

ಅಫ್ಘಾನಿಸ್ತಾನದಿಂದ ಅಮೆರಿಕದ ನಿರ್ಗಮನ*

ಕಳೆದ ಕೆಲದಿನಗಳಿಂದ ಅಫ್ಘಾನಿಸ್ತಾನದ ವಿಷಯದಲ್ಲಿ ಕೆಲವು ಭಾರತೀಯರ ಅಭಿಪ್ರಾಯಗಳನ್ನು ಓದಿ ಪ್ರತಿಕ್ರಿಯಿಸುತ್ತಿದ್ದೇನೆ. ಅಮೆರಿಕದ ಹೆಚ್ಚಿನ ನಾಗರಿಕರಿಗೆ ಅಫ್ಘಾನಿಸ್ತಾನದ ವಿಷಯದಲ್ಲಿ ಯಾವುದೇ ಆಸಕ್ತಿ ಉಳಿದಿಲ್ಲ. ಆದಷ್ಟು ಬೇಗ ಆಫ್ಘನ್ ಸಂಘರ್ಷ ಮುಗಿದರೆ ಒಳ್ಳೆಯದು ಎಂಬ ಇಚ್ಛೆ ಇದೆ. 2001 ರಿಂದ ಸುಮಾರು 2,500 ಅಮೆರಿಕನ್ ಸೈನಿಕರು ಆಫ್ಘಾನಿಸ್ತಾನದಲ್ಲಿ ಸತ್ತಿದ್ದಾರೆ. 1,000 ಅಮೆರಿಕದ ಮಿತ್ರ ರಾಷ್ಟ್ರಗಳ ಸೈನಿಕರು ಸತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಆಫ್ಘನ್ ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಬೈಡನ್ ನಿಲುವಿಗೆ ಸಾರ್ವತ್ರಿಕ ಪ್ರತಿರೋಧ ಅಮೆರಿಕಲ್ಲಿಲ್ಲ. ಬೈಡನ್ ಮೊನ್ನೆ ಸಾರ್ವಜನಿಕವಾಗಿ ಮರುಗಿದ್ದು ಇತ್ತೀಚೆಗೆ ಜೀವ ತೆತ್ತ ಅಮೆರಿಕದ ಸೈನಿಕರ ಬಗ್ಗೆ ಅವರ ಅನುಕಂಪವನ್ನು ತೋರಿಸುತ್ತದೆ.
ಬೈಡನ್ ಅವರ ದೀರ್ಘಕಾಲದ ಸಾರ್ವಜನಿಕ, ರಾಜಕೀಯ ಜೀವನ ಮತ್ತು ಅವರು ಕೌಟುಂಬಿಕವಾಗಿ ಎದುರಿಸಿದ ಕಷ್ಟದ ಪರಿಸ್ಥಿತಿಗಳನ್ನು ಸ್ವಲ್ಪ ತಿಳಿದರೆ ಬೈಡನ್ ಕಂಬನಿಗರೆದದ್ದು ಅವರ ದೌರ್ಬಲ್ಯ ಎಂದು ಯಾರೂ ಭಾವಿಸುವುದಿಲ್ಲ. 5 ವರ್ಷಗಳ ಹಿಂದಿನವರೆಗೂ ಅವರು ಅಮೆರಿಕದ ಮೇಲ್ಮನೆಯ ದೀರ್ಘಕಾಲದ ಸದಸ್ಯರಾಗಿ, ನಂತರ 8 ವರ್ಷಗಳ ಕಾಲ ದೇಶದ ಉಪಾಧ್ಯಕ್ಷರಾಗಿ ಬೆಂಕಿಯ ಚೆಂಡಿನಂತೆಯೇ ಇದ್ದರು. ಈಗ ಜೀವನದಲ್ಲಿ ಮಾಗಿದ್ದಾರೆ. ಅಫ್ಘಾನಿಸ್ತಾನದ ಜನರಿಗೆ ತಮ್ಮ ಸ್ವಾತಂತ್ರ್ಯದ ಕುರಿತು ಹೋರಾಡಲು ಮನಸ್ಸಿಲ್ಲದಿದ್ದರೆ ಅಮೆರಿಕ ಯಾಕೆ ಹೋರಾಡಬೇಕು? ಎನ್ನುವ ಬೈಡನ್ ಮಾತು ಸತ್ಯವಾದುದು.
ಅಫ್ಘಾನಿಸ್ತಾನದ ಸೈನಿಕರಿಗೆ, ರಾಜಕಾರಣಿಗಳಿಗೆ ಇಚ್ಛಾಶಕ್ತಿ ಮತ್ತು ಪ್ರಾಮಾಣಿಕತೆಯ ಕೊರತೆ ಇದೆ. ಹೀಗಾಗಿ ಅಮೆರಿಕ ಇನ್ನು 50 ವರ್ಷ ಆಫ್ಘಾನಿಸ್ತಾನದಲ್ಲಿ ಇದ್ದರೂ ಕೇವಲ ಅಮೆರಿಕದ ಧನ ಮತ್ತು ಜನ ಹಾನಿ ಮಾತ್ರ ಆಗುತ್ತದೆ. ಅಫ್ಘಾನಿಸ್ತಾನದ ಜನರಿಗೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಕೊಡಿಸುವುದು ಎಂದರೆ ಗಾಳಿಯಲ್ಲಿ ಗುದ್ದಿ ಮೈನೋವು ಮಾಡಿಕೊಂಡಂತೆ.ಇದೇ ಬರುವ ಆಗಸ್ಟ್ 31 ರಂದು ಅಮೆರಿಕ ಆಫ್ಘಾನಿಸ್ತಾನದಿಂದ ನಿರ್ಗಮಿಸುವುದು ಯೋಜಿತವಾಗಿದೆ. ಆದರೆ ಅಮೆರಿಕ ಅಫ್ಘಾನಿಸ್ತಾನ ವಿಷಯದಲ್ಲಿ ಬೇರೆ ರೀತಿಯಲ್ಲಿ ಹೊರಗಿನಿಂದ ತೊಡಗಿಕೊಂಡಿರುವುದು ನಿಶ್ಚಿತ. ಓರ್ವ ವಿಶ್ಲೇಷಕರ ಪ್ರಕಾರ, ಬೈಡನ್ ಆಫ್ಘನ್ ಸಂಘರ್ಷದಲ್ಲಿ ಅಮೆರಿಕದ ಪಾತ್ರವನ್ನು ಕೊನೆಗೊಳಿಸಿಲ್ಲ. ಬದಲಾಗಿ ಅಮೆರಿಕದ ಆಫ್ಘನ್ ನೀತಿಯ ಪಥವನ್ನು ಬದಲಾಯಿಸಿದ್ದಾರೆ ಅಷ್ಟೇ.ಅಮೆರಿಕದಂತೆ ಪ್ರತಿದಿನ 300 ಮಿಲಿಯನ್ ಡಾಲರ್ ಗಳು (ರೂ. 2,250 ಕೋಟಿ) ಹಣವನ್ನು 20 ವರ್ಷಗಳ ಕಾಲ ಭಾರತ ಬೇರೆ ದೇಶದಲ್ಲಿ ಖರ್ಚು ಮಾಡುತ್ತಿದ್ದರೆ, ಭಾರತೀಯರಿಗೆ ಎನನಿಸುತ್ತಿತ್ತು?
ಭಾರತ ಸರಕಾರ ಹೀಗೆ ಬೇರೆ ದೇಶದಲ್ಲಿ ತೆರಿಗೆದಾರರ ಹಣವನ್ನು ಖರ್ಚು ಮಾಡುತ್ತಾ ಇರಲಿ ಎಂದು ಭಾರತೀಯರು ಅನುಮೊದಿಸುತ್ತಿದ್ದರೆ? ಖಂಡಿತವಾಗಿಯೂ ಇಲ್ಲ. ಭಾರತ ಆಫ್ಘಾನಿಸ್ತಾನದಲ್ಲಿ ಬಂಡವಾಳ ಹೂಡಿದ್ದ ಹಣ 3 ಬಿಲಿಯನ್ ಡಾಲರ್ ಅಂತೆ (ಅಂದರೆ ಅಮೆರಿಕ 10 ದಿನ ಆಫ್ಘಾನಿಸ್ತಾನದಲ್ಲಿ ಮಾಡಿದ ಖರ್ಚಿಗೆ ಸಮ). ಅಮೆರಿಕದ ಹಣ ಬಂಡವಾಳ ಹೂಡಿಕೆ ಅಲ್ಲ. ಅದು ಖರ್ಚು. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯರು ಕೇವಲ ಪ್ರದರ್ಶನ ನೋಡುವ ಪ್ರೇಕ್ಷಕರಂತೆ. ಕುಣಿಯುವವರಿಗೆ ಕುಣಿದು ಕುಣಿದು ಸಾಕಾಗಿದೆ. ಆದಷ್ಟು ಬೇಗ ಪ್ರದರ್ಶನ ಮುಗಿದರೆ ಸಾಕು ಎಂಬಂತಾಗಿದೆ. ಆದರೆ ಪ್ರೇಕ್ಷಕರಿಗೆ ಪ್ರದರ್ಶನ ಮುಗಿಯುವುದು ಬೇಕಾಗಿಲ್ಲ.ಮೊನ್ನೆ ಆಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕರು ನಡೆಸಿದ ಬಾಂಬ್ ಸ್ಫೋಟದಲ್ಲಿ ಸತ್ತ 13 ಅಮೆರಿಕದ ಸೈನಿಕರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಅವರಲ್ಲಿ ನಾನು ವಾಸಿಸುವ ಊರಿನ ನಿಕೋಲ್ ಜೀ ಎನ್ನುವ 23 ವರ್ಷದ ಮಹಿಳೆಯೂ ಒಬ್ಬಳು. 1 ವಾರದ ಹಿಂದೆ ಅಷ್ಟೇ ಅಫ್ಘಾನಿಸ್ತಾನದಲ್ಲಿ ಕಷ್ಟದಲ್ಲಿದ್ದ ಶಿಶುವೊಂದರ ರಕ್ಷಣೆಮಾಡುತ್ತಾ ಇರುವ ಚಿತ್ರವನ್ನು ನಿಕೋಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ತನ್ನ ಉದ್ಯೋಗವನ್ನು ಪ್ರೀತಿಸುತ್ತೇನೆ ಎಂದಿದ್ದಳು.ಆಫ್ಘಾನಿಸ್ತಾನದಿಂದ ಅಮೆರಿಕ ಹಿಂದಕ್ಕೆ ಸರಿಯಬಾರದು ಎಂದು ಹೇಳುವ ಜನರಿಗೆ ಒಂದು ಮಾತು – ಯುದ್ದಕ್ಕಿಂತ ಯುದ್ದದ ವಾರ್ತೆ ಕೇಳುವುದು ರೋಚಕವಂತೆ !!

*** ಚಿತ್ರ: ನಿಕೋಲ್ ಜೀ (23 ವರ್ಷ), ರೋಸವಿಲ್, ಕ್ಯಾಲಿಫಾರ್ನಿಯ ***– ಆನಂದ ಹಾಸ್ಯಗಾರ, ಕರ್ಕಿ (ಅಮೆರಿಕ)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
