ಮಲೆನಾಡಿನಲ್ಲಿ ಈಗ ಜಲಪಾತಗಳ ಬೋರ್ಗರೆತ ಹೆಚ್ಚಿದೆ. ಸಮಾಧಾನಕರ ಮಳೆಗಾಲಕಂಡ ಮಲೆನಾಡು ಜಲಪಾತಗಳನ್ನು ಮೈತುಂಬಿಸಿದೆ. ಮಳೆಕಡಮೆಯಾಯಿತೆಂದು ಈ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡಾ ಹೆಚ್ಚುತ್ತಿದೆ. ಆದರೆ ಮೋಡಕವಿದ ವಾತಾವರಣದ ಈ ಸಮಯ ಜಲಪಾತ ವೀಕ್ಷಣೆಗೆ ಅನುಕೂಲಕರವಲ್ಲ ಎನ್ನುವ ಸತ್ಯ ಅನೇಕರಿಗೆ ತಿಳಿದಿಲ್ಲ.
ಮಳೆಗಾಲದ ಕೊನೆಯಲ್ಲಿ ಜಲಪಾತಗಳು ತುಂಬಿ ಹರಿಯುವುದು ಸಾಮಾನ್ಯ . ಮಳೆನೀರಿನಿಂದ ಸೊಕ್ಕಿರುವ ಜಲಪಾತಗಳು ರಭಸದಿಂದ ಸುರಿಯುವ ಸಮಯದಲ್ಲಿ ತುಂತುರು ಹನಿ, ಹಿಮವನ್ನು ಸಿಡಿಸುವುದು ಸಾಮಾನ್ಯ. ಇಂಥ ಹಿಮಚ್ಚಾದಿತ ವಾತಾವರಣದಲ್ಲಿ ಜಲಪಾತ ಕಾಣುವುದು ಸಾಧ್ಯವೆ? ಈ ಸಮಸ್ಯೆಯಿಂದಾಗಿ ಪ್ರವಾಸಿಗರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.
ಜಗತ್ಪಸಿದ್ಧ ಜೋಗಜಲಪಾತವನ್ನು ನೋಡಲು ಬರುವ ಬಹುತೇಕರು ಉತ್ತರ ಕನ್ನಡದ ಅನೇಕ ಜಲಪಾತಗಳನ್ನು ವೀಕ್ಷಿಸಲು ಕುತೂಹಲದಿಂದ ಬರುತ್ತಾರೆ. ಆದರೆ ಮೋಡಕವಿದ ವಾತಾವರಣ, ತುಂತುರು ಮಳೆಯಲ್ಲಿ ಜಲಪಾತ ವೀಕ್ಷಣೆಗೆ ಬಂದರೆ ಜಲಪಾತಗಳು ಹಿಮದಿಂದ ತುಂಬಿ ಕಾಣುವುದೇ ಇಲ್ಲ. ಮಳೆಗಾಲದ ನಂತರ ಬಿಸಿಲು ಬಿದ್ದರೆ ಬಿಸಿಲು, ಉಷ್ಣಕ್ಕೆ ಮಂಜುಕರಗಿ ಜಲಪಾತಗಳ ದರ್ಶನವಾಗುತ್ತದೆ. ಆದರೆ ಈ ವರ್ಷ ಮಳೆಗಾಲ ಮುಗಿಯುವ ಸಮಯಕ್ಕೆ ಮೋಡ, ಮಂಜು ಕವಿದ ವಾತಾವರಣವಿದ್ದು ಜಿಟಿಜಿಟಿ ಮಳೆಯಾಗುತ್ತಿದೆ. ಈ ವಾತಾವರಣದಲ್ಲಿ ಜಲಪಾತಗಳೆಲ್ಲಾ ಮಂಜಿನಲ್ಲಿ ಮರೆಯಾಗಿ ಮಸುಕಾಗಿವೆ.
ಈ ವಾತಾವರಣದಲ್ಲೂ ಜಲಪಾತ ನೋಡೇ ತೆರಳುತ್ತೇವೆ ಎನ್ನುವ ಸಾಹಸಿಗಳಿಗೇನೂ ಕಡಮೆಇಲ್ಲ, ಜೋಗ ಜಲಪಾತ, ಬುರುಡೆ ಫಾಲ್ಸ್, ಉಂಚಳ್ಳಿ ಸೇರಿದಂತೆ ಬಹುತೇಕ ಜಲಪಾತಗಳಲ್ಲಿ ಬಿಸಿಲಿಗಾಗಿ ಕಾದು ಕ್ಷಣಮಾತ್ರದಲ್ಲಿ ಮತ್ತೆ ಕವಿಯುವ ಮಂಜನ್ನು ದೂಷಿಸಿ ತೆರಳುವ ಪ್ರವಾಸಿಗರೂ ಸಿಗುತ್ತಾರೆ. ಹಾಗಾಗಿ ಬಿಸಿಲು, ಉಷ್ಣತಾಪಮಾನದ ಸಮಯದಲ್ಲಿ ಜಲಪಾತ ನೋಡುವವರಿಗೆ ಈಗಿನ ವಾತಾವರಣ ಅಡಚಣೆ ಉಂಟುಮಾಡುತ್ತಿದೆ. ಮಲೆನಾಡಿನ ವಾತಾವರಣ ಬಲ್ಲವರು ಅಕ್ಟೋಬರ್ ನಿಂದ ಜನೇವರಿ ತಿಂಗಳುಗ ಳ ವರೆಗೆ ಇಲ್ಲಿಯ ಜಲಪಾತಗಳ ವೀಕ್ಷಣೆಗೆ ಬರುತ್ತಾರೆ. ಆ ಸಮಯದಲ್ಲಿ ಜಿಟಿಜಿಟಿ ಮಳೆ ಮಂಜುಕವಿದ ವಾತಾವರಣ ಇರುವುದಿಲ್ಲ. ಇಂಥ ಪ್ರತಿಕೂಲ ವಾತಾವರಣವಿದ್ದರೂ ಬೆಳಕು, ಬಿಸಿಲು ನುಸುಳುವುದರಿಂದ ಆಗೊಮ್ಮೆ ಈಗೊಮ್ಮೆಯಾದರೂ ಜಲಪಾತಗಳ ದರ್ಶನ ದೊರೆಯುತ್ತಿದೆ. ಮಲೆನಾಡು, ಕರಾವಳಿಯಲ್ಲಿ ಮಳೆ ಕಡಿಮೆಯಾಯ್ತೆಂದು ಧಾವಿಸಿಬಂದು ಇಲ್ಲಿ ಜಲಪಾತ ನೋಡಲಾಗದೆ ಚಡಪಡಿಸಿದ ಅನೇಕ ಪ್ರಕರಣಗಳ ಮಾಹಿತಿಯಿಂದ ವಿಜಯಕರ್ನಾಟಕ ಪ್ರವಾಸಿಗರಿಗೆ ಈ ವಿಶೇಶ ಮಾಹಿತಿ ನೀಡುತ್ತಿದೆ. ನೆನಪಿಡಿ ಅಕ್ಟೋಬರ್ ಮೊದಲು ಜಲಪಾತವೀಕ್ಷಣೆಗೆ ಕಾಲ ಪ್ರಸಕ್ತವಲ್ಲ.