಗ್ರಾಮ ಹುಲಕುತ್ರಿ. ಈ ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿ ಪ್ರಾಥಮಿಕ ಶಾಲೆಯನ್ನು ವಿಶ್ವಕ್ಕೆ ಪರಿಚಯಿಸಿದವರು ದರ್ಶನ ಹರಿಕಾಂತ....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *