ವರ್ಣಸಂಕರದ ಹರಿಕಾರ ‘ಕೃಷ್ಣ’

(ರಾತ್ರಿ ಮಲಗಿದವನಿಗೆ ಮಧ್ಯರಾತ್ರಿ ಎಚ್ಚರವಾದಾಗ ನನ್ನ ಟ್ರಂಕು, ಅಟ್ಟ ಹಾಸಿಗೆ ಸುರುಳಿಗಳಲ್ಲಿ ಮುರುಟಿಹೋಗಿದ್ದ ವಡ್ಡರ್ಸೆಯವರ ಬರಹಗಳು ಥಳಥಳ ಹೊಳೆಯುತ್ತಿರುವುದು ಕಣ್ಣಿಗೆ ಬಿತ್ತು. ಬಿಚ್ಚಿದಾಗ ಕಣ್ಣಿಗೆ ಬಿದ್ದದ್ದು ಈ ಲೇಖನ. ನಮ್ಮಂತೆ ಬಣ್ಣದಲ್ಲಿ ಕೃಷ್ಣನನ್ನು ಹೋಲುತ್ತಿದ್ದ ವಡ್ಡರ್ಸೆಯವರಿಗೆ ಕೃಷ್ಣನೆಂದರೆ ಅತೀವ ಪ್ರೀತಿ.ಇದಕ್ಕೆ ಇತಿಹಾಸ ಪುರಾಣಗಳ ಜೊತೆ ಲೋಹಿಯಾನ ಓದು ಕೂಡಾ ಕಾರಣ.ಹಿರಿಯರ (ಇವರಲ್ಲಿ ಕೆಲವರ ನನ್ನ ಸೃಜನಶೀಲ ಬರವಣಿಗೆಯ ಮತ್ಸರಿಗಳು) ಸಲಹೆ ಮೇರೆಗೆ ನನ್ನ ನಗೆಬರಹಕ್ಕೆ ಸದ್ಯಕ್ಕೆ ವಿರಾಮ ಕೊಡಲಾಗಿದೆ, ಸಮಯ-ಸಂದರ್ಭ ನೋಡಿ ಮುಂದುವರಿಸಲಾಗುವುದು. ಮುಂದಿನದು ವಡ್ಡರ್ಸೆಯವರಿಗೆ ಕಂಡ ಕೃಷ್ಣ, ಓದಿ:-ದಿನೇಶ್ ಅಮ್ಮಿನಮಟ್ಟು)

ವರ್ಣಸಂಕರದ ಹರಿಕಾರ ‘ಕೃಷ್ಣ’ ನಾನು ಮಹಾಭಾರತವನ್ನು ಓದಿ ಅರ್ಥೈಸಿಕೊಳ್ಳುವ ಪ್ರಯತ್ನಪಟ್ಟಾಗ ನನಗೆ ಕೃಷ್ಣನ ಪಾತ್ರ ಅತಿ ಆಕರ್ಷಣೀಯವಾಗಿ ಕಂಡಿದೆ. . ಹತ್ತು-ಹಲವು ಕಥನಗಳ ಹೆಣಿಗೆಯಾದ ಮಹಾಭಾರತದ ಉದ್ದಕ್ಕೂ ಕೃಷ್ಣ ಸೂತ್ರದ ಹೆಣಿಗೆಯನ್ನು ಕಾಣಬಹುದು. ಕೃಷ್ಣ ಸೂಕ್ತಿಯ ಮೆರುಗನ್ನು ಗುರುತಿಸಬಹುದು.ಸುಮಾರು ಮೂರು ಸಹಸ್ರ ವರ್ಷಗಳ ಹಿಂದಿನದೆಂದು ಊಹಿಸಲಾಗಿರುವ ಮಹಾಭಾರತದ ಕಥನ ಕಾಲದಲ್ಲಿ ಈ ಭಾರತ ಭೂಮಿಯಲ್ಲಿ ಆರ್ಯರು ಮತ್ತು ಅನಾರ್ಯರ ಸಾಂಸ್ಕೃತಿಕ ಸೆಣಸಾಟ ಪರಸ್ಪರ ಸಹನೀಯ ಘಟ್ಟ ಮುಟ್ಟಿತ್ತೆನ್ನಬಹುದು. ಈ ದೇಶದಲ್ಲಿ ಆರ್ಯರ ರಾಜಕೀಯ ಮತ್ತು ಸಾಂಸ್ಕೃ ತಿಕ ಸ್ವಾಮ್ಯ ಸ್ಥಾಪನೆಯ ಮೊದಲ ಕಥನವೆಂದು ಬಗೆಯಲಾಗಿರುವ ರಾಮಾಯಣದ ಕಾಲ ನಾಲ್ಕು ಸಾವಿರ ವರ್ಷಗಳ ಹಿಂದಿನದೆಂದು ಊಹಿಸಲಾಗಿದೆ. ಆರ್ಯರ ಸ್ವಾಮ್ಯ ಸಮರದ ಮೊದಲ ಕಥನವಾದ ರಾಮಾಯಣದಲ್ಲಿ ರಕ್ಕಸಕುಲ ಜನರನ್ನು ಭೀಕರವಾಗಿ ಚಿತ್ರಿಸಲಾಗಿದೆ.ಈ ಪುರಾಣ ಕಥೆಗಳಲ್ಲಿ ಚಿತ್ರಿತರಾಗಿರುವ ರಕ್ಕಸರೆಂದರೆ ಈ ನೆಲದ ಆದಿವಾಸಿಗಳು ಅಥವಾ ದ್ರಾವಿಡರು. ಮಧ್ಯ ಏಶ್ಯಾದಿಂದ ವಲಸೆ ಬಂದ ಹೊಂಬಣ್ಣದ ಆರ್ಯರಿಗೆ ಈ ನೆಲದ ಕರಿಯ ದ್ರಾವಿಡರು ಕಳಪೆಯಾಗಿಯೂ ಅನಾರ್ಯರಾಗಿಯೂ ಕಂಡರು. ಅವರನ್ನು ರಕ್ಕಸರಾಗಿಯೂ ಚಿತ್ರಿಸಿದರು.

ಪುರಾಣ ಕಾಲದಲ್ಲಿ ದ್ರಾವಿಡರ ಗಂಡು ನೆಲೆಯೆಂದು ಪ್ರಸಿದ್ಧವಾದ ಕಿಷ್ಕಿಂದೆಯಲ್ಲಿರುವವರಿಗೆಲ್ಲಾ ಬಾಲ ಬಿಡಿಸಲಾಯಿತು. ಬೇರೆಡೆ ಇರುವ ದ್ರಾವಿಡರು ಕೋರೆದಂತದ ಮಹಾರಕ್ಕಸರಾದರು.ಕಾಲಕಳೆದಂತೆ ರಾಮಾಯಣದಲ್ಲಿ ಚಿತ್ರಿತರಾದ ರಕ್ಕಸ ಕುಲಜರ ಕ್ರೌರ್ಯದ ವರ್ಣನೆ ಮಹಾಭಾರತದಲ್ಲಿ ತನ್ನ ತೀವ್ರತೆಯನ್ನು ಕಳೆದುಕೊಂಡಿತು. ಕಂಸನೆಂಬ ಮಹಾ ರಕ್ಕಸನ ತಂಗಿಯ ಮಗ ಕೃಷ್ಣ ರಕ್ಕಸನಾಗಲಿಲ್ಲ. ವೃತ್ತಿ ಮೂಲವಾದ ಜಾತಿ ನಿರ್ಮಾಣದ ಯುಗ ಮಹಾಭಾರತದ ಕಾಲದಲ್ಲಿ ಆರಂಭವಾಗಿತ್ತು. ಕೃಷ್ಣನನ್ನು ಗೊಲ್ಲನೆಂದು ಗುರುತಿಸಲಾಗಿತ್ತು.ಅಂದರೆ ಮಹಾಭಾರತ ಕಾಲದಲ್ಲಿ ಆರ್ಯರ ಪ್ರಭುತ್ವ ಸ್ಥಾಪನೆ ಬಹುಮಟ್ಟಿಗೆ ನೆರವೇರಿತ್ತು. ವಲಸೆ ಬಂದ ಆರ್ಯರ ವಿರುದ್ಧ ದ್ರಾವಿಡರ ಆಕ್ರೋಶ ಕಡಿಮೆಯಾಗಿತ್ತು. ಅಷ್ಟರಲ್ಲಿ ಆರ್ಯರು ಇಲ್ಲಿನ ಅನಾರ್ಯ ಸಮೂಹವನ್ನು ಆಳಬಲ್ಲ ಕ್ಷತ್ರಿಯ ವರ್ಗವನ್ನು ರೂಪಿಸಿತ್ತು. ಆರ್ಯರ ಆಕ್ರಮಣಕ್ಕೆ ದ್ರಾವಿಡರ ಪ್ರತಿರೋಧ ಕಡಿಮೆಯಾಗಿ ಅವರು ಆರ್ಯರು ನಿರೂಪಿಸಿದ ವರ್ಣದ ಚೌಕಟ್ಟಿನಲ್ಲಿ ಬದುಕಲಾರಂಭಿಸಿದ್ದರು. ಇದರಿಂದಾಗಿ ನಮಗೆ ಮಹಾಭಾರತದಲ್ಲಿ ಮಹಾ ‘ಕ್ರೂರಿಗಳಾದ’ ರಕ್ಕಸರ ಚಿತ್ರ ಅಷ್ಟಾಗಿ ಕಾಣುವುದಿಲ್ಲ. ಬದಲಾಗಿ ವೃತ್ತಿಮೂಲವಾದ ಜಾತಿವಾರು ವಿಂಗಡಣೆ ಕಾಣಸಿಗುತ್ತದೆ.ಇಂತಹ ವಿಂಗಡಣೆಯಲ್ಲಿ ಗೊಲ್ಲರ ಕುಲದಲ್ಲಿ ಹುಟ್ಟಿದ ಕೃಷ್ಣ ಮೂಲತಃ ಒಬ್ಬ ದ್ರಾವಿಡ. ಪುರಾಣದಲ್ಲಿ ಚಿತ್ರಿಸಿರುವಂತೆ ಅವನದು ನೀಲವರ್ಣ- ಅಂದರೆ ಅವನೊಬ್ಬ ಕರಿಯ. ಆಗಿನ ಕಾಲದ ಆರ್ಯರಂತೆ ಅಜಾನುಬಾಹುವಲ್ಲ. ಅವನೊಬ್ಬ ಕುಳ್ಳ.ಗೊಲ್ಲರ ಕುಲದಲ್ಲಿ ಹುಟ್ಟಿದ ಈ ಕರಿಯ ಕುಳ್ಳ ಕೃಷ್ಣ ಆಗಿನ ಆರ್ಯ ಪ್ರಭುತ್ವವನ್ನು ಅಲುಗಿಸಿದನೆಂಬುದು ನನ್ನ ಮೆಚ್ಚಿಕೆಗೆ ಕಾರಣ. ಆರ್ಯಮೂಲವಾದ ಕುರುಕುಲದಲ್ಲಿ ಕೃಷ್ಣನು ಹುಟ್ಟಿಸಿದ ದಾಯಾದಿ ಸಮರ ಎಲ್ಲ ಕಾಲಕ್ಕೂ ಪ್ರಸ್ತುತವೆನ್ನಿಸುವ ಒಂದು ರಾಜಕೀಯ ತಂತ್ರವೆನ್ನಬಹುದು.ಕೌರವರು ಮತ್ತು ಪಾಂಡವರ ನಡುವೆ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡ ಕೃಷ್ಣ ಈ ಆರ್ಯಪುತ್ರರೊಳಗೆ ದಾಯಾದಿ ಮತ್ಸರವನ್ನು ಹುಟ್ಟಿಸಿ ಅದು ಕ್ರಮೇಣ ವೈಷಮ್ಯ ದ್ವೇಷವಾಗಿ ಬೆಳೆಯುವಂತೆ ಮಾಡಿದ.

ಅದಾಗಲೇ ಭಾರತದ ಸಾಮ್ರಾಟರಾಗಿರುವ ಈ ಕುರುಕುಲಜರೊಳಗಿನ ಸಮರದಲ್ಲಿ ಎಲ್ಲ ಆಶ್ರಿತ ರಾಜರುಗಳೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕೃಷ್ಣ ಮಾಡಿದ.ಆರ್ಯ ಮೂಲದ ಈ ಕ್ಷತ್ರಿಯರ ನಡುವೆ ನಡೆವ ಮಹಾ ಸಮರದಲ್ಲಿ ಆರ್ಯ ಪ್ರಭುತ್ವವೇ ನಶಿಸಿಹೋಗುವುದೆಂಬ ಲೆಕ್ಕಾಚಾರ ಕೃಷ್ಣನಿಗಿದ್ದಿರಬೇಕು. ಹೀಗೆ ಆಗುವ ಆರ್ಯ ಕುಲಜರ ಅವನತಿ ದ್ರಾವಿಡ ಪ್ರಭುತ್ವಕ್ಕೆ ದಾರಿ ಮಾಡುವುದೆಂಬ ನಿರೀಕ್ಷೆ ಕೃಷ್ಣನದಾಗಿತ್ತು.ಕೌರವರು ಮತ್ತು ಪಾಂಡವರೊಳಗಿನ ದೀರ್ಘಾವಧಿಯ ಆಂತರಿಕ ಕಲಹದ ಅವಧಿಯಲ್ಲಿ ಕೃಷ್ಣನು ದ್ರಾವಿಡ ಶಕ್ತಿಯ ಪ್ರಭಾವ ವಲಯವೊಂದರ ಸೃಷ್ಟಿ ಮಾಡಿದ್ದನು. ಅನಾರ್ಯರಿಗೆ ಕ್ಷತ್ರಿಯ ಅಂತಸ್ತು ನಿರಾಕರಿಸಲ್ಪಟ್ಟಿರುವ ಕಾಲವದು. ಅಂತಹ ಕಾಲದಲ್ಲಿಯೂ ಕೌರವ-ಪಾಂಡವರ ಕಲಹದಿಂದಾಗಿ ಭಾರತದ ಎಲ್ಲೆಡೆ ಅನೇಕ ಮಂದಿ ದ್ರಾವಿಡರು ಕ್ಷತ್ರಿಯ ಪಟ್ಟಕ್ಕೇರಿದರು. ಮಹಾಭಾರತದಲ್ಲಿ ನಮಗೆ ಇಂತಹ ಅನೇಕ ನಿದರ್ಶನಗಳು ಸಿಗುತ್ತವೆ. ಆರ್ಯ ಕ್ಷತ್ರಿಯರು ಮತ್ತು ದ್ರಾವಿಡ ರಾಜವಂಶಗಳ ನಡುವೆ ವೈವಾಹಿಕ ಸಂಬಂಧಗಳಿಗೆ ಕೃಷ್ಣ ಚಾಲನೆ ಕೊಟ್ಟಿದ್ದ. ಆಗಿನ ಕಾಲದ ದ್ರಾವಿಡ ಪ್ರತಿಭೆಯ ಸಾರ ರೂಪಿಯಾದ ಕೃಷ್ಣನು ಆರ್ಯ ಪ್ರಭುತ್ವವನ್ನು ತನ್ನ ತಾಳಕ್ಕೆ ಕುಣಿಸಿದ ರೀತಿಯೂ ಅದ್ಭುತವಾದುದು. ಅವರ್ಣನೀಯವಾದುದು.ಭಾರತ ಭೂಮಿಯ ಉದ್ದಗಲಕ್ಕೂ ತಮ್ಮ ಪ್ರಭುತ್ವ ಸ್ಥಾಪಿಸಿರುವ ಆರ್ಯ ಕ್ಷತ್ರಿಯರು ಕುರುಕ್ಷೇತ್ರದಲ್ಲಿ ಸೇರಿ ಪರಸ್ಪರರ ಕತ್ತು ಕತ್ತರಿಸಿದ ಕಥೆಯೇ ಮಹಾಭಾರತ.

ಮಾನವ ಕುಲದ ಇತಿಹಾಸದಲ್ಲಿ ಇದುವರೆಗೆ ನಡೆದ ಮಹಾಸಮರಗಳ ಸಾಲಿನಲ್ಲಿ ಅತ್ಯಂತ ಭೀಕರವಾದುದು. ಮಿಲಿಯಗಟ್ಟಳೆ ಕ್ಷತ್ರಿಯ ಯೋಧರು ಮಣ್ಣು ಮುಕ್ಕಿದ ಮಹಾಸಮರವದು. ಈ ಮಹಾಭಾರತ ಯುದ್ಧ ಪುರಾಣ ಕಾಲದಲ್ಲಿ ಆರ್ಯರು ಉತ್ಕರ್ಷಕ್ಕೆ ಏರಿಸಿದ್ದ ಮಂತ್ರ ವಿದ್ಯೆಯ ಅವನತಿಗೂ ಕಾರಣವಾಯಿತು. ಮಹಾಭಾರತ ಯುದ್ಧದ ನಂತರದ ಯಾವ ಕಥನದಲ್ಲಿಯೂ ನಾವು ಮಂತ್ರವಿದ್ಯೆಯ ವೈಭವವನ್ನು ಕಾಣುವುದಿಲ್ಲ.ಮಂತ್ರಮೂಲವಾದ ಶಸ್ತ್ರ ವಿದ್ಯೆ ಆಗಿನ ಕಾಲದಲ್ಲಿ ಕೆಲವೇ ಮಂದಿ ವೈದಿಕ ಗುರುಗಳು ಮತ್ತು ಆರ್ಯ ಮೂಲದ ಕ್ಷತ್ರಿಯರಿಗೆ ಸೀಮಿತವಾಗಿದ್ದುದರಿಂದ ಮಹಾಭಾರತ ಯುದ್ಧದೊಂದಿಗೆ ಈ ಆರ್ಯ ವಿದ್ಯೆಯ ಅವಸಾನವೂ ಆಯಿತು.ಮಹಾಭಾರತ ಯುದ್ಧದಲ್ಲಿ ದ್ರಾವಿಡ ರಾಜರ ಸಹಭಾಗಿತ್ವವಾಗದಂತೆಯೂ ಕೃಷ್ಣನು ನೋಡಿಕೊಂಡಿದ್ದನು. ಯಾದವ ಅಥವಾ ಗೋಪಾಲಕರ ರಾಜನಾದ ತನ್ನ ಅಣ್ಣ ಬಲರಾಮ ಯಾದವ ಸೇನೆಯನ್ನು ಕುರುಕ್ಷೇತ್ರಕ್ಕೆ ಕರೆದುಕೊಂಡು ಬಾರದಂತೆ ಕೃಷ್ಣ ಹೂಡಿದ ತಂತ್ರದ ಪ್ರಸ್ತಾಪ ಮಹಾಭಾರತ ಕಾವ್ಯದಲ್ಲಿದೆ. ಕೌರವರು-ಪಾಂಡವರ ನಡುವಿನ ಈ ಪ್ರತಿಷ್ಠೆಯ ಮಹಾ ಸಮರದಲ್ಲಿ ತಟಸ್ಥರಾಗಿ ಉಳಿದವರೆಲ್ಲಾ ದ್ರಾವಿಡ ರಾಜರು.

ಹೀಗೆ ಮಹಾಭಾರತವನ್ನು ಆರ್ಯ ಕ್ಷತ್ರಿಯರ ರುದ್ರಭೂಮಿಯಾಗಿ ಮಾಡಿದ ಕೃಷ್ಣನ ದ್ರಾವಿಡ ಪ್ರಜ್ಞೆ ಅಸಾಧಾರಣವಾದುದು.ಕುರುಕ್ಷೇತ್ರದಲ್ಲಿ ಕೃಷ್ಣನು ಅರ್ಜುನನಿಗೆ ಬೋಧಿಸಿದನೆನ್ನಲಾದ ಗೀತೆಯಲ್ಲಿ ನಾವು ಕೃಷ್ಣನ ಆತ್ಮವಿದ್ಯೆಯ ಬಲವನ್ನು ಕಾಣಬಹುದು. ದಾಯಾದಿಗಳ ಸಮರದಲ್ಲಿ ಸಮಗ್ರ ಕ್ಷತ್ರಿಯ ಕುಲದ ಸಂಹಾರವಾಗುತ್ತಿರುವುದನ್ನು ಮನವರಿಕೆ ಮಾಡಿಕೊಂಡ ಅರ್ಜುನನಲ್ಲಿ ಆರ್ಯ ಪ್ರಜ್ಞೆ ಉಮ್ಮಳಿಸುತ್ತದೆ. ಹೀಗೆ ಆರ್ಯ ಪುರುಷರ ಸಾಮೂಹಿಕ ಹರಣದಿಂದ ಆರ್ಯ ಕನ್ಯೆಯರು ಅನಾಥರಾಗಿ ಅವರು ದ್ರಾವಿಡ ಪುರುಷರ ಪಾಲಾಗುವರೆಂದು ಅರ್ಜುನ ಪರಿತಪಿಸುತ್ತಾನೆ. ಇದರಿಂದ ವರ್ಣ ಸಂಕರವಾಗಿ ಕ್ಷತ್ರಿಯರ ಆರ್ಯತ್ವ ಅಳಿದುಹೋಗುವುದೆಂದು ಮರುಗುತ್ತಾನೆ. ತನ್ನ ಗಾಂಡೀವವನ್ನು ಬದಿಗೆಸೆದು ಮಂಡಿಯೂರಿ ಕೂರುತ್ತಾನೆ.ಹೀಗೆ ಧೃತಿಗೆಟ್ಟು ಕೂತ ಅರ್ಜುನನನ್ನು ಕೃಷ್ಣನು ತನ್ನ ಆತ್ಮ ವಿದ್ಯೆಯ ಬಲದಿಂದ ಹುರಿದುಂಬಿಸುತ್ತಾನೆ. ಕುರುಕ್ಷೇತ್ರದಲ್ಲಿ ಕ್ಷತ್ರಿಯರ ಸಂಹಾರ ಮಾಡುತ್ತಿರುವವನು ನೀನಲ್ಲ. ನೀನಿಲ್ಲಿ ನೆಪ ಮಾತ್ರ. ಇದೆಲ್ಲವೂ ಪರಮಾತ್ಮನಾದ ತನ್ನ ಆಟವೆಂದು ಕೃಷ್ಣ ಹೇಳುತ್ತಾನೆ.ತಾನೊಬ್ಬ ಪರಮಾತ್ಮನೆಂದು ಹೇಳುವ ಆತ್ಮಬಲ ಕೃಷ್ಣನಿಗಿತ್ತೆಂಬುದು ಇಲ್ಲಿ ಗಮನಾರ್ಹ. ಕೃಷ್ಣನು ಆ ಕಾಲದಲ್ಲಿ ಸಂಸ್ಕೃತ ವಿದ್ಯಾಭ್ಯಾಸ ಮಾಡಿದವನಲ್ಲ. ಅಂತಹ ಅವಕಾಶವೂ ಅವನಿಗಿರಲಿಲ್ಲ. ತನ್ನ ಬಾಲ್ಯವನ್ನೆಲ್ಲಾ ಗೋಪಾಲಕನಾಗಿ ಕಳೆದವನು. ಪಶುಪಾಲನೆ ತನ್ನ ಯಾದವ ಕುಲದ ಉತ್ಕರ್ಷಕ್ಕೆ ದಾರಿಯಾಗುವಂತೆ ಮಾಡಿದವನು. ಇವನೊಬ್ಬ ವಿದ್ಯೆ ಇಲ್ಲದ ಮೇಧಾವಿ. ಅಪ್ರತಿಮವಾದ ತನ್ನ ಬುದ್ಧಿಬಲದಿಂದ ಆತ್ಮವಿದ್ಯೆ ಪಡೆದವನು. ಈ ಆತ್ಮವಿದ್ಯೆಯೇ ಕೃಷ್ಣನನ್ನು ಮಹಾಭಾರತದ ಸೂತ್ರಧಾರಿಯಾಗಿ ಮಾಡಿತು.ಆ ಕಾಲದಲ್ಲಿ ಆರ್ಯ ಪ್ರಭುತ್ವವು ಸೃಷ್ಟಿಸಿದ ವರ್ಣಾಶ್ರಮ ಧರ್ಮವನ್ನು ಶಿಥಿಲಗೊಳಿಸಿ ವರ್ಣಸಂಕರಕ್ಕೆ ದಾರಿ ಮಾಡುವುದು ಕೃಷ್ಣನ ಪರಮೋದ್ದೇಶವಾಗಿತ್ತೆನ್ನಬಹುದು. ಇವನ ತಂತ್ರಗಾರಿಕೆಯಲ್ಲಿ ನಡೆದ ಮಹಾಭಾರತ ಯುದ್ಧ ಇಂತಹ ವರ್ಣಸಂಕರಕ್ಕೆ ಹೊಸ ಚಾಲನೆ ಕೊಟ್ಟಿತೆನ್ನಬಹುದು. ಈ ದೃಷ್ಟಿಯಿಂದ ಕೃಷ್ಣನು ಒಬ್ಬ ಕ್ರಾಂತಿಕಾರಿ ಸಮಾಜ ಸುಧಾರಕನಾಗಿ ನನಗೆ ಕಾಣುತ್ತಾನೆ.ದ್ರಾವಿಡ ಜನಸಮೂಹದಲ್ಲಿ ಉತ್ತಮ ಬದುಕಿನ ಆಸೆಯನ್ನು ಚಿಗುರಿಸಿ ಅವರಿಗೆ ರಾಜಕೀಯ ಸ್ಥಾನ-ಮಾನವನ್ನು ಗಳಿಸಿಕೊಟ್ಟವನು ಕೃಷ್ಣ.ಮಹಾಭೋಗಿಯೂ ಅಪ್ರತಿಮ ತ್ಯಾಗಿಯೂ ಆಗಿ ಬದುಕಿದ ಕೃಷ್ಣನ ಜೀವನ ಕಥನ ಎಲ್ಲ ಕಾಲಕ್ಕೂ ಸಲ್ಲುವ ಜೀವನ ತತ್ವಗಳನ್ನೊಳಗೊಂಡಿದೆ. ಸೊತ್ತು ಸಂಪತ್ತು ಯಾರದೇ ಒಡೆತನಕ್ಕೆ ಸೇರಿದ್ದಲ್ಲವೆಂಬ ಸರಳ ಸಾಮಾಜಿಕ ತತ್ವವನ್ನು ಪ್ರಚುರಪಡಿಸಿದವನು ಕೃಷ್ಣ.ಕೃಷ್ಣನು ತನ್ನ ಬಾಲ್ಯದಲ್ಲಿ ಯಾವುದೇ ಭೇದಭಾವವಿಲ್ಲದೆ ಎಲ್ಲರ ಮನೆಯ ಬೆಣ್ಣೆ ಭುಂಜಿಸುತ್ತಿದ್ದನೆಂಬ ಕಥಾವರ್ಣನೆಯಲ್ಲಿ ನಮಗೆ ಕೃಷ್ಣನು ಆಚರಿಸಿದ ಜೀವನ ತತ್ವದ ಸಂದೇಶ ಸಿಗುತ್ತದೆ.ಈ ಜಗತ್ತಿನಲ್ಲಿ ಎಲ್ಲ ಸಾಮಾಜಿಕ ಕ್ರಾಂತಿಕಾರರನ್ನು ದೈವತ್ವಕ್ಕೆ ಏರಿಸಿ ಅವರ ಸುತ್ತ ಪವಾಡಗಳನ್ನು ಹೆಣೆದಂತೆ ಕೃಷ್ಣನೂ ಭಾರತದಲ್ಲಿ ‘ದೇವರ ದೇವ’ ಎನ್ನಿಸಿಕೊಂಡ.(7-9-1985) -ರಘುರಾಮ್ ಶೆಟ್ಟಿ ವಡ್ಡರ್ಸೆ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *