ರಾಷ್ಟ್ರೀಯ ಶಿಕ್ಷಣ ನೀತಿ 2020 ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕರ್ನಾಟಕದಲ್ಲಿ ಮೊದಲ ವರ್ಷದ ಪದವಿ ತರಗತಿಯಲ್ಲಿ ಜಾರಿಗೆ ಬರುತ್ತಿದೆ. ದೇಶಾದ್ಯಂತ ಏಕರೂಪ ಶಿಕ್ಷಣ ಪದ್ಧತಿಯಿಂದ ಸ್ಥಳೀಯ ಮಾತೃಭಾಷೆಗೆ ಧಕ್ಕೆಯುಂಟಾಗುತ್ತದೆ ಎಂದು ಈ ಶಿಕ್ಷಣ ನೀತಿಯನ್ನು ವಿರೋಧಿಸುವವರು ಹೇಳುತ್ತಿದ್ದಾರೆ.
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ 2020 ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕರ್ನಾಟಕದಲ್ಲಿ ಮೊದಲ ವರ್ಷದ ಪದವಿ ತರಗತಿಯಲ್ಲಿ ಜಾರಿಗೆ ಬರುತ್ತಿದೆ. ದೇಶಾದ್ಯಂತ ಏಕರೂಪ ಶಿಕ್ಷಣ ಪದ್ಧತಿಯಿಂದ ಸ್ಥಳೀಯ ಮಾತೃಭಾಷೆಗೆ ಧಕ್ಕೆಯುಂಟಾಗುತ್ತದೆ ಎಂದು ಈ ಶಿಕ್ಷಣ ನೀತಿಯನ್ನು ವಿರೋಧಿಸುವವರು ಹೇಳುತ್ತಿದ್ದಾರೆ.
ಆದರೆ ಸ್ಥಳೀಯ ಮಾತೃಭಾಷೆಗೆ ಯಾವುದೇ ರೀತಿಯ ಧಕ್ಕೆಯುಂಟಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಈ ಬಗ್ಗೆ ನಿನ್ನೆ ನಡೆದ ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ಹಲವು ಸ್ಪಷ್ಟೀಕರಣ ಮತ್ತು ಸಂದೇಹಗಳಿಗೆ ಉತ್ತರಿಸಿದ್ದಾರೆ.
ಪದವಿ ಕೋರ್ಸ್ ನ ಮೊದಲ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ಎರಡು ಭಾಷಾ ವಿಷಯ ಕಲಿಯಲಿದ್ದು ಅದರಲ್ಲಿ ಒಂದು ಭಾಷೆ ಕನ್ನಡ ಕಡ್ಡಾಯವಾಗಿರುತ್ತದೆ. ಕನ್ನಡ ಭಾಷೆ ಗೊತ್ತಿಲ್ಲದವರಿಗೂ ಪ್ರಾಯೋಗಿಕವಾಗಿ ಹೇಳಿಕೊಡಲಾಗುತ್ತದೆ. ವಿದೇಶಿ ವಿದ್ಯಾರ್ಥಿಗಳು, ಹೊರ ರಾಜ್ಯದ ವಿದ್ಯಾರ್ಥಿಗಳು ಇದರಲ್ಲಿ ಸೇರ್ಪಡೆಯಾಗುತ್ತಾರೆ. ಕನ್ನಡ ಭಾಷೆಯ ಕಡೆಗಣನೆ ಇಲ್ಲಿ ಆಗುವುದಿಲ್ಲ ಎನ್ನುತ್ತಾರೆ.
ಪದವಿ ತರಗತಿಯ ಮೊದಲ ಎರಡು ವರ್ಷ ಅಂದರೆ ಮೊದಲ ನಾಲ್ಕು ಸೆಮಿಸ್ಟರ್ ಗಳಲ್ಲಿ ಕನ್ನಡ ಭಾಷೆ ಕೂಡ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿರುತ್ತದೆ. ಪ್ರಾಯೋಗಿಕ ಕನ್ನಡದಲ್ಲಿ ವಿದ್ಯಾರ್ಥಿಗಳಿಗೆ ಭಾಷೆಯನ್ನು ಮಾತನಾಡುವುದು, ಸಂವಹನ ನಡೆಸುವುದನ್ನು, ಮೂಲ ಭಾಷೆಯ ಪರಿಚಯ, ಅಕ್ಷರಾಭ್ಯಾಸವಿರುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಕುಮಾರ್ ಪಿ ತಿಳಿಸಿದರು.
ಇದಕ್ಕೆ ಮಾದರಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದಿಂದ ಅಳವಡಿಸಿಕೊಳ್ಳಲಾಗಿದೆ. ಅಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ ಕನ್ನಡೇತರ ವಿದ್ಯಾರ್ಥಿಗೆ ಪ್ರಾಯೋಗಿಕವಾಗಿ ಕನ್ನಡ ಭಾಷೆಯ ತರಬೇತಿ, ಶಿಕ್ಷಣ ನೀಡಲಾಗುತ್ತದೆ. (kpc)